ನವ ಉದಾರವಾದಿ ನೀತಿಗಳಿಂದ ನೊಂದ ಖಾಸಗಿ ಸಾರಿಗೆ ನೌಕರರು ಮತ್ತು ಬೆಂಗಳೂರು ಬಂದ್

-ಸಿ.ಸಿದ್ದಯ್ಯ

ಸರ್ಕಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಕೊಡುತ್ತಿರುವಂತೆ, ಖಾಸಗೀ ಬಸ್ಸುಗಳಿಗೂ ಕೊಡಬೇಕು ಎಂಬ ಖಾಸಗಿ ಬಸ್ಸುಗಳ ಮಾಲೀಕರ ಬೇಡಿಕೆಯ ವಿಷಯವನ್ನೇ ಮುಂದಿಟ್ಟುಕೊಂಡು ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ‘ಶಕ್ತಿ ಯೋಜನೆ’ಯ ಸುತ್ತಲೇ ಮಾಧ್ಯಮಗಳು ಚರ್ಚಿಸಿದವು, ಖಾಸಗಿ ಸಾರಿಗೆ ವಲಯದ ಕಾರ್ಮಿಕರ ಇತರೆ ಬೇಡಿಕೆಗಳನ್ನು ಬೇಕಂತಲೇ ಮುಚ್ಚಿಟ್ಟರು. ನವ-ಉದಾರವಾದಿ ಧೋರಣೆಗಳ ಭಾಗವಾಗಿ ಸಾರಿಗೆ ರಂಗದಲ್ಲಿ ಬಂದಿರುವ ಹಲವು ಕ್ರಮಗಳು ಖಾಸಗಿ ಸಾರಿಗೆ ನೌಕರರು ಮತ್ತು ಸ್ವ-ಉದ್ಯೋಗಿಗಳ ಬವಣೆಗಳನ್ನು ಹೆಚ್ಚಿಸಿವೆ. ಆದ್ದರಿಂದಲೇ ಖಾಸಗಿ ಸಾರಿಗೆ ವಾಹನಗಳ ಚಾಲಕರು ಮತ್ತು ಮಾಲೀಕರ ಸಂಘಟನೆಗಳ ‘ಬೆಂಗಳೂರು ಬಂದ್’ ಕರೆಗೆ ಓಗೊಟ್ಟು ಪ್ರತಿಭಟನೆಗೆ ಇವರೂ ಬೆಂಬಲ ನೀಡಿದರು. ಅವರ ಬೇಡಿಕೆಗಳೇನು?-ಅವುಗಳತ್ತ ಒಂದು ನೋಟ.

ಬಹುದಿನಗಳ ನಂತರ, ಕಳೆದ ವಾರ ‘ಬೆಂಗಳೂರು ಬಂದ್’ ಹೆಸರಿನಲ್ಲಿ ಪ್ರತಿಭಟನೆಯೊಂದು ನಡೆಯಿತು. ಎಡ ಸಂಘಟನೆಗಳ ನೇತೃತ್ವದಲ್ಲಿ ನಡೆಯುವ ಕಾರ್ಮಿಕರ ಪ್ರತಿಭಟನೆಗಳನ್ನು ನಕಾರಾತ್ಮಕವಾಗಿ ಪ್ರಚಾರ ಮಾಡುವ ಅಥವಾ ಪ್ರಚಾರವನ್ನೇ ಕೊಡದ ಮಾಧ್ಯಮಗಳು, ಈ ಪ್ರತಿಭಟನೆಗೆ ವ್ಯಾಪಕ ಪ್ರಚಾರ ಕೊಟ್ಟಿದ್ದವು ಎಂಬುದನ್ನು ಗಮನಿಸಿದಾದ, ಈ ಪ್ರತಿಭಟನೆಯ ಹಿಂದೆ ಯಾರಿದ್ದಾರೆ ಎಂದು ತಿಳಿಯಲು ಕಷ್ಟವಾಗದೇನೋ. ಇದರಲ್ಲಿ ಖಾಸಗಿ ಬಸ್ಸುಗಳ ಮಾಲೀಕರೂ ಕೈಜೋಡಿಸಿದ್ದಾರೆ ಮತ್ತು ಅವರೇ ನೇತೃತ್ವ ನಿಡಿದ್ದಾರೆ ಎಂಬುದನ್ನೂ ಗಮನಿಸಬೇಕು. ಸರ್ಕಾರಿ ಸ್ವಾಮ್ಯದ ರಸ್ತೆ ಸಾರಿಗೆ ಸಂಸ್ಥೆಯೊಳಗೆ ಮೂಲಕ, ಖಾಸಗಿಯವರ ಪ್ರಾಬಲ್ಯ ಹೆಚ್ಚಿಸಲು ಬಯಸಿದ್ದಾರೆ ಎಂಬುದು ಖಾಸಗಿ ಬಸ್ಸು ಮಾಲೀಕರ ಸಂಘದ ಬೇಡಿಕೆಗಳಿಂದ ತಿಳಿಯುತ್ತದೆ. ಅದೇನೇ ಇರಲಿ, ಕೇಂದ್ರ ಮತ್ತು ಸರ್ಕಾರಗಳ ನವ ಉದಾರವಾದಿ ನೀತಿಗಳಿಂದ ನೊಂದ ಖಾಸಗಿ ಸಾರಿಗೆ ವಲಯದ ಕಾರ್ಮಿಕರು ಬಹುತೇಕ ಒಟ್ಟಾಗಿ ಪ್ರತಿಭಟನೆಯ ಭಾಗವಾಗಿದ್ದರು ಎಂಬುದನ್ನು ನಾವಿಲ್ಲಿ ಗಮನಿಸಬೇಕು.

ಖಾಸಗಿ ಬಸ್ಸುಗಳಿಗೂ ‘ಶಕ್ತಿ ಯೋಜನೆ’ ಅನುಷ್ಠಾನಗಳಿಸಬೇಕು, ಶಕ್ತಿ ಯೋಜನೆಯ ಮೂಲಕ ಸರ್ಕಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಕೊಡುತ್ತಿರುವಂತೆ, ಖಾಸಗೀ ಬಸ್ಸುಗಳಿಗೂ ಕೊಡಬೇಕು ಎಂಬುದು ಖಾಸಗಿ ಬಸ್ಸುಗಳ ಮಾಲೀಕರ ಬೇಡಿಕೆಯಾಗಿದೆ. ಈ ವಿಷಯವನ್ನೇ ಮುಂದಿಟ್ಟುಕೊಂಡು ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ‘ಶಕ್ತಿ ಯೋಜನೆ’ ಯ ಸುತ್ತಲೇ ಮಾಧ್ಯಮಗಳು ಚರ್ಚಿಸಿದವು. ಸರ್ಕಾರದ ಶಕ್ತಿ ಯೋಜನೆಯಿಂದಾಗಿ  ಖಾಸಗಿ ಸಾರಿಗೆ ನಷ್ಟಕ್ಕೆ ಸಿಲುಕಿದೆ, ಈ ಯೋಜನೆಯಿಂದಾಗಿ ಖಾಸಗಿ ಬಸ್ಸುಗಳು, ಟ್ಯಾಕ್ಸಿ ಮತ್ತು ಆಟೋ ಚಾಲಕರು ಮತ್ತು ಮಾಲೀಕರು ಆದಾಯ ಕಳೆದುಕೊಂಡಿದ್ದಾರೆ ಎಂದು ಹೇಳುವ ಮೂಲಕ, ಖಾಸಗಿ ಸಾರಿಗೆ ವಲಯದ ಕಾರ್ಮಿಕರ ಇತರೆ ಬೇಡಿಕೆಗಳನ್ನು ಬೇಕಂತಲೇ ಮುಚ್ಚಿಟ್ಟರು. ಇದರ ಜೊತೆಗೆ ‘ಮಹಿಳೆಯರಿಗೆ ನಾವೂ ಉಚಿತ ಟಿಕೆಟ್ ಕೊಡುತ್ತೇವೆ, ನಮಗೂ ಪರಿಹಾರ ಕೊಡಿ’ ಎಂಬ ಖಾಸಗಿ ಬಸ್ಸುಗಳ ಮಾಲೀಕರ ಬೇಡಿಕೆಗಳಿಗೆ ಹೆಚ್ಚು ಪ್ರಚಾರ ಕೊಟ್ಟರು.

ಕುಸಿದ ಆದಾಯ: ಹೊರೆಯಾದ ಬದುಕು ;

ವಾಹನಗಳ ಮೇಲಿನ ತೆರಿಗೆ ವಿಪರೀತವಾಗಿ ಹೆಚ್ಚಳವಾಗಿದೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ವಿಧಿಸುವ ದಂಡದ ಪ್ರಮಾಣ ಹೆಚ್ಚಾಗಿದೆ. ಪೆಟ್ರೋಲ್, ಡೀಸಲ್, ಅನಿಲ ಇವುಗಳ ಬೆಲೆ ವಿಪರೀತ ಎಂಬಂತೆ ಹೆಚ್ಚಳವಾಗಿದೆ. ಆಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಶಿಕ್ಷಣ ಮತ್ತು ಆರೋಗ್ಯ ಸೇವೆ ದುಬಾರಿಯಾಗಿದೆ. ಒಲಾ, ಉಬರ್, ರೆಪಿಡೋ, ಪೋರ್ಟರ್, ಇಂತಹ ಕಂಪನಿಗಳು ಸಾರಿಗೆ ವಲಯವನ್ನು ಏಕಸ್ವಾಮ್ಯ ಮಾಡಿಕೊಳ್ಳುವ ಪ್ರಯತ್ನದಿಂದ ಆಟೋ, ಟ್ಯಾಕ್ಸಿ ಮತ್ತು ಸರಕು ಸಾಗಣೆ ವಾಹನಗಳ ಮಾಲೀಕರು ಮತ್ತು ಚಾಲಕರ ಆದಾಯ ಕುಸಿದಿದೆ. ಇದರಿಂದ ಖಾಸಗಿ ಸಾರಿಗೆ ಚಾಲಕರು ಮತ್ತು ಮಾಲೀಕರು ಮತ್ತವರ ಕುಟುಂಬಗಳು ಬಹಳಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಪರಿಣಾಮವೇ, ಕಳೆದ ವಾರ (ಸೆಪ್ಟೆಂಬರ್ 11ರಂದು) ಖಾಸಗಿ ಸಾರಿಗೆ ವಾಹನಗಳ ಚಾಲಕರು ಮತ್ತು ಮಾಲೀಕರ ಸಂಘಟನೆಗಳ ‘ಬೆಂಗಳೂರು ಬಂದ್’ ಕರೆಗೆ ಓಗೊಟ್ಟು ಪ್ರತಿಭಟನೆಗೆ ಇವರೆಲ್ಲರೂ ಬೆಂಬಲ ನೀಡಿದರು. ಇವರಿಗೆ ತಮ್ಮ ಸಮಸ್ಯೆ ಬಗೆಹರಿಯುವುದು ಮುಖ್ಯವಾಗಿತ್ತೇ ವಿನಃ, ಯಾವ ಸಂಘಟನೆಯವರು ಹೋರಾಟಕ್ಕೆ ಕರೆ ಕೊಟ್ಟಿದ್ದಾರೆ, ಯಾರು ನೇತೃತ್ವ ಕೊಟ್ಟಿದ್ದಾರೆ, ಅವರ ನಿಜ ಉದ್ದೇಶವೇನು ಎಂಬುದು ಮುಖ್ಯವಾಗಲಿಲ್ಲ ಎಂಬುದು ಬೇರೆ ಮಾತು.

