ಬೆಳ್ತಂಗಡಿ: ಆದಿವಾಸಿಗಳ ಮೇಲಿನ ದೌರ್ಜನ್ಯ ಮಿತಿ ಮೀರಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ತಮ್ಮ ತಾಳ್ಮೆಗೂ ಮಿತಿ ಇದೆ. ಅದು ಮೀರಿದರೆ ಗಂಭೀರ ಸ್ವರೂಪದ ಹೋರಾಟ ಎದುರಿಸಲು ಸಿದ್ದರಾಗಬೇಕಾಗುತ್ತದೆ ಎಂದು ತಾಲೂಕು ಆಡಳಿತವನ್ನು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಕಾನೂನು ಸಲಹೆಗಾರ, ನ್ಯಾಯವಾದಿ ಶಿವಕುಮಾರ್ ಎಸ್.ಎಂ. ಎಚ್ಚರಿಕೆ ನೀಡಿದರು.
ಅವರು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ನಡೆದ ಪ್ರತಿಭಟನೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಶತಮಾನಗಳಿಂದ ವಾಸಿಸುವ ಆದಿವಾಸಿಗಳ ಮೇಲೆ ನಿರಂತರವಾಗಿ ಧಾಳಿ, ದೌರ್ಜನ್ಯ , ಹಿಂಸೆ ನಡೆಸುವ ಮೂಲಕ ವನ್ಯಜೀವಿ ಅರಣ್ಯ ಇಲಾಖೆ ಸೇರಿದಂತೆ ತಾಲೂಕು ಆಡಳಿತ ಆದಿವಾಸಿಗಳ ಮೇಲೆ ನಡೆಸಿರುವ ದೌರ್ಜನ್ಯ ನಡೆಸುವುದನ್ನು ಸಹಿಸಲು ಸಾಧ್ಯವಿಲ್ಲ. ಇದರ ವಿರುದ್ಧ ಇಡೀ ತಾಲೂಕಿನ ಜನರು ಆದಿವಾಸಿಗಳ ಪರವಾಗಿ ನಿಲ್ಲಬೇಕಾದ ಅಗತ್ಯವಿದೆ ಎಂದರು.
ಇದನ್ನು ಓದಿ: ಆದಿವಾಸಿ ಸಮುದಾಯದ ಜನತೆಗೆ ಕೊರೊನಾ ಬಗ್ಗೆ ಜಾಗೃತಿ ಮತ್ತು ತಪಾಸಣೆ
ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ ಮಾತಾಡುತ್ತಾ ಆದಿವಾಸಿಗಳು ಕಾಡುಪ್ರಾಣಿಗಳ ಜೊತೆಗೆ ಹೋರಾಟದ ಮೂಲಕ ಜೀವನ ನಡೆಸಿದ ಚರಿತ್ರೆ ಹೊಂದಿದವರು. ನಮ್ಮ ತಾಳ್ಮೆಗೂ ಮಿತಿ ಇದೆ. ನಮ್ಮ ಸಹನೆ ನಮ್ಮ ದೌರ್ಬಲ್ಯವಲ್ಲ, ಆದಿವಾಸಿಗಳ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ತಾಲೂಕು ಕಛೇರಿ ಎದುರು ನಿರಂತರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಂಚಾಲಕ ಶೇಖರ್ ಲಾಯಿಲ ಮಾತನಾಡುತ್ತಾ ಸ್ವಾತಂತ್ರ್ಯ ಅಮೃತೋತ್ಸವ ಆಚರಿಸುವ ದೇಶದಲ್ಲಿ ಆದಿವಾಸಿಗಳು ರಸ್ತೆ, ವಿದ್ಯುತ್ ಇಲ್ಲದೆ ವಾಸಿಸುತ್ತಿರುವುದು ದುರಂತ ಎಂದ ಅವರು ಚುನಾವಣಾ ಸಂದರ್ಭದಲ್ಲಿ ಆದಿವಾಸಿಗಳ ಸಮಗ್ರ ಅಭಿವೃದ್ದಿ ಬಗ್ಗೆ ಮಾತನಾಡಿದ ಶಾಸಕರು ಕುತ್ಲೂರಿನ ಆದಿವಾಸಿಗಳ ಮೇಲಿನ ಸುಳ್ಳು ಕೇಸಿನ ಬಗ್ಗೆ ಮೌನವಹಿಸಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ದಿಡುಪೆ- ಸಂಸೆ ರಸ್ತೆಗೆ ಅನುಮತಿ ಪಡೆಯಲು ಪ್ರಯತ್ನಿಸುವ ಶಾಸಕರು ತಾಲೂಕಿನ ಇತರೆ ಪ್ರದೇಶಗಳನ್ನು ನಿರ್ಲಕ್ಷ್ಯ ಮಾಡಿ ಆದಿವಾಸಿಗಳನ್ನು ವಂಚಿಸಿದ್ದಾರೆ. ಆದಿವಾಸಿಗಳ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ನವೆಂಬರ್ ತಿಂಗಳಿನಿಂದ ಹಂತ ಹಂತವಾಗಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ತಾಲೂಕು ಅಧ್ಯಕ್ಷ ವಸಂತ ನಡ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಭಟನೆಯ ನೇತೃತ್ವವನ್ನು ನೀಲಯ್ಯ ಪಂಜಲು , ಪ್ರವೀಣ ಪೆರಿಂಚ , ಹೊನ್ನಯ್ಯ ಎರ್ದಡಿ , ವಿಶ್ವನಾಥ ಪೆರಿಂಚ , ಪೂವಪ್ಪ ಮಲೆಕುಡಿಯ , ಲಿಂಗಪ್ಪ ಮಲೆಕುಡಿಯ , ರವಿ ಮಲೆಕುಡಿಯ , ಉದಯ ಮಲೆಕುಡಿಯ, ಪುರುಷೋತ್ತಮ ಮಲೆಕುಡಿಯ , ಸುಜಾತ ಹೆಗ್ಡೆ , ಚೀಂಕ್ರ ಮಲೆಕುಡಿಯ , ವಾರಿಜ ಎರ್ದಡಿ , ನ್ಯಾಯವಾದಿ ಸುಕನ್ಯಾ ಹೆಚ್ ವಹಿಸಿದ್ದರು.
ಪ್ರತಿಭಟನೆಯ ನಂತರ ಪುತ್ತೂರು ಉಪ ಆಯುಕ್ತರಿಗೆ ಮನವಿ ಸಲ್ಲಿಸಿದರು. ಪ್ರತಿಭಟನಕಾರರು ಅರಣ್ಯ ಇಲಾಖೆಯ ದೌರ್ಜನ್ಯ, ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವ ಸರ್ಕಾರ, ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ವರದಿ: ಶೇಖರ್ ಎಲ್