ಅಭಿವ್ಯಕ್ತಿಯ ನಿಷೇಧ ಸಂಸ್ಕೃತಿಯ ಅವಾಂತರಗಳು

ಸಿನಿಮಾದ ಗುಣಮಟ್ಟ ಮತ್ತು ನಿರ್ದೇಶಕರ ಸಾಮರ್ಥ್ಯದ ಕುರಿತು ವಿಮರ್ಶೆ ಮಾಡುವುದು ಪ್ರಜಾಪ್ರಭುತ್ವದಲ್ಲಿನ ಸಹಜ ಚಟುವಟಿಕೆಗಳು. ಈ ಪ್ರಕ್ರಿಯೆಯಲ್ಲಿ ಆ ದೃಶ್ಯಗಳು ಹಸಿಬಿಸಿಯಾಗಿವೆ, ಜಾಳುಜಾಳಾಗಿವೆ ಮತ್ತು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತವೆ ಎನ್ನುವ ಟೀಕೆಗಳು ವಸ್ತುನಿಷ್ಟವಾಗಿರಬೇಕು, ಒಂದು ಮೌಲಿಕ ವಿಮರ್ಶೆಯಾಗಿರಬೇಕು. ಆದರೆ ಇದೆಲ್ಲವೂ ಕಾಣೆಯಾಗಿ ಆಡಳಿತದಲ್ಲಿರುವ ಪಕ್ಷದ ಗುಲಾಮಗಿರಿತನ ಮತ್ತು ಧಾರ್ಮಿಕ ಮತಾಂಧತೆಯ ಹಿಂಸೆ ಮುಖ್ಯವಾಗಿಬಿಡುವುದು ಇಲ್ಲಿನ ಬಲು ದೊಡ್ಡ ಬಿಕ್ಕಟ್ಟು. ಇದರಿಂದಾಗಿ ಸಿನಿಮಾ, ನಾಟಕಗಳು ಕಲಾವಿದ, ನಿರ್ದೇಶಕರ ಸೃಜನಶೀಲ ಪ್ರಯೋಗಗಳಿಗೆ ಸೂಕ್ತ ವೇದಿಕೆಗಳು ಎನ್ನುವ ಮೂಲಭೂತ ಆಶಯವೇ ಕಣ್ಮರೆಯಾಗುತ್ತಿದೆ. ಈ ಅಪಾಯಕಾರಿ ಅವಾಂತರಗಳಿಗೆ ಕಳಸವಿಟ್ಟಂತೆ ಕೇಂದ್ರ ವಾರ್ತಾ ಮತ್ತು ಪ್ರಚಾರ ಇಲಾಖೆಯು ಸಾಮಾಜಿಕ ಜಾಲತಾಣ ಮತ್ತು ಓಟಿಟಿ ಪ್ಲಾಟ್‌ಫಾರ್ಮಗಳನ್ನು ನಿಯಂತ್ರಿಸಲು ಹೊಸ ನೀತಿಸಂಹಿತೆಗಳನ್ನು ಪ್ರಕಟಿಸಿದೆ. ಇಲ್ಲಿ ಕಲಾವಿದರು, ನಿರ್ದೇಶಕರು ತಮ್ಮ ಕ್ರಿಯಾಶೀಲತೆ ಮತ್ತು ಸೃಜನಶೀಲವನ್ನು ಫ್ಯಾಸಿಸ್ಟ್ ಪ್ರಭುತ್ವ ಹಾಗೂ ಮತಾಂಧ ಸಮಾಜಕ್ಕೆ ಒತ್ತೆ ಇಡಬೇಕಾದಂತಹ ದುಸ್ಥಿತಿಯಿದೆಯೆಂದು

ಬಿ. ಶ್ರೀಪಾದ ಭಟ್ ವಿಶ್ಲೇಷಿಸುತ್ತಾರೆ.

1980ರಲ್ಲಿ ರಾಜ್ಯಸಭಾ ಸದಸ್ಯರಾಗಿ ನೇಮಕಗೊಂಡಿದ್ದ ಕಲಾವಿದೆ ನರ್ಗಿಸ್ ದತ್ ಅವರು ಸಂಸತ್ತಿನಲ್ಲಿ ಮಾತನಾಡುತ್ತ ‘ಭಾರತದಲ್ಲಿ ಕೇವಲ ಬಡತನವಿದೆ, ಹಸಿವಿದೆ ಎಂದು ಬಿಂಬಿಸುವ ಸತ್ಯಜಿತ್ ರೇ ಯವರ ಸಿನಿಮಾಗಳು ವಿದೇಶಗಳಲ್ಲಿ ಭಾರತದ ಕುರಿತು ತಪ್ಪು ಸಂದೇಶ ರವಾನಿಸುತ್ತಿವೆ, ರೇ ಸಿನಿಮಾಗಳನ್ನು ವಿದೇಶಗಳಲ್ಲಿ ಪ್ರದರ್ಶಿಸಬಾರದು’ ಎಂದು ಹೇಳಿದ್ದರು.  ಇದು ಆಗ ವಿವಾದಗಳಿಗೂ ಕಾರಣವಾಗಿತ್ತು.  ಸಿನಿಮಾ ಎನ್ನುವುದು ಕಲೆಯ ನಿಜದ ಅಭಿವ್ಯಕ್ತಿ, ಇದು ದೇಶ, ಭಾಷೆಗಳ ಗಡಿಯನ್ನು ಮೀರಿದೆ. ಸಿನಿಮಾದಲ್ಲಿ ಅಭಿಪ್ರಾಯಗಳನ್ನು ನಿರೂಪಿಸಲಾಗುತ್ತದೆ, ಆದರೆ ಅದು ನಿರ್ಧಾರಗಳಲ್ಲ. ಸಮಾಜೋ-ಸಾಂಸ್ಕೃತಿಕ-ರಾಜಕೀಯ ವ್ಯವಸ್ಥೆಯ ವಾಸ್ತವವನ್ನು ಸಿನಿಮಾ ಮಾಧ್ಯಮದಲ್ಲಿ ಕಲಾತ್ಮಕವಾಗಿ, ಈಸ್ತಟಿಕ್ ಪ್ರಜ್ಞೆಯಿಂದ ಅಳವಡಿಸಿಕೊಳ್ಳುವ ಈ ಹೊಸ ಅಲೆಯ ಸಿನಿಮಾಗಳಿಗೆ ಹೇರಲ್ಪಡುವ ಈ ಸಂಕುಚಿತ ಕಟ್ಟುಪಾಡುಗಳಿಂದ ಅದರ ಸೃಜನಶೀಲತೆ ಮತ್ತು ಕ್ರಿಯಾಶೀಲತೆಯನ್ನು ನಾಶ ಮಾಡುತ್ತದೆ ಎಂದು ಚಿಂತಕರು ವಾದಿಸಿದ್ದರು. ಆಗ ಅಬಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮುಕ್ತ ವಾತಾವರಣವಿತ್ತು. ನರ್ಗಿಸ್ ದತ್‌ ರನ್ನು ತಾರ್ಕಿಕವಾಗಿ ವಿರೋಧಿಸಿದವರಿಗೂ ಮನ್ನಣೆಯಿತ್ತು. ಸರಕಾರದ ನೀತಿಗಳನ್ನು ಟೀಕಿಸುವವರಿಗೆ ಘನತೆಯಿತ್ತು.  ಇದಾಗಿ ನಲವತ್ತು ವರ್ಷಗಳು ಕಳೆದಿವೆ.  ಆದರೆ ಈಗ ಪರಿಸ್ಥಿತಿ ಬಿಗಡಾಯಿಸಿದೆ. ನಿರಂಕುಶ ಪ್ರಭುತ್ವವು ಅದಿಕಾರದಲ್ಲಿರುವುದರಿಂದ ಇಲ್ಲಿನ ಕಲೆ, ಸಂಗೀತ ಮತ್ತು ಸಾಹಿತ್ಯದ ಮೇಲೆ, ಅಬಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಪ್ರತಿ ಹಂತ, ಪ್ರತಿ ಕ್ಷಣಕ್ಕೂ ಸಂಕೋಲೆಗಳು, ಭಯ, ಆತಂಕ ಕಾಡುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರ್ಯವು ಸಂವಿಧಾನವು ಕೊಟ್ಟಂತಹ ಉಲ್ಲಂಘಿಸಲಾಗದ ಹಕ್ಕು ಎನ್ನುವ ಆಶಯವೂ ಕಣ್ಣ ಮುಂದೆ ಕರಗುತ್ತಿದೆ. ಅನುಚ್ಚೇದ 19(1)(ಎ)ದ ‘ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ’ ಎನ್ನುವ ಹಕ್ಕು ಇಂದು ಅಣಕಗೊಳ್ಳುತ್ತಿದೆ.

ಇದನ್ನು ಓದಿ : ಪ್ರಸಾದ್ ಅತ್ತಾವರ್ ನ ಕೇಸ್ ಹಿಸ್ಟರಿ

ತೀರಾ ಇತ್ತೀಚೆಗೆ ಎಪ್ರಿಲ್ 2021ರಲ್ಲಿ ‘ನೆಟ್ ಫ್ಲಿಕ್ಸ್’ ಓಟಿಟಿ ಪ್ಲಾಟ್‌ ಫಾರ್ಮನಲ್ಲಿ ಬಿಡುಗಡೆಯಾದ  ‘ಬಾಂಬೆ ಬೇಗಮ್ಸ್’ ಎನ್ನುವ ಆರು ಎಪಿಸೋಡ್‌ಗಳ ವೆಬ್ ಸರಣಿಯ ವಿರುದ್ದ ಮಕ್ಕಳ ಹಕ್ಕುಗಳ ರಾಷ್ಟ್ರೀಯ ಆಯೋಗವು (ಎನ್‌.ಸಿ.ಪಿ.ಸಿ.ಆರ್) ನೋಟೀಸು ನೀಡಿದೆ. ‘ಈ ಸರಣಿಯ ಕೆಲ ಭಾಗಗಳಲ್ಲಿ ಮಕ್ಕಳನ್ನು ಹಸಿಬಿಸಿಯಾಗಿ ಬಿಂಬಿಸಲಾಗಿದೆ. ಅವರು ಕೊಕೇನ್, ಸಿಗರೇಟ್ ಸೇದುವುದು, ಮಕ್ಕಳು ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ವಹಿಸುವುದುನ್ನು ಸಾಮಾನ್ಯೀಕರಣಗೊಳಿಸುವುದು, ಹುಡುಗಿಯರ ದೇಹದ ಭಾಗಗಳ ಫೋಟೋ ಕ್ಲಿಕ್ಕಿಸುವುದು’ ಇತ್ಯಾದಿ ದೃಶ್ಯಗಳು ಯುವಜನತೆಯ ಮನಸ್ಸನ್ನು ಹಾಳು ಮಾಡುತ್ತವೆ, ಕಲುಷಿತಗೊಳಿಸುತ್ತವೆ ಮತ್ತು ಮಕ್ಕಳ ಶೋಷಣೆಗೆ ಪ್ರೋತ್ಸಾಹ ನೀಡುತ್ತವೆ’ ಎಂದು ಎನ್‌.ಸಿ.ಪಿ.ಸಿ.ಆರ್ ತನ್ನ ಷೋಕಾಸ್ ನೋಟೀಸ್‌ನಲ್ಲಿ ಆಕ್ಷೇಪಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ವಘೋಷಿತ ನೈತಿಕ ಪೋಲೀಸ್‌ಗಿರಿ ಮಾಡುವ,  ಹಿಂದೂ ಬಹುಸಂಖ್ಯಾತವಾದದ ಸಮರ್ಥಕರಾದ  @ಜೆಮ್ಸ್ಆಫ್‌ಬಾಲಿವುಡ್‌ನ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತು ಲಗತ್ತಿಸಿದ ಸರಣಿ ಟ್ಟೀಟ್‌ಗಳನ್ನು ಆಧರಿಸಿ ಮತ್ತು ಪುರುಷರ ಹಕ್ಕುಗಳ ಹೋರಾಟಗಾರ್ತಿ ದೀಪಿಕಾ ನಾರಾಯಣ್ ಧನರಾಜ್‌ರ ಟ್ಟೀಟ್ ಆದರಿಸಿ ಎನ್‌.ಸಿ.ಪಿ.ಸಿ.ಆರ್ ಈ ನೋಟೀಸ್ ನೀಡಿದೆ. ಆದರೆ ಈ ಟ್ವೀಟರ್ ಖಾತೆಯ ವ್ಯಕ್ತಿಗಳು, ಸಂಘಟನೆಗಳಿಗೆ ಯಾವುದೇ ಅಧಿಕೃತ ಮಾನ್ಯತೆ ಇರುವುದಿಲ್ಲ ಎನ್ನುವುದು ಇಲ್ಲಿ ಮುಖ್ಯವಾಗುವುದಿಲ್ಲ. ಬದಲಿಗೆ ಅಧಿಕಾರ ನಡೆಸುವ ಪಕ್ಷದ ಸಿದ್ಧಾಂತಗಳು ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ.