ಈ ಎಲ್ಲಾ ಅಸಂಘಟಿತ ಕಾರ್ಮಿಕರ, ಸ್ವ ಉದ್ಯೋಗಿಗಳ ನಿಜವಾದ ಸಮಸ್ಯೆಗಳ ಕುರಿತು ಚರ್ಚಿಸಲು ಮಾಧ್ಯಮಗಳು ಮುಂದಾಗಬೇಕಿತ್ತು. ಆದರೆ, ಮಾಧ್ಯಮಗಳ ಉದ್ದೇಶ ಮತ್ತು ಪ್ರತಿಭಟನೆಗೆ ನೇತೃತ್ವ ವಹಿಸಿದವರ ಅಜೆಂಡಾಗಳೇ ಬೇರೆಯಾಗಿತ್ತು. ಇದರಲ್ಲಿ ಸಾರಿಗೆ ಬಸ್ಸುಗಳ ಕಾರ್ಯಾಚರಣೆಯಲ್ಲಿ ಖಾಸಗಿಯವರ ಪ್ರಾಬಲ್ಯ ಹೆಚ್ಚಿಸುವ ಮತ್ತು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳನ್ನು ನಿಧಾನವಾಗಿ ಖಾಸಗಿಯವರು ಕಬಳಿಸುವ  ಗುರಿಯನ್ನು ಕಾಣಬಹುದು.

ಖಾಸಗಿ ಬಸ್ಸುಗಳ ಮಾಲೀಕರ ‘ಖಾಸಗಿ ಬಸ್ಸುಗಳಿಗೂ ಶಕ್ತಿ ಯೋಜನೆ ಜಾರಿ ಅಥವಾ ರಸ್ತೆ ತೆರಿಗೆ ಸಂಫೂರ್ಣ ರದ್ದು’ ಬೇಡಿಕೆ ಕುರಿತು ಆಗಸ್ಟ್ 21, 2023ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಸಾರಿಗೆ ಇಲಾಖೆಯ ಮಾಹಿತಿಯಿಂದ ತಿಳಿದುಬಂದಿದೆ.

ಖಾಸಗೀಕರಣ ಏಕಸ್ವಾಮ್ಯದತ್ತ ಸಾರಿಗೆ ವಲಯ ;

ಒಕ್ಕೂಟ ಸರ್ಕಾರ ತನ್ನ ನವ ಉದಾರವಾದಿ ನೀತಿಗಳಿಗೆ ಅನುಸಾರವಾಗಿ ಸಾರಿಗೆ ಸೇವಾ ವಲಯದಲ್ಲಿ  ಸ್ವದೇಶಿ ಮತ್ತು ವಿದೇಶಿ ಹೂಡಿಕೆದಾರರಿಗೆ ಮುಕ್ತ ಅವಕಾಶ ಕೊಟ್ಟಿದೆ. ಭಾರತದಲ್ಲಿ ಚಿಲ್ಲರೆ ವ್ಯಾಪಾರ ಸೇರಿದಂತೆ ಇತರೆ ವಲಯಗಳಲ್ಲಿ ಅವಕಾಶ ಕೊಟ್ಟಂತೆ ಸಾರಿಗೆ ಸೇವಾ ವಲಯದಲ್ಲಿಯೂ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕೊಟ್ಟಿದೆ. ಈ ವಲಯದಲ್ಲಿ ಹೂಡಿಕೆದಾರರು ಸಾವಿರಾರು ಕೋಟಿ ಬಂಡವಾಳ ಹೂಡಿಕೆ ಮಾಡಿದ್ದಾರೆ ಮತ್ತು ಇನ್ನಷ್ಟು ಹೂಡಿಕೆ ಮಾಡತೊಡಗಿದ್ದಾರೆ. ಇಡೀ ಸಾರಿಗೆ ವಲಯವನ್ನು ಏಕಸ್ವಾಮ್ಯ ಮಾಡಿಕೊಳ್ಳುವ ಗುರಿಯತ್ತ ದಾಪುಗಾಲಿಡತೊಡಗಿದ್ದಾರೆ. ಇವರ ವೇಗ ಮತ್ತು ಸರ್ಕಾರದ ನವ ಉದಾರವಾದಿ ನೀತಿಗಳು, ಅದರ ಭಾಗವಾಗಿ ಖಾಸಗೀಕರಣ ನೀತಿಗಳ ಜಾರಿಯ ವೇಗ ನೋಡಿದರೆ, ಸರ್ಕಾರಿ ಬಸ್ಸುಗಳನ್ನು ಒಳಗೊಂಡು ಎಲ್ಲವನ್ನೂ ಏಕಸ್ವಾಮ್ಯ ಮಾಡಿಕೊಳ್ಳುವ ಕಾಲ ದೂರವಿಲ್ಲ. ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಖಾಸಗಿ ಮಾಲೀಕತ್ವದ ಎಲೆಕ್ಟ್ರಿಕ್ ಬಸ್ಸುಗಳಿಗೆ ಅವಕಾಶ ಕೊಟ್ಟಿರುವುದನ್ನು ಮತ್ತು ಈಗ ಖಾಸಗಿ ಬಸ್ಸು ಮಾಲೀಕರು ಇಟ್ಟಿರುವ ಒಂದು ಬೇಡಿಕೆ (ತಮಿಳುನಾಡು ಮಾದರಿಯಲ್ಲಿ ಖಾಸಗಿಯವರಿಗೆ ಉತ್ತೇಜನ ನೀಡಲು 60:40
ಅನುಪಾತದ ಅಡಿಯಲ್ಲಿ ಅನುವು ಮಾಡಿಕೊಡಬೇಕು) ಇವುಗಳನ್ನು ಮತ್ತು ಸರ್ಕಾರ ಈ ಬೇಡಿಕೆಯನ್ನು ಪರಿಶೀಲಿಸುವುದಾಗಿ ನೀಡಿರುವ ಭರವಸೆಯನ್ನು ಈ ಹಿನ್ನಲೆಯಲ್ಲಿ ನೋಡಬೇಕು.

ಇದನ್ನೂ ಓದಿ:ಗುಡಿಸಲಿನ ಹೊರಗೆ ಮಲಗಿದ್ದವರ ಮೇಲೆ ಟೆಂಪೂ ಹರಿದು ತಾಯಿ,ಮಗು ಸಾವು

ಒಲಾ, ಉಬರ್, ರ್ಯಾಪಿಡೋ ನಂತಹ ವಿದೇಶಿ ಮತ್ತು ಸ್ವದೇಶೀ ಹಣಕಾಸು ಬಂಡವಾಳ ಹೊಂದಿರುವ ಅಗ್ರಿಗೇಟರ್ ಕಂಪನಿಗಳು ಈಗಾಗಲೇ ಟ್ಯಾಕ್ಸಿ ಮತ್ತು ಆಟೋ ಚಾಲಕರ ವೃತ್ತಿಯ ಮೇಲೆ ಕೆಟ್ಟ ಪರಿಣಾಮ ಬೀರಿವೆ. ಟ್ಯಾಕ್ಸಿ ವಲಯವನ್ನು ಬಹುತೇಕ ಏಕಸ್ವಾಮ್ಯ ಮಾಡಿಕೊಂಡಿರುವ ಈ ಕಂಪನಿಗಳು ಈಗ ಆಟೋ ಸೇವೆಯನ್ನು ಸಂಪೂರ್ಣ ತನ್ನದಾಗಿಸಿಕೊಳ್ಳುವ ಪ್ರಯತ್ನದಲ್ಲಿ ದಾಪುಗಾಲಿಟ್ಟಿವೆ. ನಮ್ಮದೇ ಬ್ಯಾಂಕುಗಳಿಂದ ಸಾಲ ಪಡೆದು ಟ್ಯಾಕ್ಸಿ ಮತ್ತು ಎಲೆಕ್ಟ್ರಿಕ್ ಆಟೋರಿಕ್ಷಾಗಳನ್ನು ಖರೀದಿ ಮಾಡುವ ಮೂಲಕ, ಚಾಲಕರನ್ನು ನೇಮಕ ಮಾಡಿಕೊಂಡು, ಸೇವೆಯಲ್ಲಿ ತೊಡಗಿಕೊಂಡಿವೆ. ಈ ಸಂಸ್ಥೆಗಳು ಚಾಲಕರಿಗೆ ಪ್ರಾರಂಭದಲ್ಲಿ ಆಕರ್ಷಕ ವೇತನ ಕೊಡುವುದಾಗಿ ಜಾಹಿರಾತು ಮಾಡುತ್ತಿದ್ದರೂ, ಇಡೀ ಟ್ಯಾಕ್ಸಿ ಮತ್ತು ಆಟೋ ಸೇವಾ ವಲಯದಲ್ಲಿ ಸಂಪೂರ್ಣ ಏಕಸ್ವಾಮ್ಯ ಸಾಧಿಸಿದ ನಂತರ ಬಂಡವಾಳಗಾರರು ತಮ್ಮ ನಿಜ ರೂಪ ತೋರಿಸುತ್ತಾರೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಇದಕ್ಕೆ ಇಂದಿನ ಕನಿಷ್ಟ ವೇತನಕ್ಕೆ ದುಡಿಸಿಕೊಳ್ಳುತ್ತಿರುವ ಖಾಸಗಿ ಉದ್ಯಮಗಳೇ ಸಾಕ್ಷಿ.

ಇಂತಹ ಆನ್‌ಲೈನ್ ಕಂಪನಿಗಳಿಗೆ ಇ-ಆಟೋರಿಕ್ಷಾಗಳ ನೇರ ನೋಂದಣಿ ಮಾಡುವುದನ್ನು ನಿಷೇಧಿಸಬೇಕು ಎಂಬುದು ಆಟೋರಿಕ್ಷಾ ಚಾಲಕರ ಬೇಡಿಕೆಯಾಗಿದೆ. ಚಾಲನಾ ಪರವಾನಗಿ ಹೊಂದಿರುವವರಿಗೆ ಮಾತ್ರ ನೋಂದಣಿ ಮಾಡುವುದಾಗಿ ಸಾರಿಗೆ ಇಲಾಖೆ ಹೇಳಿದೆಯಾದರೂ, ಈ ನಿಯಮ ಎಷ್ಟರ ಮಟ್ಟಿಗೆ ಜಾರಿಯಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಇದನ್ನು ನಂಬಲಾಗದಿದ್ದರೂ ಇದೇ ಸತ್ಯ. ಸಾರ್ವಜನಿಕ ಸಾರಿಗೆ ಸೇವೆಯಲ್ಲಿ ತೊಡಗಿಸಿಕೊಳ್ಳುವ ವಾಹನಗಳಿಗೆ ಆಯಾ ರಾಜ್ಯಗಳ ಸಾರಿಗೆ ಇಲಾಖೆಯಿಂದ ರಹದಾರಿ ಪಡೆಯಬೇಕು ಎಂಬ ನಿಯಮವಿದೆ. ಆದರೆ, ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ಆಟೋರಿಕ್ಷಾಗಳಿಗೆ ರಹದಾರಿ ಪಡೆಯುವದರಿಂದ ವಿನಾಯ್ತಿ ನೀಡಿದೆ ಬ್ಯಾಟರಿ ಚಾಲಿತ ವಾಹನ, ಮೆಥನಾಲ್ ಮತ್ತು ಎಥನಾಲ್ ಇಂಧನದಿಂದ ಚಲಿಸುವ ವಾಹನಗಳಿಗೆ ರಹದಾರಿ  ಪಡೆಯುವುದರಿಂದ ವಿನಾಯಿತಿ ನೀಡಿ ಅಕ್ಟೋಬರ್  2018 ರಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.

ಇ- ಆಟೋರಿಕ್ಷಾಗಳಿಗೆ ರಹದಾರಿ ಕೊಡಬೇಕು ಎಂಬ ಆಟೋ ಚಾಲಕರ ಬೇಡಿಕೆಗೆ ರಾಜ್ಯ ಸರ್ಕಾರ ಕೇಂದ್ರದ ಕಡೆ ಬೆರಳು ತೋರಿಸುತ್ತದೆ. ರಾಜ್ಯದ ಸಾರಿಗೆ ವ್ಯವಸ್ಥೆಯಲ್ಲಿ ವಾಹನಗಳು ಸಂಚರಿಸುವ ಪ್ರದೇಶ/ಮಾರ್ಗ ನಿಯಂತ್ರಣಕ್ಕೆ ರಹದಾರಿಯ ಅವಶ್ಯಕತೆಯಿದ್ದು, ಈ ವಾಹನಗಳಿಗೆ ರಹದಾರಿಯನ್ನು ಪುನಃ ಕಡ್ಡಾಯ ಮಾಡುವ ಬಗ್ಗೆ ಮರುಪರಿಶೀಲಿಸಲು ಈ ವಿಷಯದಲ್ಲಿ ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಮಂತ್ರಾಲಯಕ್ಕೆ ಪತ್ರ ಬರೆಯಾಗಿದೆ ಎಂದು ಸಾರಿಗೆ ಇಲಾಖೆ ಹೇಳಿದೆ. ಅಂದರೆ ರಾಜ್ಯಗಳ ಅಧಿಕಾರವನ್ನು ಕೇಂದ್ರ ಸರ್ಕಾರ ಕಸಿದುಕೊಂಡಿದೆ.

ನೆಲದ ನಿಯಮಗಳಿಗೆ ಬೆಲೆಯಿಲ್ಲ :

ಮುಕ್ತ ಆರ್ಥಿಕ ನೀತಿ ಎಂದರೆ ಹೂಡಿಕೆದಾರರಿಗೆ ನಮ್ಮ ನೆಲದ ನಿಯಮಗಳಿಂದಲೂ ಮುಕ್ತವೇ ಎಂಬ ಪ್ರಶ್ನೆ ಮೂಡುತ್ತದೆ. ಏಕೆಂದರೆ, ಒಲಾ, ಉಬರ್, ರೆಪಿಡೋ ನಂತಹ ಕಂಪನಿಗಳು ನಮ್ಮ ಸಾರಿಗೆ ನಿಯಮಗಳನ್ನು ರಾಜಾರೋಷವಾಗಿ ಉಲ್ಲಂಘಿಸತೊಡಗಿವೆ. ಈ ಎಲ್ಲಾ ಸಂಸ್ಥೆಗಳೂ ಅನಧಿಕೃತವಾಗಿ, ಸಾರಿಗೆ ನಿಯಮಗಳಿಗೆ ವಿರುದ್ದವಾಗಿ ಖಾಸಗಿ ಬೈಕ್‌ಗಳನ್ನು ‘ಬೈಕ್ ಟ್ಯಾಕ್ಸಿ’ ಸೇವೆಯಲ್ಲಿ ತೊಡಗಿಸಿಕೊಂಡಿವೆ. ಮೊದಲಿಗೆ ರ್ಯಾಪಡೋ ಸಂಸ್ಥೆ ಬೈಕ್ ಟ್ಯಾಕ್ಸಿ ಸೇವೆ ಮಾಡಲು ಪ್ರಾರಂಭಿಸಿದಾಗ ಆಟೋ ಚಾಲಕರು ಸಿಡಿದೆದ್ದರು. ಚಾಲಕರು ಹಲವು ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ನಮ್ಮ ಸಾರಿಗೆ ಇಲಾಖೆ ಈ ಸಂಸ್ಥೆ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಮುಂದಾದರೂ, ಅದು ನೊಂದ ಆಟೋ ಚಾಲಕರ ಕಣ್ಣೊರೆಸುವ ತಂತ್ರ ಎಂದು ನಂತರ  ತಿಳಿಯಿತು. ರ್ಯಾಪಿಡೋ ತನ್ನ ಬೈಕ್ ಟ್ಯಾಕ್ಸಿ ಸೇವೆಯನ್ನು ಮುಂದುವರಿಸಿದೆ.

ಈ ಹೋರಾಟದ ಬೇಡಿಕೆಗಳಲ್ಲಿ ಅನಧಿಕೃತ ಬೈಕ್ ಟ್ಯಾಕ್ಸಿ ನಿಷೇದಿಸಬೇಕೆಂಬ ಬೇಡಿಕೆಯೂ ಇದೆ. ಅನಧಿಕೃತ ಬೈಕ್ ಟ್ಯಾಕ್ಸಿ ನಿಷೇದಕ್ಕೆ ಸಂಬಂಧಿಸಿದಂತೆ ರೆಪಿಡೋ ಕಂಪನಿ ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿದೆ. ತಡೆಯಾಜ್ಞೆ ತೆರವುಗೊಳಿಸುವ ಪ್ರಯತ್ನ ಮಾಡಲಾಗಿದೆ ಎಂದು ಸಾರಿಗೆ ಇಲಾಖೆ ಹೇಳುತ್ತದೆ. ಅಲ್ಲಿಗೆ ಆಟೋ ಚಾಲಕರ ಮತ್ತೊಂದು ಬೇಡಿಕೆ ನೆನೆಗುದಿಗೆ ಬಿದ್ದಂತಾಗಿದೆ.

ಹೂಡಿಕೆದಾರರ ಪರವಾದ ಕೇಂದ್ರ ಸರ್ಕಾರದ ಮುಕ್ತ ಆರ್ಥಿಕ ನೀತಿಗಳಿಂದಾಗಿ, ತನ್ನ ಕಣ್ಣೆದುರೇ ನಿಯಮಗಳ ಉಲ್ಲಂಘನೆ ನಡೆಯುತ್ತಿದ್ದರೂ, ರಾಜ್ಯ ಸರ್ಕಾರ ಮತ್ತು ಸಾರಿಗೆ ಇಲಾಖೆ ಏನೂ ಮಾಡಲಾಗದೆ ಕೈ ಕಟ್ಟಿ ಕುಳಿತಿವೆ. ಓಲಾ, ಉಬರ್ ನಂತಹ ಆನ್‌ಲೈನ್ ಕಂಪನಿಗಳು ಸಾರಿಗೆ ಇಲಾಖೆ ನಿಗದಿಪಡಿಸಿರುವಂತೆ ಟ್ಯಾಕ್ಸಿ ಮತ್ತು ಆಟೋ ಪ್ರಯಾಣ ದರ ನಿಗದಿ ಮಾಡುತ್ತಿಲ್ಲ. ಚಾಲಕರಿಂದ ಅಧಿಕ  ಕಮಿಷನ್ ಪಡೆಯುತ್ತಿವೆ. ಪ್ರಯಾಣಿಕರಿಗೆ ದಿನದ ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ದರ ನಿಗಧಿ ಮಾಡಿ ಸುಲಿಗೆ ಮಾಡತೊಡಗಿವೆ. ಇದರ ಬಗ್ಗೆ ಚಾಲಕರು ನೀಡಿದ ದೂರಿನಂತೆ ಈ ಕಂಪನಿಗಳಿಗೆ ನೋಟೀಸ್ ಕೊಟ್ಟರೆ, ಕಂಪನಿಗಳು ಇದನ್ನು ಪ್ರಶ್ನಿಸಿ ಕೋರ್ಟಿಗೆ ಹೋಗುತ್ತಾರೆ. ಅಗ್ರಿಗೇಟರ್ ಕಂಪನಿಗಳನ್ನು ನಿಯಂತ್ರಣ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ, ಇದು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದು ಎಂದು ಅಗ್ರಿಗೇಟರ್ ಕಂಪನಿಗಳ ಪರವಾದ ವಕೀಲರು ವಾದಿಸುತ್ತಾರೆ.

ಈ ಕಂಪನಿಗಳು ಶೇ. 5ಕ್ಕಿಂತ ಹೆಚ್ಚು ಕಮಿಷನ್ ಪಡೆಯದಂತೆ ನಿರ್ಭಂದ ಹೇರಬೇಕು ಎಂಬುದು ಆಟೋ ಮತ್ತು ಟ್ಯಾಕ್ಸಿ ಚಾಲಕರ ಬೇಡಿಕೆ. ಆದರೆ, ಇದಕ್ಕೆ ಸಂಬಂಧಿಸಿ ಅಗ್ರಿಗೇಟರ್ ಕಂಪನಿಗಳು ಹೈಕೋರ್ಟ್ ಮೊರೆ ಹೋಗಿವೆ. ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ ಎಂದು ಸಾರಿಗೆ ಇಲಾಖೆ ಹೇಳಿದೆ.

ಈ ಕಂಪನಿಗಳು ಕಾನೂನುಬಾಹಿರ ಪ್ರಯಾಣದರ ನಿಗಧಿ ಮಾಡುವುದನ್ನು ತಡೆಗಟ್ಟಬೇಕು ಎಂಬ ಬೇಡಿಕೆಗೆ ಸಂಬಂಧಿಸಿಯೂ ಸಾರಿಗೆ ಇಲಾಖೆ ನ್ಯಾಯಾಲಯದಲ್ಲಿರುವ ರಿಟ್ ಅಪೀಲ್ ಕಡೆ ಬೆರಳು ತೋರಿಸುತ್ತಿದೆ.

ಆಟೋ ಚಾಲಕರ ಬೇಡಿಕೆಗಳು

ಸಂಘಟನೆಗಳ ಬೇಡಿಕೆಗಳ ಪಟ್ಟಿಯಲ್ಲಿ ಆಟೋ ಚಾಲಕರಿಗೆ ಮಾಸಿಕ 10 ಸಾವಿರ ಧನಸಹಾಯ ನೀಡಬೇಕು ಎಂಬ ಬೇಡಿಕೆಯೂ ಇದೆ. ಸಾರಿಗೆ ಇಲಾಖೆಯ ಸಾರಥಿ ದತ್ತಾಂಶದಲ್ಲಿ ರಾಜ್ಯದಲ್ಲಿ ಒಟ್ಟು 3,64,192 ಆಟೋಚಾಲಕರಿದ್ದು, ಈ ಸಹಾಯಧನ ನೀಡಲು ವಾರ್ಷಿಕ ರೂ. 4370 ಕೋಟಿ ಅನುದಾನ ಬೇಕಾಗುತ್ತದೆ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ. ಆದರೆ, ಸರ್ಕಾರ ಈ ಸಂಬಂಧ ಯಾವುದೇ ಭರವಸೆ ನೀಡಿಲ್ಲ.  ಓಲಾ, ಉಬರ್ ಕಂಪನಿಗಳು ಪ್ರಯಾಣಿಕರಿಂದ ದೂರು ಬಂದಿದೆ ಎಂಬ ಕಾರಣ ನೀಡಿ ಟ್ಯಾಕ್ಸಿಗಳನ್ನು ಬ್ಲಾಕ್‌ಲಿಸ್ಟ್ ಮಾಡತೊಡಗಿವೆ. ಇದರಿಂದ ಪ್ರಯಾಣಿಕರು ಸಿಗದೆ ಚಾಲಕರು ಸಂಕಷ್ಟಕ್ಕೆ ಸಿಲುತ್ತಾರೆ. ಕಂಪನಿಗಳ ಇಂತಹ ನಡೆಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂಬುದು ಟ್ಯಾಕ್ಸಿ ಚಾಲಕರ ಬೇಡಿಕೆ.

ಈ ಬೇಡಿಕೆಗೆ ಉತ್ತರಿಸಿರುವ ಸಾರಿಗೆ ಇಲಾಖೆ ಸಂಬಂಧಪಟ್ಟ ಕಂಪನಿಗಳೊಂದಿಗೆ ಚರ್ಚಿಸಿದ ನಂತರ ಕ್ರಮ ಕೈಗೊಳ್ಳುತ್ತಾರಂತೆ. ಖಾಸಗಿ ಕಂಪನಿಗಳ ಶೋಷಣೆಯಿಂದ ಆಟೋ ಮತ್ತು ಟ್ಯಾಕ್ಸಿ ಚಾಲಕರು ಮತ್ತು ಪ್ರಯಾಣಿಕರನ್ನು ಪಾರುಮಾಡಲು ರಾಜ್ಯ ಸರ್ಕಾರದ ವತಿಯಿಂದ ಅಗ್ರಿಗೇಟರ್  ಆಪ್‌ ಮಾಡಬೇಕೆಂಬ ಬೇಡಿಕೆ ಒಪ್ಪಿಕೊಂಡಿರುವ ಸರ್ಕಾರ, ಇದಕ್ಕೆ  6 ತಿಂಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಹೇಳಿದೆ.

ಆಟೋ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಮತ್ತು ಸರಕು ಸೇವಾ ವಾಹನಗಳ ಚಾಲಕರು, ವಾಹನಗಳ ದುರಸ್ತಿಯಲ್ಲಿ ತೊಡಗಿಕೊಂಡಿರುವ ಕಾರ್ಮಿಕರು, ಹೆಲ್ಪರ್‌ಗಳೂ ಸೇರಿದಂತೆ ಖಾಸಗಿ ಸಾರಿಗೆ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ರಚನೆ ಮಾಡಬೇಕು, ಇದರ ಮೂಲಕ ಕುಟುಂಬದ ಆರೋಗ್ಯ, ಮಕ್ಕಳ ಮಕ್ಕಳ ಶಿಕ್ಷಣ, ಮದುವೆ ಧನಸಹಾಯ, ಮರಣ ಪರಿಹಾರ ಇತರೆ ಕಲ್ಯಾಣ ಕಾರ್ಯಕ್ರಮಗಳನ್ನು ಒದಗಿಸಬೇಕು ಎಂಬುದು ಹಲವು ದಿನಗಳ ಬೇಡಿಕೆಯಾಗಿದೆ. ವಾಹನಗಳ ಖರೀದಿಯಿಂದ ಹಿಡಿದು, ಅವುಗಳ ಜೀವಿತಾವಧಿಯವರೆಗೂ ರಸ್ತೆ ತೆರಿಗೆ, ಮಾರಾಟ ತೆರಿಗೆ, ಬಿಡಿ ಭಾಗಗಳ ಖರೀದಿಯ ಮೇಲೆ ತೆರಿಗೆ, ಪೆಟ್ರೋಲಿಯಂ ಪದಾರ್ಥಗಳ ಬೆಲೆಯ ಅರ್ದದಷ್ಟು ತೆರಿಗೆ, ಇವೆಲ್ಲದರ ಜೊತೆಗೆ ಇವರ ಕುಟುಂಬಗಳು ತಮ್ಮ ಅಗತ್ಯಗಳಿಗಾಗಿ ಕೊಳ್ಳುವ ವಸ್ತುಗಳ ಮೇಲಿನ ಮತ್ತು ತಾವು ಪಡೆಯುವ ಸೇವೆಗಳ ಮೇಲೆ ತೆರಿಗೆ… ಸಾರಿಗೆ ವಲಯದ ಕಾರ್ಮಿಕರು ಮತ್ತು ಅವರ ಕುಟುಂಬದಿಂದ ಸರ್ಕಾರಕ್ಕೆ ಇಷ್ಟೆಲ್ಲಾ ಆದಾಯ ಇದ್ದರೂ ಸಹಾ, ಇವರಿಗೆ ಸಾಮಾಜಿಕ ಭದ್ರತಾ ವ್ಯವಸ್ಥೆ ಎಂಬುದಿಲ್ಲ.

ಈ ಕಾರಣದಿಂದಾಗಿಯೇ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಇರುವಂತೆ ಖಾಸಗೀ ಸಾರಿಗೆ ನೌಕರರಿಗೂ ಕಲ್ಯಾಣ ಮಂಡಳಿಯ ಅವಶ್ಯಕತೆ ಇದೆ. ಈ ಕಲ್ಯಾಣ ಮಂಡಳಿಗೆ ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ ಅಗತ್ಯವಾದಷ್ಟು ಹಣ ತೆಗೆದಿರಿಸಬೇಕು. ಇದು ಚಾಲಕರ ಬೇಡಿಕೆ. ಆದರೆ, ಇತ್ತೀಚೆಗೆ ನಡೆದ ಪ್ರತಿಭಟನೆಯ ಬೇಡಿಕೆಗಳ ಪಟ್ಟಿಯಲ್ಲಿ ‘ಕಲ್ಯಾಣ ಮಂಡಳಿ’ ಬದಲಾಗಿ ‘ಅಸಂಘಟಿತ ವಾಣಿಜ್ಯ ಚಾಲಕರ ಮತ್ತು ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ’ ಎಂಬ ಬೇಡಿಕೆ ಇಡಲಾಗಿದೆ. ಈ ಸಂಬಂಧ 2024ರ ಮಾರ್ಚ್ ಒಳಗೆ ಜಾರಿಗೆ ತರಲು ಕ್ರಮಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದೆ.

ಕೇಂದ್ರ ಸರ್ಕಾರದ ನವ ಉದಾರವಾದಿ ನೀತಿಗಳು, ಈ ನೀತಿಗಳನ್ನೇ ಅನುಸರಿಸುತ್ತಿರುವ ರಾಜ್ಯ ಸರ್ಕಾರ, ಇದರಿಂದ ಜನರು ಸಾಕಷ್ಟು ಸಂಕಷ್ಟಗಳಿಗೆ ಸಿಲುಕಿದ್ದಾರೆ, ಅವರು ಇದರಿಂದ ಪರಿಹಾರ ಕಾಣಲು ಬಯಸುತ್ತಿದ್ದಾರೆ, ಇದಕ್ಕಾಗಿ ಹೋರಾಟಕ್ಕೂ ಸಿದ್ದರಿದ್ದಾರೆ ಎಂಬುದನ್ನು ಖಾಸಗಿ ಸಾರಿಗೆ ಕಾರ್ಮಿಕರ ಈ ‘ಬೆಂಗಳೂರು ಬಂದ್’ ತೋರಿಸಿಕೊಟ್ಟಿದೆ.

ವೀಡಿಯೋ ನೋಡಿ:“ಮುಗಿದ ಅಧ್ಯಾಯ” ಎಂದು ಸರ್ಕಾರ ಕೈ ತೊಳದುಕೊಳ್ಳಬಾರದು – ಒಡನಾಡಿ ಸ್ಟ್ಯಾನ್ಲಿ Janashakthi Media

Donate Janashakthi Media

Leave a Reply

Your email address will not be published. Required fields are marked *