ವಸಂತರಾಜ ಎನ್.ಕೆ
ಜಾಗತಿಕ ಆಮದು-ರಫ್ತು ಪಾವತಿಗಳು, ಸಾಲ-ಹೂಡಿಕೆ, ಇತರ ಹಣಕಾಸು ವ್ಯವಹಾರ, ದೇಶಗಳ ಕೇಂದ್ರೀಯ ಬ್ಯಾಂಕುಗಳ ಮತ್ತು ಸೂಪರ್ ಶ್ರೀಮಂತರ ಭದ್ರ ನಿಧಿಯಾಗಿ – ಇವುಗಳಲ್ಲಿ ಡಾಲರ್ ಬದಲು ಇತರ ಕರೆನ್ಸಿಗಳು ಅಥವಾ ವಿಧಾನಗಳು ಜಾರಿಗೆ ಬರುತ್ತಾ, ಡಾಲರ್ ತನ್ನ ಪ್ರಾಧಾನ್ಯವನ್ನು ಕಳೆದುಕೊಳ್ಳುತ್ತಾ ಹೋಗುವುದಕ್ಕೆ ‘ಅ-ಡಾಲರೀಕರಣ’ (ಡಿ-ಡಾಲರೈಸೇಶನ್) ಎಂದು ಹೆಸರಿಸಲಾಗಿದೆ. 2007-8ರಲ್ಲಿ ಯು.ಎಸ್ ಬಿಗಿಮುಷ್ಟಿಯಲ್ಲಿರುವ ಅಂತರ‍್ರಾಷ್ಟ್ರೀಯ ಹಣಕಾಸು ವ್ಯವಸ್ಥೆಯ ತೀವ್ರ ಹುಳುಕುಗಳ ಅನಾವರಣ, ತನ್ನ ಮೂಗಿನ ನೇರಕ್ಕೆ ಇರದ ದೇಶಗಳ ಮೇಲೆ ಡಾಲರ್ ಮತ್ತು ಹಣಕಾಸು ವ್ಯವಸ್ಥೆಯ ಶಸ್ತ್ರದಂತೆ ಆತಂಕಕಾರಿ ದುರ್ಬಳಕೆ, ಉಕ್ರೇನ್ ಸಂಘರ್ಷದ ಪರಿಣಾಮವಾಗಿ ಬಂದ ತೈಲ ಬಿಕ್ಕಟ್ಟು, ಹಣಕಾಸು ತಂತ್ರಜ್ಞಾನ ಡಿಜಿಟಲ್ ಕರೆನ್ಸಿ ವಿಧಾನಗಳ ಬೆಳವಣಿಗೆ, – ಇವುಗಳಿಂದಾಗಿ ಅ-ಡಾಲರೀಕರಣ 2022ರಲ್ಲಿ ತನ್ನ ಬಿರುಸು ನಡೆ ಆರಂಭಿಸಿದೆ.
ಕಳೆದ ವರ್ಷದ (2022) ಪ್ರಮುಖ ಜಾಗತಿಕ ಬೆಳವಣಿಗೆ ಉಕ್ರೇನ್ ಸಂಘರ್ಷ ಎಂಬುದು ನಿರ್ವಿವಾದಿತ. ಉಕ್ರೇನ್ ಸಂಘರ್ಷ ಜಗತ್ತಿನ ಬಹುಸಂಖ‍್ಯಾತ ಜನರಿಗೆ ಮತ್ತು ಹೆಚ್ಚಿನ ದೇಶಗಳಿಗೆ ಸಂಕಷ್ಟಗಳನ್ನು ತಂದಿದೆ. ಆದರೆ ಯು.ಎಸ್ ನ್ನು ಅದು ರಾಜಕೀಯವಾಗಿ ಮಿಲಿಟರಿಯಾಗಿ ಇನ್ನಷ್ಟು ಬಲಿಷ್ಠಗೊಳಿಸಿತು ಎನ್ನಲಾಗುತ್ತದೆ. ಇದು ಬಹುಮಟ್ಟಿಗೆ ನಿಜ ಕೂಡಾ. ಆದರೆ ಇದರ ನೇರ ಫಲವೋ ಎಂಬಂತೆ ಜಾಗತಿಕ ಹಣಕಾಸು ವ್ಯವಹಾರ, ಹೂಡಿಕೆ, ದೇಶಗಳ ಪ್ರಧಾನ ಬ್ಯಾಂಕುಗಳ ಸೂಪರ್ ಶ್ರೀಮಂತರ ಭದ್ರ ನಿಧಿಯಾಗಿದ್ದ ಡಾಲರ್ ನ ಏಕಚಕ್ರಾಧಿಪತ್ಯಕ್ಕೆ ತೀವ್ರ ಸವಾಲು ಬಂದಿದೆ. ಡಾಲರ್ ನ ಆರ್ಥಿಕ ಏಕಚಕ್ರಾಧಿಪತ್ಯವೇ ಯು.ಎಸ್ ನ ರಾಜಕೀಯ ಮಿಲಿಟರಿ ಏಕಚಕ್ರಾಧಿಪತ್ಯದ ಆಧಾರಶಿಲೆ. ಹಾಗಾಗಿ ಅದಕ್ಕೂ ಕುತ್ತು ಬರಬಹುದು. ಡಾಲರ್ ನ ಪ್ರಾಧಾನ್ಯ ಕಳೆದುಕೊಳ್ಳುತ್ತಿರುವ ಈ ಪ್ರಕ್ರಿಯೆಯನ್ನು ಅ-ಡಾಲರೀಕರಣ ಎಂದು ಕರೆಯಲಾಗಿದೆ. ಅ-ಡಾಲರೀಕರಣ (ಡಿ-ಡಾಲರೈಸೇಶನ್) ಬಹಳ ಸಮಯದಿಂದ ನಡೆಯುತ್ತಿರುವ ಪ್ರಕ್ರಿಯೆಯಾದರೂ ಈ ವರ್ಷ (2022ರಲ್ಲಿ) ತನ್ನ ಬಿರುಸು ನಡೆ ಆರಂಭಿಸಿದೆ ಎನ್ನಲಾಗಿದೆ. . ಜಾಗತಿಕ ಆಮದು-ರಫ್ತು ಪಾವತಿಗಳು, ಸಾಲ-ಹೂಡಿಕೆ, ಇತರ ಹಣಕಾಸು ವ್ಯವಹಾರ, ದೇಶಗಳ ಕೇಂದ್ರೀಯ ಬ್ಯಾಂಕುಗಳ ಮತ್ತು ಸೂಪರ್ ಶ್ರೀಮಂತರ ಭದ್ರ ನಿಧಿಯಾಗಿ – ಇವುಗಳಲ್ಲಿ ಡಾಲರ್ ಬದಲು ಇತರ ಕರೆನ್ಸಿಗಳು ಅಥವಾ ವಿಧಾನಗಳು ಜಾರಿಗೆ ಬರುತ್ತಾ, ಡಾಲರ್ ತನ್ನ ಪ್ರಾಧಾನ್ಯವನ್ನು ಕಳೆದುಕೊಳ್ಳುತ್ತಾ ಹೋಗುವುದಕ್ಕೆ ಅ-ಡಾಲರೀಕರಣ ಎಂದು ಹೆಸರಿಸಲಾಗಿದೆ.
ಜಿ.ಸಿ.ಸಿ – ಚೀನಾ ಶೃಂಗಸಭೆ
ವರ್ಷದ ಕೊನೆಯಲ್ಲಿ (ಡಿಸೆಂಬರ್ 9ರಂದು) ಸೌದಿ ಅರೇಬಿಯದ ರಾಜಧಾನಿ ರಿಯಾದ್ ಗೆ ಚೀನಾ ಅಧ‍್ಯಕ್ಷ ಶಿ ಜಿಂಪಿಂಗ್ ಅವರ ಭೇಟಿ ಮತ್ತು 6 ಕೊಲ್ಲಿ ರಾಷ್ಟ್ರಗಳ ‘(ಸೌದಿ ಅರೇಬಿಯ, ಯು.ಎ.ಇ, ಬಹ್ರೈನ್, ಕುವೈಟ್, ಒಮ್ಮನ್, ಕತಾರ್) “ಕೊಲ್ಲಿ ಸಹಕಾರ ಮಂಡಳಿ” (ಜಿ.ಸಿ.ಸಿ)ಯೊಂದಿಗೆ ಮೊದಲ ಶೃಂಗಸಭೆ ನಡೆಯಿತು. ಜಿ.ಸಿ.ಸಿ ಜತೆ ಒಪ್ಪಂದ ಮತ್ತು ಸೌದಿ ಅರೇಬಿಯ ಜತೆ ಜಂಟಿ ಹೇಳಿಕೆಯಲ್ಲಿ ಅ-ಡಾಲರೀಕರಣ ಕುರಿತು ನೇರವಾಗಿ ಏನೂ ಹೇಳಲಿಲ್ಲ. ಆದರೆ ಈ ಪ್ರಕ್ರಿಯೆಯಲ್ಲಿ ಇವು ಮಹತ್ವದ ಪಾತ್ರ ವಹಿಸಲಿವೆ ಎನ್ನಲಾಗಿದೆ. ಇವುಗಳಲ್ಲಿ ನಿರ್ದಿಷ್ಟವಾಗಿ ಆದದ್ದು ಏನು? ಚೀನಾ ಜಿ.ಸಿ.ಸಿ ದೇಶಗಳಿಂದ ತೈಲವನ್ನು ದೀರ್ಘ ಕಾಲ ಆಮದು ಮಾಡುವ ಮತ್ತು ಪ್ರಾಕೃತಿಕ ಅನಿಲ ಆಮದನ್ನು ಹೆಚ್ಚಿಸುವ ಭರವಸೆ ನೀಡಿತು. ಈ ವ್ಯವಹಾರ ಚೀನಾದ ಕರೆನ್ಸಿಯಲ್ಲಿ ನಡೆಯಲಿದೆ.. ಚೀನಾ 2017ರ ನಂತರ ಜಗತ್ತಿನ ಅತಿ ದೊಡ್ಡ ತೈಲ ಆಮದು ಮಾಡುವ ದೇಶವಾಗಿದ್ದು ಅದರ ಅರ್ಧದಷ್ಟು ಆಮದು ಅರೇಬಿಯನ್ ಪ್ರದೇಶದಿಂದ ಬರುತ್ತದೆ, ಕಾಲುಭಾಗಕ್ಕೂ ಹೆಚ್ಚು ಸೌದಿ ಅರೇಬಿಯ ಒಂದರಿಂದಲೇ ಬರುತ್ತದೆ. ಈ ತೈಲ ವ್ಯವಹಾರದ ಮತ್ತು ಮುಂದೆ ಜಿ,ಸಿ.ಸಿ-ಚೀನಾ ನಡುವಣ ಹೆಚ್ಚಿನ ವ್ಯವಹಾರದ ಅ-ಡಾಲರೀಕರಣ ಮಹತ್ವದ ಬೆಳವಣಿಗೆ.
