ನವ ಉದಾರವಾದಿ ಹಗರಣಗಳ ಅಮೃತಕಾಲದ ಆವೃತ್ತಿ?
“ಅಮೃತ ಕಾಲದ ಮೊದಲ ಬಜೆಟ್” ಎಂದು ಕೇಂದ್ರ ಹಣಕಾಸು ಮಂತ್ರಿಗಳು ಈ ವರ್ಷದ ಬಜೆಟ್ ಮಂಡಿಸುತ್ತಿದ್ದಾಗ ಭಾರತದ ಶೇರು ಮಾರುಕಟ್ಟೆಗಳ ಗಮನವೆಲ್ಲ ಎಂದಿನಂತೆ ಹಣಕಾಸು ಮಂತ್ರಿಗಳ ಭಾಷಣದ ಬದಲು ಈ ಸರಕಾರದ ಇಬ್ಬರು ಘನಿಷ್ಟ ಮಿತ್ರರುಗಳಲ್ಲಿ ಒಬ್ಬರಾದ ಅದಾನಿಯ ಸಮೂಹ ಕಂಪನಿಗಳ ಶೇರು ಮೌಲ್ಯಗಳ ಪತನ ಮಾರ್ಗದ ಮೇಲೆ ನೆಟ್ಟಿತ್ತು. ಏಕೆ ಹೀಗಾಯಿತು?
ಕೋಟ ನಾಗರಾಜ
ಇತ್ತೀಚೆಗೆ ಅಮೆರಿಕ ಮೂಲದ ‘ಹಿಂಡೆನ್‌ಬರ್ಗ್ ರಿಸರ್ಚ್’ ಎಂಬ ಸಂಸ್ಥೆಯ ವರದಿಯೊಂದು, ಅದಾನಿ ಸಮೂಹ ನಡೆಸಿದೆ ಎನ್ನಲಾದ ಬೃಹತ್ ಹಣಕಾಸು ವಂಚನೆಯ ಜಾಲವನ್ನು ಬಯಲು ಮಾಡಿದೆ.
ಅದಾನಿ ಸಮೂಹ “ತನ್ನ ಶೇರು ಬೆಲೆಗಳ ಏರಿಕೆಗಾಗಿ ಶೇರು ಮಾರುಕಟ್ಟೆ ಅಕ್ರಮದಂಥ ಲಜ್ಜೆ ಗೆಟ್ಟ ಮಾರ್ಗದಲ್ಲಿ ತೊಡಗಿತ್ತು ಮತ್ತು ದಶಕಗಳ ಅವಧಿಯಲ್ಲಿ ಸುಮಾರು $218 ಬಿಲಿಯನ್ ಮೌಲ್ಯದ ಲೆಕ್ಕಪತ್ರ ವಂಚನೆ ಮಾಡಿದೆ” ಎಂದು ಅದು ವರದಿ ಮಾಡಿದೆ. ಈ ವರದಿ ಬಹಿರಂಗವಾದ ಬೆನ್ನಲ್ಲೇ ಅದಾನಿ ಸಮೂಹದ ಕಂಪನಿಗಳ ಷೇರುಗಳು ಇದುವರೆಗಿನ ಐದು ವಹಿವಾಟು ಅವಧಿಗಳಲ್ಲಿ(ಫೆಬ್ರವರಿ 1 ರ ವರೆಗಿನ) 35% ವರೆಗೆ ಕುಸಿತ ಕಂಡು, ಸಮೂಹದ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ರೂ.7.4 ಲಕ್ಷ ಕೋಟಿಗಳಷ್ಟು ಕರಗಿ ಹೋಗಿದೆ. ಇದರ ಪರಿಣಾಮವಾಗಿ ಅದಾನಿ ಸಮೂಹವು ಇದೇ ಜನವರಿ 31 ರಂದು ಮುಕ್ತಾಯಗೊಂಡ ಅದಾನಿ ಎಂಟರ್ ಪ್ರೈಸಸ್ ನ ರೂ.20000 ಕೋಟಿ ಮೌಲ್ಯದ “ಮುಂದುವರಿದ ಷೇರು ವಿಕ್ರಯ”(ಎಫ್‌ಪಿಓ) ಪ್ರಕ್ರಿಯೆಯನ್ನು ಹಿಂದಕ್ಕೆ ಪಡೆಯಲು, ಎಲ್ಲ ಹೂಡಿಕೆದಾರರಿಗೆ ಹಣವನ್ನು ಹಿಂದಿರುಗಿಸಲು ನಿರ್ಧರಿಸಿರುವುದು ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿರುವುದನ್ನುಸೂಚಿಸುತ್ತದೆ.
ಅದಾನಿ ಸಮೂಹವನ್ನು “ಕಾರ್ಪೊರೇಟ್ ಇತಿಹಾಸದಲ್ಲಿ ಅತಿ ದೊಡ್ಡ ವಂಚನೆ ಎಸಗಿದ ” ಗುಂಪು ಎಂದು ವರದಿಯಲ್ಲಿ ಆಪಾದಿಸಲಾಗಿದೆ. ಹಿಂಡೆನ್‍ಬರ್ಗ್ ನ ಎರಡು ವರ್ಷಗಳ ತನಿಖೆಯು, ಕಳೆದ ಮೂರು ವರ್ಷಗಳಲ್ಲಿ ಗೌತಮ್ ಅದಾನಿಯವರ ನಿವ್ವಳ ಮೌಲ್ಯಕ್ಕೆ $ 100 ಶತಕೋಟಿಗಿಂತ ಹೆಚ್ಚು ಸೇರಲ್ಪಡಲು, ಅದಾನಿ ಸಮುದಾಯದ ಷೇರು ಬೆಲೆಯಲ್ಲಿ 800% ಏರಿಕೆ ಆಗಿರುವುದೇ ಬಹುತೇಕ ಕಾರಣ ಎಂದು ತೋರಿಸಿದೆ. 2019 ರ ಅಂತ್ಯದ ವೇಳೆಗೆ 2 ಲಕ್ಷ ಕೋಟಿ ರೂಪಾಯಿಗಳಷ್ಟಿದ್ದ ಗೌತಮ್ ಅದಾನಿಯವರ ಸಮೂಹದ ಮಾರುಕಟ್ಟೆ ಬಂಡವಾಳ ಮೌಲ್ಯವು ಕೇವಲ ಮೂರೇ ವರ್ಷಗಳಲ್ಲಿ ರೂ. 20.74 ಲಕ್ಷ ಕೋಟಿಗಳಷ್ಟು ಬೃಹತ್ ಪ್ರಮಾಣದ ಅಸಹಜವಾದ ಏರಿಕೆ ಕಂಡಿದೆ.
ಸಾಂಕ್ರಾಮಿಕದ ಸಮಯದಲ್ಲಿ ಭಾರತದ ಜಿಡಿಪಿ 8% ರಷ್ಟು ಕುಸಿತ ಕಾಣುತ್ತಿದ್ದ ಸಂಧರ್ಭದಲ್ಲೇ ಅದಾನಿ ಗುಂಪಿಗೆ ಪ್ರತಿ ತಿಂಗಳು ಸರಾಸರಿ 56,700 ಕೋಟಿ ರೂಗಳಷ್ಟು ಸೇರ್ಪಡೆಯಾಗುತ್ತ ಹೋಗಿದೆ.
ಅದಾನಿ ಅವರ ನಿವ್ವಳ ಮೌಲ್ಯವು 31.12.19 ರಲ್ಲಿ $10 ಬಿಲಿಯನ್ ಇದ್ದು, 31.12.22 ರ ಹೊತ್ತಿಗೆ $121 ಕ್ಕೆ ಏರಿಕೆ ಕಂಡಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಈ ಹೊತ್ತಿಗೆ ಅದಾನಿ ಸಂಪತ್ತು ಮುಖೇಶ್ ಅಂಬಾನಿಯ ಆಸ್ತಿಯನ್ನೂ ($87.1 ಬಿಲಿಯನ್)ಮೀರಿಸಿತು.
ಇನ್ನೊಂದು ನವ-ಉದಾರವಾದಿ ಹಗರಣ
ಹಿಂದಿನ ಹಗರಣಗಳ ಮುಂದುವರಿಕೆ?
1990 ರ ದಶಕದಲ್ಲಿ ನವ ಉದಾರವಾದಿ ನೀತಿಗಳನ್ನು ಅಳವಡಿಸಿ ಕೊಂಡಾಗಿನಿಂದ, ನಮ್ಮ ದೇಶವು ಅನೇಕ ಹಣಕಾಸು ಹಗರಣಗಳಿಗೆ ಸಾಕ್ಷಿಯಾಗಿದೆ.
ಸತ್ಯಂ ಕಂಪ್ಯೂಟರ್, ವಿಜಯ್ ಮಲ್ಯ, ಜೆಟ್ ಏರ್‌ವೇಸ್, ಭೂಷಣ್ ಸ್ಟೀಲ್, ನೀರವ್ ಮೋದಿ, ಮೆಹುಲ್ ಚೋಕ್ಸಿ, ವಿನ್ಸಮ್ ಡೈಮಂಡ್ಸ್, ಸ್ಟರ್ಲಿಂಗ್ ಬಯೋಟೆಕ್, ರುಚಿ ಸೋಯಾ, DHFL, IL&FS ಹೀಗೆ ಹಲವಾರು ಹಗರಣಗಳನ್ನು ಇಲ್ಲಿ ಹೆಸರಿಸಬಹುದು. ಈ ಪ್ರಕರಣಗಳು ಸಾರ್ವಜನಿಕ ವಲಯದ ಬ್ಯಾಂಕ್ ಗಳಿಗೆ ಹೇಗೆ ಅಪಾರ ನಷ್ಟ ಉಂಟು ಮಾಡಿವೆ ಎಂಬುದೀಗ ಸರ್ವ ವಿದಿತ.
ಈಗ ಅದಾನಿ ಸಮೂಹದಲ್ಲಿ ವಿಕಸನಗೊಳ್ಳುತ್ತಿರುವ ಬಿಕ್ಕಟ್ಟು, ಈ ಸಮೂಹದಲ್ಲಿ ಉದಾರವಾಗಿ ಹೂಡಿಕೆ ಮಾಡಿರುವ ಎಲ್‍ಐಸಿ ಮತ್ತು ಸ್ಟೇಟ್ ಬ್ಯಾಂಕ್‍ನಂಥ ದೈತ್ಯ ಸಾರ್ವಜನಿಕ ಹಣಕಾಸು ಸಂಸ್ಥೆಗಳ ಹಿತದೃಷ್ಟಿಯಿಂದ ಕಳವಳಕಾರಿ ಬೆಳವಣಿಗೆಯಾಗಿದೆ.
ಅದಾನಿ ಸಮೂಹದಲ್ಲಿ ಎಲ್‌ಐಸಿಯ ಸಂಯೋಜಿತ ಹೂಡಿಕೆ, ಅದರ ಒಟ್ಟು ಷೇರು ಮಾರುಕಟ್ಟೆಯ ಹೂಡಿಕೆಯ (ಇಕ್ವಿಟಿ ಹೂಡಿಕೆ ) 8% ರಷ್ಟಿದ್ದು, ಅದಾನಿ ಸಮೂಹದ ಷೇರು ಮೌಲ್ಯದ ಕುಸಿತದಿಂದ ಸುಮಾರು ರೂ 16647 ಕೋಟಿಗಳಷ್ಟು ಹೂಡಿಕೆ ಮೌಲ್ಯ ಕರಗಿದೆ. ಇದರ ಜೊತೆಯಲ್ಲೇ “ಅದಾನಿ ಎಂಟರ್ ಪ್ರೈಸಸ್” ನ ಷೇರುಗಳ ವಿಕ್ರಯದಲ್ಲೂ, ಆಂಕರ್ ಹೂಡಿಕೆದಾರನಾಗಿ ರೂ.300 ಕೋಟಿಯಷ್ಟು ಹೂಡಿಕೆಗೆ ನಿರ್ಧಾರ ಕೈಗೊಂಡಿದ್ದರೂ, ಈ ಪ್ರಕ್ರಿಯೆಯನ್ನು ವಾಪಸ್ ಪಡೆಯುವ ಸಮೂಹದ ನಿರ್ಧಾರದಿಂದ ಈ ಹಣ ಮಾರುಕಟ್ಟೆ ಅಪಾಯದಿಂದ ಬಚಾವಾಗಿರುವುದು ಸಮಾಧಾನಕರ ಸಂಗತಿ. ಇದೇ ರೀತಿ ಎಸ್‍ಬಿಐ ಉದ್ಯೋಗಿಗಳ ಪಿಂಚಣಿ ನಿಧಿ ಮತ್ತು ಎಸ್‍ಬಿಐ ಲೈಫ್ ಸಹ ಅದರಲ್ಲಿ 225 ಕೋಟಿ ರೂ. ಹೂಡಿಕೆ ಮಾಡುವುದಿತ್ತು.
ಮತ್ತೊಂದೆಡೆ, ಅದಾನಿ ಸಮೂಹ ಕಂಪೆನಿಗಳು ಮಿತಿಮೀರಿದ ಬ್ಯಾಂಕ್ ಸಾಲಗಳ ಹೊರೆಯಲ್ಲಿವೆ.
ಬ್ಯಾಂಕ್ ಸಾಲದ ಪಾಲು ಅದಾನಿ ಪವರ್‌ನಲ್ಲಿ 67.6%, ಅದಾನಿ ಎಂಟರ್ ಪ್ರೈಸಸ್ ನಲ್ಲಿ 43.7%, ಅದಾನಿ ಗ್ರೀನ್‌ನಲ್ಲಿ 43.3%. ಈ ಸಾಲಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳದ್ದೇ ಸಿಂಹ ಪಾಲು. ಮುಖ್ಯವಾಗಿ ದೇಶದ ಅತಿ ದೊಡ್ಡ ಬ್ಯಾಂಕ್ ಎಸ್‍ಬಿಐಒಂದೇ ಈ ಸಮೂಹಕ್ಕೆ ರೂ 21000 ಕೋಟಿಯಷ್ಟು ಸಾಲವನ್ನು ನೀಡಿದರೆ, ಇನ್ನೊಂದು ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್ ನೀಡಿರುವ ಸಾಲದ ಪ್ರಮಾಣ ರೂ.7000 ಕೋಟಿಯಷ್ಟು. ಸದ್ಯ ಎರಡೂ ಬ್ಯಾಂಕ್ ಗಳು ತಮಗೆ ಯಾವುದೇ ಅಪಾಯವಿಲ್ಲ ಎಂದು ಹೇಳಿಕೆ ನೀಡಿವೆಯಾದರೂ, ಈ ಬೆಳವಣಿಗೆಗಳನ್ನು ಎಚ್ಚರಿಕೆಯಿಂದ ಗಮನಿಸುತ್ತಿರುವುದಾಗಿ ಹೇಳಿವೆ. ಈ ನಡುವೆ ರಿಜರ್ವ್ ಬ್ಯಾಂಕ್(ಆರ್‌ಬಿಐ), ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಅದಾನಿ ಸಮೂಹ ಕ್ಕೆ ನೀಡಿರುವ ಸಾಲಗಳ ವಿವರವನ್ನು ಕೇಳಿದೆ.
ಹಿಂಡನ್ ಬರ್ಗ್ ಸಂಶೋಧನೆ ವರದಿ ಪ್ರಕಾರ ಸಮೂಹದ ಐದು ಕಂಪನಿಗಳು ಅಲ್ಪಾವಧಿಯ ದ್ರವ್ಯತೆ (Short term liquidity) ಅಪಾಯವನ್ನು ಸೂಚಿಸುತ್ತವೆ, ಅಂದರೆ ಈ ಕಂಪನಿಗಳು ‘ತ್ವರಿತವಾಗಿ ನಗದಾಗಿ ‘ ಪರಿವರ್ತಿಸ ಬಹುದಾದ ಆಸ್ತಿಗಳಿಗಿಂತ,(Current Assets) ಹೆಚ್ಚು ‘ತ್ವರಿತ ಜವಾಬ್ದಾರಿ'(Current Liabilities)ಗಳನ್ನು ಹೊಂದಿವೆ. ಇವುಗಳ ಅನುಪಾತ 1:0.
“ಸಾಲದ ಮನೆ” ಮತ್ತು ಅಕ್ರಮ ಹಣ ವರ್ಗಾವಣೆಯ ಆರೋಪ
ಕ್ರೆಡಿಟ್ ಸೂಸ್ಸಿ (Credit Suisse ) ಸಂಸ್ಥೆಯ ವರದಿ 2015 ರಲ್ಲೇ ಅದಾನಿ ಸಮೂಹವು “ಸಾಲದ ಮನೆ”ಯಾಗಿರುವುದಾಗಿ ಎಚ್ಚರಿಕೆ ನೀಡಿತ್ತು ಎಂಬುದನ್ನು ಇಲ್ಲಿ ಗಮನಿಸಬಹುದು.
ಮಾರಿಷಸ್ ಮೂಲದ ನಾಲ್ಕು ಫಂಡ್‌ಗಳು- ಎಲಾರಾ ಇಂಡಿಯಾ ಆಪರ್ಚುನಿಟೀಸ್ ಫಂಡ್, ಕ್ರೆಸ್ಟಾ ಫಂಡ್, ಅಲ್ಬುಲಾ ಇನ್ವೆಸ್ಟ್‌ಮೆಂಟ್ ಫಂಡ್ ಮತ್ತು ಎಪಿಎಂಎಸ್ ಇವು ಅದಾನಿ ಸಮೂಹದಲ್ಲಿ ಅವರ ಸಂಪೂರ್ಣ $6.9 ಶತಕೋಟಿ ನಿರ್ವಹಣೆಯ ಅಡಿಯಲ್ಲಿಹೂಡಿಕೆ ಮಾಡಿವೆ.
ಈ ನಾಲ್ಕು ಫಂಡ್ ಗಳು ಹಿಂದೆ ದಿವಾಳಿಯಾಗಿರುವ ವಿನ್ಸಮ್ ಡೈಮಂಡ್ಸ್ ಅಂಡ್ ಜ್ಯುವೆಲ್ಲರಿ ಲಿಮಿಟೆಡ್, ಸ್ಟರ್ಲಿಂಗ್ ಬಯೋಟೆಕ್ ಲಿಮಿಟೆಡ್, ರುಚಿ ಸೋಯಾ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಕರುತುರಿ ಗ್ಲೋಬಲ್, ಕಂಪನಿಗಳಲ್ಲಿ ಷೇರುದಾರರಾಗಿದ್ದರು ಎನ್ನುವುದು ಗಮನಾರ್ಹ ಸಂಗತಿ. ಈ ಹಿಂದೆ ಈ ನಿಧಿಗಳನ್ನು ಅಕ್ರಮ ಹಣ ವರ್ಗಾವಣೆ ಮತ್ತು ತೆರಿಗೆ ವಂಚನೆ ವಿಷಯದಲ್ಲಿ ತನಿಖೆಗೆ ಒಳಪಡಿಸಲಾಗಿತ್ತು.
ಅದಾನಿ ಸಮೂಹ ತನ್ನ ನಿರ್ವಹಣೆ ಹಾಗೂ ವಿಸ್ತರಣೆಗಾಗಿ ಬಾಹ್ಯ ಸಾಲವನ್ನು ಅವಲಂಬಿಸಿರುವುದು ಗೊತ್ತಿರುವ ವಿಷಯವೆ. ಆದರೆ ಅದಾನಿಯವರ ಸ್ವಂತ ಹಣವನ್ನೇ ಮಾರಿಷಸ್ ನ ಸುಪ್ತ(ಶೆಲ್-shell) ಮಾರ್ಗ ಬಳಸಿ ಅಕ್ರಮವಾಗಿ ಷೇರು ಮಾರುಕಟ್ಟೆಯ ವಂಚನೆಗಾಗಿ ವರ್ಗಾವಣೆ ಮಾಡಲಾಗಿದೆಯೇ ಎನ್ನುವುದು ತನಿಖೆ ಮೂಲಕವಾಗಿ ಗೊತ್ತಾಗ ಬೇಕಿದೆ.
ಅದಾನಿ ಸಮೂಹ 1988 ರಲ್ಲಿ ಸ್ಥಾಪನೆಯಾದ ಸರಕು ವ್ಯಾಪಾರ ಸಮೂಹ. 2013 ರಲ್ಲಿ,ಈ ಸಮೂಹದ ಹೆಚ್ಚಿನ ಆಸ್ತಿಗಳು ಗುಜರಾತ್‌ಗೆ ಸೀಮಿತವಾಗಿದ್ದವು. ಇತ್ತೀಚಿನ ವರ್ಷಗಳಲ್ಲಿ, ಇದು $23 ಬಿಲಿಯನ್ ಅಷ್ಟು ಆದಾಯ(ವಾರ್ಷಿಕ ಮಾರಾಟ) ಹೊಂದಿರುವ, ಭಾರತದಾದ್ಯಂತ ಇಂಧನ, ಕೈಗಾರಿಕಾ ಮತ್ತು ಸಾಗಾಣಿಕೆ(ಲಾಜಿಸ್ಟಿಕ್ಸ್)ನಲ್ಲಿ ತೊಡಗಿಸಿಕೊಂಡಿರುವ ಏಳು ಸಾರ್ವಜನಿಕ ಕಂಪನಿಗಳೂ ಸೇರಿ ಸಂಘಟಿತ ಸಂಸ್ಥೆಯಾಗಿ ಬೆಳೆದಿದೆ. 2014 ರಿಂದ ಹೆಚ್ಚಾಗಿ ಸಿಮೆಂಟ್, ಬಂದರುಗಳು, ವಿಮಾನ ನಿಲ್ದಾಣಗಳು ಮತ್ತು ಇಂಧನ ವಲಯಗಳಲ್ಲಿ ಸುಮಾರು 30 ಕಂಪನಿಗಳನ್ನು ಸ್ವಾಧೀನ ಪಡಿಸಿಕೊಂಡಿದೆ. ಈ ಅವ್ಯಾಹತ ಸ್ವಾಧೀನ-ಚಾಲಿತ ಬೆಳವಣಿಗೆ ಸಾಧ್ಯವಾಗಿಸುವಲ್ಲಿ ಭಾರತೀಯ ಬ್ಯಾಂಕ್ ಗಳು ನೀಡಿರುವ ಸಾಲ ಪ್ರಮುಖ ಪಾತ್ರ ವಹಿಸಿವೆ.
ಹಿಂಡೆನ್‌ಬರ್ಗ್ ರಿಸರ್ಚ್‌ನ ವಂಚನೆ ಆರೋಪಗಳಲ್ಲಿ ಪ್ರಮುಖ ಅಂಶವೇನೆಂದರೆ, ಅದಾನಿ ಸಮೂಹ ಕಂಪನಿಗಳು ಮತ್ತು ಅದಾನಿ ಒಡೆತನದ ಕಡಲಾಚೆಯ ಶೆಲ್ ಕಂಪನಿಗಳು ಪರಸ್ಪರ ಸಾಲದ ರೂಪದಲ್ಲಿ ಅಕ್ರಮ ಹಣ ವರ್ಗಾವಣೆ (Money Laundering) ಮಾರ್ಗದಿಂದ ಲೆಕ್ಕ ಪತ್ರಗಳ ವಂಚನೆಯಲ್ಲಿ ತೊಡಗಿವೆ. ವರದಿಯ ಪ್ರಕಾರ “ಇದೊಂದು ಇಸ್ಪೀಟ್ ಎಲೆಗಳ ಮನೆ, ಸಾಲವೇ ಅದರ ಇಂಧನವಾಗಿದೆ “.
- ಅದಾನಿ-ಮಾಲೀಕತ್ವದ ವಿವಿಧ ಘಟಕಗಳು ತಮ್ಮ ತಮ್ಮಲ್ಲೇ ನಡೆಸುತ್ತಿದ್ದ ಸಾಲ ನೀಡಿಕೆ ಮತ್ತು ಮರು ಪಾವತಿಯ ವ್ಯವಹಾರಗಳ ಜಾಲದ ಬಗ್ಗೆ 2019 ರಲ್ಲಿ,ಭಾರತೀಯ ಸುದ್ದಿವಾಹಿನಿ in ಅದಾನಿ ಸಮೂಹದ ತನಿಖೆಯನ್ನು ಪ್ರಕಟಿಸಿದೆ.
- ಸೆಪ್ಟೆಂಬರ್ 2022 ರಲ್ಲಿ ಫಿಚ್ ಗ್ರೂಪ್‌ನ ಕ್ರೆಡಿಟ್ ಸೈಟ್ ಅದಾನಿ ಸಮೂಹದ “ಮಿತಿ ಮೀರಿದ ಸಾಲದ ಸುಳಿಯಲ್ಲಿದೆ” ಎಂದು ಎಚ್ಚರಿಕೆ ನೀಡಿತ್ತು.
ಕಾರ್ಪೊರೇಟ್- ಕೋಮುವಾದಿ ನಂಟು
ಈ ನಡುವೆ ಅದಾನಿ ಸಮೂಹವು ಹಿಂಡನ್ ಬರ್ಗ್ ವರದಿಯಲ್ಲಿ ಮಾಡಿರುವ ಆರೋಪಗಳ ಬಗ್ಗೆ ಉತ್ತರ ನೀಡುವ ಸಂಧರ್ಭದಲ್ಲಿ ” ಇದು ಭಾರತದ ಮೇಲೆ ನಡೆಸಲಾದ ಧಾಳಿ ” ಎಂದಿದೆ. ಇದರ ಬೆನ್ನಲ್ಲೇ, ಸಂಘ ಪರಿವಾರದ ಭಾಗವಾದ “ಸ್ವದೇಶೀ ಜಾಗರಣ್ ಮಂಚ್” ತಾನು ಅದಾನಿ ಗುಂಪಿನ ಬೆಂಬಲಕ್ಕೆ ನಿಲ್ಲುತ್ತೇನೆ“ ಎಂದು ಪತ್ರಿಕಾ ಹೇಳಿಕೆ ಕೊಟ್ಟಿರುವುದು, ಸಾಮಾಜಿಕ ಜಾಲತಾಣಗಳಲ್ಲಿ , ಆಳುವ ಪಕ್ಷದ ತುತ್ತೂರಿಗಳು, ಅದಾನಿಯನ್ನು ಒಬ್ಬ ಮಹಾನ್ ದೇಶ ನಿರ್ಮಾತೃ ಎಂಬಂತೆ ಬಿಂಬಿಸುವ ಹಲವಾರು ಪೋಸ್ಟ್ ಗಳನ್ನು ಹರಿಯ ಬಿಟ್ಟಿರುವುದು “ಕಾರ್ಪೊರೇಟ್ – ಕೋಮುವಾದಿ” ಅಪವಿತ್ರ ನಂಟಿನ ನಗ್ನ ಸ್ವರೂಪವನ್ನು ಬಟಾ ಬಯಲು ಮಾಡಿದೆ.
ಅದಾನಿ ಸಂಸ್ಥೆಗಳ ಅವ್ಯವಹಾರಗಳ ಬಗ್ಗೆ ಜಂಟಿ ಸಂಸದೀಯ ಸಮಿತಿ ಅಥವಾ ಸುಪ್ರೀಂ ಕೋರ್ಟ್ ನೇತೃತ್ವದಲ್ಲಿ ವಿಸ್ತ್ರತ ತನಿಖೆಗಾಗಿ ಪ್ರಮುಖ ವಿರೋಧ ಪಕ್ಷಗಳು ಈಗಾಗಲೇ ಆಗ್ರಹ ಪಡಿಸುತ್ತಿವೆ. ಸಾಮೂಹಿಕ ಸಂಘಟನೆಗಳು ದೇಶದ ಅರ್ಥವ್ಯವಸ್ಥೆಯನ್ನು ನವ ಉದಾರವಾದಿ ಹಣಕಾಸು ನೀತಿಗಳ ನೊಗದಿಂದ ಬಿಡಿಸಲು ಹಾಗೂ ಸಾರ್ವಜನಿಕ ಸಂಪನ್ಮೂಲಗಳನ್ನು, ಕಾರ್ಪೊರೇಟ್ ಲೂಟಿಯಿಂದ ಉಳಿಸಲು ವಿಶಾಲ ಸ್ತರದ ಹೋರಾಟಗಳಿಗೆ ಕರೆ ನೀಡುತ್ತಿವೆ.