ಪ್ರೊ. ರಾಜೇಂದ್ರ ಚೆನ್ನಿ
ಅಗ್ನಿಪಥ ಯೋಜನೆಯ ವಿವರಗಳನ್ನು ನೋಡಿದರೆ ಈ ಯೋಜನೆಯ ಒಳಗಿರುವ ಕರಾಳ ದುಷ್ಟತನ ಅರಿವಾಗುತ್ತದೆ. ಅನೇಕ ದುಷ್ಟ ಮಿದುಳುಗಳು ಶ್ರಮವಹಿಸಿ ಈ ಯೋಜನೆಯನ್ನು ಸಿದ್ಧಪಡಿಸಿವೆ. ಈ ಯೋಜನೆಯ ವಿರುದ್ಧ ಪ್ರತಿಭಟನೆ ಮತ್ತು ಆಕ್ರೋಶಗಳು ನೈಜವಾಗಿದ್ದವು ಮತ್ತು ಸಹಜವಾಗಿದ್ದವು. ಇದರ ಇನ್ನೊಂದು ಕರಾಳ ಮುಖವೆಂದರೆ 4 ವರ್ಷ ಆಯುಧ ಬಳಕೆ ಇತ್ಯಾದಿ ತರಬೇತಿ ಪಡೆದು (ಜೊತೆಗೆ ಸೈದ್ಧಾಂತಿಕ ತರಬೇತಿ ಪಡೆದು) ಹೊರಬರುವ ಯುವಕರು ಕೋಮು ಹಿಂಸೆಯಲ್ಲಿ ಕೋಮುವೀರರಾಗುವ ಸಾಧ್ಯತೆ ಇದೆ.
ಅಗ್ನಿಪಥ ಮತ್ತು ಅಗ್ನಿ ವೀರರನ್ನು ಕುರಿತು ದೇಶದ ಅನೇಕ ಭಾಗಗಳಲ್ಲಿ ಬೆಂಕಿ ಹತ್ತಿ ಉರಿದಿದೆ ಅಕ್ಷರಶಃ. ಎಂದಿನಂತೆ ನಿರೀಕ್ಷಿತವಾದ ರೀತಿಯಲ್ಲಿ ಈ ಪ್ರತಿಭಟನೆಯು ರಾಜಕೀಯ ಪಿತೂರಿ, ನೆರೆ ರಾಷ್ಟ್ರದ ಸಂಚು, “ಒಳಗಿನ ಶತ್ರುಗಳ ಸಂಚು” ಎನ್ನುವ ವಿವರಣೆಗಳು ಸರಕಾರದಿಂದ ಹಾಗೂ ಆಡಳಿತ ಪಕ್ಷದಿಂದ ಬಂದಿವೆ. ಅಲ್ಲದೆ ಪ್ರತಿಭಟನಾಕಾರರು ಹಿಂಸೆಗೆ ಇಳಿದಿದ್ದರಿಂದ ಅವರನ್ನು ದ್ರೋಹಿಗಳೆಂದು ಕರೆಯಲಾಗಿದೆ. ಆದರೆ ಅವರ ಮೇಲೆ ಯುಎಪಿಎ ಇತ್ಯಾದಿ ಉಗ್ರಕ್ರಮಗಳನ್ನು ಕೈಗೊಳ್ಳಲಾಗಿಲ್ಲ. ಹಾಗೂ ಜೆಸಿಬಿಗಳನ್ನು ಅವರ ಮನೆಗಳನ್ನು ಉರುಳಿಸಲು ಕಳಿಸಲಾಗಿಲ್ಲ. ಕಾರಣ ಬಹಳ ಸರಳವಾಗಿದೆ. ಅವರು ಮುಸ್ಲಿಮರು ಅಲ್ಲ ಮತ್ತು ಈ ಪ್ರಕರಣದಲ್ಲಿ ಧಾರ್ಮಿಕವಾದ ಅಂಶಗಳಿಲ್ಲ. ಮುಖ್ಯವಾಗಿ ಈ ದೇಶದ ಪಡ್ಡೆಗಳು ಹಾಗೂ ಯುವಕರು ಮಾನ್ಯ ಪ್ರಧಾನ ಮಂತ್ರಿಗಳಾದ ಮೋದಿಯವರ ಪರವಾಗಿರುವುದರಿಂದ ಇಂಥ ಶಾಶ್ವತ ವೋಟ್ ಬ್ಯಾಂಕನ್ನು ಕಳೆದುಕೊಳ್ಳಲಾಗುವುದಿಲ್ಲ. ಅದೇ ಹೊತ್ತಿಗೆ ಪೊಲೀಸರ ಬಲಪ್ರಯೋಗದಿಂದ ಪ್ರತಿಭಟನೆಯನ್ನು ತಗ್ಗಿಸಲಾಗಿದೆ. ಅಲ್ಲದೆ ಪೊಲೀಸ್ ಠಾಣೆಯಲ್ಲಿ ಅಪರಾಧವೆಂದು ದಾಖಲೆಯಾದರೆ ಇನ್ನೆಂದೂ ಸೈನ್ಯಕ್ಕೆ ಸೇರಿಸಿಕೊಳ್ಳಲಾಗುವುದಿಲ್ಲವೆಂದು ಸೇನಾ ಅಧಿಕಾರಿಗಳಿಂದಲೇ ಹೇಳಿಸಲಾಗಿದೆ. ಪ್ರತಿಭಟನೆಯು ಹಿಂಸೆಗೆ ಇಳಿದದ್ದು ಯಾವ ದೃಷ್ಟಿಯಿಂದಲೂ ಸರಿಯಲ್ಲ; ಸಮರ್ಥನೀಯವಲ್ಲ. ಅದರಲ್ಲೂ ಸಾರ್ವಜನಿಕ ಆಸ್ತಿಯನ್ನು ನಾಶ ಮಾಡಿದ್ದು ಕ್ಷಮಿಸಲಾಗದ ತಪ್ಪುನಡೆ. ಅದೇ ಹೊತ್ತಿಗೆ ಅಗ್ನಪಥ ಯೋಚನೆಯ ಹಿಂದೆ ಇರುವ ಕರಾಳವಾದ ಅಪಾಯಕಾರಿಯಾದ ಚಿಂತನೆ ಹಾಗೂ ಸಿದ್ಧಾಂತಗಳು ಈ ಹಿಂಸೆಗಿಂತಲೂ ಭೀಕರವಾಗಿವೆ.
ಈ ಯೋಜನೆಯ ವಿರುದ್ಧ ಪ್ರತಿಭಟನೆ ಮತ್ತು ಆಕ್ರೋಶಗಳು ನೈಜವಾಗಿದ್ದವು ಮತ್ತು ಸಹಜವಾಗಿದ್ದವು ಎಂದು ಸರಕಾರವು ಯೋಚಿಸಿದ್ದರೆ ಸದ್ಯದ ಅನೇಕ ವಾಸ್ತವಗಳು ಅದಕ್ಕೆ ಅರ್ಥವಾಗುತ್ತಿದ್ದವು. ನಿರಂತರವಾಗಿ ಹೆಚ್ಚುತ್ತಿರುವ ನಿರುದ್ಯೋಗ, ಕೋವಿಡ್ ಕಾಲದ ಕಾರ್ಮಿಕರ ವಲಸೆ, ಸಾವು ನೋವು, ಸರಕಾರದ ಅನೇಕ ಕಾರ್ಯಗಳು ದೇಶದ ಯುವಜನತೆಯಲ್ಲಿ ಅದೆಷ್ಟು ನಿರಾಸೆ ಹಾಗೂ ಅಸಮಾಧಾನ ಹುಟ್ಟಿಸಿವೆ ಎನ್ನುವುದನ್ನು