ಹಾಸನ:ಜಿಲ್ಲೆಯ ವಡೂರು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಪೂರ್ಣಿಮಾ (37) ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ನಿನ್ನೆ ಗಂಡನ ಮನೆಯಿಂದ ತಾಯಿ ಮನೆಗೆ ಬಂದಿದ್ದ ಪೂರ್ಣಿಮಾ ಅವರು, ಆಗಸ್ಟ್-18 ರಂದು ಬೆಳಿಗ್ಗೆ ಮನೆಯ ಹಿಂಭಾಗ ತೋಟಕ್ಕೆ ತೆರಳಿರುವ ಸಮಯದಲ್ಲಿ ಆನೆ ದಾಳಿ ಮಾಡಿದ್ದು, ಇದೀಗ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಸಕಲೇಶಪುರ ತಾಲೂಕಿನಲ್ಲಿ ಕಾಡಾನೆ ದಾಳಿಗೆ ಮತ್ತೊಬ್ಬ ಅಮಾಯಕ ಬಲಿ
ನಿನ್ನೆ ಗಂಡನ ಮನೆ ನಾರ್ವೆಯಿಂದ ತಾಯಿ ಮನೆಗೆ ಬಂದಿದ್ದ ಕವಿತಾ ಅವರು, ಇಂದು ಬೆಳಿಗ್ಗೆ 6-30ರ ಸುಮಾರಿಗೆ ಮನೆಯ ಹಿಂಭಾಗದ ತೋಟಕ್ಕೆ ತೆರಳಿದ್ದರು. ಈ ವೇಳೆ ಏಕಾಏಕಿ ಮಹಿಳೆ ಮೇಲೆ ಕಾಡಾನೆ ದಾಳಿ ಮಾಡಿದೆ. ಪ್ರಜ್ಞಾಹೀನವಾಗಿ ಬಿದ್ದಿದ್ದ ಮಹಿಳೆಯನ್ನು ಗಮನಿಸಿ ಕೂಡಲೇ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಗಂಭೀರವಾಗಿ ಗಾಯಗೊಂಡಿದ್ದ ವಡೂರು ಗ್ರಾಮದ ಕವಿತಾ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಮಲೆನಾಡು ಭಾಗಗಳಲ್ಲಿ ಕಾರ್ಮಿಕರು ಕೆಲಸಕ್ಕೆ ತೆರಳಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಅರಣ್ಯ ಇಲಾಖೆಯವರು ಎಷ್ಟೇ ಮುಂಜಾಗೃತ ಕ್ರಮಗಳನ್ನು ಕೈಗೊಂಡರು, ಕಾಡಾನೆ ದಾಳಿಗೆ ಬ್ರೇಕ್ ಹಾಕಲಾಗುತ್ತಿಲ್ಲ. ಆಗಸ್ಟ್ 14 ರಂದು ಹಾಸನ ಜಿಲ್ಲೆಯಲ್ಲಿ ಬೈಕ್ ಸವಾರನ ಮೇಲೆ ಒಂಟಿ ಸಲಗ ದಾಳಿ ಮಾಡಿತ್ತು. ರಾತ್ರಿ ಸಕಲೇಶಪುರ ತಾಲ್ಲೂಕಿನ, ಕಿರೇಹಳ್ಳಿ ಗ್ರಾಮದ ಬಳಿ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ಚೇತನ್ ಎಂಬಾತನ ಮೇಲೆ ಕಾಡಾನೆ ದಾಳಿ ಮಾಡಿ,ಬೈಕ್ನ್ನು ಪುಡಿ ಪುಡಿ ಮಾಡಿತ್ತು. ಅದೃಷ್ಟವಶಾತ್ ಸವಾರ ಚೇತನ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದ. ಅದರ ಬೆನ್ನಲ್ಲೇ ಇದೀಗ ಹಾಸನ ಜಿಲ್ಲೆಯ ತಾಲೂಕಿನ ವಡೂರು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಕವಿತಾ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ.
ಕಾಡಾನೆ-ಮಾನವರ ನಡುವಿನ ಸಂಘರ್ಷಕ್ಕೆ ಕಡಿವಾಣ ಹಾಕಬೇಕಿದ್ದ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇಷ್ಟೆಲ್ಲಾ ಸಾವು-ನೋವುಗಳನ್ನು ಕಂಡು ಕಣ್ಮುಚ್ಚಿಕುಳಿತಿರುವುದೇ ದುರಂತ! ಹೀಗೆ ನೋಡಿದರೆ ದುರಂತ ಸಂಭವಿಸಿದಾಗ ಮಾತ್ರ ಪರಿಹಾರದ ಮಾತುಗಳನ್ನಾಡಿ ನಂತರ ಸುಮ್ಮನೆ ಕೂರುವುದು ಅರಣ್ಯ ಅಧಿಕಾರಿಗಳ ಕೆಲಸವಾಗಿದೆ. ಕಾಡಾನೆ ಕಾಟ ಮಿತಿ ಮೀರಲು ಇನ್ನೂ ಹೆಚ್ಚು ಕಾರಣವಾಗಿದೆ ಎಂಬುದು ಅನೇಕರ ದೂರಾಗಿದೆ. ಇಷ್ಟಾದರೂ ಅರಣ್ಯ ಇಲಾಖೆ ಹಾಗೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನೊಂದ ಜನರು ಆಕ್ರೋಶ ಹೊರ ಹಾಕಿದ್ದಾರೆ.
ಸಕಲೇಶಪುರ ಸಿಐಟಿಯು ತಾಲ್ಲುಕು ಮುಖಂಡರಾದ ಸೌಮ್ಯ ಬಿ.ಎಂ ಜನಶಕ್ತಿ ಮೀಡಿಯ ಜೊತೆ ಮಾತನಾಡಿ, ಮಲೆನಾಡು ಪ್ರದೇಶದಲ್ಲಿ ದಿನಕಳೆದಂತೆ ಕೂಲಿ ಕಾರ್ಮಿಕರು, ರೈತರುಗಳ ಸಾವಿನ ಸಂಖ್ಯೆ ಏರುತ್ತಲೇ ಇದೆ. ಪ್ರತೀ ಸಾವಿಗೂ 5-10 ಲಕ್ಷ ನೀಡಿ ಕೈ ತೊಳೆದುಕೊಳ್ಳುತ್ತಿದೆ. ಈ ಬಗ್ಗೆ ನಿರಂತರ ಹೋರಾಟಗಳು ನಡೆಯುತ್ತಿದ್ದರೂ ಕಾಡಾನೆಗಳಿಂದ ಶಾಶ್ವತ ಪರಿಹಾರ ಮರೀಚಿಕೆಯಾಗಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಜನರ ಜೀವ, ಜೀವನವನ್ನು ಉಳಿಸಲು ಮುಂದಾಗಲಿ ಎಂದು ಆಗ್ರಹಿಸಿದ್ದಾರೆ.