ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ. ನಾಗರಾಜ್
ಇದಕ್ಕೆ ಉಕ್ರೇನ್ ಯುದ್ಧದಿಂದಾಗಿ ಉಂಟಾದ ಇಂಧನ ಮತ್ತು ಆಹಾರ ಪದಾರ್ಥಗಳ ಕೊರತೆಯೇ ಕಾರಣ ಎನ್ನುವ ನಿರೂಪಣೆ ಸರಿಯಲ್ಲ. ಏಕೆಂದರೆ ಉಕ್ರೇನ್ ಯುದ್ಧಕ್ಕೆ ಮುಂಚಿತವಾಗಿಯೇ ಅದು ವೇಗವಾಗಿ ಏರುತ್ತಿತ್ತು. ಯುದ್ಧದ ಹಿನ್ನೆಲೆಯಲ್ಲಿ ಉಂಟಾದ ಕೊರತೆಗಳಾಗಲಿ, ರಷ್ಯಾದ ಮೇಲೆ ವಿಧಿಸಲಾದ ನಿರ್ಬಂಧಗಳಾಗಲಿ ಕಾರಣವಲ್ಲ, ಸರಕು-ಸಾಮಗ್ರಿಗಳ ಕೊರತೆಯ ನಿರೀಕ್ಷೆಯನ್ನು ಇಂಧನ ವ್ಯಾಪಾರಿಗಳು ತಮ್ಮ ಲಾಭದ ಅಂತರವನ್ನು ಯದ್ವಾ-ತದ್ವಾ ಹೆಚ್ಚಿಸಲು ಪರಿಸ್ಥಿತಿಯನ್ನು ಬಳಸಿಕೊಳ್ಳುತ್ತಿರುವುದು ಕಾರಣ. ಲಾಭಕ್ಕಾಗಿ ಹಪಹಪಿಸುವ ಅಮೇರಿಕನ್ ಮಿಲಿಟರಿ-ಕೈಗಾರಿಕಾ ಸಮೂಹದ ದುರಾಸೆ ಮತ್ತು “ನವ-ಸಂಪ್ರದಾಯಶರಣ” ಸಿದ್ಧಾಂತವು ಪ್ರೇರೇಪಿಸಿರುವ ಈ ಯುದ್ಧದಲ್ಲಿ ಯುರೋಪಿಯನ್ ಕಾರ್ಮಿಕರು ಬಲಿ ಪಶುಗಳಾಗುತ್ತಿದ್ದಾರೆ. ಇದರಿಂದಾಗಿ ಯೂರೋಪಿನ ಅನೇಕ ದೇಶಗಳಲ್ಲಿ ಕಾರ್ಮಿಕ ವರ್ಗವು ತನ್ನ ಪ್ರತಿರೋಧದ ಮಟ್ಟವನ್ನು ಎತ್ತರಿಸಿರುವುದರಲ್ಲಿ ಆಶ್ಚರ್ಯವೇನಿಲ್ಲ.
ಯುರೋ ವಲಯದ ವಾರ್ಷಿಕ ಹಣದುಬ್ಬರ ದರವು ಇದೇ ಮೊದಲ ಸಲ ಎರಡಂಕಿಯ ಮಟ್ಟವನ್ನು ದಾಟಿದೆ. 2022ರ ಅಗಸ್ಟ್ ನಲ್ಲಿ ಶೇ. 9.1ರ ಮಟ್ಟದಲ್ಲಿದ್ದ ಹಣದುಬ್ಬರ ದರವು ಸೆಪ್ಟೆಂಬರ್‌ನಲ್ಲಿ ಶೇ. 10ಕ್ಕಿಂತಲೂ ಮೇಲಿದೆ. ಇಂಧನ ಮತ್ತು ಆಹಾರ ಬೆಲೆಗಳ ತೀವ್ರ ಏರಿಕೆಯಿಂದಾಗಿ ಹಣದುಬ್ಬರವು ನಾಗಾಲೋಟದಲ್ಲಿ ಏರುತ್ತಿದೆ. ಇಂಧನ ಬೆಲೆಗಳು ಶೇ.41ರಷ್ಟು ಮತ್ತು ಆಹಾರ ಪದಾರ್ಥಗಳ ಬೆಲೆಗಳು ಶೇ.13ರಷ್ಟು ಏರಿಕೆಯಾಗಿವೆ. ಇಂಧನ ಮತ್ತು ಆಹಾರ ಪದಾರ್ಥಗಳ ಬೆಲೆಗಳ ಏರಿಕೆ ಮಾತ್ರವೇ ಹಣದುಬ್ಬರವಾಗಲು ಕಾರಣವಲ್ಲ. ಇಂಧನ ಮತ್ತು ಆಹಾರ ಪದಾರ್ಥಗಳನ್ನು ಒಂದು ವೇಳೆ ಹಣದುಬ್ಬರದ ಲೆಕ್ಕಾಚಾರದಿಂದ ಹೊರಗಿಟ್ಟು ನೋಡಿದರೂ ಸಹ, ಉಳಿದ ಎಲ್ಲ ಸರಕುಗಳ ಹಣದುಬ್ಬರ ದರವು ಆಗಸ್ಟ್ ನ ಶೇ. 5.5ರಿಂದ ಸೆಪ್ಟೆಂಬರ್‌ನಲ್ಲಿ ಶೇ. 6.1ಕ್ಕೆ ಏರಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ನಡುವಿನ ಹಣದುಬ್ಬರ ದರದ ಮೂರನೇ ಎರಡರಷ್ಟು ಹೆಚ್ಚಳವು ಇಂಧನ ಮತ್ತು ಆಹಾರೇತರ ಸರಕುಗಳ ಕಾರಣದಿಂದಾಗಿತ್ತು. ಹಾಗಾಗಿ, ಉಕ್ರೇನ್ ಯುದ್ಧದಿಂದಾಗಿ ಉಂಟಾದ ಇಂಧನ ಮತ್ತು ಆಹಾರ ಪದಾರ್ಥಗಳ ಕೊರತೆಯೇ ಹಣದುಬ್ಬರದ ವೇಗೋತ್ಕರ್ಷಕ್ಕೆ ಕಾರಣ ಎನ್ನುವ ನಿರೂಪಣೆ ಸರಿಯಲ್ಲ.
