ಬೆಂಗಳೂರು : ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಹಿಂಸಾಚಾರ ಆಗುತ್ತದೆ ಎಂದು ರಾಜ್ಯದ ಮತದಾರರಿಗೆ ಬೆದರಿಕೆ ಒಡ್ಡಿರುವ ಆರೋಪದಲ್ಲಿ ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಎಫ್ ಐ ಆರ್ ದಾಖಲಿಸುವಂತೆ ಕಾಂಗ್ರೆಸ್ ನಗರದ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಗುರುವಾರ ಹೈಗ್ರೌಂಡ್ ಪೊಲೀಸ್ ಠಾಣೆಗೆ ತೆರಳಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಎಐಸಿಸಿ ವಕ್ತಾರ ಗೌರವ್ ವಲ್ಲಭ್ ಅವರು ಪೊಲೀಸರಿಗೆ ಗುರುವಾರ ದೂರು ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದರು. ಬಳಿಕ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ದೂರು ದಾಖಲು ಮಾಡಿದ್ದೇವೆ. ಅಮಿತ್ ಶಾ ಅವರು ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ. ಪ್ರಚಾರದ ವೇಳೆ ಸುಳ್ಳು ಹೇಳಿಕೆಗಳನ್ನೂ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೋಮು ಗಲಭೆ ಆಗುತ್ತದೆ ಎಂದು ಪ್ರಚಾರದ ವೇಳೆ ಹೇಳಿಕೆ ಕೊಟ್ಟಿದ್ದಾರೆ. ರಾಜ್ಯದಲ್ಲಿ ಈಗ ಬಿಜೆಪಿ ಸರ್ಕಾರ ಸೋಲಿನ ಭಯದಲ್ಲಿದೆ ಎಂದು ಆರೋಪಿಸಿದರು.
ಇದನ್ನೂ ಓದಿ : ಗೋವಾ ಕಾಂಗ್ರೆಸ್ ನಲ್ಲಿ ಭಿನ್ನಮತ: ಇಬ್ಬರು ಶಾಸಕರನ್ನು ಅನರ್ಹಗೊಳಿಸಲು ಮನವಿ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ನಮ್ಮ ರಾಜ್ಯ ಶಾಂತಿಯ ತೋಟ. ಕಾಂಗ್ರೆಸ್ ಬಂದ್ರೆ ಕೋಮು ಗಲಭೆ ಆಗುತ್ತೆ ಅಂತ ಹೇಳಿಕೆ ಕೊಟ್ಟಿದ್ದಾರೆ, ಇದರ ಅರ್ಥ ಏನು? ಕಾಂಗ್ರೆಸ್ ಗೆ ವೋಟ್ ಕೊಡ್ಬೇಡಿ ಅಂತ ಮತದಾರನ್ನ ಹೆದರಿಸುತ್ತಿದ್ದಾರೆ. ಅವರು ರಾಷ್ಟ್ರದ ಹೋಂ ಮಿನಿಸ್ಟರ್ ಆಗಿರುವವರು. ಜನರ ಮೇಲೆ ಪ್ರಭಾವ ಬೀರುವ ಅಮಿತ್ ಶಾ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.