ಶಹಾಪುರ: ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಯುಕೆಪಿ ಕ್ಯಾಂಪ್ ನಲ್ಲಿ ಸಾಹೇಬಗೌಡ ಹಗರಟಗಿ ಮನೆಯಲ್ಲಿ ಕಳೆದ ಶುಕ್ರವಾರ ಅಡುಗೆ ಅನಿಲ ಸೋರಿಕೆಯ ದುರ್ಘಟನೆಯಿಂದಾಗಿ ಇದುವರೆಗೆ 11 ಮಂದಿ ಮೃತಪಟ್ಟಿದ್ದಾರೆ.
ಅಡುಗೆ ಅನಿಲ ದುರಂತ ಜಿಲ್ಲೆಯಲ್ಲಿ ಅತಿದೊಡ್ಡ ದುರ್ಘಟನೆಯಾಗಿದ್ದು, ಸುಮಾರು 24 ಜನ ಗಾಯಗೊಂಡಿದ್ದರು. ಇಡೀ ಗ್ರಾಮದ ತುಂಬಾ ಸೂತಕದ ಛಾಯೆ ಆವರಿಸಿದೆ.
ಗ್ಯಾಸ್ ಏಜೆನ್ಸಿ ಮಾಲೀಕ ಹಾಗೂ ದೋಷಪೂರಿತ ಸಿಲಿಂಡರ್ ವಿತರಿಸಿದ್ದಾರೆ ಎಂಬ ಆರೋಪದ ಮೇಲೆ ಇಬ್ಬರ ವಿರುದ್ಧ ಮಾತ್ರ ಪೊಲೀಸರು ದೂರು ದಾಖಲಿಸಿದ್ದಾರೆ. ಆದರೆ, ಸಿಲಿಂಡರ್ ಸರಬರಾಜು ಮಾಡಿದ ಕಂಪನಿಯ ವಿರುದ್ಧ ದೂರು ದಾಖಲಿಸದೆ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇಡೀ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಕೂಗು ಕೇಳಿ ಬರುತ್ತಿದೆ.
ದುರ್ಘಟನೆ ನಡೆದ ದಿನ ಪೊಲೀಸರು ಮೊದಲು ಯುಡಿಆರ್ ದಾಖಲಿಸಿಕೊಂಡಿದ್ದರು. ನಂತರ ಸಾವಿನ ಸಂಖ್ಯೆ ಹೆಚ್ಚಾದಂತೆ ಮಂಗಳವಾರ ಅಪಘಾತ ಪ್ರಕರಣವೆಂದು ಪರಿವರ್ತಿಸಿಕೊಂಡು ತನಿಖೆ ನಡೆಸಿದ್ದಾರೆ. ಅದರಲ್ಲಿ ಕಂಪನಿಯ ಹೆಸರು ನಮೂದಿಸದೆ ಇರುವುದು ಅಘಾತ ನೀಡಿದೆ ಎನ್ನುತ್ತಾರೆ ಹಿರಿಯ ವಕೀಲ ಭಾಸ್ಕರರಾವ ಮುಡಬೂಳ.
ಶಹಾಪುರ ವಿಜಯ ಏಜೆನ್ಸಿಯ ಮಾಲೀಕರಾದ ಹಣಮಂತರಾಯ ಸಿದ್ದಣ್ಣಗೌಡ ಪಾಟೀಲ್ ಹಾಗೂ ಇಂಡಿಯನ್ ಗ್ಯಾಸ್ ಡೀಲರ್ ಅಣವೀರಯ್ಯ ಶರಣಯ್ಯ ಮಠ ಅವರ ವಿರುದ್ಧ ಸಿಲಿಂಡರ್ ನೀಡುವ ಕಾಲಕ್ಕೆ ಪರಿಶೀಲಿಸಿ ಒಳ್ಳೆಯ ಸಿಲಿಂಡರ್ ನೀಡಬೇಕಾಗಿತ್ತು. ಆದರೆ, ದೋಷಪೂರಿತವಾದ ಹಳೆಯ ಗ್ಯಾಸ್ ಸಿಲಿಂಡರ್ ನೀಡಿ ನಿರ್ಲಕ್ಷ್ಯತನ ವಹಿಸಿದ್ದರಿಂದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಸಾವು ನೋವು ಸಂಭವಿಸಿರುತ್ತದೆ ಎಂದು ಶಹಾಪುರ ಠಾಣೆಯಲ್ಲಿ ಸಾಹೇಬಗೌಡ ಅವರು ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ಗಾಯಗೊಂಡಿದ್ದ ಸಂಗಣ್ಣಗೌಡ ಗುರುಲಿಂಗಪ್ಪಗೌಡ ಲಕಶೆಟ್ಟಿ(55) ಚಿಕಿತ್ಸೆಗೆ ಸ್ಪಂದಿಸದೆ ಸೊಲ್ಲಾಪುರ ಆಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟಿದ್ದಾರೆ. ಇದರಿಂದ ಸಿಲಿಂಡರ್ ಅವಘಡದಿಂದ ಆಗಿರುವ ಸಾವಿನ ಸಂಖ್ಯೆ 11ಕ್ಕೆ ಏರಿದೆ.