ಇತರ ಎರಡು ಕಾರಣಗಳಿಂದಾಗಿಯೂ ಈ ನಿರೂಪಣೆ ಅಸತ್ಯವೇ. ಮೊದಲನೆಯದಾಗಿ, ಹಣದುಬ್ಬರವು ಉಕ್ರೇನ್ ಯುದ್ಧಕ್ಕೆ ಮುಂಚಿತವಾಗಿಯೇ ವೇಗವಾಗಿ ಏರುತ್ತಿತ್ತು. ಹಿಂದಿನ ವರ್ಷಕ್ಕೆ (2021ಕ್ಕೆ) ಹೋಲಿಸಿದರೆ, ವಾರ್ಷಿಕ ಹಣದುಬ್ಬರ ದರವು 2017ರಲ್ಲಿ 1.3%, 2018ರಲ್ಲಿ 1.5%, 2019ರಲ್ಲಿ 1.3% ಮತ್ತು 2020 ರಲ್ಲಿ -0.3% ಇತ್ತು. ಉಕ್ರೇನ್ ಯುದ್ಧ ಪ್ರಾರಂಭವಾಗುವ ಮೊದಲೇ (ಅಂದರೆ, 2021ರಲ್ಲೇ) ಹಣದುಬ್ಬರವು 5%ಗೆ ಏರಿತ್ತು. ಎರಡನೆಯದಾಗಿ, ಉಕ್ರೇನ್ ಯುದ್ಧಕ್ಕೂ ಮೊದಲೇ ಇದ್ದ ಹಣದುಬ್ಬರದ ಈ ವೇಗೋತ್ಕರ್ಷವು, ಯಾವುದೇ ಸರಕುಗಳ ನೈಜ ಕೊರತೆಯ ಕಾರಣದಿಂದ ಆದದ್ದಲ್ಲ. ಕೋವಿಡ್-19 ಪರಿಣಾಮವಾಗಿ ನಿಶ್ಚಲಗೊಂಡ ಬಂಡವಾಳಶಾಹಿ ಅರ್ಥವ್ಯವಸ್ಥೆಯು ಜಾಗತಿಕವಾಗಿ ಯಥಾ ಸ್ಥಿತಿಗೆ ಮರಳುತ್ತಿದ್ದಂತೆಯೇ, ಈ ನಿಶ್ಚಲತೆಯ ಪರಿಣಾಮವಾಗಿ ಸಂಭವಿಸಬಹುದಾದ ಕೊರತೆಗಳ ನಿರೀಕ್ಷೆಯಲ್ಲಿ ಲಾಭದ-ಅಂತರ ಹೆಚ್ಚಿತು. ಹಾಗಾಗಿ, ಬೆಲೆಗಳೂ ಹೆಚ್ಚಿದವು. ಈಗ ಸಂಭವಿಸುತ್ತಿರುವ ಹಣದುಬ್ಬರದ ವೇಗವರ್ಧನೆಗೆ ಯುದ್ಧದಿಂದ ಉಂಟಾದ ಕೊರತೆಗಳಾಗಲಿ ಅಥವಾ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾದ ಮೇಲೆ ವಿಧಿಸಲಾದ ನಿರ್ಬಂಧಗಳಾಗಲಿ ಕಾರಣವಲ್ಲ. ಸರಕು-ಸಾಮಗ್ರಿಗಳ ಕೊರತೆಯ ನಿರೀಕ್ಷೆಯಲ್ಲಿ ಲಾಭದ-ಅಂತರವನ್ನು ಹೆಚ್ಚಿಸಲಾದ ಪರಿಣಾಮವಾಗಿ ಬೆಲೆಗಳು ಹೆಚ್ಚುತ್ತಿವೆ. ಈ ಕಾರಣದಿಂದಾಗಿ ಹಣದುಬ್ಬರವು ವೇಗೋತ್ಕರ್ಷ ಪಡೆದಿದೆ.
ನಿಜ ಕಾರಣ
ಈ ಉದಾಹರಣೆಯು ಹಣದುಬ್ಬರದ ವೇಗೋತ್ಕರ್ಷದ ಕಾರಣವನ್ನು ಸ್ಪಷ್ಟಪಡಿಸುತ್ತದೆ: ವಿದ್ಯುತ್ತಿನ ಏರುತ್ತಿರುವ ಖರ್ಚುಗಳಿಂದಾಗಿ ಸ್ಲೋವಾಕಿಯಾದ ಅರ್ಥವ್ಯವಸ್ಥೆಯು “ಕುಸಿತದ” ಅಂಚಿನಲ್ಲಿದೆ ಎಂಬುದಾಗಿ ಆ ದೇಶದ ಪ್ರಧಾನ ಮಂತ್ರಿಯು ಜನರನ್ನು ಎಚ್ಚರಿಸಿದ್ದರು. ದೇಶದ ವಿದ್ಯುತ್ ಪೂರೈಕೆಯನ್ನು ರಾಷ್ಟ್ರೀಕರಣಗೊಳಿಸುವುದಾಗಿ ಅವರು ಬೆದರಿಕೆ ಹಾಕಿದ್ದರು ಎಂದು ಸೆಪ್ಟೆಂಬರ್ 28ರ ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ. ಈ ಬೆದರಿಕೆ ಹಾಕಿದ ಕಾರಣವೆಂದರೆ, ಆ ದೇಶದ ಅತಿ ದೊಡ್ಡ ಇಂಧನ ಪೂರೈಕೆ ಸಂಸ್ಥೆಯು ತನ್ನ ಹೆಚ್ಚುವರಿ ವಿದ್ಯುತ್‌ಅನ್ನು ಇಂಧನ ವ್ಯಾಪಾರಿಗಳಿಗೆ ಮಾರಾಟ ಮಾಡುವುದಾಗಿ ಈ ವರ್ಷದ ಆರಂಭದಲ್ಲಿ ನಿರ್ಧರಿಸಿತ್ತು. ಈಗ, ಈ ವ್ಯಾಪಾರಿಗಳು ವಿದ್ಯುತ್‌ಅನ್ನು ಐದು ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡಲು ಸ್ಲೊವಾಕಿಯಾದ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದ್ದಾರೆ. ವಿಷಯವೆಂದರೆ, ಈ ಅವಧಿಯಲ್ಲಿ ವಿದ್ಯುತ್ ಉತ್ಪಾದನೆಯ ವೆಚ್ಚ ಸುಮಾರು ಐದು ಪಟ್ಟು ಹೆಚ್ಚಾಗಿದೆ ಎಂದಲ್ಲ. ಸಂಗತಿ ಏನೆಂದರೆ, ಇಂಧನ ವ್ಯಾಪಾರಿಗಳು ತಮ್ಮ ಲಾಭದ ಅಂತರವನ್ನು ಯದ್ವಾ-ತದ್ವಾ ಹೆಚ್ಚಿಸುವ ಉದ್ದೇಶಕ್ಕಾಗಿ ಪರಿಸ್ಥಿತಿಯನ್ನು ಬಳಸಿಕೊಳ್ಳುತ್ತಿದ್ದಾರೆ.
