ಎಚ್.ಆರ್. ನವೀನ್ ಕುಮಾರ್, ಹಾಸನ
‘ಆನೆ ಬಂತೊಂದ್ ಆನೆ… ಯಾವೂರ್ ಆನೆ… ಬಿಜಾಪುರದ್ ಆನೆ… ಇಲ್ಲಿಗೇಕೆ ಬಂತು…’ ಇದು ನಾವು ಚಿಕ್ಕವರಾಗಿದ್ದಾಗ ಕೇಳುತ್ತಿದ್ದ ಹಾಡು. ಆನೆಯನ್ನು ನೋಡುವುದೆಂದರೆ ಅದೊಂದು ರೀತಿಯ ಸಂಭ್ರಮ ಜಾತ್ರೆಯ ಸಂದರ್ಭದಲ್ಲೋ, ಸರ್ಕಸ್‌ನಲ್ಲೋ ಅಥವಾ ಮೃಗಾಲಯದಲ್ಲೋ ಆನೆಗಳನ್ನು ನೋಡುವುದು ಬಿಟ್ಟರೆ ಬೇರೆಲ್ಲಿಯೂ ಆನೆಗಳನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ, ಅಲೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಆನೆಗಳು ಕಾಫಿ ತೋಟಗಳಲ್ಲಿ, ಬಾಳೆ ತೋಟಗಳಲ್ಲಿ, ಭತ್ತದ ಗದ್ದೆಗಳಲ್ಲಿ, ರಸ್ತೆಗಳಲ್ಲಿ, ಊರುಗಳಲ್ಲೂ ಕಾಣಿಸಿಕೊಳ್ಳುತ್ತಿವೆ. ಇವು ಒಂದು ಎರಡು ಆನೆಗಳಲ್ಲ 10-15 ಆನೆಗಳ ಹಿಂಡು ಹಿಂಡೇ ಎಲ್ಲಡೆ ಸಂಚರಿಸಲು ಪ್ರಾರಂಬಿಸಿವೆ. ಆನೆಗಳಿಗೆ ಸಧ್ಯ ಕಾಡು ಮತ್ತು ನಾಡಿನ ಯಾವ ವ್ಯತ್ಯಾಸಗಳು ತಿಳಿಯದಂತಾಗಿವೆ. ಈ ಆನೆಗಳಿಂದ ಭಯಗೊಂಡ ಜನ ಅವುಗಳನ್ನು ಓಡಿಸುವ ಪ್ರಯತ್ನ ಮಾಡಿದರೆ ಈ ಮಾನವನಿಂದ ಭಯಗೊಂಡ ಆನೆಗಳು ದಾಳಿಮಾಡಿ, ಬೆಳೆಗಳ ನಾಶದ ಜೊತೆಗೆ ಜೀವ ಹಾನಿಯೂ ಉಂಟಾಗಿದೆ.
ದಿನದಿಂದ ದಿನಕ್ಕೆ ಆನೆ ಮತ್ತು ಮಾನವನ ಸಂಘರ್ಷ ತೀರ್ವವಾಗುತ್ತಿರುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಪರಿಸರ ಮತ್ತು ಜನಪರ ಸಂಘಟನೆಗಳು ಸೇರಿ ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಸಂಘಟನೆಗಳ ಮುಖಂಡರುಗಳನ್ನು ಒಳಗೊಂಡ “ಆನೆ ಮತ್ತು ಮಾನವ ಸಂಘರ್ಷ” ಕಾರಣ ಮತ್ತು ಪರಿಹಾರಗಳು ಎಂಬ ಒಂದು ದಿನದ ಕಾರ್ಯಾಗಾರವನ್ನು ಜುಲೈ 29 ರಂದು ಸಕಲೇಶಪುರದಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ತಜ್ಞರು, ರೈತರು, ಕೂಲಿ ಕಾರ್ಮಿಕ ಮುಖಂಡರು, ಪರಿಸರ ಪ್ರೇಮಿಗಳು ವ್ಯಕ್ತಪಡಿಸಿದ ಪ್ರಮುಖ ಅಂಶಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಮಾಡುತ್ತಿದ್ದೇನೆ. ಈ ಮೂಲಕ ಆನೆ ಮತ್ತು ಮಾನವ ಸಂಘರ್ಷದ ಕಾರಣಗಳನ್ನು ಅರ್ಥ ಮಾಡಿಕೊಳ್ಳಲು ಇದು ಸಹಾಯವಾಗುತ್ತದೆ ಎಂದು ಭಾವಿಸಿದ್ದೇನೆ.
ಮೂಲದಲ್ಲಿ ಸಕಲೇಶಪುರ, ಆಲೂರು, ಮತ್ತು ಕೊಡಗಿನ ಬಹುತೇಕ ಪ್ರದೇಶಗಳು ಕಾಡಿನಿಂದ ಆವರಿಸಿತ್ತು ಮತ್ತು ಈ ಪ್ರದೇಶಗಳೆಲ್ಲವೂ ಆನೆಗಳ ಆವಾಸಸ್ಥಾನಗಳೇ ಆಗಿದ್ದವು. ಈ ಪ್ರದೇಶಗಳಲ್ಲಿ ಕಾಡನ್ನು ನಾಶಮಾಡಿ ಕೃಷಿ ಚಟುವಟಿಕೆ ಪ್ರಾರಂಬವಾಗಿ ಕಾಫಿ ತೋಟಗಳು ನಿರ್ಮಾಣವಾದ್ದರಿಂದ ಆನೆಗಳು ಸಂಚರಿಸುವ ಜಾಗಗಳು (ಕಾರಿಡಾರ್) ಇಲ್ಲದಂತಾದವು. ಒಂದು ಅಧ್ಯಯನದ ಪ್ರಕಾರ ಒಂದು ಆನೆ ಒಂದು ಸಾವಿರ ಚದರ ಕಿಲೋಮೀಟರ್ ಸಂಚರಿಸುತ್ತದೆ. ಮಾತ್ರವಲ್ಲದೆ ಒಂದು ಆನೆಗೆ ಒಂದು ದಿನಕ್ಕೆ ಕನಿಷ್ಟ 350 ಕೆಜಿಯಷ್ಟು ಆಹಾರ ಬೇಕು ಮತ್ತು ಸುಮಾರು 150 ಲೀಟರ್ ಕುಡಿಯಲು ನೀರು ಬೇಕು. ಒಂದೆಡೆ ಕೃಷಿ ಚಟುವಟಿಕೆಗಳು ನಡೆಯುತ್ತಿದ್ದರೆ ಮತ್ತೊಂದೆಡೆ ಅವುಗಳಿಗಿಂತ ಹೆಚ್ಚಿ ಅಪಾಯವನ್ನು ತಂದೊಡ್ಡಿದ್ದು ಅಭಿವೃದ್ಧಿಯ ಹೆಸರಿನಲ್ಲಿ ಕರಾವಳಿ ಮತ್ತು ಮಲೆನಾಡಿನ ಭಾಗದಲ್ಲಿ ಕಾಡನ್ನ ನಾಶಮಾಡಿ ನಿರ್ಮಾಣವಾಗುತ್ತಿರುವ ಹೊಸ ಹೊಸ ಯೋಜನೆಗಳು. ಉದಾಹರಣೆಗೆ ಗುಂಡ್ಯಾ ಜಲವಿದ್ಯುತ್ ಯೋಜನೆ, ಎತ್ತಿನ ಹೊಳೆ ಯೋಜನೆ, ಉಷ್ಣವಿದ್ಯುತ್ ಸ್ಥಾವರ, ರೈಲ್ವೇ ಟ್ರ್ಯಾಕ್, ಬೃಹತ್ ಹೆದ್ದಾರಿಗಳು. ಈ ಯೋಜನೆಗಳಿಗಾಗಿ ಅಗತ್ಯಕ್ಕಿಂತ ಹೆಚ್ಚಾಗಿ ಭೂಸ್ವಾಧೀನ ಮಾಡಿಕೊಂಡು ಕಾಡನ್ನ ಸಂಪೂರ್ಣ ನಾಶ ಮಾಡಲಾಗುತ್ತಿದೆ. ಇದೇ ಕಾಡನ್ನು ನಂಬಿ ಬದುಕುತ್ತಿದ್ದ ಕಾಡುಪ್ರಾಣಿಗಳು ಈ ಅಭಿವೃದ್ಧಿ ಕಾಮಗಾರಿಗಳಿಂದಾಗಿ ತಮ್ಮ ಆವಾಸಸ್ಥಾನಕ್ಕೆ ದಕ್ಕೆ ಬಂದಾಗ ಬದುಕಿನ ಅನಿವಾರ್ಯತೆಯಿಂದ ಕಾಡಿನಿಂದ ನಾಡಿನತ್ತ ಮುಖಮಾಡಿವೆ. ಇದೇ ಇಂದು ಕಾಡು ಪ್ರಾಣಿಗಳು ಮತ್ತು ಮಾನವನ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಒಂದು ಅಂಕಿ ಅಂಶದ ಪ್ರಕಾರ ಭಾರತದ ಒಟ್ಟು ಭೂಪ್ರದೇಶದಲ್ಲಿ ಶೇಕಡ 80 ರಷ್ಟು ಮಾನವ ವಾಸ ಮಾಡುವ ಪ್ರದೇಶ, ಶೇಕಡಾ 20 ರಷ್ಟು ಕಾಡು, ಅದರಲ್ಲಿನ ಶೇಕಡಾ 5 ರಷ್ಟು ಕಾಡು ಪ್ರದೇಶದಲ್ಲಿ ಮಾತ್ರ ಕಾಡುಪ್ರಾಣಿಗಳು ವಾಸಿಸುತ್ತಿವೆ.
ಬೇರೆಲ್ಲಾ ಕಾಡು ಪ್ರಾಣಿಗಳಿಗಿಂತ ಆನೆ ಅತ್ಯಂತ ದೈತ್ಯಾಕಾರ ಮತ್ತು ಅತ್ಯಂತ ಬುದ್ದಿವಂತ ಪ್ರಾಣಿ. ಇದು ಜಗತ್ತಿನ ಎಲ್ಲಾ ರೀತಿಯ ವಾತಾವರಣದಲ್ಲೂ ಬದುಕಿ ಜೀವನವನ್ನು ಸಾಗಿಸುತ್ತದೆ. ಇವು ಮನುಷ್ಯನ ರೀತಿಯಲ್ಲಿಯೇ ಗುಂಪು ಜೀವನ ನಿರ್ವಹಿಸುತ್ತವೆ. ಆದರೆ ಕೃಷ್ಣಮೃಗದಂತಹಾ ಪ್ರಾಣಿಗಳು ಕೇವಲ ಹುಲ್ಲುಗಾವಲಿನಲ್ಲಿ ಮಾತ್ರ ವಾಸಿಸುತ್ತವೆ. ಜಗತ್ತಿನ 23 ದೇಶಗಳಲ್ಲಿ ಆನೆಗಳಿವೆ. 2014-15 ರಲ್ಲಿ ಭಾರತದಲ್ಲಿ 2000 ಜನ ಆನೆಗಳ ದಾಳಿಗಳಿಂದಾಗಿ ಸಾವನ್ನಪ್ಪಿದ್ದಾರೆ, ಹಾವುಗಳಿಂದ ವರ್ಷಕ್ಕೆ ಅಂದಾಜು ಒಂದು ಲಕ್ಷ ಜನ ಸಾವನಪ್ಪುತ್ತಿದ್ದಾರೆ. 2016-2019 ರ ನಡುವೆ ದೇಶದಲ್ಲಿ 36 ಸಾವಿರ ಕಾಡುಪ್ರಣಿಗಳು ಸಾವನ್ನಪ್ಪಿವೆ. ಇದರಲ್ಲಿ ಬಹುತೇಕ ಪ್ರಾಣಿಗಳು ಕಾಡಿನ ಒಳಗೆ ಸಂಚರಿಸುವ ರೈಲುಗಳಿಗೆ ಸಿಕ್ಕಿ ಮತ್ತು ರಸ್ತೆಗಳಲ್ಲಿ ಸಂಚರಿಸುವ ವಾಹನಗಳಿಗೆ ಸಿಕ್ಕಿ ಸಾವನಪ್ಪಿವೆ.
ಕರ್ನಾಟಕದಲ್ಲಿ ಒಂದು ಅಂದಾಜಿನ ಪ್ರಕಾರ 6700 ರಷ್ಟು ಆನೆಗಳಿವೆ. ಇವುಗಳಲ್ಲಿ ಶೇಕಡಾ 60 ರಷ್ಟು ಆನೆಗಳು ಆಹಾರವನ್ನು ಹುಡುಕಿಕೊಂಡು ಕಾಡಿನಿಂದ ಹೊರಬಂದು ಸಂಚರಿಸಿ ಮತ್ತೆ ಕಾಡಿಗೆ ಹೋಗುತ್ತವೆ. ಹಾಸನ, ಕೊಡುಗು ಪ್ರದೇಶದಲ್ಲಿ ಒಂದು ಆನೆ 700-800 ಚದರ ಕಿಲೋಮೀಟರ್ ಒಡಾಡುತ್ತದೆ. ಈ ಓಡಾಟದಲ್ಲಿ ದೊಡ್ಡಪ್ರಮಾಣದಲ್ಲಿ ಕಾಫಿ ತೋಟದ ನಾಶ, ಬತ್ತದ ಗದ್ದೆ, ಬಾಳೆ ತೋಟ, ಜೋಳ ಮುಂತಾದ ಬೆಳೆಗಳು ನಾಶವಾಗುವುದರ ಜೊತೆಗೆ ಈ ಆನೆಗಳ ದಾಳಿಗೆ ಸಿಕ್ಕಿ ಹಾಸನ ಜಿಲ್ಲೆಯೊಂದರಲ್ಲೇ 50 ಕ್ಕೂ ಹೆಚ್ಚು ಜನ ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ಹಲವರು ಅಂಗವೈಕಲ್ಯರಾಗಿ ಜೀವನ ಸಾಗಿಸುತ್ತಿದ್ದಾರೆ.
ಕಾಡಿನಿಂದ ಹೊರಗೆ ಬಂದ ಆನೆಗಳು ಕಾಫಿತೋಟಗಳನ್ನೇ ತಮ್ಮ ಆವಾಸಸ್ಥಾನಗಳನ್ನಾಗಿ ಮಾಡಿಕೊಂಡು ಅಲ್ಲಿ ಸಿಗುವ ಆಹಾರವನ್ನೇ ಸೇವಿಸಿ ಜೀವನ ಮಾಡುತ್ತಿವೆ. ಪ್ರತಿ 5 ವರ್ಷಗಳಿಗೊಮ್ಮೆ ಆನೆಗಳ ಸಂತಾನ ಪ್ರಕ್ರಿಯೆ ನಡೆಯುವುದರಿಂದ ಬಹುತೇಕ ಆನೆಗಳು ಕಾಫಿ ತೋಟಗಳಲ್ಲಿಯೇ ಅಥವಾ ಕಾಡಿನ ಹೊರಗಡೆಯೇ ಹುಟ್ಟಿ ಬೆಳೆಯುತ್ತಿರುವುದರಿಂದ ಅವುಗಳಿಗೆ ಕಾಡಿನ ಪರಿಚಯವೇ ಇಲ್ಲ. ಹಾಗಾಗಿ ಈ ಆನೆಗಳನ್ನು ಎಲ್ಲಿಗೆ ಓಡಿಸಿದರೂ ಅವುಗಳು ಮತ್ತೆ ಅದೇ ಪ್ರದೇಶಗಳಿಗೆ ವಾಪಸ್ ಬರುತ್ತವೆ.
ಆನೆ ಮತ್ತು ಮಾನವ ಸಂಘರ್ಷವನ್ನು ತಡೆಯುವ ಉದ್ದೇಶದಿಂದ ಕರ್ನಾಟಕ ಉಚ್ಚ ನ್ಯಾಯಾಲಯದ ನಿರ್ದೇಶನದ ಮೇರೆಗೆ ‘ಕರ್ನಾಟಕ ಆನೆ ಕಾರ್ಯಪಡೆ’ಯನ್ನು ರಚಿಸಿ ಅದು ಅಧ್ಯಯನವನ್ನು ನಡೆಸಿ ದೀರ್ಘವಾದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತು. ಈ ವರದಿಯ ಶಿಫಾರಸ್ಸುಗಳನ್ನು ಜಾರಿಗೆ ತರುವಂತೆ ಕರ್ನಾಟಕ ಉಚ್ಚ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ಆದರೆ ಇದುವರೆಗೂ ರಾಜ್ಯ ಸರ್ಕಾರ ಈ ವರದಿಯ ಸಮಗ್ರ ಅನುಷ್ಟಾನಕ್ಕೆ ಬೇಕಾದ ಕ್ರಮಗಳನ್ನು ಕೈಗೊಂಡಿಲ್ಲ. ಕೇವಲ ಅರಣ್ಯ ಇಲಾಖೆಯು ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಆನೆಗಳು ಸಂಚರಿಸಬಾರದೆಂದು ಗಡಿಪ್ರದೇಶದಲ್ಲಿ ರೈಲ್ವೇ ಹಳಿಗಳಿಂದ ಬೇಲಿಯನ್ನು ನಿರ್ಮಿಸುವ ಯೋಜನೆಯನ್ನು ಕೈಗೊಂಡಿದ್ದಾರೆ. ಈ ಕುರಿತು ಹೆಚ್ಚಿನ ಅಧ್ಯಯನಕ್ಕಾಗಿ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನಲ್ಲಿರುವ ಕೊಡಗು ಮತ್ತು ಹಾಸನ ಜಿಲ್ಲೆಯ ಗಡಿ ಭಾಗದ ಹೇಮಾವತಿ ಹಿನ್ನೀರಿನ ಪ್ರದೇಶಕ್ಕೆ ಸಂಘಟನೆಗಳ ಮುಖಂಡರ ನಿಯೋಗ ಭೇಟಿ ನೀಡಿ ಪರಿಶೀಲಿಸಿತು. ಸುಮಾರು 9 ಕಿಲೋಮೀಟರ್ ನಷ್ಟು ಕಬ್ಬಿಣದ ರೈಲ್ವೇ ಹಳಿಗಳಿಂದ ಬೇಲಿಗಳನ್ನು ನಿರ್ಮಾಣ ಮಾಡಿದ್ದಾರೆ. ಇಲಾಖೆಯ ಅಂದಾಜಿನ ಪ್ರಕಾರ ಒಂದು ಕಿಲೋಮೀಟರ್ ಬೇಲಿ ನಿರ್ಮಾಣ ಮಾಡಲು 1.5 ಕೋಟಿ ರೂ ಖರ್ಚಾಗುತ್ತದೆ. ಆದರೆ ಈ ರೈಲ್ವೇ ಕಂಬಿಗಳಿಂದ ನಿರ್ಮಾಣವಾಗುತ್ತಿರುವ ಬೇಲಿಗಳಿಂದ ಏನಾದರೂ ಪ್ರಯೋಜನವಾಗಿದೆಯಾ ಎಂದು ಸ್ಥಳೀಯ ರೈತರನ್ನು ವಿಚಾರಿಸಿದರೆ ಅವರು ಹೇಳುವುದೇನೆಂದರೆ, ಗಡಿಗಳಲ್ಲಿ ನಿರ್ಮಾಣವಾಗುವ ಬೇಲಿಯಿಂದ ಕೊಡಗು ಜಿಲ್ಲೆಯ ಕಾಡುಗಳಿಂದ ನಮ್ಮ ಭಾಗಕ್ಕೆ ಆನೆಗಳು ಬರದೇ ಇರಬಹುದು ಆದರೆ ಈಗಾಗಲೇ ನಮ್ಮ ತೋಟಗಳಿಗೆ ಬಂದು ವಾಸ ಮಾಡುತ್ತಿರುವ ಆನೆಗಳು ಇಲ್ಲೇ ಉಳಿಯುತ್ತವೆಯಲ್ಲಾ ಇದಕ್ಕೆ ಪರಿಹಾರ ಏನು? ಎನ್ನುವ ಪ್ರಶ್ನೆಯನ್ನು ಮುಂದಿಡುತ್ತಾರೆ. ಮತ್ತು ಈ ಯೋಜನೆಯಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ದೂರುತ್ತಿದ್ದಾರೆ.
