ದೆಹಲಿ : ಮೂರು ಕೃಷಿ ಕಾಯ್ದೆಗಳ ವಿರುದ್ಧ ತಮ್ಮ ಹೋರಾಟವನ್ನು ತೀವ್ರಗೊಳಿಸುತ್ತ ಎಪ್ರಿಲ್ 5ರಂದು ದೇಶಾದ್ಯಂತ ರೈತರು “ಎಫ್‌ಸಿಐ ಬಚಾವೋ” ದಿನಾಚರಣೆ ನಡೆಸಿದ್ದಾರೆ. ‘ಎಫ್‍ಸಿಐ ಉಳಿಸಿ, ಪಡಿತರ ವ್ಯವಸ್ಥೆಯನ್ನು ಉಳಿಸಿ’ ಎಂದು ಸರಕಾರವನ್ನು ಆಗ್ರಹಿಸಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ ಕರೆಯ ಮೇರೆಗೆ ಸಾವಿರಾರು ರೈತರು ದೇಶಾದ್ಯಂತ ಎಫ್‌ಸಿಐ(ಭಾರತ ಆಹಾರ ನಿಗಮ) ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿದರು. ಮಹಿಳೆಯರು, ಹಿರಿಯ ರೈತರು ಮತ್ತು ಯುವ ರೈತರು ಇದರಲ್ಲಿ ಬೃಹತ್ ಪ್ರಮಾಣದಲ್ಲಿ ಭಾಗವಹಿಸಿದರು ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಹೇಳಿದೆ. ಆಂಧ್ರಪ್ರದೇಶ, ಉತ್ತರಪ್ರದೇಶ, ಬಿಹಾರ, ಪಂಜಾಬ್, ರ‍್ಯಾಣ ಮತ್ತು ರಾಜಸ್ತಾನದಲ್ಲಿ ದೊಡ್ಡ ಧರಣಿಗಳು ನಡೆದವು.
ಕೃಷಿ ಉತ್ಪನ್ನಗಳ ಸಂಗ್ರಹಣೆ/ಖರೀದಿಗೆ ಸಂಬಂಧಪಟ್ಟಂತೆ ಸರಕಾರದ ಇತ್ತೀಚಿನ ಆದೇಶ ಎಫ್‌ಸಿಐನ್ನು ಕಳಚಿಹಾಕುವ ಗುರಿಸಾಧನೆಗಾಗಿ ಎಂದು ರೈತ ಮುಖಂಡರು ಹೇಳಿದ್ದಾರೆ. ಇದು ಎಂಎಸ್‌ಪಿ ಯಂತಹ ಪಾವತಿ ವ್ಯವಸ್ಥೆಗೆ ಬಾಧಕಾವಾಗುತ್ತದೆ, ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನೂ ಬಾಧಿಸಿ ಬಡ ವಿಭಾಗಗಳಿಗೆ ಭಾರೀ ಏಟು ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಅಖಿಲ ಭಾರತ ಕಿಸಾನ್ ಸಭಾ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ಕೇಂದ್ರ ಸರಕಾರ ಎಫ್‌ಸಿಐಗೆ ಕೊಡಬೇಕಾದ ಬಾಕಿ ಹಣವನ್ನು ತೆರುತ್ತಿಲ್ಲ, ಆಹಾರ ಬಜೆಟನ್ನು ಪ್ರತಿ ವರ್ಷ ಇಳಿಸುತ್ತ ಬರತ್ತಿದೆ ಎಂದು ನೆನಪಿಸಿದೆ.
“ಆಹಾರ ದಾಸ್ತಾನಿನ ನಿರ್ವಹಣೆ ವೆಚ್ಚ ಅಪಾರವಾಗಿದೆ, ಅಕ್ಕಿಗೆ ಕೆಜಿಗೆ 37ರೂ., ಗೋಧಿಗೆ 27ರೂ. ವೆಚ್ಚವಾಗುತ್ತದೆ ಎಂದು ಸರಕಾರವೇ ಹೇಳುತ್ತಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ಎಫ್‌ಸಿಐ ಈ ಬಗ್ಗೆ ಮಾಡುತ್ತಿರುವ ವೆಚ್ಚಗಳನ್ನು ಭರಿಸದೆ ಬಾಕಿ ಇಟ್ಟುಕೊಂಡು ಎಫ್‌ಸಿಐ ಮೇಲೆ ಇಂದು 3.81 ಲಕ್ಷ ಕೋಟಿ ರೂ.ಗಳ ಸಾಲದ ಹೊರೆಯನ್ನು ಹಾಕಿದೆ” ಎಂದು ಈ ಪತ್ರದಲ್ಲಿ ಎಐಕೆಎಸ್ ಅಧ್ತಕ್ಷ ಡಾ. ಅಶೋಕ ಧವಳೆ ಮತ್ತು ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲ ಹೇಳಿದ್ದಾರೆ.
ಈ ಸಾಲಕ್ಕೆ ಎಫ್‌ಸಿಐ 8ಶೇ.ದಷ್ಟು ಬಡ್ಡಿ ತೆರಬೇಕಾಗಿ ಬಂದಿದೆ. ಇನ್ನೊಂದೆಡೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಎಫ್‌ಸಿಐನ ಬಜೆಟಿನಲ್ಲಿ ಕಡಿತವನ್ನು ಉಂಟುಮಾಡಲಾಗುತ್ತಿದೆ.
ಎಫ್‌ಸಿಐ ಖರೀದಿ ಕೇಂದ್ರಗಳಲ್ಲಿ ಕಡಿತ ಮಾಡಲಾಗಿದೆ. ಅಲ್ಲದೆ ಇತ್ತೀಚೆಗೆ ಎಫ್‌ಸಿಐ ತನ್ನ ಧಾನ್ಯಸಂಗ್ರಹಣೆ/ಖರೀದಿ ನಿಯಮಗಳನ್ನು ಬದಲಿಸಿರುವುದು ಭಾಗ ಬೆಳೆಗಾರರ ಸಮಸ್ಯೆಗಳನ್ನು ಹೆಚ್ಚಿಸಿದೆ ಎಂಬ ಸಂಗತಿಯತ್ತ ಎಐಕೆಎಸ್ ಈ ಪತ್ರದ ಮೂಲಕ ಸರಕಾರದ ಮತ್ತು ಸಾರ್ವಜನಿಕರ ಗಮನ ಸೆಳೆದಿದೆ.
“ಭಾರತ ಸರಕಾರದ ಮೇಲೆ ನಮ್ಮ ದೇಶದ ಆಹಾರ ಭದ್ರತೆಯ ಹೊಣೆಯಿದೆ. ಇದಕ್ಕೆ ಅದು ಆಹಾರಧಾನ್ಯಗಳನ್ನು ಖರೀದಿ ಮಾಡಿ ಸಂಗ್ರಹಿಸಿಡಬೇಕಾಗುತ್ತದೆ. ಸಂಕಷ್ಟಗಳ ಸಮಯದಲ್ಲಿ ಇವನ್ನು ಬಡಜನಗಳಿಗೆ ಹಂಚಿ ಅವರು ಉಪವಾಸ ಬೀಳದಂತೆ ನೋಡಿಕೊಳ್ಳಬೇಕಾಗಿದೆ. ಆಹಾರ ಸಬ್ಸಿಡಿಗೆ ಬಜೆಟ್ ನೀಡಿಕೆ ಹಲವು ವರ್ಷಗಳಿಂದ ಸುಮಾರು ರೂ.1.15,000 ಕೋಟಿಯಲ್ಲೇ ನಿಂತಿದೆ. ಈ ಹಣವನ್ನು ಕೂಡ ಪೂರ್ಣವಾಗಿ ಬಳಸಿಕೊಳ್ಳುತ್ತಿಲ್ಲ. ಇಂದು 81.35 ಕೋಟಿ ಪಡಿತರ ಫಲಾನುಭವಿಗಳಿಗೆ ತಿಂಗಳಿಗೆ 5 ಕೆಜಿ ಆಹಾರಧಾನ್ಯಗಳನ್ನು ಒದಗಿಸಬೇಕು. ಪಡಿತರ ವ್ಯವಸ್ಥೆಯನ್ನು ಮುಚ್ಚಿದರೆ ಅವರೆಲ್ಲ ಮಾರುಕಟ್ಟೆಯಿಂದ ಖರೀದಿಸಬೇಕಾಗುತ್ತದೆ. ಈಗಾಗಲೇ ನೀತಿ ಆಯೋಗ ನಗರಪ್ರದೇಶಗಳಲ್ಲಿ 60% ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 40% ರೇಷನ್ ಕಾರ್ಡ್ ಗಳ ಸಂಖ್ಯೆಯನ್ನು ಇಳಿಸಬೇಕು ಎಂದು ಶಿಫಾರಸು ಮಾಡಿದೆ. ಬಡವರು ಬಹಿರಂಗ ಮಾರುಕಟ್ಟೆಯಿಂದ ಖರೀದಿಸಬೇಕಾದರೆ ಅವರು ಉಪವಾಸವಿರಬೇಕಾಗುತ್ತದೆ, ಹಸಿವಿನಿಂದ ಸಾವುಗಳು ಹೆಚ್ಚುತ್ತವೆ.” ಎಂದು ಎಐಕೆಎಸ್ ತನ್ನ ಪತ್ರದಲ್ಲಿ ಪ್ರಧಾನ ಮಂತ್ರಿಗಳನ್ನು ಎಚ್ಚರಿಸಿದೆ.
ಅದು ಪ್ರಧಾನ ಮಂತ್ರಿಗಳ ಮುಂದೆ ಈ ಕೆಳಗಿನ 6 ಬೇಡಿಕೆಗಳನ್ನು ಇಟ್ಟಿದೆ:
- ಎಫ್‌ಸಿಐ ಬಜೆಟನ್ನು ಗಮನಾರ್ಹವಾಗಿ ಹೆಚ್ಚಿಸಿ, ಅದನ್ನು ಸಂಪೂರ್ಣವಾಗಿ ಬಳಸಿ ಅದನ್ನು ಬಲಪಡಿಸಬೇಕು. ಎಫ್‌ಸಿಐನ ಸಾಲ ಮತ್ತು ಬಡ್ಡಿಯನ್ನು ಸರಕಾರ ಸಂಪೂರ್ಣವಾಗಿ ತೆರಬೇಕು. ದೇಶಾದ್ಯಂತ ಎಫ್‌ಸಿಐನ ಸಂಗ್ರಹಣಾ ಕೇಂದ್ರಗಳನ್ನು ದೊಡ್ಡಪ್ರಮಾಣದಲ್ಲಿ ಹೆಚ್ಚಿಸಿ ರೈತರಿಗೆ ಕನಿಷ್ಟ ಬೆಂಬಲ ಬೆಲೆಗಳು ಸಿಗುವಂತೆ ಖಾತ್ರಿಪಡಿಸಬೇಕು.
- ಎಲ್ಲ ಖರೀದಿಗಳನ್ನು ಎಂಎಸ್‌ಪಿ ದರಗಳಲ್ಲೇ ಮಾಡಬೇಕು, ಅದಕ್ಕಿಂತ ಕಡಿಮೆ ಬೆಲೆಗಳಲ್ಲಿ ಖರೀದಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಖರೀದಿ ಪ್ರಕ್ರಿಯೆಯನ್ನು ಕನಿಷ್ಟ ಸಮಯದಲ್ಲಿ ಮುಗಿಸಬೇಕು. ಚೀಲಗಳಿಲ್ಲ ಎಂಬಿತ್ಯಾದಿ ಕಾರಣಗಳಿಂದ ರೈತರಿಗೆ ಏನೂ ತೊಂದರೆಯಾಗದಂತೆ ಖಾತ್ರಿಪಡಿಸಬೇಕು.
- ಕೋಟ್ಯಂತರ ಜನಗಳಿಗೆ ಆಹಾರ ಭದ್ರತೆಯ ಮೂಲವೆಂದರೆ ಎಫ್‌ಸಿಐ ಮೂಲಕ ಸಾರ್ವಜನಿಕ ವಿತರಣಾ ವ್ಯವಸ್ಥೆ. ಸರಕಾರ ದಾಸ್ತಾನನ್ನು ಮುಂದುವರೆಸಬೇಕು ಮತ್ತು ಸುಗಮವಾಗಿ ನಡೆಸಬೇಕು, ಈ ಮೂಲಕ ಜನಗಳು ಹಸಿವಿನಿಂದ ನರಳದಂತೆ ಮಾಡಬೇಕು. ರೇಷನ್ ಕಾರ್ಡ್ ಗಳನ್ನು ಕಡಿತ ಮಾಡುವ ಎಲ್ಲ ಪ್ರಯತ್ನಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು.
- ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ವಿಸ್ತರಿಸಬೇಕು. ಅದನ್ನು ಸಾರ್ವತ್ರೀಕರಣಗೊಳಿಸುವತ್ತ ಸಾಗಬೇಕು. ಅದುವರೆಗೆ 81.35 ಕೋಟಿ ಪಡಿತರ ಫಲಾನುಭವಿಗಳು ತಿಂಗಳಿಗೆ ತಲಾ 15 ಕೆಜಿ ಧಾನ್ಯಗಳು, 1 ಕೆಜಿ ಬೇಳೆ , ಸಕ್ಕರೆ ಮತ್ತು ಅಡುಗೆ ತೈಲ ಪಡೆಯುವಂತೆ ಖಾತ್ರಿಪಡಿಸಬೇಕು.
- ಸರಕಾರ ರೈತರ ಬ್ಯಾಂಕ್ ಖಾತೆಗಳಿಗೆ ನೇರ ಪಾವತಿಯನ್ನು ಹಿಂದಕ್ಕೆ ಪಡೆಯಬೇಕು. ಅದನ್ನು ಅವಸರದಿಂದ ಜಾರಿಗೆ ತಂದರೆ ಹಲವು ಕ್ಲಿಷ್ಟ ಸಮಸ್ಯೆಗಳು ಉಂಟಾಗುತ್ತವೆ. ಇದು ರೈತರಿಗೆ ತಮ್ಮ ಬೆಳೆಗಳ ಬೆಲೆಗಳು ಸಿಗದಂತೆ ತಡೆಯುತ್ತದೆ. ಗೋದಿ ಖರೀದಿಗೆ ‘ಜಮಾಬಂಧಿ’ ಯನ್ನು ಸಲ್ಲಿಸಬೇಕೆಂಬ ನಿರ್ಣಯವನ್ನು ಹಿಂದಕ್ಕೆ ಪಡೆಯಬೇಕು.
- ಕಾಂಟ್ರಾಕ್ಟ್ ಮೇಲಿರುವ ಎಫ್‌ಸಿಐ ನೌಕರರು ಮತ್ತು ಕಾರ್ಮಿಕರಿಗೆ ಖಾಯಂ ಕೆಲಸಗಳನ್ನು ಕೊಡಬೇಕು ಮತ್ತು ಎಲ್ಲ ಖಾಲಿ ಹುದ್ದೆಗಳನ್ನು ತಕ್ಷಣವೇ ತುಂಬಬೇಕು.