ಅರ್ಥಮಾಡಿಕೊಳ್ಳಬಹುದಿತ್ತು. ಹಾಗೆಯೇ ಕರ್ನಾಟಕ ರಾಜ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉದ್ಯೋಗಗಳಿಗೆ ಆಯ್ಕೆಯಲ್ಲಿ ನಡೆಯುತ್ತಿರುವ ಭ್ರಷ್ಠಾಚಾರದ ವಿರುದ್ಧವೂ ಯುವಜನತೆ ತುಂಬಾ ಅಸಮಾಧಾನದಲ್ಲಿದೆ. ಇದಕ್ಕೆ ಯಾವ ಪಕ್ಷ ಅಥವಾ ಸಿದ್ಧಾಂತದ ಒಳಸಂಚೂ ಕಾರಣವಲ್ಲ. ಅಸ್ತಿತ್ವದ ಸ್ಥಿತಿಗಳು ಅಷ್ಟು ಭಯಾನಕವಾಗಿರುತ್ತವೆ. ಬದುಕೂ ಇಲ್ಲ, ಭವಿಷ್ಯವೂ ಇಲ್ಲವೆನ್ನುವ ಸ್ಥಿತಿ ಯುವಜನರಿಗೆ ಬರಬಾರದು. ಬಂದರೆ ಅದು ಅಸಹನೀಯವಾಗುತ್ತದೆ. ಅವರಲ್ಲಿ ಬಹುಪಾಲು ಜನ ಕೋಮುವಾದದ ಭ್ರಮಾತ್ಮಕ ರಾಜಕೀಯದಲ್ಲಿ ಕಳೆದು ಹೋಗಿರಬಹುದು. ಇನ್ನೊಂದು ಬಗೆಯ ಹಿಂಸೆಯಲ್ಲಿ ತೊಡಗಿರಬಹುದು. ಆದರೆ ಮೂಲತಃ ಅವರು ನಾಳೆಗಳೇ ಇಲ್ಲದೆ ಇಂದು ದುಡಿದು ಉಣ್ಣಲಾಗದ ಅವಮಾನದಲ್ಲಿ ಬೇಯುವಂಥ ಜೀವಗಳು. ಇಂಥ ಸ್ಥಿತಿಯಲ್ಲಿ ದಿಢೀರನೆ ಸೈನ್ಯದಲ್ಲಿ ಖಾಯಂ ಉದ್ಯೋಗವೇ ಇಲ್ಲವೆನ್ನುವ ಯೋಜನೆಯನ್ನು ಜಾರಿಗೆ ತಂದರೆ ಅವರ ಮನಸ್ಥಿತಿಯು ಹೇಗಿರಬೇಡ? ಇಲ್ಲದಿದ್ದರೆ ಮೋದಿಯವರ ಗಾರುಡಿಯಲ್ಲಿರುವ ಸೂತ್ರದ ಬೊಂಬೆಗಳು ಎನ್ನುವ ಯುವಕರು ಯಾಕೆ ಯಾರ ಮಾತನ್ನೂ ಕೇಳುತ್ತಿಲ್ಲ? ಸಾಮಾಜಿಕ ತಾಣಗಳಲ್ಲಿ ಅವರ ವಿಡಿಯೋಗಳನ್ನು ನೋಡಿರಿ. ಅವರ ಮಾತುಗಳ ಹಿಂದಿರುವ ರೋಷವನ್ನು ಗಮನಿಸಿ. ಯಾವ ಹೊತ್ತಿಗಾದರೂ ಸಿಡಿಯುವ ಜ್ವಾಲಾಮುಖಿಯಂತೆ ಆಗಿದ್ದಾರೆ ಇವರೆಲ್ಲ.