ಶಕ್ತಿ-ಇಂಧನಗಳಲ್ಲದೆ, ಹೂಡಿಕೆ ಮತ್ತು ಸಾಲ, ಹೊಸ ತಂತ್ರಜ್ಞಾನಗಳು ಮತ್ತು ನಾವೀನ್ಯತೆ, 5ಜಿ ಟೆಲಿಕಾಂ, ವಿಮಾನ-ವ್ಯೋಮ ಮುಂತಾದ ಕ್ಷೇತ್ರಗಳಲ್ಲಿ ಸಹಕಾರ ಮತ್ತು ವ್ಯೂಹಾತ್ಮಕ ಸಂಬಂಧ ಬೆಳೆಸುವ ಕುರಿತು 5 ವರ್ಷಗಳ ಕಾರ್ಯಯೋಜನೆಗೆ ಒಪ್ಪಲಾಯಿತು. ಜಂಟಿಯಾಗಿ ಬಿಗ್ ಡಾಟಾ ಮತ್ತು ಕ್ಲೌಡ್ ಕಂಪ್ಯೂಟಿಂಗ್ ಸೆಂಟರ್ ಗಳನ್ನು ನಡೆಸುವ ಮತ್ತು ಡಿಜಿಟಲ್ ಕರೆನ್ಸಿ ಅಭಿವೃದ್ಧಿಯಲ್ಲಿ ಸಹಕರಿಸುವ ಕುರಿತು ಸಹ ಒಪ್ಪಂದವಾಯಿತು. ಚೀನಾ ಸೌದಿ ಅರೇಬಿಯದಲ್ಲಿ 30 ಶತಕೋಟಿ ಡಾಲರ್ ಮೌಲ್ಯದ ವ್ಯವಹಾರಗಳಿಗೆ ಸಹಿ ಮಾಡಿದೆ. 2021ರಲ್ಲೇ ಚೀನಾ ಬಿ.ಆರ್.ಐ (ಬೆಲ್ಟ್ ಅಂಡ್ ರೋಡ್ ಇನಿಶಿಯೆಟಿವ್) ಭಾಗವಾಗಿ 43.47 ಶತಕೋಟಿ ಡಾಲರು ಹೂಡಿಕೆ ಮಾಡಿದೆ. ಚೀನಾದ ಪೆಟ್ರೋಲಿಯಂ ಕಂಫನಿಗಳಲ್ಲಿ ಸೌದಿ ಅರೇಬಿಯದ ಅರ್ಮಾಕೊ ತೈಲ ಕಂಪನಿ 10 ಶತಕೋಟಿ ಡಾಲರು ಹೂಡಿಕೆ ಮಾಡಿದೆ.ಈಗಾಗಲೇ ಸೆಪ್ಟೆಂಬರ್ ನಲ್ಲಿ ಜಿ.ಸಿ.ಸಿ ಮತ್ತು ಚೀನಾ ವಿದೇಶ ಮಂತ್ರಿಗಳು ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ಆರಂಭಿಸಿದ್ದು ಅದು ಪ್ರಗತಿಯಲ್ಲಿದೆ.
ತೈಲ ವಹಿವಾಟಿನ ಅ-ಡಾಲರೀಕರಣ
ಜಿ.ಸಿ.ಸಿ ಮತ್ತು ಸೌದಿ ಅರೇಬಿಯದ ಜತೆಗೆ ಚೀನಾದ ಈ ವ್ಯೂಹಾತ್ಮಕ ಒಪ್ಪಂದ ಸಹ ಉಕ್ರೇನ್ ಯುದ್ಧದ ಪರೋಕ್ಷ ಪರಿಣಾಮವೇ ಎನ್ನಬಹುದು. ಉಕ್ರೇನ್ ಯುದ್ಧದಲ್ಲಿ ರಶ್ಯಾದ ಪಾತ್ರಕ್ಕೆ ‘ಶಿಕ್ಷೆ’ಯಾಗಿ ಯು.ಎಸ್-ಯು,ಕೆ ಒತ್ತಡದಿಂದ ಯುರೋ ಕೂಟ ಸೇರಿದಂತೆ ರಶ‍್ಯಾದ ಮೇಲೆ ಆರ್ಥಿಕ ದಿಗ್ಬಂಧನ ಹೇರಲಾಯಿತು. ರಶ್ಯಾದ ತೈಲ-ಗ್ಯಾಸ್ ರಫ್ತು ಮೇಲೆ ಮತ್ತು ಇತರ ಹಲವು ಸರಕು-ಸೇವೆಗಳ ವ್ಯವಹಾರಗಳ ಮೇಲೆ ನಿರ್ಬಂಧವಲ್ಲದೆ, ಹಲವು ದೀರ್ಘಕಾಲೀನ ಹಣಕಾಸು ಸಂಬಂಧಿತ ಗಂಭೀರ ಕ್ರಮಗಳನ್ನು ಕೈಗೊಳ್ಳಲಾಯಿತು. ರಶ್ಯದ ಕೇಂದ್ರೀಯ ಬ್ಯಾಂಕ್ ಜತೆ ಎಲ್ಲ ವ್ಯವಹಾರಗಳನ್ನು ಪಾಶ್ಚಿಮಾತ್ಯ ಬ್ಯಾಂಕುಗಳು ನಿಲ್ಲಿಸಿದವು. ಆ ಬ್ಯಾಂಕುಗಳಲ್ಲಿ ವಿದೇಶಿ ವ್ಯಾಪಾರ ನಡೆಸಲು ರಶ್ಯದ ಕೇಂದ್ರೀಯ ಬ್ಯಾಂಕು ಡಾಲರ್/ಯುರೋಗಳಲ್ಲಿ ಇಟ್ಟಿದ್ದ ಮೀಸಲು ನಿಧಿಯನ್ನು ಸ್ಥಗಿತಗೊಳಿಸಲಾಯಿತು. ಅಂತರ್ರಾಷ್ಟ್ರೀಯ ಹಣಕಾಸು ವಿನಿಮಯದ ಅಂತರ-ಬ್ಯಾಂಕ್ ವ್ಯವಸ್ಥೆ ‘ಸ್ವಿಫ್ಟ್’ ನಿಂದ ರಶ್ಯವನ್ನು ಕಡಿದು ಹಾಕಲಾಯಿತು. ಅಂತರ್ರಾಷ್ಟ್ರೀಯ ಕ್ರೆಡಿಟ್/ಡೆಬಿಟ್ ಕಾರ್ಡ್ ವ್ಯಹಾರ ನಡೆಸುವ ಮಾಸ್ಟರ್/ವೀಸಾ ಕಾರ್ಡ್ ಕಂಪನಿಗಳು ರಶ್ಯಾದ ವಹಿವಾಟು ನಿಲ್ಲಿಸಿದವು. ಇದರ ಮೊದಲೇ ಚೀನಾದ ಜತೆ ಟ್ರಂಪ್ ಕಾಲದಲ್ಲೇ ಆರಂಭವಾಗಿದ್ದ (2018ರಿಂದ) ಆರ್ಥಿಕ ಯುದ್ಧದ ಭಾಗವಾಗಿ ಹೊರಿಸಲಾಗಿದ್ದ ಹಣಕಾಸು ನಿರ್ಬಂಧಗಳೂ ಇದ್ದವು. ಅದೇ ರೀತಿಯಲ್ಲಿ 2014ರ ಕ್ರಿಮಿಯ ಯುದ್ಧದ ಸಮಯದಲ್ಲೇ ರಶ‍್ಯಾದ ಮೇಲೆ ಹಲವು ನಿರ್ಬಂಧಗಳನ್ನು ಹಾಕಿತ್ತು.
ಈ ಕಾರಣಗಳಿಂದಾಗಿ ರಶ್ಯಾ, ಚೀನಾಗಳು ಅ-ಡಾಲರೀಕರಣದ ಪ್ರಕ್ರಿಯೆಯನ್ನು ಬಿರುಸಿನಿಂದ ಆರಂಭಿಸಿದವು. ಮೊದಲನೆಯದಾಗಿ ಅವು ತಮ್ಮ ನಡುವಿನ ವಹಿವಾಟುಗಳಲ್ಲಿ ಅ-ಡಾಲರೀಕರಣಕ್ಕೆ ಮುಂದಾದವು.. ಚೀನಾ-ರಶ್ಯಾ ನಡುವಣ ವಹಿವಾಟು 2015ರಲ್ಲಿ ಶೇ.90 ಡಾಲರಿನಲ್ಲಿ ನಡೆಯುತ್ತಿತ್ತು. 2020ರ ಹೊತ್ತಿಗೆ ಅದು ಶೇ.50ಕ್ಕಿಂತ ಕೆಳಗೆ ಬಂತು. ತೈಲ ರಫ್ತು-ಆಮದು ವ್ಯವಹಾರದ ಅ-ಡಾಲರೀಕರಣದ ಮೇಲೆ ತಕ್ಷಣದ ಒತ್ತು ಕೊಡಲಾಯಿತು. ರಶ್ಯ ತೈಲ ರಫ್ತಿಗೆ ಪ್ರತಿ ದೇಶದೊಂದಿಗೆ ಅದರ ಕರೆನ್ಸಿಯಲ್ಲಿ ವಹಿವಾಟು ಆರಂಭಿಸಿತು. ಇದಕ್ಕೆ ಒಪ್ಪುವ ದೇಶಗಳಿಗೆ ಬೆಲೆಯಲ್ಲಿ ರಿಯಾಯಿತಿ ಕೊಟ್ಟಿತು. ಭಾರತ ಸಹ ಕೂಡಲೇ ಈ ವ್ಯವಸ್ಥೆಗೆ ಒಡ್ಡಿಕೊಂಡಿತು. ಹಾಗಾಗಿ ರಶ್ಯಾದಿಂದ ಭಾರತದ ತೈಲ ಆಮದಿನ ಪ್ರಮಾಣ ಮಾರ್ಚ್ 2022ರಲ್ಲಿ ಕೇವಲ ಶೇ. 0.2 ಇದ್ದಿದ್ದು ಡಿಸೆಂಬರ್ ಹೊತ್ತಿಗೆ ಶೇ,20ಕ್ಕೂ ಮೇಲೆ ಹೋಗಿದೆ. ‘ವ್ಯೂಹಾತ್ಮಕ ಪಾಲುದಾರ’ ಯು.ಎಸ್ ನ ಒತ್ತಡಕ್ಕೆ ಸೊಪ್ಪು ಹಾಕದೆ ಈ ವ್ಯವಸ್ಥೆಯನ್ನು ರಶ್ಯದ ಜತೆ ಇತರ (ಉಧಾ: ರಕ್ಷಣಾ ಸಾಮಗ್ರಿಗಳು) ವಹಿವಾಟಿಗೂ ವಿಸ್ತರಿಸಿತು. ಜುಲೈ ನಲ್ಲಿ ಭಾರತದ ರಿಸರ್ವ್ ಬ್ಯಾಂಕ್ ದ್ವಿ-ಪಕ್ಷೀಯ ವಹಿವಾಟನ್ನು ರೂಪಾಯಿಯಲ್ಲೇ ನಡೆಸಲು ಸಾಮಾನ್ಯ ವ್ಯವಸ್ಥೆಯನ್ನು ಸಂಘಟಿಸಿತು. ಇದನ್ನು ಯು.ಎ.ಇ ಜತೆ ಜಾರಿ ಮಾಡಲಾಗಿದೆ.
ವಿಸ್ತರಿತ ಬ್ರಿಕ್ಸ್ ಸವಾಲು
ಪ್ರಮುಖವಾಗಿ ಎರಡು ಕಾರಣಗಳಿಂದ ಈಗಾಗಲೇ ಸಾಮಾನ್ಯ ಜಾಗತಿಕ ಕರೆನ್ಸಿ ಯಾಗಿದ್ದ ಡಾಲರ್ ಗೆ ಮತ್ತು ಡಾಲರ್ ಮೇಲೆ ಆಧಾರಿತ ಯು.ಎಸ್-ಯುರೋಕೂಟದ ಬಿಗಿಮುಷ್ಠಿಯಲ್ಲಿದ್ದ ಜಾಗತಿಕ ಹಣಕಾಸು ವ್ಯವಸ್ಥೆಗೆ ಪರ್ಯಾಯದ ಹುಡುಕಾಟ ಆರಂಭವಾಗಿತ್ತು. 2007-8 ಜಾಗತಿಕ ಮಹಾ ಬಿಕ್ಕಟ್ಟು ಈ ವ್ಯವಸ್ಥೆಯ ಬಿಕ್ಕಟ್ಟುಗಳನ್ನು ಹೊರಗೆಡವಿತ್ತು. ತಮ್ಮ ಆರ್ಥಿಕಗಳನ್ನು ಈ ವ್ಯವಸ್ಥೆಯ ನೇರ ಪ್ರಭಾವಕ್ಕೆ ಸಿಲುಕದಂತೆ ಮಾಡಬೇಕೆಂದು ಹೆಚ್ಚಿನ ದೇಶಗಳು (ಯು.ಎಸ್ ಪ್ರಭಾವಲಯದಲ್ಲಿದ್ದ ಹಾಗೂ ವ್ಯೂಹಾತ್ಮಕ ಪಾಲುದಾರ ಎನ್ನಿಸಿಕೊಳ್ಳುವ ಭಾರತ ಮತ್ತಿತರ ದೇಶಗಳೂ ಸೇರಿದಂತೆ) ನಿರ್ಧರಿಸಿದ್ದು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಆರಂಭಿಸಿದ್ದವು.
ಬ್ರೆಜಿಲ್, ರಶ್ಯಾ, ಇಂಡಿಯಾ, ಚೀನಾ, ದಕ್ಷಿಣ ಆಫ್ರಿಕಾ ದೇಶಗಳ ಕೂಟ (ಬ್ರಿಕ್ಸ್) ತಮ್ಮೊಳಗೆ ವ್ಯವಹಾರಕ್ಕೆ ವಿನ್ಯಾಸಗೊಳಿಸಿ ಸಂಘಟಿಸಿದ ಬ್ರಿಕ್ಸ್ ಪೇಮೆಂಟ್ ಸಿಸ್ಟಮ್ ಇವುಗಳಲ್ಲಿ ಮುಖ್ಯವಾದವು. ಇದಲ್ಲದೆ ಒಟ್ಟಾರೆಯಾಗಿ ಹೊಸ ಬಹು-ಧ್ರುವೀಯ ಅಂತರ್ರಾಷ್ಟ್ರೀಯ ಹಣಕಾಸು ವ್ಯವಸ್ಥೆಯನ್ನು ಸೃಷ್ಟಿಸುವ ಪಾತ್ರವನ್ನು ಬ್ರಿಕ್ಸ್ ವಹಿಸುತ್ತಿದೆ. ನ್ಯೂ ಡೆವೆಲೆಪ್ ಮೆಂಟ್ ಬ್ಯಾಂಕ್ ಎಂಭ ಹೊಸ ಬ್ಯಾಂಕನ್ನೂ ಸ್ಥಾಪಿಸಿದ್ದವು. ಹಾಗಾಗಿ ಇದರಲ್ಲಿ ಭಾಗವಹಿಸಲು ಆಗಿನಿಂದಲೇ ಹಲವು ದೇಶಗಳು ಉತ್ಸುಕತೆ ತೋರಿಸಿದ್ದವು. ಮೇ ಯಲ್ಲಿ ನಡೆದ ಬ್ರಿಕ್ಸ್ ವಿಸ್ತರಣಾ ಸಭೆಯಲ್ಲಿ 12 ದೇಶಗಳು ಆಸಕ್ತಿ ತೋರಿಸಿವೆ. ಅಲ್ಜೀರಿಯಾ, ಅರ್ಜೆಂಟಿನಾ,ಇರಾನ್, ಸೌದಿ ಅರೇಬಿಯ, ಟರ್ಕಿ, ಈಜಿಪ್ಟ್, ಅಫ‍್ಘಾನಿಸ್ತಾನ್ ಗಳು ಆಗಲೇ ಅರ್ಜಿ ಹಾಕಿವೆ. ಈ ಎಲ್ಲ ದೇಶಗಳು ಬ್ರಿಕ್ಸ್ ಸೇರಿದರೆ ಜಗತ್ತಿನ ಅರ್ಧ ಕ್ಕೂ ಹೆಚ್ಚು ಜಾಗತಿಕ ಜನಸಂಖ್ಯೆಯಿರುವ, ಯು.