ಹುಬ್ಬಳ್ಳಿ: ಹಿರಿಯ ನಟ, ಚಿಂತಕ, ವಾಗ್ಮಿ, ಸಾಹಿತಿ ಜಿ ಕೆ ಗೋವಿಂದ ರಾವ್ ಇಂದು ಹುಬ್ಬಳ್ಳಿಯಲ್ಲಿ ನಿಧನ ಹೊಂದಿದ್ದಾರೆ. ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದ ಜಿ ಕೆ ಗೋವಿಂದ ರಾವ್ ತಮ್ಮ ಇಳಿ ವಯಸ್ಸಿನಲ್ಲೂ ರಂಗಚಟುವಟಿಕೆ ಮತ್ತು ಹೋರಾಟದಲ್ಲಿ ಸಕ್ರೀಯರಾಗಿದ್ದರು. ಜಿ.ಕೆ.ಜಿ ನಿಧನಕ್ಕೆ ಗಣ್ಯರು, ಸಾಹಿತಿಗಳು ಜನಪರ ಚಳುವಳಿಗಳು ಸಂತಾಪ ಸೂಚಿಸಿವೆ.
ಬೆಂಗಳೂರಿನಲ್ಲಿ ಸಕ್ರೀಯರಾಗಿದ್ದ ಅವರು ಅನಾರೋಗ್ಯದ ಹಿನ್ನಲೆಯಲ್ಲಿ ಹುಬ್ಬಳ್ಳಿಯಲ್ಲಿರುವ ತಮ್ಮ ಮಗಳ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಹುಬ್ಬಳ್ಳಿಯಲ್ಲೇ ಇಂದು ಅಂತ್ಯ ಸಂಸ್ಕಾರ ನಡೆಯುವ ಸಾಧ್ಯತೆ ಇದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪ್ರೀತಿಯಿಂದ ಜಿಕೆಜಿ ಸರ್ ಎಂದು ಕರೆಸಿಕೊಳ್ಳುತ್ತಿದ್ದ ಜಿ.ಕೆ. ಗೋವಿಂದರಾವ್, ಮೂಲತಹ ಇಂಗ್ಲೀಷ್ ಪ್ರೊಫೆಸರ್ ಆಗಿದ್ದರು. ಆದರೂ, ಕನ್ನಡದ ಮೇಲೆ ಅಪಾರ ಹಿಡಿತ ಹೊಂದಿದ್ದರು. ಕನ್ನಡದಲ್ಲಿ ಹಲವು ಕೃತಿಗಳನ್ನು ರಚಿಸಿದ್ದ ಜಿ ಕೆ ಗೋವಿಂದ ರಾವ್ ಬಹುಮಖ ಪ್ರತಿಭೆ. ಸಾಹಿತ್ಯದ ಜೊತೆಜೊತೆಗೆ ನಾಟಕರಂಗದಲ್ಲೂ ಜಿ ಕೆ ಗೋವಿಂದರಾವ್ ಸಕ್ರೀಯರಾಗಿದ್ದರು. ರಂಗಕರ್ಮಿಯ ಜೊತೆಜೊತೆಗೆ ಹಲವು ಸಿನೇಮಾ ಮತ್ತು ಟಿವಿ ದಾರವಾಹಿಗಳಲ್ಲಿ ನಟಿಸಿದ್ದಾರೆ. ಯಾವುದೇ ಪಾತ್ರ ಕೊಟ್ಟರೂ ಜೀವಂತಿಕೆ ತುಂಬಬಲ್ಲ ಸಾಮರ್ಥ್ಯ ಜಿ ಕೆ ಗೋವಿಂದ ರಾವ್ರವರಿಗಿತ್ತು. ಈ ಕಾರಣದಿಂದ ಜಿ ಕೆ ಗೋವಿಂದರಾವ್ ಸಿನಿಮಾ, ದಾರವಾಹಿಗಳ ಮೂಲಕ ಕರ್ನಾಟಕದ ಮನೆಮಾತಾಗಿದ್ದರು. ಗ್ರಹಣ, ಮಿಥಿಲೆಯ ಸೀತೆಯರು, ಕರ್ಫ್ಯೂ, ನಿಶ್ಯಬ್ದ, ಭೂಮಿ ತಾಯಿಯ ಚೊಚ್ಚಲ ಮಗ, ಅಜ್ಜು, ಶಾಸ್ತ್ರಿ, ರೇ ಚಿತ್ರಗಳಲ್ಲಿನ ಇವರ ಅಭಿನಯ ಜನಮಾನಸದಲ್ಲಿದೆ.
