ಅಭಿವೃದ್ದಿಯ ಭ್ರಮೆ ಸೃಷ್ಟಿಸುವ ಹೂಡಿಕೆ ಸಮಾವೇಶ

ಹರ್ಷ

ನವ ಉದಾರೀಕರಣ ಯುಗದಲ್ಲಿ `ವ್ಯವಹಾರ ಮಾಡುವುದು ಸರ್ಕಾರಗಳ ಕೆಲಸವಲ್ಲ’ ಎಂಬ ಧ್ಯೇಯದಡಿಲ್ಲಿ, ಸರ್ಕಾರಗಳು ಸಾರ್ವಜನಿಕ ರಂಗದ ಉದ್ದಿಮೆಗಳನ್ನು ವರ್ಷದಿಂದ ವರ್ಷಕ್ಕೆ ಮುಚ್ಚುತ್ತಾ ಅಥವಾ ಖಾಸಗಿಯವರಿಗೆ ಪರಭಾರೆ ಮಾಡುತ್ತಾ ಉದ್ಯೋಗ ಸೃಷ್ಟಿ ಮತ್ತು ಅಭಿವೃದ್ದಿ ಕಾರ್ಯಗಳ ಗುರಿಸಾಧನೆಗಾಗಿ ಖಾಸಗಿ ರಂಗವನ್ನು ಅವಲಂಬಿಸಿವೆ. ಇದಕ್ಕಾಗಿ ಕೈಗಾರಿಕೆ ಸ್ಥಾಪಿಸಲು ಭೂಮಿ, ನೀರು, ವಿದ್ಯುತ್, ಮೂಲಭೂತ ಸೌಲಭ್ಯಗಳು ಹಾಗೂ ಹಲವಾರು ಪ್ರೋತ್ಸಾಹನೆ ಮತ್ತು ರಿಯಾಯಿತಿಗಳನ್ನು ಮನಸೋಇಚ್ಛೆ ನೀಡಲಾಗುತ್ತದೆ.

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಸರ್ಕಾರವು ನವೆಂಬರ್ 2-4 ರವರೆಗೆ ಏರ್ಪಡಿಸಿತ್ತು.

‘ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ-2022 ಒಟ್ಟು ರೂ. 10 ಲಕ್ಷ ಕೋಟಿ ಬಂಡವಾಳ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದರಿಂದ ರಾಜ್ಯದಲ್ಲಿ ಮುಂಬರುವ ವರ್ಷಗಳಲ್ಲಿ 10 ಲಕ್ಷ ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆ ಇದೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ. ಇದರಲ್ಲಿ ಈ ಬಾರಿಯ ಹೂಡಿಕೆ ಒಪ್ಪಂದಗಳಲ್ಲಿ ಅತಿ ಹೆಚ್ಚು ಒಪ್ಪಂದ ಇಂಧನ ಕ್ಷೇತ್ರದಲ್ಲಿ ಆಗಿದ್ದು, ಹಸಿರು ಇಂಧನ ವಲಯದಲ್ಲಿ ರೂ.2 ಲಕ್ಷ ಕೋಟಿ, ಗ್ರೀನ್ ಹೈಡ್ರೋಜನ್ ಕ್ಷೇತ್ರದಲ್ಲಿ ರೂ.40 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಒಪ್ಪಂದ ಆಗಿದೆ ಎನ್ನಲಾಗಿದೆ.

ಈ ಅಂಕಿಅಂಶಗಳ ಒಳಹೊಕ್ಕು ನೋಡಿದರೆ ಈಗಾಗಲೇ ಕಾರ್ಯಾಚರಣೆಯಲ್ಲಿರುವ ಜಿಂದಾಲ್ ತರಹದ ಬೃಹತ್ ಉದ್ದಿಮೆಗಳು ತಮ್ಮ ಘಟಕಗಳ ವಿಸ್ತರಣೆಯನ್ನು ಕೈಗೊಂಡಿದ್ದು ಅಂತಹವುಗಳ ಲೆಕ್ಕಹಿಡಿದರೆ ಶೇ. 30 ರಷ್ಟು ಬಂಡವಾಳ ಹೂಡಿಕೆ ಆಗಿರುವುದನ್ನೇ ಎಂ.ಒ.ಯು ಮಾಡಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಅಲ್ಲದೇ ಏಪ್ರಿಲ್ ನಲ್ಲಿ ನವದೆಹಲಿಯಲ್ಲಿ ನಡೆದ ವಿಂಡ್ ಎನರ್ಜಿ 2022 ಸಮ್ಮೇಳನದಲ್ಲಿ ಕ್ರೆಡೆಲ್ (KREDL) ಸಂಸ್ಥೆಯು ರೂ. 61,000 ಕೋಟಿ ಮೊತ್ತದ ಹೊಸ ಪ್ರಸ್ತಾವನೆಗಳಿಗೆ ಎಂ.ಒ.ಯು ಸಹಿ ಮಾಡಿರುವ ಪ್ರಸ್ತಾವನೆಗಳೂ ಸಹ ಸೇರಿವೆ ಎನ್ನಲಾಗಿದೆ.

ಕಳೆದ 4 ವರ್ಷಗಳಲ್ಲಿ 1110 ಕೈಗಾರಿಕಾ ಪ್ರಸ್ತಾವನೆಗಳಿಗೆ ರಾಜ್ಯವು ಅನುಮೋದನೆ ನೀಡಿದ್ದು ಇದರಿಂದ ರೂ. 1.30 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮತ್ತು 4.50 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತದೆಂದು ಹೇಳಲಾಗಿದೆ. ಆದರೆ ಈಪೈಕಿ ಶೇ. 25 ರಷ್ಟು ಕಾರ್ಯಗತವಾಗುವುದೇ ಹೆಚ್ಚು. ಇಂತಹ ಪ್ರಸ್ತಾವನೆಗಳ ಆಡಿಟ್ ಮಾಡುವುದರಿಂದ ಜನರಿಗೆ ಕೈಗಾರಿಕಾಭಿವೃದ್ಧಿಯ ಬಗ್ಗೆ ನಿಖರ ಮಾಹಿತಿ ಸಿಗುತ್ತದೆ.

ಇಂತಹ ಸಮಾವೇಶಗಳನ್ನು ರಾಜ್ಯವು ಸುಮಾರು 2000ನೇ ವರ್ಷದಿಂದ ಪ್ರತಿ ಮೂರ್ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸುತ್ತಾ ಬಂದಿದೆ. ನವ ಉದಾರೀಕರಣ ಕಾಲಘಟ್ಟದಲ್ಲಿ ರಾಜ್ಯ ಸರ್ಕಾರಗಳು ತಾ ಮುಂದು ನಾ ಮುಂದು ಎನ್ನುತ್ತಾ ತಮ್ಮಲ್ಲಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಪ್ರಚುರಪಡಿಸಲು ಮತ್ತು ಹೂಡಿಕೆಗೆ ಹಲವಾರು ಪ್ರೋತ್ಸಾಹನೆ ಮತ್ತು ರಿಯಾಯಿತಿಗಳನ್ನು ನೀಡಿ ವಿಶ್ವ ಬಂಡವಾಳ ಹೂಡಿಕಯನ್ನು ಆಕರ್ಷಿಸಲು ಹಲವು ರಾಜ್ಯಗಳೂ ಸಹ ಆಗಿದ್ದಾಂಗ್ಗೆ ಆಯೋಜಿಸುವುದನ್ನು ಗಮನಿಸಿದ್ದೇವೆ.

ನವ ಉದಾರೀಕರಣ ಯುಗದಲ್ಲಿ `ವ್ಯವಹಾರ ಮಾಡುವುದು ಸರ್ಕಾರಗಳ ಕೆಲಸವಲ್ಲ’ ಎಂಬ ಧ್ಯೇಯದಡಿಲ್ಲಿ, ಸರ್ಕಾರಗಳು ಸಾರ್ವಜನಿಕ ರಂಗದ ಉದ್ದಿಮೆಗಳನ್ನು ವರ್ಷದಿಂದ ವರ್ಷಕ್ಕೆ ಮುಚ್ಚುತ್ತಾ ಅಥವಾ ಖಾಸಗಿಯವರಿಗೆ ಪರಭಾರೆ ಮಾಡುತ್ತಾ ಉದ್ಯೋಗ ಸೃಷ್ಟಿ ಮತ್ತು ಅಭಿವೃದ್ದಿ ಕಾರ್ಯಗಳ ಗುರಿಸಾಧನೆಗಾಗಿ ಖಾಸಗಿ ರಂಗವನ್ನು ಅವಲಂಬಿಸಿವೆ. ಇದಕ್ಕಾಗಿ ಕೈಗಾರಿಕೆ ಸ್ಥಾಪಿಸಲು ಭೂಮಿ, ನೀರು, ವಿದ್ಯುತ್, ಮೂಲಭೂತ ಸೌಲಭ್ಯಗಳು ಹಾಗೂ ಹಲವಾರು ಪ್ರೋತ್ಸಾಹನೆ ಮತ್ತು ರಿಯಾಯಿತಿಗಳನ್ನು ಮನಸೋಇಚ್ಛೆ ನೀಡಲಾಗುತ್ತದೆ.

ಉದ್ಯೋಗ ಸೃಷ್ಟಿ, ಹೂಡಿಕೆಯ ಲಾಭ ಮತ್ತು ಸಂಪನ್ಮೂಲ, ಪರಿಸರ & ರಿಯಾಯಿತಿಗಳ ನಷ್ಟದ ಲೆಕ್ಕಾಚಾರ:-

ಸರ್ಕಾರಗಳು ಜನತೆಯ ಹಿತವನ್ನು ಬಲಿಕೊಟ್ಟು ಖಾಸಗಿ ರಂಗಕ್ಕೆ ಎಲ್ಲವನ್ನೂ ಧಾರೆ ಎರೆದುಕೊಡಲು ಎಷ್ಟೊಂದು ಬದ್ದವಾಗಿವೆಯೆಂದರೆ ಖಾಸಗಿ ರಂಗದ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಕೈಗಾರಿಕೋದ್ಯಮಿಗಳಿಗೆ ನೀಡಲಾಗುವ ರಿಯಾಯಿತಿ ದರದ ಭೂಮಿ, ನೀರು, ವಿದ್ಯುತ್, ರಸ್ತೆ, ಇತ್ಯಾದಿ ಮೂಲಭೂತ ಸೌಲಭ್ಯಗಳು ಮತ್ತು ಪರಿಸರದ ಮೇಲುಂಟಾಗುವ ಪರಿಣಾಮಗಳು ಹಾಗೂ ನೀಡಲಾಗುವ ಹಲವಾರು ತೆರಿಗೆ ವಿನಾಯಿತಿಗಳು, ಪ್ರೋತ್ಸಾಹನೆ ಮತ್ತು ರಿಯಾಯಿತಿಗಳ ಒಟ್ಟು ಮೊತ್ತಕ್ಕೆ ಅವು ಸೃಜಿಸುವ ಉದ್ಯೋಗಗಳು ಮತ್ತು ಅವು ಗಳಿಸುವ ಲಾಭಕ್ಕೆ ಸರಿಸಮಾನವಾಗುತ್ತವೆಯೇ ಎಂಬ ಬಗ್ಗೆ ರಾಜ್ಯದ ಜನತೆಗೆ ಲಭಿಸುವ ಯಾವುದೇ ಲಾಭ-ನಷ್ಟ ಲೆಕ್ಕಾಚಾರಗಳನ್ನು ಸರ್ಕಾರಗಳು ಮಾಡಿಟ್ಟುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಅಂದರೆ ಕನಿಷ್ಟ ಪಕ್ಷ ರಾಜ್ಯದ ಖಜಾನೆಯಿಂದ ಈ ಕೈಗಾರಿಕೆಗಳ ಉದ್ದಾರಕ್ಕಾಗಿ ಹೊರಹರಿಯುವ ಒಟ್ಟು ಆರ್ಥಿಕ ವೆಚ್ಚದ ಕುರಿತು ಸ್ಪಷ್ಟ ಅಧ್ಯಯನವೇ ನಡೆಯುವುದಿಲ್ಲ.

ಉದಾಹರಣೆಗೆ, ಅತಿ ದೊಡ್ಡ ಕಂಪನಿಗಳಾದ ಟಾಟಾ ಮೋಟಾರರ್ಸ್, ಹೊಂಡಾ ಮೋಟಾರ್ಸ್ ಇತ್ಯಾದಿ ಕಂಪನಿಗಳಿಗೆ ಅವು ಕೇಂದ್ರ ಸರ್ಕಾರಕ್ಕೆ ಪಾವತಿಸಬೇಕಾದ ಜಿ.ಎಸ್.ಟಿ ತೆರಿಗೆಯ ಮೊತ್ತವನ್ನು ಪಾವತಿಸಲು ರಾಜ್ಯ ಸರ್ಕಾರವು 15-20 ವರ್ಷಗಳ ಕಾಲ ಬಡ್ಡಿರಹಿತ ಜಿ.ಎಸ್.ಟಿ ಸಾಲವನ್ನು ನೀಡುತ್ತದೆ.

ಕೈಗಾರಿಕೆ ನೀತಿ 2020-25 ರಡಿ ವಿತ್ತೀಯ ಸೌಲಭ್ಯಗಳು:
* ಮುದ್ರಾಂಕ ಮತ್ತು ನೋಂದಣಿ ಶುಲ್ಕ ವಿನಾಯಿತಿ
* ಭೂಪರಿವರ್ತನೆ ಶುಲ್ಕ
* ವಿದ್ಯುತ್ ತೆರಿಗೆ ವಿನಾಯಿತಿ ಶುಲ್ಕ
* ಸಾಲದ ಮೇಲಿನ ಬಡ್ಡಿ ವಿನಾಯಿತಿ
* ಗುಣಮಟ್ಟ ದೃಢೀಕರಣ ಸಹಾಯಧನ
* ತ್ಯಾಜ್ಯ ಸಂಸ್ಕರಣ ಘಟಕ ಅಳವಡಿಸಲು ಸಹಾಯಧನ
* ಸಂಶೋಧನೆ & ಅಭಿವೃದ್ಧಿಗೆ ಬಂಡವಾಳ ಸಹಾಯಧನ

ವ್ಯಾಪಾರವನ್ನು ಸರಳಗೊಳಿಸುವ ಪ್ರಕ್ರಿಯೆ (Ease of doing business):

ವ್ಯಾಪಾರವನ್ನು ಸರಳಗೊಳಿಸುವ ಪ್ರಕ್ರಿಯೆ ಹೆಸರಿನಲ್ಲಿ ಕಾರ್ಮಿಕ ಕಾನೂನುಗಳನ್ನು ಮಾಲೀಕರ ಪರವಾಗಿ ತಿದ್ದಪಡಿ ತರಲಾಗಿದೆ. 2014ರಲ್ಲಿ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದಾಗ ಇoಆಃ ಯ ವಿಶ್ವ ರ‍್ಯಾಂಕಿಂಗ್ ನಲ್ಲಿ ಭಾರತವು167 ನೇ ಸ್ಥಾನದಿಂದ 2019 ರ ಹೊತ್ತಿಗೆ 64 ನೇ ಸ್ಥಾನಕ್ಕೇರಿದೆ. ಆದರೆ, ಇಂತಹ ಸಾಧನೆಯನ್ನು ಹಸಿವಿನ ಸೂಚ್ಯಂಕ, ನಿರುದ್ಯೋಗ ಸೂಚ್ಯಂಕ, ಮಾನವ ಅಭಿವೃದ್ದಿ ಸೂಚ್ಯಂಕ ಇತ್ಯಾದಿಗಳಲ್ಲಿ ಸಾಧಿಸಲಾಗಿಲ್ಲ!

ಕೈಗಾರಿಕೆ ನೀತಿ 2020-25 ರ ಕಾರ್ಮಿಕ ಸುಧಾರಣೆಗಳು:-

  • ಕೈಗಾರಿಕೆಗಳು ತಾವು ಈ ಸೌಲಭ್ಯಗಳನ್ನು ಪಡೆಯುವ ಸಂದರ್ಭದಲ್ಲಿ ತಾವು ತಿಳಿಸಿರುವಷ್ಟು ಉದ್ಯೋಗಗಳನ್ನು ಸೃಷ್ಟಿಸುತ್ತಿರುವ ಕುರಿತು ಕೈಗಾರಿಕೆ ಯೋಜನೆ ಅನುಷ್ಟಾನಗೊಂಡ ನಂತರದಲ್ಲಿ ಖಾತರಿ ಮಾಡಿಕೊಳ್ಳುವ ಯಾವುದೇ ವ್ಯವಸ್ಥೆ ಇರುವುದಿಲ್ಲ.
  • 50ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಕೈಗಾರಿಕೆಗಳು ಒಟ್ಟಾರೆ ಹುದ್ದೆಗಳಲ್ಲಿ ಸರಾಸರಿ ಶೇ 70ರಷ್ಟು ಹುದ್ದೆಗಳನ್ನು ಮತ್ತು ಡಿ ಗುಂಪಿನ ಹುದ್ದೆಗಳಾದ ಸ್ವಚ್ಛತಾ ಕೆಲಸಗಳ ಹುದ್ದೆಗಳಲ್ಲಿ ಶೇ 100 ರಷ್ಟನ್ನು ಸ್ಥಳೀಯರಿಗೆ ಮೀಸಲಿರಿಸಬೇಕು. ಇದನ್ನು ಸಹ ಖಾತರಿ ಮಾಡಿಕೊಳ್ಳುವ ಯಾವುದೇ ವ್ಯವಸ್ಥೆ ಇರುವುದಿಲ್ಲ, ಬದಲಿಗೆ ಕೈಗಾರಿಕೆಗಳು ಸ್ವಯಂ ದೃಢೀಕರಣ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ.
  • ಮಹಿಳಾ ಕಾರ್ಮಿಕರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ನೋಂದಣಿ ಮೂಲಕ ಅವಕಾಶ
  • ಗುತ್ತಿಗೆ ಕೆಲಸವನ್ನು ವ್ಯಾಪಕಗೊಳಿಸಲು ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶ) ಕಾಯಿದೆ 1946ಕ್ಕೆ ತಿದ್ದುಪಡಿ
  • ವಿಶೇಷ ಆರ್ಥಿಕ ವಲಯ/ ಐಟಿ ವಲಯದಲ್ಲಿ ಕಾರ್ಮಿಕ ಕಾನೂನಿನಡಿ ಕೆಲವು ವಿನಾಯಿತಿ
  • ಬಾಯ್ಲರ್ ಸುರಕ್ಷತೆ ಬಗ್ಗೆ ಕೈಗಾರಿಕೆಗಳು ಸ್ವಯಂ ದೃಢೀಕರಣ ಸಲ್ಲಿಸಲು ವ್ಯವಸ್ಥೆ

ಏಕಗವಾಕ್ಷಿ ಮಂಜೂರಾತಿ ಸಮಿತಿಗಳು-ಒಂದು ಕಿಟಕಿ ಹಲವು ಬಾಗಿಲುಗಳು:-

ಹೊಸ ಕೈಗಾರಿಕಾ ಪ್ರಸ್ತಾವನೆಗಳಿಗೆ ಸರ್ಕಾರವು ಮಂಜೂರಾತಿ ನೀಡಲು ಜಿಲ್ಲಾ, ರಾಜ್ಯ ಮತ್ತು ಉನ್ನತ ಮಟ್ಟದ 3 ಸಮಿತಿಗಳನ್ನು ರಚಿಸಿದ್ದರೂ, ಈ ಸಮಿತಿಗಳು ಅನುಮೋದಿಸುವ ಸಂದರ್ಭದಲ್ಲೂ ಉದ್ದಿಮೆದಾರರಿಂದ ವಸೂಲಾತಿ ಇದ್ದು ಅನುಮೋದನೆಯಾದ ಮೇಲೂ ಸಹ ಹತ್ತಾರು ಇಲಾಖೆಗಳಿಂದ ಅನುಮೋದನೆ/ ಪರವಾನಗಿ ಪಡೆಯಲು ವಿಶೇಷವಾಗಿ ಸಣ್ಣ ಉದ್ದಿಮೆದಾರರು ಹೆಣಗಬೇಕಾಗಿದೆ. ಆದ್ದರಿಂದಲೇ ಈ ಏಕಗವಾಕ್ಷಿ ಮಂಜೂರಾತಿಯನ್ನು “ಒಂದು ಕಿಟಕಿ ಹಲವು ಬಾಗಿಲುಗಳು” ಎಂದು ಹಾಸ್ಯ ಮಾಡುವುದುಂಟು.

ಕೈಗಾರಿಕಾ ಭೂಮಿ:-

ಬೆಂಗಳೂರು ಬಿಟ್ಟು, ಮಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಬಳ್ಳಾರಿ, ತುಮಕೂರುಗಳಲ್ಲಿ ಉದ್ಯಮಗಳ ಸ್ಥಾಪನೆಗಾಗಿ ಸುಮಾರು 50 ಸಾವಿರ ಎಕರೆ ವಿಸ್ತೀರ್ಣದ ‘ಲ್ಯಾಂಡ್ ಬ್ಯಾಂಕ್’ ಇದೆ ಎನ್ನಲಾಗಿದೆ. ಬೆಂಗಳೂರಿನ ಆಸುಪಾಸಿನಲ್ಲಿ ಇಷ್ಟೇ ಪ್ರಮಾಣದ ಭೂಮಿ ಸ್ವಾಧೀನದ ವಿವಿಧ ಹಂತದಲ್ಲಿದೆ.

ಈಗಾಗಲೇ ಹಂಚಿಕೆಯಾಗಿರುವ ಭೂಮಿ ಅನುಪಯುಕ್ತತೆ:-

ಕಳೆದ 20 ವರ್ಷಗಳಿಂದ ಲಕ್ಷಾಂತರ ಎಕರೆ ಭೂಮಿಯನ್ನು ಕೈಗಾರಿಕೆ ಸ್ಥಾಪನೆಗೆ ಹಂಚಿಕೆಪಡೆದಿದ್ದು ಈ ಪೈಕಿ ಹಲವು ಕಂಪನಿಗಳು ಕೈಗಾರಿಕೆಯನ್ನೇ ಸ್ಥಾಪಿಸದೇ ಹಾಗೆ ಭೂಮಿ ಉಳಿಸಿಕೊಂಡಿವೆ. ಇಂತಹ ಸಾವಿರಾರು ಎಕರೆ ಭೂಮಿಯನ್ನು ವಾಪಸ್ ಹಿಂಪಡೆದು ರೈತರಿಗೆ ವಾಪಸ್ ನೀಡಲಾಗಲೀ ನೈಜ ಉದ್ದಿಮೆಗಳಿಗೆ ಪುನರ್-ಹಂಚಿಕೆ ಮಾಡಲಾಗಲೀ ಸರ್ಕಾರಗಳು ದಾರ್ಷ್ಟ್ಯತೆ ಹೊಂದಿಲ್ಲ. ಉದಾಹರಣೆಗೆ 2010 ರ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಉಕ್ಕು ಕೈಗಾರಿಕೆ ಘಟಕ ಸ್ಥಾಪಿಸಲು 2600 ಎಕರೆ ಭೂಮಿಯನ್ನು ಹಂಚಿಕೆ ಪಡೆದಿದ್ದ ಅರ್ಸೆಲರ್-ಮಿತ್ತಲ್ ಕಂಪನಿಯು ಯೋಜನೆಯನ್ನು ಕಾರ್ಯಗತಗೊಳಿಸಲು ವಿಫಲವಾಗಿದ್ದು ಹತ್ತಾರು ವರ್ಷಗಳ ಕಾಲ ಭೂಮಿಯನ್ನು ಹಾಗೇ ಉಳಿಸಿಕೊಂಡಿದೆ. ಹಾಗೇ ಕಲ್ಯಾಣಿ ಗುಂಪಿನ ಕಂಪನಿ, ರಿಲಯನ್ಸ್, ಇತ್ಯಾದಿಯಂತಹ ದೊಡ್ಡ ಕಂಪನಿಗಳು ಹಂಚಿಕೆ ಪಡೆದ ಭೂಮಿಯನ್ನು ಕೈಗಾರಿಕೆಗೆ ಬಳಸದೇ ಹಾಗೇ ಉಳಿಸಿಕೊಂಡಿದ್ದು ಹೊಸದಾಗಿ ರೈತರಿಂದ ಭೂಮಿ ಸ್ವಾಧೀನ ಮಾಡುವ ಮುಂಚೆ ಇಂತಹ ಖಾಲಿ ಭೂಮಿಯನ್ನು ಹಿಂಪಡೆದು ಬಳಸಿಕೊಳ್ಳಬೇಕಿದೆ.

ಚುನಾವಣಾ ಪ್ರಚಾರಕ್ಕೆ ಭೂಮಿಕೆ

ಇಂತಹ ಸಮಾವೇಶಗಳ ಮೂಲಕ ಯಾವುದೇ ಬಂಡವಾಳ ಹೂಡಿಕೆ ಮತ್ತು ಹೊಸ ತಂತ್ರಜ್ಞಾನ ರಾಜ್ಯಕ್ಕೆ ಬರುವುದಿಲ್ಲ. ಆಡಳಿತಾರೂಢ ಪಕ್ಷಗಳು ಚುನಾವಣೆಗೆ ಮುನ್ನ ಜನರನ್ನು ದೊಡ್ಡ ಮಟ್ಟದ ಅಭಿವೃದ್ಧಿ ಆಗುತ್ತಿದೆಯೆಂದು ಪ್ರಚಾರ ಮತ್ತು ಮರಳು ಮಾಡಲು ಬಳಸಿಕೊಳ್ಳುತ್ತವಷ್ಟೇ.

Donate Janashakthi Media

Leave a Reply

Your email address will not be published. Required fields are marked *