“ಕೊರಗರು ಕುಡಿತ – ದುಶ್ಚಟದಿಂದ ಖಾಯಿಲೆಗೆ ತುತ್ತಾಗಿ ಸಾಯುತ್ತಿದ್ದಾರೆ” ಸರಕಾರದ ಆದೇಶದಲ್ಲಿ ಉಲೇಖಕ್ಕೆ ಖಂಡನೆ

ಉಡುಪಿ : ಕೊರಗರು ಕುಡಿತ ದುಶ್ಚಟದಿಂದ ಸಾಯುತ್ತಿದ್ದಾರೆ ಎಂದು ಅವೈಜ್ಞಾನಿಕವಾಗಿ ಯಾವುದೇ ರೀತಿಯ ಅಧ್ಯಯನ, ದಾಖಲೆ ಇಲ್ಲದೆ ಆದೇಶದಲ್ಲಿ ಉಲೇಖ ಮಾಡಲಾಗಿದೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕ ಶ್ರೀಧರ ನಾಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು,  20 ವರ್ಷದ ಒಳಗಿನ ಮಕ್ಕಳು ಇತ್ತೀಚೆಗೆ ಎರಡು ಮೂರು ತಿಂಗಳ ಅಂತರದಲ್ಲಿ ಸತ್ತಿದ್ದಾರೆ. ಅವರಿಗೆ ಯಾವುದೇ ದುಶ್ಚಟ ಇಲ್ಲ. ಕಾರ್ಕಳದಲ್ಲಿ 7 ವರ್ಷದ ಮಗು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದೆ. ಬೈಂದೂರು ಕಾಲೇಜು ಓದುವ ಕೊರಗ ಹುಡುಗಿ 2 ಕಿಡ್ನಿ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿದ್ದಾಳೆ. ಬಾರ್ಕೂರಿನಲಿ ಮೊನ್ನೆ ಒಂದು ಹುಡುಗಿ ಸಾವು ಆಗಿದೆ. ಬೈಂದೂರು ತಾಲೂಕಿನ ನಾಡದಲ್ಲಿ ಯಾವುದೇ ಕುಡಿತ ದುಶ್ಚಟ ಇಲ್ಲದ ಚಂದ್ರ ಕೊರಗ ಕರಳು ಸಂಬಂಧಿ ಕಾಯಿಲೆ, ಕಿಡ್ನಿ ವೈಫಲ್ಯ, ರಕ್ತ ಹಿನತೆ, ಕಾಮಲೇ, ಮಧುಮೇಹದಂತಹ ಬಹು ಖಾಯಿಲೆಯಿಂದ ಬಳಲುತ್ತಿದ್ದಾರೆ. ಅವರಿಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅವರು ಖಾಯಿಲೆಗೆ ತುತ್ತಾಗಿ 5 ವರ್ಷ ಆಗಿದೆ. ಅವರು ಕುಟುಂಬದ ಆಧಾರ ಸ್ಥಂಬವಾಗಿ ದುಡಿದವರು ಅವರ ಕುಟುಂಬದ ಸ್ಥಿತಿ ಇಂದು ಅದೋಗತಿಯಲ್ಲಿದೆ ಎಂದು ಸರಕಾರದ ಸುತ್ತೋಲೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸರಕಾರದ ದೃಷ್ಟಿಯಲ್ಲಿ ಕುಡಿತದ ಸಮಸ್ಯೆ ಅದು ಅವರ ಸಮಸ್ಯೆ ಅದಕೆ ಸರಕಾರ ಏಕೆ ಹಣ ಖರ್ಚು ಮಾಡಬೇಕು. ಆರೋಗ್ಯ ಚಿಕಿತ್ಸೆಗೆ ಹಾಗಾಗಿ ಹಣ ನೀಡುವುದಿಲ್ಲ ಎನ್ನುವಂತೆ ಆದೇಶ ಮಾಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಕೊರಗರ ಆರೋಗ್ಯ ಚಿಕಿತ್ಸೆಗೆ ಹಣ ಬಿಡುಗಡೆ ಮಾಡಲು ಸರಕಾರಕೆ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆ (ITDP) ಸರಿಯಾಗಿ ಪ್ರಸ್ತಾವನೆ ಕಳುಹಿಸಿದೆ. ಆದರೆ ಉನ್ನತ ಮಟ್ಟದ ಅಧಿಕಾರಿಗಳು ಅದು ಹೇಗೆ ಅವೈಜ್ಞಾನಿಕ ವಿವರದೊಂದಿಗೆ ತಿರಸ್ಕಾರ ಮಾಡಿದ್ದರು ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೊರಗ ಸಮುದಾಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಆರೋಗ್ಯದ ಚಿಕಿತ್ಸೆ ಪಡೆದವರ ಅಂಕಿ ಅಂಶಗಳು ನೋಡಿದರೆ. ಶೇಕಡಾ 90 ರಷ್ಟು ಕುಡಿತ ದುಚ್ಚಟ ಇಲ್ಲದವರು ಅನಾರೋಗ್ಯದ ಕಾರಣದಿಂದ ಚಿಕಿತ್ಸೆ ಪಡೆದಿದ್ದಾರೆ. ನಿಜವಾಗಿಯೂ ಕಳೆದ 15 ವರ್ಷದಿಂದ ಕೊರಗರಲ್ಲಿ ಕುಡಿತ ತುಂಬಾ ಕಡಿಮೆ ಆಗಿದೆ. ಒಂದು ಗುಂಪಿನಲ್ಲಿ 10 ಮನೆ ಇದರೆ ಅದರಲ್ಲಿ ಗರಿಷ್ಠ 2 ಜನ ಕುಡಿಯ ಬಹುದು ಅಷ್ಟೇ.. ಅದು ಎಲ್ಲಾ ಸಮುದಾಯದಲ್ಲಿ ಇರುವ ಹಾಗೆ. ಕೊರಗರಲ್ಲಿ ಸ್ವಯಂ ಜಾಗೃತಿ ಬಂದಿದೆ. ಈ ಜಾಗೃತಿಗೆ ಸರಕಾರ ಅಥವಾ ಯಾರು ಕೂಡ ಕಾರಣವಲ್ಲ. ಕರಾವಳಿ ಜಿಲ್ಲೆಗಳಲ್ಲಿ ಇಂದು ಕೊರಗ ಸಮುದಾಯದಲ್ಲಿ ಆಗಿರುವ ಬದಲಾವಣೆಯನ್ನು ನಾಗರಿಕ ಸಮಾಜ ಮಾದರಿಯಾಗಿ ಕಲಿಯಬೇಕು ಎಂದಿದ್ದಾರೆ.

ನಿಜವಾಗಿಯೂ ಸರಕಾರವೇ ಕೊರಗ ಸಮುದಾಯದ ವಿನಾಶಕೆ ಕಾರಣವಾಗಲಿದೆ. ಕೊರಗ ಸಮುದಾಯದ ಜನಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುವ ಕುರಿತು ಕಳೆದ 30 ವರ್ಷದಿಂದ ತಿಳಿದರು ನಮ್ಮನ್ನು ಆಳಿದ, ಆಳುತಿರುವ ಯಾವುದೇ ಸರಕಾರಗಳು ಸಮಗ್ರವಾದ ಅಧ್ಯಯನ ನಡೆಸಿ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿವೆ. ಕೊರಗ ಸಮುದಾಯದ ಗುಂಪಿನಲ್ಲಿ ಹಬ್ಬ ಜಾತ್ರೆ, ವಾಸ್ತವ್ಯಾ ನಡೆಸಿದು ಬಿಟ್ಟರೆ ವಾಸ್ತವವಾಗಿ ಈ ಸಮುದಾಯ ಉಳಿಸುವ ನಿಟ್ಟಿನಲ್ಲಿ ಬೇಕಾದ ಯಾವುದೇ ಕ್ರಮಗಳು ಕೈಗೊಂಡಿಲ್ಲ. ಕಳೆದ 2016 ರಿಂದ 2021 ರ ವರೆಗೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊರಗ ಮತ್ತು ಜೇನು ಕುರುಬ ಜನಾಂಗದವರಿಗೆ ನೀಡಬೇಕಾದ ಪಿ.ವಿ.ಟಿ.ಜಿ ಅನುದಾನ ಬಿಡುಗಡೆ ಮಾಡದೆ ವಂಚಿಸಲಾಗಿದೆ. ಪಿ.ವಿ.ಟಿ.ಜಿ ಅನುದಾನದ ಕೊರತೆಯಿಂದಾಗಿ ಈ ವರೆಗೆ ಜಿಲ್ಲಾ ಪಂಚಾಯತಿಯ ಟಿ.ಎಸ್.ಪಿ ಅನುದಾನ ಕ್ರೊಡಿಕರಿಸಿ ಕೊರಗರ ಆರೋಗ್ಯ ಚಿಕಿತ್ಸೆಗೆ ಖರ್ಚು ಮಾಡಲಾಗುತ್ತಿದೆ. ಇದು ಜಿಲ್ಲಾ ಮಟ್ಟದಲ್ಲಿ ಕೊರಗ ಸಮುದಾಯದ ಕುರಿತು ಸಂವೇದನೆ ಇರುವ ಅಧಿಕಾರಿಗಳು ಇರುವುದರಿಂದ ಸಾಧ್ಯವಾಗಿರುವುದು. ಆ ಹಣವು ಕೂಡ ಈಗ ಖಾಲಿ ಆಗುವ ಹಂತಕ್ಕೆ ಬಂದಿದೆ. ಕೇವಲ 3 ತಿಂಗಳ ಒಳಗೆ ಕೊರಗ ಸಮುದಾಯದ ಆರೋಗ್ಯ ನಿಧಿಯ ಕೊರತೆಯ ಬಿಸಿ ತಟ್ಟಲಿದೆ. ಈ ಹೊತ್ತಿಗೆ ಮುಂದೆ ಎಂದು ಕೂಡ ಆರೋಗ್ಯ ನಿಧಿಯನ್ನು ನೀಡುದಿಲ್ಲ ಎನ್ನುವ ಆದೇಶ ಅಮಾನವೀಯವಾದದ್ದು ಎಂದು ಶ್ರೀಧರ ಆರೋಪಿಸಿದ್ದಾರೆ.

ಕೊರಗ ಸಮುದಾಯವನ್ನು ಈ ವ್ಯವಸ್ಥೆ ಅತ್ಯಂತ ಕ್ರೂರವಾಗಿ ಶತಮಾನಗಳಿಂದ ನಡೆಸಿಕೊಂಡು ಬರುತ್ತಿದೆ. ದೇಶದ ಯಾವುದೇ ಆದಿವಾಸಿ ಸಮುದಾಯಗಳಿಗೆ ಇಲ್ಲದ ಅಸ್ಪೃಶ್ಯತೆ ಕೊರಗರನ್ನು ಕಾಡುತ್ತಿದೆ. ಅಸ್ಪೃಶ್ಯತೆಗೆ ಒಳಾಗಾದ ದಲಿತರು ಸಹ ಕೊರಗರನ್ನು ಮುಟ್ಟಿಸಿ ಕೊಳುವುದಿಲ್ಲ. ಕೊರಗ ಸಮುದಾಯದ ಮೇಲೆ ಅಜಲು ಪದ್ದತಿಯಂತಹ ಆಚರಣೆಗಳನ್ನು ಹೇರಿಕೆ ಮಾಡಿಕೊಂಡು ಬಂದಿರುವ ವ್ಯವಸ್ಥೆ ಅದರ ಪರಿಣಾಮ ಇಂದು ವಿನಾಶದಂಚಿಗೆ ಹೋಗಲು ಕಾರಣವಾಗಿದೆ. ಅಜಲು ಪದ್ಧತಿ ಕೊರಗರನ್ನು ಗುಲಾಮರಾಗಿ ಮಾಡಿದೆ. ಇದರಿಂದ ಆರ್ಥಿಕವಾಗಿ ಮಾತ್ರವಲ್ಲದೆ ಸಾಮಾಜಿಕವಾಗಿ ಸಹ ಶೋಷಣೆ ಅನುಭವಿಸಿದೆ. ಕೊರಗರು ಬದುಕುವ ಕ್ರಮಗಳು, ತಲೆಮಾರುಗಳ ಕಾಲ ನಡೆದುಕೊಂಡು ಬಂದ ಅವಮಾನ ದೌರ್ಜನ್ಯಗಳು, ಮೂಢನಂಬಿಕೆಗಳು, ಯಾವುದೇ ಕಾಯಿಲೆ ಬಂದಾಗ ಆಸ್ಪತ್ರೆಗೆ ಹೋಗಬೇಕೆಂಬ ಪ್ರಜ್ಞೆ ಇಲ್ಲದೆ ಇರುವುದು. ಖಾಯಿಲೆ ಗಂಭೀರ ಸ್ಥಿತಿಗೆ ಹೋಗುವ ವರೆಗೂ ದೇವರ ಸಮಸ್ಯೆ ಎಂದು ನಂಬುವಂತದ್ದು, ಕೊರಗರ ಸಮುದಾಯದ ಒಳಗಿನ ಸಾಮಾಜಿಕ ಕಟ್ಟುಪಾಡುಗಳು, ಪೌಷ್ಟಿಕ ಆಹಾರದ ಕೊರತೆ, ಜೀವನ ಭದ್ರತೆಯ ವಿಷಯಗಳು ಆರೋಗ್ಯದ ಮೇಲೆ ಪ್ರಭಾವ ಬೀರಿದೆ.

ದೇಶದಲ್ಲಿ ಅತ್ಯಂತ ಅಂಚಿಗೆ ತಳಲ್ಪಟ ಅಳಿವಿನಂಚಿನಲ್ಲಿ ಇರುವ ಕೊರಗ ಸಮುದಾಯದ ಬದುಕನ್ನು ರಕ್ಷಣೆ ಮಾಡುವುದು ಸರಕಾರದ ಜವಾಬ್ದಾರಿ ಆಗಿದೆ. ಕೊರಗ ಸಮುದಾಯದವರಲ್ಲಿ ಹದಗೆಡುತ್ತಿರುವ ಆರೋಗ್ಯ ಪರಿಸ್ಥಿತಿ ಮತ್ತು ಜನಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುವ ಕುರಿತು ಸಮಗ್ರವಾದ ಅಧ್ಯಯನವನ್ನು ಸರಕಾರ ತುರ್ತಾಗಿ ನಡೆಸಬೇಕಾಗಿದೆ. ವಿಶೇಷವಾಗಿ ಈ ಸಮುದಾಯದ ಉಳಿವಿಗಾಗಿ ಸರಕಾರ ಆದ್ಯತೆ ಮೇರೆಗೆ ಇನಷ್ಟು ಯೋಜನೆ ರೂಪಿಸಿ ಜಾರಿಗೆ ತರಬೇಕು. ಕೊರಗ ಸಮುದಾಯದ ವೈದ್ಯಕೀಯ ವೆಚ್ಚ ಮರುಪಾವತಿಗೆ ಸಂಬಂಧಿಸಿದಂತೆ ಸರಕಾರ ಇನ್ನೂ ಮಂದೆ ಅನುದಾನ ಬಿಡುಗಡೆ ಮಾಡಲು ಅವಕಾಶ ಇರುವುದಿಲ್ಲ ಎಂದು ಆದೇಶ ಮಾಡಿರುವುದನ್ನು ಕೂಡಲೇ ಹಿಂದಕೆ ಪಡೆಯಬೇಕು. ಈ ಹಿಂದಿನಂತೆ ಆರೋಗ್ಯದ ಅನುದಾನ ಒದಗಿಸಬೇಕು ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಒತ್ತಾಯಿಸುತ್ತದೆ ಎಂದು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *