ಕರ್ನಾಟಕದ ಶಿಕ್ಷಣ ಸಚಿವರು ಶಾಲೆಯನ್ನು ತೆರೆಯಬೇಕೋ ಬೇಡವೋ ಎಂಬುದರ ಬಗ್ಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ ವಿನಾಃ ಮೇ ನಂತರ ಸ್ಥಗಿತವಾಗಿರುವ ಮಧ್ಯಾಹ್ನ ಬಿಸಿಯೂಟಕ್ಕೆ ಪ್ರತಿಯಾಗಿ ಆಹಾರ ಪದಾರ್ಥದ ವಿತರಣೆಯನ್ನು ಆರಂಭಿಸುವ ಬಗ್ಗೆ ಚಕಾರವೆತ್ತುತ್ತಿಲ್ಲ. ಕಳೆದ ಆರು ತಿಂಗಳಿನಿಂದ ಸರಿಸುಮಾರು 55 ಲಕ್ಷ ಮಕ್ಕಳು ಬಿಸಿಯೂಟ ಮತ್ತು ಅದರ ಬದಲಿಗೆ ಆಹಾರ ಪದಾರ್ಥಗಳಿಂದ ವಂಚಿತರಾಗಿದ್ದಾರೆ. ರಾಜ್ಯದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಬಿಸಿಯೂಟಕ್ಕೆ ಪ್ರತಿಯಾಗಿ ಆಹಾರ ಪದಾರ್ಥವನ್ನು ವಿತರಿಸದಿರುವುದು ಸಂವಿಧಾನದ ಪರಿಚ್ಛೇದ 21ರ ಜೀವಿಸುವ ಹಕ್ಕು ಮತ್ತು ಆಹಾರದ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಹೇಳಿದ್ದಾರೆ. ನಮ್ಮ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತೆ ಅಧಿಸೂಚನೆಯನ್ನು ಪಾಲಿಸುತ್ತಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ.
ಉಪಚುನಾವಣೆಯಲ್ಲಿ ಭಾಗವಹಿಸಲು ಸರ್ಕಾರದ ಧುರೀಣರಿಗೆ ಸಮಯವಿದೆ, ಅಗತ್ಯವಿಲ್ಲದ ಸಂಗತಿಗಳ ಬಗ್ಗೆ ಚರ್ಚೆ(ಲವ್ ಜಿಹಾದ್), ಉಳ್ಳ ಜಾತಿಗಳಿಗೆ ಮಂಡಳಿ ರಚನೆ ಮಾಡಲು ಮಂತ್ರಿಗಳಿಗೆ ಸಮಯವಿದೆ, ಮಂತ್ರಿಮಂಡಲ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲು ದೆಹಲಿಗೆ ಹೋಗಲು ಸಚಿವರಿಗೆ ಸಮಯವಿದೆ, ಸಂಪನ್ಮೂಲವಿದೆ ಮತ್ತು ಶ್ರಮಶಕ್ತಿಯಿದೆ. ಆದರೆ ರಾಜ್ಯದ ಸರಿಸುಮಾರು 55 ಲಕ್ಷ ಮಕ್ಕಳಿಗೆ ಬಿಸಿಯೂಟಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಸಮಯವಿಲ್ಲ, ಸಂಪನ್ಮೂಲವಿಲ್ಲ ಮತ್ತು ಅದಕ್ಕಾಗಿ ಶ್ರಮಪಡುವುದು ಬೇಕಾಗಿಲ್ಲ.
ಶಿಕ್ಷಣ ಮಂತ್ರಿ ಸುರೇಶ್ ಕುಮಾರ್ ಅವರು ಶಾಲೆಯನ್ನು ಹೇಗೆ ಪುನರಾರಂಭಿಸುವುದು, ವಿದ್ಯಾಗಮ ಮುಂತಾದ ಪ್ರಯೋಗಗಳನ್ನು ಹೇಗೆ ಜಾರಿಗೊಳಿಸುವುದು, ಕೋವಿಡ್ ಹಿನ್ನೆಲೆಯಲ್ಲಿ ಪಠ್ಯಕ್ರಮದಲ್ಲಿ ಯಾವ ಪಾಠಕ್ಕೆ ಕತ್ತರಿ ಹಾಕಬೇಕು (ಸಂವಿಧಾನಾತ್ಮಕ ಸಂಗತಿಗಳು ಇವರ ಕತ್ತರಿಗೆ ಹೊರತಾಗಿಲ್ಲ) ಮುಂತಾದ ಸಂಗತಿಗಳಲ್ಲಿ ತೀವ್ರ ಬ್ಯುಸಿಯಾಗಿದ್ದಾರೆ. ಹೆಸರು ಬದಲಾವಣೆ (ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಮಾಡಿದ್ದು), ಹೊಸ ಜಿಲ್ಲೆಯನ್ನು ಘೋಷಿಸುವುದು (ವಿಜಯಗರ ಜಿಲ್ಲೆ) ಮುಂತಾದ ಸಂಗತಿಗಳ ಬಗ್ಗೆ ಆಳುವ ಪಕ್ಷದ ಜನರು ತೀವ್ರ ಬ್ಯುಸಿಯಾಗಿದ್ದಾರೆ. ಇವೇ ಸರ್ಕಾರಕ್ಕೆ ಆದ್ಯತೆಯ ಸಂಗತಿಗಳು. ರಾಜ್ಯದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಮಾತ್ರ ಇವರೆಲ್ಲ ಕುರುಡಾಗಿದ್ದಾರೆ-ಕಿವುಡರಾಗಿದ್ದಾರೆ-ಕಲ್ಲಾಗಿದ್ದಾರೆ.
ಬಿಸಿಯೂಟವಿದ್ದಾಗಲೇ ನಮ್ಮ ರಾಜ್ಯದಲ್ಲಿ ವಯೋಮಾನಕ್ಕೆ ತಕ್ಕ ತೂಕವಿಲ್ಲದ ಮಕ್ಕಳ ಪ್ರಮಾಣ (ಸ್ಟಟಿಂಗ್) 2015-16ರಲ್ಲಿ ಶೇ. 39ರಷ್ಟಿದ್ದರೆ ಅಪೌಷ್ಟಿಕತೆಯ ಪ್ರಮಾಣ ಶೇ.40. ಎನ್.ಎಫ್.ಎಚ್.ಎಸ್-4 (2015-16)ರ ಪ್ರಕಾರ ರಾಯಚೂರು, ಯಾದಗಿರಿ, ಕಲಬುರಗಿ, ಬಳ್ಳಾರಿ ಮುಂತಾದ ಹಿಂದುಳಿದ ಜಿಲ್ಲೆಗಳಲ್ಲಿ 0-6 ವರ್ಷ ವಯೋಮಾನದ ಮಕ್ಕಳಲ್ಲಿ ಅನೀಮಿಯ ಪ್ರಮಾಣ ಶೇ. 70ಕ್ಕಿಂತ ಅಧಿಕ. ಅನೇಕ ರಾಷ್ಟ್ರೀಯ-ಅಂತಾರಾಷ್ಟ್ರೀಯ ಅಧ್ಯಯನಗಳು ತೋರಿಸುತ್ತಿರುವಂತೆ ಶಿಕ್ಷಣಕ್ಕೂ, ಆರೋಗ್ಯಕ್ಕೂ ನಡುವೆ ನೇರ ಸಂಬಂಧವಿದೆ. ಉತ್ತಮ ಬುದ್ಧಿಮತ್ತೆಗೆ ಉತ್ತಮ ಆಹಾರ ಅಗತ್ಯ. ಕೊವಿಡ್ ಪೂರ್ವದಲ್ಲಿ ಪ್ರತಿ ದಿನ 55 ಲಕ್ಷ ಮಕ್ಕಳು(1 ರಿಂದ 8 ನೆಯ ತರಗತಿ) ಬಿಸಿಯೂಟ ಸೇವಿಸುತ್ತಿದ್ದರು. ಇವರೆಲ್ಲರೂ ಕಳೆದ ಎಂಟು ತಿಂಗಳಿಂದ ಬಿಸಿಯೂಟದಿಂದ ವಂಚಿತರಾಗಿದ್ದಾರೆ. ಇವರಲ್ಲಿ ಕನಿಷ್ಟ ಶೇ. 75 ರಷ್ಟು ಬಡಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಇವರೆಲ್ಲರೂ ಬಿಸಿಯೂಟ ನಿಂತ ಕಾರಣಕ್ಕೆ ಅಪೌಷ್ಟಿಕತೆಗೆ ಒಳಗಾಗಿರುವ ಸಾಧ್ಯತೆಯಿದೆ. ಇವರ ಜೊತೆಗೆ ಪೌಷ್ಟಿಕತೆಯ ಗಡಿಯಲ್ಲಿದ್ದ ಲಕ್ಷಾಂತರ ಮಕ್ಕಳು ಈಗ ಅಪೌಷ್ಟಿಕತೆಗೆ ಜಾರಿರುವ ಆತಂಕವಿದೆ.
ಬಿಸಿಯೂಟ ಕಾರ್ಯಕ್ರಮವನ್ನು ಹಸಿವು ಮತ್ತು ಅಪೌಷ್ಟಿಕತೆಯ ನಿವಾರಣೆಗಾಗಿ 2002-03ರಲ್ಲಿ ಉತ್ತರ ಕರ್ನಾಟಕದ ಹಿಂದುಳಿದ 7 ಜಿಲ್ಲೆಗಳಲ್ಲಿ, ನಂತರ 2003-04 ರಲ್ಲಿ ರಾಜ್ಯದಾದ್ಯಂತ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಆರಂಭಿಸಲಾಯಿತು. ರಾಜ್ಯದ ಅತ್ಯಂತ ಹಿಂದುಳಿದ ಹೈದರಾಬಾದ್ ಕರ್ನಾಟಕ ಪ್ರದೇಶವನ್ನು 2019 ರಲ್ಲಿ ಈ ಸರ್ಕಾರವು ʻಕಲ್ಯಾಣ ಕರ್ನಾಟಕ’ಎಂದು ನಾಮಕರಣ ಮಾಡಿದೆ. ಆದರೆ ಈ ಸರ್ಕಾರಕ್ಕೆ ಪ್ರಾದೇಶಿಕ ಅಸಮಾನತೆ ನಿವಾರಣೆಯ ಜ್ಞಾಪಕವೂ ಇದ್ದಂತೆ ಕಾಣುವುದಿಲ್ಲ. ಜನರ ಕಲ್ಯಾಣವಿರಲಿ, ಮಕ್ಕಳ ಕಲ್ಯಾಣವನ್ನು ಮೂಲೆಗೆ ತಳ್ಳಲಾಗಿದೆ. ಎನ್.ಇ.ಪಿ.ಯಲ್ಲಿ ಶಿಕ್ಷಣದ ಗುಣಮಟ್ಟದ ಬಗ್ಗೆ ಮಾತನಾಡಲಾಗಿದೆ. ಆದರೆ ಮಕ್ಕಳಲ್ಲಿನ ಅಪೌಷ್ಟಿಕತೆಯ ಸಮಸ್ಯೆ ಮತ್ತು ಅವರ ಕಲಿಕೆಯ ಗುಣಮಟ್ಟಗಳ ನಡುವಿನ ವಿಲೋಮ ಸಂಬಂಧದ ಬಗ್ಗೆ ಚರ್ಚೆಯೇ ಅಲ್ಲಿಲ್ಲ.
ಸರ್ವೋಚ್ಚ ನ್ಯಾಯಾಲಯವು ಪರಿಚ್ಛೇದ 21ಕ್ಕೆ ನೀಡಿರುವ ವ್ಯಾಖ್ಯಾನದ ಪ್ರಕಾರ ಜೀವಿಸುವ ಹಕ್ಕು ಆಹಾರದ ಹಕ್ಕನ್ನು ಒಳಗೊಂಡಿದೆ. ಬಿಸಿಯೂಟ/ಆಹಾರ ವಿತರಣೆ ಕಾರ್ಯಕ್ರಮವನ್ನು ಸರ್ಕಾರವು ತಕ್ಷಣ ಆರಂಭಿಸದಿದ್ದರೆ ಇದು ಭಾರತೀಯ ಸಂವಿಧಾನ ನೀಡಿರುವ ಹಕ್ಕುಗಳನ್ನು ಹಾಗೂ ರಾಷ್ಟ್ರೀಯ ಆಹಾರ ಭದ್ರತೆ ಅಧಿಸೂಚನೆಯನ್ನು(2013) ಉಲ್ಲಂಘಿಸಿದಂತಾಗುತ್ತದೆ. ಪ್ರತಿಯೊಂದಕ್ಕೂ ನ್ಯಾಯಾಲಯವು ಸರ್ಕಾರಗಳಿಗೆ ಎಚ್ಚರಿಕೆ ನೀಡುವ ಅಗತ್ಯವುಂಟಾಗದಂತೆ ನೋಡಿಕೊಳ್ಳಬೇಕಾದುದು ಜೀವಂತ ಸರ್ಕಾರದ ಕರ್ತವ್ಯ. ಇಲ್ಲದಿದ್ದರೆ ಅದು ಸತ್ತ ಸರ್ಕಾರವಾಗುತ್ತದೆ. ಮಕ್ಕಳಿಗೆ ಬಿಸಿಯೂಟ/ಆಹಾರ ಪದಾರ್ಥ ವಿತರಣೆ ಕಾರ್ಯಕ್ರಮವನ್ನು ತುರ್ತಾಗಿ ಆರಂಭಿಸುವುದರ ಮೂಲಕ ಸರ್ಕಾರವು ಜೀವಂತವಾಗಿದೆ ಎಂಬುದನ್ನು ಸಿದ್ಧಮಾಡಿ ತೋರಿಸುವ ಜವಾಬ್ದಾರಿ ಅದಕ್ಕಿದೆ. ಇಲ್ಲದಿದ್ದರೆ ಸರ್ಕಾರಕ್ಕೆ ಅನೀಮಿಯ ತಟ್ಟಿದೆ ಎಂದು ಜನರು ಕಿಚಾಯಿಸುವ ಸ್ಥಿತಿ ಬಂದುಬಿಡುತ್ತದೆ.
ಅಪೌಷ್ಟಿಕತೆ ಮತ್ತು ಬಿಸಿಯೂಟ
ಅಪೌಷ್ಟಿಕತೆಯನ್ನು ಪರಿಹರಿಸುವುದು ತುಂಬಾ ಕಷ್ಟದ ಕೆಲಸವೇನಲ್ಲ. ಪ್ರತಿ ವಾರ ಮಕ್ಕಳಿಗೆ ಮೂರರಿಂದ ನಾಲ್ಕು ಕೋಳಿ ಮೊಟ್ಟೆ ಮತ್ತು ಪ್ರತಿ ದಿನ 200 ಎಮ್.ಎಲ್. ಹಾಲು ನೀಡಿದರೆ ಸಾಕು ಗಂಭಿರ ಅಪೌಷ್ಟಿಕತೆಯನ್ನು ಕಡಿಮೆ ಮಾಡಬಹುದು. ರಾಷ್ಟ್ರೀಯ ಪೌಷ್ಟಿಕತೆ ಇನ್‌ಸ್ಟಿಟ್ಯೂಟ್ (ಎನ್.ಎನ್.ಐ)ಪ್ರಕಾರ ಒಂದು ಮೊಟ್ಟೆಯಲ್ಲಿ 100 ಕ್ಯಾಲರಿ ಎನರ್ಜಿ ಮತ್ತು 8 ಗ್ರಾಂನಷ್ಟು ಪ್ರೊಟೀನ್ ದೊರೆಯುತ್ತದೆ. ಹಾಲಿರಲಿ ಹಾಲಿನ ಪುಡಿಯನ್ನೂ ಇಂದು ಸರ್ಕಾರ ಮಕ್ಕಳಿಗೆ ನೀಡುತ್ತಿಲ್ಲ. ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಬಿಸಿಯೂಟ, ಇದಕ್ಕೆ ಪ್ರತಿಯಾಗಿ ಆಹಾರ ಪದಾರ್ಥ ನೀಡುವ ಬಗ್ಗೆ ಚಿಂತಿಸುವುದಕ್ಕೆ ಪ್ರತಿಯಾಗಿ ನಮ್ಮ ಸಂವಿಧಾನವನ್ನು ಡಾ. ಬಿ. ಆರ್. ಅಂಬೆಡ್ಕರ್ ರಚಿಸಲಿಲ್ಲ ಎಂಬ ಹೊತ್ತಿಗೆಯನ್ನು ಹಂಚುವುದು ಆದ್ಯತೆಯಾಗಿರುವಂತೆ ಕಾಣುತ್ತದೆ. ಎನ್.ಎಫ್.ಎಚ್.ಎಸ್ 4 ಪ್ರಕಾರ ಕರ್ನಾಟಕದಲ್ಲಿ ಶೇ. 89 ರಷ್ಟು ಕುಟುಂಬಗಳು ಮೊಟ್ಟೆ ನೀಡುವುದಕ್ಕೆ ಸಹಮತ ವ್ಯಕ್ತಪಡಿಸಿವೆ. ನಮ್ಮ ಸಮಾಜದಲ್ಲಿ ಶೇ. 70 ರಷ್ಟು ಮಾಂಸಾಹಾರಿ ಕುಟುಂಬಗಳಿವೆ. ಧರ್ಮಕಾರಣದಿಂದಾಗಿ ಮೊಟ್ಟೆಯನ್ನು ಬಿಸಿಯೂಟದ ಜೊತೆಯಲ್ಲಿ ನೀಡುವುದಕ್ಕೆ ಸರ್ಕಾರ ಸಿದ್ಧವಿಲ್ಲ. ಮಕ್ಕಳ ಜೀವ-ಆರೋಗ್ಯದ ಜೊತೆ ಸರ್ಕಾರವು ಧರ್ಮದಾಟ ಆಡುತ್ತಿರುವಂತೆ ಕಾಣುತ್ತದೆ.
ಇಂದು ಪ್ರಾಥಮಿಕ ಶಿಕ್ಷಣದಲ್ಲಿ ಕಲಿಯುತ್ತಿರುವ ಸರಿಸುಮಾರು 100 ಲಕ್ಷ ಶಾಲಾ ಮಕ್ಕಳಲ್ಲಿ ಅರ್ಧದಷ್ಟು ಮಕ್ಕಳಿಗೆ ಸರಿಯಾದ ಆನ್ ಲೈನ್ ಪಾಠ ದೊರೆಯುತ್ತಿಲ್ಲ ಮತ್ತು ಬಿಸಿಯೂಟ ಇಲ್ಲ. ಗ್ರಾಮೀಣ ಪ್ರದೇಶದಲ್ಲಿನ ಬಡಕುಟುಂಬಗಳ ಮಕ್ಕಳು ಬಾಲ ಕಾರ್ಮಿಕರಾಗುತ್ತಿರುವ ದುರಂತದ ಬಗ್ಗೆ ಅನೇಕ ಜಿಲ್ಲೆಗಳಿಂದ ವರದಿಗಳಾಗುತ್ತಿವೆ. ಇದಕ್ಕೆ ಕೋವಿಡ್ ಮಹಾಸೋಂಕನ್ನು ಕಾರಣ ಮಾಡುವುದರಲ್ಲಿ ಅರ್ಥವಿಲ್ಲ. ನಮ್ಮ ರಾಜ್ಯದಲ್ಲಿ ಮಕ್ಕಳ ಆರೋಗ್ಯ ಕುಸಿದಿದ್ದರೆ ಇದಕ್ಕೆ ಸರ್ಕಾರವೇ ಕಾರಣ ಎಂಬುದನ್ನು ಸಂಕೋಚವಿಲ್ಲದೆ ಹೇಳಬಹುದು. ಮಹಾಸೋಂಕಿನ ಸಂದರ್ಭದಲ್ಲಿ ಯಾವುದು ಅಧ್ಯತೆ, ಯಾವುದು ಅಲ್ಲ ಎಂಬುದರ ವಿವೇಚನೆಯೇ ಆಳುವವರಿಗೆ ಇಲ್ಲದಿದ್ದರೆ ಆ ಸಮಾಜವನ್ನು ಯಾರು ಕಾಯಬೇಕು!
