ಸಂಸ್ಥೆಗಳು ಮಹಿಳೆಯರನ್ನು ಒಂದು ಆಸ್ತಿ ಎಂದು ಪರಿಗಣಿಸಬೇಕು ವೈವಿಧ್ಯತೆಯನ್ನು ಸರಿಪಡಿಸುವ ವಿಷಯ ಎಂದಲ್ಲ
ಮೂಲ : ಸುಪ್ರಕಾಶ್ ಚಂದ್ರ ರಾಯ್
ಅನುವಾದ : ನಾ ದಿವಾಕರ
ಲಿಂಗತ್ವದ ವಿಚಾರಗಳು, ನಿರ್ದಿಷ್ಟವಾಗಿ ಉನ್ನತ ಶಿಕ್ಷಣದ ಅಧ್ಯಯನ ವಲಯದಲ್ಲಿ ಲಿಂಗತ್ವ ಅಸಮಾನತೆ ಮತ್ತು ತಾರತಮ್ಯಗಳು, ಮೊಟ್ಟಮೊದಲ ಬಾರಿ ಭಾರತದಲ್ಲಿ ಬೆಳಕಿಗೆ ಬಂದಿದ್ದು 1933ರಲ್ಲಿ. ಕೋಮಲ ಸೋಹೊನೀ ಎಂಬ ವಿದ್ಯಾರ್ಥಿನಿ ಸರ್. ಸಿ ವಿ ರಾಮನ್ ಅವರ ಮಾರ್ಗದರ್ಶನದಲ್ಲಿ ಭೌತಶಾಸ್ತ್ರದಲ್ಲಿ ಸಂಶೋಧನೆ ಕೈಗೊಳ್ಳಲು ಅಪೇಕ್ಷಿಸಿದ್ದರು. ನೊಬೆಲ್ ಪ್ರಶಸ್ತಿ ವಿಜೇತರೂ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರತಿಷ್ಠಿತ ನಿರ್ದೇಶಕರೂ ಆಗಿದ್ದ ಸಿ ವಿ ರಾಮನ್ ಈ ಮನವಿಯನ್ನು, ಆಕೆ ಮಹಿಳೆ ಎಂಬ ಕಾರಣಕ್ಕಾಗಿ ತಿರಸ್ಕರಿಸಿದ್ದರು.
ಲಿಂಗತ್ವ ತಾರತಮ್ಯವನ್ನು ಆಧರಿಸಿದ ಈ ನಿರಾಕರಣೆಯನ್ನು ನಿರ್ಲಕ್ಷಿಸಿ ಸೊಹೊನೀ ನಿರ್ದೇಶಕರ ಕಚೇರಿಯ ಮುಂದೆ ಸತ್ಯಾಗ್ರಹ ಹೂಡಿದ್ದರು. ಆನಂತರ ಆಕೆಗೆ ಒಂದು ವರ್ಷದ ಅವಧಿಗೆ ಷರತ್ತುಬದ್ಧ ಪ್ರವೇಶ ನೀಡಲಾಯಿತು. ಆ ವರ್ಷದಲ್ಲಿ ಆಕೆ ಕೈಗೊಳ್ಳುವ ಸಂಶೋಧನೆಯ ಗುಣಮಟ್ಟ ನಿರ್ದೇಶಕರಿಗೆ ಸಮಾಧಾನಕರವಾಗಿ ಇದ್ದರೆ ಹಾಗೂ ಆಕೆಯ ಇರುವಿಕೆಯು ಸಂಸ್ಥೆಯಲ್ಲಿ ಸಂಶೋಧನೆಯಲ್ಲಿ ತೊಡಗಿರುವ ಪುರುಷ ಸಹೋದ್ಯೋಗಿಗಳ ಚಿತ್ತಭಂಗ ಮಾಡದೆ ಇದ್ದಲ್ಲಿ ಆಕೆಯ ಸಂಶೋಧನೆಯ ಅವಧಿಯನ್ನು ಮಾನ್ಯ ಮಾಡುವುದಾಗಿ ಷರತ್ತು ಹಾಕಲಾಗಿತ್ತು. ಇದೇ ರೀತಿ 1937ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಪ್ರೊ. ಡಿ ಎಮ್ ಬೋಸ್, ಬಿಭಾ ಚೌಧುರಿ ಎಂಬ ಸಂಶೋಧನಾ ವಿದ್ಯಾರ್ಥಿನಿಯನ್ನು ತಮ್ಮ ಸಂಶೋಧನೆಯ ತಂಡದಲ್ಲಿ ಸೇರಿಸಿಕೊಳ್ಳಲು ಹಿಂಜರಿದಿದ್ದರು. ಮಹಿಳೆಯರಿಗೆ ಒಪ್ಪಿಸುವಂತಹ ಸೂಕ್ತ ಸಂಶೋಧನಾ ಯೋಜನೆಗಳು ತಮ್ಮ ಬಳಿ ಇಲ್ಲ ಎನ್ನುವುದು ಅವರ ನಿರಾಕರಣೆಗೆ ಕಾರಣವಾಗಿತ್ತು. ಬಿಬಾ ಚೌಧುರಿ ಇದರಿಂದ ವಿಚಲಿತರಾಗದೆ ತಮ್ಮ ಸಂಶೋಧನೆಯನ್ನು ಮುಂದುವರೆಸಿದ್ದರು. ಮೇಸಾನುಗಳ (ಪರಮಾಣು ಬೀಜದಲ್ಲಿ ಪ್ರೋಟಾನ್ ನ್ಯೂಟ್ರಾನ್‌ಗಳನ್ನು ಬಂಧಿಸುವುದರಲ್ಲಿ ಭಾಗವಹಿಸುವುದೆನ್ನಲಾದ ಮೂಲ ಕಣಗಳ ವರ್ಗಕ್ಕೆ ಸೇರಿದ ಯಾವುದೇ ಕಣ) ಅವಿಚ್ಛಿನ್ನ ರಾಶಿಯನ್ನು ನಿರ್ಧರಿಸುವಲ್ಲಿ ಕಾಸ್ಮಿಕ್ ಕಿರಣಗಳ ಮಹತ್ವವನ್ನು ಕುರಿತು ಆಕೆ ಮಾಡಿದ ಸಂಶೋಧನೆ ಚಾರಿತ್ರಿಕವಾದ ಮಹತ್ವ ಪಡೆದಿದೆ.
ಶೈಕ್ಷಣಿಕ ಅಧ್ಯಯನ ವಲಯದಲ್ಲಿ ಲಿಂಗತ್ವ ತಾರತಮ್ಯದ ಬಗ್ಗೆ ಈ ಎರಡು ಉದಾಹರಣೆಗಳು ಪ್ರಚಲಿತವಾಗಿರುವುದಾದರೂ ಇಂತಹ ನಿದರ್ಶನಗಳು ಹೇರಳವಾಗಿವೆ. 2018ರಲ್ಲಿ ಪೀಸಾ ವಿಶ್ವವಿದ್ಯಾಲಯದ ಪ್ರೊ. ಅಲೆಸ್ಸಾಂಡ್ರೋ ಸ್ಟ್ರುಮಿಯಾ, ತಾತ್ವಿಕ ಭೌತವಿಜ್ಞಾನಿಯಾಗಿ ಸ್ವಿಜರ್ಲೆಂಡಿನಲ್ಲಿರುವ ಪರಮಾಣು ಸಂಶೋಧನೆಯ ಯೂರೋಪಿನ ಸಂಸ್ಥೆ ಸಿಇಆರ್‌ಎನ್(CERN) ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈ ಸಂಸ್ಥೆ ಏರ್ಪಡಿಸಿದ್ದ ಕಾರ್ಯಾಗಾರವೊಂದರಲ್ಲಿ ಮಾತನಾಡುತ್ತಾ ಪ್ರೊ. ಸ್ಟ್ರುಮಿಯಾ “ಭೌತಶಾಸ್ತ್ರದ ಅನ್ವೇಷಣೆಯನ್ನು ಮಾಡಿ ಬೆಳೆಸಿರುವುದು ಪುರುಷರು, ಅದು ಆಹ್ವಾನಿತ ಅನ್ವೇಷಣೆ ಅಲ್ಲ” ಎಂದು ಹೇಳಿದ್ದಲ್ಲದೆ, ಪುರುಷ ವಿಜ್ಞಾನಿಗಳ ವಿರುದ್ಧ ತಾರತಮ್ಯ ಎಸಗುತ್ತಿರುವುದಕ್ಕೆ ಪ್ರತಿಭೆಗಿಂತಲೂ ಸಿದ್ಧಾಂತವೇ ಮೂಲ ಕಾರಣ ಎಂದು ಹೇಳಿದ್ದರು. ತನ್ಮೂಲಕ ಭೌತಶಾಸ್ತ್ರದ ಸಂಶೋಧನೆಯಲ್ಲಿ ಮಹಿಳೆಯರು ಪುರುಷರಷ್ಟು ಸಾಮರ್ಥ್ಯ ಹೊಂದಿರುವುದಿಲ್ಲ ಎಂದು ವ್ಯಾಖ್ಯಾನಿಸಿದ್ದರು. ಈ ಪ್ರಬಂಧ ಮಂಡನೆಯನ್ನು ಸಿಇಆರ್‌ಎನ್ ಸಂಸ್ಥೆಯು ಅಪಮಾನಕರ ಎಂದು ಪರಿಗಣಿಸಿ ಸ್ಟ್ರೂಮಿಯಾ ಅವರನ್ನು ಅಮಾನತಿನಲ್ಲಿರಿಸಿ ತನಿಖೆಯನ್ನೂ ಕೈಗೊಂಡಿತ್ತು. ವಿಡಂಬನೆ ಎಂದರೆ ಮರುದಿನವೇ ಡೋನ್ನಾ ಸ್ಟ್ರಿಕ್‌ಲ್ಯಾಂಡ್ ಅವರಿಗೆ, ಲೇಸರುಗಳನ್ನು ಕುರಿತ ಸಂಶೋಧನೆಗಾಗಿ, ಭೌತಶಾಸ್ತ್ದದ ನೊಬೆಲ್ ಪ್ರಶಸ್ತಿ ಘೋಷಿಸಲಾಗಿತ್ತು. ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಮೂರನೆಯ ಮಹಿಳೆ ಆಗಿದ್ದರು. 1903ರಲ್ಲಿ ಮೇರೀ ಕ್ಯೂರಿ, 1963ರಲ್ಲಿ ಗೋಪರ್ಟ್ ಮೇಯರ್ ಈ ಪ್ರಶಸ್ತಿಗೆ ಭಾಜನರಾಗಿದ್ದರು.
ಮಹಿಳೆಯರ ಬುದ್ಧಿಮತ್ತೆಯ ಸಾಮರ್ಥ್ಯದ ಬಗ್ಗೆ ಮತ್ತು ಸಂಶೋಧನೆಯಂತಹ ಕಠಿಣ ಶ್ರಮ ಕೈಗೊಳ್ಳಲು ಅವರಲ್ಲಿರುವ ಕ್ಷಮತೆಯ ಬಗ್ಗೆ ಇರುವ ಅನುಮಾನಗಳು 20ನೆಯ ಶತಮಾನದುದ್ದಕ್ಕೂ ಮಹಿಳೆಯರ ವಿರುದ್ಧ ಪಕ್ಷಪಾತಕ್ಕೆ ಕಾರಣವಾಗಿದ್ದವು. ಈಗ ಪರಿಸ್ಥಿತಿ ಬದಲಾಗಿದೆ. ಈ ಪಕ್ಷಪಾತವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನಾವು ಕಳೆದ ನೂರು ವರ್ಷಗಳಲ್ಲಿ ಎಷ್ಟು ಮುಂದುವರೆದಿದ್ದೇವೆ, ಶೈಕ್ಷಣಿಕ ಸಂಸ್ಥೆಗಳಲ್ಲಿ ಮಹಿಳೆಯರು ಪುರುಷರಿಗೆ ಸಮಾನರಾಗಿ ಇರುವಂತೆ ಮಾಡಲು ಎಷ್ಟು ಶ್ರಮಿಸಿದ್ದೇವೆ ?
ಸರ್ಕಾರದ ಉತ್ತೇಜನಗಳು
ಕಳೆದ ಹಲವು ದಶಕಗಳಲ್ಲಿ ಉನ್ನತ ಶಿಕ್ಷಣದಲ್ಲಿ ಮತ್ತು ದುಡಿಮೆಯ ವಲಯದಲ್ಲಿ ಮಹಿಳೆಯರ ಭಾಗವಹಿಸುವಿಕೆಯಲ್ಲಿ ಮಹತ್ತರವಾದ ಸುಧಾರಣೆ ಕಂಡುಬಂದಿದ್ದರೂ, ಈ ಹಾದಿಯ ಪ್ರಗತಿ ಇನ್ನೂ ಅಸಮಾನತೆಯಿಂದ ಕೂಡಿದೆ. ಉನ್ನತ ಶಿಕ್ಷಣದಲ್ಲಿ ಮಹಿಳೆಯರಿಗೆ ಹೆಚ್ಚಿನ ಉತ್ತೇಜನ ನೀಡುವ ಮೂಲಕ ಭಾರತ ಸರ್ಕಾರವು ಲಿಂಗತ್ವ ತಾರತಮ್ಯಗಳನ್ನು ಹೋಗಲಾಡಿಸಲು ಪ್ರಯತ್ನಿಸುತ್ತಿದೆ. ಇಂತಹ ಪ್ರಯತ್ನಗಳಲ್ಲಿ ʼಪರಿವರ್ತಕ ಸಂಸ್ಥೆಗಳಲ್ಲಿ ಲಿಂಗತ್ವ ಮುನ್ನಡೆʼ (ಜಿಎಟಿಐ) ಎಂಬ ಒಂದು ಪ್ರಾಯೋಗಿಕ ಯೋಜನೆ ಗಮನಾರ್ಹವಾಗಿದ್ದು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಮಾನತೆಯನ್ನು ಸಾಧಿಸಲು ಪ್ರಯತ್ನಿಸುತ್ತದೆ. ಹಾಗೆಯೇ ʼಪೋಷಣೆಯ ಮೂಲಕ ಸಂಶೋಧನೆಯ ಮುನ್ನಡೆಯಲ್ಲಿ ಅರಿವಿನ ಒಳಗೊಳ್ಳುವಿಕೆʼ – ಕಿರಣ್ (ಕೆಐಆರ್‌ಎಎನ್) ಯೋಜನೆಯಡಿ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಈ ಕ್ಷೇತ್ರಗಳಲ್ಲಿ ಮಹಿಳಾ ವಿಜ್ಞಾನಿಗಳಿಗೆ ಉತ್ತೇಜನ ನೀಡಲು ಪ್ರಯತ್ನಿಸುತ್ತದೆ. ಕೌಟುಂಬಿಕ ಕಾರಣಗಳಿಗಾಗಿ ಸಂಶೋಧನೆಯನ್ನು ಅರ್ಧಕ್ಕೆ ಕೈಬಿಡುವುದನ್ನು ತಪ್ಪಿಸಲು ಈ ಯೋಜನೆಯು ಸಹಾಯಕಾರಿಯಾಗಿದೆ. ಕೆಲವು