ನದೆಹಲಿ: ಮಾನವ ಹಕ್ಕುಗಳ ಹೋರಾಟಗಾರ ಹಾಗೂ ಮಾಜಿ ಐಎಎಸ್ ಅಧಿಕಾರಿ ಹರ್ಷ್ ಮಂದರ್ ಅವರ ಮನೆ ಮತ್ತು ಕಚೇರಿಯ ಮೇಲೆ ಶುಕ್ರವಾರ ಕೇಂದ್ರೀಯ ತನಿಖಾ ದಳ (ಸಿಬಿಐ) ಮೇಲೆ ದಾಳಿ ನಡೆಸಿದೆ. ಬೆಳಿಗ್ಗೆ 8:00 ಗಂಟೆಗೆ ವಸಂತ್ ಕುಂಜ್‌ನಲ್ಲಿರುವ ಅವರ ಮನೆ ಮತ್ತು ಅಧ್ಚಿನಿಯಲ್ಲಿರುವ ಅವರ ಕಚೇರಿಯಲ್ಲಿ ದಾಳಿಗಳು ಪ್ರಾರಂಭವಾದವು ಎಂದು ದಿ ವೈರ್ ವರದಿ ಹೇಳಿದೆ.
ಹರ್ಷ್ ಮಂದರ್ ಸ್ಥಾಪಿಸಿದ ಮೆಹ್ರೌಲಿಯಲ್ಲಿರುವ ಮಕ್ಕಳ ಮನೆಯನ್ನು ಸಹ ಶೋಧಿಸಲಾಗುತ್ತಿದ್ದು, ಅವರ ವಿರುದ್ಧದ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ (ಎಫ್‌ಸಿಆರ್‌ಎ) ಆರೋಪದ ಉಲ್ಲಂಘನೆಗೆ ಸಂಬಂಧಿಸಿದಂತೆ ಈ ದಾಳಿಗಳು ನಡೆದಿವೆ ಎಂದು ವರದಿ ಹೇಳಿದೆ.
ಇದನ್ನೂ ಓದಿ: ಮಧ್ಯಂತರ ಬಜೆಟ್ | ಸುಳ್ಳಿನ ಕಂತೆ ಮತ್ತು ಖಾಸಗೀಕರಣದ ಹತಾಶ ಪ್ರಯತ್ನ – ಸಿಐಟಿಯು ಆರೋಪ
ಕೇಂದ್ರ ಗೃಹ ಸಚಿವಾಲಯವು ಹರ್ಷ್ ಮಂದರ್ ಅವರು ಸಹ ಸಂಸ್ಥಾಪಕರಾಗಿರುವ ಥಿಂಕ್ ಟ್ಯಾಂಕ್ ಸೆಂಟರ್ ಫಾರ್ ಇಕ್ವಿಟಿ ಸ್ಟಡೀಸ್ (CES) ನ FCRA ಪರವಾನಗಿಯನ್ನು ಕಳೆದ ವರ್ಷ ಜೂನ್‌ನಲ್ಲಿ ಅಮಾನತುಗೊಳಿಸಿತ್ತು. FCRA ನಿಯಮಗಳನ್ನು CES ಉಲ್ಲಂಘಿಸುತ್ತಿದೆ ಎಂದು ಸಚಿವಾಲಯವು ಆ ಸಮಯದಲ್ಲಿ ಹೇಳಿಕೊಂಡಿತ್ತು. ಇದೀಗ ಎಫ್‌ಸಿಆರ್‌ಎ ಉಲ್ಲಂಘನೆಯ ಹೊಸ ಪ್ರಕರಣ ದಾಖಲಾಗಿರುವ ಕಾರಣ ಈ ದಾಳಿ ನಡೆದಿವೆ ಎಂದು ಸ್ಕ್ರಾಲ್.ಕಾಂ ವರದಿ ಹೇಳಿದೆ.
ಭಾರತದಲ್ಲಿ ಮುನ್ನೆಲೆಗೆ ಬರುತ್ತಿರುವ ಕೋಮುವಾದ ಮತ್ತು ಕೇಂದ್ರ ಸರ್ಕಾರದ ಹಿಂದುತ್ವದ ಚಟುವಟಿಕೆಗಳನ್ನು ಟೀಕಿಸುತ್ತಿರುವ ಪ್ರಮುಖ ವ್ಯಕ್ತಿಗಳಲ್ಲಿ ಹರ್ಷ್ ಮಂದರ್ ಕೂಡಾ ಒಬ್ಬರಾಗಿದ್ದಾರೆ. ಇಂದಿನ ದಾಳಿಗೂ ಎರಡು ದಿನಗಳ ಮೊದಲು, ಮಹಾತ್ಮಾ ಗಾಂಧಿಯವರ ಪುಣ್ಯತಿಥಿಯಂದು ‘ಗಾಂಧಿ ಪುನರುತ್ಥಾನ’ ಎಂಬ ವಿಷಯದ ಕುರಿತು ಅವರು ಮಾತನಾಡಿದ್ದರು.
ಹರ್ಷ್ ಮಂದರ್ ಅವರೇ ಸ್ಥಾಪಿಸಿರುವ ಕರ್ವಾನ್ ಇ ಮೊಹಬ್ಬತ್ (ಕ್ಯಾರವಾನ್ ಆಫ್ ಲವ್) ಎಂಬ ದ್ವೇಷ ಅಪರಾಧದ ಸಂತ್ರಸ್ತರಪರವಾಗಿ ಅಭಿಯಾನ ನಡೆಸುವ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದರು. ಅವರು ಯುಪಿಎ ಆಡಳಿತದಲ್ಲಿ ಸ್ಥಾಪಿಸಲಾದ ಕೇಂದ್ರ ಸರ್ಕಾರದ ಸಂಸ್ಥೆಯಾದ ರಾಷ್ಟ್ರೀಯ ಸಲಹಾ ಮಂಡಳಿಯ ಸದಸ್ಯರೂ ಆಗಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ | ಮುಸ್ಲಿಂ ವ್ಯಕ್ತಿಯನ್ನು ಸಿಲುಕಿಸಲು ಗೋಹತ್ಯೆ ಮಾಡಿ ಬಂಧನಕ್ಕೊಳಗಾದ ಬಜರಂಗದಳದ ದುಷ್ಕರ್ಮಿ
2021 ರಲ್ಲಿ, ಹರ್ಷ್ ಮಂದರ್ ಅವರು ಕೊರೊನಾ ಸಾಂಕ್ರಾಮಿಕ ಮತ್ತು ಕೇಂದ್ರ ಸರ್ಕಾರದ ಬಿಕ್ಕಟ್ಟಿನ ಕುರಿತು ಚರ್ಚಿಸುವ ”ಲಾಕ್ ಡೌನ್ ದಿ ಪೂರ್: ದಿ ಪ್ಯಾಂಡೆಮಿಕ್ ಮತ್ತು ಇಂಡಿಯಾಸ್ ಮೋರಲ್ ಸೆಂಟರ್” ಎಂಬ ಪುಸ್ತಕವನ್ನು ಬರೆದಿದ್ದರು. ಅದಕ್ಕೂ ಹಿಂದಿನ ವರ್ಷ ಕಾರಾವಾನ್ ಇ ಮೊಹಬತ್ ಮತ್ತು ದೆಹಲಿ ರಿಸರ್ಚ್ ಗ್ರೂಪ್ ಜಂಟಿಯಾಗಿ ನಡೆಸಿದ ”ಲೇಬರಿಂಗ್ ಲೈವ್ಸ್: ಹಂಗರ್ ಅಂಡ್ ಡಿಸ್ಪೇರ್ ಅಮಿಡ್ ಲಾಕ್‌ಡೌನ್” ಎಂಬ ವರದಿಯನ್ನು ತಯಾರಿಸಿದ್ದವು.
ಕೇಂದ್ರ ಸರ್ಕಾರವನ್ನು ಟೀಕಿಸುವವರ ಮನೆಗಳ ಮೇಲೆ ನಡೆಸಲಾಗುವ ಶೋಧನೆಗಳಂತೆ ಹರ್ಷ್ ಮಂದರ್ ಮೇಲೆ ಕೂಡಾ ದಾಳಿ ನಡೆಸಲಾಗಿದೆ ಎಂದು ಟೀಕೆಗಳು ಕೇಳಿ ಬಂದಿವೆ. ಕೇಂದ್ರೀಯ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ (ಇಡಿ), ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಥವಾ ಸಿಬಿಐ ಸೇರಿದಂತೆ ಕೇಂದ್ರದ ತನಿಖಾ ಸಂಸ್ಥೆಗಳನ್ನು ಸರ್ಕಾರವನ್ನು ಟೀಕಿಸಲಾಗುತ್ತಿರುವವ ಮೇಲೆ ಗುರಿ ಮಾಡಲಾಗುತ್ತಿದೆ ಎಂಬ ಆರೋಪ ಹಿಂದಿನಿಂದಲೂ ಕೇಳಿ ಬರುತ್ತಿದೆ.
ಇದಕ್ಕೂ ಮೊದಲು, ಜನವರಿ 30 ರಂದು, ಭೂ ಹಗರಣದ ಆರೋಪದ ಆಧಾರದ ಮೇಲೆ ಇಡಿಯಿಂದ ಹೇಮಂತ್ ಸೊರೆನ್ ಅವರನ್ನು ಬಂಧಿಸಲಾಯಿತು. ಬಂಧನಕ್ಕೂ ಮೊದಲು ಅವರು ಜಾರ್ಖಂಡ್‌ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹಲವಾರು ಆದಿವಾಸಿ ಸಮುದಾಯಗಳು ಅನುಸರಿಸುತ್ತಿರುವ ಸರ್ನಾ ಧರ್ಮವು ಹಿಂದೂ ಧರ್ಮದ ಭಾಗವಲ್ಲ, ಅದು ಸ್ಥಳೀಯ ಸಮುದಾಯಗಳು ಆಚರಿಸುವ ಪ್ರಕೃತಿಯ ಆರಾಧನೆಯ ಒಂದು ರೂಪವಾಗಿದೆ ಎಂದು ಹೇಮಂತ್ ಸೋರೆನ್ ನಿಲುವು ವ್ಯಕ್ತಪಡಿಸಿದ್ದರು.
ವಿಡಿಯೊ ನೋಡಿ: ಏನಿದು ಮಧ್ಯಂತರ ಬಜೆಟ್ ? ಚುನಾವಣಾ ರಾಮನ ಮುಂದೆ ಸಪ್ಪೆಯಾದ ಬಜೆಟ್ Janashakthi Media