ಹಕ್ಕಿಗಳ ಭೇಟಿ

– ಎಚ್.ಆರ್.ನವೀನ್‌ಕುಮಾರ್, ಹಾಸನ

ಶೀರ್ಷಿಕೆ ತಪ್ಪಾಗಿದೆ ಅಂದುಕೊಳ್ಳಬೇಡಿ. ಅದು ಬೇಟೆಯಲ್ಲ ಭೇಟಿ. ಅಂದು ಬೆಳಗಿನಜಾವ 4.3೦ ಕ್ಕೆ ಹಾಸನದಿಂದ ನಾನು ಮತ್ತು ಖ್ಯಾತ ಚಿತ್ರಕಲಾವಿದರೂ ಮತ್ತು ಉತ್ತಮ ಪಕ್ಷಿ ಛಾಯಾಗ್ರಾಹಕರೂ ಆದ ಬಿ.ಎಸ್.ದೇಸಾಯಿಯವರು ಹಾಗೂ ಅವರ ಶ್ರೀಮತಿಯವರೂ ಜೊತೆಯಾಗಿ ಪಯಣ ಆರಂಭಿಸಿದೆವು. ಹಾಸನದಿಂದ ಮೈಸೂರಿಗೆ ಹೋಗುವ ಹೆದ್ದಾರಿಯಲ್ಲಿ ಹೊಸ ಅಗ್ರಹಾರ (ಹೊಳೆನರಸೀಪುರದ ನಂತರ ಬೇರ್ಯದ ಸಮೀಪ) ಎಂಬ ಊರು ಸಿಗುತ್ತದೆ. ಇದು ಕೆ.ಆರ್.ನಗರ ತಾಲ್ಲೂಕಿಗೆ ಸೇರಿದೆ. ಈ ಊರಿನಲ್ಲಿ ವಿಶಾಲವಾದ ಕೆರೆಯಿದೆ. ನೀರು ಮಾತ್ರ ಅರ್ಧ ಕೆರೆಯಷ್ಟೂ ಇಲ್ಲ. ಇರುವ ನೀರಿನಲ್ಲಿ ಒಂದೆಡೆ ಮೀನುಗಾರರು ತೆಪ್ಪದ ಮೇಲೆ ಬಲೆಯನ್ನು ಬಿಡುತ್ತಾ ಮೀನು ಹಿಡಿಯುತ್ತಿದ್ದರೆ ಮತ್ತೊಂದೆಡೆ ವಿವಿಧ ಬಗೆಯ ಪಕ್ಷಿಗಳೂ ತಮ್ಮ ಸಾಮರ್ಥ್ಯಕ್ಕೆ ತಕ್ಕಷ್ಟು ಮೀನುಗಳನ್ನು ಹಿಡಿಯುತ್ತಾ ಕೆರೆಯಲ್ಲಿ ಲೀಲಾಜಾಲವಾಗಿ ಸಂಚರಿಸುತ್ತಿದ್ದವು.

ಸಾವಿರಾರು ಕಿಲೋಮೀಟರ್ ದೂರದಿಂದ ವಲಸೆ ಬಂದಿರುವ ವಿವಿಧ ಜಾತಿಯ ಪಕ್ಷಿಗಳ ಪೋಟೋಗಳನ್ನು ಸೆರೆಹಿಡಿಯಬೇಕು ಎಂಬ ಉದ್ದೇಶದಿಂದಲೇ ನಾನು ಮತ್ತು ದೇಸಾಯಿಯವರು ಸಕಲ ಸಿದ್ಧತೆಗಳೊಂದಿಗೆ ಹೊರಟಿದ್ದೆವು. ಕೆರೆಯ ಮುಂಬಾಗದಲ್ಲಿರುವ ದೇವಸ್ಥಾನದ ಬಳಿ ಕಾರನ್ನು ನಿಲ್ಲಿಸಿ ನಮಗೆ ಬೇಕಾದ ಎಲ್ಲಾ ಶಸ್ತ್ರಗಳನ್ನು ಎತ್ತಿಕೊಂಡು ಯುದ್ಧಕ್ಕೆ ತಯಾರಾಗುವ ಸೈನಿಕರಂತೆ ತಯಾರಾಗಿ ನಿಂತೆವು. ಒದೆಡೆ ಉದ್ದದ ಲೆನ್ಸ್ ಇರುವ ಕ್ಯಾಮರಾ, ಮತ್ತೊಂದೆಡೆ ಆ ಕ್ಯಾಮರಾವನ್ನು ನಿಲ್ಲಿಸುವ ಸ್ಟಾಂಡ್  ಕುಳಿತುಕೊಳ್ಳಲು ಮೂರು ಕಾಲಿನ ಸಣ್ಣ ಖುರ್ಚಿ, ಬಿಸಿಲಿನ ಜಳವನ್ನು ನೀಗಿಸಿಕೊಳ್ಳಲು ಕೈಯಲ್ಲೊಂದು ಛತ್ರಿ. ಇಷ್ಟೆಲ್ಲವನ್ನು ಹಿಡಿದು ಕೆರೆಯ ಕಡೆ ಹೊರಟರೆ ನಮ್ಮನ್ನು ನೋಡಿದವರು ಏನಂದುಕೊಳ್ಳುವುದಿಲ್ಲ. ಸ್ವಲ್ಪ ದೂರ ಸಾಗಿದ ಮೇಲೇ ನಿತ್ಯಕರ್ಮಗಳನ್ನು ಮುಗಿಸಿ ಕೆರೆಯ ಕಡೆಯಿಂದ ಮನೆಯ ಕಡೆಗೆ ನಡೆಯುತ್ತಿದ್ದ ಒಬ್ಬರು ಕುತೂಹಲ ತಡೆಯಲಾರದೆ ಕೇಳಿಯೇ ಬಿಟ್ಟರು. “ಯಾವುದು ಸರ್ ಇದು, ಕೆರೆನ ಸರ್ವೇ ಮಾಡ್ತಿರಾ, ಯಾಕಂತೆ” ಈ ಪ್ರಶ್ನೆಗೆ ಕೂಡಲೇ ಉತ್ತರ ದೊರೆಯದಿದ್ದರೆ ಊರಿನವರನ್ನೆಲ್ಲಾ ಕರೆಯುವ ರೀತಿಯಲ್ಲಿ ಬಾಸವಾಯಿತು. ಕೂಡಲೇ ನಾವು ಹಕ್ಕಿಗಳ ಫೋಟೋ ತೆಗೆಯೋಕೆ ಬಂದಿದ್ದೇವೆ ಎಂದೆವು. ಆಗ ನಿರಾಳವಾಗಿ ಹುಸಿರು ಬಿಡುತ್ತಾ ಹೌದಾ ಸರಿ ಎನ್ನುತ್ತ ಅವ ಮನೆಕಡೆಗೆ ಹೆಜ್ಜೆಯಾಕಿದರೆ ನಾವು ಸಕಲ ಸಜ್ಜಿತರಾಗಿ ಕೆರೆಕಡೆಗೆ ಹೆಜ್ಜೆಯಾಕಿದೆವು.

ಕೆರೆ ಅಂದರೆ ಹಾಗೆ ಅದು ಒಂದು ಊರಿನ ಜೀವಾಳ ಅಲ್ಲಿ ಜೀವವೈವಿದ್ಯತೆ ಇದೆ. ಕೃಷಿಯಾದಿಯಾಗಿ ಮನುಷ್ಯರ ದಿನನಿತ್ಯದ ಬಳಕೆಗೆ (ಕೆಲವೊಮ್ಮೆ ಕುಡಿಯಲು) ದನ ಕರುಗಳಿಗೆ, ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರು. ಮಾತ್ರವಲ್ಲ ಕೆರೆ ಇದ್ದರೆ, ಅದರಲ್ಲಿ ನೀರಿದ್ದರೆ ಸುತ್ತಮುತ್ತಲಿನ ಪರಿಸರ ಯಾವಾಗಲೂ ಹಸಿರಾಗಿರುತ್ತದೆ. ಪರಿಸರಕ್ಕೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡುತ್ತಿರುವ ಕೆರೆಗಳನ್ನು ನಿರ್ಮಾಣ ಮಾಡಬೇಕು ಎನ್ನುವ ನಮ್ಮ ಹಿರಿಕರ ಆಲೋಚನೆ ಇದೆಯಲ್ಲಾ ಅದಕ್ಕೊಂದು ಸಲಾಮ್. ಅವರ ಅಂದಿನ ಯೋಚನೆ, ಶ್ರಮದ ಫಲವನ್ನ ಇಂದಿನ ಪೀಳಿಗೆಯ ನಾವುಗಳು ಅನುಭವಿಸುತ್ತಿದ್ದೇವೆ.

ನಾವು ಕೆರೆಗೆ ತಲುಪಿದಾಗ ಬೆಳಗಿನ ಜಾವ 7 ಗಂಟೆಯ ಸಮಯ. ಆಗಿನ್ನೂ ಕೆರೆಯ ನೀರಿನ ಮೇಲಣ ಮಂಜು ಹಾಗೆ ತೇಲುತ್ತಿತ್ತು. ಮತ್ತೊಂದೆಡೆ ಸೂರ್ಯನ ಕಿರಣಗಳು ಮೂಡಣ ದಿಕ್ಕಿನಿಂದ ಹೊರಸೂಸುತ್ತಿದ್ದವು. ಸುತ್ತಲೂ ಮರಗಿಡಗಳು, ವಿಶಾಲವಾದ ನೀರಿನ ಮೇಲೆ ತೆಪ್ಪದಲ್ಲಿ ಕುಳಿತ ಇಬ್ಬರು ಮೀನಿನ ಬೇಟೆಗಾಗಿ ಬಲೆಯನ್ನು ಬಿಡುತ್ತಿದ್ದರೆ ಪಕ್ಕದಲ್ಲೇ ಅದಾವುದರ ಅರಿವೇ ಇಲ್ಲವೇನೋ ಎನ್ನುವಂತೆ ಕನಿಷ್ಟ ನಾಲ್ಕರಿಂದ ಐದು ವಿವಿಧ ಬಗೆಯ ಪಕ್ಷಿಗಳು ನೀರಿನ ಮೇಲೆ ಈಜುತ್ತಾ, ದಡದಲ್ಲಿ ನಡೆಯುತ್ತಾ ತೀಕ್ಷ್ಣವಾದ ಕಣ್ಣುಗಳ ಮೂಲಕ ತಮ್ಮ ಬೇಟೆಯನ್ನು ಹುಡುಕುತ್ತಿದ್ದವು. ನೀರಿನ ಆಳದಲ್ಲಿ ಕಂಡ ಮೀನನ್ನು ಹಿಡಿಯಲು ಕ್ಷಣಾರ್ಧದಲ್ಲೇ ತಮ್ಮ ಕೊಕ್ಕನ್ನು ನೀರಿನಲ್ಲಿ ಮುಳುಕಗಿಸಿ ಬೇಟೆ ಸಿಕ್ಕರೆ ಖುಷಿಯಾಗಿ ಆನಂದಿಸುತ್ತಿದ್ದವು. ಸಿಗದಿದ್ದರೆ ಬೇಸರ ಮಾಡಿಕೊಳ್ಳದೆ ಮುಂದಿನ ಗುರಿಯತ್ತಾ ಅಚಂಲವಾಗಿ ಸಾಗುತ್ತಿದ್ದವು.

ಬಹುತೇಕ ಎಲ್ಲಾ ಕೆರೆಗಳಲ್ಲೂ ಇರುವ ಹಾಗೆ ಬೆಳ್ಳಕ್ಕಿಗಳು, ಕೊಕ್ಕರೆಗಳು, ಬಾತುಕೋಳಿಗಳು ಮಾತ್ರ ಇದ್ದಿದ್ದರೆ ಬಹುಷಃ ನಾವುಗಳು ಹಾಸನದಿಂದ ಸುಮಾರು 6೦ ಕಿಲೋಮೀರ್‌ಗಳಷ್ಟು ದೂರವಿರುವ ಈ ಕೆರೆಯನ್ನು ಹುಡುಕಿಕೊಂಡು ಬರುತ್ತಿರಲಿಲ್ಲ. ಇಲ್ಲೇ ವಿಶೇಷತೆ ಇರುವುದು. ಸಾವಿರಾರು ಕಿಲೋಮೀಟರ್‌ಗಳಷ್ಟು ಪ್ರಯಾಣ ಬೆಳೆಸಿ ತಮ್ಮ ಸಂತಾನೋತ್ಪತ್ತಿಯನ್ನು ನಡೆಸಲು ಅನುಕೂಲವಾಗಿರುವ ಇಂತಹ ಕೆರೆಗಳಿಗೆ ವಲಸೆ ಬಂದಿರುವ ‘ಪೈಂಟೆಡ್ ಸ್ಟೊರ‍್ಕ್’ (ದಾಸಕೊಕ್ಕರೆ), ‘ಪೆಲಿಕಾನ್’ (ಜೋಳಿಗೆ ಕೊಕ್ಕ / ಹೆಚ್ಚರ್ಲೆ), ‘ಸ್ಪೂನ್ ಬಿಲ್’ (ಚಮಚದ ಕೊಕ್ಕು), ‘ಗ್ರೇ ಹೆರಾನ್’ (ಬೂದು ಕೊಕ್ಕರೆ), ಇವುಗಳ ಜೊತೆಗೆ ‘ಗ್ರೇಟ್ ಇಂಡಿಯನ್ ಕಾರ್ಮೊರಾಂಟ್ (ಬಿಳಿ ಕುತ್ತಿಗೆ ನೀರು ಕಾಗೆ) ‘ಲಿಟಲ್ ಎಗ್ರೇಟ್’ (ಕೊಕ್ಕರೆ / ಬೆಳ್ಳಕ್ಕಿ) ‘ಗ್ರೇ ಡಕ್’ (ದಾಸ ಗೋರೆ) ‘ಪರ್ಪಲ್ ಮೂರ್ ಹೆನ್’ (ನೀಲಿ ನಾಮಗೋಳಿ), ‘ರೆಡ್ ವ್ಯಾಟಲ್ ಲಾಪ್ ವಿಂಗ್’ (ತೇನೆ ಹಕ್ಕಿ) ‘ಕಿಂಗ್ ಫಿಷರ್’ (ಮಿಂಚುಳ್ಳಿ) ‘ಗೀಜಗ’ ಇಷ್ಟು ಬಗೆಯ ಪಕ್ಷಿಗಳು ಒಂದೇ ಕೆರೆಯಲ್ಲಿ ನೋಡಲು ಸಿಕ್ಕಿದ್ದು ನಮಗೆ ಎಲ್ಲಿಲ್ಲದ ಸಂತೋಷವನ್ನುಟು ಮಾಡಿತು.

ಇದನ್ನೂ ಓದಿಸಂಕಷ್ಟದಲ್ಲಿ ರಾಜ್ಯದ ಹಾಲು ಉತ್ಪಾದಕರು

ಬೆಳಗಿನ ಸಮಯದಲ್ಲಿ ಪೆಲಿಕಾನ್‌ಗಳು ದೂರದ ಯಾವುದೋ ಮರಗಳ ಮೇಲೆ ತಾವೇ ಹುಲ್ಲು, ಕಡ್ಡಿಗಳಿಂದ ನಿರ್ಮಿಸಿಕೊಂಡಿರುವ ಗೂಡುಗಳಿಂದ ಹೊರ ಬಂದು ನೀಲಿ ಆಕಾಶದಲ್ಲಿ ಹಾರುತ್ತಾ ಈ ಕೆರೆಯ ನೀರನ ಮೇಲೆ ಇಳಿಯುತ್ತಿದ್ದರೆ… ವಿಮಾನ ನಿಲ್ದಾಣಗಳಲ್ಲಿ ವಿಮಾನಗಳು ಗಗನದಲ್ಲಿ ಹಾರುತ್ತಾ ನಿಲ್ದಾಣದ ರನ್‌ವೇಯಲ್ಲಿ ಬಂದಿಳಿದಂತೆ ಬಾಸವಾಗುತ್ತಿತ್ತು. ನೀರಿನ ಮೇಲೆ ಇಳಿದ ನಂತರ ದೇಹವನ್ನು ಅಲುಗಾಡಿಸದೇ ಹುಟ್ಟಿನಂತಿರುವ ತಮ್ಮ ಪಾದಗಳ ಸಹಾಯದಿಂದ ನೀರಿನ ಮೇಲೆ ಈಜುತ್ತಾ ತೇಲುತ್ತಿದ್ದರೆ ಅದರ ಹಿಂದೆ ತಾನು ನಡೆದ ದಾರಿ ಅಲೆಗಳಾಗಿ ಒಂದು ರೀತಿಯ ರಸ್ತೆಯನ್ನೇ ನಿರ್ಮಾಣ ಮಾಡಿದಂತೆ ಕಾಣುತ್ತಿದ್ದವು. ಇವುಗಳು ಒಂದೊಂದೇ ಈಜುತ್ತಿದ್ದರೂ, ಜೊತೆಯಾಗಿ ಎರಡು ಈಜುತ್ತಿದ್ದರೂ, ಒಟ್ಟೊಟ್ಟಿಗೆ ಗುಂಪಾಗಿ ಈಜುತ್ತಿದ್ದರೂ ಸೈನಿಕರು ಶಿಸ್ತಾಗಿ ಮಾರ್ಚ್ ಫಾಸ್ಟ್ ಮಾಡಿಸಿದ ರೀತಿಯಲ್ಲಿ ಕಾಣಿಸುತ್ತಿದ್ದವು.

ಇಂತಹ ಮನಮೋಹಕ ದೃಶ್ಯವನ್ನು ನಮ್ಮಗಳ ಕ್ಯಾಮರಾದಲ್ಲಿ ಒಂದು ಚೌಕಟ್ಟನ್ನು ನಿರ್ಮಿಸಿ ಅದರೊಳಗೆ ಕಲಾಕೃತಿಯ ರೂಪದಲ್ಲಿ ಈ ಪಕ್ಷಿಗಳ ಚಲನವಲನಗಳನ್ನು ಸೆರೆಹಿಡಿಯುವುದು ಒಂದು ಸಾಹಸವಾದರೆ, ಮತ್ತೊಂದೆಡೆ ನಮ್ಮ ಕ್ಯಾಮರಾಗಳಿಗೂ ನಮ್ಮ ಕಣ್ಣಿಗೂ ಹಬ್ಬವೋ ಹಬ್ಬ. ಬಹಳ ದಿನಗಳ ನಂತರ ಇಷೊಂದು ಪಕ್ಷಿಗಳನ್ನು ಒಟ್ಟಿಗೆ ನೋಡುವ, ಒಂದೇ ಕೆರೆಯಲ್ಲಿ ನೋಡಲು ಸಿಕ್ಕಿರಲಿಲ್ಲ. ಕರ್ನಾಟಕದಲ್ಲಿ ಹಲವು ಅಧಿಕೃತ ಪಕ್ಷಿದಾಮಗಳಿವೆ ಆದರೆ ರಂಗನತಿಟ್ಟನ್ನು ಬಿಟ್ಟರೆ ಬೇರಾವ ಪಕ್ಷಿದಾಮಗಳೂ ವ್ಯವಸ್ಥಿತವಾಗಿ ಸಂಭ್ರಕ್ಷಿಸಲ್ಪಟ್ಟಿಲ್ಲ. ಆದರೂ ಈ ಪಕ್ಷಿಗಳು ವಿದೇಶಗಳಿಂದ ಸಾವಿರಾರು ಕಿಲೋಮೀಟರ್ ಪ್ರಯಾಣ ಮಾಡಿ ಬಂದು ತಮಗೆ ಸೂಕ್ತವೆನಿಸಿದ, ತಮ್ಮ ತಂತಾನೋತ್ಪತ್ತಿಗೆ ಯಾವುದೇ ತೊಂದರೆಯಾಗದ ಕೆರೆಗಳನ್ನ, ಜಾಗಗಳನ್ನ ಅವುಗಳೇ ಹುಡಿಕಿಕೊಳ್ಳುತ್ತವೆ.

ಪೆಲಿಕಾನ್‌ನ ವಿವಿಧ ಭಂಗಿಗಳನ್ನು ಸೆರೆಹಿಡಿದ ನಮಗೆ ಕೆರೆಯ ಇನ್ನೊಂದು ಬದಿಗೆ ಹೋಗಿ ನೋಡಬೇಕೆನಿಸಿತು. ಕೆರೆಯ ಏರಿಯ ಮೇಲಿನಿಂದ ಇನ್ನೊಂದು ಭಾಗಕ್ಕೆ ನಡೆದೆವು. ಅಲ್ಲಿ ಸಣ್ಣ ಗುಂಡಿಗಳಲ್ಲಿ ನೀರು ನಿಂತಿತ್ತು. ಮೀನುಗಳು ಮತ್ತು ಕಪ್ಪೆಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಪೈಂಟೆಡ್ ಸ್ಟೊರ‍್ಕ್ (ದಾಸಕೊಕ್ಕರೆ) ಗುಂಪು ಗುಂಪಾಗಿ ಒಂದೆಡೆ ಸೇರಿ ಮೀನನ್ನು ಹಿಡಿಯುತ್ತಿದ್ದವು. ತನ್ನ ಉದ್ದ ಕಾಲಿನ ಮೇಲೆ ನಿಂತಿರುವ ಈ ದಾಸಕೊಕ್ಕರೆ ಉದ್ದವಾದ ಕತ್ತನ್ನು ತನ್ನ ಅರಿತವಾದ ಕೊಕ್ಕುಗಳನ್ನು ಬಳಸಿ ನೀರಿನ ಒಳಗೆ ತಲೆಯಾಕಿ ಒಂದು ಮೀನನ್ನು ಹಿಡಿಯಿತು. ಈ ದೃಶ್ಯಕ್ಕಾಗಿ ಇಡೀ ದಿನ ಕಾಯಬೇಕಾದ ನಮಗೆ, ನೀವು ಕ್ಯಾಮರಾ ತಂದಿದ್ದೀರಿ ಫೋಟೋ ತೆಗೆದುಕೊಂಡುಹೋಗಿ ಎನ್ನುವ ರೀತಿಯಲ್ಲಿ ವಿವಿಧ ಭಂಗಿಗಳಲ್ಲಿ ಅದು ನಿಂತುಕೊಂಡಿತು. ಈ ದೃಶ್ಯವನ್ನು ನಮ್ಮ ಕಣ್ಣು, ಕ್ಯಾಮರಾ ಕಣ್ಣು ಎರಡೂ ತುಂಬಿಕೊಂಡವು. ಏರಿಯ ಮೇಲಿಂದ ಬಲಬದಿಗೆ ನೋಡಿದರೆ ಅಚ್ಚ ಹಸಿರಾದ ಬತ್ತದ ಗದ್ದೆ, ಮತ್ತು ತೆಂಗು, ಅಡಿಕೆಯ ತೋಟಗಳು. ಏರಿಯ ಪಕ್ಕದಲ್ಲೇ ಇದ್ದ ಒಂದು ಮರದಲ್ಲಿ ಗೀಜಗಗಳು ಗೂಡು ಕಟ್ಟುತ್ತಿದ್ದ ದೃಶ್ಯ ಕಣ್ಣಿಗೆ ಬಿತ್ತು. ಒಂದಲ್ಲಾ ಎರಡಲ್ಲಾ ಹತ್ತಾರು ಗೀಜಗಗಳು ಆಗತಾನೆ ಸಿವಿಲ್ ಎಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿದವರಂತೆ ಅತ್ಯಂತ ಶ್ರದ್ದೆಯಿಂದ ಯಾವ ಪರಿಣಿತ ಎಂಜಿನಿಯರ್‌ಗಳಿಗೂ ಕಡಿಮೆಯಿಲ್ಲದಂತೆ ತಮ್ಮ ಮನೆಯನ್ನು ಅತ್ಯಂತ ವಿಶಿಷ್ಟವಾಗಿ ನಿರ್ಮಾಣ ಮಾಡುತ್ತಿದ್ದವು. ಪ್ರಕೃತಿಯ ಈ ಸೊಬಗನ್ನು ಮತ್ತು ಪ್ರತಿಯೊಂದು ಜೀವರಾಶಿಗಳ ವೈವಿದ್ಯತೆ ಮತ್ತು ಅವುಗಳ ಜೀವನ ಶೈಲಿಯನ್ನು ನೋಡಿದರೆ ಪ್ರಕೃತಿಯ ಈ ಸೊಬಗನ್ನ ಉಳಿಸಲು ಮಾನವ ಕಿಂಚಿತ್ತಾದರೂ ಕೊಡುಗೆ ನೀಡಬೇಕು ಎನಿಸುತ್ತದೆ. ಅದೇ ಸಂದರ್ಭದಲ್ಲಿ ಆಕಾಶದ ಮೇಲೆ ಇದೇ ದಾಸಕೊಕ್ಕರೆಗಳು ಗುಂಪಾಗಿ ಹಾರುತ್ತಿದ್ದ ದೃಶ್ಯ ಕುವೆಂಪುರವರು ಹೇಳುವಂತೆ “ದೇವರು ರುಜು ಮಾಡಿದನು” ಎಂಬಂತಿತ್ತು. ಮಾತ್ರವಲ್ಲ ಪರಿಣಿತಿ ಪಡೆದ ಪೈಲೆಟ್‌ಗಳು ಆಕಾಶದಲ್ಲಿ ನಡೆಸುವವ ಏರ್‌ಶೋನಲ್ಲಿ ಒಂದೇ ಬಗೆಯಲ್ಲಿ ಐದಾರು ವಿಮಾನಗಳನ್ನು ಚಲಾಯಿಸಿ ಚಿತ್ತಾರ ಮೂಡಿಸುತ್ತಾರಲ್ಲಾ.. ಹಾಗೆ ಇವುಗಳೂ ನನಗೆ ಕಂಡು ಬಂದವು.

ಪರಿಸರವನ್ನು ಆಸ್ವಾಧಿಸುವ, ಅದರಲ್ಲಿರುವ ಪ್ರಾಣಿ, ಪಕ್ಷಿಗಳನ್ನು ನೊಡುವ ಅವುಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಬೆಳೆದಾಗ ಮಾತ್ರ ಎಲ್ಲರೂ ನಿಜವಾದ ಅರ್ಥದಲ್ಲಿ ಪರಿಸರ ಪ್ರೇಮಿಗಳಾಗಿ, ಪರಿಸರವನ್ನು ಉಳಿಸಲು ಕೈಜೋಡಿಸುವುದು. ನಮ್ಮ ಮುಂದಿನ ಪೀಳಿಗೆ ಕೇವಲ ಚಿತ್ರಗಳಲ್ಲಿ ಮಾತ್ರ ಪ್ರಾಣಿ, ಪಕ್ಷಿಗಳನ್ನು ನೋಡದಂತಾಗಲಿ ಎಂಬುದು ನಮ್ಮ ಆಶಯ.

 

Donate Janashakthi Media

Leave a Reply

Your email address will not be published. Required fields are marked *