ಜಾಗತಿಕ ಹಸಿವು ಸೂಚ್ಯಂಕ 2020
ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನವು 2020ರಲ್ಲಿ ಗಂಭೀರ ಸ್ಥಿತಿಯಲ್ಲಿದೆ. ಒಟ್ಟು 107 ದೇಶಗಳ ಪೈಕಿ ಸದರಿ ಸೂಚ್ಯಂಕದಲ್ಲಿ ಭಾರತದ ಸ್ಥಾನ 94 ಮತ್ತು ಮೌಲ್ಯ 27.2. ನಮ್ಮ ದೇಶವು ಹಸಿವಿನ ದೃಷ್ಟಿಯಿಂದ ಎಂತಹ ಹೀನಾಯ ಸ್ಥಿತಿಯಲ್ಲಿದೆ ಎಂದರೆ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನವು ನೇಪಾಲ(73), ಶ್ರೀಲಂಕಾ(64), ಬಾಂಗ್ಲಾದೇಶ(75) ಮತ್ತು ಮ್ಯಾನ್ಮಾರ್(78) ದೇಶಗಳಿಗಿಂತ ಕೆಳಮಟ್ಟದಲ್ಲಿದೆ. ಈ ಸೂಚ್ಯಂಕವು ಭಾರತ/ಕನಾಟಕಗಳಲ್ಲಿನ ಮಕ್ಕಳಲ್ಲಿನ ಹಸಿವಿನ ಪ್ರಮಾಣದ ಮಾಪನಕ್ಕೆ ಸೂಕ್ತವಾದುದಾಗಿದೆ. ಏಕೆಂದರೆ ಸದರಿ ಸೂಚ್ಯಂಕವನ್ನು ಮಾಪನ ಮಾಡುವುದಕ್ಕೆ ಬಳಸುವ ಸೂಚಿಗಳಾದ ಮಕ್ಕಳಲ್ಲಿನ ಮರಣ ಪ್ರಮಾಣ, ಸ್ಟಟಿಂಗ್, ವೇಸ್ಟಿಂಗ್ ಮತ್ತು ಅಪೌಷ್ಟಿಕತೆಗಳಿಗೆ ಸಂಬಂಧಿಸಿವೆ.
ಅಮರ್ತ್ಯ ಸೆನ್ ತನ್ನ ಪ್ರಸಿದ್ಧ ‘ಪಾವರ್ಟಿ ಆಂಡ್ ಫ್ಯಾಮೆನ್’(1981)ನಲ್ಲಿ ಸಿದ್ಧಪಡಿಸಿರುವಂತೆ ಹಸಿವು ಎನ್ನುವುದು ಕೆಲವರಿಗೆ ಆಹಾರ ದೊರೆಯದಿರುವುದರಿಂದ ಉಂಟಾಗಿರುವ ಸಮಸ್ಯೆಯೇ ವಿನಾಃ ಆಹಾರ ಇಲ್ಲದಿರುವುದರಿಂದ ಅಲ್ಲ. ಉದಾಹರಣೆಗೆ: ಸೆಪ್ಟೆಂಬರ್ 2020ರಲ್ಲಿ ನಮ್ಮ ದೇಶದಲ್ಲಿದ್ದ ಆಹಾರ ದಾಸ್ತಾನು 700 ಲಕ್ಷ ಟನ್ನುಗಳು. ಹಸಿವನ್ನು ನೀಗಿಸಲು ಸಾಕಾಗುವಷ್ಟು ಆಹಾರ ಪದಾರ್ಥ ನಮ್ಮಲ್ಲಿದೆ. ಆದರೂ ಜನರು, ಅದರಲ್ಲೂ ಬಡಕುಟುಂಬಗಳ ಮಕ್ಕಳು ಅಪೌಷ್ಟಿಕತೆಯನ್ನು ಎದುರಿಸುತ್ತಿದ್ದಾರೆ, ಇದು ಮನುಷ್ಯ ನಿರ್ಮಿತ ದುರಂತ.
ಕರ್ನಾಟಕ ಸರ್ಕಾರವು ವಿವಿಧ ಜಾತಿಗಳಿಗೆ ಅಭಿವೃದ್ಧಿ ಮಂಡಳಿಯನ್ನು ರಚಿಸುವುದರಲ್ಲಿ ತೋರಿಸುತ್ತಿರುವಷ್ಟು ಉತ್ಸಾಹ ಮತ್ತು ಕಾಳಜಿಯನ್ನು ಶಾಲಾ ಮಕ್ಕಳಿಗೆ ಜೂನ್ ನಿಂದ ನಿಂತಿರುವ ಬಿಸಿಯೂಟಕ್ಕೆ ಪ್ರತಿಯಾಗಿ ನೀಡುತ್ತಿದ್ದ ಆಹಾರ ಪದಾರ್ಥವನ್ನು ಮತ್ತೆ ಆರಂಭಿಸುವುದರ ಬಗ್ಗೆ ತೋರಿಸುತ್ತಿಲ್ಲ. ಒಮ್ಮೆಯೂ, ಸೌಜನ್ಯಕ್ಕಾದರೂ ಶಿಕ್ಷಣ ಮಂತ್ರಿ ಸುರೇಶ್ ಕುಮಾರ್ ಇದರ ಬಗ್ಗೆ ಚರ್ಚೆ ಮಾಡಿಲ್ಲ. ಯಾವ ಶಾಸಕನೂ ಇದರ ಬಗ್ಗೆ ಚಕಾರವೆತ್ತಿಲ್ಲ. ಇದರ ಬಗ್ಗೆ ಹೆಚ್ಚಿನ ಆಸಕ್ತಿ ತೊರಬೇಕಾಗಿದ್ದ ಜಿಲ್ಲಾ/ತಾಲ್ಲೂಕು/ಗ್ರಾಮ ಪಂಚಾಯತಿಗಳು ಮಾತನಾಡುತ್ತಿಲ್ಲ. ಏಕೆಂದರೆ ಅವು ರಾಜ್ಯ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿವೆಯೇ ವಿನಾಃ ಸಂವಿಧಾನದ ತಿದ್ದುಪಡಿ 73 ಮತ್ತು 74ರಲ್ಲಿ ಪ್ರಾಪ್ತವಾದ ಸರ್ಕಾರ ಸ್ಥಾನಮಾನಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮಕ್ಕಳ ಹಕ್ಕುಗಳ ಕಾರ್ಯಕರ್ತರು, ಸಾಮಾಜಿಕ ಹೋರಾಟಗಾರರು ಮತ್ತು ಎನ್‌ಜಿಒ ಮುಖಂಡರು (ಡಾ. ನಿರಂಜನಾರಾಧ್ಯ, ಕಾತ್ಯಾಯಿನಿ ಚಾಮರಾಜ್ ಮುಂತಾದವರು) ಬಿಸಿಯೂಟವನ್ನು ಆರಂಭಿಸುವ ಬಗ್ಗೆ ಅಥವಾ ಆಹಾರ ಪದಾರ್ಥವನ್ನು ಮಕ್ಕಳಿಗೆ ನೀಡುವ ಬಗ್ಗೆ ಮನವಿ ನೀಡಿದ್ದರೂ ಇದಕ್ಕೆ ಶಿಕ್ಷಣ ಇಲಾಖೆ ಮತ್ತು ಶಿಕ್ಷಣ ಮಂತ್ರಿ ಸ್ಪಂದಿಸಿಲ್ಲ. ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಪ್ರಾಥಮಿಕ ಶಾಲೆಗಳಲ್ಲಿ(1 ರಿಂದ 10ನೆಯ ತರಗತಿ) ಕಲಿಯುತ್ತಿರುವ ಮಕ್ಕಳ ಸಂಖ್ಯೆ 25 ಲಕ್ಷ. ಇವರಲ್ಲಿ ಸರಿಸುಮಾರು ಅರ್ಧದಷ್ಟು ಮಕ್ಕಳು ಅಪೌಷ್ಟಿಕತೆ ಎದುರಿಸುತ್ತಿರಬಹುದು. ಬಿಸಿಯೂಟ ನಿಂತ ಮೇಲೆ ಅವರ ಸಂಖ್ಯೆಯು ಇನ್ನೂ ಅಧಿಕವಾಗಿರಬಹುದು. ಈ ವಿಭಾಗದ ಪ್ರಾದೇಶಿಕ ಅಸಮಾನತೆ ವಿರುದ್ಧ ಹೋರಾಟ ಮಾಡುವ ವೀರರು-ಧೀರರೂ ಇದರ ಬಗ್ಗೆ ಕಾಳಜಿ ವಹಿಸುತ್ತಿಲ್ಲ.
ತಕ್ಷಣ ಸರ್ಕಾರವು ಶಾಲೆಯನ್ನು ಆರಂಭಿಸುವುದನ್ನು ಪಕ್ಕಕ್ಕಿಟ್ಟು ಅರ್ಹ ಬಡಕುಟುಂಬಗಳ ಮಕ್ಕಳಿಗೆ ಒಂದೋ ಬಿಸಿಯೂಟ ನೀಡುವುದನ್ನು ಆರಂಭಿಸಬೇಕು ಇಲ್ಲವೇ ಅವರಿಗೆ ಆಹಾರ ಪದಾರ್ಥ ನೀಡುವ ಕಾರ್ಯಕ್ರಮವನ್ನು ಸಮರೋಪಾದಿಯಲ್ಲಿ ಹಮ್ಮಿಕೊಳ್ಳಬೇಕು. ಕೋವಿಡ್-19 ಮತ್ತು ಲಾಕ್‌ಡೌನ್ ಹಿನ್ನೆಲೆಯಲ್ಲಿ ದುಡಿಯುವ ವರ್ಗದ ಜನರ ಆದಾಯ ನಿಂತುಹೋಗಿದೆ, ಕೆಲಸವನ್ನು ಅವರೆಲ್ಲ ಕಳೆದುಕೊಂಡಿದ್ದಾರೆ. ಮಕ್ಕಳಿಗೆ ಹೊಟ್ಟೆ ತುಂಬಾ ಅನ್ನ ನೀಡುವ ಸ್ಥಿತಿಯಲ್ಲಿ ಅವರಿಲ್ಲ. ಸರ್ವೋಚ್ಛ ನ್ಯಾಯಾಲಯವು ಪರಿಚ್ಛೇದ 21 ಕ್ಕೆ ನೀಡಿರುವ ವ್ಯಾಖ್ಯಾನದ ಪ್ರಕಾರ ಜೀವಿಸುವ ಹಕ್ಕು ಆಹಾರದ ಹಕ್ಕನ್ನು ಒಳಗೊಂಡಿದೆ. ಬಿಸಿಯೂಟ/ಆಹಾರ ವಿತರಣೆ ಕಾರ್ಯಕ್ರಮವನ್ನು ಸರ್ಕಾರವು ತಕ್ಷಣ ಆರಂಭಿಸದಿದ್ದರೆ ಇದು ಭಾರತೀಯ ಸಂವಿಧಾನ ನೀಡಿರುವ ಹಕ್ಕುಗಳನ್ನು ಹಾಗೂ ರಾಷ್ಟ್ರೀಯ ಆಹಾರ ಭದ್ರತೆ ಅಧಿಸೂಚನೆಯನ್ನು(2013) ಉಲ್ಲಂಘಿಸಿದಂತಾಗುತ್ತದೆ. ಪ್ರತಿಯೊಂದಕ್ಕೂ ನ್ಯಾಯಾಲಯವು ಸರ್ಕಾರಗಳಿಗೆ ಎಚ್ಚರಿಕೆ ನೀಡುವ ಅಗತ್ಯವುಂಟಾಗದಂತೆ ನೋಡಿಕೊಳ್ಳಬೇಕಾದುದು ಜೀವಂತ ಸರ್ಕಾರದ ಕರ್ತವ್ಯ. ಇಲ್ಲದಿದ್ದರೆ ಅದು ಸತ್ತ ಸರ್ಕಾರವಾಗುತ್ತದೆ. ಮಕ್ಕಳಿಗೆ ಬಿಸಿಯೂಟ/ಆಹಾರ ಪದಾರ್ಥ ವಿತರಣೆ ಕಾರ್ಯಕ್ರಮವನ್ನು ತುರ್ತಾಗಿ ಆರಂಭಿಸುವುದರ ಮೂಲಕ ಸರ್ಕಾರವು ಜೀವಂತವಾಗಿದೆ ಎಂಬುದನ್ನು ಸಿದ್ಧಮಾಡಿ ತೋರಿಸುವ ಜವಾಬ್ದಾರಿ ಅದಕ್ಕಿದೆ. ಇಲ್ಲದಿದ್ದರೆ ಸರ್ಕಾರಕ್ಕೆ ಅನೀಮಿಯ ತಟ್ಟಿದೆ ಎಂದು ಜನರು ಕಿಚಾಯಿಸುವ ಸ್ಥಿತಿ ಬಂದು ಬಿಡುತ್ತದೆ.