ಬೆಂಗಳೂರು: ನ್ಯಾಯಾಲಯದ ಕಲಾಪದ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ ನೀಡಿದ ವಿವಾದಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನ್ಯಾಯಮೂರ್ತಿಗಳ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ ಆಕ್ಷೇಪಾರ್ಹವಾದ ಹೇಳಿಕೆಗಳನ್ನು ನೀಡಿ, ಮತ್ತೆ ಅಂಥದ್ದೇ ವಿಚಾರಕ್ಕೆ ಚರ್ಚೆಯಾಗುತ್ತಿದ್ದಾರೆ.
ಕಳೆದ ಸೆಪ್ಟೆಂಬರ್‌ನಲ್ಲಿ ಕಲಾಪದ ವೇಳೆ ಬೆಂಗಳೂರಿನ ಗೋರಿಪಾಳ್ಯದ ಕ್ರಿಮಿನಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಹೆದರುತ್ತಿದ್ದಾರೆ. ಏಕೆಂದರೆ ಅದು ಪಾಕಿಸ್ತಾನದಲ್ಲಿದೆ ಎನ್ನುವ ಅವರ ಹೇಳಿಕೆ ಹಾಗೂ ಮಹಿಳಾ ವಕೀಲೆಯೊಬ್ಬರ ಜೊತೆ ಕೀಳು ಅಭಿರುಚಿಯಿಂದ ಮಾತನಾಡಿದ್ದ ವಿಡಿಯೋ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.
ಇವುಗಳನ್ನು ಗಮನಿಸಿದ್ದ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ಎರಡು ವಾರಗಳಲ್ಲಿ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್‌ಗೆ ಸೂಚಿಸಿತ್ತು. ಬಳಿಕ ನ್ಯಾಯಮೂರ್ತಿ ಶ್ರೀಶಾನಂದ ತಮ್ಮ ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಕಾಂಗ್ರೆಸ್ ಸೇರುವ ಸಾಧ್ಯತೆ: ಬಿಜೆಪಿಗೆ ಆಘಾತ
ಇದೀಗ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರ ಕಲಾಪದ ಹಳೆಯ ವಿಡಿಯೋವೊಂದು ವೈರಲ್ ಆಗಿದ್ದು, ಮದುವೆಗೆ ಸಂಬಂಧಿಸಿದಂತೆ ಅವರು ಆಡಿರುವ ಮಾತುಗಳ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ, ಈ ಸಂಬಂಧ ಕೆಲವೆಡೆ ಪ್ರತಿಭಟನೆಗೂ ಕಾರಣವಾಗಿದೆ.
ನ್ಯಾಯಾಲಯದ ಕಲಾಪದಲ್ಲಿ ಪ್ರಕರಣವೊಂದರ ವಿಚಾರಣೆಯ ವೇಳೆ ನ್ಯಾ.ಶ್ರೀಶಾನಂದ ಅವರು, “ಯಾರನ್ನು ಬೇಕಾದರೂ ಮದುವೆ ಮಾಡಿಕೊಳ್ಳಬಹುದು. ಆದರೆ, ಮೊದಲ ರಾತ್ರಿ ಮಾತ್ರ ನಾಯಕನ ಜೊತೆ ಎಂಬ ಆಚರಣೆ ಇಂದಿಗೂ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿ ಅಸ್ತಿತ್ವದಲ್ಲಿದೆ” ಎಂದು ಹೇಳಿರುವ ವಿಡಿಯೋ ಚರ್ಚೆಗೆ ಗ್ರಾಸವಾಗಿದೆ.
ನ್ಯಾಯಮೂರ್ತಿ ವಿ.ಶ್ರೀಶಾನಂದ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಯಾದಗಿರಿಯ ಸುರಪುರ ತಾಲ್ಲೂಕಿನ ಜ.13ರಂದು ಮಹರ್ಷಿ ವಾಲ್ಮೀಕಿ ನಾಯಕ ಸಂಘ ಮತ್ತು ಸಾಮೂಹಿಕ ಸಂಘಟನೆಗಳ ಒಕ್ಕೂಟವು ಬಂದ್ ಆಚರಿಸಿ ಶ್ರೀಶಾನಂದ ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೆ, ನ್ಯಾ. ಶ್ರೀಶಾನಂದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ, ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ.
ವಿಡಿಯೊದಲ್ಲಿ ಏನಿದೆ?
ನ್ಯಾಯಾಲಯದಲ್ಲಿ ಪ್ರಕರಣವೊಂದರ ವಿಚಾರಣೆ ವೇಳೆ “ಹಳೆಯ ಶಿಲಾಯುಗದ ಕಾಲದಲ್ಲಿ ಹೆಣ್ಣಿಗೋಸ್ಕರ ಕಾದಾಟಗಳು ನಡೆದಿದ್ದು, ಹಲವು ಗಂಡಸರ ಹೆಣಗಳು ಬೀಳುತ್ತಿದ್ದವು. ಯಾರಿಗೆ ಶಕ್ತಿ ಇತ್ತೋ ಅವನು ನಾಯಕನಾಗುತ್ತಿದ್ದ. ಆ ನಾಯಕನಿಗೆ ಆ ಹೆಣ್ಣನ್ನು ಒಪ್ಪಿಸಿ, ಉಳಿದವರು ಹೆಣ್ಣನ್ನು ಉಪಯೋಗಿಸಿಕೊಳ್ಳಬೇಕಿತ್ತು. ನಿಮಗೆ ಗೊತ್ತಿರಲಿ, ಈ ದುಷ್ಟ ಆಚರಣೆ ಈಗಲೂ ಸುರಪುರದಲ್ಲಿದೆ. ಯಾರನ್ನು ಬೇಕಾದರೂ ನೀವು ಮದುವೆ ಮಾಡಿಕೊಳ್ಳಬಹುದು.
ಆದರೆ, ಮೊದಲ ರಾತ್ರಿ ಮಾತ್ರ ನಾಯಕ ಜೊತೆ ಎಂದಿದೆ. ಆಮೇಲೆ ಅಲ್ಲೇ ಇರಬಹುದು ಅಥವಾ ಊರು ಬಿಟ್ಟು ಬೇರೆ ಕಡೆ ಹೋಗಿ ಮದುವೆ ಮಾಡಿಕೊಳ್ಳಬಹುದು. ಅದೆಲ್ಲವೂ ಸಾಧ್ಯವಾ? ಎಂದು ನೀವು ಕೇಳಿದರೆ, ಆ ತರಹ ಈಗಲೂ ನಡೆಯುತ್ತಿದೆ. ಅದರ ಮೇಲೆ ಬೇಕಾದಷ್ಟು ಚಲನಚಿತ್ರಗಳು ಬಂದಿವೆ. ಬೆತ್ತಲೆ ಸೇವೆ ಎಂದು ಸಿನಿಮಾ ಬಂದಿದೆ. ಇನ್ನೊಂದು, ಮತ್ತೊಂದು ಬಂತು ಎಲ್ಲವೂ ಆಯ್ತು. ಸರಿಹೋಯ್ತ ಎಂದು ನೋಡಿದರೆ ಇನ್ನೂ ಸರಿ ಹೋಗಲಿಲ್ಲ. ದೇವದಾಸಿಯರು ಎಂದರೆ ಏನು? ಎಲ್ಲ ಬೇಕಾದಷ್ಟು ಮಾಡಿಕೊಂಡರು. ಅದು ಇರಲಿ. ನಾವು ಆ ವಿಚಾರದ ಮೇಲಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ನೋಡಿ: ಹೆಚ್ಚು ಗಂಟೆ ದುಡಿಮೆ : ಬಂಡವಾಳಿಗರ ಲಾಭಕ್ಕಾಗಿ ಕಾರ್ಮಿಕರ ಶೋಷಣೆ : ಸುಹಾಸ್ ಅಡಿಗ ಮತ್ತು ಗುರುರಾಜ ದೇಸಾಯಿ ಮಾತುಕತೆ