ಉತ್ತರ ಕನ್ನಡ : ಮುಂಡಗೋಡದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಬಿಸಿಯೂಟ ಯೋಜನೆಯ ಮುಖ್ಯ ಅಡುಗೆದಾರರಾಗಿ ಕೆಲಸ ಮಾಡುತ್ತಿದ್ದ ಅನ್ನಪೂರ್ಣ ಹುಳ್ಯಾಳ, ಕೆಲಸ ಮಾಡುತ್ತಿದ್ದ ವೇಳೆ ಮೈಮೇಲೆ ಬಿಸಿ ಸಾಂಬಾರು ಬಿದ್ದು ಸಾವನ್ನಪಿದ್ದು ಅವರ ಕುಟುಂಬಕ್ಕೆ ಸೂಕ್ತಪರಿಹಾರ ನೀಡಬೇಕು ಹಾಗೂ ಇಂತಹ ಘಟನೆಗಳು ಮತ್ತೆ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ(ಸಿಐಟಿಯು) ಉತ್ತರ ಕನ್ನಡ ಜಿಲ್ಲಾ ಸಮಿತಿಯು ಜಿಲ್ಲಾಧಿಕಾರಿಗಳಿಗೆ ಹಾಗೂ ಶಿಕ್ಷಣಾಧಿಕಾರಿಗಳಿಗೆ ಮನವಿಸಲ್ಲಿಸಿದ್ದಾರೆ.
ಉ.ಕ ಜಿಲ್ಲಾಧ್ಯಕ್ಷರಾದ ಯಮುನಾ ಗಾಂವ್ಕರ್, ಜನಶಕ್ತಿ ಮೀಡಿಯ ಜೊತೆ ಮಾತನಾಡಿ, ಬಿಸಿ ಅಡುಗೆ ಕೆಲಸ ಮಾಡುತ್ತಿದ್ದಾಗ ಮೈಮೇಲೆ ಸಾಂಬಾರು ಬಿದ್ದು ವಾರಗಳ ಕಾಲ ಜೀವನ್ಮರಣ ನೋವು ಅನುಭವಿಸಿ ಸಾವನ್ನಪ್ಪಿರುವುದು ನಮಗೆಲ್ಲರಿಗೂ ತೀವ್ರ ದುಃಖ ಉಂಟುಮಾಡಿದೆ. ಅಗಸ್ಟ್ 19 ಶನಿವಾರ, ಸಮಯಕ್ಕೆ ಸರಿಯಾಗಿ ಆರು ನೂರಕ್ಕೂ ಅಧಿಕ ಮಕ್ಕಳಿಗೆ ಅಡುಗೆ ಮಾಡಿದ್ದು ಇನ್ನೇನು ಮಕ್ಕಳಿಗೆ ಬಡಿಸಲು ತಯಾರಿ ನಡೆಸಲಾಗಿತ್ತು. ಅನ್ನಪೂರ್ಣರವರು ಮತ್ತು ಇನ್ನೋರ್ವ ಅಡುಗೆ ಸಹಾಯಕಿಯವರು ದೊಡ್ಡ ಪಾತ್ರೆಯಲ್ಲಿ ಬಿಸಿ ಸಾಂಬಾರನ್ನು ಎತ್ತಿಕೊಂಡು ಬರುವ ಸಮಯದಲ್ಲಿ ಕಾಲುಜಾರಿ ಬಿದ್ದಿದ್ದಾರೆ ಮತ್ತು ಆ ಸಾಂಬಾರ ಪಾತ್ರೆ ಮೈಮೇಲೆ ಬಿದ್ದಿದೆ. ಕುದಿಯುವ ಸಾಂಬಾರು ಪೂರ್ಣವಾಗಿ ಇವರ ಮೇಲೆಯೇ ಬಿದ್ದು ಪರಿಣಾಮ ಅವರ ದೇಹ ಸುಟ್ಟಿತ್ತು. ಅವರನ್ನು ಮುಂಡಗೋಡ ತಾಲೂಕಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ 615 ಮಕ್ಕಳಿದ್ದು ಕೇವಲ ನಾಲ್ಕು ಅಡುಗೆ ಸಿಬ್ಬಂದಿ ಇದ್ದಾರೆ ಎಂದು ಇಂತಹ ಘಟನೆಗಳು ಮತ್ತೆ ನಡೆಯದಂತೆ ಇಲಾಖೆ ಎಚ್ಚರಿಕೆ ವಹಿಸಬೇಕು ಹಾಗೂ ಬಿಸಿಯೂಟ ನೌಕರರಿಗೆ ರಕ್ಷಣೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಚಂದ್ರಯಾನ-3:ಆಗಸ್ಟ್ 23 ಬಾಹ್ಯಾಕಾಶ ವಿಜ್ಞಾನ ದಿನ ಎಂದು ಘೋಷಿದ ಮೋದಿ
ಜಿಲ್ಲಾಧಿಕಾರಿಗಳಿಗೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಈ ಕೆಳಗಿನ ಬೇಡಿಕೆ ಈಡೇರಿಸಬೇಕು ಎಂದು ಸಂಘಟನೆಯು ಆಗ್ರಹಿಸಿದೆ.
ಬೇಡಿಕೆಗಳು
1) ಮೃತರ ಕುಟುಂಬಕ್ಕೆ ಸೂಕ್ತಪರಿಹಾರ ನೀಡಬೇಕು. ಸರ್ಕಾರದ ಸುತ್ತೋಲೆಯಂತೆ, ಸುಟ್ಟ ಗಾಯಗಳಿಂದಾದ ಸಾವಿಗೆ ಕೊಡುವ ಪರಿಹಾರ ಕೇವಲ ಒಂದು ಲಕ್ಷ ರೂ. ಸಾಕಾಗದು. ತಕ್ಷಣಕ್ಕೆ ಕನಿಷ್ಟ ಐದು ಲಕ್ಷ ರೂ. ನೀಡಬೇಕು. ಇನ್ನು ಮುಂದೆ ಬಿಸಿಅಡುಗೆಯ ಯಾರೇ ಇಂಥಹ ಯಾವುದೇ ಸ್ವರೂಪದ ಅನಾಹುತಕ್ಕೆ ಬಲಿಯಾದಲ್ಲಿ ಪರಿಹಾರಧನ 25 ಲಕ್ಷ ರೂ. ಗೆ ಹೆಚ್ಚಿಸಬೇಕು.
2) ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು.
3) ಈಗಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅಡುಗೆ ಸಿಬ್ಬಂದಿ ನೇಮಿಸುವ ದೋಷಪೂರಿತ ಕ್ರಮ ಬದಲಿಸಿ ಎಲ್ಲಾ ಶಾಲೆಗಳಲ್ಲಿ ಹೆಚ್ಚುವರಿ ಅಗತ್ಯ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಬೇಕು, ಕೆಲಸದ ಒತ್ತಡ ಮತ್ತು ಹೊರೆ ತಪ್ಪಿಸಬೇಕು.
4) ಕೆಲಸದ ಪ್ರದೇಶದಲ್ಲಿ ಅವಘಡಗಳು ಸಂಭವಿಸದಂತೆ ಜಾಗರೂಕತೆ ವಹಿಸಬೇಕು. ಅಡುಗೆ ಮಾಡಿದ ನಂತರ ಮಕ್ಕಳಿಗೆ ಬಡಿಸುವಲ್ಲಿ ಅದನ್ನು ಸಾಗಿಸುವ ವಿಧಾನ ಬದಲಿಸಬೇಕು. ಕೆಲವೆಡೆ ಶಾಲೆಗೆ ಬಳಸಿದ ನುಣುಪಾದ ಟೈಲ್ಸ್ ಅಥವಾ ನುಣುಪಾದ ನೆಲದಲ್ಲಿ ಅಡುಗೆಯವರು ಮಕ್ಕಳು ಬೀಳುವುದು ತಪ್ಪಿಸಲು ಕ್ರಮಕೈಗೊಳ್ಳಬೇಕು.
5) ಯಾವುದೇ ಎಂಡ್ರೊಯ್ಡ್ ಮೊಬೈಲ್ ನೀಡದೇ ಯುಟ್ಯೂಬ್ ನಲ್ಲಿ ಬಿಸಿಅಡುಗೆಯವರಿಗೆ ತರಬೇತಿ ನೀಡುವಿಕೆ ಅದನ್ನು ವೀಕ್ಷಿಸಲು ಶಾಲೆಯಲ್ಲೇ ಹೆಚ್ಚುವರಿಯಾಗಿ ಸಮಯ ವ್ಯಯ ಮಾಡುವುದು ನಿಲ್ಲಬೇಕು. ಪರ್ಯಾಯ ವ್ಯವಸ್ಥೆ ಮಾಡಬೇಕು.
6) ಸಂಘಟನೆಯಿಂದ ರಾಜ್ಯವ್ಯಾಪಿ ಇಟ್ಟಿರುವ ಬೇಡಿಕೆ ಈಡೇರಿಸಬೇಕು.
7) ಬಿಸಿಅಡುಗೆಯವರು ದುರ್ಘಟನೆಯಿಂದ ಬಳಲುವಾಗ ಮತ್ತು ಸಾವನ್ನಪ್ಪಿದಾಗ ನಮ್ಮ ಸಂಘಟನೆಗಳಿಗೂ ಮಾಹಿತಿ ತಿಳಿಸುವಂತಾಗಬೇಕು.