ಎಸ್ ಗಿಂತ ಶೇ.30 ಹೆಚ್ಚು ಜಿಡಿಪಿ ಇರುವ, ಶೇ.60 ಜಾಗತಿಕ ತೈಲ-ಗ್ಯಾಸ್ ಸಂಪನ್ಮೂಲ ಹೊಂದಿರುವ ಜಾಗತಿಕ ಕೂಟವಾಗಿರುತ್ತದೆ. ಈಗ ದುರ್ಬಲವಾಗಿರುವ ರಶ್ಯಾವೇ ತೈಲದ ಅ-ಡಾಲರೀಕರಣದಿಂದ ಡಾಲರನ್ನು ನಡುಗಿಸಿದೆ. ಹಾಗಾಗಿ ವಿಸ್ತರಿತ ಬ್ರಿಕ್ಸ್ ರೂಪಿಸುವ ಮೀಸಲು ಕರೆನ್ಸಿ ತೀವ್ರವಾದ ಅ-ಡಾಲರೀಕರಣಕ್ಕೆ ಹಾದಿ ಮಾಡಿಕೊಡುತ್ತದೆ. ಚೀನಾ, ರಶ್ಯಾ ಆರಂಭಿಸಿದ ಶಾಂಘಾಯ್ ಸಹಕಾರ ಸಂಘಟನೆ (ಎಸ್.ಸಿ.ಒ) ಸಹ ಇದೇ ರೀತಿಯ ಆಸಕ್ತಿ ಸೃಷ್ಟಿಸಿದ್ದು ಅದರ ವಿಸ್ತರಣೆ ಸಹ ಅ-ಡಾಲರೀಕರಣಕ್ಕೆ ಕುಮ್ಮಕ್ಕು ಕೊಡಲಿದೆ.
ಸ್ವಿಫ್ಟ್ (SWIFT) ಗೆ ಬದಲಿ ವ್ಯವಸ್ಥೆ
ಬದಲಿ ವ್ಯವಸ್ಥೆಗೆ ತೀವ್ರ ಹುಡುಕಾಟಕ್ಕೆ ಎರಡನೆಯ ಕಾರಣ ಯು.ಎಸ್ ಕಳೆದ ಕೆಲವು ದಶಕಗಳಿಂದ ತನ್ನ ಬಿಗಿಮುಷ್ಠಿಯಲ್ಲಿರುವ ಹಣಕಾಸು ವ್ಯವಸ್ಥೇಯನ್ನು ದುರ್ಬಳಕೆ ಮಾಡಿ ತನ್ನ ಮೂಗಿನ ನೇರಕ್ಕೆ ಇಲ್ಲದ ದೇಶಗಳ ಮೇಲೆ ಆರ್ಥಿಕ ದಿಗ್ಬಂಧನ ಹೇರುತ್ತಾ ಬಂದಿದ್ದು. ಕ್ಯೂಬಾ, ಇರಾನ್, ಇರಾಕ್, ಲಿಬ್ಯಾ, ವೆನೆಜುವೇಲಾ, ಅಫ್ಗಾನಿಸ್ತಾನ – ಪಟ್ಟಿ ದೊಡ್ಡದಿದೆ. ಅಂತರ್ರಾಷ್ಟ್ರೀಯ ಕಾನೂನು ಬಾಹಿರವಾದ ಈ ದಿಗ್ಬಂಧನಕ್ಕೆ ತುತ್ತಾದ ಸುಮಾರು 30 ದೇಶಗಳು ಬದಲಿ ವ್ಯವಸ್ಥೆಗೆ ಪ್ರಯತ್ನ ಮಾಡುತ್ತಲೇ ಇದ್ದವು. ಮೊಬೈಲ್ ಆಪ್ ಆಧಾರಿತ ಪಾವತಿ ವ್ಯವಸ್ಥೆಯ ತಂತ್ರಜ್ಞಾನದೊಂದಿಗೆ ಇಂತಹ ವ್ಯವಸ್ಥೇ ಅಗ್ಗ ಮತ್ತು ಸುಲಭಸಾಧ‍್ಯವಾಗಿದೆ. ಕೆಲವು ದೇಶಗಳು ಡಿಜಿಟಲ್ ಕರೆನ್ಸಿ ಜಾರಿ ಮಾಡುವ ಪ್ರಯತ್ನ ಸಹ ಈ ನಿಟ್ಟಿನಲ್ಲಿ ಸಹಾಯಕವಾಗಿವೆ. ಡಾಲರ್ ಮತ್ತು ಹಣಕಾಸು ವ್ಯವಸ್ಥೆಯನ್ನು ಯು.ಎಸ್ ಅಸ್ತ್ರವಾಗಿ ಬಳಸುವುದರ ಕುರಿತು ಎಲ್ಲ ದೇಶಗಳಲ್ಲಿ ಆತಂಕ ಮೂಡಿತ್ತು. ರಶ್ಯಾ, ಚೀನದಂತಹ ಪ್ರಬಲ ದೇಶಗಳ ಮೇಲೆ ಅವುಗಳ ಬಳಕೆ, ಅದರಲ್ಲಿ ಭಾಗವಹಿಸಲು ಮೂರನೆಯ ದೇಶಗಳ ಮೇಲೆ ಒತ್ತಡ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.
ಯು.ಎಸ್ ನಿಯಂತ್ರಣದಲ್ಲಿರುವ Society for Worldwide Interbank Financial Telecommunications (SWIFT) ಗೆ ಬದಲಿಯಾಗಿ, ರಶ್ಯ 2014ರಲ್ಲಿ ಸಿದ್ಧಪಡಿಸಿದ System for Transfer of Financial Messages (SPFS), 2015ರಲ್ಲಿ ಚೀನಾ ಸಿದ್ಧಪಡಿಸಿದ Cross-Border Interbank Payment System (CIPS) ಗಳಲ್ಲಿ ಹಲವು ದೇಶಗಳ ಕೇಂದ್ರೀಯ ಬ್ಯಾಂಕುಗಳು ಆಸಕ್ತಿ ವಹಿಸಿವೆ. ಯು.ಎಸ್ ನ ವೀಸಾ/ಮಾಸ್ಟರ್ ಕಾರ್ಡ್ ಗೆ ಬದಲಿಯಾಗಿ ಚೀನಾದ ಯೂನಿಯನ್-ಪೇ, ಅಲಿಪೇ, ವಿಚಾಟ್-ಪೇ ರಶ್ಯಾದ ಮಿರ್ ಬಳಸಲಾಗುತ್ತಿವೆ. ಯುರೋಪಿನಲ್ಲೂ ಜರ್ಮನಿ, ಯು.ಕೆ, ಫ್ರಾನ್ಸ್ INSTEX ಎಂಬ ಡಾಲರ್ ವ್ಯವಸ್ಥೆ ಬೈ-ಪಾಸ್ ಮಾಡುವ ವ್ಯವಸ್ಥೆ ಜಾರಿಗೆ ತಂದಿವೆ. ಮಲೇಶ್ಯಾ, ಇಂಡೋನೇಶ್ಯಾ, ಸಿಂಗಾಪುರ್, ಥಾಯ್ಲೆಂಡ್ ತಮ್ಮ ಸ್ಥಳೀಯ ಕರೆನ್ಸಿಯಲ್ಲೇ ತಮ್ಮ ದೇಶಗಳ ನಡುವೆ ವ್ಯವಹರಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿವೆ.
ಚೀನಾ ಸೇರಿದಂತೆ ಆರು ದೇಶಗಳ ಕೇಂದ್ರೀಯ ಬ್ಯಾಂಕ್ ಗಳು ಡಿಜಿಟಲ್ ಕರೆನ್ಸಿಯ ಪ್ರಯೋಗ ಆರಂಭಿಸಿವೆ. ಚೀನಾದ ಡಿಜಿಟಲ್ ಯುವನ್ ಸಾಕಷ್ಟು ಪ್ರಗತಿ ಸಾಧಿಸಿದ್ದು, ವಿಶೇಷವಾಗಿ ಡಿಜಿಟಲ್ ಸಿಲ್ಕ್ ರೋಡ್ ನ ಬಿ.ಆರ್.ಐ ಪ್ರಾಜೆಕ್ಟುಗಳಲ್ಲಿ ಅಂತರ್ರಾಷ್ಟ್ರೀಯ ಕರೆನ್ಸಿಯಾಗಿಯೂ ಹೊಮ್ಮುತ್ತಿದೆ. ಇತ್ತೀಚೆಗೆ ಬ್ರೆಜಿಲ್ ಹೊಸ ಹಣಕಾಸು ಮಂತ್ರಿ ಲ್ಯಾಟಿನ್ ಅಮೆರಿಕದ ಆಧ್ಯಂತ ಬಳಸುವ ‘ಸುರ್’ (ಸ್ಪಾನಿಷ್ ನಲ್ಲಿ ‘ದಕ್ಷಿಣ’ ವೆಂಬ ಅರ್ಥ) ಎಂಬ ಡಿಜಿಟಲ್ ಕರೆನ್ಸಿ ಅಭಿವೃದ್ಧಿ ಪಡಿಸುವುದಾಗಿ ಘೋಷಿಸಿದ್ದಾರೆ.
ಈ ವರೆಗಿನ ಅ-ಡಾಲರೀಕರಣ
ಇವೆಲ್ಲ ಅ-ಡಾಲರೀಕರಣದತ್ತ ಟ್ರೆಂಡ್ ಗಳು ಮಾತ್ರವಲ್ಲ. ನಿಜವಾಗಿಯೂ ಅ-ಡಾಲರೀಕರಣ ಸಾಕಷ್ಟು ದೂರ ಸಾಗಿಬಂದಿದೆ. ಐ.ಎಂ.ಎಫ್ ವರದಿಯ ಪ್ರಕಾರ ಕೇಂದ್ರೀಯ ಬ್ಯಾಂಕುಗಳ ಡಾಲರುಗಳಲ್ಲಿ ಇಟ್ಟ ಮೀಸಲು ನಿಧಿಯ ಪ್ರಮಾಣ 1999ರಲ್ಲಿ ಶೇ.71ರಿಂದ 2021ರಲ್ಲಿ ಶೇ. 59ಕ್ಕೆ ಇಳಿದಿದೆ. ಹಣಕಾಸೇತರ ಕಂಪನಿಗಳು ಬಾಂಡ್ ಮಾರಾಟದಲ್ಲಿ ಡಾಲರ್ ನಲ್ಲಿದ್ದ ಬಾಂಡ್ ಗಳ ಪ್ರಮಾಣ ಮೊದಲ ಬಾರಿಗೆ ಶೇ.37ಕ್ಕೆ ಕುಸಿದಿದೆ. ಕಳೆದ ದಶಕದಲ್ಲಿ ಯಾವುದೇ ವರ್ಷದಲ್ಲಿ ಅದು ಶೇ. 50ಕ್ಕಿಂತ ಯಾವಾಗಲೂ ಹೆಚ್ಚಿರುತ್ತಿತ್ತು. 57 ಕೇಂದ್ರೀಯ ಬ್ಯಾಂಕುಗಳ ಸಮೀಕ್ಷೆಯಲ್ಲಿ ಶೇ.80 ತಮ್ಮ ಮೀಸಲು ನಿಧಿಯನ್ನು ಚಿನ್ನಕ್ಕೆ ವರ್ಗಾಯಿಸುವುದಾಗಿ ಹೇಳಿವೆ. ಶೇ.42 ರಷ್ಟು ಡಾಲರಿನ ಪ್ರಮಾಣವನ್ನು ಇಳಿಸುವುದಾಗಿ ತಿಳಿಸಿವೆ. ಪಾಶ್ಚಿಮಾತ್ಯ ಕಾರ್ಪೊರೆಟ್ ಹಿರಿಯ ಅಧಿಕಾರಿಗಳ ನಡುವೆ ನಡೆಸಿದ ಇನ್ನೊಂದು ಸಮೀಕ್ಷೆಯಲ್ಲಿ ಶೇ.37 ರಷ್ಟು ಮಾತ್ರ ಯು.ಎಸ್-ಯುರೋಕೂಟದ ಆರ್ಥಿಕ ದಿಗ್ಬಂಧನದ ನೀತಿಗಳಿಂದಾಗಿ ಅ-ಡಾಲರೀಕರಣದ ಆತಂಕವಿಲ್ಲವೆದಿದ್ದಾರೆ. ಉಳಿದವರು ಆತಂಕವಿದೆ ಅಥವಾ ಭವಿಷ್ಯ ಹೇಳಲಾಗದು ಎಂದಿದ್ದಾರೆ.
ಅದುವರೆಗೆ ಇದ್ದ ಚಿನ್ನದ ನಿಧಿ ಮೇಲೆ ಆಧಾರಿತ ಹಣಕಾಸು ವ್ಯವಸ್ಥೆ ಹೋಗಿ, ಡಾಲರ್ ನ ಏಕಚಕ್ರಾಧಿಪತ್ಯವನ್ನು 1973ರಲ್ಲಿ ಸ್ಥಾಪಿಸಿ ಸರಿಯಾಗಿ 50 ವರ್ಷಗಳಾಗಿವೆ. ಅದನ್ನು ಸೌದಿ ಅರೇಬಿಯದ ಜತೆ ಒಪ್ಪಂದದ ನಂತರ ಜಾರಿಗೆ ಬಂದ ‘ಪೆಟ್ರೊ-ಡಾಲರ್’ ವ್ಯವಸ್ಥೆ ಸ್ಥಾಪಿಸಿತ್ತು. ಈ ವರ್ಷ ಯು.ಎಸ್ ಸೌದಿ ಅರೇಬಿಯ ನಡುವೆ ಆರ್ಥಿಕ-ಮಿಲಿಟರಿ-ರಾಜಕೀಯ ಭಿನ್ನಾಭಿಪ್ರಾಯ ದಿಂದಾಗಿ ಆ ವ್ಯವಸ್ಥೆಗೆ ಕುತ್ತು ಬರಲಿದೆ. ಈ ಲೇಖನದ ಆರಂಭದಲ್ಲಿ ನಿರೂಪಿಸಿದ ಸೌದಿ ಅರೇಬಿಯ ಚೀನಾದ ಜತೆ ವ್ಯೂಹಾತ್ಮಕ ಒಪ್ಪಂದ, ಅದಕ್ಕೆ ಯು.ಎಸ್ ನ ಗಾಬರಿಯ ಪ್ರತಿಕ್ರಿಯೆ ಅ-ಡಾಲರೀಕರಣದ ಪ್ರಕ್ರಿಯೆ ಬಿರುಸನ್ನು ಪಡೆದಿದೆಯೆಂಬುದನ್ನು ಸ್ಪಷ್ಟಪಡಿಸಿದೆ.
ಅ-ಡಾಲರೀಕರಣ ಈ ವರ್ಷವೇ ಅಥವಾ ಕೆಲವೇ ವರ್ಷಗಳಲ್ಲಿ ಪೂರ್ಣ ಆಗಿಬಿಡುತ್ತದೆ ಎಂದು ಇದರರ್ಥವಲ್ಲ. ಚೀನಾ ಸೇರಿದಂತೆ ಹಲವು ಪ್ರಮುಖ ದೇಶಗಳ ಭದ್ರ ನಿಧಿ ಡಾಲರ್ ಗಳಲ್ಲಿ ಈಗಲೂ ಇದೆ. ಚೀನಾ ದ ಯೂವಾನ್ ಡಾಲರಿಗೆ ಸವಾಲು ಹಾಕಬೇಕಾದರೆ ಇನ್ನೂ ಹಲವು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಅವುಗಳಿಗೆ ಚೀನಾ ಇನ್ನೂ ಸಿದ್ಧವಿಲ್ಲ. ಇದೇ ವೇಗದಲ್ಲಿ ಅ-ಡಾಲರೀಕರಣ ಗಮನಾರ್ಹವಾಗಲು ಒಂದು ದಶಕವೇ ಬೇಕಾಗಬಹುದು ಎನ್ನಲಾಗಿದೆ. ಆದರೆ ಅಂತರ್ರಾಷ್ಟ್ರೀಯ ಆರ್ಥಿಕ ರಾಜಕಾರಣ ದಲ್ಲಿ ಹಲವು ವರ್ಷಗಳ ಕಾಲ ತೀರಾ ಅಸಾಧ್ಯ ಎಂದುಕೊಂಡದ್ದು ಕೆಲವೇ ಗಂಟೆಗಳಲ್ಲಿ ಆಗಿದ್ದೂ ಇದೆ.