ಚಳಿಗಾಲ ಸಮೀಪಿಸುತ್ತಿರುವಾಗ ಹಣದುಬ್ಬರದ ಈ ವೇಗೋತ್ಕರ್ಷವು ಮುಂದುವರಿಯಲಿದೆ. ಮುಂಬರುವ ತಿಂಗಳುಗಳಲ್ಲಿ ಯುರೋಪಿಯನ್ ಒಕ್ಕೂಟದಲ್ಲಿ ಹಣದುಬ್ಬರವು 20% ತನಕ ಏರಬಹುದು ಎಂದು ಕೆಲವರು ಭವಿಷ್ಯ ನುಡಿದಿದ್ದಾರೆ. ಕಾರಣವೆಂದರೆ, ಮೂರನೇ ವಿಶ್ವದ ಅನೇಕ ದೇಶಗಳ ಕರೆನ್ಸಿಗಳ ರೀತಿಯಲ್ಲಿ, ಯುರೋ ಕರೆನ್ಸಿಯೂ ಸಹ ಡಾಲರ್ ವಿರುದ್ಧ ಕುಸಿಯುತ್ತಿದೆ. ಇಂಧನದ ಅಂತಾರಾಷ್ಟ್ರೀಯ ಬೆಲೆಗಳನ್ನು ಡಾಲರ್ ಕರೆನ್ಸಿಯಲ್ಲಿ ನಿಗದಿಪಡಿಸಲಾಗಿರುವುದರಿಂದ ಯುರೋ ಕರೆನ್ಸಿಯ ಕುಸಿತದಿಂದಾಗಿ ಯುರೋಪಿನ ದೇಶಗಳಲ್ಲಿ ಇಂಧನದ ಬೆಲೆಗಳು ಮತ್ತಷ್ಟು ಏರುತ್ತವೆ. ರಷ್ಯಾದಿಂದ ಪಶ್ಚಿಮ ಯೂರೋಪಿಗೆ ಸರಬರಾಜಾಗುವ ಅನಿಲದ ನಾರ್ಡ್ ಸ್ಟ್ರೀಮ್ 1 ಕೊಳವೆಯನ್ನು ಸ್ಫೋಟಿಸಲಾಗಿದೆ. ಇದು ಅಮೆರಿಕಾದ ಕೈವಾಡವೇ ಎಂದು ಅನೇಕರು ನಂಬುತ್ತಾರೆ. ಅಮೆರಿಕ ಇದನ್ನು ಒಂದು “ಅದ್ಭುತ ಅವಕಾಶ”ವೆಂದು ಪರಿಗಣಿಸಿರುವುದು ಗಮನಾರ್ಹವಾಗಿದೆ. ಅನಿಲದ ಪೂರೈಕೆಯನ್ನು ಪುನರಾರಂಭಿಸುವ ಬಗ್ಗೆ ಉಭಯ ಪಕ್ಷಗಳು ಶೀಘ್ರದಲ್ಲೇ ಒಂದು ಒಪ್ಪಂದಕ್ಕೆ ಬಂದರೂ ಸಹ, ಅದರ ಅನುಷ್ಠಾನವು ನಿಧಾನವಾಗಬಹುದು. ಈ ಹಿನ್ನೆಲೆಯಲ್ಲಿ, ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಅಕ್ಟೋಬರ್ 27 ರಂದು ನಡೆಯಲಿರುವ ತನ್ನ ಮುಂಬರುವ ಸಭೆಯಲ್ಲಿ ಹಣದುಬ್ಬರವನ್ನು ಎದುರಿಸುವ ಸಾಧನವಾಗಿ ಬಡ್ಡಿದರಗಳನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯು ಸಾಮಾನ್ಯವಾಗಿದೆ.
ಹಣದುಬ್ಬರ-ಬಡ್ಡಿ ದರ ಮತ್ತು ನಿರುದ್ಯೋಗ
ಆದರೆ, ಹಣದುಬ್ಬರವನ್ನು ಎದುರಿಸುವಲ್ಲಿ ಬಡ್ಡಿ ದರದ ಏರಿಕೆಯು ಹೇಗೆ ನೆರವಾಗುತ್ತದೆ ಎಂಬ ಪ್ರಶ್ನೆಯನ್ನು ಕೇಳಬೇಕಾಗುತ್ತದೆ. ಯುರೋಪಿಯನ್ ಸೆಂಟ್ರಲ್ ಬ್ಯಾಂಕಿನ ಅಧ್ಯಕ್ಷೆ ಕ್ರಿಸ್ಟೀನ್ ಲಗಾರ್ಡ್, ಹಣದುಬ್ಬರದ ನಿರೀಕ್ಷೆಗಳನ್ನು ಹುಸಿಗೊಳಿಸಲು ಬಡ್ಡಿ ದರ ಏರಿಕೆಯ ಕ್ರಮ ಅಗತ್ಯವೆಂದು ಹೇಳುತ್ತಾರೆ. ಇದು ನಿಜವೂ ಹೌದು. ಹಣದುಬ್ಬರವನ್ನು ಬಹುಮಟ್ಟಿಗೆ ನಿಗ್ರಹಿದಾಗ ಮಾತ್ರ ಹಣದುಬ್ಬರದ ನಿರೀಕ್ಷೆಗಳನ್ನು ಹುಸಿಗೊಳಿಸಬಹುದು