ಮುಂದಿನ ಪರಿಣಾಮ ಏನಾದೀತೆಂಬುದನ್ನು ಯೋಚಿಸದೆ ಅಫಘಾನಿಸ್ತಾನದಿಂದ ವಾಪಸ್ ಹೋಗುವ ಅಮೆರಿಕದ ಅವಸರದ ನಡೆಯನ್ನು ನೋಡಿದ ಮೇಲಾದರೂ, ಮೋದಿ ಸರ್ಕಾರ ಮತ್ತು ವಿದೇಶಾಂಗ ನೀತಿ ನಿರೂಪಕರು ತಮ್ಮ ಅಮೆರಿಕಾ-ಪರ ಏಕಮುಖ ವಿದೇಶಾಂಗ ನೀತಿಯ ಪುನರಾವಲೋಕನ ಮಾಡಬೇಕು ಮತ್ತು ಈಗ ಕ್ವಾಡ್‌ನಲ್ಲಿ ರೂಪು ತಳೆಯುತ್ತಿರುವ ಅಮೆರಿಕದೊಂದಿಗಿನ ನಿಕಟ ಸಾಮರಿಕ ಮೈತಿಯ ಬಗ್ಗೆಯೂ ಪುನರ್‌ವಿಮರ್ಶೆ ನಡೆಸುವುದು ಕೂಡ ಅಗತ್ಯ – ಪ್ರಕಾಶ್ ಕಾರಟ್
ಆಫ್ಘಾನಿಸ್ತಾನದಲ್ಲಿನ ಪರಿಸ್ಥಿತಿ ಬಹಳ ವೇಗವಾಗಿ ಬದಲಾಗುತ್ತಿದೆ. ಅಲ್ಲಿಂದ ಅಮೆರಿಕದ ಪಡೆಗಳ ವಾಪಸಾತಿ ಹೆಚ್ಚು ಕಡಿಮೆ ಮುಗಿದಿದೆ. ತಾಲಿಬಾನ್ ದೇಶದಾದ್ಯಂತ ಮುನ್ನಡೆ ಸಾಧಿಸುತ್ತಿದೆ. ದೇಶದ ಶೇಕಡ 85 ಭಾಗ ತನ್ನ ಹಿಡಿತದಲ್ಲಿದೆ ಎಂದು ತಾಲಿಬಾನ್ ಹೇಳಿಕೊಂಡಿದೆ. ಇದು ನಿಜವೇ ಆಗಿದ್ದರೆ ವಿಶೇಷವಾಗಿ ದೇಶದ ಉತ್ತರ ಭಾಗದಲ್ಲಿ ತಾಲಿಬಾನ್ ಮುನ್ನಡೆಯ ವೇಗ ಎಲ್ಲರನ್ನೂ ಚಕಿತಗೊಳಿಸಿದೆ.
ಆಫ್ಘಾನಿಸ್ತಾನದಲ್ಲಿನ 20 ವರ್ಷಗಳ ಯುದ್ಧದ ನಂತರ ಅಮೆರಿಕದ ಪಡೆಗಳು ವಾಪಸಾಗುವುದು ಅದರ ಅವಮಾನಕರ ಸೋಲಿನ ಸಂಕೇತವಾಗಿದೆ. ಅಮೆರಿಕದಲ್ಲಿ 2001 ಸೆಪ್ಟೆಂಬರ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಆಗಿನ ಅಧ್ಯಕ್ಷ ಜಾರ್ಜ್ ಬುಷ್, ‘ಭಯೋತ್ಪಾದನೆ ವಿರುದ್ಧ ಸಮರ’ ಸಾರಲು ಆಫ್ಘಾನಿಸ್ತಾನದ ಮೇಲೆ ಆಕ್ರಮಣ ನಡೆಸಲು ಆದೇಶಿಸಿದ್ದರು. ಈಗ ಕಾಲಚಕ್ರ ಸಂಪೂರ್ಣ ಒಂದು ಸುತ್ತು ಬಂದಿದೆ. 1980ರ ದಶಕದಲ್ಲಿ ಸೋವಿಯತ್ ಒಕ್ಕೂಟ ಬೆಂಬಲಿತ ಸರ್ಕಾರದ ವಿರುದ್ಧ ಹೋರಾಡಲು ಸಶಸ್ತ್ರ ಮುಜಾಹಿದೀನ್‌ಗಳಿಗೆ ಅಮೆರಿಕ ಹಣಕಾಸು ಹಾಗೂ ಶಸ್ತಾಸ್ತ್ರ ನೆರವು ನೀಡಿತ್ತು. ಆಗಿನ ಸರ್ಕಾರದ ವಿರುದ್ಧದ ಆ ಜಿಹಾದ್‌ನಲ್ಲಿ ಒಸಾಮಾ ಬಿನ್ ಲಾಡೆನ್‌ನಂಥವರೂ ಸೇರಿಕೊಂಡಿದ್ದರು. ಒಂದು ಪೂರ್ಣ ದಶಕದ ನಂತರ, ಅದೇ ಅಮೆರಿಕ ಮುಜಾಹಿದೀನ್‌ನ ಸಂತತಿಯಾದ ತಾಲಿಬಾನ್ ವಿರುದ್ಧ ಕಾರ್ಯಾಚರಿಸಲು ಆರಂಭಿಸಿತ್ತು. ತಾಲಿಬಾನನ್ನು ಅಧಿಕಾರದಿಂದ ಪದಚ್ಯುತಗೊಳಿಸಿದ ನಂತರ ಅಮೆರಿಕವು ತನ್ನ ತಾಳಕ್ಕೆ ತಕ್ಕಂತೆ ಕುಣಿಯುವ ಒಂದು ಆಡಳಿತ ಪ್ರತಿಷ್ಠಾಪಿಸಿ ಅದಕ್ಕೆ ‘ಪ್ರಜಾಪ್ರಭುತ್ವ ಲೇಪನ’ ನೀಡಿತ್ತು.
ಎರಡು ದಶಕಗಳ ವೈಮಾನಿಕ ಸಮರ ಹಾಗೂ ವಿಶೇಷ ಪಡೆಗಳ ಕಾರ್ಯಾಚರಣೆಗಳಿಂದ ತಾಲಿಬಾನ್‌ನ ಶಕ್ತಿ ಕುಗ್ಗಿಸಲು ಆಗಲಿಲ್ಲ. ಎರಡು ಟ್ರಿಲಿಯ ಡಾಲರ್‌ನಷ್ಟು ಅಪಾರ ಹಣ ವ್ಯಯಿಸಿ ಹಾಗೂ 2,313 ಸೈನಿಕರ ಪ್ರಾಣ ಬಲಿಕೊಟ್ಟ ನಂತರ, ಒಂದಾದ ಮೇಲೊಂದರಂತೆ ಆಡಳಿತ ನಡೆಸಿದ ಅಮೆರಿಕದ ಸರ್ಕಾರಗಳು ಆಫ್ಘಾನಿಸ್ತಾನದ ಅತಿಕ್ರಮಣವನ್ನು ಮತ್ತು ತಮ್ಮ ಪಡೆಗಳನ್ನು ಕಡಿತಗೊಳಿಸುತ್ತ ಬಂದವು. ಹಾಲಿ ಅಧ್ಯಕ್ಷ ಜೋ ಬೈಡೆನ್ ಸೆಪ್ಟೆಂಬರ್‌ನೊಳಗೆ ಎಲ್ಲ ಅಮೆರಿಕ-ನ್ಯಾಟೊ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವುದಾಗಿ ಘೋಷಿಸಿದ್ದಾರೆ. 20 ವರ್ಷಗಳ ಆಫ್ಘನ್ ಯುದ್ಧದಲ್ಲಿ 47,600 ನಾಗರಿಕರ ಪ್ರಾಣಹರಣವಾಗಿದೆ. ಆ ಪೈಕಿ 40ರಷ್ಟು ಜನರು ಅಮೆರಿಕದ ವೈಮಾನಿಕ ಬಾಂಬ್ ದಾಳಿಗಳಿಂದ ಮೃತಪಟ್ಟಿದ್ದಾರೆ.
ಡೊನಾಲ್ಡ್ ಟ್ರಂಪ್ ಆಡಳಿತ ದೋಹಾದಲ್ಲಿ ತಾಲಿಬಾನ್ ಜೊತೆ ಮಾತುಕತೆ ಆರಂಭಿಸಿತ್ತು ಹಾಗೂ ಒಂದು ಒಪ್ಪಂದವನ್ನು ಘೋಷಿಸಲಾಗಿತ್ತು. ಆದರೆ, ಒಂದು ಮಧ್ಯಂತರ ಸರ್ಕಾರ ರಚನೆ ಕುರಿತು ತಾಲಿಬಾನ್ ಮತ್ತು ಆಫ್ಘಾನಿಸ್ತಾನ ಸರ್ಕಾರದ ನಡುವಿನ ಮಾತುಕತೆ ಸ್ಥಗಿತಗೊಂಡಿತ್ತು. ಅಮೆರಿಕನ್ನರು ಆಕ್ರಮಿತ ದೇಶಗಳನ್ನು ಬಿಟ್ಟು ಹೋಗುವಾಗ ಅವುಗಳು ಸಂಪೂರ್ಣ ಉಧ್ವಸ್ಥಗೊಂಡಿರುತ್ತವೆ. ಆಫ್ಘಾನಿಸ್ತಾನದ ಪರಿಸ್ಥಿತಿಯೂ ಹಾಗೇ ಆಗಿದೆ. ಇರಾಕ್‌ನಲ್ಲೂ ಹಾಗೇ ಆಗಿತ್ತು.
ಅಮೆರಿಕ ರಚಿಸಿ ತರಬೇತಿ ನೀಡಿದ್ದ ಆಫ್ಘನ್ ರಾಷ್ಟ್ರೀಯ ಸೇನೆ (ಎಎನ್‌ಎ) ತಾಲಿಬಾನ್ ಸೇನೆ ಮುಂದೆ ಪೇಲವವಾಗಿದೆ. ಎಎನ್‌ಎಯ ಕೆಲವು ಸೈನಿಕರು ಒಂದೋ ಶರಣಾಗುತ್ತಿದ್ದಾರೆ ಅಥವಾ ತಮ್ಮ ಹುದ್ದೆ ತೊರೆದು ಪಲಾಯನ ಮಾಡುತ್ತಿದ್ದಾರೆ.
ಅಂತಃಕಲಹ ಪರಿಸ್ಥಿತಿ ಸೃಷ್ಟಿ
ಅಮೆರಿಕ ವಾಪಸಾದ ಆರು ತಿಂಗಳೊಳಗೆ ಇಡೀ ದೇಶವನ್ನು ತಾಲಿಬಾನ್ ತನ್ನ ವಶಕ್ಕೆ ಪಡೆದುಕೊಳ್ಳಲಿದೆ ಎಂದು ಅಮೆರಿಕದ ಬೇಹುಗಾರಿಕೆ ಸಂಸ್ಥೆಯೇ ಹೇಳಿದೆ. ಆದರೆ ತಾಲಿಬಾನ್ ಅಧಿಕಾರ ವಹಿಸಿಕೊಂಡಾಕ್ಷಣ ದೇಶದಲ್ಲಿ ಸ್ಥಿರತೆ ಬರುತ್ತದೆ ಎನ್ನುವುದಕ್ಕೆ ಯಾವುದೇ ಖಾತರಿಯಿಲ್ಲ. ಪ್ರಭಾವಶಾಲಿ ಬುಡಕಟ್ಟು ಪಾಳೇಗಾರರು ಹಾಗೂ ಅಮೆರಿಕ ಪ್ರಾಯೋಜಿತ ಮತ್ತು ತರಬೇತಾದ ಪೌರಸೇನಾಪಡೆಗಳೊಂದಿಗೆ ಸಂಪರ್ಕ ಹೊಂದಿರುವ ಪೌರ ಸೇನಾಪಡೆಗಳವರು ಇದ್ದಾರೆ. ಅವರು ಅಂತಃಕಲಹ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದ್ದಾರೆ. ಹಾಗಾದಲ್ಲಿ ನಾಲ್ಕು ದಶಕಗಳಿಂದ ಹಿಂಸೆ ಹಾಗೂ ಸಂಘರ್ಷದಿಂದ ಹೈರಾಣಾಗಿರುವ ಜನರು ಇನ್ನೂ ಕೆಟ್ಟ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ.
ತಾಲಿಬಾನ್ ಪಾಲ್ಗೊಳ್ಳುವಿಕೆಯೊಂದಿಗೆ ಒಂದು ಮಧ್ಯಂತರ ಸರ್ಕಾರ ರಚಿಸುವುದೇ ಇದನ್ನು ನಿವಾರಿಸಲು ಇರುವ ಏಕೈಕ ಮಾರ್ಗವಾಗಿದೆ. ಸಂಬಂಧಪಟ್ಟ ಎಲ್ಲ ಪಕ್ಷಗಳ ನಡುವೆ ಪರಸ್ಪರ ಅರಿವಿನೊಂದಿಗೆ ಆ ಸರ್ಕಾರ ರಚನೆಯಾಗಬೇಕು. ಇಂಥದ್ದೊಂದು ಸರ್ಕಾರ ರಚನೆ ಸಂಬಂಧ ಒಪ್ಪಂದ ಏರ್ಪಡಿಸಲು ದೋಹಾದಲ್ಲಿ ತಾಲಿಬಾನ್ ಮತ್ತು ಆಫ್ಘಾನ್ ಸರ್ಕಾರದ ಪ್ರತಿನಿಧಿಗಳೊಂದಿಗೆ ಕೊನೆ ಕ್ಷಣದ ಪ್ರಯತ್ನಗಳು ನಡೆಯುತ್ತಿವೆ.
ಮೋದಿ ಸರಕಾರದ ಪೇಚು
ತಾಲಿಬಾನ್‌ನೊಂದಿಗೆ ಬಹಳ ಹಿಂದೆಯೇ ಸಂಪರ್ಕ ಕಡಿದುಕೊಂಡಿರುವ ಭಾರತ ಈ ಎಲ್ಲ ಪ್ರಯತ್ನಗಳಿಂದ ಹೊರಗಿದೆ. 2001ರಲ್ಲಿ ವಾಜಪೇಯಿ ಸರ್ಕಾರ ಆಫ್ಘಾನಿಸ್ತಾನದ ಮೇಲೆ ಅಮೆರಿಕ ದಾಳಿ ಮಾಡಲು ಮಿಲಿಟರಿ ಸಾಗಾಣಿಕೆಯ ಬೆಂಬಲ ನೀಡಲು ಮುಂದಾಗಿತ್ತು. ಆದರೆ ಅಮೆರಿಕ ತನ್ನ ಕಾರ್ಯಾಚರಣೆಗೆ ಪಾಕಿಸ್ತಾನವನ್ನು ಮುಂಚೂಣಿ ದೇಶವಾಗಿ ಆಯ್ಕೆ ಮಾಡಿಕೊಂಡಿತ್ತು. ಇದರಿಂದ ಆಗಿನ ಬಿಜೆಪಿ ಸರ್ಕಾರಕ್ಕೆ ಭಾರಿ ನಿರಾಶೆಯಾಗಿತ್ತು. ಭಾರತ ಆಗಿನಿಂದಲೂ ಅಮೆರಿಕದೊಂದಿಗೆ ಕೈಜೋಡಿಸಿ ಆಫ್ಘಾನ್ ಸರ್ಕಾರಕ್ಕೆ ವಿವಿಧ ಯೋಜನೆಗಳು ಮತ್ತು ಮೂಲಸೌಕರ್ಯ ರಚನೆಗಾಗಿ ಬಿಲಿಯಾಂತರ ಡಾಲರ್ ನೆರವು ಒದಗಿಸುವ ಪ್ರಯತ್ನ ನಡೆಸುತ್ತ ಬಂದಿದೆ.
ಆದರೆ, ತಾಲಿಬಾನ್‌ನೊಂದಿಗೆ ಮಾತುಕತೆ ಆರಂಭಿಸಲು ಅಮೆರಿಕ ನಿರ್ಧರಿಸಿದ್ದರಿಂದ ನರೇಂದ್ರ ಮೋದಿ ಸರ್ಕಾರ ಪೇಚಿಗೆ ಸಿಲುಕಿಕೊಂಡಿದೆ. ಈ ಅಹಿತಕರ ಸನ್ನಿವೇಶವನ್ನು ಎದುರಿಸಬೇಕಾಗಿ ಬಂದಿರುವ ಮೋದಿ ಸರಕಾರ ದೋಹಾದಲ್ಲಿ ತಾಲಿಬಾನ್‌ನೊಂದಿಗೆ ಸಂಪರ್ಕ ಸಾಧಿಸುವ ಪ್ರಯತ್ನ ಮಾಡಬೇಕಾಗಿ ಬಂದಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್, ಟೆಹರಾನ್ ಮತ್ತು ಮಾಸ್ಕೋಗೆ ಭೇಟಿ ನೀಡಿ ತಾಲಿಬಾನ್‌ನೊಂದಿಗೆ ಮಧ್ಯಸ್ಥಿಕೆಗಾರರಾಗಿರುವ ಅಲ್ಲಿನ ಸರ್ಕಾರಗಳೊಂದಿಗೆ ಸಮಾಲೋಚಿಸಿದ್ದಾರೆ. ಆದರೆ, ಮಾಸ್ಕೋದಲ್ಲಿ ಸುದ್ದಿಗೋಷ್ಠಿಯಲ್ಲಿ ಜೈಶಂಕರ್ ತಾಲಿಬಾನ್ ಬಲವಂತದಿಂದ ಆಡಳಿತ ವಹಿಸಿಕೊಳ್ಳುವ ‘ನ್ಯಾಯಸಮ್ಮತತೆ’ ಬಗ್ಗೆ ಅನುಮಾನ ವ್ಯಕ್ತಪಡಿಸಿ ನೀಡಿರುವ ಹೇಳಿಕೆ, ಭಾರತವು ಮುಡಿ ಬರುತ್ತಿರುವ ವಾಸ್ತವ ಸನ್ನಿವೇಶಗಳೊಂದಿಗೆ ಹೆಜ್ಜೆ ಹಾಕುತ್ತಿಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಅಮೆರಿಕ ರಂಗದಿಂದ ನಿರ್ಗಮಿಸುತ್ತಿರುವುದರಿಂದ ಗಮನವು ಈಗ ಆಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆ ಸ್ಥಾಪಿಸುವ ವಿಚಾರದಲ್ಲಿ ನೇರ ಹಿತಾಸಕ್ತಿ ಹೊಂದಿರುವ ಪ್ರಾದೇಶಿಕ ಶಕ್ತಿ ಕೇಂದ್ರಗಳತ್ತ ಕೇಂದ್ರೀಕೃತಗೊಳ್ಳುತ್ತಿದೆ.
ಷಾಂಘಾಯ್ ಸಹಕಾರ ಸಂಘಟನೆ (ಎಸ್‌ಸಿಒ) ಆಫ್ಘಾನಿಸ್ತಾನದ ಆರು ನೆರೆದೇಶಗಳನ್ನು ಒಳಗೊಂಡಿದೆ. ಮಧ್ಯ ಏಷ್ಯಾ ದೇಶಗಳಾದ ತಾಜಿಕಿಸ್ತಾನ, ಉಜ್ಬೆಕಿಸ್ತಾನ, ಕಿರ್ಗಿಜಿಸ್ತಾನ ಮತ್ತು ಕಜಕಸ್ತಾನಗಳಲ್ಲದೆ ರಷ್ಯಾ, ಚೀನಾ, ಭಾರತ ಮತ್ತು ಪಾಕಿಸ್ತಾನ ಇದರ ಸದಸ್ಯ ರಾಷ್ಟ್ರಗಳಾಗಿವೆ. ಆಫ್ಘಾನಿಸ್ತಾನ ಮತ್ತು ಇರಾನ್‌ಗೆ ವೀಕ್ಷಕ ಸ್ಥಾನಮಾನವಿದೆ.
ಎಸ್‌ಸಿಒ ದೇಶಗಳ ವಿದೇಶಾಂಗ ಸಚಿವರ ಸಭೆ ಜುಲೈ 13-14 ರಂದು ತಾಜಿಕಿಸ್ತಾನದ ದುಷಾಂಬೆಯಲ್ಲಿ ನಡೆದಿದ್ದು ಆಫ್ಘಾನಿಸ್ತಾನದ ಮೇಲೆ ಚರ್ಚೆ ಕೇಂದ್ರಿತವಾಗಿದೆ. ಸಭೆಯಲ್ಲಿ ಭಾಗವಹಿಸಿದ ಜೈಶಂಕರ್ ಪ್ರಾದೇಶಿಕ ಬೆಂಬಲಿತ ರಾಜಕೀಯ ಇತ್ಯರ್ಥವೊಂದು ರೂಪುಗೊಳ್ಳುವ ಸಾಮೂಹಿಕ ಪ್ರಯತ್ನಗಳಲ್ಲಿ ಕೈ ಜೋಡಿಸಬಹುದೆಂದು ನಿರೀಕ್ಷಿಸಬೇಕಾಗಿದೆ.
ಪಾಕಿಸ್ತಾನವು ಸಾಂಪ್ರದಾಯಿಕವಾಗಿ ತಾಲಿಬಾನ್‌ನ ಬೆಂಬಲಿಗನಾದರೂ ಅದು ತನ್ನ ಹಿತಾಸಕ್ತಿಗಳು ಮತ್ತು ಭದ್ರತೆಯ ಮೇಲೆ ಪರಿಣಾಮ ಬೀರುವಂಥ ಊಹಿಸಲಸಾಧ್ಯವಾದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಪಾಕಿಸ್ತಾನ ಸಂಸತ್ತಿನ ಸೆನೆಟ್ ವಿದೇಶಾಂಗ ಸಂಬಂಧಗಳ ಸಮಿತಿ ಮುಂದೆ ಜುಲೈ 9 ರಂದು ಹಾಜರಾದ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯಿದ್ ಯೂಸುಫ್, ಆಫ್ಘಾನಿಸ್ತಾನ ಕುರಿತ ತಮ್ಮ ದೇಶದ “ವಿಸ್ತೃತ ನೀತಿ ಚೌಕಟ್ಟ”ನ್ನು ಅನಾವರಣಗೊಳಿಸಿದ್ದಾರೆ. ಮೊದಲನೆಯದಾಗಿ, ತಾಲಿಬಾನ್ ಮತ್ತು ಕಾಬೂಲ್ ಸರ್ಕಾರದ ನಡುವೆ ಅಧಿಕಾರ ಹಂಚಿಕೆ ವ್ಯವಸ್ಥೆ ಏರ್ಪಡುವಂತೆ ಪ್ರಯತ್ನಗಳನ್ನು ನಡೆಸುವುದು; ಎರಡನೆಯದು, ಪಾಕಿಸ್ತಾನದೊಳಕ್ಕೆ ಅಸ್ಥಿರತೆ ಮತ್ತು ನಿರಾಶ್ರಿತರ ಹರಿವನ್ನು ಕನಿಷ್ಟಗೊಳಸಲು ಕ್ರಮಗಳನ್ನು ಕೈಗೊಳ್ಳುವುದು. ನೆಲಮಟ್ಟದಲ್ಲಿ ಪರಿಸ್ಥಿತಿ ಎಲ್ಲವನ್ನೂ ಮೀರಿ ಸಾಗುತ್ತಿದೆ, ಆದ್ದರಿಂದ ಮೊದಲ ಆಯ್ಕೆಯ ಸಾದ್ಯತೆ ಅಷ್ಟಾಗಿ ಕಾಣುತ್ತಿಲ್ಲ ಎಂದೂ ಅವರು ಹೇಳಿದ್ದಾರೆ.
ಪಾಕಿಸ್ತಾನದ ನಿಲುವು ಹೀಗಿರುವಾಗ, ಎಸ್‌ಸಿಒ ದಂತೆ ಪಾಕಿಸ್ತಾನ ಸಹಿತ ಯಾವುದೇ ಪ್ರಾದೇಶಿಕ ಸಾಮೂಹಿಕ ಪ್ರಯತ್ನಗಳಲ್ಲಿ ಭಾಗಿಯಾಗುವಲ್ಲಿ ಭಾರತ ಯಾವುದೇ ಬಗೆಯ ಹಿಂಜರಿಕೆ ತೋರಬಾರದು.
ಇಸ್ಲಾಮಿಕ್ ಎಮಿರೇಟ್: ಮಹಿಳೆಯರ ಪ್ರಶ್ನೆ
ಒಂದು ಇಸ್ಲಾಮಿಕ್ ಎಮಿರೇಟ್ ಸ್ಥಾಪಿಸುವುದು ತನ್ನ ಉದ್ದೇಶ ಎಂದು ತಾಲಿಬಾನ್ ಸ್ಪಷ್ಟಪಡಿಸಿದೆ. ಅದರಲ್ಲಿ ಯಾವುದೇ ‘ಪ್ರಜಾಸತ್ತಾತ್ಮಕ ಸಂರಚನೆ’ ಇರುವುದಿಲ್ಲ ಎಂದೂ ಹೇಳಿದೆ ಎಂದು ಪಾಕಿಸ್ತಾನಿ ಮೂಲಗಳು ಹೇಳಿವೆ. ಮಹಿಳೆಯರು ಮತ್ತು ಹೆಣ್ಣು ಮಕ್ಕಳನ್ನು ತಾಲಿಬಾನ್ ಆಡಳಿತ ಹೇಗೆ ನಡೆಸಿಕೊಳ್ಳಲಿದೆ ಎನ್ನುವುದೇ ಪ್ರಮುಖ ಕಾಳಜಿಯ ವಿಷಯವಾಗಿದೆ. ಮಹಿಳೆಯರಿಗೆ ಅತ್ಯುನ್ನತ ಮಟ್ಟದ ವರೆಗೆ ಶಿಕ್ಷಣ ಪಡೆಯಲು ಅವಕಾಶ ನೀಡಲಾಗುವುದೆಂದು ತಾಲಿಬಾನ್ ವಕ್ತಾರರೊಬ್ಬರು ಹೇಳಿದ್ದಾರೆ. ಆದರೆ ಅದು ಕಾರ್ಯರೂಪಕ್ಕೆ ಬಂದಾಗಲಷ್ಟೇ ನಂಬಬಹುದಾದ ವಿಷಯವಾಗಿದೆ. ಯಾವುದೇ ಪ್ರಾದೇಶಿಕ ಸಾಮೂಹಿಕ ಪ್ರಯತ್ನ ಮಾಡಬಹುದಾದ ಕನಿಷ್ಟ ಕೆಲಸವೆಂದರೆ, ಹಿಂದಿನ ತಾಲಿಬಾನ್ ಆಳ್ವಿಕೆಯಲ್ಲಿ ಅತ್ಯಂತ ಹೆಚ್ಚು ನರಳಿರುವ ಮಹಿಳೆಯರ ಹಕ್ಕುಗಳ ರಕ್ಷಣೆಯನ್ನು ಖಾತ್ರಿಪಡಿಸುವುದು.
2001ರಿಂದಲೂ ಭಾರತದಲ್ಲಿ ಆಡಳಿತ ನಡೆಸಿದ ಸರ್ಕಾರಗಳ ಆಫ್ಘನ್ ನೀತಿಯೆಂದರೆ ಪ್ರಮುಖವಾಗಿ ಅಮೆರಿಕ ಆಕ್ರಮಣಕ್ಕೆ ಬೆಂಬಲ ಕೊಡುವುದು ಮತ್ತು ಮೂಲರಚನೆ ಹಾಗೂ ಅಭಿವೃದ್ಧಿ ಪ್ರಾಜೆಕ್ಟ್ಗ್ಳ ಮೇಲೆ ಕೋಟ್ಯಂತರ ಡಾಲರ್ ಖರ್ಚು ಮಾಡಿ “ರಾಷ್ಟ್ರ ಕಟ್ಟುವ” ಪ್ರಕ್ರಿಯೆಯಲ್ಲಿ ನೆರವಾಗುವುದು. ಮುಂದಿನ ಪರಿಣಾಮ ಏನಾದೀತೆಂಬುದನ್ನು ಯೋಚಿಸದೆ ವಾಪಸ್ ಹೋಗುವ ಅಮೆರಿಕದ ಅವಸರದ ನಡೆಯನ್ನು ನೋಡಿದ ಮೇಲಾದರೂ, ಮೋದಿ ಸರ್ಕಾರ ಮತ್ತು ವಿದೇಶಾಂಗ ನೀತಿ ನಿರೂಪಕರು ತಮ್ಮ ಅಮೆರಿಕಾ-ಪರ ಏಕಮುಖ ವಿದೇಶಾಂಗ ನೀತಿಯ ಪುನರಾವಲೋಕನ ಮಾಡಬೇಕು ಮತ್ತು ಈಗ ಕ್ವಾಡ್‌ನಲ್ಲಿ ರೂಪು ತಳೆಯುತ್ತಿರುವ ಅಮೆರಿಕದೊಂದಿಗಿನ ನಿಕಟ ಸಾಮರಿಕ ಮೈತಿಯ ಬಗ್ಗೆಯೂ ಪುನರ್‌ವಿಮರ್ಶೆ ನಡೆಸುವುದು ಕೂಡ ಅಗತ್ಯ. ಆಫ್ಘನ್ ನೀತಿಯಂತೆ ಚೀನಾ ವಿರುದ್ಧ ಅಮೆರಿಕಾದ ಸಾಹಸಕ್ಕೆ ಅಂಗರಕ್ಷಕನಂತೆ ಹೊರಡುವುದು ಭಾರತವನ್ನು ಏಕಾಂಗಿಯಾಗಿಸುತ್ತದೆ ಹಾಗೂ ಅದರ ವ್ಯೂಹಾತ್ಮಕ ಸ್ವಾಯತ್ತೆಯ ಹಳಿ ತಪ್ಪಿಸಲಿದೆ.
ಅನು: ವಿಶ್ವ