ರಾಷ್ಟ್ರಪತಿ ಆಯ್ಕೆ: ಅಭ್ಯರ್ಥಿ ದ್ರೌಪದಿ ಮುರ್ಮು-ಸಿಎಂ-ಸಚಿವರಿಂದ ಚುನಾವಣಾ ಅಪರಾಧ

ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಕ್ತ ಹಾಗೂ ಪಾರದರ್ಶಕ ಚುನಾವಣೆ ನಡೆಯಬೇಕು. ಯಾವುದೇ ಆಮಿಷ, ಒತ್ತಡ ಹಾಕಬಾರದು. ಹಾಕಿದರೆ ಅದು ಅಪರಾಧವಾಗುತ್ತದೆ. ಇದು ಜನತಾ ಪ್ರಾತಿನಿದ್ಯ ಕಾಯ್ದೆ, ಐಪಿಸಿ ಸೆಕ್ಷನ್ ಹಾಗೂ ಅಧ್ಯಕ್ಷೀಯ ಚುನಾವಣಾ ಕಾಯ್ದೆಯಲ್ಲಿ ಪ್ರಸ್ತಾಪವಾಗಿದೆ. ಹೀಗಿರುವಾಗ ಆಡಳಿತ ಪಕ್ಷ ಬಿಜೆಪಿಯು ಶಾಸಕರನ್ನು ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಮಾಡಿಸಿದ್ದು, ಆಹಾರ, ಪಾನೀಯ, ಮನರಂಜನೆ ನೀಡಿರುವುದು ಚುನಾವಣಾ ಅಪರಾಧ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್‌. ಉಗ್ರಪ್ಪ ಅವರು ಆರೋಪಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಆದೇಶದ ಮೇರೆಗೆ ಸೋಮವಾರ(ಜುಲೈ 18) ನಡೆದ ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಹಾಗೂ ರಾಜ್ಯದ ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರು ಚುನಾವಣಾ ಅಪರಾಧ ಮಾಡಿದ್ದು, ಅವರ ವಿರುದ್ಧ ಸೆಕ್ಷನ್ 171 ಬಿ, 171ಸಿ, 171 ಇ, 171ಎಫ್ ಪ್ರಕಾರ ಕ್ರಮಜರುಗಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಪಕ್ಷದವರು ಭಾನುವಾರ ಎಲ್ಲ ಶಾಸಕರನ್ನು ಬೆಂಗಳೂರಿಗೆ ಕರೆಸಿಕೊಂಡು ಹೊಟೇಲಿನಲ್ಲಿ ಆಹಾರ, ಪಾನೀಯ, ಮನರಂಜನೆ ನೀಡಿದ್ದಾರೆ. ಇದೆಲ್ಲದರ ವೆಚ್ಚವನ್ನು ಮುಖ್ಯಮಂತ್ರಿ ಹಾಗೂ ಬಿಜೆಪಿ ವಹಿಸಿಕೊಂಡಿದ್ದು, ಅವರಿಗೆ ಇದೇ ರೀತಿ ಮತದಾನ ಮಾಡಬೇಕು ಎಂದು ತರಬೇತಿ ನೀಡಲಾಗಿದೆ. ಜತೆಗೆ ಅವರನ್ನು ಕರೆದೊಯ್ಯಲು ಬಿಎಂಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ಚುನಾವಣಾ ಉಲ್ಲಂಘನೆಯಲ್ಲವೇ ಎಂದು ಪ್ರಶ್ನಿಸಿದರು.

ಗ್ರಾಮಪಂಚಾಯ್ತಿ ಮತದಾರರನ್ನು ಬಸ್ಸಿನಲ್ಲಿ ಕೆರೆದೊಯ್ದಿದ್ದರೆ ಅವರ ವಿರುದ್ಧ ಪ್ರಕರಣ ದಾಖಲಾಗುತ್ತಿತ್ತು. ಎನ್‌ಡಿಎ ಅಭ್ಯರ್ಥಿ ಸಮ್ಮತಿ ಆಧಾರದ ಮೇಲೆ ಇದನ್ನು ಮಾಡಿದ್ದು, ಈ ವಿಚಾರವಾಗಿ ಪ್ರಕರಣ ದಾಖಲಿಸಬೇಕು. ಹೀಗಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಅಲ್ಲದೆ ರಾಜ್ಯ ವಿಧಾನಸೌದದಲ್ಲಿ ನಡೆದ ಮತದಾನದಲ್ಲಿ ಎನ್‌ಡಿಎ ಅಭ್ಯರ್ಥಿಗೆ ದಾಖಲಾಗಿರುವ ಎಲ್ಲ ಮತಗಳನ್ನು ಅಸಿಂಧು ಎಂದು ಪರಿಗಣಿಸಬೇಕು. ಇಲ್ಲಿನ ಸಿಇಒ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನಮ್ಮ ದೂರನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ರವಾನಿಸಲಾಗುವುದು ಎಂದು ತಿಳಿಸಿದ್ದಾರೆ.

ಬಿಜೆಪಿಯು ಒಂದಲ್ಲಾ ಒಂದು ಸಂದರ್ಭದಲ್ಲೆಲ್ಲ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ, ಚುನಾವಣಾ ಪ್ರಕ್ರಿಯೆಗೆ ಅಪಚಾರ ಎಸಗುತ್ತಿದ್ದಾರೆ. ಸರ್ವಾಧಿಕಾರಿ ಮನಸ್ಥಿತಿ ಮೂಲಕ ಚುನಾವಣೆಯನ್ನು ತಮ್ಮ ಮೂಗಿನ ನೇರಕ್ಕೆ ತಿರುಗಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾದ್ದಾರೆ.

ಬಿಜೆಪಿಯು ಶಾಸಕರನ್ನು ಕರೆಸಿ ಹೊಟೇಲ್ ನಲ್ಲಿ ಇಟ್ಟಿರುವ ವಿಚಾರವಾಗಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿದೆ. ಯಾವ ಹೊಟೇಲ್ ನಲ್ಲಿ ಕೊಠಡಿ ಮಾಡಿದ್ದಾರೆ, ಅದರ ದಾಖಲೆಗಳನ್ನು ಪರಿಶೀಲಿಸಬಹುದು. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎನ್ನುವಂತೆ ಮಾಧ್ಯಮಗಳು ಪ್ರಸಾರ ಮಾಡಿರುವ ಎಲ್ಲ ದಾಖಲೆಗಳನ್ನು ನಾವು ಸಲ್ಲಿಸಿದ್ದೇವೆ. ಅಧಿಕಾರಿಗಳು ಇದನ್ನು ಪರಿಶೀಲಿಸಿ ಅಗತ್ಯ ಕ್ರಮ ಜರುಗಿಸುತ್ತಾರೆ ಎಂದು ಭಾವಿಸಿದ್ದೇವೆ ಎಂದು ಉಗ್ರಪ್ಪ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *