ಸಿ. ಸಿದ್ದಯ್ಯ
ಅಡುಗೆ ಅನಿಲದ (ಎಲ್ಪಿಜಿ) ಸಿಲಂಡರ್ ಬೆಲೆ ಮಾರ್ಚ್ ಒಂದರಂದು ಮತ್ತೆ 50 ರೂಪಾಯಿ ಏರಿಕೆಯಾಗಿದೆ. ಇದರೊಂದಿಗೆ 14.2 ಕೆಜಿ ಅನಿಲದ ಗೃಹಬಳಕೆ ಸಿಲಂಡರ್ ಬೆಲೆ ಬೆಂಗಳೂರಿನಲ್ಲಿ 1,103 ರೂ. ದಾಟಿದೆ. ಬೆಲೆ ಏರಿಕೆಯ ಈ ಓಟಕ್ಕೆ ಕಡಿವಾಣ ಇಲ್ಲದಂತಾಗಿದೆ. ಬಡತನದ ರೇಖೆಗಿಂತ ಕೆಳಗಿನ (ಬಿಪಿಎಲ್) ಕುಟುಂಬಗಳು ದುಬಾರಿ ಹಣ ಕೊಟ್ಟು ಅನಿಲವನ್ನು ಮರು ತುಂಬಿಸಿಕೊಳ್ಳಲಾಗದ ಪರಿಸ್ಥಿತಿಗೆ ಬಂದಿವೆ. ಗ್ರಾಮೀಣ ಪ್ರದೇಶದ ಬಹಳಷ್ಟು ಬಡ ಕುಟುಂಬಗಳು ಮತ್ತೆ ಸೌದೆ ಒಲೆಯ ಮೊರೆ ಹೋಗಿವೆ. ವಾಣಿಜ್ಯ ಬಳಕೆಯ 19 ಕೆಜಿ ಅನಿಲದ ಸಿಲಂಡರ್ ಬೆಲೆಯೂ ಒಂದೇ ಬಾರಿಗೆ 350 ರೂ. ಹೆಚ್ಚಳವಾಗಿದೆ. ಈಗ ಇದರ ದರ 2,119 ರೂ.
ಅಡುಗೆ ಅನಿಲದ ಬೆಲೆ ಏಕಿಷ್ಟು ದುಬಾರಿಯಾಗುತ್ತಿದೆ? ಬೆಲೆ ಏರಿಕೆಗೆ ಮುಕ್ತ ಆರ್ಥಿಕ ನೀತಿ ಹೇಗೆ ಕಾರಣ? ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸೇರಿದಂತೆ ಈ ಹಿಂದಿನ ಸರ್ಕಾರಗಳು ಗೃಹಬಳಕೆಯ ಅಡುಗೆ ಅನಿಲದ ಮೇಲಿನ ಸಬ್ಸಿಡಿ ತೆಗೆಯಲು ಏನೆಲ್ಲಾ ತಂತ್ರಗಳನ್ನು ಮಾಡಿದವು? ಭಾರತ ಸರ್ಕಾರದ ಅಂತಿಮ ಗುರಿ ಏನು? ಇವೆಲ್ಲವುಗಳ ಕುರಿತು ಒಂದು ವಿಶ್ಲೇ಼ಷಣಾ ವರದಿ ಇಲ್ಲಿದೆ.
ಡಬ್ಲ್ಯೂಟಿಓ ಜೊತೆಗಿನ ಒಪ್ಪಂದ
ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯೂಟಿಒ)ಯ ಜೊತೆ 1991ರಲ್ಲಿ ಭಾರತ ಸರ್ಕಾರ ಮಾಡಿಕೊಂಡ ಒಪ್ಪಂದದ ಒಂದು ಅಂಶ ಅಡುಗೆ ಅನಿಲದ ಮೇಲಿನ ಈ ಸಬ್ಸಿಡಿ ಕಡಿತ ಮತ್ತು ಬೆಲೆ ಏರಿಕೆಗೆ ಪ್ರಮುಖ ಕಾರಣ. ಜನಸಾಮಾನ್ಯರಿಗೆ ನೀಡುತ್ತಿರುವ ಆಹಾರದ ಮೇಲಿನ ಸಬ್ಸಿಡಿ, ರಸಗೊಬ್ಬರ, ವಿದ್ಯುತ್, ಸೀಮೆಎಣ್ಣೆ, ಡೀಸಲ್, ಪೆಟ್ರೋಲ್, ಅಡುಗೆ ಅನಿಲ ಇವುಗಳಿಗೆ ಸರ್ಕಾರ ನೀಡುತ್ತಿರುವ ರಿಯಾಯಿತಿಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕು ಮತ್ತು ಈ ಎಲ್ಲವುಗಳ ಬೆಲೆ ನಿಗದಿ ಮೇಲಿನ ಸರ್ಕಾರದ ನಿಯಂತ್ರಣವನ್ನು ತೆಗೆದುಹಾಕಬೇಕು. ಇವುಗಳನ್ನು ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ತೆರೆದಿಡಬೇಕು, ಇವುಗಳನ್ನು ಖಾಸಗಿಯವರಿಗೆ ಬಿಟ್ಟುಕೊಡಬೇಕು ಎಂಬುದು ಡಬ್ಯ್ಲೂಟಿಒ ಸಂಸ್ಥೆ ವಿಧಿಸಿದ ಷರತ್ತುಗಳಲ್ಲಿ ಕೆಲವು ಅಂಶಗಳಾಗಿವೆ. ಮುಕ್ತ ಆರ್ಥಿಕ ನೀತಿಗಳನ್ನು ಒಪ್ಪಿಕೊಂಡ ನಂತರ ಕೇಂದ್ರದಲ್ಲಿ ಆಳಿದ ಸರ್ಕಾರ (ಕಾಂಗ್ರೆಸ್(ಪಿ.ವಿ. ನರಸಿಂಹರಾವ್), ಎನ್ಡಿಎ(ಅಟಲ್ ಬಿಹಾರಿ ವಾಜಪೇಯಿ), ಯುಪಿಎ-1 ಮತ್ತು ಯುಪಿಎ-2 (ಮನನೋಹನ್ ಸಿಂಗ್), ಅಥವಾ ಬಿಜೆಪಿ(ನರೇಂದ್ರ ಮೋದಿ) ಸರ್ಕಾರಗಳು) ಅಧಿಕಾರದಲ್ಲಿದ್ದರೂ ಡಬ್ಲ್ಯೂಟಿಒ ಒಪ್ಪಂದ ಜಾರಿಮಾಡಲು ಮುಂದಾಗುತ್ತವೆ. ಯುಪಿಎ-1ರ ಆಡಳಿತದ ಸಂದರ್ಭದಲ್ಲಿ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ಕೊಟ್ಟಿದ್ದ ಎಡಪಕ್ಷಗಳು, ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಒಪ್ಪಂದದ ಷರತ್ತುಗಳ ಮೂಲಕ ಇಂತಹ ಜನವಿರೋಧಿ ನೀತಿಗಳ ಜಾರಿಯ ವೇಗಕ್ಕೆ ಸ್ವಲ್ಪಮಟ್ಟಿಗೆ ತಡೆಯೊಡ್ಡಿದ್ದವು.
ಪೆಟ್ರೋಲಿಯಂ ಪದಾರ್ಥಗಳ ಮೇಲಿನ ಸರ್ಕಾರದ ನಿಯಂತ್ರಣ ರದ್ದು:
2008ರಲ್ಲಿ ಯುಪಿಎ-1ರ ಸರ್ಕಾರಕ್ಕೆ ಎಡಪಕ್ಷಗಳು ನೀಡಿದ್ದ ಬೆಂಬಲವನ್ನು ಹಿಂಪಡೆದ ನಂತರದ ಯುಪಿಎ-1ರ ಮತ್ತು ಯುಪಿಎ-2ರ ಆಡಳಿತದ ಅವಧಿಯಲ್ಲಿ ಡಬ್ಲ್ಯೂಟಿಒ ಒಪ್ಪಂದಗಳ ಜಾರಿಗೆ ಸರ್ಕಾರ ಮುಂದಾಯಿತು. ಮುಕ್ತ ಆರ್ಥಿಕ ನೀತಿಗಳಿಗೆ ಅನುಗುಣವಾಗಿ ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ, ಅಡುಗೆ ಅನಿಲ ಇವುಗಳ ಮೇಲಿನ ಸರ್ಕಾರದ ನಿಯಂತ್ರಣವನ್ನು ಹಿಂಪಡೆಯಬೇಕು. ಹೀಗೆ ಮಾಡಬೇಕಾದರೆ, ಮೊದಲು ಅವುಗಳಿಗೆ ನೀಡುತ್ತಿರುವ ಸಬ್ಸಿಡಿ ಸ್ಥಗಿತಗೊಳಿಸಬೇಕು. ಈ ಎಲ್ಲಾ ಪದಾರ್ಥಗಳ ಮೇಲಿನ ಸಬ್ಸಿಡಿಗಳನ್ನು ಒಂದೇ ಬಾರಿ ಹಿಂತೆಗೆದರೆ ಜನರ ಪ್ರತಿರೋಧವನ್ನು ಎದುರಿಸಬೇಕಾದೀತು ಎಂಬ ಭಯ ಆಳುವ ಪಕ್ಷಗಳಿಗೆ. ಈ ಕಾರಣದಿಂದ ಮೊದಲಿಗೆ ಪೆಟ್ರೋಲಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ಹಂತಹಂತವಾಗಿ ಕಡಿತಗೊಳಿಸುತ್ತಾ ಬಂತು. ಪೆಟ್ರೋಲ್ ಬೆಲೆಯನ್ನು 15 ದಿನಕ್ಕೊಮ್ಮೆ ಸ್ವಲ್ಪ ಸ್ವಲ್ಪವೇ ದರ ಹೆಚ್ಚಳ ಮಾಡುತ್ತಾ ಹೋಯಿತು. ಅಷ್ಟರ ಮಟ್ಟಿಗೆ ಸಬ್ಸಿಡಿ ಹಣ ಸರ್ಕಾರಕ್ಕೆ ಉಳಿತಾಯವಾಗುತ್ತಾ ಬಂತು. ಈ ರೀತಿಯ ದರ ಹೆಚ್ಚಳದಿಂದ ಪೆಟ್ರೋಲ್ ಗೆ ಸರ್ಕಾರ ಕೊಡುತ್ತಿದ್ದ ಸಬ್ಸಿಡಿ ಸಂಪೂರ್ಣವಾಗಿ ನಿಂತುಹೋಯಿತು. ಇದರ ಮೇಲಿದ್ದ ಸರ್ಕಾರದ ನಿಯಂತ್ರಣವನ್ನು ಮುಕ್ತಗೊಳಿಸಲಾಯ್ತು, ಅದರ ಬೆಲೆ ನಿಗದಿಯ ಅಧಿಕಾರ ತೈಲ ಕಂಪನಿಗಳ ಪಾಲಾಯಿತು.
ಪೆಟ್ರೋಲ್ ನಂತರ ಡೀಸೆಲ್ ಬೆಲೆಯ ಸರದಿ. ಪ್ರತಿ ಲೀಟರ್ ಡೀಸೆಲ್ ಮೇಲೆ ಪ್ರತಿ ತಿಂಗಳು 50 ಪೈಸೆ ಏರಿಕೆ ಮಾಡುವ ಮೂಲಕ, ಅದಕ್ಕೆ ನೀಡುತ್ತಿದ್ದ ಸಬ್ಸಿಡಿ ಪ್ರಮಾಣವನ್ನು ಸರ್ಕಾರ ಕಡಿತಗೊಳಿಸುತ್ತಾ ಬಂತು. ಡೀಸೆಲ್ ಮೇಲಿನ ಸಬ್ಸಿಡಿಯನ್ನು ಸಂಪೂರ್ಣವಾಗಿ ಹಿಂಪಡೆಯುವ ಮುನ್ನ 2014ರ ಲೋಕಸಭಾ ಚುನಾವಣೆ ಬಂತು. ಆ ಚುನಾವಣೆಯಲ್ಲಿ ಯುಪಿಎ ಸರ್ಕಾರ ಸೋತು ಬಿಜೆಪಿ ನೇತೃತ್ವದ ಎನ್ಡಿಎ-ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂತು. ಮೋದಿ ಸರ್ಕಾರವೂ ಮುಕ್ತ ಆರ್ಥಿಕ ನೀತಿಗಳನ್ನು ಮುಂದುವರಿಸಿತು. ಡೀಸೆಲ್ ಮೇಲಿನ ಸಬ್ಸಿಡಿ ಕಡಿತದ ಹಿಂದಿನ ಸರ್ಕಾರದ ತಂತ್ರವನ್ನು ಮೋದಿ ಸರ್ಕಾರ ಮುಂದುವರಿಸಿತು. ಅಂದರೆ ಮೋದಿ ಆಡಳಿತದಲ್ಲೂ ಡೀಸೆಲ್ ದರವನ್ನು 15 ದಿನಗಳಿಗೊಮ್ಮೆ ಹೆಚ್ಚಳ ಮಾಡುವುದನ್ನು ಮುಂದುವರಿಸಿತು. ಸಬ್ಸಿಡಿ ಸಂಪೂರ್ಣವಾಗಿ ಕಡಿತಗೊಂಡ ನಂತರ ಡೀಸೆಲ್ಲನ್ನೂ ಮುಕ್ತಮಾರುಕಟ್ಟೆಗೆ ತೆರೆದಿಡಲಾಯ್ತು. ಪಡಿತರದ ಮೂಲಕ ವಿತರಣೆ ಮಾಡುತ್ತಿದ್ದ ಸೀಮೆಎಣ್ಣೆಯನ್ನು ಸ್ವಲ್ಪಸಲ್ಪವೇ ಕಡಿಮೆ ಮಾಡುತ್ತಾ, ಉಜ್ವಲ ಯೋಜನೆಯ ಪ್ರಯೋಜನ ಪಡೆದು ಜನಸಾಮಾನ್ಯರು ಅಡುಗೆ ಮಾಡಲು ಸೀಮೆಎಣ್ಣೆ ಬದಲು ಅನಿಲ ಬಳಕೆ ಮಾಡಲು ಮುಂದಾದಾಗ ಪಡಿತರದ ಮೂಲಕ ವಿತರಣೆ ಮಾಡುತ್ತಿದ್ದ ಸೀಮೆಎಣ್ಣೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಯ್ತು.
ಅಡುಗೆ ಅನಿಲದ ಮೇಲಿನ ಸಬ್ಸಿಡಿ:
ಯುಪಿಎ-2ರ ಅವಧಿಯಲ್ಲಿ ಪೆಟ್ರೋಲಿಯಂ ಸಚಿವರಾಗಿದ್ದ ಎಂ.ವೀರಪ್ಪ ಮೊಯ್ಲಿ ಅಡುಗೆ ಅನಿಲಕ್ಕೆ ನೀಡುತ್ತಿರುವ ಸಬ್ಸಿಡಿ ಹಿಂತೆಗೆದುಕೊಳ್ಳುವ ಪ್ರಯತ್ನ ಮಾಡಿದರು. ಒಂದು ಕುಟುಂಬಕ್ಕೆ ವರ್ಷಕ್ಕೆ 6 ಸಬ್ಸಿಡಿ ಸಹಿತ ಸಿಲಿಂಡರುಗಳನ್ನು ಮಾತ್ರ ನೀಡುವುದಾಗಿಯೂ, ಆರಕ್ಕಿಂತ ಹೆಚ್ಚು ಸಿಲಿಂಡರ್ ಗಳು ಬೇಕಾದಲ್ಲಿ ಮಾರುಕಟ್ಟೆ ದರದಲ್ಲಿ ಖರೀದಿಸಬೇಕೆಂದೂ ಆದೇಶ ಹೊರಡಿಸಿದರು. ಜನರ ಪ್ರತಿರೋಧದಿಂದಾಗಿ ಇದನ್ನು 9 ಸಿಲಿಂಡರ್ ಗಳಿಗೆ ನಿಗದಿಪಡಿಸಿದರು. ಮತ್ತೊಂದು ಪ್ರಯತ್ನವಾಗಿ ದೇಶದ 56 ಜಿಲ್ಲೆಗಳಲ್ಲಿ ಗ್ರಾಹಕರ ಖಾತೆಗೆ ‘ನೇರ ನಗದು ಯೋಜನೆ’ ಜಾರಿಗೆ ಮನಮೋಹನ್ ಸಿಂಗ್ ಸರ್ಕಾರ ಮುಂದಾಯಿತು. ಅದರಲ್ಲಿ ನಿರೀಕ್ಷಿಸಿದಷ್ಟು ಯಶಸ್ಸು ಕಾಣಲಿಲ್ಲ. ಬಹಳಷ್ಟು ಬಡ ಗ್ರಾಹಕರ ಬಳಿ ಭ್ಯಾಂಕ್ ಖಾತೆ ಇಲ್ಲದಿದ್ದುದು ಇದಕ್ಕೆ ಕಾರಣ. ಅಷ್ಟರಲ್ಲಿ ಚುನಾವಣೆ ಸಮೀಪಿಸಿದ ಕಾರಣ ವರ್ಷಕ್ಕೆ 12 ಸಬ್ಸಿಡಿ ಸಹಿತ ಸಿಲಿಂಡರ್ ಪಡೆಯಲು ಅವಕಾಶ ಮಾಡಿಕೊಡಲಾಯಿತು.
ಜನ್ ಧನ್ ಯೋಜನೆ
ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಪ್ರಾರಂಭದಿಂದಲೇ ಡಬ್ಲ್ಯೂಟಿಒ ಷರತ್ತುಗಳನ್ನು ಪೂರೈಸಲು ವಿವಿಧ ಬಗೆಯ ಕ್ರಮಗಳನ್ನು ಕೈಗೊಳ್ಳಲು ಮುಂದಾಯಿತು. ಸರ್ಕಾರದ ಯೋಜನೆಗಳು ಜನಪರವಾಗಿವೆ ಎಂದು ನಂಬಿಸುತ್ತಲೇ, ಡಬ್ಲ್ಯೂಟಿಒ ಷರತ್ತುಗಳ ಜನವಿರೋಧಿ ನೀತಿಗಳನ್ನು ಜಾರಿಗೆ ತರಲು ಮುಂದಾದರು. ಅಡುಗೆ ಅನಿಲಕ್ಕೆ ನೀಡುತ್ತಿರುವ ಸಬ್ಸಿಡಿ ಹಿಂಪಡೆಯಲು ಯುಪಿಎ ಸರ್ಕಾರ ಜಾರಿಗೆ ತಂದ ‘ನೇರ ನಗದು ಯೋಜನೆ’ ಯಶಸ್ವಿಯಾಗದಿರುವುದಕ್ಕೆ ಕಾರಣಗಳನ್ನು ಹುಡುಕಿತು. ಬಹಳಷ್ಟು ಜನತೆ ಬ್ಯಾಂಕ್ ಖಾತೆ ಹೊಂದಿಲ್ಲದಿರುವುದೂ ಇದರ ವಿಫಲತೆಗೆ ಒಂದು ಪ್ರಮುಖ ಕಾರಣ ಎಂದು ತಿಳಿಯಿತು.
ಈ ಅಡೆತಡೆ ತೆಗೆಯಲು ಒಂದು ಉಪಾಯ ಮಾಡಿದರು. ಬಡವರೂ ಬ್ಯಾಂಕ್ ಖಾತೆ ತೆರೆಯುವಂತೆ ಮಾಡಲು ‘ಜನ್ ಧನ್ ಯೋಜನೆ’ ಜಾರಿಗೆ ತಂದರು. ಜನ್ ಧನ್ ಯೋಜನೆಯ ಮೂಲಕ ಯಾವುದೇ ಹಣ ಇಡದೆ ಬ್ಯಾಂಕ್ ಖಾತೆ ತೆರೆಯಬುಹುದು ಎಂದು ಸರ್ಕಾರ ಘೋಷಣೆ ಮಾಡಿತು. ಇದನ್ನು ಮೋದಿ ಸರ್ಕಾರಕ್ಕೆ ಬಡಜನರ ಪರವಾದ ಕಾಳಜಿ ಎಂದು ಬಣ್ಣಿಸಿದರು. ಇಷ್ಟನ್ನೇ ಹೇಳಿದರೆ ಬಹಳಷ್ಟು ಜನರು ಬ್ಯಾಂಕ್ ಖಾತೆ ತೆರೆಯುವ ಶ್ರಮ ಪಡುತ್ತಿರಲಿಲ್ಲ. ಬ್ಯಾಂಕ್ ಖಾತೆ ತೆರೆಯುವವರಿಗೆ ಕೆಲವು ಪ್ರೋತ್ಸಾಹದ ಕೊಡುಗೆಗಳ ಪೊಳ್ಳು ಘೋಷಣೆಯನ್ನೂ ಮಾಡಿದರು. ಈ ಯೋಜನೆಯಲ್ಲಿ ಬ್ಯಾಂಕ್ ಖಾತೆ ತೆರೆದರೆ ಒಂದು ಲಕ್ಷದ ವರೆಗೆ ವಿಮಾ ಸೌಲಭ್ಯ, ಡೆಬಿಟ್ ಕಾರ್ಡ್, ಐದು ಸಾವಿರ ರೂ.ಗಳ ವರೆಗೆ ಓವರ್ ಡ್ರಾಪ್ಟ್ ಸೌಲಭ್ಯ ಎಂಬ ಘೋಷಣೆಯನ್ನು ಸರ್ಕಾರ ಮಾಡಿದರೆ, ಬಿಜೆಪಿ ಅನುಯಾಯಿಗಳು “ಮೋದಿ ಕಪ್ಪು ಹಣ ಹೊರತೆಗೆದು ಜನ್ ಧನ್ ಖಾತೆಗೆ ಲಕ್ಷ ಲಕ್ಷ ಹಣ ಹಾಕುತ್ತಾರೆ, ಮನೆ ಇಲ್ಲದವರಿಗೆ ಮನೆ ಕಟ್ಟಿಸಿಕೊಡುತ್ತಾರೆ…” ಎಂದೆಲ್ಲಾ ಪ್ರಚಾರ ಮಾಡಿ ಜನರನ್ನು ನಂಬಿಸಿದರು. ಕೋಟ್ಯಾಂತರ ಬಡವರು ಬ್ಯಾಂಕುಗಳ ಮುಂದೆ ಸಾಲುಗಟ್ಟಿ ನಿಂತು ಜನ್ ಧನ್ ಖಾತೆ ತೆರೆದರು.
ನೇರ ನಗದು ಯೋಜನೆ
ಮುಂದಿನ ಹಂತವಾಗಿ ‘ಬ್ಯಾಂಕ್ ಖಾತೆಗೆ ಅನಿಲ ಸಂಪರ್ಕದ ಸಂಖ್ಯೆ ಜೋಡಣೆ’ ಮಾಡುವಂತೆ ಕರೆ ನೀಡಿದರು. ಆ ನಂತರ ಗ್ರಾಹಕರ ಖಾತೆಗೆ ಹಣ ವರ್ಗಾಯಿಸುವ ‘ನೇರ ನಗದು ಯೋಜನೆ'(ಡಿಬಿಟಿ) ಜಾರಿಗೆ ತಂದು, ಗ್ರಾಹಕರು ಮಾರುಕಟ್ಟೆ ದರದಲ್ಲಿ ಸಿಲಿಂಡರ್ ಖರೀದಿಸಿ, ಸಬ್ಸಿಡಿ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಹಾಕುತ್ತೇವೆ ಎಂದರು. ಇದು ಸಬ್ಸಿಡಿ ಸೋರಿಕೆಯನ್ನು ತಡೆಯುವ ಮೂಲಕ ನಿಜವಾದ ಫಲಾನುಭವಿಗಳಿಗೆ ತಲುಪಿಸುವ ಉದ್ದೇಶವಾಗಿದೆ ಎಂದರು. ಈ ಎಲ್ಲಾ ಪ್ರಕ್ರಿಯೆಯಲ್ಲಿ ಸಬ್ಸಿಡಿ ಅನಿಲದ ಕೋಟ್ಯಾಂತರ ಸಂಪರ್ಕ ಕಡಿತಗೊಂಡು ಅಷ್ಟರ ಮಟ್ಟಿಗೆ ಸರ್ಕಾರಕ್ಕೆ ಸಬ್ಸಿಡಿ ಹೊರೆ ಕಡಿಮೆಯಾಯಿತು.
ಉಳ್ಳವರಿಗೇಕೆ ಸಬ್ಸಿಡಿ?
ಇದರ ಮುಂದುವರಿದ ಭಾಗವಾಗಿ ಪ್ರಧಾನಿ ಮೋದಿಯವರು ʻʻಉಳ್ಳವರಿಗೇಕೆ ಸಬ್ಸಿಡಿ? ನೋಡಿ, ಹಳ್ಳಿಗಳಲ್ಲಿ ಬಡ ಮಹಿಳೆಯರು ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತ ಹೊಗೆಯಲ್ಲಿ ಕಣ್ಣೀರು ಸುರಿಸುತ್ತಿದ್ದಾರೆ. ಅವರಿಗಾಗಿ ಸಬ್ಸಿಡಿ ಅನಿಲ ಬಿಟ್ಟುಕೊಡಿʼʼ ಎನ್ನುತ್ತ ‘ಗಿವ್ ಇಟ್ ಅಪ್’ ಹೆಸರಿನಲ್ಲಿ ಸಬ್ಸಿಡಿ ಸಿಲಿಂಡರ್ ಹಿಂತಿರುಗಿಸುವಂತೆ ಮನವಿ ಮಾಡಿದರು. ಈ ಮನವಿಗೆ ಕೋಟಿಗೂ ಹೆಚ್ಚು ಕುಟುಂಬಗಳು ಸ್ಪಂದಿಸಿ ತಮ್ಮ ಸಬ್ಸಿಡಿ ಸಿಲಿಂಡರ್ ಹಿಂತಿರುಗಿಸಿ, ಮಾರುಕಟ್ಟೆ ದರದಲ್ಲಿ ಅನಿಲ ಖರೀದಿಸಲು ಮುಂದಾದರು. ಇಂತಹ ಒಂದಷ್ಟು ಕುಟುಂಬಗಳಿಗೆ ಪ್ರಾರಂಭದಲ್ಲಿ ಮೋದಿಯವರೇ ಕೊಟ್ಟಿದ್ದಾರೆ ಎನ್ನಲಾದ ಧನ್ಯವಾದಗಳನ್ನು ಅರ್ಪಿಸುವ ಪತ್ರವೊಂದನ್ನು ಅನಿಲ ಸರಬರಾಜು ಕಂಪನಿಯವರು ಕೊಟ್ಟರು. ಮೋದಿಯವರ ಗಿವ್ ಇಟ್ ಅಪ್ ಕರೆಗೆ ಓಗೋಡದ ಸಿರಿವಂತ ನೌಕರರಿಗೆ ಅವರ ಸಂಸ್ಥೆಗಳ ಮಾಲೀಕರಿಂದ ಹೇಳಿಕೆ ಕೊಡಿಸುವ ಮೂಲಕ ಒತ್ತಡತಂದರು. ಉದಾಹರಣೆಗೆ, ಮೋದಿ ಕರೆಗೆ ಓಗೊಟ್ಟು ತಮ್ಮ ಸಬ್ಸಿಡಿಯನ್ನು ಬಿಟ್ಟುಕೊಡಬೇಕೆಂದು ಇನ್ಪೋಸಿಸ್ ಸಂಸ್ಥೆಯ ನಾರಾಯಣ ಮೂರ್ತಿಯವರೂ ತಮ್ಮ ಸಂಸ್ಥೆಯ ನೌಕರರಿಗೆ ಕರೆಕೊಟ್ಟರು.
ಉಜ್ವಲ ಯೋಜನೆ
ಪ್ರಧಾನಿ ಕರೆಗೆ ಓಗೊಟ್ಟು ‘ಗಿವ್ ಇಟ್ ಅಪ್’ ನಿಂದ ಸಬ್ಸಿಡಿ ಕಳೆದುಕೊಂಡ ಕುಟುಂಬಗಳನ್ನು ನಂಬಿಸಲು ಬಿಪಿಎಲ್ ಕುಟುಂಬದರಿಗೆ ಉಚಿತ ಅನಿಲ ಸಂಪರ್ಕ ನೀಡುವ ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ಯನ್ನು ರೂಪಿಸಿ ಜಾರಿಗೆ ತಂದರು. ಈ ಯೋಜನೆ ಮೂಲಕ 1,600 ರೂ ವೆಚ್ಚದ ಉಚಿತ ಸಿಲಿಂಡರ್ ಮತ್ತು ರೆಗ್ಯೂಲೇಟರ್ ಕೊಟ್ಟರು. ಕೆಲವು ರಾಜ್ಯ ಸರ್ಕಾರಗಳು ಉಚಿತ ಸ್ಟೌವ್ ಕೊಟ್ಟವು. (2022ರ ವರೆಗೆ 9 ಕೋಟಿ ಕುಟುಂಬಗಳು ಈ ಯೋಜನೆಯ ಲಾಭ ಪಡೆದಿದ್ದಾರೆ ಎಂದು ಸರ್ಕಾರದ ಅಂಕಿ ಅಂಶಗಳು ಹೇಳುತ್ತವೆ.)
10 ಲಕ್ಷ ಆದಾಯವಿರುವ ಕುಟುಂಬಗಳಿಗೆ ಸಬ್ಸಿಡಿ ಸ್ಥಗಿತ
ಇಷ್ಟಕ್ಕೇ ಇದು ನಿಲ್ಲಲಿಲ್ಲ. ಇದರ ಮುಂದುವರಿದ ಭಾಗವಾಗಿ ವಾರ್ಷಿಕ 10 ಲಕ್ಷ ಆದಾಯವಿರುವ ಕುಟುಂಬಕ್ಕೆ ಅಡುಗೆ ಅನಿಲಕ್ಕೆ ನೀಡುವ ಸಬ್ಸಿಡಿ ಕೊಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿತು. ಸರ್ಕಾರಿ ನೌಕರರಿಗೆ ಸಬ್ಸಿಡಿ ಅನಿಲ ಪೂರೈಕೆ ನಿಲ್ಲಿಸಲಾಯ್ತು. ನಂತರ, ಅಡುಗೆ ಅನಿಲದ ದರವನ್ನು ನಿದಾನವಾಗಿ ಏರಿಕೆ ಮಾಡುತ್ತ, ಮತ್ತೊಂದೆಡೆ ಸಬ್ಸಿಡಿ ಹಣವನ್ನು ಕಡಿತ ಮಾಡುತ್ತಾ ಸಾಗಿತು. 200ರಿಂದ 300 ರೂ. ವರೆಗೂ ಬರುತ್ತಿದ್ದ ಸಬ್ಸಿಡಿ ಕೆಲವೊಮ್ಮೆ 40 ರೂ. ಗಳಿಗೆ ಇಳಿಯಿತು.
ಲಾಕ್ಡೌನ್ ಸಂದರ್ಭದಲ್ಲಿ ಸಂಪೂರ್ಣ ಸಬ್ಸಿಡಿ ಸ್ಥಗಿತ
ಕೊರೊನಾ ಸಾಂಕ್ರಾಮಿಕ ರೋಗ ಮತ್ತು ಲಾಕ್ಡೌನ್ ನ ಸಂಕಷ್ಟದ ಸಮಯವನ್ನು ಸರ್ಕಾರ ತನ್ನ ಮುಕ್ತ ಆರ್ಥಿಕ ನೀತಿಗಳ ಜಾರಿ ಮಾಡಲು ದುರುಪಯೋಗ ಮಾಡಿಕೊಂಡಿತು. ಇಡೀ ದೇಶದ ಜನತೆ ತಮ್ಮ ತಮ್ಮ ಮನೆಗಳಿಂದ ಹೊರಬರಲಾಗದ, ಹೊರ ಬಂದು ಪ್ರತಿಭಟನೆ ವ್ಯಕ್ತಪಡಿಲಾಗದ ಲಾಕ್ಡೌನ್ ಸಮಯದಲ್ಲೇ ಅಡುಗೆ ಅನಿಲಕ್ಕೆ ನೀಡುತ್ತಿದ್ದ ಅಲ್ಪಸ್ವಲ್ಪ ಸಬ್ಸಿಡಿಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಂಡಿತು. ನಂತರ ಇದನ್ನು ಮುಕ್ತ ಮಾರುಕಟ್ಟೆಗೆ ತೆರೆದಿಡುವ ಮೂಲಕ, ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಿತು. ಅನಿಲ ಸಂಸ್ಥೆಗಳೇ ದರ ನಿಗದಿ ಮಾಡುವ ಅಧಿಕಾರ ಪಡೆದವು. ಅಂತರಾಷ್ಟ್ರೀಯ ಮಟ್ಟದ ತೈಲ ಬೆಲೆ ಏರಿಕೆಗೆ ಅನುಗುಣವಾಗಿ ಪೆಟ್ರೋಲಿಯಂ ಪದಾರ್ಥಗಳ ದರ ನಿಗದಿ ಮಾಡಲಾಗುತ್ತದೆ ಎಂದು ಹೇಳುತ್ತಾರಾದರೂ, ಇದರ ಪರಿಸ್ಥಿತಿಯೇ ಬೇರೆಯಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾದಾಗ ಅದಕ್ಕೆ ಅನುಗುಣವಾಗಿ ಭಾರತದಲ್ಲಿ ಬೆಲೆ ಇಳಿಕೆ ಮಾಡುವುದಿಲ್ಲ ಎಂಬುದು ನಮಗೀಗ ಮನವರಿಕೆಯಾಗಿದೆ. ಸಾರ್ವಜನಿಕ ಒಡೆತನದಲ್ಲಿ ಇರುವ ತೈಲ ಕಂಪನಿಗಳನ್ನು ಖಾಸಗಿ ಬಂಡವಾಳಗಾರರಿಗೆ ಮಾರಾಟ ಮಾಡುವುದು ಸರ್ಕಾರದ ಮುಂದಿನ ಗುರಿಯಾಗಿದೆ.
ಜನತೆ ಬೆಲೆ ಹೆಚ್ಚಳದಿಂದ ತಪ್ಪಿಸಿಕೊಳ್ಳಲು ಇರುವ ದಾರಿಯೆಂದರೆ, ಅದು ಒಕ್ಕೂಟ ಸರ್ಕಾರದ ಮುಕ್ತ ಆರ್ಥಿಕ ನೀತಿಗಳ ವಿರುದ್ದ ದ್ವನಿ ಎತ್ತಿ ಹೋರಾಡುವುದು. ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ನೀತಿಗಳ ವಿರುದ್ದ ನಡೆಯುವ ಚಳುವಳಿಗಳ ಜೊತೆ ಕೈಜೋಡಿಸುವುದು. ಇಂತಹ ಜನವಿರೋಧಿ, ರಾಷ್ಟ್ರವಿರೋಧಿ ನೀತಿಗಳನ್ನು ವಿರೋಧಿಸುವ ರಾಜಕೀಯ ಪಕ್ಷಗಳಿಗೆ ಮಾತ್ರ ಮತ ಹಾಕುತ್ತೇವೆ ಎಂದು ಪಣ ತೊಡುವುದು.
ಉದ್ಯಮಿ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಕೆಜಿ-ಡಿ6 ಫೀಲ್ಡ್ (ಕೃಷ್ಣ-ಗೋದಾವರಿ ಬೇಸಿನ್) ನಲ್ಲಿ ಅನಿಲ ಹೊರತೆಗೆಯಲು ಸರ್ಕಾರ ಅನುಮತಿ ಕೊಟ್ಟಿದೆ. ಅದು ಹೊರತೆಗೆಯುವ ಅನಿಲವನ್ನು ಸಾರ್ವಜನಿಕ ಸಂಸ್ಥೆಯಾದ ಒಎನ್ಜಿಸಿ ಖರೀದಿ ಮಾಡುತ್ತದೆ. ಹೀಗೆ ಖರೀದಿಸುವ ಅನಿಲದ ದರವನ್ನು, ಒಂದು ಮಿಲಿಯನ್ ಬ್ರಿಟೀಷ್ ಥರ್ಮಲ್ ಯುನಿಟ್ ಗೆ 4.2 ಅಮೇರಿಕನ್ ಡಾಲರ್ ಲೆಕ್ಕದಲ್ಲಿ ಅಂದು ಒಎನ್ಜಿಸಿ ಖರೀದಿಸುತ್ತಿತ್ತು.
ಮುಖೇಶ್ ಅಂಬಾನಿ ಸಂಸ್ಥೆ ಸರ್ಕಾರದ ಜೊತೆ ಮಾಡಿಕೊಂಡ ಒಪ್ಪಂದದಂತೆ ಅನಿಲ ಉತ್ಪಾದನೆ ಮಾಡುವ ಬದಲು ಉತ್ಪಾದನೆಯನ್ನು ಕಡಿತಗೊಳಿಸಿತು. ಈ ಮೂಲಕ ಸರ್ಕಾರದ ಜೊತೆ ಮಾಡಿಕೊಂಡ ಒಪ್ಪಂದವನ್ನು ಸಂಸ್ಥೆ ಉಲ್ಲಂಘಿಸಿದೆ ಎಂದು ಸಿಎಜಿ 2011 ರ ತನ್ನ ವರದಿಯಲ್ಲಿ ಹೇಳಿತ್ತು. ಹೀಗಾಗಿ ಅಂದಿನ ಪೆಟ್ರೋಲಿಯಂ ಮಂತ್ರಿ ಜೈಪಾಲ್ ರೆಡ್ಡಿಯವರು, ಮುಖೇಶ್ ಅಂಬಾನಿ ಕಂಪನಿಯಿಂದ 7000 ಕೋಟಿ ದಂಡ ವಸೂಲಿಗೆ ಆದೇಶಿಸಿದ್ದರು. ಇದೇ ಸಮಯದಲ್ಲಿ ಅನಿಲ ಬೆಲೆಯನ್ನು ಒಂದು ಮಿಲಿಯನ್ ಬ್ರಿಟೀಷ್ ಥರ್ಮಲ್ ಯುನಿಟ್ ಗೆ 4.2 ರಿಂದ 8.4 ಅಮೆರಿಕನ್ ಡಾಲರಿಗೆ ಏರಿಕೆ ಮಾಡಬೇಕೆಂದು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ-2ರ ಸರ್ಕಾರಕ್ಕೆ ಮುಖೇಶ್ ಅಂಬಾನಿ ಒತ್ತಾಯಿಸುತ್ತಾರೆ. ಪೆಟ್ರೋಲಿಯಂ ಖಾತೆ ಸಚಿವ ಜೈಪಾಲ್ ರೆಡ್ಡಿ ಉದ್ಯಮಿ ಮುಖೇಶ್ ಅಂಬಾನಿಯ ಒತ್ತಡಕ್ಕೆ ಮಣಿಯಲಿಲ್ಲ.
ಮನಮೋಹನ್ ಸಿಂಗ್ ಸರ್ಕಾರ, ಅಕ್ಟೋಬರ್ 28, 2012 ರಂದು ಜೈಪಾಲ್ ರೆಡ್ಡಿಯವರಿಂದ ಪೆಟ್ರೋಲಿಯಂ ಸಚಿವ ಸ್ಥಾನವನ್ನು ಕಸಿದುಕೊಂಡು, ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಸ್ಥಾನ ನೀಡಲಾಯಿತು. ಎಂ.ವೀರಪ್ಪ ಮೊಯ್ಲಿಯವರಿಗೆ ಆ ಖಾತೆಯನ್ನು ಕೊಡಲಾಯಿತು. ನಮ್ಮ ಪ್ರಭುತ್ವದ ಆಡಳಿತದ ಮೇಲೆ ದೊಡ್ಡ ಬಂಡವಾಳಗಾರರು ಎಷ್ಟು ಹಿಡಿತ ಹೊಂದಿದ್ದಾರೆ ಮತ್ತು ಕಾರ್ಪೋರೇಟ್ ಕುಳಗಳಿಗೆ ಅನುಕೂಲಕರವಾದ ನೀತಿಗಳನ್ನು ಜಾರಿಗೆ ತರಲು ಒಪ್ಪದ ಸಚಿವರ ಗತಿ ಏನಾಗಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. (ಇಂದು ಈ ದರ ಮಾರ್ಚ್ 31, 2023 ರವರೆಗೆ ಸರ್ಕಾರ ನಿಗದಿಪಡಿಸಿದಂತೆ, ಪ್ರತಿ ಎಂಎಂಬಿಟಿಯುಗೆ 12.46 ಯುಎಸ್ ಡಿ ಇದೆ.)
Fantastic explanation sir. This will be an eye opener for many
ಧನ್ಯವಾದಗಳು.