ನವದೆಹಲಿ : ಸಂಸತ್ ಮುಂಗಾರು ಅಧಿವೇಶನ ಒಂದೆಡೆ ನಡೆಯುತ್ತಿದೆ, ಇನ್ನೊಂದೆಡೆ ರೈತರು ಜಂತರ್ ಮಂತರ್ ಎದುರು ಇಂದಿನಿಂದ ಆಗಸ್ಟ್ 9 ರವರೆಗೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಈ ಮೂಲಕ ರೈತರು ಸರ್ಕಾರದ ಗಮನವನ್ನು ಸೆಳೆಯಲು ಮುಂದಾಗಿದ್ದಾರೆ. ಇಂದು ಬೆಳಗ್ಗೆಯೇ ಜಂತರ್ ಮಂತರ್ ಗೆ ಸಾಗುವ ಮುನ್ನ ಸಿಂಘು ಗಡಿಯಲ್ಲಿ ರೈತರು ಜಮಾಯಿಸಿದ್ದಾರೆ. ದೆಹಲಿ ಗಡಿಭಾಗದಲ್ಲಿ ಮತ್ತು ಜಂತರ್ ಮಂತರ್ ನಲ್ಲಿ ತೀವ್ರ ಭದ್ರತೆ ಕಲ್ಪಿಸಲಾಗಿದೆ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಮತ್ತೆ ಈಗ ಕಾವು ಪಡೆದುಕೊಂಡಿದ್ದು, ಇಂದು ( ಗುರುವಾರ) ಸಿಂಘು ಗಡಿಯಿಂದ ರಾಷ್ಟ್ರ ರಾಜಧಾನಿ ನವ ದೆಹಲಿಯ ಜಂತರ್ ಮಂತರ್ ಗೆ ಬಸ್ ಗಳ ಮೂಲಕ ಸುಮಾರು 200 ಕ್ಕೂ ಅಧಿಕ ಮಂದಿ ಕೃಷಿಕರು ಪ್ರತಿಭಟನೆ ಮಾಡುವುದಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ನವ ದೆಹಲಿಯ ಸುತ್ತಾ ಮುತ್ತ ಬಿಗಿ ಪೊಲೀಸ್ ಬಂದೋಸ್ತ್ ಮಾಡಲಾಗಿದೆ.
ಇಂದಿನಿಂದ ಆಗಸ್ಟ್ 09 ರವರೆಗೆ : ಇಂದಿನಿಂದ ಆಗಸ್ಟ್ 9 ರವರೆಗೆ ಸಂಸತ್ ಮಾದರಿಯಲ್ಲಿ ಚರ್ಚೆ ಸಂವಾದಗಳು ನಡೆಯಲಿವೆ.ಜಂತರ್ ಮಂತರ್ ಸಂಸತ್ ನಿಂದ ಕೇವಲ 150 ಮೀಟರ್ ದೂರದಲ್ಲಿ ಇದೆ. ನಾವು ಜಂತರ್ ಮಂತರ್ ನಲ್ಲಿ ನಮ್ಮದೇ ಸಂಸತ್ ನನ್ನು ರಚಿಸಿ ಚರ್ಚೆ ಮಾಡುತ್ತೇವೆ ಎಂದು ರೈತ ನಾಯಕರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಬಿಸಿ ಮುಟ್ಟಿಸಲು ರೈತರು ಸನ್ನದ್ಧರಾಗಿದ್ದಾರೆ. ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ವೇಳೆ ಪಕ್ಷವನ್ನು ಕಟ್ಟಿ ಹಾಕುವ ನಿಟ್ಟಿನಲ್ಲಿ ತಮ್ಮ ಹೋರಾಟದ ಹೆಜ್ಜೆಯನ್ನು ಇರಿಸುವುದಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. “ಬಿಜೆಪಿ ಹೃದಯ” ಎನಿಸಿಕೊಂಡಿರುವ ಉತ್ತರ ಪ್ರದೇಶದ ಕಡೆಗೆ ನಾವು ಮುಂದಿನ ಹೆಚ್ಚೆ ಇಡುತ್ತೇವೆ. ನಾವು ಶಾಂತಿ ಸಂಧಾನಕ್ಕೆ ಸಿದ್ಧರಿದ್ದೇವೆ. ಆದರೆ ಮೂರು ವಿವಾದಿತ ಕಾಯ್ದೆಗಳನ್ನು ರದ್ದುಗೊಳಿಸುವುದರ ಹೊರತಾಗಿ ಯಾವುದೇ ಮಾತುಕತೆಗಳು ಬೇಕಿಲ್ಲ,” ಎಂದು ದೆಹಲಿ-ಹರಿಯಾಣದ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡ ಪ್ರೇಮ್ ಸಿಂಗ್ ಭಂಗು ಎಚ್ಚರಿಸಿದ್ದಾರೆ.
ಸಂಸತ್ ಭವನದ ಆವರಣದಲ್ಲಿ ವಿಪಕ್ಷಗಳ ಪ್ರತಿಭಟನೆ : ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಸತ್ ಆವರಣದಲ್ಲಿ ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಎಡಪಕ್ಷಗಳು, ಡಿಎಂಕೆ ಮತ್ತು ಆರ್‌ಜೆಡಿ ಪಕ್ಷಗಳು ಪ್ರತಿಭಟನೆ ನಡೆಸಿ ರೈತರ ಹೋರಾಟಕ್ಕೆ ಸೌಹಾರ್ಧ ಬೆಂಬಲ ನೀಡಿವೆ. ಈ ಕಾಯ್ದೆಗಳನ್ನು ರದ್ದು ಪಡಿಸುವಂತೆ ಆಗ್ರಹಿಸಿವೆ.
ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್‌ಗಾಂಧಿ ಇನ್ನಿತರ ಕಾಂಗ್ರೆಸ್ ಸಂಸದರೂ ಪ್ರತಿಭಟನೆ ನಡೆಸಿದರು. ರೈತರ ಆಂದೋಲನಕ್ಕೆ ಸಂಬಂಧಿ ಸಿದಂತೆ ರಾಜ್ಯಸಭೆಯಲ್ಲಿ ದೀಪೇಂದ್ರ ಸಿಂಗ್ ಹೂಡಾ ಮತ್ತು ಪ್ರತಾಪ್‌ಸಿಂಗ್ ಭಜ್ವಾ ಅವರು ನೋಟಿಸ್‌ನ್ನು ಅಮಾನತುಗೊಳಿಸಿದ್ದಾಗಿ ಮಾಹಿತಿ ನೀಡಿದ್ದಾರೆ.
ಕಳೆದ ನವೆಂಬರ್.26ರಿಂದ ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್, ಹರಿಯಾಣ, ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ಕೃಷಿ ಕಾಯ್ದೆಗಳ ವಿರುದ್ಧ ಕೂಗು ಎತ್ತಿದ್ದಾರೆ.