ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಅಗ್ನಿಪಥ ನೇಮಕಾತಿ ಯೋಜನೆಯನ್ನು ರದ್ದುಗೊಳಿಸಬೇಕೆಂದು ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯವು ಎಲ್ಲಾ ಅರ್ಜಿಗಳನ್ನು ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಿದೆ. ಅಲ್ಲದೆ ಈ ಕುರಿತ ವಿಚಾರಣೆಯನ್ನು ಸಂಪೂರ್ಣವಾಗಿ ದೆಹಲಿ ಹೈಕೋರ್ಟಿಗೆ ವರ್ಗಾಯಿಸಬೇಕೆಂದು ರಿಜಿಸ್ಟ್ರಾರ್ ಜನರಲ್ ಅವರಿಗೆ ಸೂಚಿಸಿದೆ.
ಅಗ್ನಿಪಥ ಯೋಜನೆ ನಿಷೇಧ, ಪರಿಶೀಲನೆ, ರದ್ದು ಕೋರಿ ಹಲವು ಅರ್ಜಿಗಳನ್ನು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಲಾಗಿತ್ತು. ಆ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿವೈ ಚಂದ್ರಚೂಡ ಮತ್ತು ಎಎಸ್ ಬೋಪಣ್ಣ ಅವರನ್ನೊಳಗೊಂಡ ನ್ಯಾಯಪೀಠ ವಿಚಾರಣೆಗೆ ತೆಗೆದುಕೊಂಡು ಅರ್ಜಿಗಳನ್ನು ವರ್ಗಾಯಿಸಿದೆ.
ಅಗ್ನಿಪಥ್ ಯೋಜನೆಯನ್ನು ಪ್ರಶ್ನಿಸಿ ಕೇರಳ, ಪಾಟ್ನಾ, ಪಂಜಾಬ್, ಹರಿಯಾಣ ಮತ್ತು ಉತ್ತರಾಖಂಡದ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಎಲ್ಲಾ ರೀತಿಯ ಅರ್ಜಿಗಳನ್ನು ದೆಹಲಿ ಹೈಕೋರ್ಟ್‌ಗೆ ಮಧ್ಯಸ್ಥಿಕೆ ಅರ್ಜಿಗಳಾಗಿ ಸಲ್ಲಿಸಬಹುದು. ಹಾಗೇ, ಅರ್ಜಿದಾರರು ತಮ್ಮ ಅರ್ಜಿಗಳನ್ನು ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಬಹುದು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಜುಲೈ 4ರಂದು ವಕೀಲರಾದ ಕುಮುದ್ ಲತಾ ಅವರು ಹರ್ಷ್ ಅಜಯ್ ಸಿಂಗ್ ಪರವಾಗಿ ಸಲ್ಲಿಸಿದ್ದ ಅರ್ಜಿಯನ್ನು ಪ್ರಸ್ತಾಪಿಸಿ ತುರ್ತು ವಿಚಾರಣೆಗೆ ಮನವಿ ಮಾಡಿದ್ದರು. ಇನ್ನೊಬ್ಬರು ಅರ್ಜಿದಾರರಾದ ಎಂ.ಎಲ್. ಶರ್ಮಾ ಅಗ್ನಿಪಥ ಯೋಜನೆಯ ಸಿಂಧುತ್ವವನ್ನು ಪ್ರಶ್ನಿಸಿದ್ದರು.
ಉಚ್ಚ ನ್ಯಾಯಾಲಯಗಳ ಅಭಿಪ್ರಾಯವನ್ನು ನಾವು ಪರಿಗಣಿಸಬೇಕಾಗಿತ್ತು. ಸಂವಿಧಾನದ 226ನೇ ವಿಧಿಯಡಿ ಉಚ್ಚ ನ್ಯಾಯಾಲಯದ ನ್ಯಾಯವ್ಯಾಪ್ತಿಯ ಮಹತ್ವವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ ಎಂದಿರುವ ನ್ಯಾಯಮೂರ್ತಿ ಚಂದ್ರಚೂಡ್, ಅಲ್ಲಿಂದ ಅಭಿಪ್ರಾಯವನ್ನು ಪಡೆಯೋಣ. ಅದರ ದೃಷ್ಟಿಕೋನವೇನಿದೆ ಎಂಬುದನ್ನು ನೋಡೋಣ ಎಂದರು.
ಜಾತಿ–ಧರ್ಮ ಪ್ರಮಾಣ ಪತ್ರ ಅಗತ್ಯ
ಅಗ್ನಿವೀರ ಯೋಜನೆಗೆ ಜಾತಿ ಮತ್ತು ಧರ್ಮದ ಪ್ರಮಾಣಪತ್ರವನ್ನು ಕೇಳಲಾಗುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸಶಸ್ತ್ರ ಪಡೆಗಳ ಅಧಿಕಾರಿಗಳು ಅಂತಹ ಪ್ರಮಾಣಪತ್ರಗಳ ಅವಶ್ಯಕತೆಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಯಾವಾಗಲೂ ಇರುತ್ತವೆ ಎಂದು ಹೇಳಿದ್ದಾರೆ.
ಆಕಾಂಕ್ಷಿಗಳು ಜಾತಿ ಪ್ರಮಾಣ ಪತ್ರ ಮತ್ತು ಅಗತ್ಯವಿದ್ದಲ್ಲಿ ಧರ್ಮ ಪ್ರಮಾಣ ಪತ್ರ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಅಗ್ನಿವೀರ ನೇಮಕಾತಿ ಯೋಜನೆಗೆ ಯಾವುದೇ ಬದಲಾವಣೆ ಇಲ್ಲ, ತರಬೇತಿ ವೇಳೆ ಮೃತಪಡುವ ಸೈನಿಕರು ಮತ್ತು ಸೈನಿಕರಿಗೆ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಅಂತಿಮ ಸಂಸ್ಕಾರ ಮಾಡಲು ಧರ್ಮ ಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.