ಅವರ ಸಂಶಯಗಳು ಸಕಾರಣವಾಗಿವೆ. ಮೊದಲನೇಯದಾಗಿ 40,000 ಉದ್ಯೋಗಗಳನ್ನು, ಹುದ್ದೆಗಳನ್ನು ಹೀಗೆ 4 ವರ್ಷದ ತಾತ್ಕಾಲಿಕ ಯೋಜನೆಯಲ್ಲಿ ಭರ್ತಿ ಮಾಡುತ್ತಾ ಹೋದರೆ ಖಾಯಂ ಸೇನಾ ಭರ್ತಿ ನಿಂತೇ ಹೋಗುತ್ತದೆ. ಅಂದರೆ ಅವಶ್ಯಕತೆ ಇದ್ದರೂ ಸರಕಾರವು ಖಾಯಂ ನೇಮಕ ಮಾಡಿಕೊಳ್ಳುವುದಿಲ್ಲ. ಸೇನೆಯೆಂದರೆ ಬರಿ ಉದ್ಯೋಗವಲ್ಲ, ಅದು ಯುವಕರಿಗೆ ಒಂದು ಅಂತಸ್ತು, ಸಾಮಾಜಿಕ ಗೌರವ ಇವೆಲ್ಲವನ್ನೂ ಅದು ತರುತ್ತದೆ. ಹೀಗಾಗಿಯೇ ಅದೊಂದು ಸಾರ್ಥಕತೆ ತರುವ ವಿಷಯವಾಗಿದೆ. ಕರ್ನಾಟಕದ ವಿಜಯಪುರ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದ ಹಳ್ಳಿಗಳ ಬಡಕುಟುಂಬದ ಹಿಂದುಳಿದ ಜಾತಿಗಳ ಯುವಕರೇ ಬಹುಸಂಖ್ಯೆಯಲ್ಲಿ ಸಾಮಾನ್ಯ ಸೈನಿಕರಾಗಿ ಭರ್ತಿಯಾಗುತ್ತಾರೆ. ಒಮ್ಮೆ ಸೈನ್ಯ ಸೇರಿದರೆ ಅದು ಬಹು ಮುಖ್ಯ ಸಾಮಾಜಿಕ ಚಲನೆಯನ್ನು ತರುತ್ತದೆ. ಏಕೆಂದರೆ ಜಾತಿ, ವರ್ಗ ಇವುಗಳನ್ನು ಮೀರಿದ ಸೈನಿಕ, ಸೈನಿಕ ಮಾತ್ರನಾಗಿರುತ್ತಾನೆ. ಅಲ್ಲದೆ ಭಾರತೀಯ ಸಮಾಜದಲ್ಲಿ ಸೈನಿಕರನ್ನುಆರಾಧಿಸಲಾಗುತ್ತದೆ. ಆದರೆ 4 ವರ್ಷದಲ್ಲಿ ಮಾಜಿ ಆಗಿ ಹೊರಬರುವ ಯುವಕರಿಗೆ ಇದಾವುದೂ ಲಭ್ಯವಾಗುವುದಿಲ್ಲ. 18 ವರ್ಷಕ್ಕೆ ಈ ಯೋಜನೆ ಸೇರಿ 22ಕ್ಕೆ ‘ಮಾಜಿ’ಯಾಗಿ ವಾಪಸ್ಸು ಬರುವ ಯುವಕರ ಪಾಡು ಏನಾಗುತ್ತದೆ ಎಂದು ಯಾರಾದರೂ ಊಹಿಸಬಹುದು. ಡೆಕ್ಕನ್ ಹೆರಾಲ್ಡ್ (21/6/2022) ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ಅಗ್ನಿಪಥ ಯೋಜನೆಯ ವಿವರಗಳು ಪ್ರಕಟವಾಗಿವೆ. ಇವುಗಳನ್ನು ನೋಡಿದರೆ ಈ ಯೋಜನೆಯ ಒಳಗಿರುವ ಕರಾಳ ದುಷ್ಟತನ ಅರಿವಾಗುತ್ತದೆ.
- 4 ವರ್ಷದ ನಂತರ 11 ರಿಂದ 12 ಲಕ್ಷ ಮೊತ್ತವನ್ನು ಕೊಡಲಾಗುವುದು ಎಂದು ಹೇಳಲಾಗಿದೆ. ನಿಜವೆಂದರೆ ಈ ಯೋಜನೆಯಲ್ಲಿ ಸೇರುವವರಿಗೆ ನಿಗದಿಯಾದ ಸಂಬಳ (consolidated pay) ವಾಗಿರುವ 30, 36 ಸಾವಿರಗಳಲ್ಲಿಯೇ ಶೇಕಡಾ 30% ಕಡಿತ ಮಾಡಿ ಆ ದುಡ್ಡನ್ನು 4 ವರ್ಷದ ನಂತರ ಕೊಡಲಾಗುತ್ತದೆ. 40,000 ಯುವ ಸೈನಿಕರ ಪ್ರತಿ ತಿಂಗಳ 36,000 ಸಾವಿರ ಸಂಬಳದ 40% ಅಂದರೆ ಎಷ್ಟು? ಇದನ್ನು ಖಂಡಿತವಾಗಿ ಅದಾನಿ, ಅಂಬಾನಿ ಮುಂತಾದ savings/insurance ಮಾದರಿಯ ಅಥವಾ ಠೇವಣಿ ಮಾದರಿಯ ಸ್ಕೀಮ್‌ಗಳಲ್ಲಿ ಸರಕಾರವು ಕಡ್ಡಾಯವಾಗಿ ಹೂಡುತ್ತದೆ. ಇಂಥ ಬಂಡವಾಳಶಾಹಿಗಳಿಗೆ 4 ವರ್ಷಗಳಲ್ಲಿ ಕ್ರಮೇಣವಾಗಿ ಲಭ್ಯವಾಗುವ ಹಣವನ್ನು ಲೆಕ್ಕಹಾಕಿ. ಒಬ್ಬ ಪ್ರತಿಭಟನಾಕಾರ ಹೇಳಿದ ಹಾಗೆ ‘ನಾವು ದುಡಿದದ್ದರಲ್ಲಿ ಕಡಿತ ಮಾಡಿ 4 ವರ್ಷದ ನಂತರ ನಮಗೆ ಕೊಡುತ್ತಾರೆ. ಇದರಲ್ಲಿ ಸರಕಾರದ ಉದಾರತೆ ಏನು ಬಂತು?’
- ಈ 4 ವರ್ಷಗಳಲ್ಲಿ ಅವರಿಗೆ ತುಟ್ಟಿಭತ್ಯೆ ಇರುವುದಿಲ್ಲ, ಮಿಲಿಟರಿ ಸೇವಾ ಸಂಬಳ, ಗ್ಯಾಚ್ಯುಇಟಿ, ಪಿಂಚಣಿ ಯಾವುದು ಇರುವುದಿಲ್ಲ.
- ಈಗ ಮಾಜಿ ಸೈನಿಕರಿಗೆ ಕೊಡಲಾಗುವ ಆರೋಗ್ಯ ಸ್ಕೀಮ್, ಕ್ಯಾಂಟೀನ್ ಸ್ಟೋರ್ ಸೌಲಭ್ಯ ಯಾವುದೂ ಇರುವುದಿಲ್ಲ. ಅವರನ್ನು ex-servicemen ಎಂದು ಪರಿಗಣಿಸಲಾಗುವುದಿಲ್ಲ.
- ಗಮನಿಸಿ. 4 ವರ್ಷದ ನಂತರ ಕೊಡಲಾಗುವ ತೆರಿಗೆ ರಹಿತ ಸೇವಾನಿಧಿಯ ಮೊತ್ತ 10.04 ಲಕ್ಷ ಗಳಾದರೆ ಅದರಲ್ಲಿ ಅವರ ಸಂಬಳದಿಂದ ಕಡಿತ ಮಾಡಿರುವ 5.2 ಲಕ್ಷ ರೂಪಾಯಿ ಇರುತ್ತದೆ.
- ಒಂದು ವೇಳೆ 4 ವರ್ಷಗಳ ನಂತರ ಅವರು ಸೇನೆಗೆ ಖಾಯಂ ಆಗಿ ಭರ್ತಿ ಆದರೆ ಈ ನಿಧಿಯಲ್ಲಿ ಸರಕಾರದ ಪಾಲಾಗಿರುವ 5.2 ಲಕ್ಷ ಕೊಡಲಾಗುವುದಿಲ್ಲ!
ಹೇಗಿದೆ ಯೋಜನೆ? ಅನೇಕ ದುಷ್ಟ ಮಿದುಳುಗಳು ಶ್ರಮವಹಿಸಿ ಈ ಯೋಜನೆಯನ್ನು ಸಿದ್ಧಪಡಿಸಿವೆ.
ಇದರ ಇನ್ನೊಂದು ಕರಾಳ ಮುಖವೆಂದರೆ 4 ವರ್ಷ ಆಯುಧ ಬಳಕೆ ಇತ್ಯಾದಿ ತರಬೇತಿ ಪಡೆದು (ಜೊತೆಗೆ ಸೈದ್ಧಾಂತಿಕ ತರಬೇತಿ ಪಡೆದು) ಹೊರಬರುವ ಯುವಕರು ಕೋಮು ಹಿಂಸೆಯಲ್ಲಿ ಕೋಮುವೀರರಾಗುವ ಸಾಧ್ಯತೆ ಇದೆ. ಈ ಉದ್ದೇಶವಿರುವುದನ್ನು ಕರ್ನಾಟಕ ಸರಕಾರದ ವೈದ್ಯಕೀಯ ಶಿಕ್ಷಣ ಮಂತ್ರಿಗಳು ತಮ್ಮ ಹೇಳಿಕೆಯಲ್ಲಿ ಬಹಿರಂಗಪಡಿಸಿದ್ದಾರೆ. “ಯಾಕೆ ಆರೆಸ್ಸೆಸ್‌ನ ಯುವಕರು ಈ ಯೋಜನೆಯಲ್ಲಿ ಸೇರಬಾರದು” ಎಂದು ಪ್ರಶ್ನೆ ಮಾಡಿದ್ದಾರೆ. ಅದರ ಅರ್ಥವೆಂದರೆ ನಾವು ಅವರನ್ನೇ ಆಯ್ಕೆ ಮಾಡಿ ಈ ಯೋಜನೆಗೆ ಸೇರಿಸುತ್ತೇವೆ ಎಂದು. ಇನ್ನು ಈ ಯೋಜನೆಯ ತರಬೇತಿ ಯಾವುದಕ್ಕಾಗಿ ಎನ್ನುವುದನ್ನು ಬಿ.ಜೆ.ಪಿಯ ಕೇಂದ್ರ ಸರಕಾರದ ಒಬ್ಬ ಮಂತ್ರಿ ಮತ್ತು ರಾಷ್ಟ್ರೀಯ ಕಾರ್ಯದರ್ಶಿ ಇವರು ಬಹಳ ಸ್ಪಷ್ಟವಾಗಿ ತಿಳಿಸಿದ್ದಾರೆ. ಒಬ್ಬರ ಪ್ರಕಾರ ಈ ತರಬೇತಿಯಿಂದ ಯುವಕರು ಇಲೆಕ್ಟ್ರಿಶಿಯನ್, ಕ್ಷೌರಿಕರು ಇತ್ಯಾದಿ ಆಗುತ್ತಾರೆ! ಇನ್ನೊಬ್ಬನ ಪ್ರಕಾರ ಅವರು ಸೆಕ್ಯುರಿಟಿ ಅಥವಾ ಕಾವಲುಗಾರರಾಗಿ ಬಿ.ಜೆ.ಪಿ., ಆರ್.ಎಸ್.ಎಸ್. ಕಚೇರಿಗಳಲ್ಲಿ ಕೆಲಸ ಮಾಡಬಹುದು! ಇವು ಒಬ್ಬ ಮಂತ್ರಿ, ಒಬ್ಬ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಹೇಳಿರುವ ಅಧಿಕೃತ ಮಾತುಗಳು. ಇದು ಸಾಕಲ್ಲವೆ? ಕೊನೆಯದಾಗಿ 4 ವರ್ಷದ ನಂತರ ಹೊರಬಂದವರಿಗೆ ನಮ್ಮ ಉದ್ದಿಮೆಗಳಲ್ಲಿ ಉದ್ಯೋಗ ನೀಡುತ್ತೇವೆ ಎಂದು ಅನೇಕ ಉದ್ಯಮಪತಿಗಳು ಮುಂದೆ ಬಂದಿದ್ದಾರೆ. ಈಗಲೇ ಇರುವ ಮಾಜಿ ಸೈನಿಕರಿಗೆ ಇವರುಗಳು ನೀಡಿರುವ ಅವಕಾಶಗಳ ಅಂಕಿಸಂಖ್ಯೆ ನೋಡಿರಿ! ಕಳೆದು ಹೋದ ಉದ್ಯೋಗಗಳ ಸಂಖ್ಯೆ ನೋಡಿರಿ. ಖಂಡಿತವಾಗಿ ನೀವು ಪ್ರಜ್ಞೆ ತಪ್ಪುವುದು ಗ್ಯಾರಂಟಿ. ಉತ್ತರ ಕುಮಾರರ ಹಾಗೆ ಮಾತನಾಡುವವರನ್ನು fire eaters ಅನ್ನುತ್ತಾರೆ. ಇದೇ ಅಗ್ನಿಪಥ ದರಹಸ್ಯ.