ಕೇರಳದ ಅಲಫುಜ ಜಿಲ್ಲೆಯ ‘ಶಾಂತಿಸ್ಥಳ’ದ ಕತೆ ಇದು
ಕೇರಳ : ಕಾಲೇಜು ಕಟ್ಟಡ ಕಟ್ಟುವುದಕ್ಕಾಗಿ ಮಣ್ಣು ತೆಗೆದು ದೊಡ್ಡ ಗುಂಡಿಯಾಗಿದ್ದ ಜಾಗದಲ್ಲಿ ಸುತ್ತಮುತ್ತಲಿನ ಜನರು ಕಸ ತಂದು ಸುರುಗಿ ತಡೆಯಾರದ ಕೆಟ್ಟ ವಾಸನೆಯು ವಾತಾವರಣವನ್ನೇ ಹಾಳುಗೆಡವಿತ್ತು. ಅದರ ಪಕ್ಕದಲ್ಲೇ ಮಹಿಳಾ ಹಾಸ್ಟೆಲ್ ಇತ್ತು.
ಕ್ರಿಶ್ಚಿಯನ್ ಕಾಲೇಜಿನ ಬಯೋಡೈವರ್ಸಿಟಿ ಕ್ಲಬ್ ನ ಉಸ್ತುವಾರಿ ಅಬ್ರಾಹಂ ಅವರಿಗೆ ಈ ಸಮಸ್ಯೆಯು ಬಹುದೊಡ್ಡ ಸವಾಲಾಗಿತ್ತು. ಇದನ್ನು ಹೇಗಾದರೂ ಮಾಡಿ ಬದಲಾಯಿಸಲೇ ಬೇಕು ಎಂಬ ದಿಟ್ಟ ನಿರ್ಧಾರದೊಂದಿಗೆ 2013 ರಲ್ಲಿ ಕೇರಳ ರಾಜ್ಯ ಜೀವವೈವಿಧ್ಯ ಮಂಡಳಿಯ ಜೀವವೈವಿಧ್ಯ ಸಂರಕ್ಷಣಾ ಯೋಜನೆಯ ಅಡಿಯಲ್ಲಿ ಕೆಲಸ ಪ್ರಾರಂಭವಾಗಿಯೇ ಬಿಟ್ಟಿತು.
ಚೆಂಗನ್ನೂರು ಮುನಿಸಿಪಾಲಿಟಿಯ ಸಹಾಯದೊಂದಿಗೆ ಲಾರಿಗಟ್ಟಲೆ ಕಸವನ್ನು ಬೇರೆಡೆ ಸಾಗಿಸಲಾಯಿತು. ಬುಲ್ಡೋಜರ್ ಹಾಗೂ ಜೆಸಿಬಿಗಳನ್ನು ಬಳಸಿ ಜಾಗವನ್ನು ಸಿದ್ದಗೊಳಿಸಿ ಮೊದಲ ಹಂತದಲ್ಲಿ 74 ಔಷಧೀಯ ಸಸಿಗಳನ್ನು ನೆಡಲಾಯಿತು. ಮರುವರ್ಷ 27 ‘ನಕ್ಷತ್ರ’ ಮರಗಳನ್ನು ಹಿಂದೂ ನಂಬಿಕೆಯ ಆಧಾರದಲ್ಲಿ ನೆಡಲಾಯಿತು. ಆನಂತರ ಹೂವಿನ ಗಿಡಗಳು, ವಿಲಕ್ಷಣ ಜಾತಿಯ ಹಣ್ಣುಗಳು ಮತ್ತಿತರ ವೈವಿಧ್ಯ ಜಾತಿಗಳ ಗಿಡಗಳನ್ನು ನೆಡಲಾಯಿತು. ಪ್ರಕೃತಿಯ ಉತ್ಕಟ ಪ್ರೇಮಿಯಾಗಿರುವ ಅಬ್ರಾಹಂ ಅವರ ಮನೆ ಕೂಡ ಹತ್ತಿರದಲ್ಲೇ ಇದ್ದಕಾರಣ ಗಿಡಗಳಿಗೆ ನೀರು ಉಣಿಸುವಲ್ಲಿ ಗೊಬ್ಬರ ಹಾಕುವಲ್ಲಿ ಅನುಕೂಲವಾಯಿತು.
ಈಗ ಅಲ್ಲಿ ಸುಂದರ ಶಾಂತಿಸ್ಥಳ ಎದ್ದುನಿಂತಿದೆ. ಅಲ್ಲಿ ಹಕ್ಕಿಗಳ ಕಲರವ, ಮಕರಂದದ ಹುಡುಕಾಟದಲ್ಲಿ ಹಾರುವ ವಿವಿಧ ಬಣ್ಣಗಳ ಪತಂಗಗಳನ್ನು ಅನುಭವಿಸುವುದೇ ಒಂದು ಚಂದ! ಅಷ್ಟೇ ಅಲ್ಲ, ಸಂಶೋಧಕರಿಗೆ ಸಂಶೋಧನೆಯ ತಾಣವಾಗಿ ಪರಿಣಮಿಸಿದೆ. ಬೇರೆ ಬೇರೆ ಕಾಲೇಜುಗಳಿಂದ ವಿದ್ಯಾರ್ಥಿಗಳಿಗೆ ಅಧ್ಯಯನ ಕೇಂದ್ರವಾಗಿ ಮಾರ್ಪಟ್ಟಿದೆ.
ಇದನ್ನೂ ಓದಿ : ಕೈಗಾರಿಕಾ ರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಕೇರಳ ಎಡ ಪ್ರಜಾಸತ್ತಾತ್ಮಕ ರಂಗದ ಸರ್ಕಾರ!
ನಮ್ಮ ಬೆಂಗಳೂರು ನಗರ ಹಾಗೂ ಇಂತಹ ನಗರಗಳ ಕಸ ವಿಲೇವಾರಿ ಸಮಸ್ಯೆಗಳ ಹಿನ್ನೆಲೆಯಲ್ಲಿ ಇಂತಹ ಪ್ರಯೋಗಗಳನ್ನು ನಮ್ಮ ರಾಜ್ಯದಲ್ಲಿಯೂ ಮಾಡಲು ಸಾಧ್ಯವಿದೆ. ಅದಕ್ಕೆ ಸಾಮಾಜಿಕ ಬದ್ಧತೆ, ಪರಿಸರ ಪ್ರೀತಿ ಮತ್ತು ನೈರ್ಮಲ್ಯ ಪ್ರಜ್ಞೆಯನ್ನು ರೂಢಿಸಿಕೊಳ್ಳಲು ಸಾಧ್ಯವಾಗಬೇಕು. ರಾಜಕೀಯ ಬದ್ಧತೆಯೂ ಇರಬೇಕು ಎಂಬುದನ್ನು ತಿಳಿಸಿಕೊಟ್ಟಿದೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಕೃಪೆ : ದಿ ಹಿಂದೂ, ಮೂಲ ಲೇಖನ : ಸ್ಯಾಮ್ ಪಾಲ್ ಎ, ಅನುವಾದ : ಟಿ.ಸುರೇಂದ್ರರಾವ್