ಸಂಸ್ಥೆಗಳಲ್ಲಿ ಶಿಶು ಪಾಲನೆಯ ಸೌಲಭ್ಯಗಳನ್ನೂ ಕಲ್ಪಿಸುವ ಮೂಲಕ ತಾಯಂದಿರು ತಮ್ಮ ಸಂಶೋಧನೆಯನ್ನು ಯಾವುದೇ ಅಡಚಣೆ ಇಲ್ಲದೆ ಕೈಗೊಳ್ಳಲು ಸಾಧ್ಯವಾಗುತ್ತಿದೆ. ವಿಶ್ವವಿದ್ಯಾಲಯಗಳೂ ಸಹ ಇತ್ತೀಚೆಗೆ ಸಮಾನ ಅವಕಾಶಗಳನ್ನು ಕಲ್ಪಿಸುವ ಉದ್ಯೋಗದಾತರಾಗಿ ರೂಪುಗೊಳ್ಳುತ್ತಿವೆ.
ಆದಾಗ್ಯೂ ಈ ಎಲ್ಲ ಸಪ್ರಯತ್ನಗಳ ಹೊರತಾಗಿಯೂ ಲಿಂಗತ್ವ ತಾರತಮ್ಯಗಳು ಚಾಲ್ತಿಯಲ್ಲಿದ್ದು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಾಗಿಲ್ಲ. ಮೂಲ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ (ಸ್ಟೆಮ್- STEM) ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲೂ ಸಹ ಮಹಿಳಾ ಸಮೂಹದ ಪ್ರಾತಿನಿಧ್ಯ ನಗಣ್ಯವಾಗಿಯೆ ಉಳಿದಿದೆ.
ಮಹಿಳೆಯರು ಮತ್ತು STEM
ಈ ಸಂಬಂಧ ಶೈಕ್ಷಣಿಕ ವಲಯದಲ್ಲಿ ಭಾರತದ ಸ್ಥಾನಮಾನ ನಿರಾಶಾದಾಯಕವಾಗಿದೆ. ಯುನೆಸ್ಕೋ ಸಂಸ್ಥೆಯ ಕೆಲವು ದೇಶಗಳ ಲಭ್ಯ ದತ್ತಾಂಶಗಳ ಅನುಸಾರ ಭಾರತ ಕಟ್ಟಕಡೆಯ ಸ್ಥಾನದಲ್ಲಿದ್ದು STEM ವಲಯದಲ್ಲಿ ಕೇವಲ ಶೇ 14ರಷ್ಟು ಮಹಿಳಾ ಸಂಶೋಧಕರು ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದುವರೆದ ದೇಶಗಳಿಗೆ ಹೋಲಿಸಿದರೆ ಭಾರತ ಬಹಳ ಹಿಂದೇನೂ ಉಳಿದಿಲ್ಲ. ಜಪಾನ್‌ನಲ್ಲಿ ಶೇ 16ರಷ್ಟು ಮಹಿಳಾ ಸಂಶೋಧಕರಿದ್ದಾರೆ, ನೆದರ್‌ಲೆಂಡಿನಲ್ಲಿ ಶೇ 26, ಅಮೆರಿಕದಲ್ಲಿ ಶೇ 27 ಮತ್ತು ಬ್ರಿಟನ್ನಿನಲ್ಲಿ ಶೇ 39ರಷ್ಟು ಮಹಿಳಾ ಸಂಶೋಧಕರಿದ್ದಾರೆ. ಸಂಶೋಧನೆಯ ಕ್ಷೇತ್ರದಲ್ಲಿ ಮಹಿಳೆಯರು ಮತ್ತು ಪುರುಷರು ಸಮಾನ ಸಂಖ್ಯೆಯಲ್ಲಿರುವ ರಾಷ್ಟ್ರಗಳೆಂದರೆ ದಕ್ಷಿಣ ಆಫ್ರಿಕಾ ಶೇ 45 ಮತ್ತು ಕ್ಯೂಬಾ ಶೇ 49ರಷ್ಟು ಇದ್ದಾರೆ. ಅತಿ ಹೆಚ್ಚಿನ ಮಹಿಳಾ ಸಂಶೋಧಕರು ಟ್ಯುನಿಷಿಯಾ ಆಫ್ರಿಕಾದಲ್ಲಿ (ಶೇ 55), ಅರ್ಜೆಂಟೈನಾ (ಶೇ 53) ಮತ್ತು ನ್ಯೂಜಿಲೆಂಡ್ (ಶೇ 52)ರಷ್ಟಿದ್ದಾರೆ.
ಭಾರತದಲ್ಲಿ STEM ವಲಯದಲ್ಲಿ ಪದವಿ ಹಂತದಲ್ಲಿರುವ ಮಹಿಳೆಯರ ಸಂಖ್ಯೆ ಶೇ 43ರಷ್ಟಿದೆ. ಇದು ವಿಶ್ವದಲ್ಲೇ ಅತಿ ಹೆಚ್ಚಿನ ಪ್ರಮಾಣವಾಗಿದ್ದರೂ ಇದಕ್ಕೆ ವ್ಯತಿರಿಕ್ತವಾದ ಚಿತ್ರಣವನ್ನೂ ಕಾಣಬಹುದು. ಕೇವಲ ಶೇ 14ರಷ್ಟು ಮಹಿಳೆಯರು ಮಾತ್ರ ಶೈಕ್ಷಣಿಕ ಅಧ್ಯಯನ ಸಂಸ್ಥೆಗಳಿಗೆ ಮತ್ತು ವಿಶ್ವವಿದ್ಯಾಲಯಗಳಿಗೆ ಪ್ರವೇಶ ಪಡೆಯುತ್ತಾರೆ. ಪದವಿ ವ್ಯಾಸಂಗದ ಹಂತದಲ್ಲಿ ಪುರುಷರು ಮತ್ತು ಮಹಿಳೆಯರ ಭಾಗವಹಿಸುವಿಕೆ ಸಮಾನವಾಗಿದ್ದರೂ ಸಂಶೋಧನೆಯ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆಯು ಕುಸಿತ ಕಂಡಿದ್ದು, ಶೇ 73ರಷ್ಟು ಪುರುಷರಿದ್ದರೆ ಶೇ 27ರಷ್ಟು ಮಹಿಳೆಯರಿದ್ದಾರೆ. ಹೀಗಾಗಿ ವಿಶ್ವವಿದ್ಯಾಲಯಗಳಲ್ಲಿ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಮಹಿಳಾ ಬೋಧಕರನ್ನು ಕಡಿಮೆ ಪ್ರಮಾಣದಲ್ಲೇ ಕಾಣಲು ಸಾಧ್ಯ. ಇಲ್ಲಿ ಚಿಂತಾಜನಕವಾದ ಸಂಗತಿ ಎಂದರೆ ಮೇಲಿನ ಹಂತಕ್ಕೆ ಚಲಿಸಿದಂತೆಲ್ಲಾ ಮಹಿಳಾ ಬೋಧಕರ ಶೇಕಡಾವಾರು ಸ್ಥಾನ ಕಡಿಮೆಯಾಗುತ್ತಲೇ ಹೋಗುತ್ತದೆ. ನಿರ್ಧಾರಗಳನ್ನು ಕೈಗೊಳ್ಳುವ ಹಂತವನ್ನು ತಲುಪಿದಾಗ ಈ ಸಂಖ್ಯೆ ಇನ್ನೂ ಕ್ಷೀಣಿಸುತ್ತದೆ. ಭಾರತದ ಮೂರು ಪ್ರಮುಖ ವಿಜ್ಞಾನ ಅಧ್ಯನ ಸಂಸ್ಥೆಗಳಲ್ಲಿ ಇರುವ ಒಟ್ಟು ಮಹಿಳಾ ವಿದ್ವನ್‌ಮಂಡಲಿಯ ಸದಸ್ಯರನ್ನು ಗಮನಿಸಿದಾಗ, ಪ್ರತಿಭೆಯನ್ನು ಗುರುತಿಸುವುದರಲ್ಲೂ ಕಡಿಮೆಯಾಗಿರುವುದು ಕಾಣುತ್ತದೆ. 1934ರಲ್ಲಿ ಸ್ಥಾಪನೆಯಾದ ಭಾರತೀಯ ವಿಜ್ಞಾನಗಳ ಅಧ್ಯಯನ ಸಂಸ್ಥೆ (ಐಎಎಸ್)ಯಲ್ಲಿ ಶೇ 7ರಷ್ಟಿದ್ದರೆ, 1935ರಲ್ಲಿ ಸ್ಥಾಪನೆಯಾದ ಭಾರತೀಯ ರಾಷ್ಟ್ರೀಯ ವಿಜ್ಞಾನ ಅಧ್ಯಯನ ಸಂಸ್ಥೆ (ಐಎನ್‌ಎಸ್‌ಎ)ಯಲ್ಲಿ ಶೇ5ರಷ್ಟಿದ್ದಾರೆ. 1930ರಲ್ಲಿ ಸ್ಥಾಪನೆಯಾದ ಭಾರತದಲ್ಲಿ ವಿಜ್ಞಾನಗಳ ರಾಷ್ಟ್ರೀಯ ಅಧ್ಯಯನ ಸಂಸ್ಥೆ (ಎನ್‌ಎಎಸ್‌ಐ)ಯಲ್ಲಿ ಶೇ 8ರಷ್ಟು ಮಹಿಳೆಯರಿದ್ದಾರೆ.
ಇತ್ತೀಚೆಗೆ ಪ್ರಕಟಿಸಲಾದ ವರದಿಯೊಂದರ ಅನುಸಾರ ಬಹುಪಾಲು STEM ಸಂಸ್ಥೆಗಳಲ್ಲಿ ಎಲ್ಲ ವೃತ್ತಿಪರ ಹುದ್ದೆಗಳಲ್ಲಿ ಮಹಿಳೆಯರು ಶೇ 20ರಷ್ಟಿದ್ದಾರೆ. ಸಂಸ್ಥೆಯು ಹೆಚ್ಚು ಪ್ರತಿಷ್ಠಿತವಾದಂತೆಲ್ಲಾ ಮಹಿಳಾ ಉದ್ಯೋಗಿಗಳ ಸಂಖ್ಯೆ ಕ್ಷೀಣಿಸುತ್ತಾ ಹೋಗುತ್ತದೆ. ಉದಾಹರಣೆಗೆ ಮದ್ರಾಸ್‌ನ ಐಐಟಿಯಲ್ಲಿ 314 ಪ್ರಾಧ್ಯಾಪಕರ ಪೈಕಿ 31 (ಶೇ 10.2) ಮಹಿಳೆಯರಿದ್ದಾರೆ. ಐಐಟಿ ಬಾಂಬೆಯಲ್ಲಿ 143 ಪ್ರಾಧ್ಯಾಪಕರ ಪೈಕಿ 25 (ಶೇ 17.5) ಮಹಿಳೆಯರಿದ್ದಾರೆ. ಕೆಲವು ಪ್ರಮುಖ ಖಾಸಗಿ ವಿಶ್ವವಿದ್ಯಾಲಯಗಳನ್ನು ಪರಿಶೀಲಿಸಿದಾಗಲೂ ಹೆಚ್ಚಿನ ವ್ಯತ್ಯಾಸವೇನೂ ಕಾಣುವುದಿಲ್ಲ. ನಿರ್ಧಾರಗಳನ್ನು ಕೈಗೊಳ್ಳುವ ಆಡಳಿತ ಮಂಡಲಿಗಳಲ್ಲಿ, ಉದಾಹರಣೆಗೆ ಬೋರ್ಡ್ ಆಫ್ ಗವರ್ನರ್ಸ್ ಅಥವಾ ಉನ್ನತ ಶಿಕ್ಷಣದ ಸಂಸ್ಥೆಗಳ ಕೌನ್ಸಿಲ್‌ಗಳಲ್ಲಿ, ಮಹಿಳೆಯರ ಭಾಗವಹಿಸುವಿಕೆ ನಗಣ್ಯವಾಗಿದೆ.
ಯುಜಿಸಿ ನಡೆಸಿದ ಸಮೀಕ್ಷೆಯೊಂದರ ಪ್ರಕಾರ; 54 ಕೇಂದ್ರ ವಿಶ್ವವಿದ್ಯಾಲಯಗಳ ಪೈಕಿ 7ರಲ್ಲಿ (ಶೇ 13), 456 ರಾಜ್ಯ ವಿಶ್ವವಿದ್ಯಾಲಯಗಳ ಪೈಕಿ 52ರಲ್ಲಿ (ಶೇ 11), 126 ಪರಿಭಾವಿತ ವಿಶ್ವವಿದ್ಯಾಲಯಗಳ ಪೈಕಿ 10ರಲ್ಲಿ (ಶೇ 8), 419 ಖಾಸಗಿ ವಿಶ್ವವಿದ್ಯಾಲಯಗಳ ಪೈಕಿ 23ರಲ್ಲಿ (ಶೇ 6), ಮಹಿಳಾ ಉಪಕುಲಪತಿಗಳಿದ್ದಾರೆ. 20ನೆಯ ಶತಮಾನದಲ್ಲಿ ಸ್ಥಾಪಿಸಲಾದ ಆರು ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (ಐಐಟಿಗಳ) ಪೈಕಿ , ಐಐಟಿ ಖರಗ್‌ಪುರ ಮತ್ತು ಐಐಟಿ ದೆಹಲಿಯಲ್ಲಿ ಮಾತ್ರ ಆಡಳಿತ ಮಂಡಲಿಯಲ್ಲಿ ಮಹಿಳಾ ಸದಸ್ಯರಿದ್ದಾರೆ. ತಮ್ಮ ಇತ್ತೀಚಿನ “Equal Yet different- career catalysts for the professional woman” Academia, research and glass ceiling in India” ಪುಸ್ತಕದಲ್ಲಿ ಅನಿತಾ ಭೋಗ್ಲೆ ಅವರು ಹೇಳಿರುವಂತೆ, ಮಹಿಳೆಯರನ್ನು ವಿಭಿನ್ನ ನೆಲೆಯಲ್ಲೇ ವರ್ಗೀಕರಿಸಲಾಗುತ್ತದೆ, ಅವರ ಸವಾಲುಗಳೂ ಸಹ ವಿಭಿನ್ನವಾಗಿಯೇ ಇರುತ್ತವೆ.
ಕಾರ್ಪೋರೇಟ್ ಜಗತ್ತಿನಲ್ಲಿ
ಇದಕ್ಕೆ ವ್ಯತಿರಿಕ್ತವಾಗಿ, ಖಾಸಗಿ ಉದ್ದಿಮೆಗಳಲ್ಲಿ (ಕಾರ್ಪೋರೇಟ್ ವಲಯ) ನಿರ್ಧಾರ ಕೈಗೊಳ್ಳುವ ಹುದ್ದೆಗಳಲ್ಲಿ ಮತ್ತು ಮುಂಚೂಣಿ ಸ್ಥಾನಗಳಲ್ಲಿ ಮಹಿಳೆಯರ ಸ್ಥಾನಮಾನಗಳು, ಅಧ್ಯಯನ ಸಂಸ್ಥೆಗಳಿಗೆ ಹೋಲಿಸಿದರೆ, ಅಚ್ಚರಿ ಮೂಡಿಸುವಂತಿದೆ. ಭಾರತದಲ್ಲಿ ಕಾರ್ಪೋರೇಟ್ ವಲಯದಲ್ಲಿನ ಹಿರಿಯ ನಿರ್ವಾಹಕ ಹುದ್ದೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ 39ರಷ್ಟಿದೆ. ಇದು ಜಾಗತಿಕ ಸರಾಸರಿಗಿಂತಲೂ ಹೆಚ್ಚು. ಫಾರ್ಚೂನ್ 500 ಕಂಪನಿಗಳಲ್ಲಿನ ಮಹಿಳಾ ಸಿಇಒಗಳ ಸಂಖ್ಯೆ ಶೇ 15ರಷ್ಟಿದೆ . ಖಾಸಗಿ ಉದ್ದಿಮೆಗಳ ಆಡಳಿತ ನಿರ್ವಹಣೆಯಲ್ಲಿ ಆಡಳಿತ ಮಂಡಲಿಯ ಸದಸ್ಯರ ಪೈಕಿ ಮಹಿಳೆಯರ ಸಂಖ್ಯೆ ಸತತವಾಗಿ ಏರುತ್ತಲೇ ಇದ್ದು 2016ರಲ್ಲಿ ಶೇ 15ರಷ್ಟಿದ್ದುದು 2018ರಲ್ಲಿ ಶೇ 16.9, 2022ರಲ್ಲಿ ಶೇ 19.7ರಷ್ಟಾಗಿದೆ. ಈ ಪ್ರವೃತ್ತಿಯೇ ಮುಂದುವರೆದರೆ 2045ರ ವೇಳೆಗೆ ಸಾಮ್ಯತೆ ಸಾಧ್ಯವಾಗಬಹುದು ಎಂದು ಡೆಲಾಯ್ಟ್ ಸಮೀಕ್ಷೆಯಲ್ಲಿ ಹೇಳಲಾಗಿದೆ.
ಈ ಎರಡು ಕ್ಷೇತ್ರಗಳ ಉನ್ನತ ಹುದ್ದೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯಲ್ಲಿರುವ ಈ ತಾರತಮ್ಯಗಳಿಗೆ ಕಾರಣಗಳನ್ನು ಪರಾಮರ್ಶಿಸಬೇಕಿದೆ. ಖಾಸಗಿ ವಲಯದಲ್ಲಿ ಆಯ್ಕೆಯ ವಿಧಾನ ಮತ್ತು ಸಿಬ್ಬಂದಿಗೆ ಮುಂಬಡ್ತಿ ನೀಡುವ ವಿಧಾನಗಳು ಮೂಲತಃ ಪ್ರತಿಭೆ ಅಥವಾ ಕ್ಷಮತೆಯನ್ನಾಧರಿಸಿರುತ್ತದೆ. ಏಕೆಂದರೆ ಅಧ್ಯಯನ ಸಂಸ್ಥೆಗಳಿಗೆ ಹೋಲಿಸಿದರೆ ಈ ವಲಯದಲ್ಲಿನ ಪ್ರಕ್ರಿಯೆಗಳು ಮಾರುಕಟ್ಟೆ ಪ್ರೇರಿತವಾಗಿರುತ್ತವೆ. ಕೆಂಬ್ರಿಜ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಒಮ್ಮೆ ಹೇಳಿದಂತೆ, ಮಾರುಕಟ್ಟೆ ವಲಯದಲ್ಲಿ ಹುಸಿ ಪ್ರತಿಮೆಗಳನ್ನು ಆರಾಧಿಸಲಾಗುವುದಿಲ್ಲ ಆದ್ದರಿಂದ ಪ್ರಾಯೋಗಿಕವಾಗಿ ಸರಿಯಾದ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ.
ಎರಡನೆಯ ಕಾರಣ ಎಂದರೆ, ಖಾಸಗಿ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಸಲುವಾಗಿ ವಿವಿಧ ಯೋಜನೆಗಳನ್ನು ರೂಪಿಸುವ ಪ್ರಯತ್ನಗಳು ಬಹಳ ಹಿಂದೆಯೇ ಆರಂಭವಾಗಿದ್ದವು. ಭಾರತ ಸರ್ಕಾರವು ಇತ್ತೀಚೆಗಷ್ಟೇ ಇಂತಹ ಪ್ರಯತ್ನಗಳನ್ನು ಆರಂಭಿಸಿದೆ. ಕೆಲಸದ ವೇಳೆಯ ನಮ್ಯತೆ, ಮಧ್ಯಂತರ ಬಿಡುವಿನ ನಂತರ ಪುನಃ ನೌಕರಿಗೆ ಹಿಂದಿರುಗುವುದು, ಮಹಿಳೆಯರು ಮಾತ್ರ ಕಾರ್ಯನಿರ್ವಹಿಸುವ ವಿಭಾಗಗಳನ್ನು ರೂಪಿಸುವುದು ಮುಂತಾದ ಯೋಜನೆಗಳನ್ನು ಖಾಸಗಿ ಕ್ಷೇತ್ರದಲ್ಲಿ 1990ರಿಂದಲೇ ಆರಂಭಿಸಲಾಗಿದೆ. ಇದರ ಫಲವನ್ನು ಈಗ ಪಡೆಯಲಾಗುತ್ತಿದೆ.
ಮಹಿಳೆಯರ ಸಬಲೀಕರಣದ ದೃಷ್ಟಿಯಿಂದ ದುಡಿಮೆಯ ವಲಯದಲ್ಲಿ ಸರ್ಕಾರವು ಜಾರಿಗೊಳಿಸಿರುವ ಕೆಲವು ಪ್ರಯತ್ನಗಳು, ಸ್ವತಂತ್ರ ಭಾರತದ ಶತಮಾನೋತ್ಸವ, 2047ರ ವೇಳೆಗಾದರೂ ಸಾಮ್ಯತೆಯನ್ನು ಸಾಧಿಸಲು ನೆರವಾಗಬಹುದು ಎಂದು ಆಶಿಸಲಾಗಿದೆ. ಬಹುಮುಖ್ಯವಾದ ಅಂಶವೆಂದರೆ, ಲಿಂಗತ್ವ ಸಮಾನತೆ ಅಥವಾ ಸಾಮ್ಯತೆ ಸಾಧ್ಯವಾಗಬೇಕಾದರೆ ಮನೋಭಾವವೂ ಬದಲಾಗಬೇಕು. ಮತ್ತು ಸಂಸ್ಥೆಗಳು ಮಹಿಳೆಯರನ್ನು ಆಸ್ತಿ ಎಂದು ಪರಿಗಣಿಸಬೇಕೇ ಹೊರತು, ಕೇವಲ ವೈವಿಧ್ಯತೆಯನ್ನು ಸರಿಪಡಿಸುವ ಪ್ರಕ್ರಿಯೆ ಎಂದು ಭಾವಿಸಕೂಡದು.
(ಲೇಖಕ ಸುಪ್ರಕಾಶ್ ಚಂದ್ರ ರಾಯ್ ಅವರುರು ಸೈನ್ಸ್ ಅಂಡ್ ಕಲ್ಚರ್ ಜರ್ನಲ್‌ನ ಪ್ರಧಾನ ಸಂಪಾದಕರು. ಅವರ Academia, research and glass ceiling in India ಎಂಬ ಇಂಗ್ಲಿಷ್ ಲೇಖನವು ದ ಹಿಂದೂ 2 ಸೆಪ್ಟಂಬರ್ 2022ರಲ್ಲಿ ಪ್ರಕಟಗೊಂಡಿತು.)