ಬೆಂಗಳೂರು: ಕೇಂದ್ರ ಸರ್ಕಾರವು ಅಸಂಘಟಿತ ಕಾರ್ಮಿಕರ ಡಾಟಾ ಬೇಸ್‌ಗಾಗಿ (NDUW) ಈ-ಶ್ರಮ ಕಾರ್ಡ್ ಎಂಬ ಮತ್ತೊಂದು ಕಾರ್ಡಿಗಾಗಿ ಅಸಂಘಟಿತ ಕಾರ್ಮಿಕರು ನೋಂದಾಯಿಸಿಕೊಳ್ಳಲು ಆಗಸ್ಟ್ 26 ರಿಂದ ಆರಂಭಿಸಿದೆ. ಅದಕ್ಕಾಗಿ ಕಾರ್ಮಿಕರು ಕಾಮನ್ ಸರ್ವಿಸ್ ಸೆಂಟರ್ ಗೆ ರೂ.20 ಅನ್ನು ನೀಡಿ ನೋಂದಾಯಿಸಿಕೊಳ್ಳಬೇಕೆಂದು ಕರೆ ನೀಡಿದೆ. ಅಸಂಘಟಿತ ಕಾರ್ಮಿಕರ ಮೇಲೆ ಹೊರೆ ಹೊರಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಬೆಂಗಳೂರು ಉತ್ತರ ಹಾಗೂ ದಕ್ಷಿಣ ಜಿಲ್ಲಾ ಸಮಿತಿಗಳು ಖಂಡಿಸಿವೆ.
ಈ ಬಗ್ಗೆ ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಕೆ.ಎನ್.ಉಮೇಶ್ ಅವರು ʻಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ-2008 ರ ಅಡಿ ವಿವಿಧ ರಾಜ್ಯಗಳಲ್ಲಿ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗಳನ್ನು 2009ರಲ್ಲೇ ರಾಜ್ಯ ಸರ್ಕಾರಗಳು ಸ್ಥಾಪಿಸಿವೆ. ರಾಜ್ಯಗಳಲ್ಲಿರುವ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಿಕೊಂಡು ಅವರಿಗೆ ಗುರುತಿನ ಚೀಟಿಗಳನ್ನು ನೀಡಲಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಸ್ಮಾರ್ಟ್ ಕಾರ್ಡನ್ನು ಲಕ್ಷಾಂತರ ಜನರಿಗೆ ಈಗಾಗಲೇ ನೀಡಲಾಗಿದೆ. ಇಂತಹ ಸಂದರ್ಭದಲ್ಲಿ ಈ-ಶ್ರಮ ಕಾರ್ಡ್ ಎಂಬ ಮತ್ತೊಂದು ಕಾರ್ಡಿಗಾಗಿ ಅಸಂಘಟಿ ಕಾರ್ಮಿಕರು ನೋಂದಾಯಿಸಿಕೊಳ್ಳಬೇಕೆಂದಿರುವುದು ಖಂಡನೀಯʼ ಎಂದಿದ್ದಾರೆ.
ರಾಜ್ಯ ಕಲ್ಯಾಣ ಮಂಡಳಿಗಳಲ್ಲಿ ಈಗಾಗಲೇ ನೋಂದಾಯಿಸಿಕೊಂಡು ಸ್ಮಾರ್ಟ್ ಕಾರ್ಡುಗಳನ್ನು ಪಡೆದಿರುವ ಅಸಂಘಟಿತ ಕಾರ್ಮಿಕರಿಗೆ ಯಾವುದೇ ಹೆಚ್ಚುವರಿ ಸೌಲಭ್ಯ ನೀಡದ ಕೇಂದ್ರ ಸರ್ಕಾರಕ್ಕೆ ಅಗತ್ಯವಿರುವ ದತ್ತಾಂಶವನ್ನು ಸಂಗ್ರಹಿಸಲು ಇಂತಹ ಕಾರ್ಡಿನ ಅಗತ್ಯವಾದರೂ ಏನು ಎಂದು ಪ್ರಶ್ನಿಸಿದ್ದಾರೆ.