ಎಂಬುದು ನಿಜವೇ. ಆದರೆ, ಇಲ್ಲಿರುವ ಪ್ರಶ್ನೆ ಎಂದರೆ, ವಾಸ್ತವವಾಗಿ ಇದು ಆಗುವುದಾದರೂ ಹೇಗೆ? ಈ ಪ್ರಶ್ನೆಗೆ ಸರಳ ಉತ್ತರವೆಂದರೆ: ನಿರುದ್ಯೋಗವನ್ನು ಸೃಷ್ಟಿಸುವ ಮೂಲಕ. ನಿರುದ್ಯೋಗವು ಶ್ರಮಶಕ್ತಿಯ ಮೇಲಿನ ಬೇಡಿಕೆಯನ್ನು ಇಳಿಸುತ್ತದೆ ಮತ್ತು ಶ್ರಮಶಕ್ತಿಯ ಇಳಿಕೆಗೆ ಕಾರಣವೂ ಆಗುತ್ತದೆ. ಹೇಗೆಂದರೆ, ಬಡ್ಡಿ ದರ ಏರಿಕೆಯು ಅರ್ಥವ್ಯಸ್ಥೆಯಲ್ಲಿ ಹೂಡಿಕೆಯನ್ನು ತಗ್ಗಿಸುತ್ತದೆ ಮತ್ತು ಆ ಮೂಲಕವಾಗಿ ಶ್ರಮಶಕ್ತಿಯ ಮೇಲಿನ ಬೇಡಿಕೆಯನ್ನು ಇಳಿಸುತ್ತದೆ, ಮತ್ತು, ನಿರುದ್ಯೋಗವು ದುಡಿಯುವ ವರ್ಗದ ಕೈಯಲ್ಲಿನ ಕೊಳ್ಳುವ ಶಕ್ತಿಯನ್ನು ಕಡಿಮೆ ಮಾಡುವ ಮೂಲಕ ಶ್ರಮಶಕ್ತಿಯ ಮೇಲಿನ ಬೇಡಿಕೆಯ ಇಳಿಕೆಗೆ ಕಾರಣವಾಗುತ್ತದೆ. ಅದರಿಂದಾಗಿ, ಶ್ರಮಶಕ್ತಿಯೂ ಸೇರಿದಂತೆ ಎಲ್ಲಾ ರೀತಿಯ ಸರಕುಗಳು ಮತ್ತು ಸೇವೆಗಳಿಗೆ ಬೇಡಿಕೆ ಕಡಿಮೆಯಾಗುತ್ತದೆ. ಹೀಗೆ, ಶ್ರಮಶಕ್ತಿಯ ಮೇಲಿನ ಬೇಡಿಕೆಯ ಇಳಿಕೆಯು ನಿರುದ್ಯೋಗ ಹೆಚ್ಚಳದ ಇನ್ನೊಂದು ಮಗ್ಗುಲೇ ಆಗಿರುತ್ತದೆ. ಹಣದುಬ್ಬರದ ನಿರೀಕ್ಷೆಗಳನ್ನು ಈ ರೀತಿಯಲ್ಲಿ ಎದುರಿಸಲಾಗುತ್ತದೆ ಎಂಬುದನ್ನು ಕ್ರಿಸ್ಟೀನ್ ಲಗಾರ್ಡ್ ಒಪ್ಪಿಕೊಳ್ಳುತ್ತಾರೆ ಮತ್ತು ಈ ಕ್ರಮವು ಸಂಸ್ಥೆಗಳು ಹಣದುಬ್ಬರದ ನಿರೀಕ್ಷೆಯ ಮೇಲೆ ಲಾಭದ ಅಂತರವನ್ನು ಹೆಚ್ಚಿಸುವುದನ್ನು ತಡೆಯುತ್ತದೆ ಎಂದು ನಂಬುತ್ತಾರೆ.
ಹಣದುಬ್ಬರವನ್ನು ಕಡಿಮೆ ಮಾಡುವಲ್ಲಿ ನಿರುದ್ಯೋಗವು ಇನ್ನೂ ಒಂದು ರೀತಿಯ ಪರಿಣಾಮ ಬೀರುತ್ತದೆ. ನಿರುದ್ಯೋಗದ ಮೊದಲ ಪರಿಣಾಮವು, ವೇತನವು ಯಾವುದೇ ನಿರ್ದಿಷ್ಟ ಮಟ್ಟದಲ್ಲಿದ್ದರೂ ಸಹ ಕಾರ್ಮಿಕರ ಕೈಯಲ್ಲಿ ಕೊಳ್ಳುವ ಶಕ್ತಿಯನ್ನು ಕಡಿಮೆಮಾಡುವ ಮೂಲಕ ಕಾರ್ಯನಿರ್ವಹಿಸಿದರೆ, ಎರಡನೆಯದು ವೇತನದ ದರವನ್ನು ಇಳಿಸುವ ಮೂಲಕ ಕಾರ್ಮಿಕರ ಕೊಳ್ಳುವ ಶಕ್ತಿಯನ್ನು ಕಡಿಮೆ ಮಾಡುವ ಕಾರ್ಯನಿರ್ವಹಿಸುತ್ತದೆ. ಬೆಲೆಗಳು ಏರುತ್ತಿರುವ ಕಾಲದಲ್ಲಿ ಕಾರ್ಮಿಕರ ಚೌಕಾಶಿಯ ಶಕ್ತಿಯನ್ನು ದುರ್ಬಲಗೊಳಿಸಿರುವುದನ್ನು ಖಚಿತಪಡಿಸಿಕೊಂಡ ನಂತರ ಬೆಲೆಗಳು ಏರಿದ ಮಟ್ಟಕ್ಕೆ ಸರಿ-ಸಮನಾಗುವಷ್ಟು ಹಣ-ವೇತನವನ್ನು ಅವರಿಗೆ ಕೊಡುವುದಿಲ್ಲ.
ಈ ಎರಡೂ ಪರಿಣಾಮಗಳೂ ಒಟ್ಟಾಗಿ ಸೇರಿಕೊಳ್ಳುತ್ತವೆ ಮತ್ತು ಅದರ ನಿವ್ವಳ ಫಲಿತಾಂಶವೆಂದರೆ ಹಣದುಬ್ಬರದ ಒತ್ತಡಗಳನ್ನು ನಿರುದ್ಯೋಗದ ಹೆಚ್ಚಳದ ಮೂಲಕ ಎದುರಿಸಲಾಗುತ್ತದೆ ಮತ್ತು ಅದರಿಂದಾಗಿ ಕೊಳ್ಳುವ ಶಕ್ತಿಯು ಕಡಿತಗೊಳ್ಳುತ್ತದೆ. ಇದುವೇ ಹಣದುಬ್ಬರವನ್ನು ಎದುರಿಸುವ ಬಂಡವಾಳಶಾಹಿಯ ಮಾರ್ಗ. ಇದು ದುಡಿಯುವ ವರ್ಗವನ್ನು ಅನಿವಾರ್ಯವಾಗಿ ತೊಂದರೆಗಳಿಗೆ ಒಡ್ಡುತ್ತದೆ. ಹಣದುಬ್ಬರವನ್ನು ಎದುರಿಸುವ ಈ ವಿಧಾನದ ಬಗ್ಗೆ ಯಾವ ನಿಗೂಢತೆಯೂ ಇಲ್ಲ ಅಥವಾ ಅದು ಅನಿವಾರ್ಯವೂ ಅಲ್ಲ. ನಿಜ-ವೇತನದ ಕಡಿತವು ಹಣದುಬ್ಬರವನ್ನು ಹೇಗೆ ಎದುರಿಸುತ್ತದೆ ಎಂಬುದರ ಬಗ್ಗೆ ವಿವರಣೆಯೇ ಇಲ್ಲ. ಆದರೂ, ಅದು ಹೇಗೋ ಏನೋ, ಬಡ್ಡಿ ದರ ಏರಿಕೆಯು ಹಣದುಬ್ಬರದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಸೋಗು ಹಾಕುವ ಮೂಲಕ ಈ ಪ್ರಕ್ರಿಯೆಗೆ ಒಂದು ನಿಗೂಢತೆಯ ವೇಷವನ್ನು ತೊಡಿಸಲಾಗಿದೆ ಮತ್ತು ಹಣದುಬ್ಬರವನ್ನು ಎದುರಿಸಲು ಎಲ್ಲ ದೇಶಗಳೂ ಈ ವಿಧಾನವನ್ನೇ ಬಳಸಬೇಕಾಗುತ್ತದೆ ಎಂಬ ಸುಳ್ಳು ಹೇಳಿಕೆಯ ಮೂಲಕ ಈ ಪ್ರಕ್ರಿಯೆಯೊಂದಿಗೆ ಒಂದು ಅನಿವಾರ್ಯತೆಯನ್ನು ಜೋಡಿಸಲಾಗಿದೆ. ಅದೇನೇ ಇರಲಿ, ಈ ನಿಗೂಢತೆಯು ಬಹಿರಂಗವಾದ ಕೂಡಲೇ ಬಡ್ಡಿ ದರದ ಏರಿಕೆಯು ಹೊಂದಿರುವ ಸಾಮರ್ಥ್ಯವು ಅದರ ಕಾರ್ಯವಿಧಾನದಲ್ಲಿ ನಿರುದ್ಯೋಗ ಸೃಷ್ಟಿಯನ್ನು ಒಳಗೊಂಡಿದೆ ಎಂಬುದು ಕಂಡುಬರುತ್ತದೆ. ಒಂದು ಸಮಾಜವಾದಿ ಅರ್ಥವ್ಯವಸ್ಥೆಯಲ್ಲಿ, ಅಥವಾ ನಿರುದ್ಯೋಗದ ಏರಿಕೆಯನ್ನು ತಡೆಗಟ್ಟಲು ಉತ್ಸುಕವಾಗಿರುವ ಮೂರನೇ ವಿಶ್ವದ ನಿಯಂತ್ರಣ ನೀತಿಯ (dirigiste) ಅರ್ಥವ್ಯವಸ್ಥೆಯಲ್ಲಿಯೂ ಸಹ, ಬೆಲೆ-ನಿಯಂತ್ರಣ ಮತ್ತು ಸರಕುಗಳ ಪಡಿತರಗಳ ಸಂಯೋಜನೆಯೊAದಿಗೆ ಹಣದುಬ್ಬರವನ್ನು ನಿಯಂತ್ರಿಸಬಹುದು ಎಂಬುದು ಸ್ಪಷ್ಟವಾಗುತ್ತದೆ.
ಯುರೋಪಿಯನ್ ಕಾರ್ಮಿಕ ವರ್ಗ-ಸಂಕಷ್ಟ ಮತ್ತು ಪ್ರತಿರೋಧ
ಒಂದು ಗಂಭೀರ ಹಣದುಬ್ಬರದೊಂದಿಗೆ ಹೆಣಗಾಡುತ್ತಿರುವ ಯೂರೋಪ್, ಒಂದು ಬಂಡವಾಳಶಾಹಿ ಅರ್ಥವ್ಯವಸ್ಥೆಯು ಹಣದುಬ್ಬರವನ್ನು ನಿಯಂತ್ರಿಸುವ ಏಕ ಮಾತ್ರ ರೀತಿಯಲ್ಲಿ, ಅಂದರೆ, ಕಾರ್ಮಿಕರನ್ನು ತೊಂದರೆಗಳಿಗೆ ದೂಡಿ, ದುಡಿಯುವ ವರ್ಗವನ್ನು ಹಿಂಡುವ ಮೂಲಕ ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಯುಕ್ರೇನ್ ಯುದ್ಧದ ಮುಂದುವರಿಕೆಯ ಭಾಗವಾಗಿ, ಅಮೆರಿಕದ ಅಪ್ಪಣೆಯ ಮೇರೆಗೆ ರಷ್ಯಾದ ಮೇಲೆ ಹೇರಿದ ನಿರ್ಬಂಧಗಳಿಂದಾಗಿ ಯುರೋಪಿನಲ್ಲಿ ಇತ್ತೀಚೆಗೆ ಹಣದುಬ್ಬರವು ವೇಗವರ್ಧನೆ ಪಡೆದಿರುವುದರಿಂದಾಗಿ, ಯುರೋಪಿಯನ್ ಕಾರ್ಮಿಕ ವರ್ಗವನ್ನು ಸಂಕಷ್ಟಗಳಿಗೆ ತಳ್ಳಿರುವ ಅಮೆರಿಕವೇ ರಷ್ಯಾದ ವಿರುದ್ಧ ಯುದ್ಧದಲ್ಲಿ ತೊಡಗಿದೆ ಎಂಬುದನ್ನು ಔಚಿತ್ಯಪೂರ್ಣವಾಗಿ ಹೇಳಬಹುದು. ಸಂಕ್ಷಿಪ್ತವಾಗಿ ಹೇಳುವುದಾದರೆ, ಅಮೆರಿಕದ ಬೃಹತ್-ಸಾಮ್ರಾಜ್ಯಶಾಹಿಯ ಪೋಷಣೆಯ ಉದ್ದೇಶ ಹೊಂದಿದ ಈ ಯುದ್ಧದಲ್ಲಿ ಯುರೋಪಿಯನ್ ಕಾರ್ಮಿಕರು ಬಲಿ ಪಶುಗಳಾಗುತ್ತಿದ್ದಾರೆ. ಲಾಭಕ್ಕಾಗಿ ಹಪಹಪಿಸುವ ಅಮೇರಿಕನ್ ಮಿಲಿಟರಿ-ಕೈಗಾರಿಕಾ ಸಮೂಹದ ದುರಾಸೆ ಮತ್ತು “ನವ-ಸಂಪ್ರದಾಯಶರಣ” ಸಿದ್ಧಾಂತವು ಈ ಯುದ್ಧಕ್ಕೆ ಹೆಚ್ಚು ಪ್ರೇರಣೆಯನ್ನು ಒದಗಿಸಿರುವುದು ಸಹಜವೇ. ಉಕ್ರೇನ್‌ಗೆ ನ್ಯಾಟೋ-ಸದಸ್ಯತ್ವ ನೀಡುವ ಅಮೆರಿಕದ ಪ್ರಸ್ತಾಪದ ಬಗ್ಗೆ ಹೆನ್ರಿ ಕಿಸಿಂಜರ್ ಅವರಂತಹ ಒಬ್ಬ ವ್ಯಕ್ತಿ ಕೂಡ “ಅದು ಬುದ್ಧಿವಂತಿಕೆಯಲ್ಲ” ಎಂದು ಹೇಳಿರುವುದು ಗಮನಾರ್ಹವಾಗಿದೆ.
ಈ ಎಲ್ಲ ಬೆಳವಣಿಗೆಗಳ ಬಗ್ಗೆ ಯೂರೋಪಿನ ಅನೇಕ ದೇಶಗಳಲ್ಲಿ ಕಾರ್ಮಿಕ ವರ್ಗವು ತನ್ನ ಪ್ರತಿರೋಧದ ಮಟ್ಟವನ್ನು ಎತ್ತರಿಸಿರುವುದರಲ್ಲಿ ಆಶ್ಚರ್ಯವೇನಿಲ್ಲ. ಪ್ರತಿರೋಧವು ಕಾರ್ಮಿಕರ ಮಟ್ಟಿಗೆ ಮಾತ್ರ ಸೀಮಿತಗೊಂಡಿಲ್ಲ. ರಷ್ಯಾದ ಸೈನಿಕರು ಉಕ್ರೇನ್ ಮೇಲೆ ದಾಳಿ ಆರಂಭಿಸಿದ ನಂತರ, ನಾರ್ಡ್ ಸ್ಟ್ರೀಮ್ 2 ಅನಿಲ ಕೊಳವೆ ಮಾರ್ಗವನ್ನು ತೆರೆಯಬೇಕು ಎಂದು ಅದನ್ನು ಕಾರ್ಯನಿರ್ವಹಿಸಲು ಅನುಮತಿಸದ ಜರ್ಮನಿಯನ್ನು ಒತ್ತಾಯಿಸಿ ಆ ದೇಶದ ಸಾವಿರಾರು ಜನರು ಮೆರವಣಿಗೆ ನಡೆಸಿದರು. ಜೆಕ್ ಗಣರಾಜ್ಯದ ರಾಜಧಾನಿ ಪ್ರಾಗ್‌ನಲ್ಲಿ ಸೆಪ್ಟೆಂಬರ್ ತಿಂಗಳೊAದರಲ್ಲೇ ನ್ಯಾಟೋ ವಿರುದ್ಧ ಸಾವಿರಾರು ಜನರು ಎರಡು ಬಾರಿ ಮೆರವಣಿಗೆ ನಡೆಸಿ, ದೇಶವು “ಮಿಲಿಟರಿ ದೃಷ್ಟಿಯಲ್ಲಿ ತಟಸ್ಥ”ವಾಗಿ ಉಳಿಯಬೇಕೆಂದು ಒತ್ತಾಯಿಸಿದ್ದಾರೆ.
ಈ ಪ್ರತಿಭಟನೆಗಳು ಜರ್ಮನಿ ಮತ್ತು ಬ್ರಿಟನ್‌ನಂತಹ ಪ್ರಮುಖ ದೇಶಗಳ ಅಧಿಕೃತ ರಾಜಕೀಯ ಪಕ್ಷಗಳ ಮೇಲೆ ಅಷ್ಟಾಗಿ ಪರಿಣಾಮ ಬೀರಿಲ್ಲ. ಸಂಪ್ರದಾಯಶರಣ ಪಕ್ಷಗಳು ಮಾತ್ರವಲ್ಲ, ಸಾಮಾಜಿಕ ಪ್ರಜಾಪ್ರಭುತ್ವವಾದಿ ಪಕ್ಷಗಳು ಮತ್ತು ಹಿಂದಿನ ಕಮ್ಯುನಿಸ್ಟ್ ಪಕ್ಷಗಳ ಅನುಯಾಯಿಗಳು ಕೂಡ ತಮ್ಮ ದೇಶಗಳ ಸರ್ಕಾರಗಳು ಕೆಲವು ಸಂದರ್ಭಗಳಲ್ಲಿ ಅಮೆರಿಕದ ನೀತಿಗೆ ಬೆಂಬಲ ಕೊಡುವುದನ್ನು ಸಮರ್ಥಿಸುತ್ತಿದ್ದಾರೆ. ಬ್ರಿಟಿಷ್ ಲೇಬರ್ ಪಾರ್ಟಿಯ ಸಮ್ಮೇಳನದಲ್ಲಿ, ಉಕ್ರೇನ್ ಸರ್ಕಾರಕ್ಕೆ ಬ್ರಿಟನ್ ಕೊಡುತ್ತಿರುವ ವಿವೇಚನಾರಹಿತ ಬೆಂಬಲದ ವಿರುದ್ಧ ಮಾತನಾಡಿದ ಏಕೈಕ ಪ್ರತಿನಿಧಿಯನ್ನು ಇತರ ಪ್ರತಿನಿಧಿಗಳು ಬಾಯಿಮುಚ್ಚಿಸಿದ್ದೂ ಅಲ್ಲದೆ, ಪಕ್ಷದಿಂದಲೂ ಅಮಾನತಿನಲ್ಲಿ ಇಟ್ಟಿದ್ದಾರೆ. ದುಡಿಯುವ ಜನರ ಬಗ್ಗೆ ಅಧಿಕೃತ ರಾಜಕೀಯ ಪಕ್ಷಗಳು ಹೊಂದಿರುವ ಈ ಮಟ್ಟದ ನಿರಾಸಕ್ತಿಯ ಲಾಭವನ್ನು ಯುರೋಪಿನ ನವ-ಫ್ಯಾಸಿಸ್ಟರು ಪಡೆಯುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ.