ಮೊಬೈಲ್ ಕರೆ ಸೇವಾ ಶುಲ್ಕ ದರ ಹೆಚ್ಚಳ ವಿರೋಧಿಸಿ ರಾಷ್ಟ್ರವ್ಯಾಪಿ ಟ್ವಿಟ್ಟರ್ ಚಳವಳಿ

ಬೆಂಗಳೂರು: ಖಾಸಗಿ ಟೆಲಿಕಾಂ ಕಂಪನಿಗಳು ಮುಂಗಡ ಪಾವತಿ ಇಂಟರ್ನೆಟ್ ಶುಲ್ಕ ಮತ್ತು ಮೊಬೈಲ್ ಕರೆ ಸೇವಾ ಶುಲ್ಕ ದರಗಳನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಿರುವುದರ ವಿರುದ್ಧ ಅಲ್‌ ಇಂಡಿಯಾ ಡೆಮಾಕ್ರೆಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌-(ಎಐಡಿಎಸ್‌ಓ) ಮತ್ತು ಅಲ್‌ ಇಂಡಿಯಾ ಡೆಮಾಕ್ರೆಟಿಕ್‌ ಯೂತ್‌ ಆರ್ಗನೈಸೇಷನ್‌(ಎಐಡಿವೈಓ) ಸಂಘಟನೆಗಳಿಂದ ಗಣರಾಜ್ಯೋತ್ಸವದ ಅಂಗವಾಗಿ ಇಂದು ರಾಷ್ಟ್ರವ್ಯಾಪಿ ಟ್ವಿಟ್ಟರ್  ಅಭಿಯಾನ ಚಳವಳಿಯನ್ನು ಹಮ್ಮಿಕೊಂಡಿದ್ದರು.

ಮೊಬೈಲ್ ಕರೆಗಳು ಇಂದು ದೇಶದಲ್ಲಿ ಕೋವಿಡ್-19ರ ಮೂರನೇ ಅಲೆ ಬಂದಿರುವ ಈ ಸಂದರ್ಭದಲ್ಲಿ ಇತರ ಯಾವುದೇ ಅಗತ್ಯ ವಸ್ತುಗಳಂತೆ ಕನಿಷ್ಠ ಅವಶ್ಯಕತೆಯಾಗಿದೆ. ಲಾಕ್‌ಡೌನ್ ಸಮಯದಲ್ಲಿ ಮತ್ತು ನಂತರ, ಮೊಬೈಲ್ ತಂತ್ರಜ್ಞಾನ ಮತ್ತು ಇಂಟರ್ನೆಟ್ ಸೇವೆಯ ಬಳಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಪ್ರತಿಯೊಂದು ಕ್ಷೇತ್ರದ ಡಿಜಿಟಲೀಕರಣವು ಮೊಬೈಲ್ ಫೋನ್‌ಗಳ ಬಳಕೆಯ ಅಸಾಧಾರಣ ಹೆಚ್ಚಳಕ್ಕೆ ಕಾರಣವಾಗಿದೆ.

ಒಂದೆಡೆ ಮೊದಲೇ ಕುಸಿದಿದ್ದ ದೇಶದ ಆರ್ಥಿಕ ಪರಿಸ್ಥಿತಿಯು ಕೋವಿಡ್-19ರಿಂದಾಗಿ ಮತ್ತಷ್ಟು ಬಿಗಡಾಯಿಸಿದೆ. ಇದರ ಪರಿಣಾಮದಿಂದಾಗಿ ದೇಶದ ಜನರ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿದ್ದು, ಇಂತಹ ಸಂಕಷ್ಟಮಯ ಸಂದರ್ಭದಲ್ಲಿಯೂ ಖಾಸಗಿ ಟೆಲಿಕಾಂ ಕಂಪನಿಗಳು ಪ್ರಿಪೇಯ್ಡ್ ದರಗಳನ್ನು ತೀವ್ರವಾಗಿ ಹೆಚ್ಚಿಸಿದೆ. ಜನಸಾಮಾನ್ಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಜಿಯೋ, ವೊಡಾಫೋನ್, ಐಡಿಯಾ, ಏರ್‌ಟೆಲ್ ಕಂಪನಿಗಳು ಇಂಟರ್‌ನೆಟ್ ಸೇವಾ ಶುಲ್ಕಗಳು ಮತ್ತು ಕರೆ ದರಗಳನ್ನು 20ರಿಂದ 25% ಹೆಚ್ಚಿಸಿವೆ ಮತ್ತು ಮುಂಬರುವ ದಿನಗಳಲ್ಲಿ ಮತ್ತಷ್ಟು ದರ ಹೆಚ್ಚಳ ಮಾಡುವುದಾಗಿ ಘೋಷಿಸಿವೆ. ಈಗಲೇ ಮಧ್ಯಮ ವರ್ಗದ ಜನರು, ಕಡಿಮೆ ಆದಾಯವುಳ್ಳವರು, ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿ ಯುವಕರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಕಳೆದ ನವೆಂಬರ್‌ನಲ್ಲಿ ಖಾಸಗಿ ಟೆಲಿಕಾಂಗಳು ಎಲ್ಲರೊಂದಿಗೆ ಕನಿಷ್ಠ ಸಮಾಲೋಚನೆ ನಡೆಸದೆ ಇದ್ದಕ್ಕಿದ್ದಂತೆ ದರಗಳನ್ನು ಹೆಚ್ಚಿಸಿದ್ದರು. ಖಾಸಗಿ ಟೆಲಿಕಾಂಗಳು ದರಗಳಲ್ಲಿ ಇಷ್ಟೊಂದು ಏರಿಕೆ ಮಾಡುತ್ತಿದ್ದರೂ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಯಾವ ಕ್ರಮವನ್ನು ಕೈಗೊಳ್ಳದೇ ಜಡ ಮೌನವಾಗಿರುವುದು ಖಂಡನೀಯ ಎಂದು ಅಭಿಯಾನದ ಮೂಲಕ ಪ್ರಚುರಪಡಿಸಲಾಗಿದೆ.

ಸಾರ್ವಜನಿಕ ವಲಯದ ಬಿಎಸ್‌ಎನ್‌ಎಲ್‌ನ್ನು ಬಲಿಕೊಟ್ಟು, ಕೇವಲ ಒಂದೆರಡು ದೈತ್ಯ ಖಾಸಗಿ ಕಂಪನಿಗಳು ಟೆಲಿಕಾಂ ವಲಯದ ಮೇಲೆ ಏಕಸ್ವಾಮ್ಯ ಸಾಧಿಸುವಂತೆ ಮಾಡುವಲ್ಲಿ ನರೇಂದ್ರ ಮೋದಿ ಸರ್ಕಾರವು ಅತ್ಯಂತ ಯಶಸ್ವಿಯಾಗಿದೆ. ಹೀಗಾಗಿ, ಇದು ಟೆಲಿಕಾಂ ಕ್ಷೇತ್ರದ ಸಂಪೂರ್ಣ ಖಾಸಗೀಕರಣದ ಹಾದಿಯನ್ನು ತೆರವುಗೊಳಿಸಿ ದೇಶದ ಫೋನ್ ಬಳಕೆದಾರರಿಗೆ ವಿನಾಶದ ಸಂಕೇತವನ್ನು ಸೂಚಿಸಿದೆ.

2021-22ರ ಹಣಕಾಸು ವರ್ಷದಲ್ಲಿ, ಜುಲೈ-ಸೆಪ್ಟೆಂಬರ್ ನಡುವಿನ ತ್ರೈಮಾಸಿಕದಲ್ಲಿ ಜಿಯೋ ಕಂಪನಿಯು ರೂ.3,724 ಕೋಟಿ ಲಾಭ ಗಳಿಸಿದೆ, ಇದು ಕಳೆದ ವರ್ಷದ ಇದೇ ಅವಧಿಗಿಂತಲೂ 24% ಹೆಚ್ಚಾಗಿದೆ.  ಟೆಲಿಫೋನ್ ದರಗಳಲ್ಲಿ ವಿಪರೀತ ಹೆಚ್ಚಳದ ಹೊರತಾಗಿಯೂ ಮೊಬೈಲ್ ಫೋನ್ ಕಂಪನಿಗಳು ಭಾರಿ ಲಾಭವನ್ನು ಗಳಿಸುತ್ತಿವೆ. ಸಾಲದೆಂಬಂತೆ ಪುನಃ ಖಾಸಗಿ ಟೆಲಿಕಾಂ ಕಂಪನಿಗಳು ಈ ತೀವ್ರತರದ ಏರಿಕೆಯನ್ನು ಮಾಡಿವೆ. ಜನತೆ ತೀವ್ರ ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಈ ಪರಿಸ್ಥಿತಿಯಲ್ಲಿ, ಇಂಟರ್ನೆಟ್ ಸೇವೆ ದರ ಮತ್ತು ಮೊಬೈಲ್ ಕರೆ ದರಗಳಲ್ಲಿನ ಈ ಭಾರಿ ಹೆಚ್ಚಳದ ವಿರುದ್ಧ ಎಐಡಿವೈಓ ಮತ್ತು ಎಐಡಿಎಸ್‌ಓ ಸಂಘಟನೆಗಳು ರಾಷ್ಟ್ರವ್ಯಾಪಿ ಹೋರಾಟವನ್ನು ನಡೆಸಿದವು.

ಹೋರಾಟದ ಮುಂದುವರಿಕೆಯಾಗಿ ಇಂದು ಸಹ ರಾಷ್ಟ್ರವ್ಯಾಪಿ ಟ್ವಿಟ್ಟರ್ ಅಭಿಯಾನ ಚಳವಳಿಯನ್ನು ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಅಜಯ್‌ ಕಾಮತ್‌, ಜಿಲ್ಲಾ ಕಾರ್ಯದರ್ಶಿ ಕಲ್ಯಾಣ್‌, ಎಐಡಿವೈಓ ರಾಜ್ಯ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ, ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಜಯಣ್ಣ ಮತ್ತಿತರರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *