ಸೆ.18ರಂದು ʻಅಧಿಕಾರ ಮತ್ತು ಅಧೀನತೆʼ ಪುಸ್ತಕ ಬಿಡುಗಡೆ ಸಮಾರಂಭ

ಅಮೆರಿಕದ ಸ್ತ್ರೀವಾದೀ ಲೇಖಕಿ ಕೇಟ್ ಮಿಲೆಟ್ ಅವರ ವಿಚಾರಗಳು ಒಳಗೊಂಡಿರುವ ಕನ್ನಡ ಕೃತಿ ಅಧಿಕಾರ ಮತ್ತು ಅಧೀನತೆ (ಕೇಟ್‌ ಮಿಲೆಟ್‌ ವಿಚಾರಗಳು) ಪುಸ್ತಕವು ಸೆಪ್ಟಂಬರ್‌ 18ರಂದು ಬಿಡುಗಡೆಯಾಗಲಿದೆ.

ಬೆಂಗಳೂರಿನ ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಕುವೆಂಪು ಸಭಾಂಗಣದಲ್ಲಿ ನಡೆಯುವ ಆಕಾರ ಪ್ರಕಾಶನದ ಅಧಿಕಾರ ಮತ್ತು ಅಧೀನತೆ ಪುಸ್ತಕವನ್ನು ಹಿರಿಯ ಚಿಂತಕ ಪ್ರೊ. ಬಸವರಾಜ ಕಲ್ಗುಡಿ ಅವರು ಬಿಡುಗಡೆ ಮಾಡಲಿದ್ದಾರೆ. ಕೃತಿಯ ಕುರಿತು ಖ್ಯಾತ ವಿಮರ್ಶಕರಾದ ಡಾ ಆರ್‌ ತಾರಿಣಿ ಶುಭದಾಯಿನಿ ಅವರು ಮಾತನಾಡಲಿದ್ದಾರೆ.

ಅತಿಥಿಗಳಾಗಿ, ಸಾಮಾಜಿಕ ಕಾರ್ಯಕರ್ತೆ ಹಾಗೂ ಲೇಖಕಿ ಡಾ ದು ಸರಸ್ವತಿ ಹಾಗೂ ಕೃತಿ ನಿರೂಪಣೆ ಮಾಡಿರುವ ಅನುವಾದಕರಾದ ಶ್ರೀಮತಿ ಎಚ್‌ ಎಸ್‌ ಅವರು ಉಪಸ್ಥಿತರಿವರು.

ಈ ಕೃತಿಯೂ…..

ಈಗ ವಿವಿಧ ಶಿಕ್ಷಣ ವಲಯಗಳಲ್ಲಿ ತರಬೇತಿಗೆ ಒಳಗಾದವರಲ್ಲಿ ಸಂವೇದನಾಶೀಲರಾದ ಕೆಲವರಿಗಾದರೂ ತರಬೇತಿಯ ಪಾಠಗಳಿಗೂ ತಮ್ಮ ಜೀವನವು ಕಾಣಿಸುತ್ತಿರುವ ಅನುಭವಗಳಿಗೂ ತಾಳೆಯಾಗುತ್ತಿಲ್ಲ ಎಂಬ ಅರಿವು ಮೂಡುತ್ತಿದೆ. ಇಂಥವರು ಹೀಗೇಕೆ ಎಂಬ ಶೋಧಗಳಿಗೆ ತೊಡಗುತ್ತಾರೆ. ಇಂಥ ಶೋಧಗಳು ವ್ಯವಸ್ಥೆಯು ಹರಡಿರುವ ಕಣ್ಣಟ್ಟುಗಳನ್ನು ಭೇದಿಸಬಲ್ಲವು. ಇಂಥ ಪ್ರಯತ್ನಗಳಲ್ಲಿ ತೊಡಗುವ ಸ್ತ್ರೀವಾದೀ ಶೋಧಗಳಿಗೆ ಕೇಟ್ ಮಿಲೆಟ್ ಸಮರ್ಥವಾದ ಒಂದು ಮಾದರಿಯನ್ನು ಒದಗಿಸುತ್ತಾಳೆ.

ಲೈಂಗಿಕತಾ ರಾಜಕಾರಣವನ್ನು ಸ್ಪಷ್ಟವಾಗಿ ವಿವರಿಸಲು ಆಕೆಯು ಸಾಹಿತ್ಯ ವಲಯವನ್ನು ಸೂಕ್ಷ್ಮ ವಿಶ್ಲೇಷಣೆಗಳಿಗೆ ಒಳಪಡಿಸುತ್ತಾಳೆ. ವಿವಿಧ ವಲಯಗಳವರು ತಾವು ತರಬೇತಿಯನ್ನು ಪಡೆದ ವಲಯಗಳನ್ನು ಕೇಂದ್ರವಾಗಿಸಿಕೊಂಡು ಇಂಥದೇ ಪ್ರಯೋಗಗಳಿಗೆ ತೊಡಗಬಹುದು. ಇಂಥ ಪ್ರತಿಯೊಂದು ಅಧ್ಯಯನವೂ ಲೈಂಗಿಕತಾ ರಾಜಕಾರಣದ ವಿವಿಧ ಆಯಾಮಗಳನ್ನು ಗ್ರಹಿಸಲು ನೆರವನ್ನು ನೀಡುವಂಥವೇ ಆಗಿರುತ್ತವೆ.

ಕೇಟ್ ಮಿಲೆಟ್ ತನ್ನ ವಿಶ್ಲೇಷಣೆಗಳಿಗಾಗಿ ಸಾಹಿತ್ಯ ವಲಯವನ್ನು ಆಯ್ದುಕೊಂಡಿದ್ದಾಳೆ. ಸಾಹಿತ್ಯ ವಲಯವನ್ನು ವ್ಯಕ್ತಿಗಳ ಸಾಮರ್ಥ್ಯಗಳ ಅಭಿವ್ಯಕ್ತಿಯ ಮಾಧ್ಯಮಗಳೆಂದು ಗ್ರಹಿಸುವ ರೂಢಿ ನಮ್ಮಲ್ಲಿ ಪ್ರಚಲಿತವಾಗಿದೆ. ಆದರೆ ಕೇಟ್ ಮಿಲೆಟ್ ಈ ವಲಯವು ಕೂಡಾ ಒಂದು ಸಾಂಸ್ಥಿಕ ರಚನೆಯೇ ಆಗಿದೆ ಎಂಬುದನ್ನು ನಿರೂಪಿಸುತ್ತಾಳೆ.

ಕೇಟ್ ಮಿಲೆಟ್

ಅಮೆರಿಕದ ಸ್ತ್ರೀವಾದೀ ಲೇಖಕಿ ಕೇಟ್ ಮಿಲೆಟ್ (1934-2017) ಪೂರ್ಣ ಹೆಸರು ಕ್ಯಾಥಲೀನ್ ಮಿ ಮಿಲೆಟ್. ಎರಡನೆಯ ಅಲೆಯ ಸ್ತ್ರೀವಾದಿಗಳಲ್ಲಿ ಪ್ರಮುಖರು. ಇಂಗ್ಲಿಷ್ ಸಾಹಿತ್ಯದ ಗಂಭೀರ ವಿದ್ಯಾರ್ಥಿ ಮಿಲೆಟ್, ತಮ್ಮ ಪಿಎಚ್.ಡಿ ಪದವಿಗಾಗಿ ನಡೆಸಿದ ಅಧ್ಯಯನ ಪ್ರಬಂಧವೇ ಮುಂದೆ Sexual Politics ಎಂಬ ಹೆಸರಿನಲ್ಲಿ ಪ್ರಕಟವಾಯಿತು.

ಪುರುಷ ಪ್ರಧಾನತೆ, ಆ ಮೂಲದ ಪಿತೃ ಪ್ರಧಾನತೆ, ಮಹಿಳೆಯರ ಅಧೀನ ಸ್ಥಿತಿ, ಎಂಬವು ಮೇಲೆ ಕಾಣುವ ಸಂಗತಿಗಳು ಮಾತ್ರವೇ ಆಳದಲ್ಲಿ ಇದ್ದು ಎಲ್ಲ ಬಗೆಯ ಅಧಿಕಾರ ಮತ್ತು ಅಧೀನತೆಗಳ ಮಾದರಿಗಳನ್ನೂ ತನ್ನೊಳಗೆ ಹುದುಗಿಸಿಕೊಂಡಿದೆ ಎಂಬುದನ್ನು ಮಿಲೆಟ್ ಅವರ ಅಧ್ಯಯನವು ತಾತ್ವಿಕವಾಗಿ ನಿರೂಪಿಸಿತು. ಈ ಮಾದರಿಗಳನ್ನು ನಿರ್ಮಿಸುವಲ್ಲಿ ಪಿತೃಪ್ರಧಾನ ವ್ಯವಸ್ಥೆಯು ಲೈಂಗಿಕತೆ ಎಂಬ ಜೈವಿಕ ಸಂಗತಿಯನ್ನೇ ತಂತ್ರವಾಗಿ ಬಳಸುತ್ತದೆ  ಎಂಬುದು ಈ ಅಧ್ಯಯನದ ಕ್ರಾಂತಿಕಾರೀ ಶೋಧವಾಗಿದೆ. ಈ ಲೈಂಗಿಕತಾ ರಾಜಕಾರಣವನ್ನು ನಿಖರವಾಗಿ ಗುರುತಿಸುವುದು ಸ್ತ್ರೀವಾದೀ ಹೋರಾಟಗಳಿಗೆ ಮಾತ್ರವೇ ಅಲ್ಲದೆ ಎಲ್ಲ ಸಾಮಾಜಿಕ ಹೋರಾಟಗಾರರಿಗೂ  ಅಗತ್ಯವೇ ಆಗುತ್ತದೆ. ಪಿತೃಪ್ರಧಾನತೆಗೆ ಸವಾಲೊಡ್ಡಿ ನಿಲ್ಲುವ ಯಾರಿಗೇ ಆದರೂ ಕಷ್ಟಗಳು ತಪ್ಪಿದ್ದಲ್ಲ. ಕೇಟ್ ಮಿಲೆಟ್ ಕೂಡಾ ವೃತ್ತಿಜೀವನದಲ್ಲಿ ಮತ್ತು ವೈಯಕ್ತಿಕ ಬದುಕಿನಲ್ಲಿ ಎಣೆಯಿಲ್ಲದಷ್ಟು ಸಮಸ್ಯೆಗಳನ್ನು ಎದುರಿಸಿದರು.

ಚಿತ್ರಕಲೆ, ಕುಶಲಕಲೆಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಮಿಲೆಟ್‌ ಬರೆದ Flying(1974), Sita(1977) ಮತ್ತು A.D., A Memoir (1995) ಈ ಮೂರೂ ಆಕೆಯ ಆತ್ಮಕಥಾನಕದ ನಿರೂಪಣೆಗಳು, ಹೋರಾಟಗಾರ್ತಿಯೂ ಆಗಿದ್ದ ಅವರು ಸಮಕಾಲೀನ ಸಮಸ್ಯೆಗಳ ಬಗೆಗೆ ಸಾಕಷ್ಟು ಬರೆದಿದ್ದಾರೆ. The Politics of Cruelty (1994) ಅಂಥಾ ಒಂದು ಮುಖ್ಯಕೃತಿ.

Donate Janashakthi Media

Leave a Reply

Your email address will not be published. Required fields are marked *