ಸಿಪಿಐ(ಎಂ) ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ಎನ್. ಪ್ರತಾಪ್ ಸಿಂಹ ಅವರು ʻರಾಜ್ಯಗಳಲ್ಲಿ ಲಭ್ಯವಿರುವ ದತ್ತಾಂಶವನ್ನು ಯಥಾವತ್ ಪಡೆದು ಅವರನ್ನು ಒಳಗೊಂಡ ರಾಷ್ಟ್ರೀಯ ಡಾಟಾ ಬೇಸ್ ಸಿದ್ದಪಡಿಸುವ ಬದಲು ಒಂದೆಡೆ ಅಸಂಘಟಿತರಿಗೆ ಹೊರೆ ಹೊರಿಸುವ ಹಾಗೂ ಈ-ಶ್ರಮ ಕಾರ್ಡಿಗಾಗಿ ಅಲೆದಾಡಿಸುವ ಕೆಲಸವನ್ನು ಮಾಡುತ್ತಿರುವ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳನ್ನು ನಂಬದೆ ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸುವ ಮತ್ತು ಒಕ್ಕೂಟ ವ್ಯವಸ್ಥೆಗೆ ತಿಲಾಂಜಲಿ ನೀಡಿ ಎಲ್ಲಾ ಅಧಿಕಾರಗಳನ್ನು ತನ್ನಲ್ಲಿ ಕೇಂದ್ರೀಕರಿಸಿಕೊಳ್ಳುವ ಯತ್ನವನ್ನು ಕೇಂದ್ರ ಬಿಜೆಪಿ ಸರ್ಕಾರವು ನಡೆಸಿದೆʼ ಎಂದು ಟೀಕಿಸಿದ್ದಾರೆ.
ಬರಿ ಘೋಷಣೆಗಳು ಮತ್ತು ಪೊಳ್ಳು ಭರವಸೆಗಳ ಮೂಲಕ ಅಸಂಘಟಿತ ಕಾರ್ಮಿಕರನ್ನು ನಂಬಿಸಿ ನಯವಾಗಿ ವಂಚಿಸುವ ಮತ್ತೊಂದು ಕ್ರಮವಾಗಿ ಈ-ಶ್ರಮ ಯೋಜನೆಯನ್ನು ಕೇಂದ್ರ ಬಿಜೆಪಿ ಸರ್ಕಾರವು ರೂಪಿಸಿದೆ ಎಂದಿದೆ ಸಿಪಿಐ(ಎಂ) ಆರೋಪಿಸಿದೆ.
ಕರ್ನಾಟಕ ರಾಜ್ಯದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ನೋಂದಾಯಿಸಿಕೊಂಡಿರುವ 27 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ನೋಂದಾಯಿಸಿಕೊಂಡಿರುವ 3.05 ಲಕ್ಷ ಕಾರ್ಮಿಕರು ಹಾಗೂ ಕೋವಿಡ್ ಎರಡನೇ ಅಲೆಯ ಲಾಕ್‌ಡೌನ್ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಿರುವ ಇತರೆ ಸುಮಾರು 15 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಸೇರಿ ಒಟ್ಟು 45 ಲಕ್ಷಕ್ಕೂ ಹೆಚ್ಚು ಕಾರ್ಮಿಕರ ದತ್ತಾಂಶವನ್ನೇ ಪರಿಗಣಿಸಿ ಅವರಿಗೆ ಈ-ಶ್ರಮ ಕಾರ್ಡನ್ನು ರಾಜ್ಯ ಕಾರ್ಮಿಕ ಇಲಾಖೆ ನೀಡಬಹುದಾಗಿದೆ.
ಇರುವ ಸೌಕರ್ಯಗಳನ್ನು ಬಳಸಿ ದತ್ತಾಂಶ ರೂಪಿಸದೆ, ಕಾರ್ಮಿಕರ ಮೇಲೆ ಹೊರೆ ಹೊರಿಸಿ ಮತ್ತೆ ಎಲ್ಲರೂ ನೋಂದಾಯಿಸಿಕೊಳ್ಳಬೇಕೆಂಬ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಸಿ.ಎಸ್.ಸಿ. ಕೇಂದ್ರಗಳ ಮೂಲಕ ಹೊಸದಾಗಿ ನೋಂದಾಯಿಸುವ ಬದಲು ರಾಜ್ಯಗಳ ಕಾರ್ಮಿಕ ಇಲಾಖೆ ಅಡಿಯ ಸಾಮಾಜಿಕ ಭದ್ರತಾ ಮಂಡಳಿಗಳ ಮೂಲಕವೇ ನೋಂದಾಯಿಸಿ ಈಗಾಗಲೇ ನೋಂದಾಯಿತ ಕಾರ್ಮಿಕರನ್ನು ಒಳಗೊಂಡು ಎಲ್ಲರಿಗೂ ಉಚಿತವಾಗಿ ಈ-ಶ್ರಮ ಕಾರ್ಡಗಳನ್ನು ಒದಗಿಸಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ. ಸಿ ಎಸ್‌ಸಿ ಕೇಂದ್ರಗಳ ಸುಲಿಗೆ ತಪ್ಪಿಸಲು ಅಸಂಘಟಿತ ಕಾರ್ಮಿಕರಿಗೆ ಸ್ವಯಂ ನೋಂದಾವಣೆಗೆ ಅವಕಾಶ ಕಲ್ಪಿಸಬೇಕೆಂದು ಕೋರಿದೆ.