ವಿಷಾನಿಲದ ನಡುವೆ ಕನಸು ಕಟ್ಟಿಕೊಳ್ಳುವ ಒಂದು ಜಗತ್ತು

ನಾ ದಿವಾಕರ

ಶಿವಕಾಶಿ ಬಳಿಯ ಆಲಮರತ್ತುಪಟ್ಟಿ ಗ್ರಾಮದ ಬರಡು ಭೂಮಿಯಲ್ಲಿ ಕಾಣುವುದು ಎರಡೇ. ಒಂದು ಸಾಲು ಸಾಲು ಪಟಾಕಿ ಕಾರ್ಖಾನೆಗಳು, ಎರಡನೆಯದು ಸಾರಾಯಿ ಅಂಗಡಿ. ಪುರುಷರು ತಮ್ಮ ಅರ್ಧ ದುಡಿಮೆಯನ್ನು ಸಾರಾಯಿಯಲ್ಲಿ ಮುಳುಗಿಸುತ್ತಾರೆ. ಇದನ್ನು ಸರಿದೂಗಿಸಲು ತಾವೂ ದುಡಿಯುವ ಕುಟುಂಬದ ಮಹಿಳೆಯರು ತಮ್ಮ ವರಮಾನದಿಂದ ಸಂಸಾರ ನಡೆಸುತ್ತಾರೆ. ಇಷ್ಟೇ ಅಲ್ಲದೆ ಅಧಿಕೃತ ಪರವಾನಗಿ ಇಲ್ಲದೆಯೇ ನಡೆಸಲಾಗುವ ಪಟಾಕಿ ಕಾರ್ಖಾನೆಗಳಲ್ಲಿ ದುಡಿಯುವ ಮೂರು ಲಕ್ಷಕ್ಕೂ ಹೆಚ್ಚು ಕಾರ್ಮಿಕರು ತಮ್ಮ ದುಡಿಮೆಯೊಂದಿಗೇ ಅಪಾಯಕಾರಿ ರಾಸಾಯನಿಕ ವಸ್ತುಗಳೊಡನೆಯೂ ಸೆಣಸಾಡಬೇಕಾಗುತ್ತದೆ.  ಕನಸು 

ಅತ್ತಿಬೆಲೆಯ ಪಟಾಕಿ ದುರಂತದ ಮೂಲ ಇರುವುದು ಶಿವಕಾಶಿಯ ಮಾರುಕಟ್ಟೆಯ ಜಗುಲಿಯಲ್ಲಿ

ಆನೇಕಲ್‌ ಬಳಿಯ ಅತ್ತಿಬೆಲೆಯಲ್ಲಿ ಇತ್ತೀಚೆಗೆ ನಡೆದ ಪಟಾಕಿ ಮಳಿಗೆಯ ದುರಂತ ಮತ್ತೊಮ್ಮೆ ನಮ್ಮ ಸಾರ್ವಜನಿಕ ಜಾಗೃತ ಪ್ರಜ್ಞೆಗೆ ಬಲವಾದ ಪೆಟ್ಟು ನೀಡಿದೆ. ಪ್ರತಿ ವರ್ಷದ ದೀಪಾವಳಿ ಸಂದರ್ಭದಲ್ಲೂ ಪಟಾಕಿಯ ಸಿಡಿತದಿಂದ ಕಣ್ಣು ಕಳೆದುಕೊಳ್ಳುವವರು, ಜೀವ ತೆರುವವರು, ಊನ ಅನುಭವಿಸುವವರು ಸುದ್ದಿಗೆ ಗ್ರಾಸವಾಗುತ್ತಲೇ ಇರುತ್ತದೆ. ಪ್ರತಿಬಾರಿ ದೀಪಾವಳಿ ಹಬ್ಬದಾಚರಣೆಯಲ್ಲಿ ಮಕ್ಕಳು ಪಟಾಕಿಯ ಅವಘಡಗಳಿಗೆ ಈಡಾದಾಗ ಸಾರ್ವಜನಿಕ ವಲಯದಲ್ಲಿ ಕೇಳಿಬರುವ ಸ್ವರ ಎಂದರೆ “ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕು” !!!. ನಿಜ, ಪಟಾಕಿಯನ್ನು ಸಿಡಿಸುವಾಗ ಮಕ್ಕಳೊಂದಿಗೆ ಜಾಗ್ರತೆಯಿಂದಿರಬೇಕು. ಆದರೆ ಪಟಾಕಿಯ ಸಿಡಿತದಿಂದ ಅಪಾಯವಾಗಲಿಲ್ಲ ಎಂದ ಮಾತ್ರಕ್ಕೆ ಅದರಿಂದ ಹೊರಡುವ ವಿಷದ ಹೊಗೆ ಅಪಾಯಕಾರಿ ಅಲ್ಲ ಎಂದು ಹೇಳಲಾಗುವುದಿಲ್ಲ. ಹಿರಿಯರೂ ಈ ವಿಚಾರದಲ್ಲಿ ಜಾಗ್ರತೆಯಿಂದಿರಬೇಕಲ್ಲವೇ ?  ಪರಿಸರದ ಪರಿವೆ ಇಲ್ಲದ ನಂಬಿಕೆ-ಆಚರಣೆಗಳಿಗೆ ಆತುಕೊಂಡ ಒಂದು ಸಮಾಜದಲ್ಲಿ ಈ ಪ್ರಶ್ನೆಯೇ ನೂರಾರು ಪ್ರಶ್ನೆಗಳನ್ನು ಸೃಷ್ಟಿಸುತ್ತದೆ.