ಆನೆ ಮತ್ತು ಮಾನವ ಸಂಘರ್ಷವನ್ನು ತಡೆಯಬೇಕಾದರೆ ಕೈಗೊಳ್ಳಬೇಕಾದ ಕೆಲವು ಕ್ರಮಗಳ ಕುರಿತು ತಜ್ಞರು ನೀಡಿದ ಸಲಹೆಗಳೆಂದರೆ ರೇಡಿಯೋ ಕಾಲರ್‌ಗಳ ಮೂಲಕ ಆನೆಗಳ ಸಂಚಾರವನ್ನು ತಿಳಿದು ಆ ಭಾಗದ ಜನರಿಗೆ ಮುನ್ನೆಚ್ಚರಿಕೆಯ ಮಾಹಿತಿಗಳನ್ನು ಮೊಬೈಲ್ ಸಂದೇಶಗಳ ಮೂಲಕ ನೀಡುವುದು, ಈ ಭಾಗದಲ್ಲಿರುವ ಆನೆಗಳನ್ನು ಆನೆ ಧಾಮಗಳನ್ನು ನಿರ್ಮಿಸಿ ಅಲ್ಲಿಗೆ ಸ್ಥಳಾಂತರಿಸಲು ಪ್ರಯತ್ನಿಸುವುದು, ಆನೆಗಳ ಸಂಖ್ಯೆ ಹೆಚ್ಚಾಗದಂತೆ ಸಂತಾನ ಹರಣ ಚಿಕಿತ್ಸೆ ಮಾಡಿಸುವುದು, ಸೋಲಾರ್ ಫೆನ್ಸಿಂಗ್‌ಗಳನ್ನು ಅಳವಡಿಸುವುದು, ಆನೆ ಕಾರಿಡಾರ್‌ಗೆ ಸಮಸ್ಯೆಯಾಗದಂತೆ ಅವುಗಳನ್ನು ರಕ್ಷಿಸುವುದು ಮತ್ತು ಈ ಭಾಗದಲ್ಲಿ ಅನಗತ್ಯ ಅಭಿವೃದ್ಧಿ ಯೋಜನೆಗಳನ್ನು ಸ್ಥಗಿತಗೊಳಿಸುವುದು ಮತ್ತು ಎಲ್ಲದಕ್ಕಿಂತ ಮುಖ್ಯವಾಗಿ ಆನೆಗಳ ದಾಳಿಯಿಂದ ಬೆಳೆ ನಷ್ಟ ಮತ್ತು ಪ್ರಾಣ ಹಾನಿ ಸಂಭವಿಸಿದವರಿಗೆ ದಯಾತ್ಮಕ ಪರಿಹಾರದ (ಎಕ್ಸ್‌ಗ್ರೇಷಿಯಾ) ಬದಲಾಗಿ ನ್ಯಾಯಯುತ ಪರಿಹಾರವನ್ನು ವೈಜ್ಞಾನಿಕವಾಗಿ ನೀಡಬೇಕು.
ಇಡೀ ದಿನದ ಚರ್ಚೆಯ ನಂತರ ಅಂತಿಮವಾಗಿ ಕೆಲವು ನಿರ್ಣಯಗಳನ್ನು ಕಾರ್ಯಾಗಾರದಲ್ಲಿ ಕೈಗೊಳ್ಳಲಾಯಿತು.
- ಆನೆ – ಮಾನವ ಸಂಘರ್ಷದ ಪ್ರದೇಶಗಳನ್ನು ಒಳಗೊಂಡ 3-4 ಜಿಲ್ಲೆಗಳನ್ನೊಳಗೊಂಡ ಹೋರಾಟ ಸಮಿತಿಯನ್ನು ರಚಿಸಬೇಕು.
- ಆ ಸಮಿತಿಯಲ್ಲಿ ಬೆಳೆಗಾರರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು, ಜನಪರ ಸಂಘಟನೆಗಳು ಇತ್ಯಾದಿ ಜನ ವಿಭಾಗಗಳನ್ನು ಒಳಗೊಳ್ಳಬೇಕು.
- ಪ್ರಾದೇಶಿಕ, ವಲಯ, ಜಿಲ್ಲಾ ಮತ್ತು ರಾಜ್ಯ ಮಟ್ಟದ ಸಮಾವೇಶ ನಡೆಸಬೇಕು.
- ಬಾಧಿತರಿಗೆ ವೈಜ್ಞಾನಿಕ ಪರಿಹಾರಕ್ಕೆ ಆಗ್ರಹಿಸಬೇಕು.
- ಆಕ್ರಮಣಕಾರಿ ಆನೆಗಳನ್ನು ಸ್ಥಳಾಂತರಿಸಬೇಕು.
- ಅಗತ್ಯ ಪ್ರದೇಶಗಳಲ್ಲಿ ಬ್ಯಾರಿಕೇಡ್ ನಿರ್ಮಿಸಬೇಕು.
- ಆನೆಧಾಮ ಅಥವಾ ಆನೆ ಕ್ಯಾಂಪ್‌ಗಳನ್ನು ನಿರ್ಮಿಸಬೇಕು.
- ನೈಸರ್ಗಿಕ ಆನೆ ಕಾರಿಡಾರ್‌ಗಳನ್ನು ಉಳಿಸಬೇಕು ಮತ್ತು ಅಭಿವೃದ್ಧಿ ಪಡಿಸಬೇಕು.
- ಜನವಸತಿ ಮತ್ತು ಕೃಷಿ ಪ್ರದೇಶಗಳಲ್ಲಿ ಆನೆ – ಕಾಡುಪ್ರಾಣಿಗಳ ವಾಸ್ತವ್ಯ ಮತ್ತು ಓಡಾಟದ ಕುರಿತು ಜನರಿಗೆ ಸಮರ್ಪಕ ಮಾಹಿತಿ ನೀಡುವ ವೈಜ್ಞಾನಿಕ ಪದ್ಧತಿಯನ್ನು ಅಭಿವೃದ್ಧಿ ಪಡಿಸಬೇಕು.
- ಸಾಧ್ಯವಿರುವ ಕಡೆಗಳಲ್ಲಿ ಅರಣ್ಯ ವಿಸ್ತೀರ್ಣವನ್ನು ಹೆಚ್ಚಿಸಬೇಕು.
- ಆನೆ, ಕಾಡುಪ್ರಾಣಿ – ಮಾನವ ಸಹಬಾಳ್ವೆಯ ಕಡೆಗೆ ನಮ್ಮ ನಡೆಯಾಗಬೇಕು.
- ಕರ್ನಾಟಕ ಆನೆ ಕಾರ್ಯಪಡೆ ವರದಿ ಪ್ರಕಾರ ಮೀಸಲು ಅರಣ್ಯದಲ್ಲಿ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸಬೇಕು.