ನವದೆಹಲಿ : ಮುಸ್ಲಿಮರಿಗೆ ನೀಡಿದ್ದ ಶೇ 4ರಷ್ಟು ಒಬಿಸಿ ಕೋಟಾ ಮೀಸಲಾತಿಯನ್ನು ರದ್ದುಗೊಳಿಸಿರುವ ಕರ್ನಾಟಕ ರಾಜ್ಯ ಸರ್ಕಾರದ ನಿರ್ಧಾರವು ದೋಷ ಪೂರಿತ, ಅಸ್ಥಿರ ಹಾಗೂ ಪ್ರಮಾದದಿಂದ ಕೂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ರಾಜ್ಯ ಸಚಿವ ಸಂಪುಟವು ಮಾರ್ಚ್ 27ರಂದು ತೆಗೆದುಕೊಂಡಿರುವ ನಿರ್ಧಾರ ಪ್ರಶ್ನಿಸಿ ಎಲ್. ಗುಲಾಮ್ ರಸೂಲ್ ಮತ್ತು ಇತರರು ಸಲ್ಲಿಸಿರುವ ಮೇಲ್ಮನವಿ ವಿಚಾರಣೆಯ ವೇಳೆ ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್ ಹಾಗೂ ಬಿ.ವಿ.ನಾಗರತ್ನ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು. ಆಗ ರಾಜ್ಯ ಸರ್ಕಾರದ ಪರವಾಗಿ, ಮಾರ್ಚ್ 27ರ ಆದೇಶದ ಆಧಾರದ ಮೇಲೆ ಯಾವುದೇ ಶೈಕ್ಷಣಿಕ ಸಂಸ್ಥೆಗಳಿಗೆ ಪ್ರವೇಶಾತಿ ನೀಡುವುದಿಲ್ಲ ಮತ್ತು ಯಾವುದೇ ಉದ್ಯೋಗಗಳಿಗೆ ನೇಮಕಾತಿ ಮಾಡುವುದಿಲ್ಲ ಎಂದು ಭರವಸೆ ನೀಡಲಾಯಿತು.
ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಈ ಆದೇಶದ ಆಧಾರದಲ್ಲಿ ಯಾವುದೇ ಪ್ರವೇಶಾತಿ ನೀಡುವುದಿಲ್ಲ ಅಥವಾ ಉದ್ಯೋಗಕ್ಕೆ ನೇಮಕಾತಿ ಮಾಡಿಕೊಳ್ಳುವುದಿಲ್ಲ’ ಎಂದು ಸ್ಪಷ್ಟನೆ ನೀಡಿದರು. ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲರಾದ ಕಪಿಲ್ ಸಿಬಲ್, ದುಷ್ಯಂತ್ ದವೆ, ರವಿವರ್ಮ ಕುಮಾರ್ ಹಾಗೂ ಗೋಪಾಲ್ ಶಂಕರನಾರಾಯಣನ್, ‘ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಧ್ಯಂತರ ವರದಿ ಆಧರಿಸಿ ಈ ನಿರ್ಧಾರ ಕೈಗೊಂಡಿರುವುದರಿಂದ ದೋಷಪೂರಿತವಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ’ ಎಂದು ವಾದ ಮಂಡಿಸಿದರು.
ಆಗ ನ್ಯಾಯಪೀಠ, ‘ಸರ್ಕಾರದ ಈ ಒಂದು ನಿರ್ಧಾರದಿಂದ ದೊಡ್ಡ ಪ್ರಮಾಣದ ಜನರು ಮೀಸಲಾತಿಯ ಲಾಭದಿಂದ ವಂಚಿತರಾಗಿದ್ದಾರೆ. ಮೇಲ್ನೋಟಕ್ಕೇ ಈ ಆದೇಶದ ತಳಪಾಯ ಅಸ್ಥಿರವಾಗಿದ್ದು, ಪ್ರಮಾದದಿಂದ ಕೂಡಿದೆ ಎಂಬುದು ಕಂಡು ಬರುತ್ತಿದೆ’ ಎಂದು ಹೇಳಿತು. ನಂತರ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲು ನ್ಯಾಯಪೀಠ ಮುಂದಾಗುತ್ತಿದ್ದಂತೆ ರಾಜ್ಯ ಸರ್ಕಾರ ಹಾಗೂ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಮುಕುಲ್ ರೊಹಟಗಿ, ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಇದನ್ನೂ ಓದಿ : ಐತಿಹಾಸಿಕ ಸ್ಥಳಗಳ ಹೆಸರು ಬದಲಾವಣೆ: ಆಯೋಗ ರಚಿಸಲು ಸುಪ್ರೀಂಗೆ ಮನವಿ
‘ಇವೆಲ್ಲ ಸ್ಪರ್ಧಾತ್ಮಕ ಅಂಶಗಳು. ಇದರಲ್ಲಿ ಯಾವುದೇ ತೊಂದರೆ ಆಗದಿದ್ದರೂ ಆದೇಶಕ್ಕೆ ತಡೆಯಾಜ್ಞೆ ನೀಡುವುದು ಅನುಚಿತವಾಗುತ್ತದೆ’ ಎಂದು ರೊಹಟಗಿ ವಾದಿಸಿದರು. ತುಷಾರ್ ಮೆಹ್ತಾ, ‘ಒಬಿಸಿ ವರ್ಗಕ್ಕೆ ಸೇರಿರುವ ಮುಸ್ಲಿಮರು ಈಗಾಗಲೇ ಮೀಸಲಾತಿ ಪಡೆಯುತ್ತಿದ್ದಾರೆ. ಮುಸ್ಲಿಮರಿಗೆ ಶೇ 4, ಒಕ್ಕಲಿಗರು ಹಾಗೂ ಲಿಂಗಾಯತರಿಗೆ ತಲಾ ಶೇ 2 ಮೀಸಲಾತಿ ನೀಡುವ ಆದೇಶವನ್ನು ಆಧರಿಸಿ ಬದಲಾಯಿಸಲಾಗದಂತಹ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ’ ಎಂದು ಮತ್ತೊಮ್ಮೆ ಸ್ಪಷ್ಟನೆ ನೀಡಿದರು. ಅರ್ಜಿದಾರರು, ‘ಕರ್ನಾಟಕದಲ್ಲಿ 1921ರಿಂದಲೇ ಮುಸ್ಲಿಮ್ ಸಮುದಾಯವನ್ನು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರು ಎಂದು ಪರಿಗಣಿಸಲಾಗುತ್ತಿದೆ. ಅವರು ಈ ವಲಯದಲ್ಲಿ ಮುಂದುವರಿದವರು ಎಂದು ಸಾಬೀತುಪಡಿಸುವ ಯಾವುದೇ ದತ್ತಾಂಶಗಳು ಲಭ್ಯ ಇಲ್ಲ’ ಎಂದರು.
ಪ್ರಕರಣ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ಸೋಮವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಏಪ್ರಿಲ್ 18ಕ್ಕೆ ಮುಂದೂಡಿತು. ಮುಸ್ಲಿಮರಿಗೆ ಇದ್ದ ಶೇ 4ರಷ್ಟು ಮೀಸಲಾತಿಯನ್ನು ಕಿತ್ತುಕೊಂಡು, ಅದನ್ನು ಲಿಂಗಾಯತರಿಗೆ ಹಾಗೂ ಒಕ್ಕಲಿಗರಿಗೆ ತಲಾ ಶೇ 2ರಷ್ಟು ಹಂಚುವ ನಿರ್ಣಯವನ್ನು ಕರ್ನಾಟಕ ಸರ್ಕಾರ ಸಚಿವ ಸಂಪುಟ ಮಾರ್ಚ್ 27ರಂದು ಮಾಡಿತ್ತು. ಮುಸ್ಲಿಮರನ್ನು ಆರ್ಥಿಕವಾಗಿ ದುರ್ಬಲ ವರ್ಗದ (ಇಡಬ್ಲ್ಯೂಎಸ್) ಪಟ್ಟಿಗೆ ಸೇರಿಸುವ ನಿರ್ಧಾರವನ್ನೂ ತೆಗೆದುಕೊಂಡಿತ್ತು.
‘2ಬಿಯಲ್ಲಿ ಮುಸ್ಲಿಮರಿದ್ದರು. ಧಾರ್ಮಿಕ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶ ಇಲ್ಲ. ಅದಕ್ಕಾಗಿ, ಮುಸ್ಲಿಮರನ್ನು ಆರ್ಥಿಕವಾಗಿ ದುರ್ಬಲ ವರ್ಗದ ಪಟ್ಟಿಗೆ ಸೇರಿಸಲಾಗಿದೆ. 2 ಬಿಯಲ್ಲಿ ಶೇ 4ರಷ್ಟಿದ್ದ ಮೀಸಲಾತಿಯನ್ನು ಶೇ 2ರಷ್ಟು ಒಕ್ಕಲಿಗರಿಗೆ, ಶೇ 2ರಷ್ಟನ್ನು ಲಿಂಗಾಯತರಿಗೆ ಹಂಚುವ ತೀರ್ಮಾನ ಮಾಡಲಾಗಿದೆ’ ಎಂದು ರಾಜ್ಯ ಸರ್ಕಾರ ತಿಳಿಸಿತ್ತು.