ಎಸ್ ಎಸ್ ಹದ್ಲಿ
ಅಗ್ನಿಪಥ್/ ಅಗ್ನಿವೀರ ಯೋಜನೆ ಅಡಿಯಲ್ಲಿ ನಾಲ್ಕು ವರ್ಷದ ಸೇನಾ ಸೇವೆಯು, ಬರಿ, ಕಾಂಟ್ರಾಕ್ಟ್ ಅಥವಾ ತಾತ್ಕಾಲಿಕ ನೇಮಕಾತಿ ಮಾತ್ರವಲ್ಲ, ಇದರಲ್ಲಿ ನಿರುದ್ಯೋಗಿ ಯುವಕರಿಗೆ ತಾತ್ಕಾಲಿಕ ಉಪಶಮನ ನೀಡಿ, ಮೋಸಗೊಳಿಸುವ ತಂತ್ರವೂ ಅಡಗಿದೆ.
4 ವರ್ಷಗಳ ನಂತರ ಮತ್ತೆ ಅವರನ್ನು ನಿರುದ್ಯೋಗಿ ಮಾಡಿ, ಮುಂದಿನ ಯಾವ ಕೆಲಸಕ್ಕೂ ಅರ್ಹತೆ ಇಲ್ಲದಂತಾಗಿ, ಪಿಂಚಣಿಯೂ ಇಲ್ಲದೆ, ನಾನೊಬ್ಬ ನಿವೃತ್ತ ಸೈನಿಕ, ದೇಶಭಕ್ತ ಎಂದು ಹೇಳಿಕೊಂಡು ಸೆಕ್ಯುರಿಟಿ ಗಾರ್ಡ್ ಅಥವಾ ಅದಕ್ಕೂ ಸಣ್ಣ ದರ್ಜೆಯ ಕೆಲಸದಲ್ಲಿ ಇರಬೇಕಾದದ್ದು ಅನಿವಾರ್ಯವಾಗುತ್ತದೆ. ಇಂದು ಯುವಕರಿಗಾಗಿ ತಕ್ಷಣಕ್ಕೆ ಹಲವಾರು ಸರ್ಕಾರಗಳಲ್ಲಿ ಖಾಲಿ ಇರುವ ಒಟ್ಟು 68 ಲಕ್ಷ ಖಾಯಂ ಹುದ್ದೆಗಳನ್ನು ಭರ್ತಿ ಮಾಡಲು ಒಪ್ಪದ ಸರ್ಕಾರ ನಾಲ್ಕು ವರ್ಷಗಳ ತಾತ್ಕಾಲಿಕ ಸೇವೆಯ ನಂತರ, ಅಗ್ನಿವೀರರಿಗೆ ಇನ್ನೊಂದು ಕೆಲಸ ಕೊಡುವ ಮಾತು ಹಾಸ್ಯಸ್ಪದವಾಗಿದೆ. ಇದು, ಇಡೀ ಸೈನ್ಯದ ಮನೋಸ್ಥೈರ್ಯವನ್ನು ಕುಗ್ಗಿಸಬಹುದಾಗಿದೆ. ಇದಲ್ಲದೆ, ಸರ್ಕಾರದ ಖರ್ಚಿನಲ್ಲಿ ಸೈನಿಕರಿಗೆ ತರಬೇತಿ ನೀಡಿ, ನಾಳೆ ಕೆಲವು ಖಾಸಗೀ ಆರ್ಮಿ ರಚಿಸುವ ಹುನ್ನಾರವು ಇದರಲ್ಲಿ ಅಡಗಿದೆ. ದೇಶದ ಆಡಳಿತ ಹಿಂದುತ್ವದ ಫಾಸಿವಾದಕ್ಕೆ ತಿರುಗಿದ್ದೇ ಆದಲ್ಲಿ, ಇವರನ್ನು ತುರ್ತು ಪರಿಸ್ಥಿತಿಲ್ಲಿ ಉಪಯೋಗಿಸಿ ಜನರ ಪ್ರಜಾಪ್ರಭುತ್ವ ಹೋರಾಟಗಳನ್ನು ದಮನ ಮಾಡಲು ಈ ಪ್ರೈವೇಟ್ ಆರ್ಮಿಯನ್ನೂ ಉಪಯೋಗಿಸುವ ಸಂಚು ಕೂಡ ಇದರಲ್ಲಿ ಅಡಗಿದೆ. ಇಷ್ಟು ದಿನ ಲಾಠಿ ಹಿಡಿದು ಅಡ್ಡಾಡುತ್ತಿದ್ದ “ಅತೀ ಶೂರರಿಗೆ” ಹಿಂಬಾಗಿಲಿನಿಂದ ಕೈಯಲ್ಲಿ ಬಂದೂಕು ಕೊಡುವ ಯೋಜನೆಯು ಇದಾಗಬಹುದಾಗಿದೆ.
ಈ ವರೆಗೆ ಪ್ರತಿ ವರ್ಷ ಸಾವಿರಾರು ಸೈನಿಕರ ಹುದ್ದೆಗಳನ್ನು ಖಾಯಂ ಆಗಿ ಭರ್ತಿ ಮಾಡುತ್ತಿದ್ದ ಸರ್ಕಾರ ತನ್ನ ಖಾಯಂ ನೇಮಕಾತಿ ಪ್ರಕ್ರಿಯೆಯನ್ನು ಕೈ ಬಿಟ್ಟು 4 ವರ್ಷದ, ನಿಗದಿತ/ ತಾತ್ಕಾಲಿಕ/ ಗುತ್ತಿಗೆ ನೇಮಕಾತಿಗಳನ್ನು ಮಾಡಿಕೊಳ್ಳಲು ಸರ್ಕಾರ ಯಾಕೆ ಮುಂದಾಗಿದೆ ಎಂಬ ಪ್ರಶ್ನೆಗೆ, ಅವರಲ್ಲಿ ಸಮಂಜಸ ಉತ್ತರವಿಲ್ಲ. ಸೈನಿಕ ತನ್ನ ಖಾಯಂ ನೌಕರಿಯಲ್ಲಿ ಸೇವೆ ಉದ್ದಕ್ಕೂ ಊಟ, ವಸತಿ, ಸಂಬಳ, ಭತ್ಯೆ, ಟಿಎ, ಡಿಎ, ಆರೋಗ್ಯ ರಕ್ಷಣೆ, ಪಿಂಚಣಿ ಹಾಗು ಕುಟುಂಬ ಪಿಂಚಣಿ ಅಲ್ಲದೆ ಸೇವೆಯ ನಂತರ ಅನೇಕ ಸವಲತ್ತುಗಳನ್ನು ಪಡೆಯುತ್ತಾನೆ. ಇದರಲ್ಲಿ ಸೈನಿಕರಿಗೆ ಸಂತೋಷ ಹಾಗು ತೃಪ್ತಿ ಇರಲಿಲ್ಲವೆ ಅಥವಾ ಅವರಲ್ಲಿ ದೇಶಪ್ರೇಮ ಕಡಿಮೆಯಾಗಿತ್ತೆ ಎಂಬ ಪ್ರಶ್ನೆ ಮೇಲಕ್ಕೆದ್ದು ಬರುತ್ತದೆ. ದೇಶಕ್ಕಾಗಿ ಸೈನ್ಯ ಸೇರುವ ಕನಸು ಹೊಂದಿದ್ದ ಯುವಕರು ಸಾವಿರಾರು ಕೋಚಿಂಗ್ ಸೆಂಟರ್‌ಗಳಲ್ಲಿ ಲಕ್ಷಾಂತರ ಹಣ ನೀಡಿ ತರಬೇತಿ ಪಡೆಯುತ್ತಿದ್ದರು. ಅವರೇನಾದರು, ಅಗ್ನಿಪಥ ಯೋಜನೆ ಬೇಡಿದ್ದರೆ? ವರ್ಷಾನುಗಟ್ಟಲೆ ಹಣ ಖರ್ಚು ಮಾಡಿ ತರಬೇತಿ ಪಡೆಯುತ್ತಿದ್ದ ಯುವಕರು ತಮ್ಮ ಖಾಯಂ ನೌಕರಿಯ ಹಾಗು ಕುಟುಂಬ ರಕ್ಷಣೆ ಅವಕಾಶದ ಕನಸನ್ನು, ಅಗ್ನಿಪಥ ಯೋಜನೆಯ ಮೂಲಕ ಸರ್ಕಾರ ಕಸಿದುಕೊಳ್ಳುತ್ತಿದೆ ಎಂಬ ಹತಾಶೆಯಿಂದ ಆಕ್ರೋಶ ಭರಿತರಾಗಿದ್ದ ಯುವಕರು ಇಂದು ದಿಢೀರನೆ ಹಿಂಸಾತ್ಮಕ ಪ್ರತಿಭಟನೆಗೆ ಇಳಿದಿದ್ದಾರೆ. ಇದಕ್ಕೆ ಬಿಜೆಪಿ-ಆರ್‌ಎಸ್‌ಎಸ್ ನ ಸರ್ಕಾರದ ಖಾಯಂ ನೇಮಕಾತಿ ವಿರೋದಿ ನೀತಿಯೇ ಕಾರಣವಾಗಿದೆ. ಅದಕ್ಕಾಗಿ ಯುವಕರಲ್ಲಿ ಅನಿಶ್ಚಿತ, ಅತಂತ್ರ ಬದುಕಿನ ಆಕ್ರೋಶಕ್ಕೆ ಸಾರ್ವಜನಿಕ ಆಸ್ತಿಪಾಸ್ತಿಗಳು ಗುರಿಯಾಗಿವೆ. ಇದರ ಹೊಣೆಯನ್ನು ಸರ್ಕಾರವೇ ಹೊರಬೇಕಾಗಿದೆ. ಬದಲಾಗಿ ವಿರೋಧ ಪಕ್ಷಗಳ ಮೇಲೆ ಸಮಾಜ ವಿರೋಧಿ, ಗುಂಡಾ ಗರ್ಧಿಗಳ ಮೇಲೆ ಹಾಕುವ ಸರ್ಕಾರಕ್ಕೆ ನಾಚಿಕೆ ಇಲ್ಲದಂತಾಗಿದೆ. ಸೈನ್ಯ ಸೇರಬೇಕೆಂಬ ಆಕಾಂಕ್ಷೆಯ ಯುವಕರು ಇಂದು, ಅವರಿಗೆ ಸಮಾಜದ್ರೋಹಿ ಗುಂಡಾಗಳ ತರಹ ಕಾಣುತ್ತಿದ್ದಾರೆ. ಬಾಬರಿ ಮಸೀದಿ ಒಡೆದವರು, ದಿನನಿತ್ಯ ಇತರೆ ದರ್ಮಗಳ ಪ್ರಾರ್ಥನಾ ಸ್ಥಳ ಒಡೆಯುವ ಬೆದರಿಕೆ ಒಡ್ಡುವವರು ಹಾಗು ಕೈ ಕತ್ತರಿಸಿ, ತಲೆಕತ್ತರಿಸಿ “ದೇಶ ಕಿ ಗದ್ದಾರೋಂಕು – ಗೋಲಿ ಮಾರೊ ಸಾಲೋಂಕೊ” ಎಂದು ರಸ್ತೆಯಲ್ಲಿ ಕೂಗುವವರು. ಗಾಂಧಿಯನ್ನು ಮರುಕೊಂದವರು, ಸಂವಿಧಾನವನ್ನು ಸುಟ್ಟವರು, ಜನರ ಬದುಕಿನ ಹಕ್ಕು ಕಸಿಯುವ ಬೆದರಿಕೆ ಒಡ್ಡುವ ಸಮಾಜದ್ರೋಹಿ ಅಂಧ ಭಕ್ತರು ಇಂದು ದೇಶಭಕ್ತರಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಇಂದು ಅನೇಕ ಪ್ರತಿಭಟನೆಗಳು ಹಿಂಸಾತ್ಮಕ ರೂಪ ತಳೆದಿದ್ದರಿಂದಾಗಿ ರಾಜ್ಯದ ಗೃಹ ಮಂತ್ರಿಗಳು, ಅಗ್ನಿವೀರರನ್ನು ಸೈನ್ಯದ ನಾಲ್ಕು ವರ್ಷಗಳ ಸೇವೆಯ ನಂತರ ಪೊಲೀಸ್ ಇಲಾಖೆಗೆ ಭರ್ತಿ ಮಾಡುವ ಆಸೆ ಮೂಡಿಸಿದ್ದಾರೆ. ದೇಶದ ರಕ್ಷಣಾ ಮಂತ್ರಿಗಳು ತರಬೇತಿ ಪಡೆದವರಲ್ಲಿ ಸುಮಾರು 25% ಅಂದರೆ UP TO 25% ನ್ನು ಖಾಯಂ ಆಗಿ ಮುಂದುವರಿಸುವುದಾಗಿ ಮಾತನಾಡುತ್ತಿದ್ದಾರೆ. ತದ ನಂತರ ಹಣಕಾಸು ಸಚಿವರು ತರಬೇತಿಯ ನಾಲ್ಕು ವರ್ಷಗಳ ನಂತರ, ಅವರಿಗೆ ಸಾರ್ವಜನಿಕ ವಲಯ(ಪಿಎಸ್‌ಯು)ಗಳಲ್ಲಿ ನಡೆಯುವ ನೇಮಕಾತಿಗಳಲ್ಲಿ ಶೇಕಡಾ 10% ರಷ್ಟು ಹುದ್ದೆಗಳನ್ನು ಅಗ್ನಿವೀರರಿಗಾಗಿ ಕಾಯ್ದಿರಿಸುವುದಾಗಿ ಹೇಳಿದ್ದಾರೆ. ಇಡೀ ದೇಶದ ಸಂಪತ್ತು, ನೆಲ, ಜಲ, ಭೂಮಿ, ಸೇವಾ ವಲಯ, ಬ್ಯಾಂಕಿಂಗ್, ವಿಮೆ, ರೇಲ್ವೆ, ದೂರ ಸಂಪರ್ಕ, ಗಣಿ, ತೈಲ, ಡಿಫೆನ್ಸ್ ಉತ್ಪಾದನೆ, ಇಸ್ರೋ ಸಹಿತವಾಗಿ ಎಲ್ಲವನ್ನು ಜಾಗತಿಕ ಬಂಡವಾಳಗಾರರಿಗೆ ಮಾರಿದ ಮೇಲೆ ಯಾವ ಸಾರ್ವಜನಿಕ ವಲಯದಲ್ಲಿ ಇವರಿಗೆ ಕೆಲಸ ಕೊಡಲಾಗುತ್ತದೆ ಎಂಬುದನ್ನು ಸರ್ಕಾರ ತಿಳಿಯಪಡಿಸಬೇಕಾಗಿದೆ. ಇದಾವುದೇ ಹುದ್ದೆಗಳಿರಲಿ, ಅವುಗಳು ಕೂಡ ನಿಶ್ಚಿತ ಪಿಂಚಣಿಯಿಂದ ವಂಚಿತವಾದ ಹುದ್ದೆಗಳಾಗಿವೆ. ಒಟ್ಟಾರೆಯಾಗಿ ಸೈನ್ಯದಲ್ಲಿ ಈಗಿರುವ ನಿಶ್ಚಿತ ಪಿಂಚಣಿ ಯೋಜನೆ ಹಾಗು ಖಾಯಂ ಕೆಲಸವನ್ನು ತೊಡೆದು ಹಾಕುವುದೇ ಇದರ ಮುಖ್ಯ ಗುರಿಯಾಗಿದೆ. ಇದರಿಂದಾಗಿ ಇಂದು ದೇಶದ ಎಲ್ಲ ಕಾರ್ಪೋರೇಟ್ ಕಂಪನಿಗಳ ಮಾಲಿಕರು, ಅಗ್ನಿಪಥ ಯೋಜನೆಯನ್ನು ಬೆಂಬಲಿಸಿದ್ದಾರೆ. ಅಂದರೆ, ಈ ಯೋಜನೆ ಜಾಗತಿಕ ಬಂಡವಾಳಗಾರರಿಗೆ ಬೇಕಾಗಿರುವ ಯೋಜನೆಯಾಗಿದೆ. ಇದರಲ್ಲಿ ಅಗ್ನಿಪಥ ಯೋಜನೆ ಸೇರುವ ಯುವಕರದಾಗಲಿ ಅಥವಾ ದೇಶದ ಹಿತಾಸಕ್ತಿಯಾಗಲಿ ಇಲ್ಲದಿರುವುದು ಸ್ಪಷ್ಟವಾಗಿದೆ.