ಆನೇಕಲ್‌ ದುರಂತದ ಸಂದರ್ಭದಲ್ಲಿ ನಾವು ನೋಡಬೇಕಿರುವುದು ಅಲ್ಲಿ ಮಡಿದ ಅಮಾಯಕ ಜೀವಗಳ ಕಡೆಗೆ ಎನ್ನುವುದು ಸತ್ಯ. ಆದರೆ ಪಟಾಕಿಯ ತಯಾರಿಕೆ, ಸಾಗಾಣಿಕೆ, ಸಂಗ್ರಹ ಮತ್ತು ಮಾರಾಟದ ಪ್ರಕ್ರಿಯೆಯಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರು ತಮ್ಮ ದುಡಿಮೆಯ ಜೀವನದುದ್ದಕ್ಕೂ ಇದೇ ವಿಷದ ನಡುವೆಯೇ ಸಾಗುತ್ತಾರೆ ಎನ್ನುವುದೂ ನಮ್ಮ ಗಮನಸೆಳೆಯಬೇಕಲ್ಲವೇ ? ದೀಪಾವಳಿಯ ಆಚರಣೆಗೂ ಪಟಾಕಿ ಸಿಡಿಸುವುದಕ್ಕೂ ಇರುವ ಸಂಬಂಧವನ್ನು ಆಧುನಿಕ ಮಾನವ ಸಮಾಜ ರೂಢಿಸಿಕೊಂಡಿರುವುದೇ ಹೊರತು ಪಾರಂಪರಿಕವೇನೂ ಅಲ್ಲ. ದೀಪಗಳ ಹಬ್ಬವನ್ನು ಶಬ್ದಗಳ ಹಬ್ಬವನ್ನಾಗಿ ಮಾಡುವ ಮೂಲಕ ಆಧುನಿಕ ನಾಗರಿಕತೆಯು ಪಟಾಕಿ ಉದ್ಯಮದ ಮಾರುಕಟ್ಟೆಗೆ ಒಂದು ಲಾಭದಾಯಕ ಭೂಮಿಕೆಯನ್ನು ನೀಡಿದೆ. ಜನಸಾಮಾನ್ಯರ ನಂಬಿಕೆಗಳು ಸುಲಭವಾಗಿ ಸಡಿಲವಾಗುವುದಿಲ್ಲವಾದ್ದರಿಂದ, ದೀಪಾವಳಿ-ಪಟಾಕಿಯ ಸಂಬಂಧವೂ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಲೇ ಇದೆ.ಅತ್ತಿಬೆಲೆಯಂತಹ ಅವಘಡಗಳು ಸಂಭವಿಸಿದಾಗ ಸಾರ್ವಜನಿಕ ವಲಯದಲ್ಲೂ ಸಹ ಈ ಅಪಾಯಕಾರಿ ಸ್ಫೋಟಕ ವಸ್ತು ಮತ್ತು ಅದರಿಂದ ಹೊರಸೂಸುವ ವಿಷಾನಿಲದ ಬಗ್ಗೆ ಚರ್ಚೆ ಕೇಳಿಬರುತ್ತದೆ. ಇಂತಹ ಅಗ್ನಿ ದುರಂತಗಳಲ್ಲಿ ಹಲವರು ಒಮ್ಮೆಲೆ ದಹಿಸಿ ಹೋಗುತ್ತಾರೆ. ಸಮಾಜದ ಸಹಜ ಅನುಕಂಪ ಪಡೆಯುತ್ತಾರೆ. ಆದರೆ ಶಿವಕಾಶಿಯ ಪಟಾಕಿ ಉತ್ಪಾದನೆಯ ಕಾರ್ಖಾನೆಗಳಲ್ಲಿ ದಿನವಿಡೀ ದುಡಿಯುವ ಲಕ್ಷಾಂತರ ಕಾರ್ಮಿಕರು ಪಟಾಕಿಗೆ ಬಳಸುವ ರಾಸಾಯನಿಕ ವಸ್ತುಗಳು, ಮದ್ದಿನ ಪುಡಿಯ ನಡುವೆಯೇ ತಮ್ಮ ಇಡೀ ಬದುಕು ಸವೆಸುತ್ತಾ, ಅನೇಕ ರೀತಿಯ ರೋಗಗಳಿಗೆ ತುತ್ತಾಗುತ್ತಿರುವುದು, ಹಂತಹಂತವಾಗಿ ಸಾಯುತ್ತಿರುವುದು ಸಮಾಜದಿಂದ ಯಾವುದೇ ರೀತಿಯ ಅನುಕಂಪ ಅಥವಾ ಸಹಾನುಭೂತಿಗೆ ಕಾರಣವಾಗಿಲ್ಲ. ಬೆಂಕಿ ದುರಂತ ಸಂಭವಿಸಿದ ಕೂಡಲೇ ಎಚ್ಚೆತ್ತಿರುವ ಆಡಳಿತ ವ್ಯವಸ್ಥೆಗೆ ಅತ್ತಿಬೆಲೆಯ ಸುತ್ತಮುತ್ತ 500ಕ್ಕೂ ಹೆಚ್ಚು ಅನಧಿಕೃತ ಪಟಾಕಿ ಮಳಿಗೆಗಳು ಇದ್ದುದು ಈವರೆಗೆ ಏಕೆ ಕಾಣಲಿಲ್ಲ ?

ಶಿವಕಾಶಿಯ ಅಪಾಯಕಾರಿ ಗೂಡುಗಳು

ಇಂತಹ ನೂರಾರು ಅವಘಡಗಳೇ ಶಿವಕಾಶಿಯ ಪಟಾಕಿ ಉದ್ಯಮದಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಲು ಕಾರಣವಾಗಿದೆ. ಆದರೆ ದೈಹಿಕವಾಗಿ ಎಂತಹುದೇ ಸುರಕ್ಷತಾ ಕವಚಗಳನ್ನು ಒದಗಿಸಿದರೂ, ಅಲ್ಲಿ ಹಗಲು ರಾತ್ರಿ ದುಡಿಯುವ ಶ್ರಮಿಕರು ಎದುರಿಸುವ ಇತರ ಆರೋಗ್ಯ ಸಮಸ್ಯೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ಶ್ವಾಸಕೋಶದ ತೊಂದರೆ, ಚರ್ಮದ ಸಮಸ್ಯೆಗಳು ಮತ್ತಿತರ ದೇಹದ ಆಂತರಿಕ ಅನಾರೋಗ್ಯಗಳು ಎಲ್ಲ ಕಾರ್ಮಿಕರನ್ನೂ ಕಾಡುತ್ತಲೇ ಇರುತ್ತದೆ. ಹಲವಾರು ವರ್ಷಗಳ ಕಾಲ ಈ ವಾತಾವರಣದಲ್ಲೇ ತಮ್ಮ ಬೆವರುಗೂಡುಗಳಲ್ಲಿ ದುಡಿಯುವ ಶ್ರಮಿಕರು ವೃದ್ಧಾಪ್ಯಕ್ಕೆ ಮುನ್ನವೇ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಜೀವನಪರ್ಯಂತ ಹಲವು ಕಾಯಿಲೆಗಳಿಂದ ಬಳಲುವ ಈ ಶ್ರಮಿಕ ವರ್ಗ ಅತ್ಯಂತ ನಿರ್ಲಕ್ಷಿತ ಸಮುದಾಯ ಎಂದೇ ಹೇಳಬಹುದು.

ಇದನ್ನೂ ಓದಿ: ಬೆಂಗಳೂರಿನ ಆನೇಕಲ್ ಬಳಿ ಪಟಾಕಿ ಗೋದಾಮಿನಲ್ಲಿ ಅಗ್ನಿ ದುರಂತ| ಮೃತರ ಸಂಖ್ಯೆ 14ಕ್ಕೆ ಏರಿಕೆ

300-350 ರೂಗಳ ದಿನಗೂಲಿಗೆ ದುಡಿಯುವ ಕಾರ್ಮಿಕರು ತಮ್ಮ ಬಹುಪಾಲು ದುಡಿಮೆಯನ್ನು ಸಂಜೆಯ ಸಾರಾಯಿ ಸೇವನೆಗೆ ಮೀಸಲಿಡುವುದು ಸಾಮಾನ್ಯವಾಗಿ ಕಾಣಬಹುದಾದ ದೃಶ್ಯ. ಶಿವಕಾಶಿ ಬಳಿಯ ಆಲಮರತ್ತುಪಟ್ಟಿ ಗ್ರಾಮದ ಬರಡು ಭೂಮಿಯಲ್ಲಿ ಕಾಣುವುದು ಎರಡೇ. ಒಂದು ಸಾಲು ಸಾಲು ಪಟಾಕಿ ಕಾರ್ಖಾನೆಗಳು, ಎರಡನೆಯದು ಸಾರಾಯಿ ಅಂಗಡಿ. ಪುರುಷರು ತಮ್ಮ ಅರ್ಧ ದುಡಿಮೆಯನ್ನು ಸಾರಾಯಿಯಲ್ಲಿ ಮುಳುಗಿಸುತ್ತಾರೆ. ಇದನ್ನು ಸರಿದೂಗಿಸಲು ತಾವೂ ದುಡಿಯುವ ಕುಟುಂಬದ ಮಹಿಳೆಯರು ತಮ್ಮ ವರಮಾನದಿಂದ ಸಂಸಾರ ನಡೆಸುತ್ತಾರೆ. ಇಷ್ಟೇ ಅಲ್ಲದೆ ಅಧಿಕೃತ ಪರವಾನಗಿ ಇಲ್ಲದೆಯೇ ನಡೆಸಲಾಗುವ ಪಟಾಕಿ ಕಾರ್ಖಾನೆಗಳಲ್ಲಿ ದುಡಿಯುವ ಮೂರು ಲಕ್ಷಕ್ಕೂ ಹೆಚ್ಚು ಕಾರ್ಮಿಕರು ತಮ್ಮ ದುಡಿಮೆಯೊಂದಿಗೇ ಅಪಾಯಕಾರಿ ರಾಸಾಯನಿಕ ವಸ್ತುಗಳೊಡನೆಯೂ ಸೆಣಸಾಡಬೇಕಾಗುತ್ತದೆ.

ಪಟಾಕಿ ಕಾರ್ಖಾನೆಯೊಳಗೆ ಹೊಕ್ಕು ನೋಡಿದರೆ ಅಲ್ಲಿ ಮುಖವೆಲ್ಲಾ ಬೂದಿ ಮೆತ್ತಿಕೊಂಡ, ಕಣ್ಣುಗಳನ್ನು ಕೆಂಪಾಗಿಸಿಕೊಂಡ ಅಮಾಯಕ ಜೀವಗಳನ್ನು ಧಾರಾಳವಾಗಿ ನೋಡಬಹುದು. ದುಡಿಮೆ ಮುಗಿದ ಕೂಡಲೇ ಬೇಗನೆ ಮೈ ತೊಳೆಯದೆ ಹೋದರೆ ಚರ್ಮಕ್ಕೆ ಮೆತ್ತಿದ ಪುಡಿ ಹೋಗುವುದೇ ಕಷ್ಟವಾಗಿ ಚರ್ಮರೋಗಗಳು ಉಂಟಾಗುತ್ತವೆ. ಕತ್ತಿನ ಮೇಲೆ, ಎದೆಯ ಮೇಲೆ, ಹೊಟ್ಟೆಯ ಮೇಲೆ ಇರುವ ಮಚ್ಚೆಗಳಿಗೆ ಮೆತ್ತಿರುವ ಪುಡಿ ಹಾಗೆಯೇ ಉಳಿದು ಸಮಸ್ಯೆ ಉಲ್ಬಣಿಸುತ್ತದೆ.

ಕೆಲವು ಕಾರ್ಮಿಕರು ಸ್ನಾನ ಮಾಡಿ ಮೈಗೆಲ್ಲಾ ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳುತ್ತಾರೆ. ಇನ್ನು ಕೆಲವರಿಗೆ ಮುಖದಲ್ಲಿ ಬೊಬ್ಬೆಗಳು ಎದ್ದಿರುತ್ತವೆ. ಆಟಂ ಬಾಂಬ್‌ ತಯಾರಿಕೆಯಲ್ಲಿನ ಕಾರ್ಮಿಕರು ತಮ್ಮ ಬೆರಳುಗಳಿಗೆ ಅಂಟಿಕೊಂಡಂತೆ ಪೇಪರ್‌ ಸುತ್ತಿರುತ್ತಾರೆ. ಇಲ್ಲವಾದರೆ ಅವರಿಗೆ ಚರ್ಮದ ತುರಿಕೆ ನಿರಂತರವಾಗಿಬಿಡುತ್ತದೆ. ಈ ಕವಚದ ಹೊರತಾಗಿಯೂ ತುರಿಕೆ ಮುಕ್ತರಾಗುವುದಿಲ್ಲ ಎಂದು ಹಲವರು ಹೇಳುತ್ತಾರೆ. ಬಹುಪಾಲು ಕಾರ್ಮಿಕರು ತಯಾರಿಕೆಯ ಪ್ರಕ್ರಿಯೆಯಲ್ಲಿ ಪಟಾಕಿಗಳಿಗೆ ಬಳಸುವ ರಾಸಾಯನಿಕ ವಸ್ತುಗಳನ್ನು ನೇರವಾಗಿ ಕೈಯ್ಯಿಂದಲೇ ಮುಟ್ಟುತ್ತಾರೆ. ಕೈಗವಸು ಬಳಸುವುದು ಅಪರೂಪವಾಗಿ ಕಾಣುತ್ತದೆ. ಬಳಸಿದರೂ ಅದರಿಂದ ಕೆಲಸದ ವೇಗ ಕಡಿಮೆಯಾಗುವ ಧಾವಂತ ಕಾರ್ಮಿಕರಲ್ಲಿರುತ್ತದೆ.

ಹೀಗೆ ಕಡಿಮೆಯಾದರೆ ಅವರ ದೈನಂದಿನ ಉತ್ಪಾದನೆ ಕಡಿಮೆಯಾಗಿ ದಿನಗೂಲಿಗೆ ಕತ್ತರಿ ಬೀಳುತ್ತದೆ. ಪಟಾಕಿಗೆ ರಾಸಾಯನಿಕ ಮದ್ದು ಬೆರೆಸುವ ಮತ್ತು ತುಂಬುವ ಅಪಾಯಕಾರಿ ಕೆಲಸದಲ್ಲಿ ತರಬೇತಿ ಪಡೆದವರನ್ನೇ ಬಳಸಲಾಗುತ್ತದೆ, ಉಳಿದೆಲ್ಲಾ ಪ್ರಕ್ರಿಯೆಗಳು ಅಪಾಯಕಾರಿ ಅಲ್ಲ ಎಂಬ ಉದ್ಯಮಿಗಳ ಅರ್ಧಸತ್ಯದ ಮಾತುಗಳು ಸಂಪೂರ್ಣ ಸುಳ್ಳು ಎನ್ನುವುದನ್ನು ಒಳಹೊಕ್ಕು ನೋಡಬಹುದು. ಏಕೆಂದರೆ ಉದ್ಯಮಿಗಳ ದೃಷ್ಟಿಯಲ್ಲಿ ಅಪಾಯಕಾರಿ ಎಂದರೆ ಜೀವಹಾನಿ ಮಾಡುವ ಪ್ರಕ್ರಿಯೆ ಮಾತ್ರ ಎಂದಿರುತ್ತದೆ. ಚರ್ಮರೋಗಗಳು ಇತರ ಶ್ವಾಸಕೋಶದ ಸಮಸ್ಯೆಗಳು ಇವರ ಗಣನೆಗೆ ಬರುವುದೇ ಇಲ್ಲ. ಇಲ್ಲಿ ದುಡಿಯುವವರ ದೇಹವೂ ಸಹ ರಾಸಾಯನಿಕ ವಸ್ತುಗಳಿಗೆ ಒಗ್ಗಿಹೋಗುವಂತಿರಬೇಕು, ಆಗ ಹೆಚ್ಚಿನ ಅಲರ್ಜಿ ಆಗುವುದಿಲ್ಲ ಎಂದು ಕಾರ್ಮಿಕರೇ ಹೇಳುವುದು ದುರಂತ ವಾಸ್ತವದ ಚೋದ್ಯವೇ ಸರಿ.

ಅಗ್ಗದ ಕೂಲಿ ಲಾಭದ ಮಾರುಕಟ್ಟೆ

ತಮ್ಮ ಕಠಿಣ ದುಡಿಮೆಗೆ 290 ರೂಗಳಿಂದ 500-570 ರೂಗಳವರೆಗೆ ದಿನಗೂಲಿ ಪಡೆಯುವ ಇಲ್ಲಿನ ಕಾರ್ಮಿಕರು ವರ್ಷಕ್ಕೆ ಶೇ 20 ರಿಂದ 27ರಷ್ಟು ಬೋನಸ್‌ ಮತು ಭವಿಷ್ಯನಿಧಿ ಸೌಲಭ್ಯಗಳನ್ನು ಪಡೆಯುತ್ತಾರೆ. ಆದರೆ ಇದು ಅನ್ವಯವಾಗುವುದು ಪರವಾನಗಿ ಹೊಂದಿದ ಉದ್ಯಮಗಳಿಗೆ ಮತ್ತು ಸಂಘಟಿತ ಕಾರ್ಮಿಕರು ಇರುವಲ್ಲಿ ಮಾತ್ರ. ಶೇ 55ರಷ್ಟು ದುಡಿಮೆಯಲ್ಲಿ ಮಹಿಳೆಯರೇ ಕಂಡುಬರುತ್ತಾರೆ. ಅನೇಕ ಉದ್ದಿಮೆಗಳಲ್ಲಿ ಕಳೆದ ಮೂರು ನಾಲ್ಕು ವರ್ಷಗಳಿಂದ ಕೂಲಿಯ ದರ ಹೆಚ್ಚಿಸಲಾಗಿಲ್ಲ ಎಂಬ ಆರೋಪಗಳೂ ಇವೆ. ಪರವಾನಗಿ ಪಡೆ ಕಾರ್ಖಾನೆಗಳಲ್ಲಿ ಕಾನೂನು ನಿಬಂಧನೆಗಳು ಮತ್ತು ನಿರ್ಬಂಧಗಳು ಇರುವುದರಿಂದ ಅಲ್ಲಿ ದುಡಿಯುವ ಕಾರ್ಮಿಕರು ಕೊಂಚಮಟ್ಟಿಗೆ ಸುರಕ್ಷಿತ ವಲಯದಲ್ಲಿರುತ್ತಾರೆ. ಆದರೆ ಪರವಾನಗಿ ಇಲ್ಲದ ಅನಧಿಕೃತ ಮಳಿಗೆ ಮತ್ತು ಕಾರ್ಖಾನೆಗಳಲ್ಲಿ ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಕಳೆದ ಮೂರು ವರ್ಷಗಳಲ್ಲಿ ಹತ್ತಕ್ಕೂ ಹೆಚ್ಚು ಅವಘಡಗಳು ಸಂಭವಿಸಿವೆ.

ಅಷ್ಟೇ ಅಲ್ಲದೆ ಕೆಲವು ಮನೆಗಳಲ್ಲೂ ಯಾವುದೇ ಅನುಮತಿ ಪಡೆಯದೆ ಪಟಾಕಿ ತಯಾರಿಸಲಾಗುತ್ತದೆ. ಅಕ್ರಮ ಘಟಕಗಳು ಮೂಲ ಪರವಾನಗಿ ಹೊಂದಿರುವವರೊಡನೆ ಒಳಒಪ್ಪಂದ ಮಾಡಿಕೊಂಡು ತಯಾರಿಕೆಯಲ್ಲಿ ತೊಡಗಿರುತ್ತಾರೆ. ತಮಿಳುನಾಡಿನ ತಾಯಲ್‌ಪಟ್ಟಿ ಮುಂತಾದ ಹಳ್ಳಿಗಳಲ್ಲಿ ಮನೆಯಲ್ಲೇ ಪಟಾಕಿ ತಯಾರಿಸುವುದು ವ್ಯಾಪಕವಾಗಿದ್ದು, ತಮ್ಮ ಅಪಾಯಗಳ ಅರಿವಿದ್ದರೂ ಕಾರ್ಮಿಕರು ಇಲ್ಲಿ ಕೂಲಿಗಾಗಿ ದುಡಿಯುತ್ತಾರೆ. ಕಳೆದ ಫೆಬ್ರವರಿಯಲ್ಲಿ ಅಚಂಕುಲಂ ಘಟಕದಲ್ಲಿ ಸಂಭವಿಸಿದ ಅವಘಡದಲ್ಲಿ 20ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಮೃತರ ಪೈಕಿ ಗರ್ಭಿಣಿ ಮಹಿಳೆಯೂ ಇದ್ದುದು ಇಲ್ಲಿನ ಕರಾಳ ಸನ್ನಿವೇಶವನ್ನು ಪರಿಚಯಿಸುತ್ತದೆ.

ಈ ಅಕ್ರಮ ಪಟಾಕಿ ಘಟಕಗಳು ಕೆಲವು ವ್ಯಾಪಾರಿಗಳಿಗೆ ಲಾಭದಾಯಕ ಮಾರುಕಟ್ಟೆ ಒದಗಿಸಿದರೆ ಅಪಾಯಗಳನ್ನೂ ಲೆಕ್ಕಿಸದ ಅಮಾಯಕ ಶ್ರಮಿಕರಿಗೆ ದುಡಿಮೆಯ ಮಾರ್ಗವಾಗಿ ಪರಿಣಮಿಸುತ್ತದೆ. ಗುತ್ತಿಗೆ, ಉಪ ಗುತ್ತಿಗೆ, ಭೋಗ್ಯ ಹೀಗೆ ಹಲವು ವಿಧಾನಗಳ ಮೂಲಕ ತಯಾರಿಕೆಯಲ್ಲಿ ತೊಡಗುವ ಈ ಘಟಕಗಳು ಮೂಲ ಉದ್ಯಮಿಗಳಿಗೆ ಅಪಾರ ಲಾಭದಾಯಕವಾಗಿರುತ್ತದೆ. ಇಲ್ಲಿ ಕಾಣಬಹುದಾದ ಮತ್ತೊಂದು ವಿಚಿತ್ರ ಸನ್ನಿವೇಶ ಎಂದರೆ ಅನೇಕ ಕಾರ್ಮಿಕರು ಭವಿಷ್ಯನಿಧಿ, ಇಎಸ್‌ಐ ಸೌಲಭ್ಯಗಳನ್ನೂ ಕಳೆದುಕೊಂಡು, ಒಂದೇ ಸಮಯದಲ್ಲಿ ಹಲವು ಪಟಾಕಿ ಘಟಕಗಳಲ್ಲಿ ದುಡಿಮೆ ಮಾಡುವ ಮೂಲಕ ಹೆಚ್ಚಿನ ಆದಾಯಕ್ಕಾಗಿ ಪರದಾಡುತ್ತಾರೆ. ಈ ಸಾಮಾಜಿಕ-ಆರ್ಥಿಕ ಆಯಾಮವನ್ನು ಸೂಕ್ಷ್ಮವಾಗಿ ಪರಿಶೋಧಿಸಬೇಕಿದೆ. ಶಿವಕಾಶಿಗೆ 70 ಕಿಲೋಮೀಟರ್‌ ದೂರದಿಂದ ನೌಕರಿಗಾಗಿ ದಿನವೂ ಓಡಾಡುವ ಹಲವು ಕುಟುಂಬಗಳನ್ನು ಕಾಣಬಹುದು. ಬಹುತೇಕ ಕಾರ್ಮಿಕರು ವೃದ್ಧಾಪ್ಯದವರೆಗೂ ಕುಟುಂಬ ಸಮೇತರಾಗಿ ಈ ಕಾರ್ಖಾನೆಗಳಲ್ಲೇ ಬದುಕು ಸವೆಸುತ್ತಾರೆ. ಕೆಲವರೇ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಮುಂದಿನ ಪೀಳಿಗೆಗೆ ಹೊಸ ದಾರಿ ತೋರುವ ಶಕ್ತಿ ಪಡೆದಿದ್ದಾರೆ.

ಪಟಾಕಿ ಉದ್ಯಮದ ಈ ಕರಾಳ ಜಗತ್ತಿನಲ್ಲಿ ತಮ್ಮ ಜೀವನವನ್ನೇ ಒತ್ತೆ ಇಟ್ಟು ದುಡಿಯುವ ಲಕ್ಷಾಂತರ ಕಾರ್ಮಿಕರ ಬಗ್ಗೆ ಯೋಚಿಸುವಾಗ, ಹಿತವಲಯದ ಅಥವಾ ಉಳ್ಳವರ ವಾರ್ಷಿಕ ಆಚರಣೆ-ಕಾಲಿಕ ಮೋಜು ಮಸ್ತಿಗೆ, ಸಂಭ್ರಮ ವಿಜೃಂಭಣೆಗೆ ಬಲಿಯಾಗುತ್ತಿರುವ ಒಂದು ಇಡೀ ತಲೆಮಾರು ನಮ್ಮ ಮುಂದೆ ಕಾಣಬೇಕಲ್ಲವೇ ? ಅತ್ತಿಬೆಲೆ ಘಟನೆಯ ನಂತರ ಎಚ್ಚೆತ್ತಿರುವ ರಾಜ್ಯ ಸರ್ಕಾರ ಈವರೆಗೂ ಯಾವುದೇ ಸರ್ಕಾರಗಳು ಕೈಗೊಳ್ಳದ ಕೆಲವು ಕ್ರಮಗಳಿಗೆ ಮುಂದಾಗಿರುವುದು ಸ್ವಾಗತಾರ್ಹ. ರಾಜಕೀಯ ಸಮಾವೇಶ, ಮದುವೆ ಇತ್ಯಾದಿ  ಸಂದರ್ಭಗಳಲ್ಲಿ, ಮೆರವಣಿಗೆಗಳಲ್ಲಿ ಪಟಾಕಿ ನಿಷೇಧಿಸಿರುವುದು ಸ್ತುತ್ಯಾರ್ಹ ಕ್ರಮ. ಆದರೆ ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವವರು ಯಾರು ಎಂಬುದೇ ಪ್ರಶ್ನೆ. ಪಟಾಕಿ ಉದ್ಯಮ ಅತ್ಯಂತ ಲಾಭದಾಯಕವಾಗಿರುವುದಕ್ಕೆ ಕಾರಣ ಕಡಿಮೆ ಕೂಲಿಯಲ್ಲಿ ದುಡಿಯುವ ಶ್ರಮಿಕರು ಹಾಗೂ ಅತ್ಯಂತ ಕಡಿಮೆ ಮೂಲ ಬಂಡವಾಳದೊಂದಿಗೆ ತಯಾರಿಕೆಯ ಸಾಧ್ಯತೆ. ಈ ಎರಡೂ ಪ್ರಕ್ರಿಯೆಗಳಿಗೆ ಪೂರಕವಾಗಿ ಅಧಿಕಾರಶಾಹಿಗಳು ಅಕ್ರಮ ವಹಿವಾಟುಗಳಿಗೆ ನೆರವಾಗುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುತ್ತದೆ. ಎರಡೂ ರಾಜ್ಯಗಳಲ್ಲಿನ ಅಧಿಕಾರಶಾಹಿಯ ಭ್ರಷ್ಟಾಚಾರವನ್ನು ನಿಗ್ರಹಿಸದಿದ್ದರೆ ಈ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ.

ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ದುರಂತದ ನಂತರ ಸಿಎಂ ಸಿದ್ದರಾಮಯ್ಯ ಮಹತ್ವದ ತೀರ್ಮಾನ

ಮಾಲಿನ್ಯರಹಿತ ಪರಿಸರದ ಕಡೆಗೆ

ಕಳೆದ ಹತ್ತು ವರ್ಷಗಳಲ್ಲಿ ಶಾಲಾ ಮಕ್ಕಳೂ ಸಹ ಪಟಾಕಿಯನ್ನು ವರ್ಜಿಸಲು ನಿರ್ಧರಿಸುತ್ತಿರುವ ಒಂದು ಆಶಾದಾಯಕ ಬೆಳವಣಿಗೆಯೊಂದಿಗೆ ಸಾರ್ವಜನಿಕ ಸಂಸ್ಥೆಗಳು, ಸಂಘಟನೆಗಳು ಸಹ ರಸ್ತೆಗಳಲ್ಲಿ, ಜನನಿಬಿಡ ಸ್ಥಳಗಳಲ್ಲಿ ತಮ್ಮ ನಾಯಕರನ್ನು, ದೇವರುಗಳನ್ನು ತೃಪ್ತಿಪಡಿಸಲು ಪಟಾಕಿ ಸಿಡಿಸುವ ಧೋರಣೆಯನ್ನು ವರ್ಜಿಸಬೇಕು. ಮನೆಗಳಲ್ಲೂ ಸಹ ಪೋಷಕರು ತಮ್ಮ ಅಂತಸ್ತು ತೋರಿಸಿಕೊಳ್ಳಲು ಅತಿ ಹೆಚ್ಚಿನ ಪಟಾಕಿ ಸಿಡಿಸುವ ಪ್ರವೃತ್ತಿಯಿಂದ ಹೊರಬರಬೇಕು. ಇದರಿಂದ ಹಾನಿಯಾಗುವುದು ಮಕ್ಕಳ ಆರೋಗ್ಯ ಮತ್ತು ಪರಿಸರ ಮಾತ್ರ. ಪಟಾಕಿ ಇಲ್ಲದೆಯೂ ದೀಪಾವಳಿ ಸಾಧ್ಯ ಎಂಬ ಸಾಮಾನ್ಯ ಅರಿವು ಜನರಲ್ಲಿ ಮೂಡಬೇಕು. ಪಟಾಕಿಯ ತಯಾರಿಕೆಯನ್ನೇ ಸಂಪೂರ್ಣ ನಿಷೇಧಿಸುವುದರಿಂದ ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗುತ್ತವೆ ಎಂಬ ಆತಂಕದ ನಡುವೆಯೇ ಈ ವಿಷಾನಿಲದ ಪ್ರಸರಣವನ್ನು ಹೇಗೆ ತಡೆಗಟ್ಟುವುದು ಎಂದು ಸರ್ಕಾರ ಮಾತ್ರ ಅಲ್ಲದೆ ನಾಗರಿಕರೂ ಯೋಚಿಸಬೇಕಿದೆ. ಹಸಿರು ಪಟಾಕಿ ಒಂದು ಉತ್ತಮ ಪರ್ಯಾಯ ಎನ್ನಲಾಗುತ್ತದೆ.

ಅತ್ತಿಬೆಲೆಯ ಘಟನೆಯತ್ತ ನೋಡಿದಾಗ ಅಲ್ಲಿ ಮೃತಪಟ್ಟಿರುವ ಹತ್ತು ವಿದ್ಯಾರ್ಥಿಗಳು ನಮ್ಮ ಆರ್ಥಿಕತೆಯಲ್ಲಿ ನವ ಉದಾರವಾದ ಸೃಷ್ಟಿಸಿರುವ ತಲ್ಲಣಗಳ ದುರಂತ ಸಂಕೇತವಾಗಿ ಕಾಣುತ್ತಾರೆ. 600 ರೂಗಳ ದಿನಗೂಲಿಗಾಗಿ ಅನ್ಯ ರಾಜ್ಯಕ್ಕೆ ವಲಸೆ ಬಂದು ಅಪಾಯಕಾರಿ ದುಡಿಮೆಯನ್ನು ಆಯ್ಕೆ ಮಾಡಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರೆ ಆ ವಿದ್ಯಾರ್ಥಿಗಳ ಕೌಟುಂಬಿಕ ಆದಾಯ ಜೀವನೋಪಾಯಕ್ಕೆ ಪೂರಕವಾಗಿಲ್ಲ ಎಂದೇ ಅರ್ಥಮಾಡಿಕೊಳ್ಳಬೇಕಿದೆ. ಈ ಮಡಿದ ವಿದ್ಯಾರ್ಥಿಗಳು ಒಮ್ಮೆಲೆ ಜೀವತ್ಯಾಗ ಮಾಡಿದ್ದಾರೆ. ಆದರೆ ಶಿವಕಾಶಿಯ ಪಟಾಕಿ ಕಾರ್ಖಾನೆಗಳಲ್ಲಿ ಹಂತಹಂತವಾಗಿ, ನಿಧಾನವಾಗಿ ಜೀವ ತೆರುತ್ತಿರುವ ಲಕ್ಷಾಂತರ ಶ್ರಮಿಕರು ನಮಗೆ ಕಾಣುತ್ತಾರೆ. ಈ ಶ್ರಮಜೀವಿಗಳ ಬದುಕು, ಬವಣೆ, ಜೀವನ, ಜೀವನೋಪಾಯ ಹಾಗೂ ಘನತೆಯ ಬಾಳ್ವೆಯ ಅನಿವಾರ್ಯತೆಗಳನ್ನು ಅರ್ಥಮಾಡಿಕೊಳ್ಳುವುದು ನಾಗರಿಕತೆಯ ನೈತಿಕ ಕರ್ತವ್ಯ. ಈ ನಿಟ್ಟಿನಲ್ಲಿ ಎಡಪಕ್ಷಗಳು, ಕಾರ್ಮಿಕ ಸಂಘಟನೆಗಳು ಹೆಚ್ಚಿನ ಪರಿಶೋಧನೆ ನಡೆಸುವ ಮೂಲಕ ಸಾವಿನ ಅಂಚಿನಲ್ಲೇ ಬದುಕು ಸವೆಸುವ ಲಕ್ಷಾಂತರ ಕಾಯಕ ಜೀವಿಗಳಿಗೆ ಕಾಯಕಲ್ಪ ಒದಗಿಸಲು ಶ್ರಮಿಸಬೇಕಿದೆ. ಧಾರ್ಮಿಕ ಆಚರಣೆಗಳು ಮತ್ತು ಉಳ್ಳವರ ಡಂಭಾಚಾರದ ಹೊರತಾಗಿ ಪಟಾಕಿ ಔದ್ಯಮಿಕವಾಗಿ ಲಾಭದಾಯಕ ಆದರೆ ಮಾನವ ಸಮಾಜಕ್ಕೆ ಹಾನಿಕಾರಕ. ಆಯ್ಕೆ ನಾಗರಿಕತೆಯ ಮುಂದಿದೆ.

ವಿಡಿಯೋ ನೋಡಿ: ಕೃಷಿ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದಎಂಎಸ್ ಸ್ವಾಮಿನಾಥನ್Janashakthi Media

Donate Janashakthi Media

Leave a Reply

Your email address will not be published. Required fields are marked *