ಅದುಮಿಡಲಾದ ಸತ್ಯ: ‘ಕಾಶ್ಮೀರ್ ಫೈಲ್ಸ್’ ಅಥವಾ ‘ಫರ್ಜಾನಿಯ’?

ಪ್ರೊ. ರಾಜೇಂದ್ರ ಚೆನ್ನಿ

ಜನಪ್ರಿಯ ಸಂಸ್ಕೃತಿಯು ಯಾವಾಗಲೂ, ಯಾವುದೋ ಅಧಿಕಾರ ಕೇಂದ್ರವನ್ನು ಅಥವಾ ಸಿದ್ಧಾಂತವನ್ನು ಪ್ರಚಾರ ಮಾಡುವುದು ಹೊಸದೇನಲ್ಲ. ಭಾರತದಲ್ಲಿ ಜನಪ್ರಿಯ ಚಲನಚಿತ್ರಗಳು ಮೊದಲಿನಿಂದಲೂ ಇಬ್ಬಗೆಯ ಪಾತ್ರ ನಿರ್ವಹಿಸಿವೆ. ಒಂದು ಕಡೆ ಮನರಂಜನೆಯ ಹೆಸರಿನಲ್ಲಿ ವ್ಯವಸ್ಥೆಯನ್ನು ಸಮರ್ಥಿಸಿವೆ. ಇನ್ನೊಂದು ಕಡೆಗೆ ತಮ್ಮದೇ ಆದ ನಿರೂಪಣೆಯ ಮಾದರಿಯನ್ನು ಬಿಟ್ಟುಕೊಡದೇ ಗಂಭೀರವಾದ ವಿಷಯಗಳನ್ನು ಮುನ್ನೆಲೆಗೆ ತಂದಿವೆ. ಆದರೆ ಈಗಿನ ವಿದ್ಯಮಾನವೆಂದರೆ ಕೋಮು ದ್ವೇಷ, ಒಂದು ಕೋಮಿನ ಬಗ್ಗೆ ವಿಕೃತ ಪೂರ್ವಗ್ರಹಗಳು, ಯುದ್ಧದ ಉನ್ಮಾದ, ಚರಿತ್ರೆಯ ಸುಳ್ಳು ವ್ಯಾಖ್ಯಾನಗಳು, ಇವುಗಳನ್ನು ವಸ್ತುವಾಗಿಟ್ಟುಕೊಳ್ಳುವ ಚಿತ್ರಗಳಿಗೆ ಪ್ರಭುತ್ವ ಹಾಗೂ ಅದರ ಸಂಘಟನೆಗಳು ಬೆಂಬಲ ನೀಡುತ್ತಿವೆ.

