-ಐಕೆ ಬೊಳುವಾರು
ಇಪ್ಪತ್ತೇಳು ವರ್ಷಗಳ ಹಿಂದಿನ ಮುಸ್ಸಂಜೆಯೊಂದರಲ್ಲಿ, ಉಡುಪಿಯ ಎಂ.ಜಿ.ಎಂ. ಕಾಲೇಜಿನ ಬಯಲು ರಂಗಮಂದಿರಲ್ಲಿ ಗೆಳೆಯ ಜಯಂತ್ ಕಾಯ್ಕಿಣಿ ಜೊತೆಗೆ, ನೋಡಿದ್ದಾಗಲೂ ಜೊತೆಗಿದ್ದ ಚಂದಿರ ಕಣ್ಣೀರಿಳಿಸಿದ್ದ. ಇಂದು ಮುಸ್ಸಂಜೆ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನೋಡುವಾಗಲೂ ಅದೇ ಚಂದಿರ ಕಣ್ಣೀರಿಳಿಸಿಬಿಟ್ಟ. ಅಂದು ತೊಂದರೆ ಕೊಟ್ಟವರು ‘ನೀನಾಸಂ’ ಗೆಳೆಯರು, ಇಂದು ಗೆಳೆಯ ಹುಲಿಗಪ್ಪ ಕಟ್ಟೇಮನಿಯವರು. ಯಾಕಾಗಿ ಈ ನಾಟಕವನ್ನು ಮತ್ತೆ ಮತ್ತೆ ಪ್ರದರ್ಶನ ಮಾಡಿ ಅಳುವಂತೆ ಮಾಡುತ್ತೀರಾ..?
ಸಿಟ್ಟು ಬಂದಾಗ ಕೆಲವೊಮ್ಮೆ ಅನ್ನಿಸಿಬಿಡುತ್ತದೆ; ಮನುಷ್ಯನೊಬ್ಬನಿಗೆ ಎರಡು ಹೊತ್ತು ಹೊಟ್ಟೆಗೆ, ಮಾನ ಮುಚ್ಚುವಷ್ಟು ತಟ್ಟೆಗೆ ಬಿದ್ದುಬಿಟ್ಟರೆ, ಸುಖ ನಿದ್ರೆಗೆ ಹಟ್ಟಿಯೂ ಬೇಕಿರುವುದಿಲ್ಲ. ಈ ಸ್ವಾತಂತ್ರ್ಯ.., ಈ ಅಭಿವ್ಯಕ್ತಿ.., ಈ ಸಮಾನತೆ.., ಇತ್ಯಾದಿಗಳೆಲ್ಲ ನನ್ನಂತಹ ಹೊಟ್ಟೆ ತುಂಬಿದ, ಜಾಣ ಮಾತುಗಾರ ಜಗಲಿಕಟ್ಟೆ ಶಬ್ದಗಳಷ್ಟೇನಾ ಅಂತ. ಬೀಡಿ ಕಟ್ಟುತ್ತಾ ಎಂಟಾಣೆ ಚಿಲ್ಲರೆಗೆ ಸುಖ ಸಂಸಾರ ಸಾಗಿಸುತ್ತಿದ್ದ ನನ್ನಪ್ಪನಿಗೆ, ಅದುವರೆಗೆ ಅವರನ್ನಾಳುತ್ತಿದ್ದವರು ಹೊರಗಿನಿಂದ ಬಂದವರು ಅಂತ ಗೊತ್ತಾದದ್ದೇ, ಒಳಗಿನವರ ಆಡಳಿತದ ಬಿಸಿ ತಟ್ಟಿದ ಮೇಲೆ.
ಬಯಸದಿದ್ದರೂ, ಒಳಗಿದ್ದವರು ಹೊರಗಾಗುವ, ಹೊರಗಿದ್ದವರು ಒಳಗಾಗುವ, ನೆರೆಮನೆಯಲ್ಲಿದ್ದವರು ನೆರೆದೇಶಿಗಳಾಗುವ ವೇದನೆಯ ಗೊಂಚಲನ್ನೇ ಮೈಮೇರೆಚಿವ ಈ ನಾಟಕವನ್ನು, ಕಾಲು ಶತಮಾನಕ್ಕಿಂತಲೂ ಹಿಂದೊಮ್ಮೆ ಉಡುಪಿಯಲ್ಲಿ ನೋಡಿದ್ದ ದಿನಗಳಲ್ಲಿ, ಚಂದಿರನ ಜೊತೆರಾರರಾಗಿದ್ದ, ಸೊಲೆಂ ಅಲೈಕೆಂ (ಅಸ್ಸಲಾಮ್ ಅಲೈಕುಂ..?) ಯಾನೆ ಸೊಲೊಮನ್ ನವಮೋವಿಚ್ ಮೊನ್ಮೌತ್ ಜೆಫ್ರಿ, ರಫೆಯಲ್ ಹೊಲಿನ್ ಶೆಡ್, ಇತ್ಯಾದಿಗಳೆಲ್ಲ ಮನುಷ್ಯರ ಹೆಸರುಗಳೆಂಬುದೂ ಗೊತ್ತಿದ್ದಿರಲಿಲ್ಲ.
ಇದನ್ನೂ ಓದಿ: ವಿಜಯಪುರ : ಹಿರಿಯ ರೈತ ನಾಯಕ ಭೀಮಶಿ ಕಲಾದಗಿ ನಿಧನ
ಗೊತ್ತಿದ್ದದ್ದು; ಪಠ್ಯದಲ್ಲಿದ್ದರು ಎಂಬ ಕಾರಣಕ್ಕೆ, ಶೇಕ್ಸ್ ಪಿಯರ್ ಒಬ್ಬರೇ. ಆದರೆ, ಅವೆಷ್ಟೋ ವರ್ಷಗಳಿಂದ, ಅವರೆಲ್ಲರ ಜೊತೆಗೆ ಗೆಳೆಯ ಜಯಂತ್’ನ ಕರುಳನ್ನೂ ಸೇರಿಕೊಂಡಂತೆ ಬಿಗಿದು ಕಟ್ಟಿ ಹಾಕಿದ ಆ ಕಥಾವಸ್ತು ಮಾತ್ರ ಅತ್ಯಂತ ಯಾತನೆಯದ್ದು; ಹುಟ್ಟಿದ ಮನೆಯಿಂದ ಹೊರದಬ್ಬಲ್ಪಟ್ಟವರಿಗೆ ಮಾತ್ರ ಈ ನೋವಿನ ಆಳದ ಅರಿವಾದೀತು.
ಕಳೆದ ಕೆಲವು ವರ್ಷಗಳಿಂದ ಹೆಚ್ಚು ಬೆಳಗದೆ ಮೋಡದ ಮರೆಯಲ್ಲಿ ಮಲಗಿದ್ದ ಚಂದಿರನನ್ನು, ಎರಡು ವರ್ಷಗಳ ಹಿಂದೆ ಎಬ್ಬಿಸಿ ಹೊರಗೆಳೆದು ನಾಡಿನಾದ್ಯಂತ ಬೆಳದಿಂಗಳು ಚೆಲ್ಲಿದವರು, ನಮ್ಮ ‘ಭಜರಂಗ’ದ ಗೆಳೆಯರು. ಅವರ ಆಜ್ಞೆಗೆ ‘ಜೀ ಹುಜೂರ್’ ಎಂದವರು, ನನ್ನ ಫೋನ್’ನಲ್ಲಿ ‘ಜೇಲ್ ಡೈರೆಕ್ಟರ್’ ಅಂತನೇ ಸೇವ್ ಆಗಿರುವ ಹುಲಿಗಪ್ಪ ಕಟ್ಟೀಮನಿಯವರು, ಅವರ ಹಲವು ನಾಟಕಗಳನ್ನು ನೋಡಿದ್ದೆ. ಸಂತೋಷಪಟ್ಟಿದ್ದೆ. ಆದರೆ ನಿನ್ನೆ ಈ ನಾಟವನ್ನು ನೋಡಿದಾಗ ಹಾಗಾಗಲಿಲ್ಲ. ಹೇಗೆ ಹೇಗೋ ಆಯಿತು.
ಸ್ವತಃ ಹುಲಿಗಪ್ಪನವರೇ ಪ್ರಮುಖ ಪಾತ್ರದಲ್ಲಿ ಬಿಜಿಯಾಗಿದ್ದುದರಿಂದಲೋ ಏನೋ, ಮೂವರು ಹೆಣ್ಣು ಮಕ್ಕಳಂತೆಯೇ ಅವರ ಅಮ್ಮನಾಗಿ ಪಾತ್ರವಹಿಸಿದಾಕೆಯೂ ಬಹಳ ನಿರ್ಬಿಡೆಯಿಂದ ನಟಿಸಿದ್ದರು. ತಾನು ಮನೆಯನ್ನು ತೊರೆದು ಹೊರಡುವ ಆ ನೋವಿನ ಹೊತ್ತಿನಲ್ಲೂ, ಕಸ ಗುಡಿಸಿ ಹೊಸದಾಗಿ ಬರುವವರಿಗೆ ಮನೆ ಸಿದ್ಧಗೊಳಿಸುವ ದೃಶ್ಯವನ್ನು ನೋಡಲಾಗದೆ ಕಣ್ಣು ಮುಚ್ಚಿಕೊಂಡೆ.
ಈಗ ಇಷ್ಟು ಸಾಕು. ಮುಂದಿನ ಎಂದಾದರೂ ಒಂದು ದಿನ ‘ಜೊತೆಗಿರುವನು ಚಂದಿರ’ ನಾಟಕವನ್ನು ನೀವೇ ನೋಡಿದಾಗ, ಅದರಲ್ಲಿ ಯಾರೇ ನಟಿಸಿದ್ದಿರಲಿ, ಯಾರೇ ನಿರ್ದೇಶಿದ್ದಿರಲಿ ನಾಟಕದ ಪಾತ್ರಧಾರಿಗಳನ್ನಾಗಲೀ, ಅವರ ದೇಹಕ್ಕೆ ಬೆಳಕು ಬೀರಿದವರನ್ನಾಗಲೀ, ನಾಟಕಕ್ಕೆ ಸಂಗಿತಸಾಥ್ ಕೊಟ್ಟವರನ್ನಾಗಲೀ ಮೆಚ್ಚಿಕೊಳ್ಳದಿರಲು ಕಾರಣಗಳೇ ಸಿಗಲಾರದು.
ಕೊನೆಗೂ ನನಗರ್ಥವಾಗದ ಒಂದೇ ಒಂದು ಪ್ರಶ್ನೆಯೆಂದರೆ, ಶಿವಮೊಗ್ಗದಲ್ಲಿ ಅಂದು ಈ ನಾಟಕದ ಪ್ರದರ್ಶನವನ್ನು ವಿರೋಧಿಸಿದ್ದ ಸಂಘಟನೆಯವರು, ಒಳಗಿನವರಾ ಹೊರಗಿನವರಾ?
ಇದನ್ನೂ ನೋಡಿ: ಕಟ್ಟಡ ಕಟ್ಟೋವಾಗ ಬಿದ್ದರೂ ಕೇಳೋರಿಲ್ಲ | ಕಟ್ಟಡ ಕಾರ್ಮಿಕರ ಪ್ರತಿಭಟನೆ |CITU AITUC INTU AICCTU