ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತ ಹಿನ್ನೆಲೆ ಮೈಸೂರು ರಂಗಾಯಣ ನಿರ್ದೇಶಕ ಸ್ಥಾನಕ್ಕೆ ಅಡ್ಡಂಡ ಕಾರ್ಯಪ್ಪ ರಾಜೀನಾಮೆ ನೀಡಿದ್ದಾರೆ. ಮೈಸೂರು ರಂಗಾಯಣ ನಿರ್ದೇಶಕರಾದ ಬಳಿಕ ಅಡ್ಡಂಡ ಕಾರ್ಯಪ್ಪ ಹಲವು ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿದ್ದರು. ಅಡ್ಡಂಡ ಕಾರ್ಯಪ್ಪ ರಚಿತ ಟಿಪ್ಪು ನಿಜ ಕನಸುಗಳು ನಾಟಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ವಿವಾದದ ಬೆನ್ನಲ್ಲೇ ಸಿದ್ದರಾಮಯ್ಯ ನಿಜ ಕನಸುಗಳು ಎಂಬ ಪುಸ್ತಕ ರಚನೆ ಕಾಂಗ್ರೆಸ್ಗೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು.
ಇದೀಗ ಬಿಜೆಪಿ ಸೋತ ಹಿನ್ನೆಲೆ ಅಡ್ಡಂಡ ಕಾರ್ಯಪ್ಪ ಸೂರು ರಂಗಾಯಣ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಸಲ್ಲಿಸಿದ ಬಳಿಕ ಪ್ರತಿಕ್ರಿಯಿಸಿರುವ ಅಡ್ಡಂಡ ಕಾರ್ಯಪ್ಪ, ನನ್ನನ್ನು ನಿರ್ದೇಶಕನನ್ನಾಗಿ ನೇಮಿಸಿದ ಬಿಜೆಪಿ ಚುನಾವಣೆಯಲ್ಲಿ ಸೋತಿದೆ. ಕರ್ನಾಟಕ ಜನರು ನೀಡಿರುವ ತೀರ್ಪನ್ನು ಗೌರವದಿಂದ ಒಪ್ಪಿಕೊಳ್ಳುತ್ತೇನೆ. ಈ ಕಾರಣದಿಂದಾಗಿ ನೈತಿಕ ಹೊಣೆ ತೆಗೆದುಕೊಂಡು ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಉರಿಗೌಡ ಮತ್ತು ನಂಜೇಗೌಡ ಎಂಬ ಕಾಲ್ಪನಿಕ ಪಾತ್ರಗಳನ್ನು ರಚಿಸುವ ಮೂಲಕ ಸಮಾಜ ಸ್ವಾಸ್ಥ್ಯವನ್ನು ಹಾಳು ಮಾಡಿದ್ದಾರೆ. ಈ ಎರಡು ಪಾತ್ರಗಳ ಮೂಲಕ ಒಕ್ಕಲಿಗರನ್ನು ಅವಮಾನಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಆರೋಪಿಸಿದ್ದವು.