ಕೃಷಿ ವಿಜ್ಞಾನಿಗಳು “ಪುಸ್ತಕದ ಬದನೆಕಾಯಿಗಳೇ”?

– ಡಾ: ಎನ್.ಬಿ.ಶ್ರೀಧರ

ಕೃಷಿ ಪದವೀಧರರಿಗೆ ಮತ್ತು ಕೃಷಿ ವಿಜ್ಞಾನಿಗಳಿಗೆ ದಾರಿಹೋಕರು “ಪುಸ್ತಕದ ಬದನೆ ಕಾಯಿ” ಎಂದು ಟೀಕಿಸುತ್ತಾರೆ. ಇದರರ್ಥ ಇವರು ಬದನೆಕಾಯಿಯನ್ನು ಬೆಳೆಯುವುದನ್ನು ಪುಸ್ತಕ ಓದಿ ತಿಳಿದಿರುತ್ತಾರೆಯೇ ವಿನ: ಸ್ವತ: ಬೆಳೆಯಲು ಬರುವುದಿಲ್ಲ ಎನ್ನುವುದು ಇದರೊಳಗಿನ ವ್ಯಂಗ್ಯ. ಎಲ್ಲಿಯೋ ಒಬ್ಬ ರೈತ ಕಷ್ಟ ಪಟ್ಟು ಹೊಸ ತಂತ್ರಜ್ಞಾನ ಬಳಸಿ ಒಂದಿಷ್ಟು ಜಾಸ್ತಿ ಬೆಳೆದರೆ, ಹೊಸ ಬೆಳೆ ಬೆಳೆದು ಲಾಭ ಮಾಡಿಬಿಟ್ಟರೆ ಆತ “ಪ್ರಗತಿ ಪರ ಕೃಷಿಕ” ಎನಿಸಿಕೊಳ್ಳುತ್ತಾನೆ. ಆತನಿಗೆ ಪ್ರಚಾರ ಮತ್ತು ಅವಾರ್ಡುಗಳು ಸಿಕ್ಕರಂತೂ ಆತ ಅತ್ಯಂತ ತಜ್ಞನೇ ಆಗಿಬಿಡುತ್ತಾನೆ. ಆದರೆ ಆತನನ್ನು ಜಾಸ್ತಿ ಲಾಭ ಮಾಡುವಂತೆ ಮಾಡಿರುವುದು ಕೃಷಿ ವಿಜ್ಞಾನಿಗಳ ಸಲಹೆ ಎಂದು ಪ್ರಾಮಾಣಿಕ ಪ್ರಗತಿಪರ ರೈತರು ಒಪ್ಪಿಕೊಳ್ಳುತ್ತಾರೆ. ಇನ್ನು ಸಾವಯವ ಕೃಷಿಕರ ಕಥೆಯೇ ಬೇರೆ. ಈಗ ಸಾವಯವ ಕೃಷಿ ಎಂದರೆ “ಹೊಟ್ಟೆ ತುಂಬಿದವರ ಹವ್ಯಾಸ” ವಾಗಿಬಿಟ್ಟಿದೆಯೇ ಹೊರತು ಕೃಷಿಯ ಮೇಲೆಯೇ ಸಂಪೂರ್ಣ ಜೀವನ ಅವಲಂಭಿಸಿದವರು ಇದನ್ನು ಅನುಸರಿಸುವುದು ಸಧ್ಯಕ್ಕಂತೂ ಕಷ್ಟ. ಇವರಿಗೆ ದೈನಂದಿನ ಜೀವನಕ್ಕೆ ಸಾಕಾಗಿ ಮಿಗುವಷ್ಟು ಬೆಳೆ ಬಂದು ಕೃಷಿಯಿಂದಲೇ ಹೊಟ್ಟೆ ತುಂಬಿಸಿಕೊಳ್ಳುವ ದರ್ದು ಇರುವುದಿಲ್ಲ. ಜಾಣರಾದ ಇವರು ಅಡಿಕೆ, ಮೆಣಸು, ಕೋಕೋ, ಲವಂಗ, ಜಾಯಿಕಾಯಿ, ಏಲಕ್ಕಿ ಹೀಗೆ ಬಹುಮಿಶ್ರಿತ ಬೆಳೆ ಬೆಳೆದುಕೊಂಡು ಸಾವಯವ ಕೃಷಿಯನ್ನು ಹವ್ಯಾಸವಾಗಿ ಅನುಸರಿಸುತ್ತಾರೆ. ಸದ್ಯ ಭಾರತದಲ್ಲಿ ಶೇ:೨ ರಷ್ಟು ಮಾತ್ರ ಸಾವಯವ ಕೃಷಿ ಆಗುತ್ತಿದ್ದು ಇದೇ ಇದ್ದಕ್ಕಿದ್ದ ಹಾಗೇ ಏರಕೂಡದು ಮತ್ತು ಕಾಲ ಕ್ರಮೇಣ ಬದಲಾಗಬೇಕು ಮತ್ತು ಶೇ ೧೦ ಕ್ಕಿಂತ ಜಾಸ್ತಿಯಾದಲ್ಲಿ ಶ್ರೀಲಂಕಾದಲ್ಲಿ ಆದಂತೆ ಆಹಾರ ಕ್ಷಾಮ ಸಹ ಬರಬಹುದು ಎನ್ನಲಾಗಿದೆ. ಹಸಿರು ಕ್ರಾಂತಿ ಹೇಗೆ ವೇಗವಾಗಿ ಏರಿ ಸದ್ಯ ಜನರ ಹೊಟ್ಟೆ ತುಂಬುತ್ತಿದೆಯೋ ಹಾಗೆಯೇ ನಿಧಾನ ಗತಿಯಲ್ಲಿ ಸಾವಯವ ಕೃಷಿಯತ್ತ ಸಾಗುವ ಅವಶ್ಯಕತೆ ಇದೆ. ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಗೆ ಪರ್ಯಾಯಮಾರ್ಗ ಕಂಡುಕೊಳ್ಳುವ ಅತ್ಯಂತ ಅವಶ್ಯಕತೆ ಇದೆ.

ಏನಿದು ಕೃಷಿ ಪದವಿ?

ಕೃಷಿ ಸ್ನಾತಕ ಪದವಿ 4 ವರ್ಷ. ಅದರಲ್ಲಿರುವ 4-5 ತೋಟಗಾರಿಕೆಯ ಕೋರ್ಸುಗಳಲ್ಲಿ ಒಂದು ಮಾತ್ರ ತೋಟ-ಹಣ್ಣು-ಸಾಂಬಾರ ಬೆಳೆಗಳ ಕುರಿತು. ಉಳಿದವು ತೋಟಗಾರಿಗೆಯ ಮೂಲಭೂತ ವಿಷಯ, ಕಸಿ-ನರ್ಸರಿ, ತರಕಾರಿ-ಹೂ, ಕೊಯ್ಲೋತ್ತರ ಸಂಸ್ಕರಣೆ, ಹೈಟೆಕ್ ತೋಟಗಾರಿಕೆ ಇತ್ಯಾದಿಗಳ ಮೇಲೆ. ತೋಟದ ಬೆಳೆಗಳ ಆ ಒಂದು ಕೋರ್ಸಿನಲ್ಲಿ ಸುಮಾರು 30 ಕ್ಕೂ ಹೆಚ್ಚು ಬೆಳೆಗಳನ್ನು ಕಲಿಸುತ್ತಾರೆ. ಅಂದರೆ ಇಡೀ ಪದವಿಯಲ್ಲಿ ಬೆಳೆ ಅಡಿಕೆ ಕುರಿತು ಓದುವುದು 1 ಗಂಟೆ, ಏಲಕ್ಕಿ – ಕಾಳುಮೆಣಸುಗಳ ಮೇಲೆ ಅರ್ಧರ್ಧ ಗಂಟೆ ಮಾತ್ರ. ಒಟ್ಟಾರೆ ಕೃಷಿ ಪದವಿಯಲ್ಲಿ ನಾವು ನೂರಾರು ಬೆಳೆಗಳು, ಸಸ್ಯರೋಗಶಾಸ್ತ್ರ, ಕೀಟಶಾಸ್ತ್ರ ಇತ್ಯಾದಿ ಹತ್ತುಹಲವು ಪ್ರಮುಖ ವಿಷಯಗಳನ್ನು ಕಲಿಸಲಾಗುತ್ತದೆ. ಅದು ಅನಿವಾರ್ಯ ಕೂಡ. ಹಾಗಿದ್ದಾಗ ಎಲ್ಲ ಬೆಳೆ-ತಳಿ-ಬೇಸಾಯ ಕ್ರಮಗಳ ಮೇಲೆ ಸಂಪೂರ್ಣ ಜ್ಞಾನ ಆಗಿಬಿಡಲು ಹೇಗೆ ಸಾಧ್ಯ? ಕೃಷಿ ಮತ್ತು ಕೃಷಿ ವಿಜ್ಞಾನದ ವೈಶಾಲ್ಯತೆ ಗೊತ್ತಿದ್ದರೆ ಇದು ಸಹಜ ಎನಿಸುತ್ತದೆ.

ಏನು ಕಲಿಸುತ್ತಾರೆ ?

ಕೃಷಿ ಪದವಿಯಲ್ಲಿ ಕೃಷಿ ವಿಜ್ಞಾನದ ಮೂಲಭೂತ ಅಂಶಗಳನ್ನು ಕಲಿಸುತ್ತಾರೆ. ಸಸ್ಯಶಾಸ್ತ್ರ, ಅನುವಂಶೀಯತೆ ಮತ್ತು ತಳಿ ವಿಜ್ಞಾನ, ಸೂಕ್ಷ್ಮಾಣುಜೀವಿ ಶಾಸ್ತ್ರ, ಸಸ್ಯ ಶರೀರಕ್ರಿಯಾಶಾಸ್ತ್ರ, ಸಸ್ಯರೋಗ ಶಾಸ್ತ್ರ, ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ, ಮಣ್ಣು ಮತ್ತು ಕೃಷಿ ರಸಾಯನ ಶಾಸ್ತ್ರ, ಕೃಷಿ ಇಂಜಿನಿಯರಿಂಗ್, ಕೃಷಿ ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರ, ಆಹಾರ ವಿಜ್ಞಾನ ಮುಂತಾದವು ಎಲ್ಲ ಬೆಳೆ – ಕೃಷಿಗೆ ಸಂಬಂಧಿಸಿದಂತೆ ಮೂಲಭೂತ ಜ್ಞಾನವನ್ನು ಕೊಡುತ್ತವೆ. ಇನ್ನು ಪ್ರಮುಖ ಅನ್ವಯಿಕ ವಿಭಾಗಗಳಾದ ಬೇಸಾಯಶಾಸ್ತ್ರ ಮತ್ತು ತೋಟಗಾರಿಕೆ ಪಠ್ಯಗಳು ನಿರ್ದಿಷ್ಟವಾಗಿ ಬೆಳೆಗಳ ಅಧ್ಯಯನ ಮಾಡಿಸುತ್ತವೆ. ಅವುಗಳಲ್ಲೂ ಕೂಡ ನೂರಾರು ಬೆಳೆಗಳಿರುವುದರಿಂದ ಪ್ರಮುಖ ಬೆಳೆಗಳ ವೈಜ್ಞಾನಿಕ ಅಂಶಗಳನ್ನಷ್ಟೇ ಪಕ್ಷಿನೋಟದ ರೀತಿಯಲ್ಲಿ ಕಲಿಸಲಾಗುತ್ತದೆ. ಸಾಲದೆಂಬಂತೆ ಹೈನುಗಾರಿಕೆ, ರೇಷ್ಮೆ ಕೃಷಿ, ಕೃಷಿ ವಿಸ್ತರಣೆ ಮತ್ತು ಸಂವಹನ ಕಲೆ ಮುಂತಾದ ಪಠ್ಯಗಳೂ ಇರುತ್ತವೆ. ಜೊತೆಗೆ ಬೆಳೆ ಬೆಳೆಸುವುದು – ಕ್ರಾಪ್ ಪ್ರೊಡಕ್ಷನ್ ಕೋರ್ಸಿನಲ್ಲಿ ಪ್ರತಿ ವಿದ್ಯಾರ್ಥಿ 5 ಗುಂಟೆ ಜಾಗದಲ್ಲಿ ಸ್ವತಃ ಬೆಳೆ ಬೆಳೆಯಬೇಕು. ಇವುಗಳೊಟ್ಟಿಗೆ 20 ದಿನಗಳ ರಾಜ್ಯ ಕೃಷಿ ಅಧ್ಯಯನ ಪ್ರವಾಸ, 25 ದಿನಗಳ ದೇಶ ಕೃಷಿ ಅಧ್ಯಯನ ಪ್ರವಾಸ, 3 ತಿಂಗಳ ಹಳ್ಳಿ ಕೃಷಿ ವಿಸ್ತರಣೆ ಕ್ಯಾಂಪ್, ಕೃಷಿ ಸಂಶೋಧನಾ ವಿಧಾನದ ಒಂದು ಕೋರ್ಸ್. ಹೀಗೆ ಗಡಿಬಿಡಿಯಲ್ಲಿ 4 ವರ್ಷ ಕಳೆದಿರುತ್ತದೆ. ಇದೇ ಕಾರಣಕ್ಕೆ ಕೃಷಿ ಪದವೀಧರರನ್ನು ’ಜಾಕ್ ಆಫ್ ಆಲ್, ಮಾಸ್ಟರ್ ಆಫ್ ನನ್’ ಎನ್ನಲಾಗುತ್ತದೆ. ಇದು ನಿಜ ಮತ್ತು ಸಹಜ ಕೂಡ. ಇನ್ನು ತೋಟಗಾರಿಕೆ ಪದವಿಯಲ್ಲಿ ತೋಟಗಾರಿಕೆ ಬೆಳೆಗಳ ಹೆಚ್ಚಿನ ಅಧ್ಯಯನ ಇರುತ್ತದೆ. ಆದರೆ ಅವರಿಗೆ ಲಕ್ಷಲಕ್ಷ ಎಕರೆಯಲ್ಲಿರುವ ಹೊಲದ ಬೆಳೆಗಳ ಪರಿಚಯವಿರುವುದಿಲ್ಲ. ರೇಷ್ಮೆ ಪದವಿಯಲ್ಲಿ ಬರೇ ರೇಷ್ಮೆ; ಅರಣ್ಯ ವಿಜ್ಞಾನದಲ್ಲಿ ಕೇವಲ ಅರಣ್ಯ ಸಸ್ಯಗಳು. ಇದ್ದುದರಲ್ಲೇ ಕೃಷಿ ಪದವಿಯಲ್ಲಿ ವಿಶಾಲ ವ್ಯಾಪ್ತಿಯ ಅಧ್ಯಯನ ಲಭ್ಯ.

ವೈಜ್ಞಾನಿಕ ಜ್ಞಾನಕ್ಕೆ ಕೃಷಿ ಪದವಿ

ಕೃಷಿ ವಿವಿ, ಕಾಲೇಜುಗಳು ನೂರಾರು – ಸಾವಿರಾರು ಎಕರೆ ವಿಸ್ತೀರ್ಣದಲ್ಲಿ ಹರಡಿರುತ್ತವೆ. ಮತ್ತೆ ರೈತರ ಹೊಲಕ್ಕೆ ವಿದ್ಯಾರ್ಥಿಗಳು ಆಗಾಗ ಭೇಟಿ ಕೊಡುತ್ತಾರೆ. ಹೆಚ್ಚಿನ ವಿದ್ಯಾರ್ಥಿಗಳು ರೈತರ ಮಕ್ಕಳೇ ಆಗಿರುತ್ತಾರೆ. ಹೀಗಿದ್ದೂ ಸ್ನಾತಕ ಪದವಿಯ ಹಂತದಲ್ಲಿ ಕೃಷಿ ವಿಜ್ಞಾನ ಅರ್ಥೈಸಿಕೊಂಡರೂ ಹೆಚ್ಚಿನ ಕ್ಷೇತ್ರ ಜ್ಞಾನ ಮಾಡಿಕೊಳ್ಳಲು ಸಮಯವಿಲ್ಲ. ಹಾಗಾಗಿ ಆ ಹಂತದಲ್ಲಿ ಪುಸ್ತಕದ ಬದನೆಗಳೇ. ಆದರೆ ಸ್ನಾತಕೋತ್ತರ ಮತ್ತು ಪಿಎಚ್.ಡಿ. ಗೆ ಬಂದಾಗ ನಿರ್ದಿಷ್ಟ ವಿಭಾಗದ, ಬೆಳೆಗಳ ಮೇಲೆ ಹೆಚ್ಚಿನ ಅಧ್ಯಯನ ಮಾಡುತ್ತಾರೆ. ಮುಂದೆ ನೌಕರಿ – ಸಂಶೋಧನೆಗೆ ಸೇರಿದಾಗ ಒಂದೆರಡು ನಿರ್ದಿಷ್ಟ ಬೆಳೆಗಳ ಮೇಲೆ ಪ್ರಭುತ್ವ ಪಡೆಯುತ್ತಾರೆ. ಉದಾಹರಣೆಗೆ ಕಬ್ಬು ವಿಜ್ಞಾನಿಗೆ ಕಬ್ಬಿನ ಎಲ್ಲ ವಿಷಯ ಗೊತ್ತು. ಮತ್ತೊಬ್ಬರು ಅಡಿಕೆ-ತೆಂಗು-ಕೋಕೋ ಕುರಿತು ಶಿಸ್ತುಬದ್ಧವಾಗಿ ಮಾತನಾಡಬಲ್ಲರು. ಆದರೆ ಅವರಿಗೆ ಜೋಳ – ರಾಗಿ ಕೇಳಿದರೆ ತಬ್ಬಿಬ್ಬಾಗುತ್ತಾರೆ. ಸಸ್ಯರೋಗ ಶಾಸ್ತ್ರಜ್ಞರಿಗೆ ಅವರು ಹೆಚ್ಚಾಗಿ ಕೆಲಸ ಮಾಡಿದ ಸೂರ್ಯಕಾಂತಿ, ಜೋಳ, ಕಬ್ಬು, ಶೇಂಗಾ, ತೊಗರಿ ರೋಗಗಳು ನಾಲಿಗೆಯ ತುದಿಯಲ್ಲಿವೆ. ಆದರೆ ಅಡಿಕೆ, ತೆಂಗು, ಕೋಕೋ ರೋಗ ಕೇಳಿದರೆ ’ನೋಡಿ ಹೇಳುವೆ’ ಎನ್ನುತ್ತಾರೆ. ಇದು ಸಹಜ. ಇದೊಂದು ರೀತಿಯಲ್ಲಿ ’ತಜ್ಞತೆ”ಯ ಅಡ್ಡ ಪರಿಣಾಮ – ಸೈಡ್ ಇಫೆಕ್ಟ್. ಇದು ಮಾನವ ವೈದ್ಯರಲ್ಲೂ ಕಾಣಬಹುದು. ಹೃದಯ ತಜ್ಞರಿಗೆ ಕಿಡ್ನಿ ವಿಷಯ ಅಷ್ಟಾಗಿ ಗೊತ್ತಿಲ್ಲ. ಕಣ್ಣಿನ ಡಾಕ್ಟರ್ ಹಾರ್ಟ್ ಆಪರೇಶನ್ ಮಾಡಲಾರರು. ಎಲ್ಲ ವಿಷಯ ಮಾತನಾಡುತ್ತ ’ಗಿರ್ಮಿಟ್’ ಮಾಡುವವರು ಕೃಷಿ ವಿಜ್ಞಾನ ಓದಿಕೊಂಡು ಅಥವಾ ಓದಿಕೊಳ್ಳದೇ ಮಾಧ್ಯಮ – ಸಲಹಾ ಸೇವೆ ವೃತ್ತಿಯಲ್ಲಿರುವವರು ಮಾತ್ರ! ಕೃಷಿ ವಿಜ್ಞಾನದ ಹಿನ್ನೆಲೆಯಿರುವವರಿಗೆ ರೈತರ ಸಮಸ್ಯೆ ಅರ್ಥೈಸಿಕೊಳ್ಳಲು ಮತ್ತು ತಜ್ಞರಿಂದ ತಿಳಿದುಕೊಂಡು ತಿರುಗಿ ರೈತರಿಗೆ ಹೇಳಲು ಸಾಧ್ಯವಾಗುತ್ತದೆ. ಇಲ್ಲವಾದರೆ ಎಲ್ಲರೂ ಸಾವಯವ – ನಾಟಿ – ನುಡಿಚಿತ್ರ – ರೈತಾನುಭವ ಇತ್ಯಾದಿ ಕಥೆ ಹೇಳಿಕೊಂಡು ತಿರುಗಬೇಕಾಗುತ್ತದೆ.

ಕೃಷಿ ಪದವಿಯಲ್ಲಿ ಕೃಷಿಯ ಮೂಲಭೂತ ಮತ್ತು ವೈಜ್ಞಾನಿಕ ಜ್ಞಾನ ನೀಡಲಾಗುತ್ತದೆ. ಹಾಗಾಗಿ ಒಂದು ಸಮಸ್ಯೆ ನೋಡಿದಾಕ್ಷಣ ಅದು ರೋಗವೊ, ಕೀಟವೊ ಅಥವಾ ಸಸ್ಯ ಶಾರೀರಿಕ ಸಮಸ್ಯೆಯೊ – ಮತ್ತೊಂದೋ – ಇನ್ನೊಂದೋ ಅಂತ ತಿಳಿಯುತ್ತದೆ. ರೋಗವಾದಲ್ಲಿ ರೋಗಾಣು ಶಿಲೀಂಧ್ರ – ಬ್ಯಾಕ್ಟೀರಿಯಾ – ವೈರಸ್ಸುಗಳಲ್ಲಿ ಯಾವುದು ಎಂಬ ಅಂದಾಜು ಸಿಗುತ್ತದೆ. ಹೀಗೆ ಸಮಸ್ಯೆಯ ವೈಜ್ಞಾನಿಕ – ತರ್ಕಬದ್ಧ – ರೋಗ ನಿರ್ಣಯ ಸಾಧ್ಯವಾಗುತ್ತದೆ. ಅದನ್ನಾಧರಿಸಿ ಪರಿಹಾರ ಹೇಳಲು ಅನುಭವ ಆಧರಿತ ಜ್ಞಾನ, ಅಧ್ಯಯನ, ತಜ್ಞರೊಂದಿಗೆ ಚರ್ಚೆ ಸಹಾಯಕ್ಕೆ ಬರುತ್ತದೆ. ರೈತರ – ಬೆಳೆ-ಬೇಸಾಯದ ಸಮಸ್ಯೆ ಪರಿಹಾರಕ್ಕೆ 20% ವಿಜ್ಞಾನ, 80% ಸಾಮಾನ್ಯ ಜ್ಞಾನ–ಅನುಭವ ಇರಬೇಕು. ವೈಚಾರಿಕ ಸ್ಪಷ್ಟತೆ, ತರ್ಕಬದ್ಧ ಚಿಂತನಾ ಸಾಮರ್ಥ್ಯ ಅಗತ್ಯ. ಅಂಥವರು ಮಾತ್ರ ಯಶಸ್ವಿಯಾಗುತ್ತಾರೆ. ಇದು ಇತರೆ ವಿಜ್ಞಾನಗಳಿಗೂ ಅನ್ವಯಿಸುತ್ತದೆ. ಇದೇ ಕಾರಣದಿಂದ ಒಂದೇ ಪುಸ್ತಕ ಓದಿದ ಇಬ್ಬರಲ್ಲಿ ಒಬ್ಬ ವೈದ್ಯ ಜನಪ್ರಿಯನಾದರೂ ಮತ್ತೊಬ್ಬ ವಿಫಲನಾಗುವುದಿದೆ. ಅಷ್ಟಕ್ಕೂ ಕೃಷಿ ಪದವಿಯಲ್ಲಿ ವೈಜ್ಞಾನಿಕ–ಮೂಲಭೂತ ಜ್ಞಾನ ಕೊಟ್ಟಿರುತ್ತಾರೆ. ಮುಂದೆ ಅದನ್ನು ಬಳಸಿ, ಅನ್ವಯಿಸಿ, ಕ್ಷೇತ್ರ ಜ್ಞಾನ ಮಾಡಿಕೊಳ್ಳುವುದು ಅವರವರ ಆಸಕ್ತಿ– ಶಕ್ತಿ – ಸಾಮರ್ಥ್ಯ – ಅನಿವಾರ್ಯತೆ ಅವಲಂಬಿಸಿದೆ. ಕೃಷಿ ಪದವಿ ಓದಿದವರು ಮುಂದೆ ಯಶಸ್ವಿ ಕೃಷಿಕ – ಸಲಹಾಕಾರ – ವಿಜ್ಞಾನಿ – ತಜ್ಞ ಆದರೆ ಯಶಸ್ಸಿನ ಬೇರು ಇರುವುದು ಓದಿದ ಕೃಷಿ ವಿಜ್ಞಾನ ಪದವಿಯಲ್ಲಿ. ವಿಫಲನಾದರೆ ತಪ್ಪು – ಅಸಾಮರ್ಥ್ಯ ಪದವೀಧರನದೇ ಹೊರತು ಕೃಷಿ ಪದವಿಯದ್ದಲ್ಲ.

ಇದನ್ನು ಓದಿ : ವಸತಿ ನಿಲಯ-ಶಾಲಾ ಕಾಲೇಜು ಹಾಸ್ಟೆಲ್‌ಗಳಲ್ಲಿ ಕೆಲಸ ಮಾಡುವ ಹೊರಗುತ್ತಿಗೆ ಸಿಬ್ಬಂದಿಗಳ ಬೇಡಿಕೆ ಈಡೇರಿಸಲು ಒತ್ತಾಯ

ಯಾರು “ಪುಸ್ತಕದ ಬದನೆಕಾಯಿ” ಎಂದು ಕರೆಯುವವರು?

ಕೃಷಿ ವಿಜ್ಞಾನಿ – ಪದವೀಧರರನ್ನು “ಪುಸ್ತಕದ ಬದನೆಕಾಯಿ” ಎಂದು ಟೀಕಿಸುವವರಲ್ಲಿ ಹೆಚ್ಚಿನವರು ಸ್ವಯಂಘೋಷಿತ ’ಪ್ರಗತಿಪರ’ ರೈತರು ಮತ್ತು ತಥಾಕಥಿತ ರೈತಪರ ಧ್ವನಿಗಳು. ಈಶು, ರಾಮು, ರಾಗು, ಶಿವು, ಶ್ರೀಕೃಷ್ಣ, ನಾಣಿ, ಚಂದ್ರು, ಸದು, ನಾಗ್ಯಾ, ಕಂಠ, ಮಲ್ಲಿ, ಆನಂದಿ ಇತ್ಯಾದಿಗಳು. ಅವರಿಗೆ ಅವರ ತೋಟವೇ ಜಗತ್ತು. ಅವರ ಬೆಳೆಗಳೇ ಸರ್ವಸ್ವ. ಅವರ ಅನುಭವವೇ ಅಂತಿಮ. ಅವರ ಸೀಮಿತ ಜ್ಞಾನದ ಎದುರಿಗೆ ಕೃಷಿ ವಿಜ್ಞಾನಿ – ಪದವೀಧರರುಗಳೆಲ್ಲ ಪುಸ್ತಕದ ಹುಳುಗಳು. ಹೊರ ಜಗತ್ತಿನಲ್ಲಿ ಯಾವೆಲ್ಲ ಬೆಳೆಗಳನ್ನು ಹೇಗೆಲ್ಲ ಬೆಳೆಯುತ್ತಿದ್ದಾರೆ ಎಂಬ ಅರಿವು ಇವರಿಗಿಲ್ಲ. ಕೃಷಿ ಜಗತ್ತಿನ ವೈಶಾಲ್ಯದ ಪರಿಚಯವಿಲ್ಲ. ಆದರೆ ಇವರದು ದೊಡ್ಡ–ಹರಕು ಬಾಯಿ, ಗಟ್ಟಿ ಗಂಟಲು. ಯುಟ್ಯೂಬ್ ಸೇರಿದಂತೆ ಅನೇಕ ವಾಹಿನಿಗಳು ಇವರ ಮುಂದೆ ಮೈಕು ಹಿಡಿದು ಆ ದಿನದ ಕಾಳು ದುಡಿದುಕೊಳ್ಳುತ್ತವೆ.

ಹಾಗಾಗಿ ಸಿಕ್ಕಸಿಕ್ಕ ವೇದಿಕೆ, ಸಾಮಾಜಿಕ ಮಾಧ್ಯಮಗಳಲ್ಲಿ ಕೂಗಿದ್ದೇ ಕೂಗಿದ್ದು, ಬರೆದದ್ದೇ ಬರೆದದ್ದು. ಕೆಲವೊಮ್ಮೆ ಕೃಷಿ ವಿಜ್ಞಾನಿಗಳು ಸಹ ಇಂಥಹವರ ಬಲಕ್ಕೆ ಹೆದರಿ ಅವರಿಗೆ ವೇದಿಕೆ ಒದಗಿಸುವುದಿದೆ. ಇಂಥವರಿಂದಲೇ ಕೃಷಿ ವಿಜ್ಞಾನ – ವಿಜ್ಞಾನಿ – ಪದವಿಗಳ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಮೂಡಿರುವುದು. ತಾನು ವೈಜ್ಞಾನಿಕ ಸತ್ಯ ಅರಿತುಕೊಂಡು – ಪಾಲಿಸುತ್ತ, ಆದರೆ ಉಳಿದವರಿಗೆ ಅರ್ಧ ಸತ್ಯ ಹೇಳುತ್ತ ತಿರುಗುವ ಪಾಳೇಕರರಂಥವರೂ ಇಂಥ ಬದನೆಕಾಯಿ ರೈತರ ಬಲಕ್ಕಿದ್ದಾರೆ. ಕೃಷಿ ಸಂಶೋಧನೆ ಹೇಗೆ ಮಾಡುತ್ತಾರೆ – ಮಾಡಬೇಕು ಎಂಬ ಅರಿವಿಲ್ಲದೆ, ಪರಿಣಾಮದ ಖಚಿತತೆ ಬರುವ ಮೊದಲೇ ಅಣಲೆಕಾಯಿ ಪಂಡಿತ – ಔಷಧಗಳಿಗೆ ಬಹುಪರಾಕ್ ಹಾಕಿಬಿಡುತ್ತಾರೆ. ಇದರಿಂದ ಉಳಿದ ರೈತರೂ ವಿಜ್ಞಾನದಿಂದ ದೂರ ಸರಿದು ಸಂಕಷ್ಟಕ್ಕೆ ಬೀಳುತ್ತಾರೆ. ಮೊದಲೇ ಮಂಗ ಮರ ಹತ್ತುತ್ತದೆ; ಅದಕ್ಕೆ ಏಣಿ ಬೇರೆ ಹಾಕಿಕೊಟ್ಟರಂತೆ! ಕೊನೆಗೆ ಪ್ರಾಮಾಣಿಕ ಕೃಷಿ ವಿಜ್ಞಾನಿಗಳು ಬೇಸರಗೊಂಡು ಆಸಕ್ತಿ ಕಳೆದುಕೊಳ್ಳುತ್ತಾರೆ.

ಸಾವಯವ – ನಾಟಿ ಪತ್ರಕರ್ತರು

ಕೃಷಿ ಪದವಿ ಪುಸ್ತಕದ ಬದನೆ ಎನ್ನುವ ಎರಡನೆ ಗುಂಪು ಈ ಪತ್ರಕರ್ತರದು. ಬಹುತೇಕ ದಿನಪತ್ರಿಕೆಗಳ ಕೃಷಿ ಪುರವಣಿ ಮತ್ತು ಕೃಷಿ ಪತ್ರಿಕೆಗಳ ಜವಾಬ್ದಾರಿ ಇರುವವರು ಕೃಷಿ ವಿಜ್ಞಾನದ ಹಿನ್ನೆಲೆಯಿಲ್ಲದ ಪತ್ರಕರ್ತರು. ಈಗಂತೂ ಅನೇಕ ದಿನಪತ್ರಿಕೆಗಳು ಕೃಷಿ ಪುರವಣಿ ನಿಲ್ಲಿಸಿವೆ. ಅಥವಾ ಇದು 10 ರೊಂದಿಗೆ 11 ನೇ ಪುಟ ಅಷ್ಟೆ. ಕೃಷಿ ವಿಜ್ಞಾನ ಓದಿ ಪತ್ರಿಕೋದ್ಯಮ ವೃತ್ತಿ ಆಯ್ದುಕೊಂಡವರು ಇಲ್ಲದಿರುವುದರಿಂದ ಇವರದೇ ಕಾರುಬಾರು. ಇವರ ಪ್ರಕಾರ ಸಾವಯವ ಕೃಷಿ, ನಾಟಿ ತಳಿ – ಗೋವು ಇತ್ಯಾದಿಗಳೇ ಕೃಷಿಯ ಸರ್ವಸ್ವ. ’ರೈತಾನುಭವ – ರೈತ ವಿಜ್ಞಾನಿ’ ಎಂಬ ಶಿರೋನಾಮೆಯಡಿ ಈ ಪತ್ರಕರ್ತರು ಅದೇ ಬದನೆಕಾಯಿ ರೈತರ ಅನುಭವವನ್ನು ವೈಭವೀಕರಿಸಿ ಬರೆಯುತ್ತಾರೆ. ಅಥವಾ ಗಿಡ ಮಾರುವ ನರ್ಸರಿಯವರ ಕುತಂತ್ರ ಅರ್ಥಮಾಡಿಕೊಳ್ಳದೇ ’ಆ ಬೆಳೆಯಲ್ಲಿ 10 ಲಕ್ಷ, ಈ ತಳಿಯಿಂದ 20 ಲಕ್ಷ ಗಳಿಸಿದ ರೈತರು’ ಎಂಬಂಥ ಲೇಖನ ಕೊಡುತ್ತಾರೆ. ಈ ಪತ್ರಕರ್ತರಿಗೆ ಕೃಷಿ ವಿಜ್ಞಾನ – ವಿಜ್ಞಾನಿಗಳೆಂದರೆ ಅಲರ್ಜಿ. ಕೃಷಿ ವಿಜ್ಞಾನ – ರೈತರ ಅನುಭವ ಮಿಶ್ರಿತ ಲೇಖನ ಕೊಡುವುದು ಇವರಿಗೆ ಕಷ್ಟ. ಹಾಗಾಗಿ ’ನುಡಿಚಿತ್ರ’ ಎಂಬ ಹೆಸರಿನಲ್ಲಿ ರೈತರ ಸಂದರ್ಶನ ಆಧರಿತ ಲೇಖನ ಪ್ರಕಟಿಸಿ ಪುಟ ತುಂಬಿಸುತ್ತಾರೆ – ಕೈ ತೊಳೆದುಕೊಳ್ಳುತ್ತಾರೆ – ಬಚಾವಾಗುತ್ತಾರೆ. ಆ ರೈತರು ಹೇಳಿದ್ದು ಸರಿಯೋ – ತಪ್ಪೋ ಎಂದು ಪರಾಮರ್ಶಿಸಲು ಇವರಿಗೆ ಸ್ವಂತ ಕೃಷಿ ಜ್ಞಾನವಿಲ್ಲ; ಪರಿಶೀಲನೆಗೆ ವ್ಯವಸ್ಥೆ ಇಲ್ಲ; ವ್ಯವಧಾನ – ಸಮಯ – ಅನಿವಾರ್ಯತೆ ಇಲ್ಲ.

ಸಂಪಾದಕ ಇವರ ಅಣ್ಣ; ಪುಟ ತುಂಬಿದರೆ ಸಾಕು. ಅವೈಜ್ಞಾನಿಕ – ತಪ್ಪು ಸಂಗತಿಗಳನ್ನು ’ಸ್ವಂತ ಅನುಭವ’ ಶಿರೋನಾಮೆಯಡಿ ಬರೆಯುತ್ತಾರೆ. ತಪ್ಪುಎಂದರೆ ವಾದಕ್ಕೆ ಬೀಳುತ್ತಾರೆ . ಹಾಗಾಗಿ ಇಂಥ ’ಬಿಟ್ಟ ಸ್ಥಳ ತುಂಬಿ’ ಕೃಷಿ ಪುರವಣಿ – ಲೇಖನಗಳಿಂದ ರೈತರಿಗೂ ಪ್ರಯೋಜನವಿಲ್ಲ. ಜೊತೆಗೆ ಓದುಗ ರೈತರು ದಾರಿ ತಪ್ಪುವ ಅಪಾಯ ಕೂಡ ಇದೆ.

ಹೀಗೆ ಕೃಷಿ ವಿಜ್ಞಾನದ ಹಿನ್ನೆಲೆಯಿಲ್ಲದ ’ಬದನೆಕಾಯಿ’ ರೈತರು ಮತ್ತು ಕೆಲವು ಪತ್ರಕರ್ತರೆಲ್ಲ ಸೇರಿಕೊಂಡು ಕೃಷಿ ವಿಜ್ಞಾನ – ವಿಜ್ಞಾನಿ – ಕೃಷಿ ಪದವೀಧರರನ್ನು ’ಪುಸ್ತಕದ ಹುಳು’ ಎಂದು ಗೇಲಿ ಮಾಡುತ್ತ, ಅಣಕಿಸತ್ತ ನಕಾರಾತ್ಮಕ ಭಾವನೆ ಬೆಳೆಸಿದ್ದಾರೆ. ಅದರಿಂದ ಕೃಷಿ ಕ್ಷೇತ್ರಕ್ಕೆ – ರೈತರಿಗೆ ನಷ್ಟವೇ ಹೊರತು ಪ್ರಯೋಜನವಿಲ್ಲ. ಬದಲಿಗೆ ಕೃಷಿ ವಿಜ್ಞಾನ – ವಸ್ತುಸ್ಥಿತಿ – ರೈತರ ಅನುಭವಗಳ ಹಿತಮಿತವಾದ ಮಿಶ್ರಣದ ಲೇಖನ – ಕಾರ್ಯಕ್ರಮ ರೈತರಿಗೆ ಸಿಗುವಂತಾದರೆ ಕೃಷಿಗೆ ಪೂರಕವಾಗುತ್ತದೆ. ಆದರೆ ಇರುವ ಎಲ್ಲ ಮಾಧ್ಯಮ – ವೇದಿಕೆಗಳನ್ನು ಈ ಬದನೆಕಾಯಿ ರೈತರು ಮತ್ತು ನಾಟಿ ಪತ್ರಕರ್ತರೇ ಕಬ್ಜಾ ಮಾಡಿಕೊಂಡಿರುವಾಗ ಪರಿಸ್ಥಿತಿಯ ಬದಲಾವಣೆ ಕಷ್ಟ.

ಕೊನೆಯ ಮಾತು

ಕೃಷಿ ವಿಜ್ಞಾನಿಗಳಲ್ಲಿ, ಪದವೀಧರರಲ್ಲಿ ಪುಸ್ತಕದ ಬದನೆಗಳು ಇಲ್ಲವೆಂದಲ್ಲ. ಅಥವಾ ವಸ್ತುಸ್ಥಿತಿಯಲ್ಲಿ ಅವರದೇ ದೊಡ್ಡ ಸಂಖ್ಯೆ. ಅದು ವ್ಯವಸ್ಥೆಯ ದೋಷ. ಆದರೆ ಇದು ಕೃಷಿ ವಿಜ್ಞಾನ – ಶಿಕ್ಷಣದ ತಪ್ಪಲ್ಲ. ಕತ್ತೆಯ ಎದುರಿಗೆ ಕಿನ್ನರಿ ಬಾರಿಸಿದರೆ ’ಕೊಂಬೊ, ಕೊಳಲೋ, ಲೊಳಲೊಟ್ಟೆಯೋ’ ಎಂದಿತ್ತಂತೆ. ಹಾಗೇ ಅಪಾತ್ರರಿಗೆ ಯಾವ ಪದವಿ ಸಿಕ್ಕರೂ ಅದು ನಿಶ್ಪ್ರಯೋಜಕವಾಗುತ್ತದೆ. ಸತ್ಪಾತ್ರರಿಗೆ ಸಿಕ್ಕಾಗ ಸದ್ಬಳಕೆಯಾಗುತ್ತದೆ. ಕೃಷಿ ಮಕ್ಕಳೂ ಕೃಷಿ ಪದವಿ ಮಾಡಿ, ಅದನ್ನು ಚಾಲ್ತಿಯಲ್ಲಿಟ್ಟುಕೊಂಡು ಕೃಷಿಗಿಳಿದರೆ ಅವರ ತೋಟದ ಲಕ್ಷಣವೇ ಬೇರೆ. ಬೆಳೆ-ತಳಿ- ಕೃಷಿ ಒಳಸುರಿ-ರೋಗ-ಕೀಟ-ಗೊಬ್ಬರಗಳ ನಿರ್ಣಯ ಸುಲಭವಾಗುತ್ತದೆ. ಇತ್ತೀಚೆಗೆ ಕೃಷಿ ಪದವೀಧರರು ಯು.ಪಿ.ಎಸ್.ಸಿ. – ಕೆ.ಪಿ.ಎಸ್.ಸಿ. ಪರೀಕ್ಷೆ ಪಾಸು ಮಾಡುವುದೂ ಹೆಚ್ಚುತ್ತಿದೆ. ಚುರುಕಾದ – ಅನ್ವಯಿಕ ಕೃಷಿ ಶಿಕ್ಷಣ ವ್ಯವಸ್ಥೆ ಇದಕ್ಕೆ ಕಾರಣ. ಕೃಷಿ ಕಾಲೇಜಿನಲ್ಲಿ ದೊರೆತ ಮೂಲಭೂತ ಜ್ಞಾನವನ್ನು ಬಳಸಿ – ಬೆಳೆಸಿ – ಅನ್ವಯಿಸಿಕೊಂಡರೆ ಅದ್ಭುತ ಪರಿಣಾಮ ಸಾಧ್ಯ. ಮೆಡಿಕಲ್ – ಇಂಜಿನಿಯರಿಂಗ್ ಸಿಗಲಿಲ್ಲ ಎಂದು ಅರೆಮನಸ್ಸಿನಿಂದ ಕೃಷಿ ಪದವಿ ಮಾಡಿ, ಆಚರಣೆಯಲ್ಲಿ ಜ್ಞಾನದ ಬಳಕೆ ಮಾಡದಿದ್ದರೆ ವ್ಯರ್ಥ. ಇದು ಇನ್ನಿತರ ಪದವಿಗಳಿಗೂ ಅನ್ವಯಿಸುತ್ತದೆ. ಕೃಷಿ ಒಂದು ಉಪಯುಕ್ತ ವಿಜ್ಞಾನ. ಇದನ್ನು ಸದ್ಬಳಕೆ ಮಾಡಿಕೊಂಡರೆ ಎಲ್ಲರಿಗೂ ಉಪಯುಕ್ತ. ಪುಸ್ತಕದ ಬದನೆಯೆಂದು ಉಪೇಕ್ಷಿಸಿದರೆ ಎಲ್ಲರಿಗೂ ನಷ್ಟ.

ಅನೇಕ ಪ್ರಗತಿಪರ ಕೃಷಿಕರು ಪ್ರಯೋಗಶೀಲರಾಗಿದ್ದು ವಿಷಯವನ್ನು ವೈಜ್ಞಾನಿಕವಾಗಿ ತಿಳಿದುಕೊಳ್ಳಲು ಸಾಕಷ್ಟು ಶ್ರಮ ಹಾಕುತ್ತಾರೆ, ಕೃಷಿಮೇಳಗಳಿಗೆ ಭೆಟ್ಟಿಕೊಡುತ್ತಾರೆ, ಚರ್ಚಿಸುತ್ತಾರೆ ಮತ್ತು ವಿಜ್ಞಾನಿಗಳ ಸಂಪರ್ಕದಲ್ಲಿರುತ್ತಾರೆ. ಅನೇಕ ವಿಜ್ಞಾನಿಗಳು ಸಹ ಪ್ರಯೋಗಶಾಲೆಯಿಂದ ಕ್ಷೇತ್ರಕ್ಕೆ ಆವಿಷ್ಕಾರಗಳನ್ನು ನಿರಂತರವಾಗಿ ಕೊಂಡೊಯ್ಯುವುದರಲ್ಲಿ ನಿರತರಾಗಿರುತ್ತಾರೆ. ಇವರ ಸಂಖ್ಯೆ ಜಾಸ್ತಿಯಾಗುವ ಅವಶ್ಯಕತೆ ಇದೆ.

(ಈ ಲೇಖನವನ್ನು “ಶ್ರಮಜೀವಿ ಕೃಷಿ ಪತ್ರಿಕೆ” ಯ ಸಂಪಾದಕ ಡಾ: ವೆಂಕಟ್ರಮಣ ಹೆಗಡೆಯವರ ಜುಲೈ 2024 ರ ಸಂಪಾದಕೀಯದ “ಖರೇ ಹೇಳ್ಬೇಕಂದ್ರೆ….ಲೇಖನವನ್ನು ಕೃತಜ್ಞತೆಗಳೊಂದಿಗೆ ಒಂದಿಷ್ಟು ಸಂಕ್ಷಿಪ್ತಗೊಳಿಸಿ ಮತ್ತು ಒಂದಿಷ್ಟು ಮಾರ್ಪಡಿಸಿ ಬರೆಯಲಾಗಿದೆ.ಪೂರ್ಣ ಲೇಖನಕ್ಕಾಗಿ ಪತ್ರಿಕೆ ಓದಿ)

ಡಾ: ಎನ್.ಬಿ.ಶ್ರೀಧರ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ

ಇದನ್ನು ನೋಡಿ : ಡೆಂಗ್ಯೂ – ಲಕ್ಷಣಗಳು, ಚಿಕಿತ್ಸೆ ಮತ್ತು ತಡೆಗಟ್ಟುವಿಕೆ | ಡಾ ಪೃಥ್ವಿ ಬಿ ಸಿ Janashakthi Media

Donate Janashakthi Media

Leave a Reply

Your email address will not be published. Required fields are marked *