ಆಚರಣೆ-ವಾಸ್ತವಗಳ ನಡುವೆ ಮತ್ತೊಂದು ಮಹಿಳಾ ದಿನ

ನಾ ದಿವಾಕರ
ಪ್ರಾತಿನಿಧ್ಯ ಅಸ್ತಿತ್ವ ಅಸ್ಮಿತೆಗಳ ಸಂಘರ್ಷದ ನಡುವೆ ದೌರ್ಜನ್ಯಗಳ ವಿರುದ್ಧವೂ ಎದ್ದುನಿಲ್ಲಬೇಕಿದೆ ಆಚರಣೆ

ನಾನಾ ಸ್ವರೂಪದ ಅಸ್ಮಿತೆಗಳ ಸಂಘರ್ಷದ ನಡುವೆಯೇ ಭಾರತ ಮತ್ತೊಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದೆ. ಮಾರ್ಚ್‌ 8 ವಿಶ್ವದ ಮಹಿಳೆಯರು ತಮ್ಮ ಘನತೆ ಮತ್ತು ಅಸ್ತಿತ್ವವನ್ನು ಜಗತ್ತಿನ ಮುಂದಿಟ್ಟು, ಜಗತ್ತಿನ ಎಲ್ಲ ಸಮಾಜಗಳನ್ನೂ ಆವರಿಸಿರುವ ಪಿತೃಪ್ರಧಾನತೆಯ ವಿರುದ್ಧ ತಮ್ಮ ಪ್ರಖರ ದನಿಯನ್ನು ದಾಖಲಿಸುವ ಒಂದು ದಿನವಾಗಿ ಮಾರ್ಚ್‌ 8 ರೂಪುಗೊಳ್ಳುತ್ತದೆ. ಡಿಜಿಟಲ್‌ ಆರ್ಥಿಕತೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಅವಿಷ್ಕಾರಗಳ ನಡುವೆ ನವ ನಾಗರಿಕತೆಯತ್ತ ಹೊರಳುತ್ತಿರುವ ಭಾರತ ತನ್ನ ಅಮೃತ ಕಾಲದ ನಡಿಗೆಯ ನಡುವೆಯೇ ಹೆಣ್ಣು ಮಕ್ಕಳನ್ನು ರಕ್ಷಿಸುವ ಘೋಷಣೆಗಳೊಂದಿಗೆ ಮುನ್ನಡೆಯುತ್ತಿದೆ. ʼ ಬೇಟಿ ಬಚಾವೋ ʼ  ಅಥವಾ ʼ ಹೆಣ್ಣು ಮಕ್ಕಳನ್ನು ರಕ್ಷಿಸಿ ʼ ಎಂಬ ಕರೆಯೇ ನಮ್ಮ ಸಾಮಾಜಿಕ ಸೂಕ್ಷ್ಮತೆ ಮತ್ತು ಸಂವೇದನೆಗಳ ಕೊರತೆಯನ್ನು ಎತ್ತಿತೋರಿಸುವಂತಿದೆ.

ಮಾರ್ಚ್‌ 8ರಂದು ನಾವು ಕೇಳಬಹುದಾದ ಪ್ರಶ್ನೆ ಎಂದರೆ “ ಹೆಣ್ಣು ಮಕ್ಕಳನ್ನು ರಕ್ಷಿಸಬೇಕಿರುವುದು ಯಾರಿಂದ ?”. ದಿನದಿಂದ ದಿನಕ್ಕೆ ಮನುಜ ಜೀವಿಯನ್ನೇ Commodification ಪ್ರಕ್ರಿಯೆಗೆ ಒಳಪಡಿಸುವ ಮೂಲಕ ಕಾರ್ಪೋರೇಟ್‌ ಮಾರುಕಟ್ಟೆ ಮತ್ತು ಬಂಡವಾಳಶಾಹಿ ವ್ಯವಸ್ಥೆ ಮಾನವ ಸಮಾಜದ ಪ್ರತಿಯೊಂದು ಸ್ತರದಲ್ಲೂ ತನ್ನ ಲಾಭದಾಹದ ನೆಲೆಗಳನ್ನು ವಿಸ್ತರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ಕೆಳಸ್ತರದ ಸಮಾಜದಲ್ಲಿ ನಿತ್ಯ ಶೋಷಣೆಗೊಳಗಾಗುತ್ತಿರುವ ಕಟ್ಟಕಡೆಯ ಮಹಿಳೆ ಯಾರಲ್ಲಿ ಮೊರೆ ಹೋಗಬೇಕು ? ನಮ್ಮ ಸಂವಿಧಾನ ಇದೆಯಲ್ಲವೇ ಎಂಬ ಉತ್ತರ ಥಟ್‌ ಎಂದು ಹೊಳೆಯುತ್ತದೆ. ನಿಜ, ಸಂವಿಧಾನ ಮಹಿಳೆಯರಿಗೆ ನೀಡಲೇಬೇಕಾದ/ನೀಡಬಹುದಾದ ಎಲ್ಲ ಶಾಸನಬದ್ಧ ಸೌಲಭ್ಯ, ಸವಲತ್ತು ಹಾಗೂ ರಕ್ಷಣೆಗಳನ್ನೂ ಒದಗಿಸಿದೆ. ಆದರೆ ಡಾ. ಅಂಬೇಡ್ಕರ್‌ ಹೇಳಿದಂತೆ ಈ ಸಂವಿಧಾನದ ನಿರ್ವಹಣೆ ಯಾರ ಕೈಯ್ಯಲ್ಲಿದೆ ಎಂಬ ಪ್ರಶ್ನೆ ನಮ್ಮನ್ನು ಮತ್ತೆ ಮತ್ತೆ ಕಾಡಲೇಬೇಕಿದೆ. ಆಚರಣೆ

ಶಾಸನಗಳ ನೆರಳಲ್ಲಿ ದೌರ್ಜನ್ಯಗಳು

ಏಕೆಂದರೆ ಶಾಸನಗಳಿಂದ ಮಾತ್ರವೇ ಸಮಾಜದೊಳಗಿನ ಪಾತಕಿ ಮನೋಭಾವವನ್ನು ನಿಯಂತ್ರಿಸಲಾಗುವುದಿಲ್ಲ. ಭಾರತೀಯ ಸಮಾಜದಲ್ಲಿ ಪಾತಕ ಜಗತ್ತು ಎಲ್ಲ ಸ್ತರಗಳಲ್ಲೂ ಆವರಿಸುತ್ತಿದ್ದು ತಳಮಟ್ಟದ ಗ್ರಾಮೀಣ ವಾತಾವರಣದಿಂದ ಅತ್ಯುನ್ನತ ರಾಜಕೀಯ ಪರಿಸರದವರೆಗೂ ವಿಸ್ತರಿಸುತ್ತಿರುವ ಹೊತ್ತಿನಲ್ಲಿ, ಮಹಿಳೆ ತನ್ನ ಮೇಲೆ ನಿತ್ಯ ನಡೆಯುತ್ತಿರುವ ದೌರ್ಜನ್ಯಗಳಿಗೆ ಕಾರಣಗಳನ್ನು ವಿಭಿನ್ನ ಆಯಾಮಗಳಲ್ಲಿ ಶೋಧಿಸಬೇಕಿದೆ. ಅತ್ಯಂತ ಕಠಿಣ ಎನ್ನಬಹುದಾದ ಕಾಯ್ದೆ ಕಾನೂನುಗಳು ಜಾರಿಯಲ್ಲಿದ್ದರೂ ಅವುಗಳು ಅಪರಾಧ ಸಂಭವಿಸಿದ ನಂತರ ದೌರ್ಜನ್ಯಕ್ಕೊಳಗಾದವರಿಗೆ ನ್ಯಾಯ ಒದಗಿಸಲು, ಅಂದರೆ ಅಪರಾಧಿಗಳಿಗೆ ಶಿಕ್ಷೆ ನೀಡಲು ನೆರವಾಗುತ್ತವೆ. ನೊಂದು ಬೆಂದ ಮಹಿಳೆಯ ದೃಷ್ಟಿಯಿಂದ ನೋಡಿದಾಗ ಈ ನ್ಯಾಯಪಾಲನೆ ಆಕೆಗೆ ಸಂಪೂರ್ಣ ಸಾಂತ್ವನ ನೀಡಲು ಸಾಧ್ಯವೇ ಎಂಬ ಪ್ರಶ್ನೆಯೂ ಹುಟ್ಟುತ್ತದೆ.

ಏಕೆಂದರೆ ಅತ್ಯಾಚಾರದ ಅಪರಾಧಿಯೊಬ್ಬನಿಗೆ ನೇಣು ಹಾಕಿದರೂ, ಅತ್ಯಾಚಾರಕ್ಕೊಳಗಾದ ಹೆಣ್ಣಿನ ಯಾತನೆ ಜೀವನವಿಡೀ ಕಾಡುವಂತಹುದು. ಆ ಯಾತನೆಯನ್ನು ಶಮನಗೊಳಿಸಲು ಸಾಧ್ಯವೇ ? ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಅಥವಾ ಆಡಳಿತ ವ್ಯವಸ್ಥೆಯಿಂದಲೇ ದಹಿಸಲ್ಪಟ್ಟ ಮಹಿಳೆಗೆ ಇದು ಅನ್ವಯಿಸುವುದೇ ಇಲ್ಲ. ಏಕೆಂದರೆ ಆ ನೊಂದ ಜೀವ ಬೆಂದು ಹೋಗಿರುತ್ತದೆ. ಈ ಜೀವದ ಸುತ್ತ ಜೀವಂತವಾಗಿರುವ ಒಂದು ಸಮಾಜದಲ್ಲಿ ನಡುರಾತ್ರಿಯ ದಹನ ಅಥವಾ ಶಂಕಿತ/ಸಂಭಾವ್ಯ ಅಪರಾಧಿಗಳ ಎನ್ಕೌಂಟರ್‌ ಅಥವಾ ಉಗ್ರ ಶಿಕ್ಷೆ, ಯಾವ ಭಾವನೆಗಳನ್ನು ಮೂಡಿಸುತ್ತದೆ ? ಮಥುರಾ ಪ್ರಕರಣದಿಂದ ಇತ್ತೀಚಿನ ಸೌಜನ್ಯ ಪ್ರಕರಣದವರೆಗೆ ಮಹಿಳಾ ದೌರ್ಜನ್ಯದ ಚರಿತ್ರೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಪುರುಷಾಧಿಪತ್ಯದ ಅಹಮಿಕೆಗೆ ಒಳಗಾಗಿ, ಕಾಮಾದ್ರಿಸುತರಿಂದ ಅತ್ಯಾಚಾರಕ್ಕೊಳಗಾಗುವ ಮಹಿಳೆಯ ಬಗ್ಗೆ ನಾಗರಿಕತೆಯನ್ನು ಹೊದ್ದುಕೊಂಡ ನಮ್ಮ ವಿಶಾಲ ಸಮಾಜ ಅನುಕಂಪ ಅಥವಾ ಸಹಾನುಭೂತಿಯಿಂದಾಚೆಗೆ ಯೋಚಿಸಿರುವ ನಿದರ್ಶನಗಳೇ ಕಾಣುವುದಿಲ್ಲ.

ಇದರ ನೇರ ನಿದರ್ಶನವನ್ನು ಮಣಿಪುರದ ಘಟನೆಯಲ್ಲಿ, ಬಿಲ್ಕಿಸ್‌ ಬಾನೋ ಪ್ರಕರಣದಲ್ಲಿ ಸ್ಪಷ್ಟವಾಗಿ ಕಾಣಬಹುದು. “ಛೇ ಹಾಗಾಗಬಾರದಿತ್ತು” ಅಥವಾ “ನಾವು ಎತ್ತ ಸಾಗುತ್ತಿದ್ದೇವೆ ” ಎಂಬ ಸಂಯಮಪೂರ್ಣ ಆತಂಕದ ಅಭಿವ್ಯಕ್ತಿಗಳು ಒಂದೆಡೆಯಾದರೆ ಮತ್ತೊಂದೆಡೆ ಏನೂ ನಡೆದೇ ಇಲ್ಲ ಎಂಬ ನಿರ್ಲಿಪ್ತ ಭಾವನೆ ಇಡೀ ಸಮಾಜವನ್ನು ಆವರಿಸಿರುತ್ತದೆ. ಅತ್ಯಾಚಾರ-ದೌರ್ಜನ್ಯಕ್ಕೊಳಗಾದ ಮಹಿಳೆಗೆ ತನ್ನೊಳಗಿನ ಯಾತನೆಯನ್ನು ಸಹಿಸಿಕೊಳ್ಳುವ ಶಿಕ್ಷೆಯೊಂದಿಗೇ, ತನ್ನ ಮೇಲೆ ನಡೆದ ದುಷ್ಕೃತ್ಯಕ್ಕೆ ಸಾಕ್ಷಿ ಒದಗಿಸಬೇಕಾದ ಸನ್ನಿವೇಶಗಳೂ ನಮ್ಮ ನಡುವೆ ಸೃಷ್ಟಿಯಾಗಿದೆ. ಈ ವೈರುಧ್ಯದ ನಡುವೆಯೇ ದೌರ್ಜನ್ಯ ಎಸಗಿದ ವ್ಯಕ್ತಿಗಳು ತಮ್ಮ ಸಾಮಾಜಿಕ/ರಾಜಕೀಯ ಸ್ಥಾನಮಾನಗಳಿಗೆ ಚ್ಯುತಿ ಬಾರದಂತೆ ತಲೆಎತ್ತಿ ಓಡಾಡುತ್ತಿರುತ್ತಾರೆ. ಸಾಕ್ಷಿ ಮಲ್ಲಿಕ್‌ ಮತ್ತವರ ಸಂಗಾತಿಗಳು ಪ್ರತ್ಯಕ್ಷ ಸಾಕ್ಷಿಗಳೇ ಆಗಿದ್ದಾರೆ. ಆಚರಣೆ

ಅತ್ಯಾಚಾರಗಳ ವಿಶಾಲ ವ್ಯಾಪ್ತಿ

ಇತ್ತೀಚೆಗೆ ನಡೆದ ಮತ್ತೊಂದು ಘಟನೆ ಇಡೀ ದೇಶವನ್ನೇ ಯೋಚನೆಗೀಡುಮಾಡಿದೆ. ಸುದ್ದಿಮನೆಗಳ ಪರಿಭಾಷೆಯಂತೆ “ಬೆಚ್ಚಿ ಬೀಳಿಸಿದೆ” ಎಂದು ಹೇಳಲಾಗದು. ಏಕೆಂದರೆ ಮಣಿಪುರವೇ ನಮ್ಮನ್ನು ಬೆಚ್ಚಿ ಬೀಳಿಸಲಿಲ್ಲ, ಬದಲಾಗಿ ಸಮಾಜದ ಒಂದು ದೊಡ್ಡ ವರ್ಗ, so called civilised , ವರ್ಗ ಬೆಚ್ಚಗೆ ಹೊದ್ದು ನಿರ್ಲಿಪ್ತತೆಯಿಂದ ಮಲಗಿತ್ತು. ಈ ವರ್ಗದ ದೃಷ್ಟಿ ಗಾಝಾ ಪಟ್ಟಿಯಲ್ಲಿ ಉಗ್ರರಿಂದ ಬೆತ್ತಲೆಯಾದ ಶವದ ಮೇಲಿತ್ತು. ಮಾರ್ಚ್‌ 1ರಂದು ರಾತ್ರಿ ಸ್ಪೇನ್‌ ದೇಶದ ಪ್ರವಾಸಿ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ದೇಶದ ನಾಗರಿಕ ಪ್ರಜ್ಞೆಯನ್ನು ಕೆದಕುವಂತಿದೆ. ವಿಶ್ವಪರ್ಯಟನೆಯಲ್ಲಿ ತೊಡಗಿದ್ದ ಈ ಮಹಿಳೆಯ ಮೇಲೆ ಜಾರ್ಖಂಡ್‌ನ ದುಮ್ಕಾ ಗ್ರಾಮದಲ್ಲಿ ಅತ್ಯಾಚಾರ ಎಸಗಲಾಗಿದ್ದು , ಈ ಸಂಬಂಧ ಎಂಟು ಮಂದಿಯನ್ನು ಬಂಧಿಸಲಾಗಿದೆ. ಹತ್ತು ವರ್ಷಗಳ ಹಿಂದೆ ಮಧ್ಯಪ್ರದೇಶದ ದಾಟಿಯಾ ಜಿಲ್ಲೆಯಲ್ಲಿ ಸ್ವಿಜರ್‌ಲೆಂಡಿನ ಮಹಿಳೆ ಅತ್ಯಾಚಾರಕ್ಕೊಳಗಾದ ಘಟನೆಯನ್ನು ಇದು ನೆನಪಿಸುತ್ತದೆ.  ಈ ಘಟನೆಯಲ್ಲಿ ಆರು ಮಂದಿ ಜೀವಾವಧಿ ಶಿಕ್ಷೆಗೊಳಗಾಗಿದ್ದಾರೆ. 2018ರಲ್ಲಿ ನಡೆದ ಘಟನೆಯೊಂದರಲ್ಲಿ ಲಾಟ್ವಿಯಾ ದೇಶದ ಮಹಿಳೆಯೊಬ್ಬರು ಕಾಣೆಯಾಗಿದ್ದರು. 40 ದಿನಗಳ ನಂತರ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗಿದ್ದ ಆಕೆಯ ಶವ ದೊರೆತಿತ್ತು. ಆಚರಣೆ

