ಮೋದಿ ಸರ್ಕಾರವು ಇತ್ತೀಚೆಗೆ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡುವಂತೆ ಆಗ್ರಹಿಸಿ ದೇಶಾದ್ಯಂತ ನಡೆಯುತ್ತಿರುವ ರೈತ ಚಳುವಳಿಯ ಸಂದರ್ಭದಲ್ಲಿ, ಕೆಲವು ವ್ಯಾಖ್ಯಾನಕಾರರು ಒಂದು ಪ್ರಶ್ನೆಯನ್ನು ಕೇಳುತ್ತಾರೆ: ಕೃಷಿಯು ಮುಕ್ತ ಮಾರುಕಟ್ಟೆಯ ಚೌಕಟ್ಟಿನೊಳಗೆ ಏಕೆ ಕಾರ್ಯನಿರ್ವಹಿಸಬಾರದು? ಈ ಪ್ರಶ್ನೆಗೆ ಉತ್ತರವಾಗಿ ಎಲ್ಲರೂ ಬಲ್ಲ ಉತ್ತರವನ್ನೇ ಇಲ್ಲಿ ಪುನರಾವಲೋಕಿಸಿಸುವುದೇ ಸೂಕ್ತವೆನಿಸುತ್ತದೆ.
ಅರ್ಥವ್ಯವಸ್ಥೆಯ ಒಟ್ಟು ಹಿತ-ದೃಷ್ಟಿಯಿಂದ ನೋಡಿದಾಗ, ಮುಕ್ತ ಮಾರುಕಟ್ಟೆಯ ರೀತಿ-ನೀತಿಗಳನ್ನು ಅನುಸರಿಸಿದಾಗ ದೊರೆಯುವ ಫಲಿತಾಂಶಗಳು ಅಷ್ಟೇನೂ ತೃಪ್ತಿಕರವಾಗಿರುವುದಿಲ್ಲ ಎಂಬ ಅಂಶವನ್ನು ಅರ್ಥಶಾಸ್ತ್ರಜ್ಞ ಕೀನ್ಸ್ ಅದಾಗಲೇ ಹೇಳಿಯಾಗಿದೆ. ಸದ್ಯಕ್ಕೆ ಕೀನ್ಸ್ ವಾದವನ್ನು ಪಕ್ಕಕ್ಕೆ ಇಟ್ಟು, ಕೃಷಿ ವಲಯಕ್ಕೆ ಸಂಬಂಧಿಸಿದಂತೆ ಮುಕ್ತ ಮಾರುಕಟ್ಟೆಯ ಬಗ್ಗೆ ಹೇಳುವುದಾದರೆ, ಎರಡು ವಿಭಿನ್ನ ಕಾರಣಗಳಿಗಾಗಿ, ಮುಕ್ತ ಮಾರುಕಟ್ಟೆಯಿಂದ ದೊರೆಯುವ ಫಲಿತಾಂಶಗಳು ಅಷ್ಟೇನೂ ತೃಪ್ತಿಕರವಾಗಿರುವುದಿಲ್ಲ. ಮುಕ್ತ ಮಾರುಕಟ್ಟೆಯಲ್ಲಿ ಕೃಷಿ ಉತ್ಪಾದನೆಗಳಿಗೆ ದೊರೆಯುವ ಬೆಲೆಗಳು, ಸಾಮಾಜಿಕವಾಗಿ ತೃಪ್ತಿಕರವಾಗಿರುವುದರ ಬದಲು, ಸಾಮಾಜಿಕವಾಗಿ ಹಾನಿಕಾರಕವಾಗುತ್ತವೆ ಮತ್ತು ಕೃಷಿ ವಲಯವು ಒಂದು ವೇಳೆ ಮುಕ್ತ ಮಾರುಕಟ್ಟೆಯ ರೀತಿ-ನೀತಿಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸಿದಲ್ಲಿ, ವಿವಿಧ ಕೃಷಿ ವಸ್ತುಗಳ ಪ್ರಮಾಣಗಳು, ಸಾಮಾಜಿಕವಾಗಿ ಹಾನಿಕಾರಕವಾಗುತ್ತವೆ. ಇದೇ ಅಂಶವನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅದರ ಫಲಿತಾಂಶವಾಗಿ ಆಗುವ ಭೂಮಿಯ ಬಳಕೆಯು ಕೂಡ ಸಾಮಾಜಿಕವಾಗಿ ಹಾನಿಕಾರಕವಾಗಬಹುದು.
ಕೃಷಿ ಉತ್ಪನ್ನಗಳ ಬೆಲೆಗಳು ಮತ್ತು ಕೃಷಿ ಉತ್ಪಾದನೆಯ ಒಟ್ಟು ಪ್ರಮಾಣ(ಭೂ-ಬಳಕೆ), ಈ ಎರಡು ವಿಷಯಗಳನ್ನು ಸ್ಪಷ್ಟತೆಯ ಸಲುವಾಗಿ ಪ್ರತ್ಯೇಕವಾಗಿ ವಿಶ್ಲೇಷಿಸಿ ನೋಡೋಣ. ಮೊದಲಿಗೆ, ಬೆಲೆಗಳ ವಿಷಯ ನೋಡೋಣ. ಲಭ್ಯವಿರುವ ಭೂಮಿಯಲ್ಲಿ ಬರೀ ಆಹಾರ ಧಾನ್ಯಗಳನ್ನಷ್ಟೇ ಉತ್ಪಾದಿಸಲಾಗುತ್ತದೆ ಎಂದು ಭಾವಿಸೋಣ. ಈಗ, ಆಹಾರ ಧಾನ್ಯಗಳ ಮೇಲಿನ ಬೇಡಿಕೆಯು ಧಾನ್ಯಗಳ ಬೆಲೆಗೆ ಹೊಂದಿಕೊಂಡಿಲ್ಲ (price-inelastic). ಆದರೆ, ಧಾನ್ಯಗಳ ಉತ್ಪಾದನೆಯ ಪ್ರಮಾಣವು ಹವಾಮಾನದ ವೈಪರೀತ್ಯಗಳ ಕಾರಣದಿಂದಾಗಿ ಭಾರೀ ಏರಿಳಿತಗಳಿಗೆ ಒಳಗಾಗುತ್ತದೆ. ಈ ಏರಿಳಿತಗಳ ಅಂಶವು ಎಲ್ಲಾ ಕೃಷಿ ಉತ್ಪನ್ನಗಳಿಗೂ ಅನ್ವಯಿಸುತ್ತದೆ. ಆದ್ದರಿಂದ, ಧಾನ್ಯಗಳ ಬೆಲೆಗಳು ಭಾರೀ ಏರಿಳಿತಗಳಿಗೆ ಒಳಗಾಗುತ್ತವೆ. ಧಾನ್ಯಗಳ ಬೆಲೆಗಳು ತೀರಾ ಕೆಳಮಟ್ಟಕ್ಕೆ ಇಳಿದರೆ ರೈತರು ಸಾಲಕ್ಕೆ ಸಿಲುಕಿಕೊಳ್ಳುತ್ತಾರೆ. ಬೆಲೆಗಳು ವಿಪರೀತವಾಗಿ ಏರಿದರೆ ಅನೇಕ ಮಂದಿ ಬಡಪಾಯಿಗಳು ಧಾನ್ಯಗಳನ್ನು ಕೊಳ್ಳಲಾಗುವುದಿಲ್ಲ. ಹಾಗಾಗಿ, ಆಹಾರ ಧಾನ್ಯಗಳಂತಹ ಸರಕುಗಳ ವಿಷಯದಲ್ಲಿ ಬೆಲೆಗಳ ಮಟ್ಟವು ವಿನಾಶಕಾರಿಯಾಗಿ ಪರಿಣಮಿಸಬಹುದು.
ಬೆಲೆ ಏರಿಳಿತಗಳ ಎರಡು ಅತಿರೇಕದ ಉದಾಹರಣೆಗಳೆಂದರೆ, ಅಪಾರ ಸಾಲಗಳಿಂದ ರೈತರನ್ನು ತತ್ತರಿಸುವಂತೆ ಮಾಡಿದ 1930ರ ಮಹಾ ಕುಸಿತದ ಅವಧಿಯ ಬೆಲೆ ಕುಸಿತ ಮತ್ತು ಮೂವತ್ತು ಲಕ್ಷ ಜನರನ್ನು ಬಲಿ ತೆಗೆದುಕೊಂಡ 1943ರ ಬಂಗಾಳದ ಭೀಕರ ಬರಗಾಲ. ಈ ಎರಡೂ ಘಟನೆಗಳು, ಬಂಪರ್ ಫಸಲು ಅಥವಾ ಬೆಳೆ ವೈಫಲ್ಯದಿಂದ(ಪೂರೈಕೆ-ಬದಿಯ ಆಘಾತದಿಂದ) ಉಂಟಾಗಲಿಲ್ಲ. ಅವುಗಳನ್ನು ನೆನಪಿಗೆ ತಂದ ಉದ್ದೇಶವೆಂದರೆ, ಆಹಾರ ಧಾನ್ಯಗಳ ಬೆಲೆ ಏರಿಳಿತಗಳು ಎಂತಹ ಅನಾಹುತಗಳನ್ನು ಉಂಟುಮಾಡಬಲ್ಲವು ಎಂಬುದಷ್ಟೇ. ಪ್ರಾಸಂಗಿಕವಾಗಿ ಹೇಳುವುದಾದರೆ, 1930ರ ದಶಕದ ಬೆಲೆ ಇಳಿಕೆಯ ಅವಧಿಯಲ್ಲಿ ಆಹಾರ ಧಾನ್ಯಗಳ ಬಳಕೆದಾರರಿಗೂ ಲಾಭವಾಗಲಿಲ್ಲ ಮತ್ತು ಬಂಗಾಳದ ಬರಗಾಲದ ಸಂದರ್ಭದ ಬೆಲೆಗಳು ಏರಿದ ಕಾರಣದಿಂದ ಆಹಾರ ಉತ್ಪಾದಕರಿಗೂ ಲಾಭವಾಗಲಿಲ್ಲ. ಸರಳವಾಗಿ ಹೇಳುವುದಾದರೆ, ಅವು ನಿಸ್ಸಂದಿಗ್ಧ ಸಾಮಾಜಿಕ ದುರಂತಗಳೇ.
ಇಂತಹ ದುರಂತಗಳು ಉಂಟಾಗುವ ಸಾಧ್ಯತೆಗಳೂ ಇರುತ್ತವೆ ಎಂಬುದನ್ನು ಮುಕ್ತ ಮಾರುಕಟ್ಟೆಯ ಕಾರ್ಯಾವಿಧಾನದ ಬಗ್ಗೆ ಪ್ರತಿಪಾದಿಸುವ ಮುಖ್ಯಧಾರೆಯ ಸಿದ್ಧಾಂತವು ಮುಂಗಾಣಲಿಲ್ಲ. ಒಂದು ಅರ್ಥಪೂರ್ಣ ಮುಕ್ತ ಮಾರುಕಟ್ಟೆಯ ಸಮತೋಲನದಲ್ಲಿ ಎಲ್ಲಾ ಸರಕುಗಳೂ “ಪರ್ಯಾಯ”ವಾಗಿರುತ್ತವೆ ಎಂದು ಈ ಸಿದ್ಧಾಂತವು ಭಾವಿಸುತ್ತದೆ. ಅಂದರೆ, ಎಲ್ಲಾ ಸರಕುಗಳ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದಾಗ ಯಾವುದೇ ಒಂದು ಸರಕಿನ ಬೆಲೆಯು ಏರಿದಾಗ, ಉಳಿದ ಎಲ್ಲಾ ಸರಕುಗಳಿಗೆ ಬೇಡಿಕೆ ಏರುತ್ತದೆ ಅಥವಾ ಬದಲಾಗದೆ ಉಳಿಯುತ್ತದೆ ಎಂಬುದಾಗಿ ಈ ಸಿದ್ಧಾಂತವು ಭಾವಿಸುತ್ತದೆ. ಈ ಊಹೆಯು, ಆಹಾರ ಧಾನ್ಯಗಳಂತಹ ಸರಕುಗಳೂ ಇವೆ ಎಂಬುದನ್ನೇ ತಳ್ಳಿಹಾಕುತ್ತದೆ. ಆಹಾರ ಧಾನ್ಯಗಳ ಬೆಲೆ ಏರಿಕೆಯು ಇತರ ಸರಕುಗಳ ಮೇಲಿನ ಬೇಡಿಕೆಯನ್ನು ಕಡಿಮೆ ಮಾಡುತ್ತದೆ, ಏಕೆಂದರೆ, ಜನರು ಆಹಾರ ಧಾನ್ಯಗಳನ್ನು ಖರೀದಿಸಲು ತಮ್ಮ ಇತರ ಖರೀದಿಗಳನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಅದು ಅನಿವಾರ್ಯವೂ ಆಗುತ್ತದೆ. ಆದ್ದರಿಂದ, ಬೇರೆ ಸರಕುಗಳು ಆಹಾರ ಧಾನ್ಯಗಳಿಗೆ ಪರ್ಯಾಯವಾಗುವುದಿಲ್ಲ ಎಂಬುದು ವಾಸ್ತವ. ಆದರೂ ಸಹ, ಒಂದು ಅರ್ಥಪೂರ್ಣ ಮುಕ್ತ ಮಾರುಕಟ್ಟೆಯ ಸಮತೋಲನದಲ್ಲಿ ಎಲ್ಲಾ ಸರಕುಗಳೂ “ಪರ್ಯಾಯ”ವಾಗಿರುತ್ತವೆ ಎಂಬುದಾಗಿ ಮುಖ್ಯಧಾರೆಯ ಸಿದ್ಧಾಂತವು ಭಾವಿಸುತ್ತದೆ.
ಆದ್ದರಿಂದ, ಆಹಾರ ಧಾನ್ಯಗಳ ಬೆಲೆಗಳು ಅತಿಯಾಗಿ ಏರದಂತೆ ಅಥವಾ ಇಳಿಯದಂತೆ ನೋಡಿಕೊಳ್ಳುವುದು ಅವಶ್ಯವಾಗುತ್ತದೆ. ಅಂದರೆ, ಸರ್ಕಾರದ ಮಧ್ಯಸ್ಥಿಕೆಯು ಮುಕ್ತ ಮಾರುಕಟ್ಟೆಯು ತನ್ನ ಸಮತೋಲನವನ್ನು ಕಾಪಾಡಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವಾಗುತ್ತದೆ. ಆದ್ದರಿಂದ, ಮಧ್ಯಸ್ಥಿಕೆಯ ಆಳ್ವಿಕೆಗಿಂತ ಮುಕ್ತ ಮಾರುಕಟ್ಟೆಗಳು ಮೇಲುಗೈ ಸಾಧಿಸಬೇಕೆಂಬ ಕೆಲವು ವ್ಯಾಖ್ಯಾನಕಾರರ ವಾದವು ಸಂಪೂರ್ಣವಾಗಿ ಅಸಿಂಧುವಾಗುತ್ತದೆ.
ಈಗ ನಾವು ಮುಕ್ತ ಮಾರುಕಟ್ಟೆಯ ಕೃಷಿ ಉತ್ಪಾದನೆಗಳ ಒಟ್ಟು ಪ್ರಮಾಣ, ಅಂದರೆ, ಭೂ-ಬಳಕೆಯ ಪ್ರಮಾಣದ ಕಡೆಗೆ ಹೋಗೋಣ. ಒಂದು ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಯಾವುದೇ ಒಂದು ದುರ್ಲಭ ಸಂಪನ್ಮೂಲವನ್ನು ಬಳಸುವ ವಿಧಾನವು ಅದರ ಬಳಕೆದಾರರ ಕೊಳ್ಳುವ ಶಕ್ತಿಯನ್ನು ಅವಲಂಬಿಸಿರುತ್ತದೆ. ಕೃಷಿಯನ್ನು ಮುಕ್ತ ಮಾರುಕಟ್ಟೆಯ ಕಾರ್ಯಾಚರಣೆಗೆ ತೆರೆದಿಟ್ಟಾಗ ಉಂಟಾಗುವ ಒಂದು ಅನಿವಾರ್ಯ ಪರಿಣಾಮವೆಂದರೆ, ಆಹಾರ ಧಾನ್ಯಗಳ ಉತ್ಪಾದನೆಯಿಂದ ದೂರಸರಿದು, ಪಶ್ಚಿಮ ದೇಶಗಳು ಬಯಸುವ ಬೆಳೆ-ಪೈರು-ಪದಾರ್ಥಗಳ ಉತ್ಪಾದನೆಯತ್ತ ಹೊರಳುವುದು ಅಥವಾ ಶ್ರೀಮಂತರ ಖುಷಿಗಾಗಿ ಅವರು ಬಯಸುವ ಉದ್ದೇಶಗಳಿಗೆ ಭೂಮಿಯ ಬಳಕೆ. ಈ ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ವಿದೇಶಗಳ ಮತ್ತು ದೇಶದ ಶ್ರೀಮಂತ ವ್ಯಕ್ತಿಗಳ ಉನ್ನತ ಖರೀದಿ ಸಾಮರ್ಥ್ಯವು ಭೂಮಿಯನ್ನು ಆಹಾರಧಾನ್ಯ ಉತ್ಪಾದನೆಯಿಂದ ಕಸಿದುಕೊಳ್ಳುತ್ತದೆ. ಕೃಷಿ ಉತ್ಪನ್ನಗಳನ್ನು ಮುಂದುವರಿದ ದೇಶಗಳು ಆಮದು ಮಾಡಿಕೊಳ್ಳುವುದರಿಂದಾಗಿ ಆಹಾರ ಧಾನ್ಯಗಳ ಬೆಲೆಗಳು ಏರದಿದ್ದರೂ ಸಹ, ಅದು ಎರಡು ಕೆಲಸಗಳನ್ನು ಖಂಡಿತವಾಗಿಯೂ ಮಾಡುತ್ತದೆ: ಒಂದು, ದೇಶವು ಹಲವು ವರ್ಷಗಳಿಂದ ಸಾಧಿಸಿದ ಆಹಾರ ಧಾನ್ಯಗಳ ಸ್ವಾವಲಂಬನೆಯನ್ನು ನಾಶಪಡಿಸುವುದು ಮತ್ತು ಆ ಮೂಲಕ ದೇಶವನ್ನು ಆಹಾರ-ಆಮದು ಅವಲಂಬಿತವನ್ನಾಗಿ ಮಾಡುವುದು. ಎರಡನೆಯದು, ಬಹು ದೊಡ್ಡ ಸಂಖ್ಯೆಯ ಜನರ ಹಸಿವು ಹೆಚ್ಚಿಸುವುದು. ಇವೆರಡೂ ಬಹು ದೊಡ್ಡ ಸಮಸ್ಯೆಗಳೇ.
ಭಾರತದಂತಹ ಒಂದು ದೊಡ್ಡ ದೇಶವು ತನ್ನ ಆಹಾರಭದ್ರತೆಯನ್ನು ಖಚಿತಪಡಿಸಿಕೊಳ್ಳಬೇಕೆಂದರೆ, ತನ್ನ ಆಹಾರವನ್ನು ತಾನೇ ಬೆಳೆಯಬೇಕಾಗುತ್ತದೆ. ಯಾವ ಬೆಳೆಯನ್ನು ಬೆಳೆಯಬೇಕು ಎಂಬುದನ್ನು, ಭೂಮಿಯನ್ನು ಯಾವುದಕ್ಕೆ ಬಳಸಬೇಕು ಎಂಬುದನ್ನು ಮುಕ್ತ ಮಾರುಕಟ್ಟೆಯ ನಿರ್ಧಾರಕ್ಕೆ ಬಿಡಲಾಗದು. ಇದನ್ನು ನಿರ್ಧರಿಸುವಲ್ಲಿ ಸರ್ಕಾರದ ಮಧ್ಯಸ್ಥಿಕೆ ಇರಬೇಕೆಂದು ಸಾಮಾಜಿಕ ವಿವೇಚನೆ ಬಯಸುತ್ತದೆ. ಜನರಿಗೆ ಅನ್ನ ದೊರಕಿಸುವ ಸಾಮಾಜಿಕ ಜವಾಬ್ದಾರಿಗೆ ಹತ್ತಿರವಾದ ಮತ್ತು ಮಾರುಕಟ್ಟೆಯ ಏರಿಳಿತದ ಬೆಲೆಗಳಿಗಿಂತ ಒಂದು ಭಿನ್ನವಾದ ಫಲಿತಾಂಶವನ್ನು ಸಾಧಿಸಲು, ಅನೇಕ ಪ್ರಯತ್ನಗಳ ನಂತರ, ಭಾರತದಲ್ಲಿ ರೈತರ ಫಸಲಿಗೆ ಕನಿಷ್ಠ ಬೆಂಬಲ ಬೆಲೆ, ಆ ಧಾನ್ಯಗಳನ್ನು ಸರ್ಕಾರವು ಖರೀದಿಸುವ ಬೆಲೆ ಮತ್ತು ಖರೀದಿಸಿದ ಧಾನ್ಯಗಳನ್ನು ಸಬ್ಸಿಡಿ ದರದಲ್ಲಿ ವಿತರಿಸುವ ಪಡಿತರ ವ್ಯವಸ್ಥೆ- ಈ ಏರ್ಪಾಟು ಮೂಡಿಬಂದಿತ್ತು. ಈಗ ಈ ಏರ್ಪಾಟನ್ನು ಮೋದಿ ಸರಕಾರದ ಕೃಷಿ ಕಾಯ್ದೆಗಳು ನಾಶಪಡಿಸಲು ಹೊರಟಿವೆ-ಕಾರ್ಪೊರೇಟ್‌ಗಳು ಮತ್ತು ಸಾಮ್ರಾಜ್ಯಶಾಹಿಗಳ ಆಣತಿಯಂತೆ.
ಎರಡನೆಯ ಸಮಸ್ಯೆಯನ್ನು ಮೊದಲು ತೆಗೆದುಕೊಳ್ಳೋಣ. ಆಹಾರ ಧಾನ್ಯಗಳ ಉತ್ಪಾದನೆಗೆ ಬಳಕೆಯಾದ ಒಂದು ಜಮೀನಿನಲ್ಲಿ ಈ ಹಿಂದೆ 10 ಮಂದಿ ಕೆಲಸದಲ್ಲಿ ತೊಡಗಿದ್ದರೆ, ಈಗ ಅದೇ ಜಮೀನಿನಲ್ಲಿ ಹಣ್ಣು-ಹಂಪಲು ಇತ್ಯಾದಿಗಳನ್ನು ಬೆಳೆದರೆ ಅದು ಐದು ಮಂದಿಗೆ ಮಾತ್ರ ಉದ್ಯೋಗ ಒದಗಿಸಬಲ್ಲದು. ಅಂದರೆ, ಜಮೀನನ್ನು ಆಹಾರ ಧಾನ್ಯಗಳ ಬದಲಾಗಿ ಹಣ್ಣು-ಹಂಪಲು ಬೆಳೆಯಲು ಬಳಕೆ ಮಾಡಿದಾಗ ಐದು ಮಂದಿ ಕೆಲಸಗಾರರನ್ನು ನಿರುದ್ಯೋಗಿಗಳನ್ನಾಗಿ ಮಾಡಿದಂತಾಗುತ್ತದೆ. ಈ ಐದು ಮಂದಿಗೆ ಆಹಾರ ಧಾನ್ಯಗಳನ್ನು ಕೊಳ್ಳುವ ಶಕ್ತಿ ಇಲ್ಲವಾಗುತ್ತದೆ. ಹಾಗಾಗಿ, ಅಂತಾರಾಷ್ಟ್ರೀಯ ಬೆಲೆಯಲ್ಲಿ ಅಪಾರ ಪ್ರಮಾಣದ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಂಡರೂ ಸಹ, ಅಷ್ಟು ಆಮದಿಗೆ ಬೇಕಾಗುವಷ್ಟು ವಿದೇಶಿ ವಿನಿಮಯದ ಸಂಗ್ರಹವಿದ್ದರೂ ಸಹ, ಜನರ ಬಳಿ ಆಹಾರ ಧಾನ್ಯಗಳನ್ನು ಕೊಳ್ಳುವ ಶಕ್ತಿ ಇಲ್ಲದ ಕಾರಣದಿಂದ ರಾಶಿ ರಾಶಿ ಜನರ ಹಸಿವು (mass hunger) ಹೆಚ್ಚುತ್ತದೆ.
ಆಹಾರ ಧಾನ್ಯಗಳನ್ನು ಬೆಳೆಯುತ್ತಿದ್ದ ಒಟ್ಟು ಜಮೀನಿನ ಒಂದಷ್ಟು ಭಾಗವನ್ನು ಕಡಿಮೆ ಸಂಖ್ಯೆಯ ಜನರು ಕೆಲಸ ಮಾಡಿದರೆ ಸಾಕಾಗುವಂಥಹ ಬೇರೆ ಬೇರೆ ಬೆಳೆ ತೆಗೆಯಲು ವರ್ಗಾಯಿಸಲಾಗಿದೆ ಎಂಬ ಅಂಶವನ್ನು ಮುಕ್ತ ಮಾರುಕಟ್ಟೆ ವಾದವು ಒಪ್ಪುತ್ತದೆ, ನಿಜ. ಆದರೆ, ಮಹಾನಗರಗಳಲ್ಲಿ ಬೇಡಿಕೆ ಇರುವ ಬೆಳೆಗಳನ್ನು ಬೆಳೆಯಲು ಅಥವಾ ದೇಶದೊಳಗಿನ ಶ್ರೀಮಂತರು ಬಯಸುವ ಬೆಳೆಗಳನ್ನು ಬೆಳೆಯಲು ಕಡಿಮೆ ಸಂಖ್ಯೆಯ ಕೆಲಸಗಾರರು ಸಾಕಾಗುತ್ತಾರೆ (less employment-intensive). ವಾಸ, ಕೈಗಾರಿಕೆ ಇತ್ಯಾದಿ (ರಿಯಲ್ ಎಸ್ಟೇಟ್) ಅಥವಾ ಮನರಂಜನಾ (ಗಾಲ್ಫ್ ಕೋರ್ಸ್, ಇತ್ಯಾದಿ) ಉದ್ದೇಶಗಳಿಗೆ ಎಷ್ಟು ವಿಸ್ತೀರ್ಣದ ಭೂಮಿ ಬಳಕೆಯಾಗುತ್ತದೆಯೊ ಅಷ್ಟು ಜಮೀನಿನಲ್ಲಿ ವಿನಿಯೋಗವಾಗುತ್ತಿದ್ದ ಶ್ರಮ ಅಥವಾ ಬಳಕೆಯಾಗುತ್ತಿದ್ದ ಉದ್ಯೋಗವು ಇಲ್ಲವಾಗುತ್ತದೆ. ಅಂದರೆ, ಪ್ರತಿ ಯೂನಿಟ್ (ಅಥವಾ ಎಕರೆ) ಜಮೀನು ಒದಗಿಸುತ್ತಿದ್ದ ಉದ್ಯೋಗವು ಕಡಿಮೆಯಾಗುತ್ತಾ ಹೋಗುತ್ತದೆ. ಈ ವಿದ್ಯಮಾನವು ನಿರುದ್ಯೋಗ ಮತ್ತು ಸಾಮೂಹಿಕ ಹಸಿವನ್ನು (mass hunger) ಸೃಷ್ಟಿಸುತ್ತದೆ. ಮುಖ್ಯಧಾರೆಯ ಅರ್ಥಶಾಸ್ತ್ರವು ಈ ಸರಳ ಸತ್ಯವನ್ನು ಗುರುತಿಸುವುದಿಲ್ಲ ಏಕೆಂದರೆ ಅದು ಯಾವಾಗಲೂ ಪೂರ್ಣ ಉದ್ಯೋಗದ ಪರಿಸ್ಥಿತಿ ಇದೆ ಎಂದು ಭಾವಿಸುತ್ತದೆ ಮತ್ತು ಈ ಮುಕ್ತ ಮಾರುಕಟ್ಟೆಯ ಪೂರ್ಣ ಉದ್ಯೋಗ ಸಮತೋಲನದಲ್ಲಿ ಪ್ರತಿಯೊಬ್ಬರೂ ಬದುಕಬಹುದು ಎಂದು ಭಾವಿಸುತ್ತದೆ.
ಮೊದಲನೆಯ ಸಮಸ್ಯೆಗೆ (ಅಂದರೆ, ಆಹಾರ ಧಾನ್ಯಗಳ ಸ್ವಾವಲಂಬನೆಯ ನಾಶ) ಬರುವುದಾದರೆ, ದೇಶವು ತನಗೆ ಬೇಕಾಗುವಷ್ಟು ಆಹಾರ ಧಾನ್ಯಗಳನ್ನು ಉತ್ಪಾದಿಸುವುದರ ಬದಲು ಆಮದುಗಳನ್ನು ಅವಲಂಬಿಸಿದರೆ, ಅದು ಎರಡು ಸಮಸ್ಯೆಗಳನ್ನು ನಿಸ್ಸಂಶಯವಾಗಿ ಸೃಷ್ಟಿಸುತ್ತದೆ. ಮೊದಲನೆಯದು, ದೇಶಕ್ಕೆ ಸಾಕಾಗುವಷ್ಟು ಆಹಾರ ಧಾನ್ಯಗಳು ಅಗತ್ಯವಿರುವ ಸಮಯದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಾಗದೆ ಇರಬಹುದು. ಭಾರತದಂತಹ ಒಂದು ದೊಡ್ಡ ದೇಶದ ಸಂದರ್ಭದಲ್ಲಿ, ಆಮದು ಅಗತ್ಯವು ಸಹ ಅಷ್ಟೇ ದೊಡ್ಡದಿರುತ್ತದೆ. ಹಾಗಾಗಿ, ಇದೊಂದು ಬೃಹದಾಕಾರದ ಸಮಸ್ಯೆಯಾಗುತ್ತದೆ. ಈ ಸಮಸ್ಯೆಯಲ್ಲಿರುವ ಒಂದು ವ್ಯತ್ಯಾಸವೆಂದರೆ, ಭಾರತದಂತಹ ಒಂದು ದೊಡ್ಡ ಗಾತ್ರದ ದೇಶವು ಬೃಹತ್ ಪ್ರಮಾಣದ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳಲು ಜಾಗತಿಕ ಮಾರುಕಟ್ಟೆಗೆ ಹೋದಾಗ, ಜಾಗತಿಕ ಬೆಲೆಗಳು ಗಗನಕ್ಕೇರುತ್ತವೆ.
ಎರಡನೆಯ ಸಮಸ್ಯೆಯೆಂದರೆ, ಪುಸ್ತಕದ ಬದನೆಕಾಯಿ ತಿನ್ನಲು ಬರುವುದಿಲ್ಲ ಎನ್ನುವ ಹಾಗೆ, ನಿಜ-ಜೀವನದ ಜಾಗತಿಕ ಮಾರುಕಟ್ಟೆಯು, ಪಠ್ಯ ಪುಸ್ತಕಗಳು ಮಾರುಕಟ್ಟೆಯ ಬಗ್ಗೆ ಕೊಡುವ ವರ್ಣನೆಗಿಂತ ಭಿನ್ನವಾಗಿರುತ್ತದೆ. ಪಠ್ಯ ಪುಸ್ತಕದ ಮಾರುಕಟ್ಟೆಯಲ್ಲಿ, ಬಹು ದೊಡ್ಡ ಸಂಖ್ಯೆಯ ಖರೀದಿದಾರರು ಮತ್ತು ಮಾರಾಟಗಾರರು ಇರುತ್ತಾರೆ ಮತ್ತು ಅವರ ನಡುವಿನ ಸಂಬಂಧಗಳು ಸಂಪೂರ್ಣವಾಗಿ ಅವೈಯಕ್ತಿಕವಾಗಿರುತ್ತವೆ. ಆದರೆ, ಜಾಗತಿಕ ಆಹಾರ ಮಾರುಕಟ್ಟೆಯಲ್ಲಿ ಭಾರತದಂತಹ ಒಂದು ದೊಡ್ಡ ದೇಶಕ್ಕೆ ಬೇಕಾಗುವಷ್ಟು ಆಹಾರ ಧಾನ್ಯಗಳು ಪದಾರ್ಥಗಳು ಸಿಗುತ್ತವೆಯೇ ಎಂಬುದು ಅಮೆರಿಕ ಮತ್ತು ಐರೋಪ್ಯ ಸರಕಾರಗಳ ಅನುಗ್ರಹವನ್ನು ಅವಲಂಬಿಸುತ್ತದೆ. ಅವರು ಕೆಲವು ನಿರ್ಬಂಧಗಳನ್ನು ವಿಧಿಸಬಹುದು. ಅವರು ತಮ್ಮ ವಿದೇಶಾಂಗ ನೀತಿ-ನಿಲುವನ್ನು ಬೆಂಬಲಿಸುವಂತೆ ಆಮದು ಮಾಡಿಕೊಳ್ಳುವ ದೇಶದ ಕೈ ತಿರುಚಬಹುದು, ಅಥವಾ ತಮ್ಮ ಕಂಪನಿಗಳಿಗೆ ಕೆಲವು ತೆರಿಗೆ ರಿಯಾಯಿತಿಗಳನ್ನು ಒದಗಿಸುವಂತೆ ಒತ್ತಾಯಿಸಬಹುದು. ದೇಶವು ಆಹಾರ ಧಾನ್ಯಗಳನ್ನು ಕೊಳ್ಳಲು ಅಗತ್ಯವಾದ ವಿದೇಶಿ ವಿನಿಮಯವನ್ನು ಹೊಂದಿದ್ದರೂ ಸಹ, ಹೆಚ್ಚುವರಿಯಾಗಿ ಹಣದ ರೂಪದಲ್ಲದೆ ಬೇರೊಂದು ರೀತಿಯ ಬೆಲೆಯನ್ನು ತೆರಬೇಕಾಗುತ್ತದೆ.
ಈ ಎಲ್ಲಾ ಕಾರಣಗಳಿಂದಾಗಿ ಭಾರತದಂತಹ ಒಂದು ದೊಡ್ಡ ದೇಶವು ತಾನು ಆಹಾರ-ಸುರಕ್ಷಿತವೆಂದು ಖಚಿತಪಡಿಸಿಕೊಳ್ಳಬೇಕೆಂದರೆ, ಆಗ ಆ ದೇಶವು ತನ್ನ ಆಹಾರವನ್ನು ತಾನೇ ಬೆಳೆಯಬೇಕಾಗುತ್ತದೆ. ಯಾವ ಬೆಳೆಯನ್ನು ಬೆಳೆಯಬೇಕು ಎಂಬುದನ್ನು, ಅಂದರೆ ಭೂ-ಬಳಕೆಯ ಮಾದರಿಯನ್ನು ಮುಕ್ತ ಮಾರುಕಟ್ಟೆಯ ನಿರ್ಧಾರಕ್ಕೆ ಬಿಡಲಾಗದು. ಏನನ್ನು ಉತ್ಪಾದಿಸಬೇಕು ಎಂಬುದನ್ನು ನಿರ್ಧರಿಸುವಲ್ಲಿ ಸರ್ಕಾರದ ಮಧ್ಯಸ್ಥಿಕೆ ಇರಬೇಕೆಂದು ಸಾಮಾಜಿಕ ವಿವೇಚನೆ ಬಯಸುತ್ತದೆ. ಈ ಉದ್ದೇಶವನ್ನು ಸಾಧಿಸಲು ಇರುವ ಒಂದು ಸ್ಪಷ್ಟವಾದ ಮಾರ್ಗವೆಂದರೆ, ಬೆಲೆಗಳನ್ನು ಮಾರುಕಟ್ಟೆಯೇ ನಿರ್ಧರಿಸುವುದರ ವಿರುದ್ಧವಾಗಿ ಮಾರುಕಟ್ಟೆಯಲ್ಲಿ ಬೆಲೆಗಳು ಎಷ್ಟಿರಬೇಕೆಂಬುದನ್ನು ಸರ್ಕಾರವೇ ನಿರ್ಧರಿಸಬೇಕು.
ಜನರಿಗೆ ಅನ್ನ ದೊರಕಿಸುವ ಸಾಮಾಜಿಕ ಜವಾಬ್ದಾರಿಗೆ ಹತ್ತಿರವಾದ ಮತ್ತು ಮಾರುಕಟ್ಟೆಯ ಏರಿಳಿತದ ಬೆಲೆಗಳಿಗಿಂತ ಒಂದು ಭಿನ್ನವಾದ ಫಲಿತಾಂಶವನ್ನು ಸಾಧಿಸಲು, ಅನೇಕ ಪ್ರಯತ್ನಗಳ ನಂತರ, ಭಾರತದಲ್ಲಿ ರೈತರ ಫಸಲಿಗೆ ಕನಿಷ್ಠ ಬೆಂಬಲ ಬೆಲೆ, ಆ ಧಾನ್ಯಗಳನ್ನು ಸರ್ಕಾರವು ಖರೀದಿಸುವ ಬೆಲೆ ಮತ್ತು ಖರೀದಿಸಿದ ಧಾನ್ಯಗಳನ್ನು ಸಬ್ಸಿಡಿ ದರದಲ್ಲಿ ವಿತರಿಸುವ ಪಡಿತರ ವ್ಯವಸ್ಥೆ, ಇವುಗಳನ್ನು ಜಾರಿಗೆ ತರಲಾಗಿತ್ತು. ಭಾರತದಂತಹ ದೇಶಗಳಲ್ಲಿ ಅಕ್ಷರಶಃ ಊಟದ ಹೊತ್ತಿಗೆ ಅಂಗಡಿಯಿಂದ ತಂದು ಬೇಯಿಸಿ ತಿನ್ನುವಂಥಹ ಪರಿಸ್ಥಿತಿ ಇರಬೇಕೆಂದು ಬಯಸಿದ ಮುಂದುವರಿದ ದೇಶಗಳು ಭಾರತವು ಜಾರಿಗೆ ತಂದ ಈ ಏರ್ಪಾಟನ್ನು ತೀವ್ರವಾಗಿ ವಿರೋಧಿಸಿದವು. ವಿವೇಚನೆಯು ಸ್ವಹಿತಾಸಕ್ತಿಗೆ ಸೀಮಿತಗೊಂಡ ದೇಶೀಯ ಕಾರ್ಪೊರೇಟ್‌ಗಳೂ ಸಹ ಈ ಏರ್ಪಾಟನ್ನು ವಿರೋಧಿಸಿದವು ಮತ್ತು ಸರ್ಕಾರ ಅದನ್ನು ಈಡೇರಿಸಲು ತಡೆಯೊಡ್ಡಿದ್ದವು. ಮೋದಿ ಸರ್ಕಾರವು ಈಗ ತನ್ನ ಇತ್ತೀಚಿನ ಕಾನೂನುಗಳ ಮೂಲಕ ಮಾಡಲು ಪ್ರಯತ್ನಿಸುತ್ತಿರುವುದು, ಕಾರ್ಪೊರೇಟ್‌ಗಳು ಮತ್ತು ಸಾಮ್ರಾಜ್ಯಶಾಹಿಗಳ ಆಣತಿಯ ಮೇರೆಗೆ.
ಅನು:ಕೆ.ಎಂ.ನಾಗರಾಜ್