ಮೋದಿ ಅವಧಿಯಲ್ಲಿ ಟ್ರಂಪ್ ಅವರನ್ನು ಸಂಪ್ರೀತಗೊಳಿಸಲು ವಿಶೇಷ ಗಮನ ಕೊಡಲಾಯಿತು. ಇದು ಭಾರತದ ರಾಜತಾಂತ್ರಿಕ ಅಥವಾ ರಾಷ್ಟ್ರೀಯ ಹಿತಾಸಕ್ತಿಯ ಅಗತ್ಯವಾಗಿರಲಿಲ್ಲ. ಈ ವಿಶೇಷ ಸಂಬಂಧಕ್ಕೆ ಕಾರಣ ಅವರ ಸೈದ್ಧಾಂತಿಕ ಒಲವು. ಹೊಸ ಅಧ್ಯಕ್ಷೀಯ ಆಡಳಿತ ಅಮೆರಿಕದಲ್ಲಿ ಆರಂಭವಾಗುತ್ತಿದ್ದು, ಸ್ವತಂತ್ರ ವಿದೇಶಾಂಗ ನೀತಿ ಮತ್ತು ವ್ಯೂಹಾತ್ಮಕ ಸ್ವಾಯತ್ತತೆಯನ್ನು ಎತ್ತಿ ಹಿಡಿಯಲು ಇದು ಸರಿಯಾದ ಸಮಯ. ಅಮೆರಿಕದ ಅಡಿಯಾಳು ಸ್ಥಿತಿಯಿಂದ ಭಾರತ ಹೊರಬರಲು ಇದು ಸಕಾಲ. ಆದರೆ ಅಮೆರಿಕನ್ ಸಾಮ್ರಾಜ್ಯಶಾಹಿಯ ಅಡಿಯಾಳಾಗುವ ಹಪಾಹಪಿ ಹಿಂದುತ್ವ ರಾಷ್ಟ್ರವಾದದ ಅಂಗವಾಗಿರುವಾಗ ಇದನ್ನು ಮಾಡುವುದು ಅವರಿಗೆ ಸಾಧ್ಯವೇ?
ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಜೋ ಬೈಡನ್ ಅವರ ಗೆಲುವು ಪ್ರಧಾನಿ ಮೋದಿ ಮತ್ತು ಅವರ ಸರಕಾರಕ್ಕೆ ನುಂಗಲಾರದ ತುತ್ತಾಗಿದೆ. ಯಾಕೆಂದರೆ ಅವರು ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿಯೊಬ್ಬರನ್ನು ಬಹಿರಂಗವಾಗಿ ಬೆಂಬಲಿಸಿದ ಮೊದಲ ಭಾರತೀಯ ಪ್ರಧಾನಿ. ಸೆಪ್ಟೆಂಬರ್ 2019ರಲ್ಲಿ ಹೂಸ್ಟನ್ ನಲ್ಲಿ “ಅಬ್ ಕೀ ಬಾರ್ ಟ್ರಂಪ್ ಸರ್ಕಾರ್” ಎಂದು ಘೋಷಿಸಿದ ನಡೆದ ‘ಹೌಡಿ ಮೋದಿ’ ರ‍್ಯಾಲಿ ಮತ್ತು ಅಹ್ಮದಾಬಾದ್ ನಲ್ಲಿ ಫೆಬ್ರುವರಿ 2020ರಲ್ಲಿ ಟ್ರಂಪ್ ಬೆಂಬಲಾರ್ಥ ನಡೆಸಿದ ‘ನಮಸ್ತೆ ಟ್ರಂಪ್’ ರ‍್ಯಾಲಿ ಮೂಲಕ ಈ ಬೆಂಬಲವನ್ನು ಅವರು ಸೂಚಿಸಿದ್ದರು.
ಡೆಮೊಕ್ರಾಟ್ ಮತ್ತು ರಿಪಬ್ಲಿಕನ್ ಪಕ್ಷಗಳ ನಡುವೆ ನಡೆಯುವ ರಾಜಕೀಯ ಸ್ಪರ್ಧೆಯಲ್ಲಿ ಭಾರತ ಸರಕಾರ ತಟಸ್ಥವಾಗಿರುವುದು ಹಿಂದಿನಿಂದಲೂ ಪಾಲಿಸಿಕೊಂಡು ಬಂದ ಸಂಪ್ರದಾಯವಾಗಿತ್ತು. ಏಕೆಂದರೆ ಕಳೆದ ಮೂರು ದಶಕಗಳಿಂದ ಭಾರತ-ಅಮೆರಿಕಗಳ ನಡುವೆ ಸಾಧಿಸಲಾದ ವ್ಯೂಹಾತ್ಮಕ ಸಂಬಂಧಕ್ಕೆ ಈ ಎರಡೂ ಪಕ್ಷಗಳ ಬೆಂಬಲವಿತ್ತು. ಮಾತ್ರವಲ್ಲ, ಅಧ್ಯಕ್ಷ ಡೆಮೊಕ್ರಾಟ್ ಇರಲಿ ಅಥವಾ ರಿಪಬ್ಲಿಕನ್ ಇರಲಿ ಅಮೆರಿಕನ್ ಸಾಮ್ರಾಜ್ಯಶಾಹಿಗೆ ಪರವಾದ ನೀತಿಗಳನ್ನೇ ಅನುಸರಿಸುವುದು. ಯುಪಿಎ ಸರಕಾರದ ಅವಧಿಯಲ್ಲಿ ಬುಶ್ ಅವಧಿಯಲ್ಲಿ ವ್ಯೂಹಾತ್ಮಕ ಸಂಬಂಧ ಗಟ್ಟಿಗೊಂಡು ಒಬಾಮ ಅವಧಿಯಲ್ಲೂ ಅದು ಮುಂದುವರೆಯಿತು.
ಆದರೆ ಮೋದಿ ಅವಧಿಯಲ್ಲಿ ಟ್ರಂಪ್ ಅವರನ್ನು ಸಂಪ್ರೀತಗೊಳಿಸಲು ವಿಶೇಷ ಗಮನ ಕೊಡಲಾಯಿತು. ಭಾರತದ ರಾಜತಾಂತ್ರಿಕ ಅಥವಾ ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಇದೇನೂ ಅಗತ್ಯವಾಗಿರಲಿಲ್ಲ. ಈ ವಿಶೇಷ ಸಂಬಂಧಕ್ಕೆ ಕಾರಣ ಅವರ ಸೈದ್ಧಾಂತಿಕ ಒಲವು. ಟ್ರಂಪ್ ಮತ್ತು ಅವರ ಆಡಳಿತ ನಡೆಸುತ್ತಿದ್ದ ಉಗ್ರ ಬಲಪಂಥೀಯ ವಲಯಗಳ ಜತೆ ಬಿಜೆಪಿ-ಆರೆಸ್ಸೆಸ್ ಗೆ ಸೈದ್ಧಾಂತಿಕ ಸಾಂಗತ್ಯ ಕಂಡಿತ್ತು. ಟ್ರಂಪ್ ವಾದದ ಬಿಳಿಯರ ಪಾರಮ್ಯ-ಶ್ರೇ಼ಷ್ಟತೆ ಮತ್ತು ಜನಾಂಗವಾದಿ ಲೋಕದೃಷ್ಟಿ ಹಾಗೂ, ಇಸ್ಲಾಮ್-ಭೀತಿಯ ಭೂದ ಮತ್ತು ಚೀನಾ-ವಿರೋಧಗಳ ಮಂತ್ರಪಠಣ ಅವರಿಗೆ ಬಹಳ ಆಪ್ಯಾಯಮಾನವಾಗಿತ್ತು. ಬಿಳಿಯರ ರಾಷ್ಟ್ರೀಯತೆಯಲ್ಲಿ ಅವರಿಗೆ ಹಿಂದುತ್ವ ರಾಷ್ಟ್ರವಾದದ ಮಾರ್ದನಿ ಕೇಳಿಸುತ್ತಿತ್ತು.
ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿದ್ದ ಹರ್ಷ ವರ್ಧನ ಶೃಂಗಾಲ ಅವರ ವರ್ತನೆಯಲ್ಲಿ ಈ ಸೈದ್ಧಾಂತಿಕ ಪ್ರೇಮಪ್ರಕರಣ ಬಹಳ ಸ್ಪಷ್ಟವಾಗಿ ಕಂಡಿತ್ತು. ಶೃಂಗಾಲ ಭಾರತದ ರಾಯಭಾರಿಯಾಗಿದ್ದಾಗ ಸ್ಟೀಫನ್ ಬ್ಯಾನನ್ ಎಂಬ ಬಿಳಿಯರ ಪಾರಮ್ಯವಾದಿ ಮತ್ತು ಮುಸ್ಲಿಂ-ದ್ವೇಷಿಯನ್ನು ಭೇಟಿ ಮಾಡಿದ್ದರು. “ದಂತಕತೆಯಾಗಿರುವ ಸಿದ್ಧಾಂತಿ ಮತ್ತು ಹಿಂದೂ ಪುಣ್ಯಗ್ರಂಥ ಭಗವದ್ಗೀತೆಯ ಹಿಂಬಾಲಕ ಧರ್ಮಯೋಧನನ್ನೂ ಭೇಟಿ ಮಾಡಿ ಸಂತೋಷವಾಯಿತು” ಎಂದು ಟ್ವೀಟ್ ಮಾಡಿದ್ದರು. ಸ್ಟೀಫನ್ ಬ್ಯಾನನ್ ಉಗ್ರ ಬಲಪಂಥೀಯ ವಿಚಾರಗಳು ಎಷ್ಟು ಅನಪೇಕ್ಷಣೀಯವಾಗಿದ್ದವೆಂದರೆ, ಟ್ರಂಪ್ ಅವರ ಉಗ್ರ ಬಲಪಂಥೀಯ ತಂಡ ಸಹ ಅದನ್ನು ಸಹಿಸದೆ ಶ್ವೇತಭವನದ ಕಚೇರಿಯ ಭಾಗವಾಗಿದ್ದ ಅವರನ್ನು ತೆಗೆದು ಹಾಕಿತ್ತು. ಆ ಮೇಲೆ ಸ್ವಲ್ಪ ಸಮಯದಲ್ಲೇ ಅವರನ್ನು ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಿಸಲಾಯಿತು.
ವಿದೇಶಾಂಗ ಸಚಿವ ಜೈಶಂಕರ್ ಅಮೆರಿಕದ ವಿದೇಶಾಂಗ ವ್ಯವಹಾರಗಳ ಪಾರ್ಲಿಮೆಂಟರಿ ಸಮಿತಿಯ ನಾಯಕತ್ವದ ತಂಡದ ಭೇಟಿ ಮಾಡಲು ನಿರಾಕರಿಸಿದ್ದು, ಮೋದಿ ಸರಕಾರದ ಟ್ರಂಪ್ ಆಡಳಿತದ ಪರವಾದ ಪಕ್ಷಪಾತದ ಇನ್ನೊಂದು ಪ್ರಕರಣವಾಗಿತ್ತು. ಡಿಸೆಂಬರ್ 2019ರಲ್ಲಿ ಭಾರತ ಸರಕಾರ ಜಮ್ಮು-ಕಾಶ್ಮೀರದಲ್ಲಿ ಹೊರಿಸಿರುವ ಸಂವಹನ ನಿರ್ಬಂಧಗಳು ಮತ್ತು ರಾಜಕೀಯ ಕೈದಿಗಳ ಬಂಧನಗಳನ್ನು ಹಿಂತೆಯಬೇಕು ಹಾಗೂ ರಾಜ್ಯದಲ್ಲಿ ಪತ್ರಿಕಾ ಸ್ವಾತಂತ್ರ್ಯ ಕಾಪಾಡಬೇಕು ಎಂಬ ಉಭಯ-ಪಕ್ಷಗಳ ಸದಸ್ಯರು ಬೆಂಬಲಿಸಿದ ನಿರ್ಣಯವನ್ನು ಮಂಡಿಸಿದ ಡೆಮೊಕ್ರಾಟಿಕ್ ಪಾರ್ಲಿಮೆಂಟ್ ಸದಸ್ಯೆ ಪ್ರಮೀಳಾ ಜಯಪಾಲ್ ತಂಡದ ಭಾಗವಾಗಿದ್ದರು ಎಂದು ಇದಕ್ಕೆ ಕೊಡಲಾದ ಕಾರಣ.
ಸಂಪ್ರದಾಯ ಮುರಿದ ಈ ಕ್ರಮಗಳಿಂದಾಗಿ ಈಗ ಮೋದಿ ಸರಕಾರ ‘ಯೂ-ಟರ್ನ್ ಮಾಡಿ ಬೈಡನ್ ಸರಕಾರವನ್ನು ಸ್ವಾಗತಿಸದೆ ಬೇರೆ ದಾರಿಯಿಲ್ಲ. ಜಮ್ಮು-ಕಾಶ್ಮೀರದಲ್ಲಿ ಭಾರತ ಸರಕಾರದ ಕ್ರಮಗಳನ್ನು ಕಟುವಾಗಿ ಟೀಕಿಸಿದ್ದ ಕಮಲಾ ಹ್ಯಾರೀಸ್ ಅವರನ್ನು ಹಾಡಿ ಹೊಗಳಬೇಕಾಗಿ ಬಂದಿದೆ. ಮೋದಿ ಸರಕಾರದ ಟ್ರಂಪ್ ಪರ ಅನಗತ್ಯ ಪಕ್ಷಪಾತವನ್ನು ಬೆಂಬಲಿಸಿದ್ದ ವ್ಯೂಹಾತ್ಮಕ ನೀತಿ ಪರಿಣಿತರು ಮತ್ತು ರಾಜಕೀಯ ವೀಕ್ಷಕರು ಬೈಡನ್ ಆಡಳಿತ ಮೂರು ದಶಕಗಳಿಂದ ಸ್ಥಾಪಿತವಾದ ವ್ಯೂಹಾತ್ಮಕ ಸಂಬಂಧಗಳನ್ನು ಮುಂದುವರೆಸುತ್ತದೆ ಎಂದು ಹೇಳುತ್ತಿದ್ದಾರೆ. ಅದು ಸ್ವಯಂವಿದಿತ.
ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಟ್ರಂಪ್ ಆಡಳಿತದ ಜತೆ ಇಷ್ಟು ಪಕ್ಷಪಾತ ತೋರಿಯೂ – ಹವಾಮಾನ ಒಪ್ಪಂದ ಮುಂತಾದ ಅಂತರಾಷ್ಟ್ರೀಯ ಒಪ್ಪಂದಗಳು, ಇರಾನ್ ಜತೆ ತೈಲ ಮತ್ತಿತರ ವ್ಯಾಪಾರ, ಭಾರತೀಯ ಐಟಿ ಉದ್ಯಮದ ಅಗತ್ಯವಾದ ವೀಸಾ ನಿಯಮಗಳು – ಇತ್ಯಾದಿಗಳಲ್ಲಿ ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ಸಾಮ್ರಾಜ್ಯಶಾಹಿ ಗೂಳಿಯಂತೆ ವರ್ತಿಸುತ್ತಿದ್ದ ಮತ್ತು ಅದರ ಜಾಗತಿಕ ಮತ್ತು ಏಶ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಯಜಮಾನಿಕೆ ಸ್ಥಾಪಿಸಲು ಭಾರತವನ್ನು ಕಾಲಾಳುವಿನಂತೆ ಬಳಸಿದ್ದರ ಕಹಿ ಅನುಭವದಿಂದ ಭಾರತದ ಆಳುವ ವಲಯ ಏನಾದರೂ ಪಾಠ ಕಲಿಯಬಹುದೇ ಎಂಬುದು ನಿಜವಾದ ಪ್ರಶ್ನೆ.
ಹೊಸ ಅಧ್ಯಕ್ಷೀಯ ಆಡಳಿತ ಅಮೆರಿಕದಲ್ಲಿ ಆರಂಭವಾಗುತ್ತಿದ್ದು, ಸ್ವತಂತ್ರ ವಿದೇಶಾಂಗ ನೀತಿ ಮತ್ತು ವ್ಯೂಹಾತ್ಮಕ ಸ್ವಾಯತ್ತತೆಯನ್ನು ಎತ್ತಿ ಹಿಡಿಯಲು ಇದು ಸರಿಯಾದ ಸಮಯ. ಅಮೆರಿಕದ ಅಡಿಯಾಳು ಸ್ಥಿತಿಯಿಂದ ಭಾರತ ಹೊರಬರಲು ಇದು ಸಕಾಲ. ಆದರೆ ಅಮೆರಿಕನ್ ಸಾಮ್ರಾಜ್ಯಶಾಹಿಯ ಅಡಿಯಾಳಾಗುವ ಹಪಾಹಪಿ ಹಿಂದುತ್ವ ರಾಷ್ಟ್ರವಾದದ ಅಂಗವಾಗಿರುವಾಗ ಇದನ್ನು ಮಾಡುವುದು ಅವರಿಗೆ ಸಾಧ್ಯವೇ?