ಹಾವೇರಿ : ಹಾವೇರಿ ಪಟ್ಟಣದಲ್ಲಿ ಇಂದು ಭಗತ್ ಸಿಂಗ್ ಪಿ.ಯು ಕಾಲೇಜಿನಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಜಿಲ್ಲಾ ಸಮಿತಿ ವತಿಯಿಂದ ನಿರುದ್ಯೋಗದ ವಿರುದ್ಧ ಉದ್ಯೋಗದ ಹಕ್ಕಿಗಾಗಿ ಯುವಜನರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಪ್ರಗತಿಪರ ಸಾಹಿತಿ ಚಂಸು ಪಾಟೀಲ “ದೇಶದಲ್ಲಿ ಅತ್ಯಂತ ಹೆಚ್ಚು ಉದ್ಯೋಗ ಒದಗಿಸಲು ಅವಕಾಶ ಇರುವುದು ಕೃಷಿ ಕ್ಷೇತ್ರದಲ್ಲಿ ಮಾತ್ರ. ಆದರೆ ಪ್ರಭುತ್ವದ ಚುಕ್ಕಾಣಿ ಹಿಡಿದವರು ಕೃಷಿ ಕ್ಷೇತ್ರದ ಕಂಪೆನಿಕರಣಕ್ಕೆ ಮುಂದಾಗಿ ಜನತೆ ಕೃಷಿಯಿಂದ ವಿಮುಖರಾಗುವಂತೆ ಮಾಡುತ್ತಿರುವುದು ಅಪಾಯಕಾರಿಯಾಗಿ ಪರಿಣಮಿಸಲಿದೆ” ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ : ತಮ್ಮನ್ನು ಪ್ರಶ್ನಿಸಿದ ಶಿಕ್ಷಣಾಧಿಕಾರಿಗೆ ಶಾಲಾ ಮುಖ್ಯಶಿಕ್ಷಕ ಬೆಲ್ಟ್ ನಲ್ಲಿ ಬಾರಿಸಿ ಹಲ್ಲೆ
“ಕೃಷಿ ಕ್ಷೇತ್ರವನ್ನು ಸುಸ್ಥಿರವಾಗಿ ಅಭಿವೃದ್ಧಿಪಡಿಸಿದರೆ ಸಾಕಷ್ಟು ಯುವಜನರಿಗೆ ಉದ್ಯೋಗ ದೊರೆತು ಅವರು ಬದುಕು ಕಟ್ಟಿಕೊಳ್ಳುವ ಅವಕಾಶವಿದೆ. ಆ ಮೂಲಕ ಯುವ ಜನರು ನಿರುದ್ಯೋಗಿಗಳಾಗದಂತೆ ತಡೆಯಲು ಸಾಧ್ಯವಿದೆ. ಇದಕ್ಕಾಗಿ ಸೂಕ್ತ ಕಾರ್ಯ ಯೋಜನೆ ರೂಪಿಸಿ ಪ್ರಾಮಾಣಿಕ ಬದ್ಧತೆ ಹಾಗೂ ಇಚ್ಛಾಶಕ್ತಿಯಿಂದ ಆಳುವ ಸರಕಾರಗಳು ಜಾರಿಗೊಳಿಸಬೇಕು. ಯುವಜನತೆ ಈ ನಿಟ್ಟಿನಲ್ಲಿ ಪ್ರಬಲವಾಗಿ ಧ್ವನಿ ಎತ್ತಬೇಕು” ಎಂದರು.
ಮುಖ್ಯ ಅತಿಥಿಗಳು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, “ಕೇಂದ್ರ ಮತ್ತು ರಾಜ್ಯ ಸರಕಾರಗಳು ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸಲು ಹಾಗೂ ನಿರುದ್ಯೋಗ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಕೆಲಸ ಮಾಡುತ್ತಿಲ್ಲ. ಉದ್ಯೋಗ ಸೃಷ್ಠಿಸುತ್ತೆವೆಂಬ ಹುಸಿ ಭರವಸೆ ನೀಡುತ್ತಾ ವಂಚಿಸುತ್ತಿರುವ ಹುನ್ನಾರದ ವಿರುದ್ಧ ಯುವ ಜನರು ಪ್ರಬಲ ಆಂದೋಲನಕ್ಕೆ ಮುಂದಾಗಬೇಕು” ಎಂದು ಕರೆ ನೀಡಿದರು.
“ಕೃಷಿ ಪ್ರಧಾನ ಹಾವೇರಿ ಜಿಲ್ಲೆಯಲ್ಲಿ ಕೃಷಿಯಾಧಾರಿತ ಕೈಗಾರಿಕೆಗಳನ್ನು ಆರಂಭಿಸಿ ಜಿಲ್ಲೆಯ ಯುವಜನರಿಗೆ ಉದ್ಯೋಗ ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಜಿಲ್ಲೆಯ ಜನಪ್ರತಿನಿಧಿಗಳು ಮಾಡಬೇಕಿತ್ತು. ಆದರೆ ಜನರಿಂದ ಅಧಿಕಾರ ಹಿಡಿದವರು ತಮ್ಮನ್ನು ಆಯ್ಕೆ ಮಾಡಿದ ಶಿಕ್ಷಣ, ಉದ್ಯೋಗ ಹಾಗೂ ಆರೋಗ್ಯ ವ್ಯವಸ್ಥೆಯನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ” ಎಂದರು.
“ಉದ್ಯೋಗದ ಹಕ್ಕು ಮೂಲಭೂತ ಹಕ್ಕು’ ಆದರೆ ಆ ಹಕ್ಕು ಯುವಜನರಿಗೆ ದೊರೆಯುತ್ತಿಲ್ಲ. ಈಗಾಗಲೇ ಕಳೆದ ಐದು ವರ್ಷಗಳಿಂದ ನೇಮಕಾತಿ ಮಾಡದಿರುವುದರಿಂದ ಅರ್ಹ ಉದ್ಯೋಗಾಂಕ್ಷಿಗಳ ವಯೋಮಿತಿ ಮೀರುತ್ತಿದೆ. ಸರಕಾರ ವಯೋಮಿತಿ ಕನಿಷ್ಠ ಐದು ವರ್ಷ ವಯೋಮಿತಿ ಹೆಚ್ಚಳಗೊಳಿಸಬೇಕು. ಖಾಲಿಯಿರುವ ಹುದ್ದೆಗಳನ್ನು ಭರ್ತಿಗೊಳಿಸಬೇಕು” ಎಂದು ಆಗ್ರಹಿಸಿದರು.
ಸತೀಶ ಎಂ.ಬಿ ಮಾತನಾಡಿ, “ವಿದ್ಯಾರ್ಥಿ ಯುವಜನತೆ ಕಷ್ಟಪಟ್ಟು ಅಧ್ಯಯನ ಮಾಡಿ ಬದುಕು ಕಟ್ಟಿಕೊಳ್ಳಬೇಕು. ಉದ್ಯೋಗದ ಅವಕಾಶಗಳಿಗಾಗಿ ಐಕ್ಯತೆಯಿಂದ ಧ್ವನಿ ಎತ್ತಬೇಕು” ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ನಾರಾಯಣ ಕಾಳೆ ಮಾತನಾಡಿ, “ಜಿಲ್ಲೆಯಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳ ಭರ್ತಿಗೆ ಜನಪ್ರತಿನಿಧಿಗಳು ಮುಂದಾಗಬೇಕು. ಯುವಜನರು ಸ್ವಾವಲಂಬಿಯಾಗಿ ಜೀವನ ಕಟ್ಟಿಕೊಳ್ಳಲು ಅಗತ್ಯ ಕಾರ್ಯಯೋಜನೆ ರೂಪಿಸಿ ಜಾರಿಗೊಳಿಸಬೇಕು” ಎಂದರು.
ವೇದಿಕೆ ಮೇಲೆ ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್, ಡಿವೈಎಫ್ಐ ಜಿಲ್ಲಾ ಮುಖಂಡರಾದ ಪ್ರಿಯಾ ಗಡ್ಡಿಯವರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಿವೈಎಫ್ಐ ಮುಖಂಡರು ಹಬೀಬ್ ಮುಲ್ಲಾ, ಮೌಲಾಲಿ ನವಲಗುಂದ, ಮಂಜುಳಾ ಹಾನಗಲ್, ವೀರಣ್ಣ ಗಡ್ಡಿಯವರ, ಮೇಘನಾ ಕಹಾರ, ಅಭಿಷೇಕ ಎಸ್.ಕೆ, ನಿಂಗರಾಜ ಪೂಜಾರ ಸೇರಿದಂತೆ ವಿವಿಧ ಘಟಕಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು. ವಿಶಾಲಾ ಬಿ ಮುಳಗುಂದ ಸ್ವಾಗತಿಸಿ, ನಿರ್ವಹಿಸಿದರು. ರೇಣುಕಾ ಕಹಾರ ವಂದಿಸಿದರು.
ಇದನ್ನೂ ನೋಡಿ : ಜಾತಿ ಗಣತಿ : ʼಧರ್ಮ, ಜಾತಿʼ ಗೊಂದಲದಲ್ಲಿ ಲಿಂಗಾಯತ -ವೀರಶೈವ ! | #KarnatakaCasteCensus | Janashakthi Media