ಇತ್ತೀಚೆಗೆ ಬಿಡುಗಡೆಯಾದ ʻಕಾಶ್ಮೀರ್‌ ಫೈಲ್ಸ್‌ʼ ಭಾರತದಲ್ಲಿ ಒಂದು ಬಿರುಗಾಳಿಯನ್ನೇ ತಂದಿದೆ. ಅಂದ ಹಾಗೆ ಮುಹೂರ್ತ ನೋಡಿಕೊಂಡು ವಾರಕ್ಕೊಂದು ವಿವಾದಗಳನ್ನು ಹುಟ್ಟುಹಾಕುವುದು ಇಂದಿನ ಪ್ರಭುತ್ವ ಮತ್ತು ಅದರ ಸಂಘಟನೆಗಳಿಗೆ ಚಟವಾಗಿಬಿಟ್ಟಿದೆ. ಶಿರವಸ್ತ್ರದ (ಹಿಜಾಬ್) ವಿವಾದವು ತಾತ್ಕಾಲಿಕವಾಗಿ ಉಚ್ಛ ನ್ಯಾಯಾಲಯದ ತೀರ್ಪಿನಿಂದ ಸ್ವಲ್ಪ ತಣ್ಣಗಾಗುತ್ತಿರುವಾಗ, ಈಗ ಈ ಚಲನಚಿತ್ರದ ವಿವಾದ – ಇವುಗಳಲ್ಲಿ ಯಾವುದು ಆಕಸ್ಮಿಕವಲ್ಲ. ಪಂಚಾಂಗ ನೋಡಿದಂತೆ ಮುಂದಿನ ಚುನಾವಣೆ ನೋಡಿಕೊಂಡು ಇವುಗಳನ್ನು ಶುರು ಮಾಡಲಾಗುತ್ತದೆ. ಸಾಮಾಜಿಕ ತಾಣಗಳು, ಮಾಧ್ಯಮಗಳು ಹಾಗೂ ಇತ್ತೀಚೆಗೆ ಚಲನಚಿತ್ರಗಳು ಆಯುಧಗಳಾಗಿ ಪರಿವರ್ತಿತವಾಗಿವೆ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ಪಲಾಯನವನ್ನು ಕಾಶ್ಮೀರದ ಇತರ ಎಲ್ಲ ಸಮಸ್ಯೆಗಳಿಗಿಂತ ಮುಖ್ಯವಾಗಿ ಪರಿಗಣಿಸುವ ಸಂಪ್ರದಾಯವು ಹೊಸದಲ್ಲ. ಇದನ್ನು ಒಂದು ನಿರೂಪಣೆ ಅಥವಾ ಕಥನ (narrative) ವನ್ನಾಗಿಸಲಾಗಿದೆ. ಈ ಕಥನವು ಚರಿತ್ರೆಯನ್ನು ಕೋಮುವಾದಿ ಧ್ರುವೀಕರಣಗೊಳಿಸುವ ಪ್ರಯತ್ನದ ಭಾಗವಾಗಿದೆ. ಮತ್ತು ವಾಸ್ತವ ಸಂಗತಿಗಳನ್ನು ಬೇರೆ ವ್ಯಾಖ್ಯಾನಗಳನ್ನು ಮರೆಮಾಚಿ ಚರಿತ್ರೆಯನ್ನು ಮರು ನಿರೂಪಿಸುವ ಪ್ರಯತ್ನವಾಗಿದೆ. ಇದು ಈಗ ಹಲವಾರು ಸ್ತರಗಳಲ್ಲಿ ನಡೆಯುತ್ತಿದೆ. ಅಂತರ‍್ರಾಷ್ಟ್ರೀಯ ವಿದ್ವತ್ ವಲಯದಿಂದ ಹಿಡಿದು ಜನಪ್ರಿಯ ಸಿನೆಮಾಗಳವರೆಗೆ ಇವು ವ್ಯವಸ್ಥಿತವಾದ ಪ್ರಚಾರ ಹಾಗೂ ಪ್ರಚೋದನೆಯ ಉದ್ದೇಶವನ್ನು ಹೊಂದಿವೆ. ಅದಕ್ಕಾಗಿ ಪ್ರಭುತ್ವದ ಆಶ್ರಯದಲ್ಲಿ ಸಂಘಟನೆಗಳು ಜಾಲವೊಂದನ್ನು ಸಿದ್ಧಪಡಿಸುತ್ತವೆ. ‘ಕಾಶ್ಮೀರಿ ಫೈಲ್ಸ್’ ವಿದ್ಯಮಾನದಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಭುತ್ವವು ಸಂವಿಧಾನ, ಶಿಷ್ಟಾಚಾರ ಎಲ್ಲವನ್ನೂ ಬದಿಗಿಟ್ಟು ಪ್ರವೇಶ ಮಾಡಿದೆ. ಇದು ಅನೈತಿಕ ಮತ್ತು ಅಪಾಯಕಾರಿ.

ಈ ಚಲನಚಿತ್ರದ ತಂಡದೊಂದಿಗೆ ಪ್ರಧಾನಮಂತ್ರಿ ಮೋದಿಯವರು ಸಂದರ್ಶನದಲ್ಲಿ ಭಾಗಿಯಾದರು ಮತ್ತು ಚಲನಚಿತ್ರದ ಬಗ್ಗೆ ವಿವರವಾಗಿ ಮಾತನಾಡಿದರು. ಎಂದಿನಂತೆ ಅವರು ವಿರೋಧಿಗಳನ್ನೇ ಉದ್ದೇಶಿಸಿ ಮಾತನಾಡಿದರು. ಅದುಮಿಡಲಾದ ಸತ್ಯವನ್ನು ಇಂಥ ಚಲನಚಿತ್ರಗಳನ್ನು ತೋರಿಸುವುದು ಸರಿಯಾಗಿದೆಯೆಂದರು. ಈ ಚಲನಚಿತ್ರವನ್ನು ವಿರೋಧಿಸುತ್ತಿರುವವರು ಒಂದು ಕಡೆಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಾರೆ, ಆದರೆ ತಮಗಿಷ್ಟವಾಗದ ಚಲನಚಿತ್ರವನ್ನು ವಿರೋಧಿಸುತ್ತಾರೆ ಎಂದರು. ಮುಂದುವರೆದು, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆಯಾದ್ದರಿಂದ ಈ ಚಲನಚಿತ್ರವು ಹೇಳುವ ಸತ್ಯದ ಬಗ್ಗೆ ಒಪ್ಪಿಗೆ ಇಲ್ಲದಿದ್ದರೆ ತಾವು ಪರ್ಯಾಯವಾಗಿ ಇನ್ನೊಂದು ಚಲನಚಿತ್ರ ಮಾಡಬಹುದು ಎಂದರು. ಗೋಧ್ರಾ ಮತ್ತು ನಂತರದ ಗುಜರಾತ್ ನ ಜನಾಂಗೀಯ ಕೊಲೆಗಳ ಬಗ್ಗೆ ಎಲ್ಲಾ ಸತ್ಯಗಳನ್ನು ದಮನ ಮಾಡಲು ಪ್ರಜಾಪ್ರಭುತ್ವವನ್ನು ದಮನ ಮಾಡಿದ ರಾಜ್ಯ ಸರಕಾರದ ಅಂದಿನ ಮುಖ್ಯಮಂತ್ರಿಗಳು ಹೀಗೆ ಹೇಳುತ್ತಿದ್ದಾರೆ. 2005ರಲ್ಲಿ ಬಿಡುಗಡೆಯಾದ ‘ಫರ್ಜಾನಿಯಾ’ ಎನ್ನುವ ಚಲನಚಿತ್ರವು ಗೊಧ್ರಾ, ಗುಜರಾತ್ ಹಿಂಸೆಯ ಬಗ್ಗೆ ಇದೆ. ಈ ಚಲನಚಿತ್ರವು ಪ್ರದರ್ಶನವಾಗುವುದನ್ನು ಇವರ ಮಾರ್ಗದರ್ಶನದಲ್ಲಿ ಬಲಪಂಥೀಯ ಸಂಘಟನೆಗಳು ತಡೆದವು. ‘Gujarat Files’ ಕೃತಿಯನ್ನು ಬರೆದ ರಾಣಾ ಆಯೂಬ್ ಮತ್ತು ‘Gujarat A Tragedy’ ಬರೆದ ಸಿದ್ಧಾರ್ಥ ವರದರಾಜನ್ ಅವರಿಗೆ ಕೊಟ್ಟಿರುವ ಕಿರುಕುಳಗಳು ಎಲ್ಲರಿಗೂ ಪರಿಚಿತವೇ. ವಿಮರ್ಶಾತ್ಮಕವಾಗಿ ಏನನ್ನು ಹೇಳಿದರೂ, ಬರೆದರೂ ಕ್ರೂರವಾದ Trolling ಗಾಗಿ ಪ್ರಭುತ್ವವು ತನ್ನ ಐಟಿ ಸೆಲ್‌ ಅನ್ನು ರಚಿಸಿಕೊಂಡಿದೆ. ಜಗತ್ತಿನಲ್ಲಿ ಅತ್ಯುತ್ತಮ ಅಂಬೇಡ್ಕರ್ ವಿದ್ವಾಂಸರಾದ ಆನಂದ್ ತೇಲ್ತುಂಬ್ಡೆ ಯವರನ್ನು ಜೈಲಿನಲ್ಲಿಡಲಾಗಿದೆ.

ಈಗ ಅನೇಕ ಬಿ.ಜೆ.ಪಿ. ಆಡಳಿತವಿರುವ ರಾಜ್ಯಗಳಲ್ಲಿ (ಕರ್ನಾಟಕವು ಸೇರಿದಂತೆ) ‘ಕಾಶ್ಮೀರ್ ಫೈಲ್ಸ್’ಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ನೆನ್ನೆ (15 ಮಾರ್ಚ್) ಶಿವಮೊಗ್ಗೆಯಲ್ಲಿ ಈ ಚಲನಚಿತ್ರವನ್ನು ಉಚಿತವಾಗಿ ಪ್ರದರ್ಶನ ಮಾಡಲಾಯಿತು. ಇನ್ನೂ ಮೂರುದಿನ ಉಚಿತ ಪ್ರದರ್ಶನವನ್ನು ಮುಂದುವರೆಸಲಾಗಿದೆ. ಕರ್ನಾಟಕದ ಜನಪ್ರತಿನಿಧಿಗಳಿಗಾಗಿ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯವೆಂದರೆ ಸರಕಾರಗಳು ತಮ್ಮ  ಅಧಿಕಾರವನ್ನು ಅನೈತಿಕವಾಗಿ ಬಳಸಿಕೊಂಡು ಒಂದು ಚಲನಚಿತ್ರವನ್ನು ಬೆಂಬಲಿಸುವುದಲ್ಲ. ಪುನೀತ್ ರಾಜ್‌ಕುಮಾರ್ ಅವರ ‘ಜೇಮ್ಸ್’ ಚಲನಚಿತ್ರವನ್ನು ತೋರಿಸಬೇಕಾಗಿದ್ದ ಚಿತ್ರಗೃಹಗಳಲ್ಲಿ ‘ಕಾಶ್ಮೀರ್ ಫೈಲ್ಸ್’ ತೋರಿಸುವುದನ್ನು ಕನ್ನಡ ಸಂಘಟನೆಗಳು, ಅಭಿಮಾನಿಗಳು ವಿರೋಧಿಸಿದ್ದರಿಂದ ಬದಲಾವಣೆ ಮಾಡಲಾಯಿತು. ಈ ಚಲನಚಿತ್ರವನ್ನು ಎಲ್ಲಾ ಮಕ್ಕಳು ನೋಡಲಿ ಎಂದು ಪ್ರಚಾರ ಮಾಡಲಾಗುತ್ತಿದೆ.

‘ಸತ್ಯವನ್ನು ಅದುಮಿಡಲು ಇಡೀ ವ್ಯವಸ್ಥೇಯೇ ಕೆಲಸ ಮಾಡಿತು’ – ಕೃಪೆ: ಸತೀಶ್ ಆಚಾರ್ಯ

ಜನಪ್ರಿಯ ಸಂಸ್ಕೃತಿಯು ಯಾವಾಗಲೂ, ಯಾವುದೋ ಅಧಿಕಾರ ಕೇಂದ್ರವನ್ನು ಅಥವಾ ಸಿದ್ಧಾಂತವನ್ನು ಪ್ರಚಾರ ಮಾಡುವುದು ಹೊಸದೇನಲ್ಲ. ಭಾರತದಲ್ಲಿ ಜನಪ್ರಿಯ ಚಲನಚಿತ್ರಗಳು ಮೊದಲಿನಿಂದಲೂ ಇಬ್ಬಗೆಯ ಪಾತ್ರ ನಿರ್ವಹಿಸಿವೆ. ಒಂದು ಕಡೆ ಮನರಂಜನೆಯ ಹೆಸರಿನಲ್ಲಿ ವ್ಯವಸ್ಥೆಯನ್ನು ಸಮರ್ಥಿಸಿವೆ. ಇನ್ನೊಂದು ಕಡೆಗೆ ತಮ್ಮದೇ ಆದ ನಿರೂಪಣೆಯ ಮಾದರಿಯನ್ನು ಬಿಟ್ಟುಕೊಡದೇ ಗಂಭೀರವಾದ ವಿಷಯಗಳನ್ನು ಮುನ್ನೆಲೆಗೆ ತಂದಿವೆ. ಉದಾಹರಣೆಗೆ ಹಿಂದಿ ಬಾಲಿವುಡ್ ಚಿತ್ರಗಳು ಕೋಮು ಸೌಹಾರ್ದತೆ, ರೈತರ ಬವಣೆಗಳು, ಕಾರ್ಮಿಕರ ಜೀವನ – ಇವುಗಳ ಬಗ್ಗೆ ಪ್ರಬುದ್ಧವಾಗಿ, ಜನರ ಮನಸೆಳೆಯುವ ರೀತಿಯಲ್ಲಿ ನಿರೂಪಿಸಿವೆ. ಇದಕ್ಕೆ ಒಂದು ಕಾರಣವೆಂದರೆ ಬಾಲಿವುಡ್‌ನ ಎರಡು ಹಂತಗಳಲ್ಲಿ ಪ್ರಗತಿಶೀಲ ಕವಿಗಳು, ಬರಹಗಾರರು ಆ ಉದ್ದಿಮೆಯ ಭಾಗವಾಗಿದ್ದರು. ಭಾರತದ ಸರಕಾರಗಳು ಒಂದು ಕಾಲದಲ್ಲಿ ಸಣ್ಣ ಬಜೆಟ್ಟಿನ ಒಳ್ಳೆಯ ಚಿತ್ರಗಳಿಗೆ ಸಾಲವನ್ನು ನೀಡಿ ಬೆಂಬಲಿಸಿದವು. ಈ ಚಿತ್ರಗಳು ಪ್ರಭುತ್ವವನ್ನು ಬೆಂಬಲಿಸಲಿಲ್ಲ. ಆದರೆ ಈಗಿನ ವಿದ್ಯಮಾನವೆಂದರೆ ಕೋಮು ದ್ವೇಷ, ಒಂದು ಕೋಮಿನ ಬಗ್ಗೆ ವಿಕೃತ ಪೂರ್ವಗ್ರಹಗಳು, ಯುದ್ಧದ ಉನ್ಮಾದ, ಚರಿತ್ರೆಯ ಸುಳ್ಳು ವ್ಯಾಖ್ಯಾನಗಳು, ಇವುಗಳನ್ನು ವಸ್ತುವಾಗಿಟ್ಟುಕೊಳ್ಳುವ ಚಿತ್ರಗಳಿಗೆ ಪ್ರಭುತ್ವ ಹಾಗೂ ಅದರ ಸಂಘಟನೆಗಳು ಬೆಂಬಲ ನೀಡುತ್ತಿವೆ. ಇದರ ಉದ್ದೇಶವೆಂದರೆ ಕೋಮು ಧ್ರುವೀಕರಣಕ್ಕೆ ಸಹಾಯವಾಗುವ Mass Hysteria ಅನ್ನು ಹುಟ್ಟು ಹಾಕುವುದಾಗಿದೆ. ದೇಶ ಪ್ರೇಮದ ಹೆಸರಿನಲ್ಲಿ ಬಂದ ಯುದ್ಧಕೇಂದ್ರಿತ ಚಿತ್ರಗಳು ಇದರ ಉದಾಹರಣೆಯಾಗಿವೆ. ಈ ವಿದ್ಯಮಾನದ ಪರಿಣಾಮಗಳು ಇಂದಿನ ರಾಜಕೀಯ ಸ್ಥಿತಿಯಲ್ಲಿ ವಿಪರೀತವಾಗಿರುತ್ತವೆ. ಅಲ್ಲದೆ ಅನಾವಶ್ಯಕವಾದ ವಿಚಾರಗಳನ್ನು ನಾಗರೀಕ ಸಮುದಾಯದಲ್ಲಿ ಹುಟ್ಟುಹಾಕುತ್ತವೆ. ಅದರಲ್ಲೂ ಅವಿಮರ್ಶಾತ್ಮಕವಾಗಿ, ಅತಾರ್ಕಿಕವಾಗಿ ಭಾವನೆಗಳ ಪ್ರಚೋದನೆಗಾಗಿಯೇ ನಿರ್ಮಿಸಲಾದ ಚಿತ್ರಗಳೂ ಪ್ರಭುತ್ವದ ಬೆಂಬಲದೊಂದಿಗೆ ಸಾಂಸ್ಕೃತಿಕ ಅಪಾಯಗಳನ್ನು ಖಂಡಿತ ತರುತ್ತವೆ.

Donate Janashakthi Media

Leave a Reply

Your email address will not be published. Required fields are marked *