ದೇಶದ ಯುದ್ಧ ಸಾಮಗ್ರಿ ಗಳನ್ನು, ಯುದ್ಧ ವಿಮಾನಗಳನ್ನು, ಯುದ್ಧ ಹಡಗುಗಳನ್ನು ತಯಾರಿಸುತ್ತಿದ್ದ ಸಾರ್ವಜನಿಕ ಪ್ಯಾಕ್ಟರಿ ಹಾಗು ಸಂಸ್ಥೆಗಳನ್ನು ಒಂದೊಂದಾಗಿ ಮುಚ್ಚಲಾಗುತ್ತಿದೆ, ಲಕ್ಷಾಂತರ ಕೆಲಸಗಾರರನ್ನು, ಉದ್ಯೋಗದಿಂದ ತೆಗೆದುಹಾಕಲಾಗುತ್ತಿದೆ. ಜಾಗತಿಕ ಬಂಡವಾಳಗಾರರ ಕೈಗೆ ಯುದ್ದ ಸಾಮಗ್ರಿಗಳ ಉತ್ಪಾದನೆ ನೀಡಿ ಹಿಂಬಾಗಿಲಿನಲ್ಲಿ ಸಾರ್ವಜನಿಕ ಪ್ಯಾಕ್ಟರಿ, ಅದರ ಆಸ್ತಿಪಾಸ್ತಿಗಳನ್ನು ದೇಶದ ಲೂಟಿಕೋರರಿಗೆ ಮಾರುವ ದಂಧೆ ಇದರಲ್ಲಿ ಅಡಗಿದೆ. ಅಂದರೆ, ಈ ದೇಶದ ಸ್ವಂತದ್ದು ಏನು ಇಲ್ಲದಂತೆ ಮಾಡಿ, ಒಂದು ರೀತಿಯ ಗುಲಾಮಗಿರಿಗೆ ಜನರನ್ನು ದೂಡುವ ಪ್ರಕ್ರಿಯೆ ಇದಾಗಿದೆ. ನಿವೃತ್ತ ಸೈನಿಕನಿಗೆ ಯಾವ ಸವಲತ್ತುಗಳಿಲ್ಲದೆ, ನಿಶ್ಚಿತ ಪಿಂಚಣಿ ನೀಡುವ ಪದ್ದತಿಯನ್ನು ಹಾಗು ಖಾಯಂ ಕೆಲಸಗಳನ್ನು ರದ್ದುಪಡಿಸುವ ಹುನ್ನಾರವೂ ಇದರಲ್ಲಿ ಅಡಗಿದೆ.
ಇದೇ ರೀತಿ, ಇತರೆ ಅನೇಕ ದೇಶಗಳಲ್ಲಿ ಅದರಲ್ಲೂ ಯುರೋಪನಲ್ಲಿ ಇಂತಹ ಪ್ರಕ್ರಿಯೆಗಳು ನಡೆದು, ಅಲ್ಲಿ ಎಲ್ಲರಿಗೂ ನಿಶ್ಚಿತ ಪಿಂಚಣಿ ನೀಡುವ ಪದ್ದತಿಯನ್ನು ಕೈ ಬಿಟ್ಟು, Contributary NPS ನಂತಹ, ಖಾಸಗಿಯವರಿಂದ ಪಿಂಚಣಿ ಪಡೆಯುವ ಅನಿಶ್ಚಿತ ಪಿಂಚಣಿ ಜಾರಿಗೆ ಬರಲು ಕಾರಣವಾಗಿದೆ. ಪಿಂಚಣಿಯನ್ನು ಸರ್ಕಾರದ ಖಜಾನೆಯಿಂದ ನೀಡುವ ಪದ್ದತಿ ಸರಿ ಅಲ್ಲವೆಂತಲೂ ಹಾಗು ಜನಸಾಮಾನ್ಯರ ತೆರಿಗೆ ಹಣದಿಂದ ಪಿಂಚಣಿ ನೀಡುವುದು ತಪ್ಪು ಎಂತಲೂ, ಅಲ್ಲಿ ಪ್ರಚಾರ ನಡೆದಿತ್ತು. ಈಗ ದೇಶದ ಬಿಜೆಪಿ ಅಂಧ ಭಕ್ತರಿಂದ ಅನೇಕ ಸಂದರ್ಭಗಳಲ್ಲಿ, ಶಾಸಕರಿಗೆ ಪಿಂಚಣಿ ನೀಡುವುದು ಸರಿಯಲ್ಲ. 8-10 ವರ್ಷ ಸೇವೆ ಸಲ್ಲಿಸಿ, ನಿವೃತ್ತಿ ಪಡೆದ ಸೈನಿಕನಿಗೆ ಜೀವನ ಪರ್ಯಂತ ಬಹಳ ವರ್ಷಗಳವರೆಗೆ ಪಿಂಚಣಿ ನೀಡುವುದು ಸರ್ಕಾರದ ಖಜಾನೆಗೆ ಭಾರ ಎಂಬ ವ್ಯಾಖ್ಯಾನದ ರೀತಿಯಲ್ಲಿ ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ, ಜನರಿಗೆ ವೃದ್ಧಾಪ್ಯದಲ್ಲಿ ನೀಡುವ ಅನೇಕ ರೀತಿಯ ಪಿಂಚಣಿ ವ್ಯವಸ್ಥೆಯ ವಿರುದ್ಧ ಸುದ್ಧಿ ಹರಡುತ್ತಿದ್ದಾರೆ, ಲೇಖನ ಪ್ರಕಟಿಸಿದ್ದಾರೆ. ಇತ್ತೀಚಿಗೆ ತೆರಿಗೆ ಕಟ್ಟುವವರ ಸಂಘಟನೆಯೊಂದನ್ನು ಗಂಜಿ ಭಕ್ತರು ಹುಟ್ಟು ಹಾಕಿದ್ದಾರೆ. ಅದರ ಕೆಲಸ ಏನೆಂದರೆ, ಸರ್ಕಾರ ಜನರಿಗೆ ನೀಡುವ ಸವಲತ್ತು, ಸಬ್ಸಿಡಿ, ಪರಿಹಾರ, ಪಿಂಚಣಿ ಮುಂತಾದವುಗಳಿಗೆ ಪುಕ್ಸಟ್ಟೆ ಎಂಬ ಹೋಲಿಕೆ ನೀಡಿ ಅವುಗಳನ್ನು ವಿರೋಧಿಸುವ ಕೆಲಸ ಮಾಡುತ್ತದೆ. ಇಂತಹ ಟ್ವೀಟ್ ಮಾಡುವವರು ಅನೇಕ ಬಾರಿ, ಜನರ ತೆರಿಗೆ ಹಣದಲ್ಲಿ ಪಿಂಚಣಿ ನೀಡುವುದು ತಪ್ಪು ಎನ್ನುವಂತೆ ಮಾತನಾಡುತ್ತಾರೆ. ಕೆಲವೊಮ್ಮೆ ನಮ್ಮ ಕಟ್ಟಿದ ತೆರಿಗೆ ಹಣ ಈ ರೀತಿ ದುರುಪಯೋಗವಾಗಬಾರದೆಂತಲೂ ಹಾಗು ತೆರಿಗೆ ಹಣ ಅಭಿವೃದ್ಧಿಗೆ ಮಾತ್ರ ಉಪಯೋಗಿಸಬೇಕೆಂತಲೂ ಮಾತನಾಡುತ್ತಾರೆ. ಇದರಲ್ಲಿ ಸರ್ಕಾರಿ ನಿವೃತ್ತ ನೌಕರರ ನಿಶ್ಚಿತ ಪಿಂಚಣಿಗೂ ಸಂಚಕಾರ ತರುವ ಹುನ್ನಾರ ಇದರಲ್ಲಿ ಅಡಗಿದೆ. ಆದರೆ, ಈ ಪುಕ್ಸಟ್ಟೆ ಗಂಜಿ ಭಕ್ತರ ಬಿಜೆಪಿ ಸರ್ಕಾರ, ಇಂದು ಚುನಾವಣೆ ಗೆಲ್ಲಲು, ಕಾಂಗ್ರೆಸ್ ಗಿಂತಲೂ ಹೆಚ್ಚಿನ ಪುಕ್ಸಟ್ಟೆಗಳನ್ನು ನೀಡುತ್ತಿರುವುದು ವಿಪರ್ಯಾಸವಾಗಿದೆ. ಈಗ ಪಿಂಚಣಿ ಎಂಬುದು ಪಿಂಚಣಿದಾರರ ಹಕ್ಕಿನ ಪ್ರಶ್ನೆಯಾಗಿದ್ದು, ಇದರ ವಿರುದ್ದ ಜನಸಾಮಾನ್ಯರು ಕಟ್ಟುವ ತೆರಿಗೆ ಹಣವನ್ನು ಎತ್ತಿ ಕಟ್ಟುವ ಕ್ರೂರ ಪ್ರಯತ್ನ. ಈ ಕುಂತು ತುಪ್ಪ ತಿನ್ನುವ ಅಂಧ ಭಕ್ತರ ದಂಧೆ ಆಗಿದೆ. ಇದರಿಂದ ನಿವೃತ್ತ ಪಿಂಚಣಿದಾರರ, ಪಿಂಚಣಿ ಕಸಿದು ಅವರ ಇಳಿ ವಯಸ್ಸಿನ ಬದುಕಿನ ಮೇಲೆ ನಡೆಯುವ ಪ್ರಹಾರ ಇಂದು ಎದ್ದುಕಾಣುತ್ತಲಿದೆ. ಈ ಅಂಧ ಭಕ್ತರಿಗೆ ತಿಳಿದಿಲ್ಲ, ತನ್ನ ನಿಶ್ಚಿತ ಪಿಂಚಣಿಗೂ ಸಂಚಕಾರ ಇದರಲ್ಲಿ ಅಡಗಿದೆ ಎಂಬುದು. ನಾವು 2003-04ರಲ್ಲಿ ಹಾಗು ತದನಂತರವೂ ಎನ್‌ಪಿಎಸ್ ವಿರೋಧಿಸುವಾಗ, ಆಗಿನ ಹಾಲಿ ನೌಕರರಲ್ಲಿ ಒಂದು ಎಚ್ಚರಿಕೆಯನ್ನು ನೀಡುತ್ತಿದ್ದೆವು. ನಿಶ್ಚಿತ ಪಿಂಚಣಿ ಪಡೆಯುವ ನೌಕರರನ್ನೂ ಎನ್‌ಪಿಎಸ್ ನ ಪಿಎಫ್‌ಆರ್‌ಡಿಎ ಕಾನೂನಿನ ಅಡಿಯಲ್ಲಿ ತರಬಹುದಾದ ಅವಕಾಶ ಇರುವ ಬಗ್ಗೆ ಎಚ್ಚರಿಕೆಯಿಂದ ಇರಲು ಹೇಳಿದ್ದೆವು. ಅದಕ್ಕಾಗಿ ಎನ್‌ಪಿಎಸ್ ವಿರೋಧಿ ಹೋರಾಟಕ್ಕೆ ಬೆಂಬಲ ನೀಡಲು ಕೋರಿದ್ದೆವು. ಅಂದು ನೌಕರರಿಗೆ ಮುಂದೆ ತಮ್ಮ ಹಕ್ಕಿನ ಪಿಂಚಣಿಯನ್ನೂ ಕಸಿದುಕೊಳ್ಳಲಾಗುತ್ತದೆ ಎಂಬುದನ್ನು ಊಹಿಸಲೂ ಸಾಧ್ಯವಾಗಲಿಲ್ಲ. ಈ ನೈತಿಕ ಹೋರಾಟಕ್ಕೆ ನೌಕರರ ಪ್ರೋತ್ಸಾಹ ಸಿಕ್ಕಲಿಲ್ಲ. ಆದಾಗ್ಯೂ ಇಂದಿಗೂ, ಎನ್‌ಪಿಎಸ್ ರದ್ದಾಗಲಿ, ನಿಶ್ಚಿತ ಪಿಂಚಣಿ ಜಾರಿಯಾಗಲಿ ಎಂಬ ಹೋರಾಟ ಜಾರಿಯಲ್ಲಿದೆ.
ಜಾಗತಿಕ ಹಣಕಾಸು ಬಂಡವಾಳ ಎಂಬುದು ಮಾರುಕಟ್ಟೆಯಲ್ಲಿ ಬಂಡವಾಳಗಾರರು ಜನರ ಹಣದಿಂದ ಜೂಜಾಟ ಆಡಲೂ ಹೇಸುವುದಿಲ್ಲ. ಹಾಗಾಗಿ, ಪಿಂಚಣಿ ಹಣ, ಇಪಿಎಫ್, ಪಿಎಫ್, ವಿಮೆ ಹಣ, ಮ್ಯುಚವಲ್ ಫಂಡ, ಮುಂತಾದ ಜನರ ಹೂಡಿಕೆ, ಉಳಿತಾಯಗಳನ್ನು ಅದು ಗುರಿಯಾಗಿಸುತ್ತದೆ. 2008ರ ಜಾಗತಿಕ ಆರ್ಥಿಕ ಕುಸಿತದಿಂದಾಗಿ(Resession), ಬಂಡವಾಳಗಾರರು ನಡೆಸುವ ಖಾಸಗಿ ವ್ಯವಸ್ಥೆಯ ದೇಶಗಳಾದ ಅಮೆರಿಕಾ, ಲ್ಯಾಟಿನ್ ಅಮೇರಿಕಾ, ಯುರೋಪ ಮುಂತಾದ ದೇಶಗಳಲ್ಲಿ, ಅನೇಕ ಹಣಕಾಸು ಸಂಸ್ಥೆಗಳು ದೀವಾಳಿಗೆದ್ದು ಸಾಮಾನ್ಯ ಜನರು ತಮ್ಮ ಎಲ್ಲ ಉಳಿತಾಯ, ಪಿಂಚಣಿ, ವಿಮೆ, ಎಂಎಫ್ ಮುಂತಾದ ಹೂಡಿಕೆಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದರು. ಆದರೆ, ಭಾರತದಲ್ಲಿ ಸಾರ್ವಜನಿಕ ಸಂಸ್ಥೆಗಳ ಬಲ ಹಾಗು ಅಧೀನದ ಆರ್ಥಿಕ ವ್ಯವಸ್ಥೆಗಳಿಂದಾಗಿ, ಜಾಗತಿಕ ಹಣಕಾಸಿನ ಕುಸಿತದ ಪರಿಣಾಮ ಅಷ್ಟೊಂದು ಕಾಣಬರಲಿಲ್ಲ.
ಆದರೆ, ಇಂದು ದೇಶದ ಎಲ್ಲ ಸಾರ್ವಜನಿಕ ಸಂಪತ್ತನ್ನು, ಗಣಿ, ಭೂಮಿ, ಹಣಕಾಸಿನ ಸಂಸ್ಥೆಗಳನ್ನು, ಸೇವಾ ವಲಯ, ಸಾರ್ವಜನಿಕ ವಲಯ, ಉತ್ಪಾದನಾ ವಲಯ, ವಿಮೆ, ಪಿಂಚಣಿ, ಬ್ಯಾಂಕಿಂಗ್ ಮುಂತಾದವುಗಳನ್ನು ಖಾಸಗೀಕರಿಸಿ ಜಾಗತಿಕ ಬಂಡವಾಳಗಾರರಿಗೆ ಹಾಗು ಖಾಸಗಿ ಕಾರ್ಪೋರೇಟ್‌ಗಳ ಹಿಡಿತಕ್ಕೆ ನೀಡಿರುವುದರಿಂದಾಗಿ ಭಾರತಕ್ಕೆ ಇಂತಹ ಆರ್ಥಿಕ ಕುಸಿತದ ದುಸ್ಥಿತಿಯನ್ನು ಎದುರಿಸುವುದು ಬಹಳ ಕಷ್ಟಸಾಧ್ಯ. ಇಂತಹ ಸಂದರ್ಭದಲ್ಲಿ ಜನಸಾಮಾನ್ಯರು ತಮ್ಮ ಉಳಿತಾಯ, ಪಿಂಚಣಿ, ಹೂಡಿಕೆಗಳನ್ನು ಕಳೆದುಕೊಳ್ಳುವುದು ನಿಶ್ಚಿತ. ಆದಕಾರಣ, ಅಗ್ನಿಪಥದಂತಹ ಯೋಜನೆಗಳ ಅಡಿಯಲ್ಲಿ ಗುತ್ತಿಗೆ, ತಾತ್ಕಾಲಿಕ, ನಿಗದಿತ ಅವಧಿ, ಅತಿಥಿ, ಗೌರವಧನ ಮುಂತಾದ ಶಬ್ಧಗಳನ್ನು ಬಳಸಿ ಯುವಕರನ್ನು ಸರ್ಕಾರವೇ ಶೋಷಣೆಗೆ ತಳ್ಳುವುದು ಸರಿಯಲ್ಲ. ಖಜಾನೆ ಹಣ ಉಳಿತಾಯಕ್ಕೆ ಇಂತಹ ಕಾಂಟ್ರ್ಯಾಕ್ಟ್ ಪದ್ದತಿಯ ಯೋಜನೆಗಳು ಯಾವ ಫಲವನ್ನು ನೀಡಲು ಸಾಧ್ಯವಿಲ್ಲ. ಬದಲಾಗಿ ಸಮಾಜವನ್ನು ಗುಲಾಮಗಿರಿಗೆ ತಳ್ಳಿ, ಅರಾಜಕತೆ ಕಡೆಗೆ ತಿರುಗುವುದಂತು ಖಂಡಿತ. ಗೌರವಯುತ ಬಾಳ್ವೆಗೆ ಖಾಯಂ ಕೆಲಸದ ಭದ್ರತೆ, ಕನಿಷ್ಟ ಜೀವನಾವಶ್ಯಕ ವೇತನ, ಸೇವಾ ಸವಲತ್ತು, ಪಿಂಚಣಿ ಮುಂತಾದವುಗಳನ್ನು ಖಚಿತಪಡಿಸಿದಲ್ಲಿ ಜನರು ದೇಶ ಸೇವೆ ಸಲ್ಲಿಸಲು ಮುಂದಾಗುತ್ತಾರೆ. ದೇಶದ ಅಭಿವೃದ್ಧಿಯಲ್ಲಿ ಇಂತಹ ಖಾಯಂ ಕೆಲಸಗಳು ಜನರಿಗೆ ಉತ್ತಮ ಬದುಕು, ಆರೋಗ್ಯಕರ ಸಮಾಜ ನೀಡಲು ಹಾಗು ಅಭಿವೃದ್ಧಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ.
ಆದರೆ, ಇಂದು ರಾಜ್ಯ ಸರ್ಕಾರದಲ್ಲಿ 2.80 ಲಕ್ಷ ಹುದ್ದೆಗಳು ಹಾಗು ಕೇಂದ್ರ ಸರ್ಕಾರದಲ್ಲಿ ಮತ್ತು ಎಲ್ಲ ರಾಜ್ಯ ಸರ್ಕಾರಗಳಲ್ಲಿ ಒಟ್ಟು ಕನಿಷ್ಟ 68 ಲಕ್ಷ ಹುದ್ದೆಗಳು ಖಾಲಿ ಇವೆ. ಸರ್ಕಾರಗಳು ಈ ಖಾಯಂ ಹುದ್ದೆಗಳನ್ನು ತುಂಬುವುದಿರಲಿ, ಇಂದು ಹಾಲಿ ಇರುವ ಹುದ್ದೆಗಳನ್ನೂ, ಆಡಳಿತ ಸುಧಾರಣೆ ಹಾಗು ಆಡಳಿತದಲ್ಲಿ ವೆಚ್ಚ ಕಡಿತ, down sizeing, right sizeing, e-Office ಮುಂತಾದ ನೆಪದಲ್ಲಿ ಹುದ್ದೆಗಳ ಕಡಿತ, ಸರ್ಕಾರಿ ಸೇವೆಗಳ ಹಾಗು ಕಚೇರಿಗಳ ಖಾಸಗೀಕರಣಕ್ಕೆ ಹುನ್ನಾರ ಹಾಕಲಾಗಿದೆ. ಇದು ಸಾರ್ವಜನಿಕ ಶಿಕ್ಷಣ, ಆರೋಗ್ಯ ಇಲಾಖೆ ಸಹಿತವಾಗಿ, ಇಡೀ ಸರ್ಕಾರಿ ವ್ಯವಸ್ಥೆಯನ್ನೆ ಖಾಸಗೀಕರಣ ವ್ಯವಸ್ಥೆಗೆ ತಳ್ಳಿ ಗುತ್ತಿಗೆ-ಅರೆಗುತ್ತಿಗೆ, ಅತಿಥಿ, ಗೌರವಧನ ಪಡೆಯುವ ನೌಕರರ ಸಂಖ್ಯೆಯನ್ನು ಹೆಚ್ಚಿಸಿ, ಶೋಷಣೆಗೆ ಗುರಿಯಾಗಿಸುತ್ತದೆ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ ಪ್ರಧಾನ ಮಂತ್ರಿಗಳ 8 ವರ್ಷದ ಆಡಳಿತದ ನಂತರ, ತಮ್ಮ ಅವಧಿಯಲ್ಲಿ ಹತ್ತಾರು ಕೋಟಿ ಉದ್ಯೋಗಗಳು ನಷ್ಟವಾಗಿ, ನಿರುದ್ಯೋಗವು 40 ವರ್ಷದ ಹಿಂದಿನಷ್ಟು ಕೆಳಗೆ ಬಿದ್ದಿದೆ. ಈಗ ಪ್ರಧಾನ ಮಂತ್ರಿಗಳು ಮುಂದಿನ ದಿನಗಳಲ್ಲಿ 10 ಲಕ್ಷ ಹುದ್ದೆಗಳನ್ನು ಸೃಜಿಸುವುದಾಗಿ ಇಂದು ಹೇಳಿಕೆ ನೀಡಿ, ನಿರುದ್ಯೋಗಿ ಯುವಕರನ್ನು ಮೂರ್ಖರನ್ನಾಗಿಸುತ್ತಿರುವುದು ಇಂದು ಹಾಸ್ಯಾಸ್ಪದವಾಗಿದೆ.
ಆದಕಾರಣ, ನಮ್ಮ ಹಾಗು ನಮ್ಮ ಮುಂದಿನ ಪೀಳಿಗೆಯ ಸೇವಾ ಭದ್ರತೆಗಾಗಿ, ನಿಶ್ಚಿತ ಪಿಂಚಣಿ ಉಳಿಸಿಕೊಳ್ಳಲು, ಸಾರ್ವಜನಿಕ ವಲಯಗಳ ಹಾಗು ಸರ್ಕಾರಿ ಸೇವೆಗಳ ಖಾಸಗೀಕರಣ ತಡೆಯಲು ಗುತ್ತಿಗೆ ನೌಕರರ ಶೋಷಣೆ ತಡೆಯಲು ಹಾಗು ಸರ್ಕಾರದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡುವ ಬೇಡಿಕೆ ಈಡೇರಿಸಿಕೊಳ್ಳಲು ದೇಶದಲ್ಲಿನ ನೌಕರರ ಎಲ್ಲ ಸಂಘಟಿತ ಹಾಗು ಅಸಂಘಟಿತ ನೌಕರರ ಸಂಘಟನೆಗಳ ಒಗ್ಗಟ್ಟಿನಿಂದ ಹೋರಾಟದ ಹಾದಿ ಹಿಡಿಯುವುದು ಇಂದು ಅನಿವಾರ್ಯವಾಗಿದೆ.
Sir,
From the age of 17 years to 21 yrs children mind are still to be set, in such situation if they are in a training and education and come out at 21 and take IAS, IPS exams, other govt. Exams, they are still eligible for all other exams at that age, we will have very strong and confident youngsters in all fields, from age 17 to 21 students in todays world are falling prey to mbl and bad habits. Assumptions on what may happen is imagination, what will definitely happen is important. Definitely all future. Young minds in other departments will bemore sincere and strong youths. This is needed for the country now. Let us not keep finding faults on every move of govt. Eventhough we are benefitted we try to cover it by showing anger.