ಆಳುವ ಯೋಗ್ಯತೆ ಇಲ್ಲದಿದ್ದರೆ ಹೊರಟುಬಿಡಿ ಪ್ಲೀಸ್…

ನಾ ದಿವಾಕರ

ನಾವು ಎಂಥವರನ್ನು ಆಯ್ಕೆ ಮಾಡಿಬಿಟ್ಟಿದ್ದೇವೆ? ಬಹುಶಃ ಈ ಪ್ರಶ್ನೆ ಪ್ರಜ್ಞೆ ಇರುವ ಪ್ರತಿಯೊಬ್ಬ ಪ್ರಜೆಯಲ್ಲೂ ಮೂಡಿರಲೇಬೇಕು. ಕಪ್ಪೆಚಿಪ್ಪುಗಳಲ್ಲಿ ನಿಷ್ಠೆ-ಭಕ್ತಿಯ ಮುಸುಕು ಧರಿಸಿ ಅವಿತಿಟ್ಟುಕೊಳ್ಳುವವರಲ್ಲಿ ಈ ಪ್ರಶ್ನೆ ಉದ್ಭವಿಸದಿರಬಹುದು. ಅಂಥವರು ತಮ್ಮ ಸ್ವ ಪ್ರಜ್ಞೆಯನ್ನು ಒತ್ತೆ ಇಟ್ಟ ನಂತರವೇ ಯಾವುದೋ ಒಂದು ಚಿಪ್ಪಿನಲ್ಲಿ ಅಡಗಿ ಕುಳಿತಿರುತ್ತಾರೆ.  ನಾವು ಸಾವಿನ ಸರದಾರರ ನಡುವೆ ಬದುಕಿದ್ದೇವೆ. ಸಾವಿನ ದಲ್ಲಾಳಿಗಳ ನಡುವೆ ಜೀವನ ಸಾಗಿಸಿದ್ದೇವೆ. ಈಗ ಸಾವುಗಳ ಮೇಳ ನಡೆಯುತ್ತಿದೆ. ಅಧಿಕಾರದ ಅಮಲಿನಲ್ಲಿರುವವರಿಗೆ ಈ ಮೇಳದಲ್ಲಿ ಹುಲ್ಲುಗಾವಲುಗಳು ಕಾಣಿಸುತ್ತಿವೆ. ಜೀವ, ಜೀವನ ಮತ್ತು ಜೀವನೋಪಾಯ ಈ ಮೂರರ ನಡುವೆ ಇರುವ ಸೂಕ್ಷ್ಮ ಸಂಬಂಧಗಳ ಪರಿವೆಯೇ ಇಲ್ಲದಂತಹ ಒಂದು ವಿಕೃತ ವ್ಯವಸ್ಥೆಯಲ್ಲಿ ಭಾರತ ಮತ್ತೊಮ್ಮೆ ಒಂದು ವೈರಾಣುವಿನೊಡನೆ ಬದುಕುತ್ತಿದೆ.

ಕಳೆದ ವರ್ಷದ ಕೆಲವು ಮಾತುಗಳನ್ನೊಮ್ಮೆ ಇಲ್ಲಿ ನೆನಪಿಸಿಕೊಳ್ಳೋಣ. “ಕೊರೊನಾ ನಮ್ಮ ನಡುವೆ ಬಹಳ ವರ್ಷಗಳ ಕಾಲ ಇರುತ್ತದೆ. ನಾವು ಅದರೊಡನೆ ಬದುಕುವುದನ್ನು ಕಲಿಯಬೇಕು” ಎಂದು ನಮ್ಮ ಅಧಿನಾಯಕರೇ ಆಜ್ಞಾಪಿಸಿದ್ದನ್ನು ಸ್ಮರಿಸೋಣ. ಕೊರೊನಾದೊಂದಿಗೆ ಬದುಕುವುದು ಎಂದರೇನು ? ನಿನಗೆ ಶಕ್ತಿ ಇದ್ದರೆ ಬದುಕು ಇಲ್ಲವಾದರೆ ನಿನ್ನ ದಾರಿ ನಿನಗೆ ಎಂದರ್ಥವೇ ? ಈ ವರ್ಷದ ಎರಡನೆಯ ಅಲೆಯ ಸಂದರ್ಭದಲ್ಲಿ ನೋಡಿದಾಗ ಹಾಗೆನಿಸುವುದು ಸಹಜ. ಏಕೆಂದರೆ ನಮ್ಮ ಸುತ್ತಲಿನ ಸರಣಿ ಸಾವುಗಳು ಪೀಠಾಧಿಪತಿಗಳನ್ನು ಅಲುಗಾಡಿಸುತ್ತಲೇ ಇಲ್ಲ.

ನಿತ್ಯ ಹೆಣ ಸುಡುವ ಕಾಯಕ ಮಾಡುವವನಲ್ಲಿ ಅತಿ ಹೆಚ್ಚು ಅಂತಃಕರಣ ಇರುತ್ತದೆ. ಆತನಿಗೆ ಸಾವು ತನ್ನ ನಿತ್ಯ ಬದುಕಿನ ಒಂದು ಭಾಗವಾಗಿರುತ್ತದೆ. ಪ್ರತಿಯೊಂದು ಸಾವಿಗೂ ಮಿಡಿಯುತ್ತಾ ಕುಳಿತರೆ ಅವನ ಬದುಕು ಬೇಗನೆ ಕೊನೆಗಾಣುತ್ತದೆ. ಇದು ಜೀವನ. ಸಾವಿನ ನಡುವೆ ಬದುಕುವುದು ಅವನ ಜೀವನೋಪಾಯ. ಆದರೂ ಅವನಲ್ಲಿ ಮಡುಗಟ್ಟಿರುವ ಅಂತಃಕರಣ ಅವನಲ್ಲಿ ಜೀವ ಪ್ರೀತಿ ತುಂಬಿರುತ್ತದೆ. ಇದು ಜೀವ. ಜೀವನವಿಡೀ ಸಾವುಗಳ ನಡುವೆಯೇ ಬದುಕುವ ಈತನಿಗೆ ತನ್ನ ಕುಟುಂಬದಲ್ಲಿ ಒಬ್ಬರು ಮೃತಪಟ್ಟರೂ ಸಹಿಸಲಾಗದಷ್ಟು ದುಃಖ ಉಮ್ಮಳಿಸುತ್ತದೆ. ಎಷ್ಟೇ ಸಾವುಗಳನ್ನು ಕಂಡರೂ ಅಂತಃಕರಣ ಜೀವಂತವಾಗಿದ್ದರೆ ಮನುಜ ಪ್ರೀತಿ ಬತ್ತುವುದಿಲ್ಲ. ಇದು ಜೀವನ.  ಈ ಮೂರರ ಸಮೀಕರಣವನ್ನು ಪರಿಪೂರ್ಣವಾಗಿ ಕಾಣಬಹುದಾದರೆ ಅದು ಮಸಣದಲ್ಲೇ.

ನಮ್ಮ ದೇಶದ ಸಾರಥ್ಯ ವಹಿಸಿರುವ ಅಧಿಕಾರದಾಹಿ ರಾಜಕೀಯ ನಾಯಕರಿಗಾಗಿ, ಈ ಶವಾಗಾರ ನಿರ್ವಹಿಸುವವರಿಂದ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸುವ ಅನಿವಾರ್ಯತೆ ಈಗ ಕಾಣುತ್ತಿದೆ. ಏಕೆಂದರೆ ಇವರಿಗೆ ಜೀವದ ಬೆಲೆ ಗೊತ್ತಿಲ್ಲ. ಸಾವಿನ ಬೆಲೆಯೂ ಗೊತ್ತಿಲ್ಲ. ಜೀವಗಳನ್ನು ಹಿಸುಕಲು ಆಸ್ಪತ್ರೆಗಳಲ್ಲಿ ವ್ಯಾಪಾರ ಕುದುರಿಸಿ ಭ್ರೂಣ ಹತ್ಯೆ ಮಾಡುವ ದೇಶ ನಮ್ಮದು. ಎಳೆಯ ಜೀವಗಳನ್ನು ಹೆಣ್ಣು ಎಂಬ ಕಾರಣಕ್ಕಾಗಿಯೇ ಹೊಸಕಿ ಹಾಕುವ ದೇಶ ನಮ್ಮದು. ಈಗ ಸಾವನ್ನೂ ಖರೀದಿಸಲಾಗುತ್ತಿದೆ. ಹಣ ಇದ್ದರೆ ಹೆಣಕ್ಕೂ ಜಾಗ ಎನ್ನುವಂತಹ ಪರಿಸ್ಥಿತಿ ಬಂದಿದೆ. ಈ ಪರಿಸ್ಥಿತಿಗೆ ಕೋವಿಡ್ ಕಾರಣ ಅಲ್ಲ. ಕೋವಿಡ್ ನಿಮಿತ್ತ. ಕಾರಣ ನಾವು ಪೋಷಿಸಿರುವ ವ್ಯವಸ್ಥೆ.

ಎಲ್ಲಿಂದ ಎಲ್ಲಿಯವರೆಗೆ ನೋಡಿದರೂ ಇವರಿಗೆ ಹಣ-ಅಧಿಕಾರ-ಲಾಭ ಇವಷ್ಟೇ ಕಾಣುತ್ತವೆ. ಅದು ಜೀವನಾಶಕ ಅಣುವಿದ್ಯುತ್ ಘಟಕವೋ, ಪರಿಸರ ನಾಶದ ಕಾರ್ಖಾನೆಯೋ ಇರಬಹುದು ಅಥವಾ ಜೀವ ರಕ್ಷಕ ಲಸಿಕೆ ಇರಬಹುದು. ಎರಡೂ ಮಾರುಕಟ್ಟೆಯ ಕೈಯ್ಯಲ್ಲಿದೆ. ನಾಶ ಮಾಡಲು ಬಂಡವಾಳ ಹೂಡುವ ವ್ಯವಸ್ಥೆಯಲ್ಲಿ ನಾವಿದ್ದೇವೆ. ನಾಶವಾಗುತ್ತಿದ್ದರೂ, ಇರುವಷ್ಟು ದಿನದ ಹಿತವಲಯಕ್ಕಾಗಿ ಸಹಿಸಿಕೊಳ್ಳುವ ಮನಸ್ಥಿತಿಯನ್ನು ಈ ಮಾರುಕಟ್ಟೆಯೇ ಸೃಷ್ಟಿಸಿಬಿಟ್ಟಿದೆ. ಹಾಗಾಗಿ ಮುಳುಗಡೆಯ ಭೀತಿಯೂ ನಮ್ಮನ್ನು ಕಾಡುವುದಿಲ್ಲ. ವಿನಾಶದ ಆತಂಕವೂ ಕಾಡುವುದಿಲ್ಲ. ಇಂತಹ ಒಂದು ಬೃಹತ್ ಸಮಾಜವನ್ನೂ ಬಂಡವಾಳ ಮಾರುಕಟ್ಟೆ ಸೃಷ್ಟಿಸಿಬಿಟ್ಟಿದೆ.

ಈ ಮಾರುಕಟ್ಟೆಯ ನಡುವೆಯೇ ಕೊರೊನಾ ಜನಸಾಮಾನ್ಯರ ಜೀವದೊಡನೆ ಆಟವಾಡುತ್ತಿದೆ. ಇದರೊಂದಿಗೆ ಬದುಕುವುದನ್ನು ಕಲಿಯಿರಿ ಎಂದು ಹೇಳುವ ನಾಯಕರಿಗೆ ಬದುಕಿನ ಅರ್ಥವೇ ತಿಳಿದಿರುವುದಿಲ್ಲ. ಏಕೆಂದರೆ ಇವರಿಗೆ ಹಸಿವಿನ ಅರ್ಥ ತಿಳಿದಿರುವುದಿಲ್ಲ. ನೋವು, ವೇದನೆ ಇವೆಲ್ಲವೂ ಇವರಿಗೆ ಮತಪೆಟ್ಟಿಗೆಯ ಹಿಂದೆ ಅವಿತಿರುವ ಪಂಚವಾರ್ಷಿಕ ದರ್ಶನಗಳಂತೆ. ಭಾರತ ವಿಶಾಲವಾದ ದೇಶವಲ್ಲವೇ, ಯಾವುದೋ ಒಂದು ಮೂಲೆಯಲ್ಲಿ ಹೆಣಸುಟ್ಟರೆ ಮತ್ತೊಂದು ಮೂಲೆಗೆ ತಿಳಿಯುವುದೇ ಇಲ್ಲ. ಹಾಗಾಗಿ ದಕ್ಷಿಣದಲ್ಲಿನ ಹೆಣದ ರಾಶಿ ದೆಹಲಿಯ ಸೆಂಟ್ರಲ್ ವಿಸ್ತಾ ಹಾದಿಗೆ ಅಡ್ಡಿಯಾಗುವುದಿಲ್ಲ. ದೆಹಲಿಯಲ್ಲೇ ಬೀಳುವ ಹೆಣದ ರಾಶಿಗಳು ಅಧಿಕಾರ ಪೀಠಗಳಿಗೆ ಗೋಚರಿಸುವುದೇ ಇಲ್ಲ.

ಮಸೂರಗಳನ್ನು ತೊಟ್ಟು ಬದುಕುತ್ತಿದ್ದೇವೆ. ಪ್ರಪಂಚ ನಮಗೆ ಬೇಕಾದಂತೆ ಕಾಣುತ್ತದೆ. ಅದು ಕಂಡಂತೆ ನಾವು ಅರ್ಥಮಾಡಿಕೊಳ್ಳುವ ಕಾಲ ಬಹುಶಃ ಮುಗಿದುಹೋಗಿದೆ. ಚಾಮರಾಜನಗರದಲ್ಲಿ 24 ಜೀವಗಳು ಬಲಿಯಾದವು. ಉಸಿರಾಡಲು ಸೌಲಭ್ಯ ಇಲ್ಲದೆ. ಇನ್ನೂ ರಾಜ್ಯದ ವಿವಿಧೆಡೆ ಆಮ್ಲಜನಕ ಇಲ್ಲದೆ ಸಾಯುತ್ತಲೇ ಇದ್ದಾರೆ. ಈಗ ಆಮ್ಲಜನಕ ಮಾರುಕಟ್ಟೆಯ ಹಿಡಿತದಲ್ಲಿದೆ. ಉತ್ಪಾದಿಸುವವನೊಬ್ಬ, ಸಾಗಾಣಿಕೆ ಮಾಡುವವನೊಬ್ಬ, ವಿತರಿಸುವವ ಮತ್ತೊಬ್ಬ. ಮಾರುಕಟ್ಟೆ ಸರಕಿನಂತೆಯೇ ಈ ಕೃತಕ ಉಸಿರನ್ನೂ ಸರ್ಕಾರ ಪಡಿತರದಂತೆ ಸೀಮಿತವಾಗಿ ವಿತರಿಸುತ್ತದೆ. ತನಗೆ ಬೇಕಾದವರಿಗೆ ಹೆಚ್ಚು, ಬೇಡದವರಿಗೆ ಶೂನ್ಯ. ಹೀಗೆ , ಎಷ್ಟಾದರೂ ಪಳಗಿದ ಕೈಗಳಲ್ಲವೇ.

ದೆಹಲಿಯ ಪೀಠ, ಕರ್ನಾಟಕಕ್ಕೆ ಅಗತ್ಯಕ್ಕಿಂತಲೂ ಕಡಿಮೆ ಆಮ್ಲಜನಕ ನೀಡುತ್ತದೆ. ನ್ಯಾಯಾಂಗದ ಪ್ರವೇಶದಿಂದ ನಮಗೆ ಹಿಡಿದಿಟ್ಟ ಉಸಿರು ಲಭ್ಯವಾಗುತ್ತದೆ. ಪ್ರತಿನಿತ್ಯ ಸಾವಿರಾರು ಕೊರೊನಾ ಸೋಂಕಿತರು ಆಸ್ಪತ್ರೆಗಳ ಮುಂದೆ ಜೀವದಾನ ಬೇಡುತ್ತಿರುವಾಗ, ಇಂತಿಷ್ಟೇ ಆಮ್ಲಜನಕ ಬೇಕೆಂದು ಹೇಗೆ ನಿರೀಕ್ಷಿಸುವುದು ? ಹೆಚ್ಚಿಗೆ ನೀಡಿದರೆ ಏನಾಗುತ್ತದೆ ? ಇಲ್ಲಿ ಮಾರುಕಟ್ಟೆ ಪ್ರವೇಶಿಸುತ್ತದೆ. ಅವಶ್ಯಕತೆಗಿಂತಲೂ ಕಡಿಮೆ ಸರಬರಾಜು ಇದ್ದರಷ್ಟೇ ಸರಕಿಗೆ ಬೆಲೆ, ಲಾಭ ಹೆಚ್ಚು. ಅಷ್ಟೇ. ಇದು #ಆತ್ಮನಿರ್ಭರ ಭಾರತದ ನಿಯಮ. ಮಾರುಕಟ್ಟೆ ಎಂದರೆ ಕ್ರೌರ್ಯದ ಪ್ರಾಪಂಚಿಕ ಸ್ವರೂಪವಷ್ಟೇ. ಅಲ್ಲಿ ಹಣ ಮತ್ತು ಹೆಣ ಎರಡೂ ವಿನಿಮಯದ ವಸ್ತುಗಳೇ ಆಗಿಬಿಡುತ್ತವೆ. ಹಾಗಾಗಿಯೇ ಹೆಣ ಸುಡಲೂ ಹಣ ನೀಡಬೇಕಾದ ಪರಿಸ್ಥಿತಿ.

ಜೀವರಕ್ಷಣೆಗಾಗಿ ಆಸ್ಪತ್ರೆಗೆ ಬರುವವರಿಗೆ ಹಾಸಿಗೆ ಒದಗಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಈ ಹಾಸಿಗೆಗಳೂ ಕಾಳಸಂತೆಯ ದಂಧೆಯ ಒಂದು ಭಾಗವಾಗುತ್ತದೆ. ಈ ದಂಧೆಯನ್ನು ಕೊನೆಗೊಳಿಸಲು ಒಂದು ಪುಟ್ಟ ಸೇನೆಯನ್ನೇ ಸಿದ್ಧಪಡಿಸುವ ಯುವ ಸಂಸದರಿಗೆ, ಜೀವರಕ್ಷಕ ತಾಣದಲ್ಲೂ ಅಸ್ಮಿತೆಗಳ ಹೊಸ ಲೋಕ ಕಂಡುಬಿಡುತ್ತದೆ. ಹೆಣಗಳಲ್ಲಿ ಅಸ್ಮಿತೆಗಳನ್ನು ಹೆಕ್ಕಿ ತೆಗೆಯುವುದರಲ್ಲಿ ತರಬೇತಿ ಪಡೆದಿರುವವರಿದ್ದಾರೆ ನಮ್ಮ ನಡುವೆ. ಹಾಗಾಗಿ ಇಲ್ಲಿ ಹದಿನೇಳು ಮಂದಿಯನ್ನು ಹೆಕ್ಕಿ ತೆಗೆದಿದ್ದರಲ್ಲಿ ಅಚ್ಚರಿಯೇನಿಲ್ಲ. ಇಷ್ಟಕ್ಕೂ ದಂಧೆಕೋರರ ವಿಳಾಸ ತಿಳಿದಿದ್ದರೂ ತಲುಪಲಾಗದ ಸ್ಥಿತಿಯನ್ನು ಅಧಿಕಾರ ರಾಜಕಾರಣ ಸೃಷ್ಟಿಸಿರುತ್ತದೆ. ಹಾಗಾಗಿ ಕಾಡು ಹಂದಿಗಳಿಗೆ ಮುಕ್ತಿ. ಮುಗ್ಧ ಜಿಂಕೆಗಳ ಬಲಿ.

ಸರ್ಕಾರಗಳು ತಾವು ಕೊಟ್ಟ ಮಾತಿಗೆ ತಪ್ಪಲಿಲ್ಲ. ಕೊರೊನಾದೊಂದಿಗೆ ಬದುಕಲು ಕಲಿಯಿರಿ ಎಂಬ ಮನದ ಮಾತು ಇನ್ನೂ ಅಪ್ರಸ್ತುತವಾಗಿಲ್ಲ. ಹಾಗಾಗಿ ಕೊರೊನಾ ನಡುವೆಯೇ ಚುನಾವಣೆಗಳು, ನಡೆದಿವೆ, ಸಮಾವೇಶಗಳು ನಡೆದಿವೆ, ಕುಂಭಮೇಳಗಳೂ ನಡೆದಿವೆ. ಇವುಗಳ ನಡುವೆಯೇ ಅವರು ಬದುಕು ಕಂಡುಕೊಂಡಿದ್ದಾರೆ. ಅವರ ಬದುಕಿಗೆ ಇವೆಲ್ಲವೂ ಅನಿವಾರ್ಯ. ಆದರೆ ನಮ್ಮ ಬದುಕಿಗೆ ಇವು ಮಾರಕ. ಅವರು ಬದುಕುತ್ತಿಲ್ಲವೇ ? ಅದೂ ಒಂದು ಬದುಕೇ ಎಂದು ಕೇಳುವುದು ಬೇಡ. ಉತ್ತರ ಶೋಧಿಸಲು ಬಹಳ ಶ್ರಮಪಡಬೇಕಾಗುತ್ತದೆ. ಆದರೂ ಅವರು ನಿರ್ಲಿಪ್ತವಾಗಿ ಬದುಕುತ್ತಾರೆ.

ಕೊರೊನಾ ಹರಡಬಾರದು ಎಂದರೆ ನಾವು ಲಾಕ್‍ಡೌನ್ ಮಾಡುತ್ತೇವೆ ಎನ್ನುತ್ತಾರೆ. ಲಾಕ್‍ಡೌನ್ ಜನರನ್ನು ನಿಯಂತ್ರಿಸುತ್ತದೆ. ಕೊರೊನಾ ಓಡಾಡುತ್ತಲೇ ಇರುತ್ತದೆ. ಸರಕಾರಗಳು ನೀಡುವ ನಿಗದಿತ ಅವಧಿಯ ವಿನಾಯತಿಗಳು ನಮಗೆ ಅನ್ವಯ. ವೈರಾಣು ಸದಾ ಜೀವಂತವಾಗಿಯೇ ಇರುತ್ತದೆ. ಆಶ್ರಯ ತಾಣಗಳನ್ನು ಅರಸುತ್ತಲೇ ಇರುತ್ತದೆ. ಹಾಗಾಗಿ ನಿಮ್ಮನ್ನು ನೀವು ಲಾಕ್ ಡೌನ್ ಮಾಡಿಕೊಂಡರೆ ಅದು ಅನಾಥವಾಗಿಬಿಡುತ್ತದೆ. ಇದು ನಮ್ಮ ಸರ್ಕಾರಗಳ ವಾದ. ಹಾಗಾಗಿಯೇ ಲಾಕ್ ಡೌನ್ ಘೋಷಿಸುವಾಗ ಸರ್ಕಾರಗಳು ಏನು ಸಿಗುತ್ತದೆ ಏನು ಸಿಗುವುದಿಲ್ಲ ಎಂದಷ್ಟೇ ಹೇಳುತ್ತವೆ. ನಿಮಗೇನು ಬೇಕು ಎಂದು ಯಾರನ್ನಾದರೂ ಕೇಳಿದೆಯೇ ?

ಒಮ್ಮೆ ಕೇಳಿಬಿಟ್ಟರೆ ಅವರ ಅಧಿಕಾರ ಪೀಠಗಳು ಅಲುಗಾಡಿಬಿಡುತ್ತವೆ. ಏಕೆಂದರೆ ನಿಮ್ಮ ಜೀವನೋಪಾಯದ ಅವಶ್ಯಕತೆಗಳನ್ನು ಒದಗಿಸುವ ಕೀಲಿ ಕೈ ಮಾರುಕಟ್ಟೆಯ ಬಳಿ ಇರುತ್ತದೆ. ಕೃತಕ ಉಸಿರು, ಆಮ್ಲಜನಕವೇ ಕಂಪನಿಯ ಮುದ್ರೆಯನ್ನು ಹೊತ್ತು ಬರುತ್ತದೆ.  ಜೀವ ರಕ್ಷಕ ಲಸಿಕೆಗೆ ಜಿಎಸ್‍ಟಿ ನೀಡಿ ಖರೀದಿಸಬೇಕಾಗುತ್ತದೆ.  ಗಾಳಿಯನ್ನು ಹಿಡಿದಿಡಲು ಆಗುವುದಿಲ್ಲ. ಆದರೆ ಉಸಿರನ್ನು ಹಿಡಿದಿಡಬಹುದು. ಈಗ ಉಸಿರು ಮಾರಾಟಕ್ಕಿದೆ. ಈ ಉಸಿರು ಒಂದು ಸಮಾಜದ ಉಸಿರುಗಟ್ಟಿಸುತ್ತಿದೆ. ಆದರೂ ಆಮ್ಲಜನಕದ ಸರಬರಾಜು, ಪೂರೈಕೆ, ಉತ್ಪಾದನೆ, ವಿತರಣೆ ಇವೆಲ್ಲವೂ ಮುಂಬರುವ ಚುನಾವಣೆಗಳಿಗೆ ನೆರವಾಗುವಂತಹ ಪ್ರಚಾರ ಸಾಮಗ್ರಿಗಳ ಕಚ್ಚಾವಸ್ತುಗಳಾಗಿಬಿಟ್ಟಿವೆ.

ಆದರೆ ನಮ್ಮ ಸರ್ಕಾರಗಳ ಉಸಿರಾಟಕ್ಕೇನೂ ತೊಂದರೆಯಾಗಿಲ್ಲ. ಹೊಸ ಹವೆ, ಹೊಸ ವಾತಾವರಣ, ಹೊಸ ಪರಿಸರ, ಸ್ವಚ್ಚಂದ ಆಹ್ಲಾದಕರ ಬದುಕಿಗಾಗಿಯೇ,  #ಆತ್ಮನಿರ್ಭರ ಭಾರತದ ಜನಪ್ರತಿನಿಧಿಗಳಿಗಾಗಿ ಒಂದು ಭವ್ಯ ಸೌಧದ ನಿರ್ಮಾಣ ಸುಡುವ ಹೆಣಗಳ ರಾಶಿಯ ನಡುವೆಯೇ ಆರಂಭವಾಗಿದೆ. ನಾವೇ ನೀಡುವ ತೆರಿಗೆಯ ಹಣದಲ್ಲಿ ಈ ಐಷಾರಾಮಿ ಹಿತವಲಯದ ಸೃಷ್ಟಿಯಾಗುತ್ತಿದೆ. ದೇಶದೆಲ್ಲೆಡೆ ಆಮ್ಲಜನಕಕ್ಕಾಗಿ ಹಾಹಾಕಾರ ಕೇಳಿಬರುತ್ತಿದೆ. ಈ ಭವ್ಯ ಸೌಧದ ನಿರ್ಮಾಣಕ್ಕಾಗಿಯೇ ನೂರಾರು ಹಸಿರೊಡಲುಗಳು ಅವಸಾನ ಕಾಣುತ್ತಿವೆ. ನೆಲಕ್ಕುರುಳಿದ ಮರದ ತುಂಡುಗಳು ಹೆಣ ಸುಡಲು ನೆರವಾಗಬಹುದು.

ಇಂತಹ ಒಂದು ಮಾರುಕಟ್ಟೆ ಕ್ರೌರ್ಯದ ನಡುವೆ ನಾವು ದಿನನಿತ್ಯ ನಮ್ಮ ಆಪ್ತರನ್ನು ಕಳೆದುಕೊಳ್ಳುತ್ತಿದ್ದೇವೆ. ನಾವೇ ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಿದ ನಮ್ಮ ಪ್ರತಿನಿಧಿಗಳು ತಮ್ಮ ಕುದಿಯುತ್ತಿರುವ ರಕ್ತವನ್ನು ಸಹಿಸಿಕೊಂಡು (ಇಂದಿನ ಪತ್ರಿಕೆಗಳನ್ನು ನೋಡಿ ಮೈಸೂರು ಸುತ್ತಲಿನ ಶಾಸಕರ ರಕ್ತ ಕುದಿಯುತ್ತಿರುವ ವರದಿಯಾಗಿದೆ) ತಮ್ಮ ಮತದಾರ ಪ್ರಭುಗಳ ರಕ್ಷಣೆಗೆ ಮುಂದಾಗುತ್ತಿದ್ದಾರೆ. ಆಮ್ಲಜನಕದ ಕೊರತೆಯಿಂದ ಪ್ರಾಣಕಳೆದುಕೊಳ್ಳುತ್ತಿರುವ ಅಮಾಯಕ ಜೀವಗಳಿಗಿಂತಲೂ ಈ ಪ್ರತಿನಿಧಿಗಳ ಪ್ರತಿಷ್ಟೆ, ಸಮ್ಮಾನ ಮತ್ತು ರಾಜಕೀಯ ಹಿತಾಸಕ್ತಿಗಳು ಮೇಲುಗೈ ಸಾಧಿಸುತ್ತಿರುವುದು ಈ ದೇಶದ ದುರಂತ.

ಪ್ರಜಾಪ್ರಭುತ್ವದ ಕನಿಷ್ಠ ಪ್ರಜ್ಞೆ ಇರುವ ಒಬ್ಬ ವ್ಯಕ್ತಿ ಇಂದು ದೇಶದ ಮುಂದಾಳತ್ವ ವಹಿಸಿದ್ದರೂ ಒಂದು ರಾಷ್ಟ್ರೀಯ ಸರ್ಕಾರದ ರಚನೆಯಾಗುತ್ತಿತ್ತು. ಸರ್ವಪಕ್ಷಗಳನ್ನೊಳಗೊಂಡ ಚಿಂತನಾ ವೇದಿಕೆ ಇರುತ್ತಿತ್ತು. ವೈರಾಣು ತಜ್ಞರು, ವಿಜ್ಞಾನಿಗಳು, ವೈದ್ಯಕೀಯ ತಜ್ಞರು ಮತ್ತು ಅನುಭವಿ ಸಾರ್ವಜನಿಕ ವ್ಯಕ್ತಿಗಳನ್ನೊಳಗೊಂಡ ರಾಷ್ಟ್ರಮಟ್ಟದ ವೇದಿಕೆ ರೂಪುಗೊಳ್ಳುತ್ತಿತ್ತು. ಪ್ರತಿರಾಜ್ಯದಲ್ಲೂ , ಜಿಲ್ಲೆಯಲ್ಲೂ ಇದರ ಶಾಖೆಗಳಿರುತ್ತಿದ್ದವು. ಜನಸಾಮಾನ್ಯರ ಜೀವನ ಮತ್ತು ಬದುಕು ಇವೆರಡನ್ನೂ ಅರ್ಥಮಾಡಿಕೊಳ್ಳುವ ನಾಯಕರು ಇದ್ದಿದ್ದರೆ ಎಲ್ಲರಿಗೂ ಉಚಿತ ಲಸಿಕೆ ನೀಡಲಾಗುತ್ತಿತ್ತು. ಕೊರೊನಾ ಪೀಡಿತರಿಗೆ ಉಚಿತ ವೈದ್ಯಕೀಯ ನೆರವು ದೊರೆಯುತ್ತಿತ್ತು.

ಆದರೆ ಈ ಕಾಲ್ಪನಿಕ ರಾಜ್ಯದಿಂದ ಹೊರಬಂದೇ ನಾವು ಯೋಚಿಸಬೇಕಿದೆ. ಏಕೆಂದರೆ ಜೀವನೋಪಾಯ ವ್ಯಕ್ತಿನಿಷ್ಟ ವಿಚಾರ. ಜೀವನ ವಸ್ತುನಿಷ್ಟ ವಿಚಾರ. ನಾವು ಬದುಕುತ್ತಿರುವುದು ಒಂದು ಪ್ರಜಾಪ್ರಭುತ್ವದಲ್ಲೇ ಆದರೂ ಇಲ್ಲಿ ಪ್ರಜೆಗಳಿಗೂ ಪ್ರಭುತ್ವಕ್ಕೂ ಇರುವ ಅಂತರ ಅಪಾರ ಎನ್ನುವುದನ್ನು ಕೋವಿಡ್-19 ಸಾಬೀತುಪಡಿಸಿದೆ.  ಇಲ್ಲಿ ನಾವೇ ಆಯ್ಕೆ ಮಾಡುವ ಸರ್ಕಾರಗಳು ಜೀವನ ನಡೆಸಲು ಹಾದಿ ಸುಗಮಗೊಳಿಸುತ್ತವೆ. ಜೀವನ ಕಲ್ಪಿಸಿಕೊಳ್ಳುವುದು ಪ್ರಜೆಗಳ ಆಯ್ಕೆ. ಜೀವನೋಪಾಯ ಮಾರುಕಟ್ಟೆಗೆ ಸಂಬಂಧಿಸಿದ ವಿಚಾರ. ಬದುಕು ಕಟ್ಟಿಕೊಳ್ಳಲು ಈ ಮಾರುಕಟ್ಟೆಯ ಯಾವುದೋ ಒಂದು ಜಗುಲಿಯನ್ನು ಆಶ್ರಯಿಸಬೇಕು.

ಇದನ್ನೇ ರಥಸಾರಥ್ಯ ವಹಿಸಿದವರೂ ಕಳೆದ ವರ್ಷ ಹೇಳಿರುವುದು. ಬದುಕುವುದನ್ನು ಕಲಿಯಿರಿ, ಕೊರೊನಾದೊಂದಿಗೆ ಬದುಕುವುದನ್ನು ಕಲಿಯಿರಿ. ಅಂದರೆ ಕೊರೊನಾ ಕೊಲ್ಲುತ್ತದೆ ಹಾಗಾಗಿ ಸಾವುಗಳೊಂದಿಗೆ ಬದುಕುವುದನ್ನೂ ಕಲಿಯಿರಿ. ಕೊರೊನಾ ಉಸಿರುಗಟ್ಟಿಸುತ್ತದೆ ಹಾಗಾಗಿ ಆಮ್ಲಜನಕ ಇಲ್ಲದೆ ಸಾಯುತ್ತಾರೆ ಈ ಸಾವುಗಳೊಡನೆ ಬದುಕುವುದನ್ನೂ ಕಲಿಯಿರಿ. ಕೊರೊನಾ ನಿಮ್ಮ ಜೀವನೋಪಾಯಗಳನ್ನು ಕಸಿದುಕೊಳ್ಳುತ್ತದೆ ಹೇಗೋ ಇದ್ದುದರಲ್ಲಿ ಬದುಕುವುದನ್ನು ಕಲಿಯಿರಿ. ಹಸಿದವರಿಗೆ ಉಪನ್ಯಾಸ ಹೇಳುವುದು ಎಂದರೆ ಇದನ್ನೇ. ಭಾರತಕ್ಕೆ ಇದೇನೂ ಹೊಸತಲ್ಲ. ಶತಮಾನಗಳಿಂದ ಇದನ್ನೇ ಮಾಡುತ್ತಾ ಬಂದಿದ್ದೇವೆ. ಈಗ ನಮಗೆ ನಾವೇ ಹೇಳಿಕೊಳ್ಳುತ್ತಿದ್ದೇವೆ ಏಕೆಂದರೆ ಇಂದು ನಮಗೆ ನಾವೇ ಅರ್ಪಿಸಿಕೊಂಡ ಸಂವಿಧಾನದಡಿ ನಮಗೆ ನಾವೇ ಆಯ್ಕೆ ಮಾಡಿಕೊಂಡವರ ಆಡಳಿತದಲ್ಲಿ ನಾವು ನಮ್ಮ ಬದುಕು ಕಂಡುಕೊಳ್ಳುತ್ತಿದ್ದೇವೆ.

ಸಾಧ್ಯವಾದರೆ ಹೇಳೋಣ, ಸ್ವಾಮಿ ನಿಮ್ಮಿಂದ ಆಗದಿದ್ದರೆ ಹೊರಟುಬಿಡಿ……….

 

Donate Janashakthi Media

One thought on “ಆಳುವ ಯೋಗ್ಯತೆ ಇಲ್ಲದಿದ್ದರೆ ಹೊರಟುಬಿಡಿ ಪ್ಲೀಸ್…

  1. ನಿಜ ಸರ್…ನಿಮ್ಮ ಬರಹ ಪ್ರಸ್ತುತ. ಮನಸ್ಸುಗಳಲ್ಲಿ ಇಂತಹ ಬಂಡಾಯದ ಅಲೆಗಳು ಎಲ್ಲರಲ್ಲೂ ಏಳುತ್ತಿವೆ. ಯಾವಾಗ ನಮ್ಮ ನಿಮ್ಮಂಥವರನ್ನು ನೋಡಿ ಸಾಮಾನ್ಯರು ಎಚ್ಚೆತ್ತುಕೊಂಡು ತಿರುಗಿ ಬೀಳುತ್ತಾರೋ ಗೊತ್ತಿಲ್ಲ…ಮನಸ್ಸು ಮಲಿನವಾಗಿ ಮಾನವೀಯತೆ ಮಾಯವಾಗಿದೆ ಸರ್….ಸೇವೆಯಲ್ಲೂ ವ್ಯಾಪಾರ. ಮನಸ್ಸು ಒಳಗೇ ರೋಧಿಸುತ್ತಿದೆ ಸರ್.

Leave a Reply

Your email address will not be published. Required fields are marked *