ಜಿ ಕೆ ಗೋವಿಂದರಾವ್, ಈಶ್ವರಅಲ್ಲಾ ಎಂಬ ಕಿರು ಕಾದಂಬರಿ, ಶೇಕ್ಸ್ಪೀಯರ್ ನಾಟಕ ಅಧ್ಯಯನ, ಶೇಕ್ಸ್ಪೀಯರ್ ಸಂವಾದ ಲೇಖನ ಮಾಲಿಕೆ, ನಡೆ ನುಡಿ ನಾಗರಿಕತೆ, ಅರಾಜಕತೆ, ಬಿಂಬ ಪ್ರತಿಬಿಂಬ, ಕ್ರೀಯೆ ಪ್ರತಿಕ್ರಿಯೆ, ಮನು ವರ್ಸಸ್ ಅಂಬೇಡ್ಕರ್ ಮುಂತಾದ ಹಲವು ಕೃತಿಗಳನ್ನು ಬರೆದಿದ್ದಾರೆ.
ಸಾಹಿತಿ, ಕಲಾವಿದರು, ಜನಪರ ಹೋರಾಟಗಾರರು ಜಿಕೆಜಿಯವರಿಗೆ ಸಂತಾಪವನ್ನು ಸೂಚಿಸಿದ್ದಾರೆ.
ಹಿರಿಯ ಲೇಖಕ, ಚಿಂತಕ, ನಟ ಪ್ರೊ. ಜಿ. ಕೆ. ಗೋವಿಂದರಾವ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ.
ನನ್ನ ಹಿತೈಷಿ, ಮಾರ್ಗದರ್ಶಕ ಮತ್ತು ಆತ್ಮೀಯ ಸ್ನೇಹಿತರಾಗಿದ್ದ ಪ್ರೊ.ಜಿಕೆಜಿ ಅವರಿಗೆ ಗೌರವದ ನಮನಗಳು.
ಅವರನ್ನು ಕಳೆದುಕೊಂಡ ಕುಟುಂಬದ ಸದಸ್ಯರು, ಶಿಷ್ಯರು, ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ – ಎಸ್. ಸಿದ್ದರಾಮಯ್ಯ, ವಿ.ಪಕ್ಷ ನಾಯಕ.
ವಯಸ್ಸು, ಅನಾರೋಗ್ಯದಿಂದ ದೇಹ ಬಳಲಿದ್ದರೂ ಆಗಾಗ ತಮ್ಮ ಕಂಚಿನ ಕಂಠದಿಂದ ನಮ್ಮನ್ನೆಲ್ಲ ಬಡಿದೆಚ್ಚರಿಸುತ್ತಿದ್ದ, ಕೊನೆ ಉಸಿರಿನ ವರೆಗೆ ಸೈದ್ಧಾಂತಿಕವಾಗಿ ರಾಜಿ ಮಾಡಿಕೊಳ್ಳದೆ ನೇರ-ನಿಷ್ಠುರ ಮಾತು, ಬರಹಗಳ ಮೂಲಕ ನಾಡಿನ ನಿಜವಾದ ಸಾಕ್ಷಿಪ್ರಜ್ಞೆಯಂತಿದ್ದ ಜಿ.ಕೆ.ಗೋವಿಂದ ರಾವ್ ಇನ್ನಿಲ್ಲ.
ಹಳೆಮರಗಳು ಉರುಳಿ ಬೀಳಲಿವೆ ಎನ್ನುವುದು ಅವರಿಗೆ ಗೊತ್ತಿತ್ತು, ಇದಕ್ಕಾಗಿಯೇ ಹೊಸ ಚಿಗುರು ಹುಟ್ಟಿಸುವ ಸತತ ಪ್ರಯತ್ನದಲ್ಲಿದ್ದರು.
ಅವರ ನಿರೀಕ್ಷೆಯ ಹೊಸ ಕಾಲವನ್ನು ಕಾಣಲಾಗದೆ ಅಗಲಿ ಹೋದರು. ಈ ನಿರ್ವಾತ ಬಹಳ ದಿನ ನಮ್ಮನ್ನು ಕಾಡಲಿದೆ. ಹಿರಿಯ ಜೀವಕ್ಕೆ ಒಂದು ನಮಸ್ಕಾರ, ಇನ್ನೊಂದು Sorry – ದಿನೇಶ್ ಅಮಿನ್ ಮಟ್ಟು, ಹಿರಿಯ ಪತ್ರಕರ್ತರು.
ಜನ ಚಳವಳಿಗಳ ಪಾಲಿಗೆ ಹಿರಿಯಣ್ಣನಂತಿದ್ದ ನಟ, ವಿಚಾರವಾದಿ ಜಿ ಕೆ ಗೋವಿಂದ ರಾವ್ ನಿಧನರಾಗಿದ್ದಾರೆ. ವಿಠಲ ಮಲೆಕುಡಿಯ ಬಂಧನ ಪ್ರಕರಣದಲ್ಲಿ “ವಿಠಲ ಮಲೆಕುಡಿಯ ಕುಟುಂಬ ಸಂರಕ್ಷಣಾ ಸಮಿತಿ” ಯ ಅಧ್ಯಕ್ಷರಾಗಿದ್ದು ಕೊಂಡು ನಮ್ಮ ಹೋರಾಟಕ್ಕೆ ಬಲ ತುಂಬಿದ್ದರು. ಅವರ ಆತ್ಮೀಯತೆ, ಒಡನಾಟ ಸದಾ ನೆನಪಿನಲ್ಲಿ ಉಳಿಯುತ್ತದೆ.
ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ಜಿ ಕೆ ಗೋವಿಂದ ರಾವ್ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸುತ್ತದೆ – ಮುನೀರ್ ಕಾಟಿಪಳ್ಳ – DYFI ರಾಜ್ಯಾಧ್ಯಕ್ಷ.
“ಮನುಷ್ಯರೇ ಸರ್ಕಾರ ನಡೆಸ್ತಾ ಇದ್ದಾರೇನ್ರೀ ? ಆ ತಂದೆ ಮಗನನ್ನು ನೋಡಿದ್ರೆ ನಕ್ಸಲ್ ಅಂತ ಅನ್ನಿಸುತ್ತಾ ?” ಜೈಲಿನಲ್ಲಿ ವಿಠಲ ಮಲೆಕುಡಿಯ ಮತ್ತವರ ತಂದೆಯನ್ನು ಭೇಟಿ ಮಾಡಿ ಬಂದ ಜಿ ಕೆ ಗೋವಿಂದರಾವ್ ವ್ಯಘ್ರರಾಗಿದ್ದರು. “ಹೀಗೆ ಅಮಾಯಕ ಯುವಕರನ್ನು ಜೈಲಿಗೆ ಹಾಕಿದರೆ ಜನ ನಕ್ಸಲ್, ಭಯೋತ್ಪಾದಕರಾಗದೆ ಇನ್ನೇನು ಆಗ್ತಾರೆ?” ಜೈಲಿನ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಜಿ ಕೆ ಗೋವಿಂದರಾವ್ ತಕ್ಷಣ ಜೈಲು ಅಧಿಕಾರಿಯ ಬೆನ್ನು ತಟ್ಟಿ “ನಿಮಗೆ ಹೇಳಿದ್ದಲ್ಲಪ್ಪಾ… ಸರ್ಕಾರದ ಬಗ್ಗೆ ಹೇಳ್ತಾ ಇದ್ದೀನಿ. ವಿಠಲ ಮಲೆಕುಡಿಯ ಅಮಾಯಕ ವಿದ್ಯಾರ್ಥಿ. ನೀವೇನೂ ಮಾಡೋಕೆ ಆಗಲ್ಲ. ಚೆನ್ನಾಗಿ ನೋಡ್ಕೊಳ್ಳಿ ಅಷ್ಟೆ” ಅಂತ ಹೇಳಿ ಹೊರಬಂದರು.
ಜಿ ಕೆ ಗೋವಿಂದರಾವ್ ಮೋದಿಗೆ ಬೈತಾ ಇದ್ರೂ, ಆರ್ ಎಸ್ ಎಸ್ ಗೆ ಬೈತಾ ಇದ್ರೂ ಎದುರಿಗೆ ನಿಂತ ನಾವುಗಳೇ ನಡುಗಬೇಕು. ಅಂತಹ ಧ್ವನಿ..!
ಜಿ ಕೆ ಗೋವಿಂದರಾವ್ ಅವರು ಸಿದ್ದರಾಮಯ್ಯರಂತೆ ಮಾತಿನಲ್ಲಿ ಕೊಠೋರತೆ ಇರುತ್ತದೆ. ಆದರೆ ಪಕ್ಕಾ ಮಾತೃಹೃದಯಿ. ಟೀಕೆ ಮತ್ತು ಭಾಷಣ ಸೈದ್ದಾಂತಿಕ ವಿರೋಧಿಯ ಎದೆಗೆ ಬಂದು ಒದ್ದಿರುವಂತಿರುತ್ತದೆ. ಆದರೆ ವೈಯುಕ್ತಿಕವಾಗಿ ಜಿಕೆಜಿ ಆಪ್ತ ಹೃದಯವಂತ. ತನ್ನ ಇಳಿ ವಯಸ್ಸಿನಲ್ಲೂ ಎಲ್ಲಾ ಹೋರಾಟಗಳಲ್ಲೂ ಭಾಗಿಯಾಗುತ್ತಿದರು. ಯುವ ಚಿಂತಕರು, ಯುವ ಹೋರಾಟಗಾರರು ಎಂದರೆ ಜಿ ಕೆ ಗೋವಿಂದರಾವ್ ಎಲ್ಲಿಲ್ಲದ ಗೌರವ ಕೊಡುತ್ತಿದ್ದರು.
“ಸರ್, ಮಂಗಳೂರು ಕಾರ್ಯಕ್ರಮ. ವಿಮಾನ ಟಿಕೆಟ್ ಮಾಡ್ತೀವಿ ಸರ್” ಎಂದರೆ “ಏಯ್ ಸುಮ್ನಿರು. ನೀವೇ ಕಷ್ಟಪಟ್ಟು ಕಾರ್ಯಕ್ರಮ ಮಾಡ್ತಾ ಇದ್ದೀರಿ. ಫುಶ್ ಬ್ಯಾಕ್ ಸೀಟಿನ ಎಸಿ ಬಸ್ ಬುಕ್ ಟಿಕೆಟ್ ಬುಕ್ ಮಾಡಿ ಸಾಕು. ನನಗೆ ಮಂಡಿನೋವು ಮತ್ತು ಬೆನ್ನು ನೋವು ಇದೆ. ಹಾಗಾಗಿ ಸೀಟಿನ ಎದುರು ಕಾಲು ಚಾಚೋಕೆ ಜಾಗ ಬೇಕು ಅಷ್ಟೆ. ಬಸ್ ಟಿಕೆಟ್ ದುಡ್ಡನ್ನು ನಾನೇ ಕೊಡ್ತೀನಿ” ಅನ್ನೋರು. ಸರಳ, ಪ್ರಾಮಾಣಿಕ ಹೋರಾಟಗಾರ, ನಟ, ರಂಗಕರ್ಮಿ, ಸಾಹಿತಿ ನಮ್ಮ ಪ್ರೀತಿಯ ಜಿ ಕೆ ಗೋವಿಂದ ರಾವ್ ನಮ್ಮನ್ನು ಇಂದು ಅಗಲಿದ್ದಾರೆ. – ನವೀನ್ ಸೂರಿಂಜೆ, – ಹಿರಿಯ ಪತ್ರಕರ್ತರು.
ಜಿ.ಕೆ ಗೋವಿಂದರಾವ್ ‘ಹಂಗು’ ಚಿತ್ರದಲ್ಲಿ (ಕಥಾಸಂಗಮ) ಪ್ರಿನ್ಸಿಪಾಲ್ ಪಾತ್ರ ಮಾಡಿದ್ದರಲ್ಲ ! ಅದನ್ನು ನೋಡಿ ಯಾರ ಹಂಗಿಗೂ ಒಳಗಾಗದೆ ವೃತ್ತಿಯಿಂದ ನಿವೃತ್ತಿ ಹೊಂದಬೇಕೆಂದು ತೀವ್ರವಾಗಿ ಅನ್ನಿಸಿತ್ತು.. ಇಂದಿಗೂ ‘ಹಂಗಿನರಮನೆಗಿಂತ….’ ವಚನದ ಸಾಲು ನನಗಿಷ್ಟ…ನಾನಾಗ ಕೆಲಸಕ್ಕೂ ಸೇರಿರಲಿಲ್ಲ…ಆರೇಳು ವರ್ಷದ ಹಿಂದೆ ಒಂದು ಕಾರ್ಯಕ್ರಮ ದಲ್ಲಿ ನಾನು ಮಾತನಾಡಿದಾಗ ‘ತುಂಬಾ ಚೆನ್ನಾಗಿ ಮಾತಾಡಿದಿರಿ, Congrats good girl’ ಅಂತ ಥೇಟ್ ಮೇಷ್ಟ್ರುಗಳಂತೆ ಚೀಟಿ ಕಳಿಸಿದ್ದರು…ಅದನ್ನು ಇನ್ನೂ ಜೋಪಾನವಾಗಿ ಇಟ್ಟಿದ್ದೀನಿ…Miss you G K G sir !– ಎಂ. ಆರ್. ಕಮಲಾ – ನಿವೃತ್ತ ಪ್ರಾಂಶುಪಾಲರು.
ನಾನು ದಿನಾಲು ವಾಟ್ಸಾಪ್ ನೋಡುತ್ತೇನೆ ಮತ್ತು ಓದುತ್ತೇನೆ ನನಗೆ ಇಷ್ಟವಾಗಿದೆ.