ಸರ್ಕಾರಗಳಿಗೆ ಇದು ಕಾನೂನು ಸುವ್ಯವಸ್ಥೆಯ ಪ್ರಶ್ನೆಯಾಗುತ್ತದೆ. ನ್ಯಾಯಾಲಯಗಳಿಗೆ ವಿಳಂಬಿತ ನ್ಯಾಯ ಪರಿಪಾಲನೆಯ ವಸ್ತು ಆಗುತ್ತದೆ. ರಾಜಕೀಯ ಪಕ್ಷಗಳಿಗೆ ಆಡಳಿತಾರೂಢ ಪಕ್ಷದ ವಿರುದ್ಧ ಬಳಸಬಹುದಾದ ಬತ್ತಳಿಕೆಯಾಗುತ್ತದೆ. ವಿಶಾಲ ಸಮಾಜಕ್ಕೆ, ವಿಶೇಷವಾಗಿ ಪುರುಷ ಸಮಾಜಕ್ಕೆ, ಇದು ವಿಸ್ಮೃತಿಗೆ ಜಾರಬಹುದಾದ ಮತ್ತೊಂದು ಘಟನೆಯಾಗಿಬಿಡುತ್ತದೆ. ವಿದೇಶಿ ಮಹಿಳೆಯೊಬ್ಬರು ಈ ನೆಲದಲ್ಲಿ ಅತ್ಯಾಚಾರಕ್ಕೊಳಗಾಗುವುದರಿಂದ ನಮ್ಮ ದೇಶದ ಘನತೆ ಗೌರವಕ್ಕೆ ಚ್ಯುತಿ ಬರುತ್ತದೆ ಎಂದು ಯಾವುದೇ ʼದೇಶಭಕ್ತʼ  ಧ್ವನಿಯೂ ಕೂಗಿ ಹೇಳುವುದಿಲ್ಲ. ಅಥವಾ ಅತ್ಯಾಚಾರಿಗಳಿಗೆ ಅಸ್ಮಿತೆ ನೀಡುವ ಯಾವುದೇ ಜಾತಿ ಸಮುದಾಯವೂ ʼ ಇದು ತನ್ನ ಸಾಮುದಾಯಿಕ ಘನತೆಗೆ ತಕ್ಕುದಲ್ಲ ʼ ಎಂದು ಖಂಡಿಸಿದ ನಿದರ್ಶನಗಳು ಕಾಣುವುದಿಲ್ಲ. ಬಿಲ್ಕಿಸ್‌ ಬಾನೋ ಪ್ರಕರಣದಲ್ಲಿ ಬಿಡುಗಡೆಯಾಗಿ ಮತ್ತೆ ಜೈಲು ಸೇರಿರುವ ಸಂಸ್ಕಾರವಂತರು  ಇಲ್ಲಿ ನೆನಪಾಗುತ್ತಾರೆ.

ಏಕೆ ಹೀಗೆ ? ಕಾರಣ ಹುಡುಕಲು ಸಂಶೋಧನೆಗಳೇನೂ ಬೇಕಿಲ್ಲ. ಹಲ್ಲೆಗೊಳಗಾದವರು, ಹತ್ಯೆಗೀಡಾದವರು, ಅತ್ಯಾಚಾರ-ದೌರ್ಜನ್ಯಕ್ಕೊಳಗಾದವರು ಅಮಾಯಕ-ಅಸಹಾಯಕ ಮಹಿಳೆಯರು. ಪ್ರವೀಣ್‌ ನೆಟ್ಟಾರು ಪಡೆಯುವ ಸಹಾನುಭೂತಿ-ಪರಾನುಭೂತಿಯನ್ನು ಭಾವ್ರಿ ದೇವಿ, ಸೌಜನ್ಯ, ಧಾನಮ್ಮ ಪಡೆಯುವುದಿಲ್ಲ. ಏಕೆಂದರೆ ಅಧಿಕಾರ ರಾಜಕಾರಣದ ಬತ್ತಳಿಕೆಯಲ್ಲಿ ಈ ಅಮಾಯಕ ಮಹಿಳೆಯರು ಬಾಣಗಳಾಗಿ ಪರಿಣಮಿಸುವುದಿಲ್ಲ. ಪ್ರವೀಣ್‌ ಬ್ರಹ್ಮಾಸ್ತ್ರದಂತೆ ಕಾಣುತ್ತಾನೆ. ಇದು ಕೇವಲ ಮತೀಯ ರಾಜಕಾರಣದ ಪ್ರಶ್ನೆಯಲ್ಲ. ಇಲ್ಲಿ ಆಳವಾಗಿ ನೋಡಿದಾಗ ಪಿತೃಪ್ರಧಾನತೆಯ ಕುರುಹುಗಳೂ ಕಾಣುತ್ತವೆ. ಈ ಪಿತೃಪ್ರಧಾನತೆಯನ್ನು ಎದುರಿಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಭಾರತದ ಮಹಿಳಾ ಸಮುದಾಯ ಇಂದು ನಿಂತಿದೆ. ಭ್ರೂಣಾವಸ್ಥೆಯಿಂದ ಹಿಡಿದು ವೃದ್ಧಾವಸ್ಥೆಯವರೆಗೂ ಸಮಾಜದಿಂದ ಹಲ್ಲೆಗೊಳಗಾಗುತ್ತಿರುವ ಹೆಣ್ಣು ಸಂಕುಲದ ಯಾತನೆ, ವೇದನೆ ಮತ್ತು ಎದೆಯಾಳದ ನೋವುಗಳು ನಮ್ಮ ಸಾಂಸ್ಕೃತಿಕ ಅಥವಾ ಧಾರ್ಮಿಕ ಸಂಕಥನಗಳಲ್ಲಿ ನಿರ್ವಚನೆಗೊಳಗಾಗುತ್ತಲೇ ಇಲ್ಲ. ಇದು ಪಿತೃಪ್ರಧಾನ ವ್ಯವಸ್ಥೆಯ ಒಂದು ಮುಖ್ಯ ಲಕ್ಷಣವನ್ನು ಸೂಚಿಸುತ್ತದೆ.

ಸಾಮಾಜಿಕ ನ್ಯಾಯದ ನೆರಳಲ್ಲಿ

ಈ ನಡುವೆಯೇ ಶಾಸನಸಭೆಗಳಲ್ಲಿ ಮಹಿಳೆಯರಿಗಾಗಿ ಮೂರನೆ ಒಂದರಷ್ಟು ಸ್ಥಾನಗಳನ್ನು ಮೀಸಲಿಡುವ ಮಹಿಳಾ ಮೀಸಲಾತಿಯ ಪರಿಕಲ್ಪನೆ ಪ್ರಜಾಸತ್ತೆಯ ಮುನ್ನಡೆಯಲ್ಲಿ ಒಂದು ಆಡಳಿತಾತ್ಮಕ ಹೆಜ್ಜೆಯಾಗಿ ಕಾಣುತ್ತದೆ. ಇದು ಸಾಕಾರಗೊಳ್ಳಲು ಕನಿಷ್ಠ ಇನ್ನೂ 15 ವರ್ಷಗಳ ಕಾಲಾವಧಿ ಬೇಕಾಗುತ್ತದೆ. ಆ ವೇಳೆಗೆ ಭಾರತದ ಪ್ರಜಾಪ್ರಭುತ್ವವು ಯಾವ ದಿಶೆಯಲ್ಲಿ ರೂಪಾಂತರ ಹೊಂದಿರುತ್ತದೆ ಎಂದು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಅಧಿಕಾರ ರಾಜಕಾರಣ ರೂಪುಗೊಳ್ಳುತ್ತಿದೆ. ಶಾಸನಬದ್ಧವಾಗಿ ರಾಜಕೀಯ ಅಧಿಕಾರ ಕೇಂದ್ರಗಳಲ್ಲಿ ಮಹಿಳೆಯರ ಅಸ್ತಿತ್ವವನ್ನು ಗುರುತಿಸಲು ಅಥವಾ ದೃಢಪಡಿಸಲು ಮಹಿಳಾ ಮೀಸಲಾತಿಯಂತಹ ಸಾಂವಿಧಾನಿಕ ಉಪಕ್ರಮಗಳು ನೆರವಾಗುವುದಾದರೂ, ಆಡಳಿತಾತ್ಮಕವಾಗಿ ಚುನಾಯಿತ ಮಹಿಳಾ ಪ್ರತಿನಿಧಿಗಳು ಆಳ್ವಿಕೆಯ ವಿವಿಧ ಸ್ತರಗಳಲ್ಲಿ ತಮ್ಮ ಹಕ್ಕೊತ್ತಾಯದ ಧ್ವನಿಯನ್ನು ದಾಖಲಿಸಲು ಅಥವಾ ಪ್ರತಿಷ್ಠಾಪಿಸಲು ಸಾಧ್ಯವಾಗುವುದೇ ಎಂಬ ಸಂಕೀರ್ಣ ಪ್ರಶ್ನೆ ಜಟಿಲವಾದದ್ದು. ಏಕೆಂದರೆ ವಿಭಜಿತ ವರ್ಗ ಸಮಾಜದಲ್ಲಿ ಉಳ್ಳವರನ್ನೇ ಅಥವಾ ಮೇಲ್ಪದರವನ್ನೇ ಪ್ರಧಾನವಾಗಿ ಪ್ರತಿನಿಧಿಸುವ ಮಹಿಳೆಯರು ಯಾವ ವರ್ಗದ ಪರ ನಿಲ್ಲುತ್ತಾರೆ,  ಯಾವ ವರ್ಗದ ಹಿತಾಸಕ್ತಿಗಳನ್ನು ಕಾಪಾಡುತ್ತಾರೆ  ಎಂಬ ಪ್ರಶ್ನೆ ಒಂದೆಡೆಯಾದರೆ, ಮತ್ತೊಂದೆಡೆ ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ನಿರ್ಗತಿಕ, ದುರ್ಬಲ, ಅಸಹಾಯಕ, ಶೋಷಿತ ಮಹಿಳೆಯರ ಧ್ವನಿಗೆ ದನಿಗೂಡಿಸುವವರಾಗುತ್ತಾರೆಯೇ ಎಂಬ ಪ್ರಶ್ನೆಯೂ ಕಾಡುತ್ತದೆ.

ಸಮಾನತೆ ಮತ್ತು ಸಬಲೀಕರಣ ಈ ಎರಡೂ ಪದಗಳು ಗ್ರಾಂಥಿಕವಾಗಿ ಪಡೆಯುವ ಔನ್ನತ್ಯವನ್ನು ಸಾಕಾರಗೊಳಿಸಬೇಕಾದರೆ, ತಳಮಟ್ಟದ ಸಾಮಾಜಿಕ-ಸಾಂಸ್ಕೃತಿಕ ನೆಲೆಗಳಲ್ಲಿ ನಿಕೃಷ್ಟವಾಗಿ ಕಾಣಲ್ಪಡುವ ಸಮಾಜದ ಕಟ್ಟಕಡೆಯ ಮಹಿಳೆಗೆ ಈ ಎರಡು ಸುಂದರ ಪದಗಳ ಅರ್ಥ ತಿಳಿದಿರಬೇಕು. ಭಾಗವಹಿಸುವಿಕೆಯನ್ನೇ ಪ್ರಾತಿನಿಧ್ಯ ಎಂದು ಭಾವಿಸುವುದು, ಸಮಾನ ಅವಕಾಶಗಳನ್ನೇ ಸಮಾನತೆ ಎಂದು ಭಾವಿಸುವುದು ಮಹಿಳಾ ಸಂಕುಲಕ್ಕೆ ಮಾಡುತ್ತಿರುವ ಅಪಚಾರ ಎಂದೇ ಹೇಳಬಹುದು. ಏಕೆಂದರೆ ಇಂದಿಗೂ ಅನೌಪಚಾರಿಕ ಉದ್ಯೋಗ ವಲಯದಲ್ಲಿ ಮಹಿಳೆ ಸಮಾನ ಕೂಲಿ ಪಡೆಯಲಾಗುತ್ತಿಲ್ಲ. ಔಪಚಾರಿಕ ವಲಯದಲ್ಲಿ ಸಮಾನ ಸ್ಥಾನಮಾನಗಳಿಗಾಗಿ ಹೋರಾಡಬೇಕಿದೆ. ವಿಪರ್ಯಾಸ ಎಂದರೆ ಪ್ರಗತಿಪರ ಚಳುವಳಿಗಳ ನಡುವೆಯೂ, ಕಾರ್ಮಿಕ ಚಳುವಳಿಗಳ ವಲಯದಲ್ಲೂ ಸಹ ಮಹಿಳಾ ಪ್ರಾತಿನಿಧ್ಯ ಒಂದು ಮುಖ್ಯ ಪ್ರಶ್ನೆಯಾಗಿ ಕಾಡುತ್ತಿಲ್ಲ. ಸುಶಿಕ್ಷಿತ-ಆಧುನಿಕ ಸಮಾಜವನ್ನು ಪ್ರತಿನಿಧಿಸುವ ಪುರೋಗಾಮಿ ಹೋರಾಟಗಳಲ್ಲೂ ಲಿಂಗ ಸೂಕ್ಷ್ಮತೆಯ ಕೊರತೆ ಇರುವುದನ್ನು ಒಪ್ಪಿಕೊಳ್ಳಲೇಬೇಕಿದೆ.

ಈ ಕೊರತೆಗಳ ನಡುವೆಯೇ ನವ ಉದಾರವಾದದ ಮಾರುಕಟ್ಟೆ ಆರ್ಥಿಕತೆಯಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ದುಡಿಮೆಯತ್ತ ಸಾಗುತ್ತಿದ್ದಾರೆ. ಗಾರ್ಮೆಂಟ್‌ ವಲಯದಲ್ಲಿ ದುಡಿಯುವ ಮಹಿಳೆಯರು,  ಕಟ್ಟಡ ನಿರ್ಮಾಣ ಮುಂತಾದ ಅಸಂಘಟಿತ ವಲಯದಲ್ಲಿ ದುಡಿಯುವವರು ತಮ್ಮ ಸುಭದ್ರ ಭವಿಷ್ಯಕ್ಕಾಗಿ ನಾಳೆಗಳನ್ನು ಎಣಿಸುವಂತಾಗಿದೆ. ಮತ್ತೊಂದೆಡೆ ಸರ್ಕಾರಗಳು ಜಾರಿಗೊಳಿಸುವ ಜನಪರ ಯೋಜನೆಗಳನ್ನು ತಳಮಟ್ಟದವರೆಗೂ ತಲುಪಿಸುವ ಜವಾಬ್ದಾರಿಯನ್ನೂ ಮಹಿಳೆಯರಿಗೆ ವಹಿಸಲಾಗಿದೆ. ಶಿಕ್ಷಣ, ಆರೋಗ್ಯ, ಪೌಷ್ಟಿಕತೆ, ಯೋಗಕ್ಷೇಮದ ವಲಯಗಳಲ್ಲಿ ಆಶಾ, ಅಂಗನವಾಡಿ, ಬಿಸಿಯೂಟದ ಕಾರ್ಯಕರ್ತೆಯರಾಗಿ ದುಡಿಯುವ ಹೆಣ್ಣು ಮಕ್ಕಳು ಕನಿಷ್ಠ ವೇತನವೂ ಇಲ್ಲದೆ ಹಗಲಿರುಳು ದುಡಿಯುವಂತಾಗಿದೆ. ಈ ಭೌತಿಕ ಜವಾಬ್ದಾರಿಯಲ್ಲದೆ ಸಂಸ್ಕೃತಿಯನ್ನು ರಕ್ಷಿಸಬೇಕಾದ ಧಾರ್ಮಿಕ ಜವಾಬ್ದಾರಿಯನ್ನೂ ಮಹಿಳೆಯರ ಹೆಗಲಿಗೇ ಏರಿಸುವ ಧಾರ್ಮಿಕ ನೆಲೆಗಳೂ ನಮ್ಮ ನಡುವೆ ಇದೆ. ದುಡಿಮೆಯ ವಲಯದಲ್ಲಿ ವಲಸೆ ಕಾರ್ಮಿಕರಿಗಾಗಿ ಒಂದು ನಿರ್ದಿಷ್ಟ ನೀತಿಯನ್ನೇ ರೂಪಿಸದ ಸರ್ಕಾರಗಳು ಈ ಕಾರ್ಮಿಕರಲ್ಲಿ ಬಹುಸಂಖ್ಯೆಯಲ್ಲಿರುವ ಮಹಿಳೆಯರ ನಿತ್ಯ ಬದುಕಿನ ಬವಣೆಗಳತ್ತ ಗಮನಹರಿಸುವುದು ಸಾಧ್ಯವೇ ?

ಇದನ್ನೂ ಓದಿಗಣಪತಿ ಪೂಜೆ ನಮ್ಮ ಸಂಸ್ಕೃತಿಯಲ್ಲ, ಮೌಢ್ಯದ ಆಚರಣೆ| ಸಾಣೇಹಳ್ಳಿ ಸ್ವಾಮೀಜಿ

ಭರವಸೆಯ ದಿನಗಳತ್ತ

ಈ ಹಲವು ಪ್ರಶ್ನೆಗಳ ನಡುವೆಯೇ ಭಾರತ ಮತ್ತೊಂದು ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದೆ. 2024ರ ಚುನಾವಣೆಗಳು ಸಮೀಪಿಸುತ್ತಿರುವಂತೆ ಪ್ರಜಾತಂತ್ರದ ತಲ್ಲಣಗಳೂ ಹೆಚ್ಚಾಗುತ್ತಿವೆ. ಭಾರತದ ಶ್ರೇಷ್ಠ ಸಂವಿಧಾನದ ಆಶಯಗಳನ್ನು ಹಂತಹಂತವಾಗಿ ಶಿಥಿಲಗೊಳಿಸುತ್ತಿರುವ ಅಧಿಕಾರ ರಾಜಕಾರಣ ಮತ್ತು ಅದನ್ನು ನಿರ್ದೇಶಿಸುವ ಬಹುಸಂಖ್ಯಾವಾದದ ರಾಜಕೀಯ ನಡೆಗಳು ಸ್ತ್ರೀ ಸಮಾನತೆಯ ಧ್ವನಿಗಳನ್ನೂ ಜಾಗೃತಗೊಳಿಸಬೇಕಿದೆ. ಲಿಂಗ ಸೂಕ್ಷ್ಮತೆ, ಲಿಂಗತ್ವ ಸಂವೇದನೆ ಮತ್ತು ಲಿಂಗತ್ವ ಪ್ರಾತಿನಿಧ್ಯದ ಬಗ್ಗೆ ಆಲೋಚನೆಯನ್ನೂ ಮಾಡದೆ, ಸಂವಿಧಾನ-ಸಮಾನತೆ-ಭ್ರಾತೃತ್ವದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಒಂದು ಸಮಾಜ ಸಾಂಸ್ಥಿಕ-ಸಾಂಘಿಕ ನೆಲೆಯಲ್ಲಿ ನಮ್ಮ ನಡುವೆ ಇದೆ. ಇದು ರಾಜಕಾರಣದಲ್ಲಿರುವಷ್ಟೇ  ಪ್ರಬಲವಾಗಿ ಸಾಂಸ್ಕೃತಿಕ ವಲಯದಲ್ಲೂ, ಸಾಹಿತ್ಯಕ ವಲಯದಲ್ಲೂ ಇರುವುದು ಯೋಚಿಸಬೇಕಾದ ವಿಚಾರ. ಈ ಚಿಂತನಾ ಲಹರಿಯ ಮೂಲ ಧಾತುವನ್ನು ಶತಮಾನಗಳಿಂದ ಬೇರೂರಿರುವ ಪಿತೃಪ್ರಧಾನತೆಯ ಮೌಲ್ಯಗಳಲ್ಲಿ ಗುರುತಿಸಿ, ಅದರ ವಿರುದ್ಧ ಹೋರಾಡಬೇಕಿದೆ. ಮೂಲತಃ ಮಹಿಳಾ ಪ್ರಾತಿನಿಧ್ಯ ಅಥವಾ ಸಮಾನತೆ ಯಾರೋ ಕೊಡುವಂತಹುದಲ್ಲ ಅಥವಾ ಕಲ್ಪಿಸುವಂತಹುದಲ್ಲ. ಅದು ಮಹಿಳಾ ಸಂಕುಲದ ಮೂಲಭೂತ-ಜನ್ಮಸಿದ್ಧ ಹಕ್ಕು ಎನ್ನುವುದನ್ನು ಮನಗಾಣಬೇಕಿದೆ.

ಅವಕಾಶ ಕಲ್ಪಿಸುವ-ಕೊಡುವ-ದಯಪಾಲಿಸುವ ಪಿತೃಪ್ರಧಾನ ವ್ಯವಸ್ಥೆಯ ಪರಿಭಾಷೆಗಳಿಂದಾಚೆ ಮಹಿಳಾ ಸಮಾನತೆ ಮತ್ತು ಹೆಣ್ತನದ  ಘನತೆ ಗೌರವದ ಪ್ರಶ್ನೆಗಳನ್ನು ಎದುರಿಸಬೇಕಿದೆ. ದಿನಕ್ಕೆ ಸರಾಸರಿ 88 ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಲಾಗುತ್ತಿರುವ ಒಂದು ಸಮಾಜದಲ್ಲಿ ಮಹಿಳೆ ಕೇವಲ ನ್ಯಾಯ ಕೇಳುತ್ತಿಲ್ಲ ಬದಲಾಗಿ ತನ್ನ ಗೌರವಯುತವಾಗಿ ಬದುಕುವ ಹಕ್ಕನ್ನು ಪ್ರತಿಪಾದಿಸುತ್ತಿದ್ದಾಳೆ. ಈ ಹಕ್ಕೊತ್ತಾಯವು ಆದಿವಾಸಿಗಳಿಂದ ಮೆಟ್ರೋಪಾಲಿಟನ್‌ ನಗರದವರೆಗೂ ಸಮಾನವಾಗಿ ವ್ಯಾಪಿಸಿದೆ. ಏಕೆಂದರೆ ಪ್ರತಿಯೊಬ್ಬ ಮಹಿಳೆಯ ಮೇಲೆ ನಡೆಯುವ ದೌರ್ಜನ್ಯವೂ ಇಡೀ ಮಹಿಳಾ ಸಂಕುಲದ ಮೇಲೆ ನಡೆದ ದಾಳಿಯಂತೆಯೇ ಕಾಣುತ್ತದೆ. ಈ ದಾಳಿಗಳನ್ನು ಎದುರಿಸುತ್ತಲೇ ನವ ಉದಾರವಾದ-ಬಂಡವಾಳಶಾಹಿ-ಕಾರ್ಪೋರೇಟ್‌ ಮಾರುಕಟ್ಟೆ-ಧಾರ್ಮಿಕ ಮತೀಯವಾದ- ಮತಾಂಧತೆ-ಜಾತಿ ಶ್ರೇಷ್ಠತೆ ಮತ್ತು ಪಾರಮ್ಯ- ಸಾಂಸ್ಕೃತಿಕ ಪರಮಾಧಿಪತ್ಯ-ಪುರುಷಾಹಮಿಕೆ ಇವೆಲ್ಲವುಗಳ ವಿರುದ್ಧ ಭಾರತದ ಮಹಿಳೆ ನಿರಂತರವಾಗಿ ಹೋರಾಡಬೇಕಿದೆ.

ಈ ಎಲ್ಲವನ್ನೂ ಆವರಿಸುವ ಪಿತೃಪ್ರಧಾನ ಮೌಲ್ಯಗಳು ಮಹಿಳಾ ಸಂಕುಲದ ಪ್ರಥಮ ಶತ್ರುವಾಗಿ ಪರಿಣಮಿಸಿವೆ. ಈ ಮೌಲ್ಯಗಳನ್ನು ಕೊನೆಯಾಗಿಸಿ ಲಿಂಗ ಸಮಾನತೆಯನ್ನು ಮೈಗೂಡಿಸಿಕೊಂಡ ಸಮ ಸಮಾಜಕ್ಕಾಗಿ ಶ್ರಮಿಸುವುದು ಈ ವರ್ಷದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಘೋಷವಾಕ್ಯವಾಗಬೇಕಿದೆ.

ವಿಡಿಯೋ ನೋಡಿಮಹಿಳಾ ಮೀಸಲಾತಿ ಲೆಕ್ಕಾಚಾರ ಏನು? ಎತ್ತ? ಕೆ.ಎಸ್.‌ ವಿಮಲಾ ಜೊತೆ ಮಾತುಕತೆ

Donate Janashakthi Media

Leave a Reply

Your email address will not be published. Required fields are marked *