ನವದೆಹಲಿ: ಕರ್ನಾಟಕದ ನಾಲ್ಕು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಲ್ಲಿ ಲೋಪ ಕಾಣಿಸಿಕೊಂಡಿದ್ದು, ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಲೋಕಸಭೆಯಲ್ಲಿ ಮಾರ್ಚ್ 12ರಂದು ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದರು.
‘ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಗಡಿಯಿಂದ ಬೆಂಗಳೂರು ನಡುವಿನ ಹೆದ್ದಾರಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯ ವರದಿಯ ಆಧಾರದಲ್ಲಿ ಗುತ್ತಿಗೆದಾರರು ದುರಸ್ತಿ ಕಾಮಗಾರಿಗಳನ್ನು ನಡೆಸಿದ್ದಾರೆ’ ಎಂದರು.
‘ಹೊಸಪೇಟೆ-ಬಳ್ಳಾರಿ- ಕರ್ನಾಟಕ ಗಡಿಯ ಹೆದ್ದಾರಿಯಲ್ಲಿ 8.30 ಕಿ.ಮೀ ಪ್ರದೇಶದಲ್ಲಿ ಬಿರುಕುಗಳು ಪತ್ತೆಯಾದ ಕಾರಣಕ್ಕೆ ಮೂಲ ಗುತ್ತಿಗೆದಾರರನ್ನು ಕೈಬಿಟ್ಟು ಹೊಸ ಗುತ್ತಿಗೆದಾರರ ಮೂಲಕ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ: ಮರಳಿ ಮಹಾತ್ಮನೆಡೆಗೆ: ಸಮಾನತೆ ಮತ್ತು ಮಾನವೀಯತೆಯ ಹುಡುಕಾಟ
‘ಕುಂದಾಪುರದಿಂದ ಗೋವಾದವರೆಗಿನ ಚತುಷ್ಫಥ ಕಾಮಗಾರಿಯ ವೇಳೆಯಲ್ಲಿ ಕಾಳಿ ಸೇತುವೆಯ ಮೂರು ಸ್ಪ್ಯಾನ್‌ಗಳು ಕುಸಿದು ಬಿದ್ದಿದ್ದವು. ಅಸಮರ್ಪಕ ಕಾಮಗಾರಿ ನಡೆಸಿದ ಕಾರಣಕ್ಕೆ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ’ ಎಂದು ಅವರು ತಿಳಿಸಿದರು.
‘ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ 1278 ಕಡೆಗಳಲ್ಲಿ ಗುಂಡಿಗಳು ಕಾಣಿಸಿಕೊಂಡಿದ್ದು, 701 ಕಡೆಗಳಲ್ಲಿ ದೀರ್ಘಾವಧಿ ದುರಸ್ತಿ ಕಾಮಗಾರಿಗಳನ್ನು ನಡೆಸಲಾಗಿದೆ’ ಎಂದರು.
ಇದನ್ನೂ ನೋಡಿ: ದೇಹ ರಾಜಕಾರಣ ಮತ್ತು ಲೈಂಗಿಕ ದೌರ್ಜನ್ಯ – ಡಾ. ವಿನಯಾ ಒಕ್ಕುಂದ Janashakthi Media
