ಪ್ರಕಾಶ್ ಕಾರಟ್
ಮೋನ್ ದೌರ್ಜನ್ಯ ಒಂದು ಅಪರೂಪದ ಒಂಟಿ ಪ್ರಕರಣವಲ್ಲ. ಕಾನೂನುರಹಿತ ಕಾನೂನು ‘ಆಫ್‌ಸ್ಪ’ ಹೆಸರಿನ ಮರೆಯಲ್ಲಿ ಆಗಾಗ ನಾಗರಿಕರ ಹತ್ಯಾಕಾಂಡಗಳು ನಡೆದಿವೆ. ಸಶಸ್ತ್ರ ಉಗ್ರಗಾಮಿಗಳ ಮೇಲೆ ತಾವು ಗುಂಡು ಹಾರಿಸಿದ್ದಾಗಿ ಭದ್ರತಾ ಪಡೆಗಳು ಪ್ರತಿ ಸಲವೂ ಹೇಳುತ್ತಾ ತಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಾ ಬಂದಿವೆ. ಪ್ರಜಾಸತ್ತಾತ್ಮಕ ಹಾಗೂ ನಾಗರಿಕ ಸಮಾಜದಲ್ಲಿ ಇಂತಹ ಕಾನೂನಿಗೆ ಸ್ಥಾನವಿಲ್ಲದಿರುವುದರಿಂದ ಈ ಕಾನೂನನ್ನು ಸಂಪೂರ್ಣವಾಗಿ ತೆಗೆದು ಹಾಕುವ ಸಮಯವೀಗ ಬಂದಿದೆ.
ನಾಗಾಲ್ಯಾಂಡ್‌ನ ಮೋನ್‌ನಲ್ಲಿ ಅಸ್ಸಾಂ ರೈಫಲ್ಸ್‌ನ ಒಂದು ವಿಶೇಷ ಪಡೆಯ ಯೋಧರು ಡಿಸೆಂಬರ್ 4ರಂದು 14 ನಾಗರಿಕರನ್ನು ಹತ್ಯೆ ಮಾಡಿದ ಪ್ರಕರಣವು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾನೂನು (ಎಎಫ್‌ಎಸ್‌ಪಿಎ-ಆಫ್ ಸ್ಪ) ಮತ್ತೆ ಚರ್ಚೆಯ ಮುನ್ನೆಲೆಗೆ ಬರುವಂತೆ ಮಾಡಿದೆ. ಭದ್ರತಾ ಪಡೆಗಳಿಗೆ ಯಾವುದೇ ದಂಡನೆಯ ಭೀತಿಯಿಲ್ಲದೆ ಕಾರ್ಯಾಚರಣೆಗೆ ಅವಕಾಶ ಕಲ್ಪಿಸುವ ಈ ಕಾನೂನುರಹಿತ ಕಾನೂನಿಂದಾಗಿ ಈಶಾನ್ಯ ರಾಜ್ಯಗಳಲ್ಲಿ ನಾಗರಿಕರ ಮೇಲೆ ಒಂದರ ಹಿಂದೊಂದರಂತೆ ಅತ್ಯಾಚಾರಗಳನ್ನು ನಡೆಸಲಾಗಿದೆ. ಸಶಸ್ತ್ರ ಉಗ್ರಗಾಮಿಗಳ ತಲಾಶೆಯಲ್ಲಿದ್ದರೆನ್ನಲಾದ ಭದ್ರತಾ ಪಡೆ ಸಿಬ್ಬಂದಿ ಒಂದು ವ್ಯಾನ್‌ನಲ್ಲಿ ಪ್ರಯಾಣಿಸುತ್ತಿದ್ದ ಕಲ್ಲಿದ್ದಲು ಕಾರ್ಮಿಕರಾಗಿದ್ದ ಎಂಟು ಯುವಕರ ಮೇಲೆ ಹೊಂಚು ದಾಳಿ ನಡೆಸಿದರು. ಆರು ಕಲಿದ್ದಲು ಕಾರ್ಮಿಕರ ಈ ಹತ್ಯೆಯಿಂದಾಗಿ ಪ್ರತಿಭಟನೆಗಿಳಿದ ಜನಗಳ ಮೇಲೆ ಸಶಸ್ತ್ರ ಪಡೆಗಳು ನಡೆಸಿದ ಗೋಲಿಬಾರ್‌ನಲ್ಲಿ ಇನ್ನೂ ಎಂಟು ಜನರು ಮೃತಪಟ್ಟರು.
ಮೋನ್ ದೌರ್ಜನ್ಯ ಒಂದು ಅಪರೂಪದ ಪ್ರಕರಣವಲ್ಲ. ‘ಆಫ್‌ಸ್ಪ’ ಹೆಸರಿನ ಮರೆಯಲ್ಲಿ ಆಗಾಗ ನಾಗರಿಕರ ಹತ್ಯಾಕಾಂಡಗಳು ನಡೆದಿವೆ. ಸಶಸ್ತ್ರ ಉಗ್ರಗಾಮಿಗಳ ಮೇಲೆ ತಾವು ಗುಂಡು ಹಾರಿಸಿದ್ದಾಗಿ ಭದ್ರತಾ ಪಡೆಗಳು ಪ್ರತಿ ಸಲವೂ ಹೇಳುತ್ತಾ ತಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಾ ಬಂದಿವೆ.
ಈಶಾನ್ಯ ರಾಜ್ಯಗಳಲಿ 1958ರಿಂದಲೂ ಈ ಕಾನೂನು ಜಾರಿಯಲ್ಲಿದೆ. 1984ರಲ್ಲಿ ಮಣಿಪುರದ ಹೈರಂಗೊಯ್‌ಥಾಂಗ್‌ನಲ್ಲಿ 14 ಜನರ ಹತ್ಯಾಕಾಂಡ, 1995ರ ಒಂಬತ್ತು ಜನರ ದಾರುಣ ಹತ್ಯೆಯ ಆರ್‌ಐಎಂಎಸ್ ಘಟನೆ ಮತ್ತು ಮಣಿಪುರದ ಮಾಲೊಮ್‌ನಲ್ಲಿ 2000ನೇ ಇಸವಿಯಲ್ಲಿ 10 ನಾಗರಿಕರ ಹತ್ಯೆ ನಡೆಯಿತು.
ಈ ಕಾನೂನಿನ ಸೆಕ್ಷನ್ 3ರ ಅಡಿಯಲ್ಲಿ ಯಾವುದೇ ರಾಜ್ಯ ಅಥವಾ ರಾಜ್ಯದ ನಿರ್ದಿಷ್ಟ ಭಾಗದ ಮೇಲೆ ಅದನ್ನು ಪ್ರಕ್ಷಬ್ಧ ಪ್ರದೇಶ ಎಂದು ಘೋಷಿಸಿದ ಮೇಲೆ ಕೇಂದ್ರ ಸರ್ಕಾರ ‘ಆಫ್‌ಸ್ಪ’ ವನ್ನು ಹೇರಬಹುದಾಗಿದೆ. ಸಂಬಂಧಿತ ರಾಜ್ಯ ಸರ್ಕಾರದ ಅನುಮತಿಯಿಲ್ಲದೆಯೇ ಕೇಂದ್ರ ಸರ್ಕಾರ ಇದನ್ನು ಹೇರಲು ಅವಕಾಶವಿದೆ. ಈ ಕಾನೂನು ಉಲ್ಲಂಘಿಸುವ ಯಾರೇ ಆದರೂ ಅಥವಾ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ಸಾಗಿಸುವವರ ಮೇಲೆ ಗುಂಡು ಹಾರಿಸುವ ಮತ್ತು ಕೊಲ್ಲುವ ಅಪರಿಮಿತ ಅಧಿಕಾರವನ್ನು ಸಶಸ್ತ್ರ ಪಡೆಗಳಿಗೆ ನೀಡಲಾಗಿದೆ. ವಾರಂಟ್ ಇಲ್ಲದೆ ಯಾರನ್ನೇ ಆದರೂ ಬಂಧಿಸುವ ಮತ್ತು ಕಟ್ಟಡಗಳನ್ನು ಶೋಧಿಸುವ ಅಧಿಕಾರವನ್ನೂ ನೀಡಲಾಗಿದೆ.
1990ರಲ್ಲಿ ಈ ಕಾನೂನನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ವಿಸ್ತರಿಸಲಾಗಿದ್ದು ಈಗಲೂ ಅಲ್ಲಿ ಜಾರಿಯಲ್ಲಿದೆ. ಸಾರ್ವಜನಿಕ ಸುರಕ್ಷತಾ ಕಾನೂನು ಮತ್ತಿತರ ಕರಾಳ ಕ್ರಮಗಳೊಂದಿಗೆ ಈ ಕಾಯ್ದೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಮೂರು ದಶಕಗಳಲ್ಲಿ ಭದ್ರತಾ ಪಡೆಗಳಿಗೆ ದಂಡನೆಯ ಭೀತಿಯಿಲ್ಲದೆ ನಾಗರಿಕರ ಮೇಲೆ ಬರ್ಬರ ದಬ್ಬಾಳಿಕೆ ನಡೆಸುವ ಒಂದು ವ್ಯವಸ್ಥೆಯನ್ನು ನಿರ್ಮಿಸಿದೆ.
ಈ ಕಾನೂನಿನ ಅಡಿಯಲ್ಲಿ, ಅಪರಾಧ ಎಸಗಿದ ಭದ್ರತಾ ಪಡೆ ಸಿಬ್ಬಂದಿಯನ್ನು ಶಿಕ್ಷಿಸಲು ಕೇಂದ್ರ ಸರ್ಕಾರದ ಅನುಮೋದನೆಬೇಕು. ಕಾರ್ಯತಃ ಇದು ಅಸಾಧ್ಯ ಎಂಬುದನ್ನು ಜಮ್ಮು ಮತ್ತು ಕಾಶ್ಮೀರ ಅನುಭವ ತೋರಿಸಿಕೊಟ್ಟಿದೆ. 2018ರ ಜುಲೈ ವರೆಗೆ ಸತತವಾಗಿ ಅಲ್ಲಿ ಆಡಳಿತ ನಡೆಸಿದ ಆಯಾ ರಾಜ್ಯ ಸರ್ಕಾರಗಳು ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಶಿಕ್ಷೆ ವಿಧಿಸಲು ಅನುಮತಿ ಕೋರುವ 50 ಪ್ರಕರಣಗಳನ್ನು ಕೇಂದ್ರಕ್ಕೆ ಕಳಿಸಿದ್ದವು. ಈ ಎಲ್ಲ ಕೋರಿಕೆಗಳನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ.
ಕುಖ್ಯಾತ ಪತ್ರಿಬಾಲ್ ಘಟನೆಯಲ್ಲಿ, ಐವರು ನಾಗರಿಕರ ಹತ್ಯೆಯಾಗಿತ್ತು. ಅದೊಂದು ಹುಸಿ ಎನ್‌ಕೌಂಟರ್ ಆಗಿತ್ತು. ಅವರು ವಿದೇಶಿ ಉಗ್ರಗಾಮಿಗಳು ಎಂದು ದುಷ್ಕೃತ್ಯ ನಡೆಸಿದ್ದ ಸೇನಾ ಸಿಬ್ಬಂದಿ ವಾದಿಸಿದ್ದರು. ಕೇಂದ್ರೀಯ ತನಿಖಾ ದಳ (ಸಿಬಿಐ) ಈ ಪ್ರಕರಣದ ತನಿಖೆ ನಡೆಸಿ ಈ ಅಪರಾಧಕ್ಕೆ ಹೊಣೆಯೆಂದು ಕೆಲವು ಸೈನಿಕರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರೂ ಆ ಪ್ರಕರಣವನ್ನು ಅಂತಿಮವಾಗಿ ಸೇನೆಯ ಕೋರ್ಟ್ ಮಾರ್ಷಲ್‌ಗೆ (ಸೇನಾ ವಿಚಾರಣೆ) ಒಪ್ಪಿಸಲಾಗಿತ್ತು. ಅಪರಾಧಿಗಳ ವಿರುದ್ಧ ಮೇಲ್ನೋಟಕ್ಕೆ ಕಾಣುವ ಯಾವುದೇ ಸಾಕ್ಷ್ಯವಿಲ್ಲ ಎಂದು ಹೇಳಿ ಎಲ್ಲರನ್ನೂ ಖುಲಾಸೆಗೊಳಿಸಲಾಗಿತ್ತು.
ಬಹುಕಾಲದ ಆಗ್ರಹ
‘ಆಫ್‌ಸ್ಪ’ವನ್ನು ರದ್ದುಗೊಳಿಸುವಂತೆ ಸತತವಾಗಿ ಆಗ್ರಹಿಸಲಾಗುತ್ತಿದೆ. ಈ ಕಾನೂನು ರದ್ದತಿ ಬೇಡಿಕೆ ಮುಂದಿಟ್ಟುಕೊಂಡು ಇರೋಮ್ ಶರ್ಮಿಳಾ 16 ವರ್ಷಗಳಷ್ಟು ಸುದೀರ್ಘ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಇದರ ಕಾರ್ಯನಿರ್ವಹಣೆ ಕುರಿತು ಪರಿಶೀಲಿಸಲು 2004ರಲ್ಲಿ ಯುಪಿಎ ಸರ್ಕಾರ, ನ್ಯಾಯಮೂರ್ತಿ ಜೀವನ್ ರೆಡ್ಡಿ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿತ್ತು. ಈ ಕಾಯ್ದೆಯನ್ನು ರದ್ದುಪಡಿಸುವಂತೆ, 2005ರಲ್ಲಿ ಸಲ್ಲಿಸಿದ ವರದಿಯಲ್ಲಿ ಸಮಿತಿ ಶಿಫಾರಸು ಮಾಡಿತ್ತು. ಆದರೆ, ಕಾನೂನು ತಿದ್ದುಪಡಿ ಮಾಡುವ ಎಲ್ಲ ಪ್ರಯತ್ನಗಳು ಅಥವಾ ಕೆಲವು ನಿರ್ದಿಷ್ಟ ರಾಜ್ಯಗಳಿಂದ ಅದನ್ನು ವಾಪಸ್ ಪಡೆಯುವ ಪ್ರಯತ್ನಗಳು ಸೇನೆ ಮತ್ತು ರಕ್ಷಣಾ ಸಚಿವಾಲಯದ ವಿರೋಧದಿಂದಾಗಿ ವಿಫಲಗೊಂಡವು.
ಮಣಿಪುರದಲ್ಲಿ ಶಂಕಿತ ಮಹಿಳಾ ಉಗ್ರಗಾಮಿ ತಂಗ್‌ಜಂ ಮನೋರಮಾ ಮೇಲೆ 2004ರಲ್ಲಿ ಕೆಲವು ಭದ್ರತಾ ಪಡೆ ಸಿಬ್ಬಂದಿ ನಡೆಸಿದ ಬರ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಂತರ ಈ ಕಾನೂನು ವಾಪಸಾತಿ ಆಗ್ರಹಿಸಿ ದೊಡ್ಡ ಚಳವಳಿ ನಡೆದಿತ್ತು. ಆ ಚಳವಳಿ ಫಲವಾಗಿ ಇಂಫಾಲ್ ಮುನಿಸಿಪಾಲಿಟಿ ಪ್ರದೇಶವನ್ನು ಮಾತ್ರ ‘ಆಫ್‌ಸ್ಪ’ ವ್ಯಾಪ್ತಿಯಿಂದ ಹೊರಗಿಡಲು ಸಾಧ್ಯವಾಯಿತು. ಯುಪಿಎ ಸರ್ಕಾರದ ಎರಡನೇ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಒಮರ್ ಅಬ್ದುಲ್ಲಾ ಸರ್ಕಾರ, ಎಡ ಪಕ್ಷಗಳು ಮತ್ತು ಇತರ ಪ್ರಜಾಸತ್ತಾತ್ಮಕ ಸಂಘಟನೆಗಳು ಪ್ರಕ್ಷುಬ್ಧ ಪ್ರದೇಶ ಘೋಷಣೆ ಮತ್ತು ‘ಆಫ್‌ಸ್ಪ’ವನ್ನು, ಗಡಿ ಪ್ರದೇಶ ಹೊರತುಪಡಿಸಿ ಎಲ್ಲ ನಗರ ಹಾಗೂ ಇತರ ಪ್ರದೇಶಗಳಿಂದ ವಾಪಸ್ ಪಡೆಯುವಂತೆ ಆಗ್ರಹಿಸಿದ್ದವು. ಉಗ್ರಗಾಮಿ ಚಳವಳಿ ಮತ್ತು ಹಿಂಸಾಚಾರ ತುಂಬಾ ಕಡಿಮೆಯಾದ್ದರಿಂದ ಈ ಕ್ರಮಕೈಗೊಳ್ಳುವಂತೆ ಅವುಗಳು ವಾದಿಸಿದ್ದವು. ಅಂದಿನ ಗೃಹ ಸಚಿವರು ಕೂಡ ಈ ಅಭಿಪ್ರಾಯಕ್ಕೆ ಮನ್ನಣೆ ನೀಡಿದ್ದರೂ ಸರ್ಕಾರ ಈ ಬೇಡಿಕೆಗೆ ಮಾನ್ಯತೆ ನೀಡಲಿಲ್ಲ. ಅಂದಿನ ಭೂ ಸೇನಾ ಮುಖ್ಯಸ್ಥರು ಹಾಗೂ ರಕ್ಷಣಾ ವ್ಯವಸ್ಥೆಯ ಪ್ರತಿರೋಧ ಇದಕ್ಕೆ ಕಾರಣವಾಗಿತ್ತು.
ಸಂವಿಧಾನ ವಿರೋಧಿ
ನಾಗರಿಕರ ವಿರುದ್ಧ ಸಶಸ್ತ್ರ ಪಡೆಗಳನ್ನು ಬಳಸುವುದು ಸಂವಿಧಾನದ ಮೂಲ ತತ್ವಗಳಿಗೇ ವಿರುದ್ಧವಾದುದು. ಇಷ್ಟು ವರ್ಷಗಳಾದರೂ ಈ ಕಾನೂನು ಸಂವಿಧಾನ-ವಿರೋಧಿ ಎಂದು ಅದನ್ನು ಉನ್ನತ ನ್ಯಾಯಾಂಗ ತೆಗೆದು ಹಾಕದಿರುವುದು ತುಂಬಾ ವಿಷಾದದ ಸಂಗತಿಯಾಗಿದೆ. ಮೋದಿ ಸರ್ಕಾರವು ಒಂದು ರಾಷ್ಟ್ರೀಯ ಭದ್ರತಾ ಪ್ರಭುತ್ವವನ್ನು ಕಟ್ಟಲು ಪ್ರಜಾಪ್ರಭುತ್ವ-ವಿರೋಧಿ, ಕರಾಳ ಕಾನೂನುಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದೆ. ನಾಗರಿಕರ ಮೂಲಭೂತ ಹಕ್ಕುಗಳನ್ನು ತುಳಿದು ಹಾಕುತ್ತಿದೆ. ‘ಆಫ್‌ಸ್ಪ’ದ ಜೊತೆ ಜೊತೆಯಲ್ಲಿ ಕಾನೂನು ಬಾಹಿರ ಚಟುವಟಿಕೆ ತಡೆ ಕಾನೂನು (ಯುಎಪಿಎ), ರಾಷ್ಟ್ರೀಯ ಭದ್ರತಾ ಕಾನೂನು, ಭಾರತೀಯ ದಂಡ ಸಂಹಿತೆಯ (ಐಪಿಸಿ) ದೇಶದ್ರೋಹದ ಸೆಕ್ಷನ್ -ಇವೇ ಮೊದಲಾದವುಗಳು ಸರ್ವಾಧಿಕಾರಶಾಹಿ ಭದ್ರತಾ ಸೌಧದ ಅಂಗಗಳಾಗಿವೆ. ಪಂಜಾಬ್ ಮತ್ತು ಬಂಗಾಳದಲ್ಲಿ ಗಡಿ ಭದ್ರತಾ ಪಡೆಯ ಕಾರ್ಯವ್ಯಾಪ್ತಿಯನ್ನು ಅಂತಾರಾಷ್ಟ್ರೀಯ ಗಡಿಯಿಂದ 50 ಕಿಲೋ ಮೀಟರ್‌ವರೆಗೆ ವಿಸ್ತರಿಸಿರುವುದನ್ನು ಈ ಹಿನ್ನೆಲೆಯಲ್ಲಿಯೇ ಕಾಣಬೇಕಾಗುತ್ತದೆ. ಈ ವರೆಗೆ ಆ ವ್ಯಾಪ್ತಿ 15 ಕಿಲೋ ಮೀಟರ್ ಆಗಿತ್ತು.
ನಾಗಾಲ್ಯಾಂಡ್ ಮುಖ್ಯಮಂತ್ರಿ ನೇಫಿಯು ರಿಯೋ ಮತ್ತು ಮೇಘಾಲಯ ಮುಖ್ಯಮಂತ್ರಿ ಕೊನ್ರಾಡ್ ಸಂಗ್ಮಾ, ತಮ್ಮ ರಾಜ್ಯಗಳು ಮತ್ತು ಈಶಾನ್ಯ ಭಾರತದಿಂದ ‘ಆಫ್‌ಸ್ಪ’ವನ್ನು ರದ್ದು ಮಾಡಬೇಕೆಂದು ಒತ್ತಾಯಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. 2015ರಲ್ಲಿ ತ್ರಿಪುರಾದ ಎಡರಂಗ ಸರ್ಕಾರ ‘ಆಫ್‌ಸ್ಪ’ವನ್ನು ಹಿಂದೆ ಪಡೆದಿತ್ತು. ‘ಪ್ರಕ್ಷುಬ್ಧ ಪ್ರದೇಶ’ ಘೋಷಣೆಯನ್ನು ಹಿಂಪಡೆಯುವ ಮೂಲಕ ಅದು ಈ ಉದ್ದೇಶವನ್ನು ಸಾಧಿಸಿತ್ತು.
ಏನಿದ್ದರೂ ಕೆಲವು ರಾಜ್ಯಗಳಿಂದ ಮಾತ್ರವೇ ಚೂರುಪಾರು ರೀತಿಯಲ್ಲಿ ಇದನ್ನು ಹಿಂದೆ ಪಡೆದರೆ ಸಾಲದು. ಪ್ರಜಾಸತ್ತಾತ್ಮಕ ಹಾಗೂ ನಾಗರಿಕ ಸಮಾಜದಲ್ಲಿ ಇಂತಹ ಕಾನೂನಿಗೆ ಸ್ಥಾನವಿಲ್ಲದಿರುವುದರಿಂದ ಈ ಕಾನೂನನ್ನು ಸಂಪೂರ್ಣವಾಗಿ ತೆಗೆದು ಹಾಕುವ ಸಮಯವೀಗ ಬಂದಿದೆ.
ಅನು: ವಿಶ್ವ