ಬೆಂಗಳೂರು : ಇತ್ತೀಚಿಗೆ ಕೇಂದ್ರ ಸರ್ಕಾರದ ಅಡಿಯಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್‌ಸಿಆರ್‌ಬಿ)ಯ ವರದಿ ಬಿಡುಗಡೆಯಾಗಿದ್ದು ಆ ಪ್ರಕರಣ ದೇಶದಲ್ಲಿ ಆಗಿರುವ ಅಪರಾಧ ಪ್ರಕರಣಗಳ ವರದಿಯನ್ನು ಬಿಡುಗಡೆ ಮಾಡಿದೆ.
ಎನ್‌ಸಿಆರ್‌ಬಿ ವರದಿಯ ಪ್ರಕಾರ 2021ರ ಅವಧಿಯಲ್ಲಿ ಆತ್ಮಹತ್ಯೆಯ ಪ್ರಕರಣಗಳಲ್ಲಿ ರೈತರ ಆತ್ಮಹತ್ಯೆಯ ಬಗ್ಗೆಯೂ ಉಲ್ಲೇಖಗೊಂಡಿದ್ದು, ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ಸ್ಪಷ್ಟವಾಗಿ ವರದಿ ಮಾಡಿದೆ. ಈ ವರದಿಯು ರಾಜ್ಯದಲ್ಲಿ ಭಾರೀ ಚರ್ಚೆಗೆ ಒಳಪಟ್ಟಿದ್ದು, ಕೃಷಿ ರಂಗದ ದುಸ್ಥಿತಿಯ ಬಗ್ಗೆ ವಿಶ್ಲೇಷಣೆಗೆ ಒಳಪಡಿಸುತ್ತದೆ.
ಆದರೆ, ಕರ್ನಾಟಕದ ಕೃಷಿ ಇಲಾಖೆಯು ಎನ್‌ಸಿಆರ್‌ಬಿ ಬಿಡುಗಡೆ ಮಾಡಿರುವ ವರದಿಯನ್ನು ಸಮರ್ಥಿಸಿಕೊಳ್ಳಲು ಮುಂದಾಗಿಲ್ಲ. ಬದಲಾಗಿ 5 ವರ್ಷಗಳ ಹಿಂದಿನ ದಾಖಲಾತಿ ಸಂಖ್ಯೆಗಳನ್ನು ಉಲ್ಲೇಖಿಸುವ ಮೂಲಕ ರಾಜ್ಯದಲ್ಲಿ ರೈತರ ಆತ್ಮಹತ್ಯೆಯ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿಸಲು ಪ್ರಯತ್ನ ಪಟ್ಟಿದೆ.
ರಾಜ್ಯದ ಕೃಷಿ ಇಲಾಖೆಯು ಬಿಡುಗಡೆಗೊಳಿಸಿರುವ ಹೇಳಿಕೆಯ ಪ್ರಕಾರ, 2018 ರಿಂದ 2021ರ ಅವಧಿಯಲ್ಲಿ ಆತ್ಮಹತ್ಯೆ ಪ್ರಕರಣ ಇಳಿಮುಖವಾಗಿತ್ತು ಎಂದು ಹೇಳಲು ಪ್ರಯತ್ನ ಪಟ್ಟಿದೆ.
ರಾಜ್ಯ ಕೃಷಿ ಇಲಾಖೆ, ಈ ಲೆಕ್ಕಚಾರ ಸುಳ್ಳು. ರೈತರ ಆತ್ಮಹತ್ಯೆ ಪ್ರಕರಣಗಳು ರಾಜ್ಯದಲ್ಲಿ 2014 ರಿಂದ 2017ರ ಅವಧಿಯಲ್ಲಿ ಏರುಗತಿಯಲ್ಲಿತ್ತು. ಮಾತ್ರವಲ್ಲದೆ, 2020-21 ರ ಅವಧಿಯಲ್ಲಿ 719 ರೈತರು ಮಾತ್ರ ಸಾವಿಗೆ ಶರಣಾಗಿದ್ದಾರೆ. 2022-23 ನೇ ಸಾಲಿನಲ್ಲಿ ಈವರೆಗೆ 60 ರೈತರು ಮೃತಪಟ್ಟಿದ್ದಾರೆ ಎಂದು ಸ್ಪಷ್ಟಪಡಿಸಲು ಮುಂದಾಗಿದೆ.
ಎನ್‌ಸಿಆರ್‌ಬಿ ವರದಿಯಲ್ಲಿ ಕರ್ನಾಟಕದಲ್ಲಿ 2020- 21ರಲ್ಲಿ ನಡೆದ ದೇಶದ ಒಟ್ಟು ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಕರ್ನಾಟಕದ ಪಾಲು ಶೇ.19.9 ರಷ್ಟಿದೆ. ಕರ್ನಾಟಕ 2ನೇ ಸ್ಥಾನದಲ್ಲಿದೆ ಎಂದು ಉಲ್ಲೇಖಿಸಿತ್ತು. ಅಂದರೆ, ದೇಶದಲ್ಲಿ 10,881 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಶೇ.19.9 ಅಂದರೆ 2,165 ರೈತರು ಕರ್ನಾಟಕದಲ್ಲಿ ಮೃತಪಟ್ಟಿದ್ದಾರೆ ಎಂದಿದೆ.
ವರದಿ: ವಿನೋದ ಶ್ರೀರಾಮಪುರ