ಬೆಂಗಳೂರು : ಸೆಂಟರ್ ಫಾರ್ ಬರ್‍ಬೋರ್ನ್ ಸಿಸ್ಟಮ್ಸ್, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ(ಡಿಆರ್‌ಡಿಒ) ಕೆಲಸದಿಂದ ವಜಾ ಮಾಡಿರುವ 61 ಸಫಾಯಿ ಕರ್ಮಚಾರಿ ಕಾರ್ಮಿಕರಿಗೆ ಕೂಡಲೇ ಕೆಲಸ ಕೊಡಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ ಪದಾಧಿಕಾರಿಗಳು ಸಿಎಬಿಎಸ್ – ಡಿಆರ್‌ಡಿಒ ಗೇಟ್ ಮುಂಭಾಗ ಪ್ರತಿಭಟನೆ ನಡೆಸಿದರು.
ವೇತನ ಸುಲಿಗೆ ಮಾಡುತ್ತಿದ್ದವರ ವಿರುದ್ಧ ಧ್ವನಿ ಎತ್ತಿದ್ದ ಕಾರಣಕ್ಕೆ ಕಾರ್ಮಿಕರನ್ನು ಉದ್ಯೋಗದಿಂದ ವಜಾ ಮಾಡಲಾಗಿತ್ತು. ಕೆಲಸ ಕಳೆದುಕೊಂಡ ಕಾರ್ಮಿಕರೆಲ್ಲರೂ ಮಹಿಳೆಯರಾಗಿದ್ದು, ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ, ಶೋಷಿತರ ಹಕ್ಕನ್ನು ದಮನ ಮಾಡಲಾಗುತ್ತಿದೆ ಎಂದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು.
019ರಿಂದ, ನೆಪಮಾತ್ರಕ್ಕೆ ಕಾರ್ಮಿಕರ ವೇತನವನ್ನು ಅವರ ಖಾತೆಗೆ ಜಮಾ ಮಾಡುತ್ತಿದ್ದರು. ಮೇಲ್ವಿಚಾರಕ ಈ ಕಾರ್ಮಿಕರಿಂದ ಮಾಸಿಕ 3ಸಾವಿರ ರೂ.ವಸೂಲಿ ಮಾಡುತ್ತಿದ್ದ. ಕೇಳಿದರೆ ಏಜೆನ್ಸಿ ಮತ್ತು ಸಿಎಬಿಎಸ್‍ಗೆ ಕೊಡಬೇಕೆಂದು ಕಾರಣ ನೀಡುತ್ತಿದ್ದ. ಹಣ ಕೊಡಲು ನಿರಾಕರಿಸಿದರೆ ಕೆಲಸದಿಂದ ತೆಗೆಯುವುದಾಗಿ ಕಿರುಕುಳ ನೀಡುತ್ತಿದ್ದರು. ಸುಲಿಗೆ ಮಾಡುತ್ತಿದ್ದ ಮೊತ್ತವು 3ಸಾವಿರ ದಿಂದ 4,200ರೂ.ಕ್ಕೆ ಏರಿಕೆಯಾಯಿತು. ಇಂತಹ ಸುಲಿಗೆಯಿಂದಾಗಿ ಕಾರ್ಮಿಕರಿಗೆ ಕನಿಷ್ಠ ವೇತನಕ್ಕಿಂತಲೂ ಕಡಿಮೆ ವೇತನ ದೊರಕುತ್ತಿತ್ತು ಎಂದು ಪ್ರತಿಭಟನೆಕಾರರು ಬೇಸರ ವ್ಯಕ್ತಪಡಿಸಿದರು.
ಸಿಎಬಿಎಸ್ ಆಡಳಿತ ಮಂಡಳಿಯ ವಿರುದ್ಧ ಕಾರ್ಮಿಕರು 2023ರ ಅಕ್ಟೋಬರ್ ನಲ್ಲಿ, ಪ್ರಾದೇಶಿಕ ಕಾರ್ಮಿಕ ಆಯುಕ್ತ (ಕೇಂದ್ರ)ರಿಗೆ ದೂರು ನೀಡಲಾಗಿತ್ತು. ಆ ನಂತರ ಸುಲಿಗೆ ದಂದೆಯನ್ನು ನಿಲ್ಲಿಸಲಾಯಿತು. ಮಾ.23ರಂದು ಕಾರ್ಮಿಕರು ಕೆಲಸಕ್ಕೆ ಹೋದಾಗ ಅವರಿಗೆ ಕೆಲಸ ನಿರಾಕರಿಸಿದೆ. ಇಂಡಿಯನ್ ಸೆಕ್ಯೂರಿಟಿ ಏಜೆನ್ಸಿ ಹೊಸ ಗುತ್ತಿಗೆದಾರರನ್ನು ತೆಗೆದುಕೊಂಡಿದೆ ಮತ್ತು ಆ ಏಜೆನ್ಸಿಗೆ ನಿಮ್ಮ ಸೇವೆಯ ಅಗತ್ಯವಿಲ್ಲ ಎಂದು 61 ಕಾರ್ಮಿಕರನ್ನು ವಜಾಮಾಡಿತ್ತು. ಇದು ಕಾನೂನು ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಎಐಸಿಸಿಟಿಯು ರಾಜ್ಯ ಕಾರ್ಯದರ್ಸಿ ಅಪ್ಪಣ್ಣ ತಿಳಿಸಿದ್ದಾರೆ.
ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದ ಕಾರ್ಮಿಕರನ್ನು ವಜಾಮಾಡಿರುವುದು ಕೈಗಾರಿಕಾ ವಿವಾದಗಳ ಕಾಯಿದೆ 1947ರ ಅಡಿಯಲ್ಲಿ ನಿಷೇಧಿಸಲಾದ ಕಾರ್ಮಿಕ ವಿರೋಧಿ ನೀತಿಯಾಗಿದೆ. ಗುತ್ತಿಗೆದಾರರು ಬದಲಾದರೂ, ಕಾರ್ಮಿಕರನ್ನು ಬದಲಾವಣೆ ಮಾಡಬಾರದು ಎಂಬುದು ಕಾನೂನು. ಇದನ್ನು ಉಲ್ಲಂಘನೆ ಮಾಡಿ ಕಾರ್ಮಿಕರಿಗೆ ಅನ್ಯಾಯ ಮಾಡಿದೆ. ಕಾರ್ಮಿಕರಿಂದ ಹಣ ಸುಲಿಗೆ ಮಾಡಿದ ಮೊತ್ತವನ್ನು ಹಿಂತಿರುಗಿಸಬೇಕು ಹಾಗೂ ಕಾರ್ಮಿಕರಿಗೆ ಕೆಲಸದ ವಾತಾವರಣವನ್ನು ಒದಗಿಸಬೇಕು ಎಂದು ಅಪ್ಪಣ್ಣ ಆಗ್ರಹಿಸಿದರು.