ಬೆಂಗಳೂರು: ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ವಲಸೆ ಕಾರ್ಮಿಕರಿಗೆ ಹಂಚಲು ಕರೆಯಲಾದ ಟೆಂಡರ್ ಪ್ರಕ್ರಿಯೆ, ಆಹಾರ ಕಿಟ್‌ಗಳ ಕಳಪೆ ಗುಣಮಟ್ಟ ಮತ್ತು ಖರೀದಿಯಲ್ಲಿ ಅವ್ಯವಹಾರ, ರಾಜಕೀಯ ಮಧ್ಯಪ್ರವೇಶ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಸಂಘಟನೆಯು ನಿರ್ಧರಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಿಡಬ್ಲ್ಯೂಎಫ್‌ಐ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ ಅವರು ʻʻರಾಜ್ಯದ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಸಂಗ್ರಹವಾಗಿರುವ ಸೆಸ್ ಹಣ ಸಂಪೂರ್ಣವಾಗಿ ಕಾರ್ಮಿಕರ ಕಲ್ಯಾಣಕ್ಕೆ ವಿನಿಯೋಗಿಸಬೇಕು. ವಲಸೆ ಹಾಗೂ ಅಸಂಘಟಿತ ಕಾರ್ಮಿಕರಿಗೆ ಆಹಾರ ಕಿಟ್ ಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಹಣ ಮತ್ತು ವಿಪತ್ತು ನಿರ್ವಹಣಾ ನಿಧಿಯಿಂದ ಹಂಚಿಕೆ ಮಾಡಬೇಕೆಂದು ನಿರ್ದೇಶನ ನೀಡಿದೆ. ಆದರೆ ಕಾರ್ಮಿಕ ಸಚಿವರು ಕಲ್ಯಾಣ ಮಂಡಳಿಯ ಹಣದಲ್ಲಿ ಆಹಾರ ಕಿಟ್ ಗಳನ್ನು ಖರೀದಿಸಿರುವುದು ಮತ್ತು ಬೆಂಗಳೂರಿನಲ್ಲಿ ನೋಂದಾಯತ ಕಾರ್ಮಿಕರಿಗೆ ಕಾರ್ಮಿಕ ಸಂಘಗಳ ಮೂಲಕ ನೆಪ ಮಾತ್ರಕ್ಕೆ ಹಂಚಿಕೆ ಮಾಡಿ ರಾಜ್ಯಾದ್ಯಂತ ಮಂಡಳಿಗೆ ಸಂಬಂಧವೇ ಇರದ ಶಾಸಕರಿಗೆ ಹಂಚಿಕೆ ಮಾಡಿರುವುದು 1996 ಕಟ್ಟಡ ಕಾರ್ಮಿಕ ಕಾಯ್ದೆಯ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನು ಓದಿ: ಕಾರ್ಮಿಕರಿಗೆ ಆಹಾರ ಕಿಟ್ ಹಂಚಿಕೆಯಲ್ಲಿ ಭ್ರಷ್ಟಾಚಾರ: ತನಿಖೆಗೆ ಸಿಐಟಿಯು ಆಗ್ರಹ
ಅಲ್ಲದೆ ಲಕ್ಷಾಂತರ ರೇಷನ್ ಕಿಟ್‌ಗಳನ್ನು ಸಗಟು ಮಾರುಕಟ್ಟೆ ದರಗಳಿಗಿಂತ ದುಪ್ಪಟ್ಟು ಬೆಲೆಗೆ ಆರು ಖಾಸಗಿ ಕಂಪನಿಗಳಿಗೆ ಟೆಂಡರ್ ನೀಡಿರುವುದರು ಭ್ರಷ್ಟಚಾರ ಮತ್ತು ಸ್ವಜನಪಕ್ಷಪಾತ ಎದ್ದು ಕಾಣುತ್ತಿದೆ. ಇದರಿಂದ ಕಲ್ಯಾಣ ಮಂಡಳಿಗೆ ಹತ್ತಾರು ಕೋಟಿ ನಷ್ಟ ಆಗಿರುವ ಸಾಧ್ಯತೆ ಇದೆ ಎಂದು ವಿವರಿಸಿದ್ದಾರೆ.
ರೇಷನ್ ಕಿಟ್ ನಲ್ಲಿ ಅವ್ಯವಹಾರ ನಡೆಸಿದ್ದಾರೆ ಎನ್ನುವುದಕ್ಕೆ ಸಾಧಾರಣವಾಗಿ ಒಂದು ಲೆಕ್ಕಕ್ಕೆ ಪರಿಗಣಿಸುವುದಾದಲ್ಲಿ ಒಂದು ರೇಷನ್ ಕಿಟ್ ಅಂದಾಜು ಮೌಲ್ಯ ಎಪಿಎಂಸಿ ಮಾರುಕಟ್ಟೆ ಸಗಟು ವ್ಯಾಪಾರಕ್ಕೂ, ಕಾರ್ಮಿಕ ಕಲ್ಯಾಣ ಮಂಡಳಿ ಖರೀದಿಸಿರುವ ಆಹಾರ ಕಿಟ್‌ಗಳ ಬೆಲೆಯಲ್ಲಿ ಸಾಕಷ್ಟು ವ್ಯತ್ಯಾಸವನ್ನು ಗುರುತಿಸಬಹುದು. ಮಂಡಳಿಯು ನಿಗದಿಪಡಿಸಿ ಬೆಲೆ ರೂ.938, ಆದರೆ ಮಾರುಕಟ್ಟೆಯಲ್ಲಿ ಅಷ್ಟೆ ಪ್ರಮಾಣದ ನಿಜವಾದ ಬೆಲೆಗಳು ರೂ.667 ಆಗುತ್ತದೆ. ಹಾಗಾಗಿ ಸುಮಾರು 5 ಲಕ್ಷ ಆಹಾರ ಕಿಟ್‌ಗಳಿಂದ ಸುಮಾರು 13 ರಿಂದ 15 ಕೋಟಿ ಹೆಚ್ಚುವರಿ ಮೊತ್ತ ಮಂಡಳಿಯಿಂದ ನಷ್ಟವಾಗಿದೆ ಎಂದು ತಿಳಿದುಬಂದಿದೆ.
ಕಾರ್ಮಿಕ ಸಂಘಟನೆಗಳು ಮಾಡಿರುವ ಈ ಆರೋಪಗಳಿಗೆ ಕಾರ್ಮಿಕ ಸಚಿವರು ನೀಡಿರುವ ಉತ್ತರವು ಸಮರ್ಪಕವಾಗಿಲ್ಲ. ಕೇವಲ ಆಹಾರ ಕಿಟ್‌ಗಳ ಗುಣ ಮಟ್ಟಕ್ಕೆ ಮಾತ್ರಕ್ಕೆ ತನಿಖೆಯನ್ನು ಸೀಮಿತಗೊಳಿಸಿ ಉಳಿದಂತೆ ಖರೀದಿ ವ್ಯವಹಾರ, ಶಾಸಕರಿಗೆ ಕಿಟ್ ವಿತರಣೆ, ಷರತ್ತಿನಂತೆ 10 ಕೆಜಿ ಅಕ್ಕಿ ಬದಲು ಐದು ಕೆಜಿ ನೀಡಿರುವುದು ಸೇರಿ ಇತರೆ ಆರೋಪಗಳಿಗೆ ಉತ್ತರಿಸಿಲ್ಲ. ಅಲ್ಲದೆ ಲಕ್ಷಾಂತರ ಕಾರ್ಮಿಕರಿಗೆ ಇನ್ನೂ ಕೋವಿಡ್ ಪರಿಹಾರದ ಹಣ ಜಮೆಯಾಗಿಲ್ಲ ಹೀಗಿದ್ದೂ ಕಲ್ಯಾಣ ಮಂಡಳಿಯ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಜಾಹೀರಾತುಗಳ ಮೂಲಕ ಕಾರ್ಮಿಕರನ್ನು ದಿಕ್ಕುತಪ್ಪಿಸುವ ಯತ್ನ ನಡೆದಿದೆ ಎಂದು ಕೆ. ಮಹಾಂತೇಶ ಅವರು ಆರೋಪಿಸಿದ್ದಾರೆ.
ಇದನ್ನು ಓದಿ: ಮೂರು ಲಕ್ಷಕ್ಕೂ ಹೆಚ್ಚಿನ ಕಾರ್ಮಿಕರಿಗೆ ಆರ್ಥಿಕ ನೆರವು ವರ್ಗಾವಣೆಯಾಗಿಲ್ಲ
ಈ ಹಿನ್ನಲೆಯಲ್ಲಿ ಇಡೀ ಆಹಾರ ಕಿಟ್ ಗಳ ಖರೀದಿ ವ್ಯವಹಾರವನ್ನೇ ತನಿಖೆಗೊಳಪಡಿಸುವ ಅಗತ್ಯವಿದೆ. ಕಲ್ಯಾಣ ಮಂಡಳಿಯಲ್ಲಿರುವ ಸೆಸ್ ಹಣದ ಮೇಲೆ ಶಾಸಕರಿಗೆ, ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಅಲ್ಲದೆ ಮಂಡಳಿಯ ಅಧ್ಯಕ್ಷರೂ ಆಗಿರುವ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಕಲ್ಯಾಣ ಮಂಡಳಿಯ ಸಭೆಯನ್ನು ಕರೆಯದೇ ಏಕಪಕ್ಷೀಯವಾಗಿ ಎಲ್ಲ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದಾರೆ. ಕಾನೂನಿನ ನಿಯಮಾವಳಿಗಳಲ್ಲಿ ಇದಕ್ಕೆ ಅವಕಾಶವಿಲ್ಲ. ಹೀಗಿದ್ದೂ ಕಳೆದ ಎರಡು ವರ್ಷಗಳಿಂದ ಸಚಿವರು ಎಲ್ಲ ತೀರ್ಮಾನಗಳನ್ನು ಏಕಪಕ್ಷೀಯವಾಗಿ ಕೈಗೊಂಡು ನಂತರ ಕೋಟ್ಯಾಂತರ ರೂಪಾಯಿಗಳ ಖರ್ಚಿಗೆ ಘಟನೋತ್ತರ ಅನುಮೋದನೆ ಪಡೆಯುವ ಪರಿಪಾಠ ಬೆಳೆಸಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಬೆಂಬಲಿತ ಸಿಡಬ್ಲ್ಯೂಎಫ್‌ಐ ಸಂಘಟನೆಯು ಆರೋಪ ಮಾಡಿದೆ.
ಇವೆಲ್ಲವುಗಳ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ನಡೆದಿರುವ ಎಲ್ಲ ತೀರ್ಮಾನಗಳ ಕುರಿತಾಗಿ ಲಭ್ಯವಿರುವ ದಾಖಲೆಗಳನ್ನು ಸಂಗ್ರಹಿಸಿ ಲೋಕಾಯುಕ್ತಕ್ಕೆ ಮತ್ತು ಕಾನೂನು ಪ್ರಾಧಿಕಾರಕ್ಕೆ ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಕೋರಲು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ (ಸಿಡಬ್ಲ್ಯೂಎಫ್‌ಐ) ಮುಂದಾಗಿದೆ.