ಸಲಿಂಗ ವಿವಾಹಗಳ ಕುರಿತ ನಿರಾಶಾದಾಯಕ ತೀರ್ಪು- ಎಐಡಿಡಬ್ಲ್ಯುಎ

ನವದೆಹಲಿ :ಸಲಿಂಗ ವಿವಾಹಗಳಿಗೆ ಮಾನ್ಯತೆ ನೀಡಬೇಕು ಎಂದು ಕೇಳುವ ಅರ್ಜಿಗಳ ಮೇಲೆ ಸುಪ್ರಿಂ ಕೋರ್ಟಿನ ಸಾಂವಿಧಾನಿಕ ನ್ಯಾಯಾಲಯದ ತೀರ್ಪು ಮದುವೆಯಾಗುವ ಅಥವಾ ನಾಗರಿಕ ಸಂಯೋಗದಲ್ಲಿ ಸಹಜೀವನ ನಡೆಸುವ ಮತ್ತು ಅದರ ಪರಿಣಾಮವಾಗಿ ದೊರಕುವ ಸವಲತ್ತುಗಳನ್ನು ಪಡೆಯುವ ಯಾವುದೇ ಮೂಲಭೂತ ಹಕ್ಕು ಇಲ್ಲ ಎಂದು ಹೇಳಿ ನಿರಾಸೆಯುಂಟು ಮಾಡಿದೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ(ಎಐಡಿಡಬ್ಲ್ಯುಎ) ಹೇಳಿದೆ. ಅಷ್ಟೇ ಅಲ್ಲ, LGBTQ+ ಸಮುದಾಯದ ಸಹಾಯಕ್ಕೆ ಬರಲು ಮತ್ತು ದೇಶದ ಸಮಾನ ನಾಗರಿಕರಾಗಿ ಅವರಿಗೆ ದೊರಕಬೇಕಾದ ಹಕ್ಕುಗಳನ್ನು ನೀಡುವ ಅವಕಾಶವನ್ನು ನ್ಯಾಯಾಲಯ ತಪ್ಪಿಸಿಕೊಂಡಿದೆ ಎಂದು ಅದು ಹೇಳಿದೆ.

ತಮ್ಮನ್ನು ದಂಪತಿಗಳೆಂದು ಕಾನೂನು ಗುರುತಿಸದ ಕಾರಣ ದೈನಂದಿನ ಜೀವನದಲ್ಲಿ ಹಲವಾರು ರೀತಿಯ ತಾರತಮ್ಯವನ್ನು ಎದುರಿಸುತ್ತಿರುವ LGBTQ+ ದಂಪತಿಗಳಿಗೆ ಈ ತೀರ್ಪು ಭಾರಿ ಹಿನ್ನಡೆಯಾಗಿದೆ. ಅವರಿಗೆ ಕುಟುಂಬವನ್ನು ರೂಪಿಸುವ, ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಹಕ್ಕನ್ನು ನಿರಾಕರಿಸಲಾಗಿದೆ, ವಿವಿಧ ಸಂದರ್ಭಗಳಲ್ಲಿ ಪರಸ್ಪರ ಪ್ರತಿನಿಧಿಸುವ ಕಾನೂನುಬದ್ಧ ಹಕ್ಕನ್ನು ಕೂಡ ನಿರಾಕರಿಸಲಾಗಿದೆ, ಜೊತೆಗೆ ಗ್ರಾಚ್ಯುಟಿ, ಪಿಂಚಣಿ ಮುಂತಾದ ಹಣಕಾಸು ಸವಲತ್ತುಗಳು, ಉತ್ತರಾಧಿಕಾರ ಮತ್ತು ಇತರ ಭೌತಿಕ ಸೌಲಭ್ಯಗಳನ್ನೂ ನಿರಾಕರಿಸಲಾಗಿದೆ. ವಿದೇಶಿ LGBTQ+ ಸಂಗಾತಿಗೆ ಭಾರತದಲ್ಲಿ ವಾಸಿಸುವ ಹಕ್ಕು ಕೂಡ ಲಭ್ಯವಿಲ್ಲ. ಕಾನೂನು ಮಾನ್ಯತೆ ಇಲ್ಲದಿರುವುದು ಎಂದರೆ ದಂಪತಿಗಳು ತಮ್ಮ ದೈನಂದಿನ ಜೀವನದಲ್ಲಿ ಹಿಂಸೆ ಮತ್ತು ದಬ್ಬಾಳಿಕೆಯಂತಹ ವಿವಿಧ ರೀತಿಯ ತಾರತಮ್ಯಗಳನ್ನು ಎದುರಿಸುತ್ತಲೇ ಇರಬೇಕಾಗಿದೆ ಎಂದು ಎಐಡಿಡಬ್ಲ್ಯುಎ ಬೇಸರ ವ್ಯಕ್ತಪಡಿಸಿದೆ.

ಎಲ್ಲಾ ನ್ಯಾಯಾಧೀಶರು ಸಲಿಂಗ ದಂಪತಿಗಳ ವಿರುದ್ಧದ ತಾರತಮ್ಯವನ್ನು ಕೊನೆಗೊಳಿಸಬೇಕು ಎಂದು ಒಪ್ಪಿಕೊಂಡರೂ ಕೂಡ ನ್ಯಾಯಮೂರ್ತಿ ಎಸ್.ಆರ್.ಭಟ್ ನೇತೃತ್ವದ ಬಹುಮತದ ತೀರ್ಪು, ನಾಗರಿಕ ಸಂಯೋಗವನ್ನು ರಚಿಸಿಕೊಳ್ಳುವ ಅವರ ಹಕ್ಕಿನ ಕಾನೂನು ಮಾನ್ಯತೆಯನ್ನು ಶಾಸಕಾಂಗ ಮಾತ್ರ ನೀಡಬಹುದು ಎಂಬ ಅಭಿಪ್ರಾಯಕ್ಕೆಬಂದಿದೆ. ಈ ತೀರ್ಪು ಈಗಾಗಲೇ ಒಂದೇ ಲಿಂಗದ ವ್ಯಕ್ತಿಗಳಲ್ಲಿ ಪ್ರೀತಿ ಮತ್ತು ಒಡನಾಟವು ಸ್ವಾಭಾವಿಕವಾಗಿದೆ ಮತ್ತು ವಿಲಕ್ಷಣ(queer) ಸಮುದಾಯವು ಎದುರಿಸುತ್ತಿರುವ ತಾರತಮ್ಯವನ್ನು ಕೊನೆಗೊಳಿಸುವುದು ಪ್ರಭುತ್ವದ ಕರ್ತವ್ಯ ಎಂದು ಗುರುತಿಸಿರುವ ನವತೇಜ್ ಜೋಹರ್ ತೀರ್ಪಿಗಿಂತ ಮುಂದಕ್ಕೆ ಹೋಗಲಿಲ್ಲ. ಸಂವಿಧಾನವನ್ನು ಉಲ್ಲಂಘಿಸುವ ಒಂದು ತಾರತಮ್ಯದ ಕಾನೂನಿನ ಬಗ್ಗೆ ಹೇಳುವ ಅಧಿಕಾರವನ್ನು ಸಂವಿಧಾನವು ತಮಗೆ ನೀಡಿಲ್ಲ ಎಂದು ನ್ಯಾಯಾಲಯವು ಈ ವಿಷಯದಲ್ಲಿ ಅತ್ಯಂತ ಸಂಕುಚಿತ ಮತ್ತು ತಾಂತ್ರಿಕ ದೃಷ್ಟಿಕೋನವನ್ನು ತೆಗೆದುಕೊಂಡಿದೆ ಎಂದು ಎಐಡಿಡಬ್ಲ್ಯುಎ ಅಭಿಪ್ರಾಯ ಪಟ್ಟಿದೆ.

ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರ ಅಲ್ಪಮತದ ತೀರ್ಪು, “ಸಂಗಾತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಮತ್ತು ಅವರ ಸಹವಾಸವನ್ನು ಆನಂದಿಸುವ ಸ್ವಾತಂತ್ರ್ಯ, ….. ಆ ಸಂಬಂಧವನ್ನು ತಾರತಮ್ಯಕ್ಕೆ ಒಳಪಡಿಸಿದರೆ ಅದು ನಿಷ್ಪ್ರಯೋಜಕವಾಗುತ್ತದೆ” ಎಂದು ಗುರುತಿಸುವ ಮೂಲಕ ಸಲಿಂಗ ದಂಪತಿಗಳಿಗೆ ಅವರ ಸಹಜೀವನವನ್ನು ನಾಗರಿಕ ಎಂದು ಮಾನ್ಯ ಮಾಡುವ ಹಕ್ಕನ್ನು ಮಾತ್ರ ನೀಡಿದೆ. ಅನುಚ್ಛೇದ 21 ರ ಅಡಿಯಲ್ಲಿ ಮತ್ತು ಸಮಾನತೆಯ ವಿಧಿಯೂ ಸೇರಿದಂತೆ ಸಂವಿಧಾನದ ಇತರ ವಿವಿಧ ಕಲಮುಗಳ ಅಡಿಯಲ್ಲಿ ಬದುಕಿನ ಹಕ್ಕಿನ ಭಾಗವಾಗಿ ತನ್ನ ಜೊತೆಗಾರರನ್ನು ಆಯ್ಕೆ ಮಾಡುವ ಮತ್ತು ಸಹಜೀವನವನ್ನು ನಿರ್ಮಿಸುವ ಸಾಮರ್ಥ್ಯವನ್ನು ಅವರು ಮಾನ್ಯ ಮಾಡಿದ್ದಾರೆ. ಆದರೆ ಅದರ ಫಲಿತಾಂಶವಾಗಿ ಸಲಿಂಗ ದಂಪತಿಗಳು ವಿವಾಹದ ಹಕ್ಕನ್ನು ಹೊಂದಿದ್ದಾರೆ ಎಂದು ಹೇಳುವ ಮಟ್ಟಕ್ಕೆ ಹೋಗಲಿಲ್ಲ. ವಿಶೇಷ ವಿವಾಹ ಕಾಯಿದೆಯು ಭಿನ್ನಲಿಂಗೀಯರಲ್ಲದ ಜೋಡಿಗಳ ವಿವಾಹವನ್ನು ಅನುಮತಿಸುವುದಿಲ್ಲವಾದ್ದರಿಂದ ಅಸಾಂವಿಧಾನಿಕ ಮತ್ತು ಅರ್ಜಿದಾರರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಲು ಅವರು ನಿರಾಕರಿಸಿದರು.

ಬಹುಮುಖ್ಯವಾಗಿ ಅಲ್ಪಮತದ ತೀರ್ಪು, ಹಲವಾರು ಪಠ್ಯಗಳನ್ನು ಉಲ್ಲೇಖಿಸಿ, ಸಲಿಂಗ ಪ್ರೇಮವು ಸ್ವಾಭಾವಿಕವಾಗಿದೆ ಮತ್ತು ಅನಾದಿ ಕಾಲದಿಂದಲೂ ಅಸ್ತಿತ್ವದಲ್ಲಿದೆ ಮತ್ತು ಭಾರತದಲ್ಲಿ ಇಂದು ಎಲ್ಲಾ ವರ್ಗಗಳಲ್ಲಿ ಅಸ್ತಿತ್ವದಲ್ಲಿದೆ ಎಂದಿದೆ. ಅಂತಹ ಸಂಬಂಧಗಳು ಕುಲೀನ ವಿದ್ಯಮಾನಗಳಲ್ಲ ಮತ್ತು ನಗರ ಹಾಗೂ ಗ್ರಾಮೀಣ ಎರಡೂ ಪ್ರದೇಶಗಳಲ್ಲಿ ಇವೆ ಎಂದೂ ಅದು ಹೇಳಿದೆ. ಅಲ್ಪಮತದ ತೀರ್ಪು ನಂತರ ಪ್ರಭುತ್ವವು ನಾಗರಿಕ ಸಂಯೋಗ ಮತ್ತು ಈ ರೀತಿಯ ದೃಢವಾದ ಸಂಬಂಧದಿಂದ ಹೊಮ್ಮುವ ಅರ್ಹತೆಗಳ ಗುಚ್ಛವನ್ನು ಗುರುತಿಸಬೇಕು ಎಂದೂ ಹೇಳುತ್ತದೆ. ಇದನ್ನು ಹೇಳಿದ ನಂತರ, ಅವರು ಅಂತಹ ದಂಪತಿಗಳಿಗೆ ಸಿಗುವ ಸೌಲಭ್ಯಗಳ ವ್ಯಾಪ್ತಿಯನ್ನು ಇನ್ನಷ್ಟೇ ರಚಿಸಬೇಕಾದ ಕೇಂದ್ರ ಸಚಿವ ಸಂಪುಟದ ಅಧ್ಯಕ್ಷತೆಯ ಸರ್ಕಾರಿ ಸಮಿತಿಗೆ ಬಿಟ್ಟರು. ನ್ಯಾಯಮೂರ್ತಿ ಭಟ್ ಅವರ ಬಹುಮತದ ತೀರ್ಪು ಕೂಡ ಅರ್ಜಿಗಳಲ್ಲಿ ಎತ್ತಲಾದ ಅರ್ಜಿದಾರರ ಹಕ್ಕುಗಳ ಪ್ರಶ್ನೆಯನ್ನು ಉನ್ನತ ಅಧಿಕಾರದ ಸಮಿತಿ ಚರ್ಚಿಸಲು ಮತ್ತು ಸಂಸತ್ತು ನಿರ್ಧರಿಸಲೆಂದು ಬಿಟ್ಟಿದೆ.

ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ವಿಲಕ್ಷಣ (queer) ದಂಪತಿಗಳ ವಿರುದ್ಧ ಹಿಂಸಾಚಾರ ಮತ್ತು ತಾರತಮ್ಯವನ್ನು ನಿಭಾಯಿಸಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಮಗ್ರ ನಿರ್ದೇಶನಗಳ ಒಂದು ಪಟ್ಟಿಯನ್ನು ನೀಡಿದರು. ವಿಲಕ್ಷಣ (queer) ದಂಪತಿಗಳನ್ನು ರಕ್ಷಿಸಲಿಕ್ಕೆ ಮತ್ತು ಅವರ ಕುಟುಂಬ ಸದಸ್ಯರಿಗೆ ಕಿರುಕುಳ ನೀಡಲು ಅವಕಾಶ ನೀಡದಂತೆ ಅವರು ಪೊಲೀಸ್ ವ್ಯವಸ್ಥೆಗಳಿಗೆ ನಿರ್ದೇಶನಗಳನ್ನು ನೀಡಿದರು. ಅಗತ್ಯವಿದ್ದರೆ ವಿಲಕ್ಷಣ(queer) ದಂಪತಿಗಳು ಆಶ್ರಯ ಪಡೆಯಲು ಸುರಕ್ಷಿತ ಮನೆಗಳನ್ನು ಕೊಡಬೇಕು ಎಂದೂ ಅವರು ಹೇಳಿದರು. ರಚನೆಯಾಗಲಿರುವ ಸರ್ಕಾರದ ಸಮಿತಿಯು ವಿಲಕ್ಷಣ(queer) ಸಮುದಾಯದ ಸದಸ್ಯರು ಮತ್ತು ಇತರ ಕ್ಷೇತ್ರ ತಜ್ಞರೊಂದಿಗೆ ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು. ಸಮಿತಿಯು ಸಲಿಂಗ ದಂಪತಿಗಳಿಗೆ ಪಡಿತರ ಚೀಟಿ, ಜಂಟಿ ಬ್ಯಾಂಕ್ ಖಾತೆಯ ಸೌಲಭ್ಯ, ಈ ಖಾತೆಗಳಲ್ಲಿ ನಾಮಿನಿಗಳೆಂದು ಹೆಸರಿಸುವ ಹಕ್ಕು ಮತ್ತು ವೈದ್ಯಕೀಯ ಪ್ರಕ್ರಿಯೆಗಳಲ್ಲಿ, ಜೈಲು ಭೇಟಿಗಳಲ್ಲಿ ನಿಕಟ ಸಂಬಂಧಿಗಳೆಂದು ಪರಿಗಣಿಸಲ್ಪಡುವ, ಮೃತ ಸಂಗಾತಿಯ ದೇಹವನ್ನು ಪಡೆಯುವ ಮತ್ತು ಅಂತಿಮ ವಿಧಿಗಳನ್ನು ಏರ್ಪಡಿಸುವ ಅವಕಾಶಗಳಂತಹ ಸೌಲಭ್ಯಗಳನ್ನು ನೀಡಬೇಕು ಎಂದು ಅವರು ಸಲಹೆ ನೀಡಿದರು. ಆದರೆ, ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ನರಸಿಂಹ ಈ ನಿರ್ದೇಶನಗಳನ್ನು ಒಪ್ಪಲೂ ಇಲ್ಲ. ಸುಪ್ರಿಂ ಕೋರ್ಟ್‍ ನಿರ್ದೇಶನಗಳನ್ನು ನೀಡಿದ ಹಿಂದಿನ ಪ್ರಕರಣಗಳು “ಅಸಮರ್ಪಕತೆಗಳು …… ತೀವ್ರ ಮತ್ತು ಅಸಹನೀಯವಾಗಿದ್ದವು” ಎಂಬುದಕ್ಕಾಗಿ ಎಂದಿರುವುದು ಆಶ್ಚರ್ಯಕರವಾಗಿದೆ. LGBTQ+ ಸಮುದಾಯವು ಎದುರಿಸುತ್ತಿರುವ ನಿರಂತರ ಹಿಂಸಾಚಾರ, ಕಿರುಕುಳ ಮತ್ತು ತಾರತಮ್ಯವು ಈ ಹಿಂದೆ ಎದುರಿಸಿದ ಅಸಮರ್ಪಕತೆಗಳಂತೆ ಏಕೆ ಘೋರವಾಗಿಲ್ಲ ಎಂಬುದನ್ನು ನ್ಯಾಯಮೂರ್ತಿ ಭಟ್ ವಿವರಿಸಲಿಲ್ಲ.

ಭಿನ್ನಲಿಂಗೀಯ ಸಂಬಂಧದಲ್ಲಿರುವ ಲಿಂಗಾತೀತ /ಲಿಂಗ ಪರಿವರ್ತಿತ ವ್ಯಕ್ತಿಗಳು (ಟ್ರಾನ್ಸ್ ಜೆಂಡರ್‍ ಪರ್ಸನ್ಸ್) ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಮದುವೆಯಾಗಲು ಸ್ವಾತಂತ್ರ್ಯ ಮತ್ತು ಹಕ್ಕನ್ನು ಹೊಂದಿದ್ದಾರೆ ಎಂದು ತೀರ್ಪು ಗುರುತಿಸಿತು. ಇದರರ್ಥ ಲಿಂಗಾತೀತ ಗಂಡಸು ( ಟ್ರಾನ್ಸ್ ಮನ್)ಒಬ್ಬ ಲಿಂಗಾತೀತ ಮಹಿಳೆಯನ್ನು (ಟ್ರಾನ್ಸ್ ವುಮನ್‍) ಮದುವೆಯಾಗಬಹುದು; ಹುಟ್ಟುಮಹಿಳೆ (ಸಿಸ್‍-ವುಮನ್) ಲಿಂಗಾತೀತ ಅಥವ ಲಿಂಗ ಪರಿವರ್ತಿತ ಪುರುಷನನ್ನು ಮದುವೆಯಾಗಬಹುದು ಮತ್ತು ಹುಟ್ಟು-ಪುರುಷ ಲಿಂಗಾತೀತ ಅಥವ ಲಿಂಗ ಪರಿವರ್ತಿತ ಮಹಿಳೆಯನ್ನು (ಟ್ರಾನ್ಸ್ ವುಮನ್ ) ಮದುವೆಯಾಗಬಹುದು.

ನ್ಯಾಯಮೂರ್ತಿ ಚಂದ್ರಚೂಡ್ ಅವರ ಅಲ್ಪಮತದ ತೀರ್ಪು ಅರ್ಜಿದಾರರಿಗೆ ನೀಡಿದ ಒಂದು ಒಳ್ಳೆಯ ಪರಿಹಾರವೆಂದರೆ ದತ್ತು ನಿಯಮಗಳ 5(3) ನಿಯಮವು ಜೆಜೆ (ಆಪ್ರಾಪ್ತ ವಯಸ್ಕರಿಗೆ ಸಂಬಂಧಪಟ್ಟ ನ್ಯಾಯ)ಕಾಯಿದೆ ಮತ್ತು ಸಂವಿಧಾನದ ಕಲಮು 14 ಮತ್ತು 15 ರಲ್ಲಿ ಅಡಿಯಲ್ಲಿ ಕಾನೂನುಬದ್ದವಲ್ಲ ಎನ್ನುತ್ತ ಅವಿವಾಹಿತ ದಂಪತಿಗಳು (ವಿಲಕ್ಷಣ ದಂಪತಿಗಳು ಸೇರಿದಂತೆ) ಅರ್ಜಿದಾರರಿಗೆ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಹಕ್ಕನ್ನು ನೀಡಿರುವುದು. ಅಲ್ಪಮತದ ತೀರ್ಪು ನಿಯಮ 5(3)ರ ಅಡಿಯಲ್ಲಿನ ‘ವೈವಾಹಿಕ’ ಪದವನ್ನು ಹೊರತು ಪಡಿಸಿದೆ ಮತ್ತು ಮತ್ತು ಕ್ವೀರ್ ಜೋಡಿಗಳು ಸೇರಿದಂತೆ ವಿವಾಹಿತ ಮತ್ತು ಅವಿವಾಹಿತ ಜೋಡಿಗಳೂ ಎಂದು ಅರ್ಥ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿಗಳು ಮತ್ತು ನ್ಯಾಯಮೂರ್ತಿ ಕೌಲ್ ಅವರ ಅಲ್ಪಮತದ ತೀರ್ಪು ಕೂಡ 2022 ರ CARA ( ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರ) ಸುತ್ತೋಲೆಯು ಸಹ-ಜೀವನ(ಲಿವ್‍-ಇನ್‍) ಸಂಬಂಧದಲ್ಲಿರುವ ದಂಪತಿಗಳನ್ನು ದತ್ತು ಪಡೆಯಲು ಅನರ್ಹಗೊಳಿಸಿರುವುದು ಸಂವಿಧಾನದ ಕಲಮು 15 ರ ಉಲ್ಲಂಘನೆಯಾಗಿದೆ ಎಂದಿದೆ. ಆದರೆ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಈ ಹಕ್ಕನ್ನು ಸಹ ಬಹುಮತದ ತೀರ್ಪು ನಿರಾಕರಿಸಿದೆ.

ಈ ತೀರ್ಪು ಕೇವಲ ನಿರಾಶಾದಾಯಕವಾಗಿದೆಯಷ್ಟೇ ಅಲ್ಲ, LGBTQ+ ಸಮುದಾಯದ ಸಹಾಯಕ್ಕೆ ಬರಲು ಮತ್ತು ದೇಶದ ಸಮಾನ ನಾಗರಿಕರಾಗಿ ಅವರಿಗೆ ದೊರಕಬೇಕಾದ ಹಕ್ಕುಗಳನ್ನು ನೀಡುವ ಅವಕಾಶವನ್ನು ನ್ಯಾಯಾಲಯ ತಪ್ಪಿಸಿಕೊಂಡಿದೆ ಎಂದಿರುವ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಸರ್ಕಾರವು ರಚಿಸುವ ಸಮಿತಿಯು ನಮ್ಮ ದೇಶದಲ್ಲಿ ಭಿನ್ನಲಿಂಗೀಯ ದಂಪತಿಗಳು ಅನುಭವಿಸುವ ಎಲ್ಲಾ ಹಕ್ಕುಗಳನ್ನು LGBTQ + ಸಮುದಾಯಕ್ಕೆ ನೀಡಬೇಕು ಎಂದು ಆಗ್ರಹಿಸಿದೆ.

 

Donate Janashakthi Media

Leave a Reply

Your email address will not be published. Required fields are marked *