ನವದೆಹಲಿ: ಅದಾನಿ ಸಮೂಹದ ವಿರುದ್ಧ ಹಿಂಡೆನ್‌ಬರ್ಗ್ ರಿಸರ್ಚ್ ಮಾಡಿರುವ ಆರೋಪಗಳ ಮೇಲೆ ಒಂದು ಉನ್ನತ ಮಟ್ಟದ ತನಿಖೆ ಅತ್ಯಗತ್ಯವಾಗಿದೆ, ಇದನ್ನು ಸುಪ್ರೀಂ ಕೋರ್ಟ್ ಪ್ರತಿದಿನ ವೆಂಬಂತೆ ಮೇಲ್ವಿಚಾರಣೆ ಮಾಡುವಂತಿರಬೇಕು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕೇಂದ್ರ ಸಮಿತಿ ಆಗ್ರಹಿಸಿದೆ. ಈ ವಿಚಾರಣೆ ಮುಗಿದು ಸತ್ಯ ತಿಳಿಯುವವರೆಗೂ ಭಾರತದ ಮತ್ತು ನಮ್ಮ ಜನರ ಹಿತಾಸಕ್ತಿಯನ್ನು ರಕ್ಷಿಸಬೇಕು. ಎಲ್‌ಐಸಿಯ ಸುಮಾರು ರೂ. 80,000 ಕೋಟಿಗಳಷ್ಟು ಅದಾನಿ ಕಂಪನಿಗಳಲ್ಲಿ ಹೂಡಿಕೆಯಾಗಿದೆ ಮತ್ತು ಈ ಸಮೂಹವು ರಾಷ್ಟ್ರೀಯ ಬ್ಯಾಂಕ್‌ಗಳಿಂದ ತೆಗೆದುಕೊಂಡ ಎಲ್ಲಾ ಸಾಲಗಳಲ್ಲಿ 40 ಪ್ರತಿಶತವು ಎಸ್‌ಬಿಐ ಮೂಲಕವಾಗಿದೆ. ಎಲ್‌ಐಸಿ ಮತ್ತು ಎಸ್‌ಬಿಐ ಎರಡೂ ಸಂಸ್ಥೆಗಳು ಕೋಟ್ಯಂತರ ಭಾರತೀಯರು ತಮ್ಮ ಭವಿಷ್ಯದ ಭದ್ರತೆಗಾಗಿ ತಮ್ಮ ಜೀವಮಾನದ ಉಳಿತಾಯವನ್ನು ಇಟ್ಟಿರುವ ಸಂಸ್ಥೆಗಳು. ಈ ವರದಿಯು ಸಾರ್ವಜನಿಕವಾದ ನಂತರ ಅದಾನಿ ಗುಂಪುಗಳ ಬಂಡವಾಳೀಕರಣವು ಶೇರು ಮಾರುಕಟ್ಟೆಯಲ್ಲಿ ಶತಕೋಟಿಯಷ್ಟು ಕುಸಿದಿದೆ. ಇದು ಈ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಜನರ ಜೀವಿತಾವಧಿಯ ಉಳಿತಾಯದ ನಾಶಕ್ಕೆ ಕಾರಣವಾಗುವಂತಾಗಬಾರದು ಎಂದು ಅದು ಹೇಳಿದೆ.
ಜನವರಿ 28-29ರಂದು ಕೊಲ್ಕತಾದಲ್ಲಿ ನಡೆದ ಸಿಪಿಐ(ಎಂ) ಕೇಂದ್ರ ಸಮಿತಿಯ ಸಭೆ ಇತರ ಜಾತ್ಯತೀತ ವಿರೋಧ ಪಕ್ಷಗಳೊಂದಿಗೆ ಸಂಯೋಜಿಸಿಕೊಂಡು ಮುಂಬರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಈ ವಿಷಯವನ್ನು ಎತ್ತಬೇಕೆಂದೂ ನಿರ್ಧರಿಸಿದೆ.
ಇದನ್ನು ಓದಿ: ಲೈಂಗಿಕ ಕಿರುಕುಳ ವಿರುದ್ಧ ಹೋರಾಟದಲ್ಲಿ ನಾವಿರುತ್ತೇವೆ: ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್
ಇತ್ತೀಚಿನ ಬೆಳವಣಿಗೆಗಳ ಮೇಲೆ ಎರಡು ದಿನಗಳ ಚರ್ಚೆ ನಡೆಸಿದ ಕೇಂದ್ರ ಸಮಿತಿ ಸಭೆ ಫೆಬ್ರುವರಿ ತಿಂಗಳ ಕೊನೆಯ ವಾರದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಬಡತನ ಮತ್ತು ಅಸಮಾನತೆಗಳೊಂದಿಗೆ ಜನರ ಜೀವನೋಪಾಯದ ಮೇಲಿನ ನಿರಂತರ ದಾಳಿಗಳ ವಿರುದ್ಧ ಫೆಬ್ರುವರಿ 22 ರಿಂದ 28 ರ ವರೆಗೆ ರಾಷ್ಟ್ರವ್ಯಾಪಿ ಪ್ರತಿಭಟನೆಯ ಕಾರ್ಯಾಚರಣೆಗೆ ಕರೆ ನೀಡಿದೆ.
2023-24ರ ಕೇಂದ್ರ ಬಜೆಟ್‌ನಲ್ಲಿ ಉದ್ಭವಿಸುವ ಪ್ರಶ್ನೆಗಳ ಜೊತೆಗೆ, ಈ ಪ್ರತಿಭಟನಾ ಕಾರ್ಯಾಚರಣೆಗಳಲ್ಲಿ ಉದ್ಯೋಗ ಸೃಷ್ಟಿಸುವ ಮೂಲಸೌಕರ್ಯ ಯೋಜನೆಗಳಲ್ಲಿ ಸಾರ್ವಜನಿಕ ಹೂಡಿಕೆಗಳನ್ನು ಹೆಚ್ಚಿಸಬೇಕು, 5 ಕೆಜಿ ಉಚಿತ ಆಹಾರ ಧಾನ್ಯಗಳ ಜೊತೆಗೆ 5 ಕೆಜಿ ಸಬ್ಸಿಡಿ ಆಹಾರ ಧಾನ್ಯಗಳನ್ನು ಮತ್ತೆ ಕೊಡಬೇಕು, ಹೆಚ್ಚಿನ ಕೂಲಿಯೊಂದಿಗೆ ಮನರೇಗಕ್ಕೆ ಹಂಚಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಬೇಕು, ಸಂಪತ್ತು ಮತ್ತು ಪಿತ್ರಾರ್ಜಿತ ತೆರಿಗೆಯನ್ನು ವಿಧಿಸಬೇಕು ಶ್ರೀಮಂತರಿಗೆ ತೆರಿಗೆ ರಿಯಾಯಿತಿಗಳನ್ನು ಹಿಂಪಡೆಯಬೇಕು ಅತಿ ಶ್ರೀಮಂತರ ಮೇಲೆ ಒಂದು ತೆರಿಗೆಯನ್ನು ವಿಧಿಸಬೇಕು ಮತ್ತು ಔಷಧಿಗಳು ಸೇರಿದಂತೆ ಆಹಾರ ಮತ್ತು ಅಗತ್ಯ ವಸ್ತುಗಳ ಮೇಲಿನ ಜಿಎಸ್‍ಟಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಲಾಗುವುದು ಎಂದು ಈ ಸಭೆಯ ನಂತರ ನೀಡಿರುವ ಪತ್ರಿಕಾ ಹೇಳಿಕೆ ತಿಳಿಸಿದೆ.
ಇದನ್ನು ಓದಿ: ನೋಟುರದ್ಧತಿ : ಸುಪ್ರಿಂ ಕೋರ್ಟ್ ಸರಕಾರದ ಹಕ್ಕನ್ನು ಎತ್ತಿಹಿಡಿದಿದೆ, 2016ರ ನಡೆಯನ್ನಲ್ಲ-ಸಿಪಿಐ(ಎಂ) ಪೊಲಿಟ್ ಬ್ಯುರೊ
ಏಪ್ರಿಲ್ 5, 2023 ರಂದು ಸಂಸತ್ತಿಗೆ ಮಜ್ದೂರ್-ಕಿಸಾನ್ ರ‍್ಯಾಲಿಯ ಕರೆಗೆ ಸಿಪಿಐ(ಎಂ) ತನ್ನ ಸಂಪೂರ್ಣ ಬೆಂಬಲವನ್ನು ನೀಡಲು ನಿರ್ಧರಿಸಿರುವ ಅದು ಮಾರ್ಚ್ ತಿಂಗಳ ಅವಧಿಯಲ್ಲಿ ದೇಶಾದ್ಯಂತ ಈ ಕೆಳಗಿನ ವಿಷಯಗಳ ಮೇಲೆ ರಾಜಕೀಯ ಪ್ರಚಾರಾಂದೋಲನ ಮತ್ತು ಚಟುವಟಿಕೆಗಳನ್ನು ಆಯೋಜಿಸಲು ಕೂಡ ನಿರ್ಧರಿಸಿದೆ.
(i) ಒಕ್ಕೂಟತತ್ವದ ಮೇಲ ಹೆಚ್ಚುತ್ತಿರುವ ದಾಳಿಗಳೊಂದಿಗೆ, ಚುನಾಯಿತ ರಾಜ್ಯ ಸರ್ಕಾರಗಳ ವಿರುದ್ಧ, ವಿಶೇಷವಾಗಿ ಬಿಜೆಪಿಯೇತರ ರಾಜ್ಯ ಸರ್ಕಾರಗಳ ವಿರುದ್ಧ ಬಿಜೆಪಿಯ ನೀತಿಗಳ ವಿರುದ್ಧ ಪ್ರತಿಭಟನೆ, ಮತ್ತು ಒಕ್ಕೂಟ ರಚನೆಯನ್ನು ನಾಶಪಡಿಸುವ ಏಕಘಟಕ ಪ್ರಭುತ್ವ ರಚನೆಯನ್ನು ಹೇರುವ ಪ್ರಯತ್ನಗಳನ್ನು ವಿರೋಧಿಸುವುದು.
(ii) ನ್ಯಾಯಾಂಗದ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವ ಬಿಜೆಪಿ ಸರ್ಕಾರದ ಪ್ರಯತ್ನಗಳನ್ನು ಖಂಡಿಸುವ ಪ್ರಚಾರಾಂದೋಲನಗಳು. ಉನ್ನತ ನ್ಯಾಯಾಂಗವನ್ನು ಸರ್ಕಾರಕ್ಕೆ ಅಧೀನಗೊಳಿಸುವ ಮೋದಿ ಸರ್ಕಾರದ ಪ್ರಯತ್ನಗಳ ವಿರುದ್ಧ ನ್ಯಾಯಾಂಗದ ಸಾಂವಿಧಾನಿಕ ಪಾತ್ರವನ್ನು ರಕ್ಷಿಸಲು ಎಲ್ಲಾ ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಸಜ್ಜುಗೊಳಿಸಬೇಕು.
(iii) ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಸುಧಾರಣೆಗಳಲ್ಲಿ ಪ್ರಜಾಪ್ರಭುತ್ವ ಮತ್ತು ಸಮಾನ ಅವಕಾಶ
(iv) ಬಲಪಂಥೀಯ ಇಸ್ರೇಲಿ ಸರ್ಕಾರದ ದಮನದ ವಿರುದ್ಧ ಪ್ಯಾಲೇಸ್ಟಿನಿಯನ್ ಜನರೊಂದಿಗೆ ಸೌಹಾರ್ದ ಅಭಿಯಾನಗಳನ್ನು ಸಂಘಟಿಸುವುದು.
ಇದನ್ನು ಓದಿ: ತ್ರಿಪುರಾದಲ್ಲಿ ಮತ್ತೊಂದು ಮಾರಣಾಂತಿಕ ಹಲ್ಲೆ- ಸಿಪಿಐ(ಎಂ) ಪೊಲಿಟ್‍ಬ್ಯುರೊ ಖಂಡನೆ
ಭಾರತದಲ್ಲಿ ಆರ್ಥಿಕ ಅಸಮಾನತೆ ಹೊಲಸು ರೀತಿಯಲ್ಲಿ ವ್ಯಾಪಿಸುತ್ತಿದೆ ಎಂಬುದನ್ನು ಆಫ್‍ಕಾಮ್ ವರದಿ ‘ಸರ್ವೈವಲ್ ಆಫ್ ದಿ ರಿಚೆಸ್ಟ್: ದಿ ಇಂಡಿಯಾ ಸಪ್ಲಿಮೆಂಟ್‘” ಎತ್ತಿ ತೋರಿದೆ ಎಂದು ವಿಶ್ಲೇಷಿಸಿರುವ ಕೇಂದ್ರ ಸಮಿತಿ ಮೋದಿ ಸರ್ಕಾರವು ಶ್ರೀಮಂತರಿಗೆ ನೀಡುತ್ತಲೇ ಇರುವ ತೆರಿಗೆ ರಿಯಾಯಿತಿಗಳನ್ನು ಹಿಂತೆಗೆದುಕೊಳ್ಳುವ ಸಮಯ ಬಂದಿದೆ, ಸಂಪತ್ತು ತೆರಿಗೆ ಮತ್ತು ಪಿತ್ರಾರ್ಜಿತ ತೆರಿಗೆಯನ್ನು ಜಾರಿಗೆ ತರಬೇಕು ಮತ್ತು ಎಲ್ಲಾ ಅಗತ್ಯ ವಸ್ತುಗಳ ಮತ್ತು ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದೆ.
ಕೋಮು ಧ್ರುವೀಕರಣವನ್ನು ತೀಕ್ಷ್ಣಗೊಳಿಸುವ ಪ್ರಯತ್ನಗಳು ವಿವಿಧ ರೀತಿಯಲ್ಲಿ ಉಲ್ಬಣಗೊಳ್ಳುತ್ತಲೇ ಇವೆ. ಒಬ್ಬ ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಅಂತರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪದಕ ಗೆದ್ದ ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅವರ ವಿರುದ್ಧ ಸರಕಾರವಾಗಲಿ, ಆಡಳಿತ ಪಕ್ಷವಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ಅಪರಾಧಿಗಳ ಜೀವಾವಧಿ ಶಿಕ್ಷೆಯನ್ನು ಮಾಫಿ ಮಾಡಿ ಬಿಡುಗಡೆಗೊಳಿಸಿದ ನಂತರ, ಜೂನ್ 2014 ರಲ್ಲಿ ಪುಣೆಯಲ್ಲಿ ನಡೆದ ಗಲಭೆ ಮತ್ತು ಮೊಹ್ಸಿನ್ ಶೇಖ್ ಕಗ್ಗೊಲೆಯ ಪ್ರಕರಣದಲ್ಲಿ ಎಲ್ಲಾ 21 ವ್ಯಕ್ತಿಗಳನ್ನು ಆರೋಪ ಮುಕ್ತಗೊಳಿಸಲಾಗಿದೆ . ಇದನ್ನು ಹಿಂದುತ್ವವಾದಿ ಸಂಘಟನೆಗಳ ದೊಡ್ಡ ಪಡೆಯೇ ಸ್ವಾಗತಿಸಿದೆ. .ಇದನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲು ಪೊಲೀಸರು ಮತ್ತು ಆಡಳಿತ ಇದುವರೆಗೆ ಮುಂದಾಗಿಲ್ಲ ಎಂಸಂಗತಿಯತ್ತ ಸಿಪಿಐ(ಎಂ) ಕೇಂದ್ರ ಸಮಿತಿ ಗಮನ ಸೆಳೆದಿದೆ.
ಇದನ್ನು ಓದಿ: ಆರ್ಥಿಕವಾಗಿ ದುರ್ಬಲರಿಗೆ ಮೀಸಲಾತಿಯ ನೀತಿಯ ಬಗೆಗಿರುವ ಆತಂಕಗಳನ್ನು ಸರಕಾರ ಪರಿಶೀಲಿಸಬೇಕು-ಸಿಪಿಐ(ಎಂ) ಪೊಲಿಟ್‍ಬ್ಯುರೊ
‘ಪಳಗಿಸಿದ’ ನ್ಯಾಯಾಂಗವನ್ನು ಹೊಂದುವ ಪ್ರಯತ್ನದಲ್ಲಿ , ಉನ್ನತ ನ್ಯಾಯಾಂಗವನ್ನು ಕಾರ್ಯಾಂಗಕ್ಕೆ ಅಧೀನಗೊಳಿಸುವುದು ಮೋದಿ ಸರ್ಕಾರದ ಗುರಿಯಾಗಿದೆ ಎಂದು ಸಿಪಿಐ(ಎಂ) ಅಭಿಪ್ರಾಯ ಪಟ್ಟಿದೆ.
ತ್ರಿಪುರ ವಿಧಾನಸಭೆ ಚುನಾವಣೆ
ತ್ರಿಪುರಾ ವಿಧಾನಸಭಾ ಚುನಾವಣೆಯ ಕಾರ್ಯಕ್ರಮವು ಪ್ಟಕಟಗೊಂಡಿದೆ. ಅಲ್ಲಿ ಮುಕ್ತ ಮತ್ತು ನ್ಯಾಯಸಮ್ಮತವಾದ ಮತದಾನ ನಡೆಯಬೇಕಾದರೆ ತ್ರಿಪುರಾದಲ್ಲಿ ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಸಂಪೂರ್ಣವಾಗಿ ಮರುಸ್ಥಾಪಿಸಬೇಕು, ಇದಕ್ಕೆ ಚುನಾವಣಾ ಆಯೋಗ
ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದಿರುವ ಕೇಂದ್ರ ಸಮಿತಿ ಈ ಕುರಿತು ದೇಶಾದ್ಯಂತ ತ್ರಿಪುರಾದ ಜನತೆಯೊಂದಿಗೆ ಸೌಹಾರ್ದವನ್ನು ವ್ಯಕ್ತಪಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲು ಸಿಪಿಐ(ಎಂ) ಕೇಂದ್ರ ಸಮಿತಿ ನಿರ್ಧರಿಸಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