ಗುಲಾಮಗಿರಿ ಧ್ಯೇಯವಾಗುತ್ತದೆ ಮತ್ತು ನಾಗರಿಕ ಸಮಾಜದ, ಪ್ರಜಾಪ್ರಭುತ್ವದ ಸೋಲು ಇಲ್ಲಿಂದ ಶುರುವಾಗುತ್ತದೆ. ಸ್ವಯಂಪ್ರೇರಿತವಾಗಿ ಎನ್‌.ಸಿ.ಪಿ.ಸಿ.ಆರ್ ದೂರು ದಾಖಲಿಸಿದೆಯೆಂದರೆ ಅದರ ಅರ್ಥ ಸ್ವತಃ ಆ ಸಂಸ್ಥೆಗೇ ಈ ಧಾರಾವಾಹಿಯ ಕುರಿತು ಅಸಹನೆಯಿದೆ.  ಅಷ್ಟಕ್ಕೂ ‘ಬಾಂಬೆ ಬೇಗಮ್ಸ್’ ಧಾರಾವಾಹಿಯ ಕತೆಯಲ್ಲಿ ಸಮಾಜದ ಭಿನ್ನ ವರ್ಗ, ಧರ್ಮ, ಜಾತಿಗಳಿಂದ ಬಂದ ಐವರು ಮಹಿಳೆಯರ ಕನಸುಗಳು ಮತ್ತು ಬಯಕೆಗಳ ಕುರಿತು ಮತ್ತು ಮುಂಬೈನಲ್ಲಿ ಮಹಿಳೆಯಾಗಿ ತಮ್ಮ ಆಸ್ತಿತ್ವಕ್ಕಾಗಿ ಹೆಣಗುವ ಪಡಿಪಾಟಲುಗಳ ಕುರಿತು ನಾಟಕೀಯವಾಗಿ ನಿರೂಪಿತವಾಗಿದೆ. ಇಲ್ಲಿ ಕತೆ ಹೇಳುವ ಶೈಲಿ ತೆಳುವಾಗಿದೆ ಮತ್ತು ಆಳವಾದ ಒಳನೋಟಗಳಿಲ್ಲ. ಸಿನಿಮಾ ಚೌಕಟ್ಟಿಗೆ ಅಗತ್ಯವಾದ ಕಲಾವಂತಿಕೆ ಮತ್ತು ಅದರ ಸ್ವರೂಪದ ಕುರಿತು ನಿರ್ದೇಶಕರು ನಿರ್ಲಕ್ಷ್ಯ ವಹಿಸಿದ್ದಾರೆ. ಆದರೆ ಇದೆಲ್ಲದರಾಚೆ ಚಿತ್ರಕತೆಗೆ ಅನುಗುಣವಾಗಿ ದೃಶ್ಯಗಳನ್ನು ಹೆಣೆಯುವ ಮತ್ತು ಕತೆಗೆ ಪೂರಕವಾಗಿ ವ್ಯವಸ್ಥೆಯ ವಿವಿಧ ಮಗ್ಗುಲುಗಳನ್ನು ಪ್ರದರ್ಶಿಸುವ ಸ್ವಾತಂತ್ರ್ಯ ಪ್ರತಿಯೊಬ್ಬ ಸಿನಿಮಾ ನಿರ್ದೇಶಕರಿಗಿರುತ್ತದೆ.  ಈ ಧಾರಾವಾಹಿಯಲ್ಲಿ 13 ವರ್ಷದ ಮಕ್ಕಳು ಕೊಕೇನ್ ತೆಗೆದುಕೊಳ್ಳುವ ದೃಶ್ಯವನ್ನು ವೈಭವೀಕರಿಸಿಲ್ಲ, ಬದಲಿಗೆ ಹೇಗೆ ಹದಿಹರೆಯದ ಮಕ್ಕಳು ಬಲಿಯಾಗುತ್ತಿದ್ದಾರೆ ಎನ್ನುವ ಒರಟಾದ ನಿರೂಪಣೆಯಿದೆ. ಆದರೆ ಸಮಾಜದ ವಾಸ್ತವಕ್ಕೆ ಕನ್ನಡಿ ಹಿಡಿಯುವುದನ್ನೇ ತಿರುಚಿ ಮಕ್ಕಳನ್ನು ಪ್ರಚೋದಿಸುತ್ತದೆ ಎನ್ನುವ ಎನ್‌.ಸಿ.ಪಿ.ಸಿ.ಆರ್‌ ನ ಏಕಪಕ್ಷೀಯ ದುರ್ಬಲ ವಾದವೇ ಪ್ರಜಾಪ್ರಭುತ್ವದ ಆಶಯಗಳಿಗೆ ಮಾರಕವಾಗಿದೆ.

ಇದನ್ನು ಓದಿ : 14 ವರ್ಷಗಳ ನಂತರ ನಂದಿಗ್ರಾಮ ‘ಗೋಲೀಬಾರ್’ನ ಪಿತೂರಿ ಬಯಲು?

ಇಲ್ಲಿ ಸಿನಿಮಾದ ಗುಣಮಟ್ಟ ಮತ್ತು ನಿರ್ದೇಶಕರ ಸಾಮರ್ಥ್ಯದ ಕುರಿತು ವಿಮರ್ಶೆ ಮಾಡುವುದು ಪ್ರಜಾಪ್ರಭುತ್ವದಲ್ಲಿನ ಸಹಜ ಚಟುವಟಿಕೆಗಳು. ಈ ಪ್ರಕ್ರಿಯೆಯಲ್ಲಿ ಆ ದೃಶ್ಯಗಳು ಹಸಿಬಿಸಿಯಾಗಿವೆ, ಜಾಳುಜಾಳಾಗಿವೆ ಮತ್ತು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತವೆ ಎನ್ನುವ ಟೀಕೆಗಳು ವಸ್ತುನಿಷ್ಟವಾಗಿರಬೇಕು, ಒಂದು ಮೌಲಿಕ ವಿಮರ್ಶೆಯಾಗಿರಬೇಕು. ಆದರೆ ಇದೆಲ್ಲವೂ ಕಾಣೆಯಾಗಿ ಆಡಳಿತದಲ್ಲಿರುವ ಪಕ್ಷದ ಗುಲಾಮಗಿರಿತನ ಮತ್ತು ಧಾರ್ಮಿಕ ಮತಾಂಧತೆಯ ಹಿಂಸೆ ಮುಖ್ಯವಾಗಿಬಿಡುವುದು ಇಲ್ಲಿನ ಬಲು ದೊಡ್ಡ ಬಿಕ್ಕಟ್ಟು. ಇದರಿಂದಾಗಿ ಸಿನಿಮಾ, ನಾಟಕಗಳು ಕಲಾವಿದ, ನಿರ್ದೇಶಕರ ಸೃಜನಶೀಲ ಪ್ರಯೋಗಗಳಿಗೆ ಸೂಕ್ತ ವೇದಿಕೆಗಳು ಎನ್ನುವ ಮೂಲಭೂತ ಆಶಯವೇ ಕಣ್ಮರೆಯಾಗುತ್ತಿದೆ. ಈ ಅಪಾಯಕಾರಿ ಅವಾಂತರಗಳಿಗೆ ಕಳಸವಿಟ್ಟಂತೆ ಕೇಂದ್ರ ವಾರ್ತಾ ಮತ್ತು ಪ್ರಚಾರ ಇಲಾಖೆಯು ಸಾಮಾಜಿಕ ಜಾಲತಾಣ ಮತ್ತು ಓಟಿಟಿ ಪ್ಲಾಟ್‌ಫಾರ್ಮಗಳನ್ನು ನಿಯಂತ್ರಿಸಲು ಹೊಸ ನೀತಿಸಂಹಿತೆಗಳನ್ನು ಪ್ರಕಟಿಸಿದೆ. ಇಲ್ಲಿ ಕಲಾವಿದರು, ನಿರ್ದೇಶಕರು ತಮ್ಮ ಕ್ರಿಯಾಶೀಲತೆ ಮತ್ತು ಸೃಜನಶೀಲವನ್ನು ಫ್ಯಾಸಿಸ್ಟ್ ಪ್ರಭುತ್ವ ಹಾಗೂ ಮತಾಂಧ ಸಮಾಜಕ್ಕೆ ಒತ್ತೆ ಇಡಬೇಕಾದಂತಹ ದುಸ್ಥಿತಿಯಿದೆ.

ಇದೇ ಸಂದರ್ಭದಲ್ಲಿ ಮಾರ್ಚ 2021ರಲ್ಲಿ ದಕ್ಷಿಣದಲ್ಲಿ ಕೇರಳದ ‘ಬ್ರಾಹ್ಮಣ ವೇದಿಕೆಯು ‘ಪತ್ತರೊಡೆ ಮಟನ್ ಕರಿ’ ಎಂಬ ಮಲೆಯಾಳಂ ಕಿರುಚಿತ್ರವನ್ನು ವಿರೋಧಿಸಿದೆ.  ಈ ಶೀರ್ಷಿಕೆಯು ಬ್ರಾಹ್ಮಣ ಸಂಸ್ಕೃತಿಯನ್ನು ಅವಮಾನಿಸುತ್ತದೆ ಎಂಬುದು ಅವರ ದೂರು.  ಆದರೆ ಅದು ಹೇಗೆ? ಎನ್ನುವುದಕ್ಕೆ ಯಾವುದೇ ಸಮಂಜಸವಾದ ಉತ್ತರ ದೊರಕುತ್ತಿಲ್ಲ.  ಮುಂದಿನ ದಿನಗಳಲ್ಲಿ ಬ್ರಾಹ್ಮಣ ಜಾತಿಯಲ್ಲಿನ ಕರ್ಮಠತನ, ಸನಾತನವಾದ, ಜಾತಿ ದೌರ್ಜನ್ಯದ ಕುರಿತು ಸಿನಿಮಾ, ನಾಟಕಗಳನ್ನು ನಿರ್ಮಿಸುವುದು ಕಷ್ಟವಾಗಬಹುದು.  ಏಕೆಂದರೆ ಈ ‘ಬ್ರಾಹ್ಮಣರ ಶೋಷಣೆ ಸಂಸ್ಕೃತಿ’ಯನ್ನು ಇದ್ದ ಹಾಗೆ ನಿರೂಪಿಸಿದರೆ ಕಂಡದ್ದು ಕಂಡ ಹಾಗೆ ಹೇಳಿದರೆ ಸಂಬಂಧಿಸಿದ ಜಾತಿಯವರಿಗೆ ಅವಮಾನವಾಗುತ್ತದೆ ಎನ್ನುವ ವಾದಕ್ಕೆ ಈ ಮತಾಂಧರ ಆಡಳಿತದಲ್ಲಿ ಗೌರವಪೂರ್ವಕ ಮನ್ನಣೆ ದೊರಕುತ್ತದೆ ಹಾಗೂ ಸತ್ಯವನ್ನು ಹೇಳುವ ಕಲಾವಿದರು ಜೈಲುವಾಸಿಯಾಗುತ್ತಾರೆ.

ಇದಕ್ಕೂ ಕೆಲ ತಿಂಗಳುಗಳ ಮುಂಚೆ ಫೆಬ್ರವರಿ 2021ರಲ್ಲಿ ಅಮೇಜಾನ್ ಓಟಿಟಿಯಲ್ಲಿ ‘ತಾಂಡವ್’ ವೆಬ್ ಸರಣಿಯ ವಿರುದ್ದವೂ ಬ್ರಾಹ್ಮಣರನ್ನು ನಿಂದನೆ ಮಾಡಲಾಗಿದೆ ಎನ್ನುವ ಆರೋಪದ ಮೇಲೆ ಅದರ ಪ್ರಸಾರವನ್ನು ನಿರ್ಬಂದಿಸಬೇಕೆಂದು ಬ್ರಾಹ್ಮಣ ಜಾತಿ ಒಕ್ಕೂಟ ಗಲಾಟೆ ಮಾಡಿತು. ಅಲ್ಲಿನ ಶಿವನ ಪಾತ್ರವನ್ನು ಮಹಮದ್ ಜೀಶಾನ್ ಮಾಡಿದ್ದ ಮತ್ತು ಆತನ ಪಾತ್ರದ ಮೂಲಕ ಶಿವನನ್ನು ವಿಂಡಬನಾತ್ಮಕವಾಗಿ ಚಿತ್ರಿಸಲಾಗಿದೆಯೆಂದು ‘ತಾಂಡವ್ ವೆಬ್ ಸರಣಿಯ ವಿರುದ್ದ ಬಹುಸಂಖ್ಯೆಯಲ್ಲಿ, ಬೇರೆ ಬೇರೆ ರಾಜ್ಯಗಳಲ್ಲಿ ಎಫ್‌.ಐ.ಆರ್  ದಾಖಲಿಸಲಾಯಿತು. ಇದರ ನಿರ್ದೇಶಕ ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಿದ. ಆದರೆ ಸುಪ್ರೀಂ ಕೋರ್ಟ ನಿರ್ಮಾಪಕರಿಗೆ ಬಂಧನದಿಂದ ರಕ್ಷಣೆ ಕೊಡಲು ನಿರಾಕರಿಸಿತು. ನಟ ಮಹಮ್ಮದ್ ಜೀಶಾನ್‌ನ ವಕೀಲರು ‘ಆತ ಆ ಸರಣಿಯಲ್ಲಿ ಒಂದು ಪಾತ್ರವಾಗಿ ಅಬಿನಯಿಸುತ್ತಿದ್ದಾನೆ ಮಾತ್ರ’ಎಂದು ಗೋಗೆರೆದರೂ ಸಹ ಒಪ್ಪದ ಸುಪ್ರೀಂ ಕೋರ್ಟ ಪೀಠವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಇತರರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಪಾತ್ರಗಳಲ್ಲಿ ನೀನು ಅಭಿನಯಿಸಬಾರದು’ ಎಂದು ಹೇಳಿದೆ. ನ್ಯಾಯಾಂಗವೇ ಕೈಕೊಟ್ಟ ಮೇಲೆ ಪ್ರಜ್ಞಾವಂತರು ಕಲೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಂವಿಧಾನ ಎಂದು ಬಡಬಡಿಸುವುದು ಅರಣ್ಯರೋದನವಾಗುತ್ತದೆ ಎಂಬುದು ಸಾಬೀತಾಯಿತು.

ಇದನ್ನು ಓದಿ : ಸರ್ಕಾರದ ವಿರುದ್ಧ ಧ್ವನಿ ಎತ್ತಿದವರೆಲ್ಲರೂ ಜೈಲಿಗೆ: ಪಿಣರಾಯಿ ಎಚ್ಚರಿಕೆ

100 ವರ್ಷಗಳ ಹಿಂದೆ 1921ರಲ್ಲಿ ‘ಟೈಮ್ಸ್ ಆಫ್ ಇಂಡಿಯಾ’ ದಿನಪತ್ರಿಕೆಯಲ್ಲಿ ‘ಹಿಂದೂ ದೇವರನ್ನು ಯಾರು ಅವಮಾನಿಸುತ್ತಾರೆ’ ಎನ್ನುವ ಶಿರೋನಾಮೆಯಡಿ ಪತ್ರವೊಂದು ಪ್ರಕಟವಾಗಿತ್ತು. ಆ ಪತ್ರದಲ್ಲಿ ‘ಬಟ್ಟೆಗಳ ಮೇಲೆ, ಕಡ್ಡಿಪೊಟ್ಟಣದ ಮೇಲೆ, ಸಿನಿಮಾಗಳಲ್ಲಿ ಹಿಂದೂ ದೇವರುಗಳನ್ನು ಛಾಪಿಸಿರುತ್ತಾರೆ ಮತ್ತು ಇದನ್ನು ಎಲ್ಲರೂ ನೋಡುತ್ತಾರೆ.  ಅಲ್ಲದೆ ಎಲ್ಲಾ ಜನಾಂಗಗಳು ಹಿಂದೂ ದೇವರುಗಳ ಪಾತ್ರಗಳಲ್ಲಿ ಅಭಿನಯಿಸುತ್ತಾರೆ, ಈ ಅವಮಾನದ ವಿರುದ್ದ ಯಾರಾದರೂ ಪ್ರತಿಭಟಿಸಿದ್ದಾರೆಯೇ’ ಎನ್ನುವ ಸಾರಾಂಶವಿತ್ತು.  ಇದು ಸ್ವಾತಂತ್ರ್ಯಪೂರ್ವದಲ್ಲಿನ ಮತಾಂಧತೆಯ ಮನಸ್ಥಿತಿ.  ಬಹುಶಃ ಆಗ ಸ್ವಾತಂತ್ರ್ಯ ಬರಲಿ ಎಲ್ಲವೂ ಸರಿ ಹೋಗಬಹುದು ಎಂದು ಸಮಾದಾನಪಟ್ಟಿಕೊಂಡಿದ್ದರೇನೋ!! ಆದರೆ ಸ್ವಾತಂತ್ರ್ಯ ಬಂದು 74 ವರ್ಷಗಳಾದವು. ಆದರೆ ಆ ಪತ್ರದ ಹಿಂದಿನ ಮತಾಂಧತೆ ಮತ್ತಷ್ಟು ವಿಕೃತಗೊಂಡಿದೆಯೆಂಬುದಕ್ಕೆ ಮೇಲಿನ ಘಟನೆಯೇ ಸಾಕ್ಷಿ.

ಇದಕ್ಕೂ ಕೆಲ ತಿಂಗಳುಗಳ ಮುಂಚೆ ನವೆಂಬರ್ 2020ರಲ್ಲಿ ನೆಟ್‌ಫ್ಲಿಕ್ಸ್ ನಲ್ಲಿ ಪ್ರದರ್ಶನಗೊಂಡ ‘ಸ್ಯೂಟೆಬಲ್  ಬಾಯ್’ ವೆಬ್ ಸರಣಿಯ ದೃಶ್ಯವೊಂದರಲ್ಲಿ ದೇವಸ್ಥಾನದ ಹಿನ್ನೆಲೆಯಲ್ಲಿ ‘ಲತಾ’ಎನ್ನುವ ಪಾತ್ರವು ‘ಕಬೀರ್’ ಎನ್ನುವ ಪಾತ್ರದೊಂದಿಗೆ ತುಟಿಗೆ ಮುತ್ತಿಡುವ ದೃಶ್ಯಕ್ಕೆ ವಿರೋಧ ವ್ಯಕ್ತವಾಯಿತು. ಇದರ ಆಸುಪಾಸಿನಲ್ಲಿ ‘ತಾನಿಷ್ಟ’ ಎನ್ನುವ ಆಭರಣದ ಕಂಪನಿಯ ಜಾಹೀರಾತಿನಲ್ಲಿ ಹಿಂದೂ ಮಹಿಳೆಯು ಮುಸ್ಲಿಂ ಅತ್ತೆ-ಮಾವನ ಮನೆಯಲ್ಲಿ ತನ್ನ ಸೀಮಂತನವನ್ನು ಸಂಭ್ರಮಿಸುವ ದೃಶ್ಯಕ್ಕೆ ವ್ಯಾಪಕ ಟೀಕೆಗಳು ಹರಿದುಬಂದ ನಂತರ ಆ ಜಾಹೀರಾತನ್ನು ಹಿಂಪಡೆಯಲಾಯಿತು.

ಈ ‘ರದ್ದು ಸಂಸ್ಕೃತಿ’ಗೆ ಆಹುತಿಯಾದ ಆಂಧೀ, ಕಿಸ್ಸಾ ಕುರ್ಸೀಕಾ, ಫೈರ್, ಕಾಮಸೂತ್ರ, ಪಾಂಚ್, ಹವಾ ಆಣೆ ದೇ, ಬ್ಲಾಕ್ ಫ್ರೈಡೆ, ವಾಟರ್, ಪಿಂಕ್ ಮಿರರ್, ಪರ್ಜಾನಿಯಾ, ಪದ್ಮಾವತಿ, ಲಿಪ್‌ಸ್ಟಿಕ್ ಅಂಡರ್ ಮೈ ಬುರ್ಕಾ  ಇತ್ಯಾದಿ ಬಲಿಪಶುಗಳ ಪಟ್ಟಿಯೇ ಇದೆ.

ಈ ‘ರದ್ದು ಸಂಸ್ಕೃತಿ’ಯು ಕೇವಲ ಸಿನಿಮಾಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದರ ದಾಳಿಗೆ ನಾಟಕಗಳೂ ಸಹ ಬಲಿಯಾಗಿವೆ. ಕೆಲ ದಿನಗಳ ಹಿಂದೆ ಮಾರ್ಚ 2021ರಲ್ಲಿ ಮದ್ಯಪ್ರದೇಶದಲ್ಲಿ ಇಪ್ಟಾ ಸಂಘಟನೆಯು ಆಯೋಜಿಸಿದ್ದ ರಂಗ ಉತ್ಸವವನ್ನು ಭಜರಂಗದಳ ಸಂಘಟನೆಯು ದಬ್ಬಾಳಿಕೆಯ ಮೂಲಕ ಬಲವಂತವಾಗಿ ರದ್ದುಗೊಳಿಸಿದೆ. ಆ ಉತ್ಸವದಲ್ಲಿ ವಿಜಯ್ ತೆಂಡೂಲ್ಕರ್‌ರವರ ನಾಟಕ ‘ಜಾತ್ ಹಿ ಪೂಚೋ ಸಾಧೂ ಕಿ’ಯ ಶಿರೋನಾಮೆಯಲ್ಲಿ ‘ಸಾಧು’ ಎನ್ನುವ ಹೆಸರು ಈ ಪುಂಡರ ಸಂಘಟನೆಗೆ ಆಕ್ಷೇಪಕ್ಕೆ ಕಾರಣವಾಗಿದೆ. ಈ ನಾಟಕವು ಜಾತಿ, ಸಾಮಾಜಿಕ ವಿಭಜನೆಗಳು ಕುರಿತು ವಿಡಂಬನಾತ್ಮಕವಾಗಿ ಹೇಳುತ್ತದೆ. ನಿರ್ದೇಶಕ ಶಾಂತನು ಪಾಂಡೆ ‘ಈ ನಾಟಕದಲ್ಲಿ ಸಾಧು ಎನ್ನುವ ಹೆಸರು ಆ ಸಾಧು ಸಂತರಿಗೆ ಸಂಬಂಧಿಸಿಲ್ಲ. ಬದಲಿಗೆ ಒಬ್ಬ ಸಜ್ಜನ ವ್ಯಕ್ತಿಗೆ ಹೆಸರಿಡಲಾಗಿದೆ ಮತ್ತು ಹಿಂದಿಯಲ್ಲಿ ಸಾದಾರಣವಾಗಿ ಅಂತಹವರನ್ನು ಸಾಧು ಮನುಷ್ಯ ಎಂದು ಕರೆಯುತ್ತಾರೆ’ ಎಂದು ಹೇಳಿದರು. ಆದರೆ ಮತಾಂಧತೆಯ ಅಮಲು ಏರಿಸಿಕೊಂಡ ಸಮೂಹಸನ್ನಿಗೆ ಇದು ಅರ್ಥವಾಗುವ ಸಾದ್ಯತೆಗಳೇ ಇಲ್ಲ. ದಶಕಗಳ ಹಿಂದೆ ಮಹಾರಾಷ್ರ್ಟದ ಶಿವಸೇನೆ ಮತ್ತು ಬಾಳಾ ಠಾಕ್ರೆಯ ಪುಂಡ ಪೋಕರಿಗಳ ಗುಂಪು ವಿಜಯ್ ತೆಂಡೂಲ್ಕರ್‌ರವರ ‘ಸದ್ದು ಕೋರ್ಟ ನಡೆಯುತ್ತಿದೆ, ಘಾಶೀರಾಂ ಕೊತ್ವಾಲ್, ಸಖಾರಾಮ್ ಬೈಂಡರ್’ ದಂತಹ ವಿಡಂಬನಾತ್ಮಕ ನಾಟಕಗಳ ವಿರುದ್ದವೂ ಗಲಾಟೆ ಮಾಡಿದ್ದರು.  2019ರ ಫೆಬ್ರವರಿಯಲ್ಲಿ ಜೈಪುರದಲ್ಲಿ ಪ್ರದರ್ಶನಗೊಳ್ಳಬೇಕಿದ್ದ ಅಭಿಶೇಕ್ ಮುಜುಂದಾರ್ ನಿರ್ದೇಶನದ ನಾಟಕ Djinns of Eidgah  ವನ್ನು ರದ್ದುಗೊಳಿಸಲಾಯಿತು. ಈ ನಾಟಕವು ‘ದೇಶ ವಿರೋಧಿ’ಯಾಗಿದೆ ಎಂದು ಜನ ಸಮಸ್ಯ ನಿವಾರಣ್ ಮಂಚ್ ಎನ್ನುವ ಬಲಪಂಥೀಯ ಸಂಘಟನೆ ಸ್ಥಳೀಯ ಪೋಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿತ್ತು. ಈ ನಾಟಕದಲ್ಲಿ ಕಾಶ್ಮೀರದ ಉಗ್ರವಾದದ ವಾತಾವರಣದಲ್ಲಿ ಸಿಲುಕಿಕೊಂಡ ಯುವಜನತೆ ಮತ್ತು ಭದ್ರತಾ ಪಡೆಯ ಕುರಿತು ನಿರೂಪಿಸಲಾಗಿದೆ. ಆದರೆ ಫ್ಯಾಸಿಸಂ ವ್ಯವಸ್ಥೆಯಲ್ಲಿ ಇದು ದೇಶವಿರೋಧಿಯಾಗಿ ಪರಿಗಣಿಸಲ್ಪಡುತ್ತದೆ.

ಇದನ್ನು ಓದಿ : ಪಶ್ಚಿಮ ಬಂಗಾಳದ ಚುನಾವಣೆ ಹೇಗಿದೆ ಆಡಳಿತ ವಿರೋಧಿ ಅಲೆ ಎಡಪಕ್ಷಕ್ಕೆ, ಬಿಜೆಪಿಗೆ ಲಾಭವಾಗುತ್ತಾ?

ಅಕ್ಟೋಬರ್ 2018ರಲ್ಲಿ ಬೆಂಗಳೂರಿನ ಜಾಗೃತಿ ಥಿಯೇಟರ್‌ನಲ್ಲಿ  ದಯಾಸಿಂದು ಸಕ್ರೆಪಟ್ಣ ನಿರ್ದೇಶಿಸಿದ ‘ಶಿವ’ ನಾಟಕದ ಪ್ರದರ್ಶನಕ್ಕೆ ಮೂರು ಬೇರೆ ಬೇರೆ ಪುಂಡ ಗುಂಪುಗಳು ವಿರೋಧ ವ್ಯಕ್ತಪಡಿಸಿದವು. ಜಾಗೃತಿಯ ಅರುಂಧತಿ ರಾಜಾ ಸ್ಥಳೀಯ ಪೋಲೀಸರ ರಕ್ಷಣೆ ಬಯಸಿ ವಿನಂತಿಸಿಕೊಂಡಾಗ ‘ನಮ್ಮ ಬಳಿ ಅವಶ್ಯಕ ಪೋಲೀಸರಿಲ್ಲ’ ಎಂದು ಎಜಿಡಿಪಿ ಕೈ ತೊಳೆದುಕೊಂಡರು. ‘ನಮ್ಮ ದೇವರ ಕುರಿತು ನಿಮಗೆ ಮಾತನಾಡಲು ಯಾವುದೇ ಹಕ್ಕಿಲ್ಲ’ ಎಂದು ವಾದಿಸುವ ಆ ಮತಾಂಧರನ್ನು ಎದುರಿಸಲಾಗದೆ ಪ್ರದರ್ಶನವನ್ನು ರದ್ದುಗೊಳಿಸಲಾಯಿತು

ಅರ್ಥಪೂರ್ಣ ಕೃತಿ ಬರೆದು, ನಿರ್ದೇಶಿಸಿದ ಕಾರಣಕ್ಕೆ ದಾಳಿಗೆ ಗುರಿಯಾಗುವುದು ಮತ್ತು ಆ ದೇಶದಲ್ಲಿ ಕ್ರಿಯಾಶೀಲರಾಗಿ, ಆತ್ಮವಂಚನೆಯಿಲ್ಲದೆ ಜೀವಿಸುವುದು ತುಂಬಾ ಕಠಿಣ. ಇಲ್ಲಿ ನಿರ್ದೇಶಕ ಮತ್ತು ನಿರ್ಮಾಪಕರು ಪೋಲೀಸರ ರಕ್ಷಣೆಗೆ ಮನವಿ ಸಲ್ಲಿಸಿದರು ಆದರೆ ಅವರಿಗೆ ಯಾವುದೇ ಸಕರಾತ್ಮಕ ಉತ್ತರ ದೊರಕಿಲ್ಲ.

ಉಪಸಂಹಾರ

ರಂಗಭೂಮಿ ಇತಿಹಾಸಕಾರ, ನಾಟಕಕಾರ ಶಾಂತಾ ಗೋಖಲೆಯವರು ‘ಅರವತ್ತು, ಎಪ್ಪತ್ತರ ದಶಕಗಳಲ್ಲಿಯೂ ನಾಟಕಗಳ ವಿರುದ್ದ ಪ್ರತಿಭಟನೆಗಳು ನಡೆಯುತ್ತಿದ್ದವು. ಆದರೆ ಆಗ ಕೆಲ ದೃಶ್ಯಗಳಲ್ಲಿ ಆಶ್ಲೀಲತೆಯಿದೆ, ದ್ವಂದಾರ್ಥ ಸಂಭಾಷಣೆಯಿದೆ, ರಂಗಮಂಚದ ಮೇಲೆಯೇ ಮಹಿಳಾ ಪಾತ್ರದಾರಿಗಳು ಸೀರೆ ಬದಲಿಸುತ್ತಾರೆ, ಅದೇ ಮಹಿಳೆಯು ಮತ್ತೊಂದು ದೃಶ್ಯದಲ್ಲಿ ತನ್ನ ಗಂಡನಿಗೆ ಚಪ್ಪಲಿಯಲ್ಲಿ ಹೊಡೆಯುತ್ತಾಳೆ ಎನ್ನುವ ಆಕ್ಷೇಪಣೆಗಳಿದ್ದವು’ ಎಂದು ನೆನಪಿಸಿಕೊಳ್ಳುತ್ತಾರೆ. ಆದರೆ ಈಗ ನಿರಂಕುಶ ಆಡಳಿತದಲ್ಲಿ ಬಲಪಂಥೀಯ ಪುಂಡ ಗುಂಪುಗಳು ಕೇವಲ ಧಾರ್ಮಿಕತೆಯ ಕಾರಣವನ್ನು ಮುಂದಿಟ್ಟುಕೊಂಡು ನಾಟಕದ ಪ್ರದರ್ಶನದ ವಿರುದ್ದ ಹಿಂಸೆಗೆ ಮುಂದಾಗುತ್ತಾರೆ. ನಿಮಗೆ ಇಷ್ಟವಿಲ್ಲದೇ ಹೋದರೆ ಈ ನಾಟಕವನ್ನು ನೋಡಬೇಡಿ ಎನ್ನುವ ಸಜ್ಜನಿಕೆಗೆ ಇಂದು ಯಾವುದೇ ಬೆಲೆಯಿಲ್ಲ. ಈ ಬಲಪಂಥೀಯ ಗುಂಪುಗಳ ಪುಂಡಾಟಿಕೆಯೆ ನಿಷೇಧಕ್ಕೊಳಪಡುವುದು ಇಂದಿನ ಅಗತ್ಯವಾಗಿದೆ.

ಭಾರತದ ಪ್ರಜಾಪ್ರಭುತ್ವವು ತಾರತಮ್ಯದ ತಳಹದಿಯ ಮೇಲೆ ನಿಂತಿದೆ ಮತ್ತು ಇಂದು ನಿರಂಕುಶ ಪ್ರಭುತ್ವದ ಅಭಿವ್ಯಕ್ತಿಯಾಗಿ ಮಾರ್ಪಟ್ಟಿದೆ. ಇಂತಹ ಸನ್ನಿವೇಶದಲ್ಲಿ ಇಲ್ಲಿನ ಪ್ರಭುತ್ವ-ವ್ಯವಸ್ಥೆಗೆ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿನ ಮೇಲ್ಜಾತಿಗಳ ಹಿತಾಸಕ್ತಿ ಕಾಪಾಡುವುದು ಮುಖ್ಯವಾಗುತ್ತದೆ. ಇವರ ಎಲ್ಲಾ ಕ್ರೌರ್ಯ ಮತ್ತು ಟೊಳ್ಳುತನವನ್ನು ಬಯಲು ಮಾಡುವ ಸಾಹಿತ್ಯ, ಸಿನಿಮಾ, ನಾಟಕಗಳ ವಿರುದ್ದ ತೂಗುಗತ್ತಿ ನೇತಾಡುತ್ತಲೇ ಇರುತ್ತದೆ. ಬ್ರಾಹ್ಮಣ್ಯದ ತಾರತಮ್ಯ ಸಿದ್ಧಾಂತದ ಮುಂದುವರೆದ ಭಾಗದಂತೆ, ಅದರ ಕವಲೊಡೆದ ಟೊಂಗೆಗಳಂತಿರುವ ಈ ಬಲಪಂಥೀಯ ಪುಂಡರ ಗುಂಪುಗಳನ್ನು ಇಲ್ಲಿನ ಸಾರ್ವಜನಿಕ ಸಂಸ್ಥೆಗಳು ಬೆಂಬಲಿಸುತ್ತವೆ. ಅಂಚಿನಲ್ಲಿರುವ ಪುಂಡ ಪೋಕರಿಗಳ ಗುಂಪು ಈ ಬಹುಸಂಖ್ಯಾತವಾದದ ಹುಸಿ ರಾಷ್ಟ್ರೀಯತೆ, ಮೇಲ್ಜಾತಿಗಳ ಯಜಮಾನ್ಯ ಧೋರಣೆ ಮತ್ತು ಪರಂಪರೆಯ ಸಂಸ್ಕೃತೀಕರಣ ಹಾಗೂ ಪರಧರ್ಮ, ಜೀವಪರ ಚಿಂತನೆಗಳ ಕುರಿತಾಗಿ ಅಸಹಿಷ್ಣತೆಯನ್ನು ಮೈಗೂಡಿಸಿಕೊಂಡರೆ ಅದನ್ನು ಎದುರಿಸಬಹುದು ಆದರೆ ಅಧಿಕಾರದಲ್ಲಿರುವ ಪಕ್ಷ ಮತ್ತು ಅದರ ಸಂಘಟನೆಗಳೇ ಇದರ ನೇತೃತ್ವ ವಹಿಸಿದಾಗ ಇದು “ಧರೆ ಹತ್ತಿ ಉರಿದರೆ”ಎನ್ನುವ ದುರಂತ.

Donate Janashakthi Media

Leave a Reply

Your email address will not be published. Required fields are marked *