ಸಹಮಾನವರ ನೋವುಗಳಿಗೆ ಕುರುಡಾಗುತ್ತಲೇ ʼವಿಶ್ವಮಾನವ ದಿನʼವನ್ನು ಆಚರಿಸುತ್ತಿದ್ದೇವೆ
ನಾ ದಿವಾಕರ
ಕನ್ನಡ ಸಾಹಿತ್ಯ ಲೋಕದ ಮೇರು ಚೇತನ ಕುವೆಂಪು ಅವರ ಜನ್ಮ ದಿನವನ್ನು ಅವರೇ ಪ್ರತಿಪಾದಿಸಿದ ವಿಶ್ವಮಾನವತೆಯ ಸಂದೇಶದ ನೆಲೆಯಲ್ಲಿ ಆಚರಿಸಲಾಗುತ್ತದೆ. ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಜನಿಸಿ ವಸಾಹತುಶಾಹಿ ವಿರೋಧಿ ಸ್ವಾತಂತ್ರ್ಯ ಸಂಗ್ರಾಮದಿಂದ ಕನ್ನಡದ ಅಸ್ಮಿತೆಗಾಗಿ ನಡೆದ ಹೋರಾಟಗಳವರೆಗೆ ವಿಸ್ತರಿಸಿದ ಕುವೆಂಪು ಅವರ ಸಾಹಿತ್ಯದ ಪಯಣ ನವೋದಯ ಸಾಹಿತ್ಯದಲ್ಲಿ ಸೃಷ್ಟಿಸಿದಂತಹ ಪ್ರತಿಮೆ, ರೂಪಕ ಹಾಗೂ ಜೀವನಾದರ್ಶಗಳು ಇಂದಿಗೂ ಕನ್ನಡದ ನೆಲದಲ್ಲಿ ಸಂಚಲನ ಮೂಡಿಸುತ್ತಲೇ ಬಂದಿವೆ. ಕುವೆಂಪು ಕನಸು ಕಂಡ “ ಸರ್ವ ಜನಾಂಗದ ಶಾಂತಿಯ ತೋಟ ”ವನ್ನು ಕಟ್ಟುವ ಹಾದಿಯಲ್ಲಿ ಎಡವುತ್ತಲೇ ಬಂದಿರುವ ಕನ್ನಡದ ಸಾಂಸ್ಕೃತಿಕ ನೆಲೆಗಳು ಅವರ ಅಂತರ್ ಧ್ವನಿಯಾಗಿ ಧ್ವನಿಸಿದ “ ಎಲ್ಲಿಯೂ ನಿಲ್ಲದೆ ಅನಿಕೇತನವಾಗುವ ಚೇತನ ”ವನ್ನು ಇಂದಿಗೂ ಹುಡುಕಾಡುತ್ತಲೇ ಇವೆ.
ಭಾರತದ ಶ್ರೇಣೀಕೃತ ವ್ಯವಸ್ಥೆಯಿಂದ ಸೃಷ್ಟಿಯಾಗಿ ಶತಮಾನಗಳ ಕಾಲ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ ಸಂರಕ್ಷಿಸಲ್ಪಟ್ಟಿರುವ ಶ್ರೇಣಿ ಸಮಾಜವು ನಾಗರಿಕತೆಯ ಹಾದಿಯಲ್ಲಿ ಆಧುನಿಕತೆಯನ್ನು ಅಪ್ಪಿಕೊಳ್ಳುತ್ತಿರುವ ಹೊತ್ತಿನಲ್ಲೇ ಪ್ರಾಚೀನ ಸಮಾಜದ ಅಂತಃಸತ್ವವನ್ನು ಸಹ ತನ್ನ ಒಡಲಲ್ಲಿಟ್ಟು ಕಾಪಾಡಿಕೊಂಡೇ ಬಂದಿರುವುದು ಸಮಕಾಲೀನ ಭಾರತದ ಅತಿ ದೊಡ್ಡ ವೈರುಧ್ಯ ಮತ್ತು ದ್ವಂದ್ವ. ಈ ಸಮಾಜದ ಆಂತರ್ಯದಲ್ಲಿ ಅಡಗಿದ್ದ ಅಮಾನುಷ ಆಚರಣೆಗಳು, ಅಸಮಾನತೆಯ ಭೂಮಿಕೆಗಳು ಹಾಗೂ ಅಸೂಕ್ಷ್ಮ ಚಿಂತನಾ ವಾಹಿನಿಗಳನ್ನು ಭೇದಿಸಿ ಒಂದು ಸುಂದರ ಸಮಾಜವನ್ನು ಕಟ್ಟುವ ಕನಸಿನೊಂದಿಗೆ ಕುವೆಂಪು ತಮ್ಮ ವಿಶ್ವಮಾನವ ತತ್ವವನ್ನು ಪ್ರತಿಪಾದಿಸಿದ್ದರು. ರವೀಂದ್ರನಾಥ ಠಾಗೋರರ ವಿಶ್ವಮಾನವ ಪರಿಕಲ್ಪನೆಯನ್ನೇ ಮತ್ತಷ್ಟು ವಿಸ್ತರಿಸಿದ ಕುವೆಂಪು ಸಮಕಾಲೀನ ಭಾರತವನ್ನು ಕಾಡುತ್ತಿದ್ದ ಜಾತಿ-ಮತಗಳ ಹೊಟ್ಟನ್ನು ತೂರಿ, ಆಧುನಿಕ ಮಾನವನ್ನು ಸುತ್ತುವರೆದಿರುವ ತತ್ವಗಳ ಗೋಡೆಗಳನ್ನು ದಾಟಿ, ಸಮಷ್ಟಿ ಪ್ರಜ್ಞೆಯನ್ನು ರೂಢಿಸಿಕೊಳ್ಳುವತ್ತ ಮುನ್ನಡೆಯಲು ವಿಚಾರ ಕ್ರಾಂತಿಗೆ ಆಹ್ವಾನವನ್ನು ನೀಡಿದ್ದರು.
ಸಮಕಾಲೀನ ಸವಾಲುಗಳ ನಡುವೆ
ಇಂದು ವಿಶ್ವಮಾನವ ದಿನಾಚರಣೆಯ ಸಂದರ್ಭದಲ್ಲಿ ನಾವು ಕುವೆಂಪು ಅವರ ಈ ದಾರ್ಶನಿಕತೆಯನ್ನು ನೆನೆಯುತ್ತಲೇ “ಎಲ್ಲರನ್ನೂ ಒಳಗೊಳ್ಳುವ” ಸಮಾಜವನ್ನು ಕಟ್ಟಲು ಬಯಸುತ್ತಿದ್ದೇವೆ. ಅಡಿಗರು ಹೇಳಿದ ಹೊಸ ನಾಡನ್ನು ಕಟ್ಟುವ ಬಯಕೆ ಜೀವಂತವಾಗಿರುವಾಗಲೇ ಪ್ರತಿ ಕ್ಷಣದಲ್ಲೂ “ಕಟ್ಟುತ್ತೇವ ನಾವು ,,,,,,ಕಟ್ಟೇ ಕಟ್ಟುತೇವ ,,” ಎಂದು ಹಾಡುತ್ತಾ ಕುವೆಂಪು ಪಸರಿಸಿದ ಮನುಜ ಚೇತನವನ್ನು ಮತ್ತೆಮತ್ತೆ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಈ ಕಟ್ಟುವ ಪ್ರಕ್ರಿಯೆ ನಿರಂತರವಾಗಿರಲು ಕಾರಣವೇನೆಂದರೆ, ಈವರೆಗೆ ಕಟ್ಟಿರುವುದೆಲ್ಲವನ್ನೂ ಭಗ್ನಗೊಳಿಸುವ ಶಕ್ತಿಗಳು ಇಂದು ಪ್ರಬಲವಾಗುತ್ತಿವೆ. ಏಳು ದಶಕಗಳಲ್ಲಿ ಭಾರತದ ಶ್ರಮಜೀವಿಗಳು ಕಟ್ಟಿದ ಆರ್ಥಿಕ ಸ್ಥಾವರಗಳು ನೆಲಸಮವಾಗುತ್ತಿರುವ ಹೊತ್ತಿನಲ್ಲೇ ಠಾಗೋರ್-ವಿವೇಕಾನಂದರಾದಿಯಾಗಿ ಕುವೆಂಪು-ಬೇಂದ್ರೆವರೆಗೆ ನಿರ್ಮಿಸಲಾದ ಅಧ್ಯಾತ್ಮದ ನೆಲೆಗಳೂ ಧ್ವಂಸವಾಗುತ್ತಿವೆ. ಈ ವಿಷಮ ಸ್ಥಿತಿಯಲ್ಲೇ ಕುವೆಂಪು ಅವರ ವಿಶ್ವಮಾನವ ಸಂದೇಶ ಮತ್ತೆಮತ್ತೆ ನಮ್ಮನ್ನು ಸುಪ್ತಾವಸ್ಥೆಯಿಂದ ಎಚ್ಚರಿಸುತ್ತಲೇ ಇರುತ್ತದೆ.
ನವ ಉದಾರವಾದ ಹಾಗೂ ಬಂಡವಾಳದ ಜಾಗತೀಕರಣದಿಂದ ಇಂದು ವಿಶ್ವ ಕಿರಿದಾಗಿದೆ. ಭೌಗೋಳಿಕ ವಿಶ್ವ ತಾತ್ವಿಕವಾಗಿ ಅಂಗೈನಲ್ಲಿ ಹಿಡಿದಿಡುವಷ್ಟು ಚಿಕ್ಕದಾಗಿದೆ. ಉತ್ತರದಿಂದ ದಕ್ಷಿಣ ಧ್ರುವದವರೆಗೆ ಕ್ಷಣಮಾತ್ರದಲ್ಲಿ ಸಂಪರ್ಕಿಸುವ ಸಂವಹನ ತಂತ್ರಜ್ಞಾನ ಆಧುನಿಕ ಮಾನವನಿಗೆ ಸಹಮಾನವನನ್ನು ಸಂಪರ್ಕಿಸುವ ಹಾದಿಗಳನ್ನು ಸುಗಮಗೊಳಿಸಿದೆ. ದೇಶದ ಗಡಿರೇಖೆಗಳನ್ನು ಮೀರಿ ಮನುಷ್ಯ ತನ್ನ ಅರಿವಿಗೆ ನಿಲುಕದೆ ಹೋಗಿದ್ದ ಅಥವಾ ಶೋಧಕ್ಕೆ ಒಗ್ಗದೆ ಹೋಗಿದ್ದ ದೂರದ ಸಮಾಜಗಳನ್ನು-ಸಂಸ್ಕೃತಿಗಳನ್ನು ಕ್ಷಣಮಾತ್ರದಲ್ಲಿ ಸಂಪರ್ಕಿಸಿ, ಅರಿತು, ಸಮ್ಮಿಳಿತವಾಗುವ ಒಂದು ವಾತಾವರಣವನ್ನು ತಂತ್ರಜ್ಞಾನ ಸೃಷ್ಟಿಸಿದೆ. ಈವರೆಗೂ ಅಜ್ಞಾತವಾಗಿದ್ದ ಸಾಂಸ್ಕೃತಿಕ ನೆಲೆಗಳು, ಅವುಗಳಲ್ಲಡಗಿರುವ ಮನುಜ ಸೂಕ್ಷ್ಮತೆಗಳು ಆಧುನಿಕ ಸಮಾಜದ ಗ್ರಹಿಕೆಗೆ ಕ್ಷಣಮಾತ್ರದಲ್ಲಿ ನಿಲುಕುವಂತೆ ಮಾಡಿರುವುದು ತಂತ್ರಜ್ಞಾನದ ಹೆಗ್ಗಳಿಕೆ. ಅಂದರೆ ಮಾನವ ಶ್ರಮದ ಹೆಗ್ಗಳಿಕೆ ಎಂದೇ ಅರ್ಥ ಅಲ್ಲವೇ ?
ಆದರೆ ತಾತ್ವಿಕವಾಗಿ ಕಿರಿದಾಗುತ್ತಲೇ ವಿಶಾಲ ಸಮಾಜಕ್ಕೆ ತೆರೆದುಕೊಳ್ಳುತ್ತಿರುವ ಆಧುನಿಕ ವಿಶ್ವವು ಹೊಸ ಸಾಮಾಜಿಕ-ಸಾಂಸ್ಕೃತಿಕ ನೆಲೆಗಳಲ್ಲಿ ಔನ್ನತ್ಯವನ್ನು ಸಾಧಿಸುತ್ತಲೇ, ಭೌತಿಕವಾಗಿ ಚಂದ್ರನನ್ನೂ, ಅನ್ಯಗ್ರಹಗಳನ್ನೂ ತಲುಪುವ ಮಟ್ಟಿಗೆ ಏರುತ್ತಲೇ ಆಂತರಿಕವಾಗಿ ತನ್ನ ಮೂಲ ಅಂತಃಸತ್ವವನ್ನು ಕಳೆದುಕೊಳ್ಳುತ್ತಿರುವುದನ್ನು ಕಂಡಾಗ ಅತ್ಯಾಧುನಿಕ ಮಾನವ ದಿನೇದಿನೇ ತಾತ್ವಿಕವಾಗಿ ಕುಬ್ಜವಾಗುತ್ತಿರುವುದೂ ಕಣ್ಣಿಗೆ ರಾಚುತ್ತದೆ. 21ನೆಯ ಶತಮಾನದ ನವ ಭಾರತವು ಸಾಮಾಜಿಕ ನೆಲೆಗಳಲ್ಲಿ ಜಾತಿ ಶ್ರೇಣಿಗಳಿಂದ, ಆರ್ಥಿಕವಾಗಿ ಪ್ರಬಲವಾದ ಮಾರುಕಟ್ಟೆ ಶಕ್ತಿಗಳಿಂದ , ಸಾಂಸ್ಕೃತಿಕವಾಗಿ ಬಹುಸಂಖ್ಯಾತ ಮತದ ಆಧಿಪತ್ಯದಿಂದ ತನ್ನ ನೆಲಮೂಲದ ಬಹುತ್ವವನ್ನು ಕಳೆದುಕೊಳ್ಳುತ್ತಿರುವ ಹೊತ್ತಿನಲ್ಲೇ ನಮಗೆ ಕುವೆಂಪು ಅವರು ಮೊಳಗಿದ “ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ” ಎಂಬ ಕರೆ ಸಮಕಾಲೀನ ಉದ್ಗೋಷದಂತೆ ಕಾಣುತ್ತಿದೆ.
“ ಸಂಯಮ ಪೂರ್ಣವಾದ ಬುದ್ಧಿ ಸ್ವಾತಂತ್ರ್ಯವೇ ನಿರಂಕುಶಮತಿ ” ಎಂದು ಬೋಧಿಸಿದ ಮಹಾಕವಿ ಪ್ರತಿಪಾದಿಸಿದ ವಿಶ್ವಮಾನವತೆಗೆ ಅತ್ಯವಶ್ಯವಾದ ವೈಚಾರಿಕ ಪ್ರಜ್ಞೆ, ವೈಜ್ಞಾನಿಕ ಮನೋಭಾವ ಹಾಗೂ ಮನುಜ ಪ್ರೀತಿಯ ತಂತುಗಳು ಮತೀಯವಾದ, ಮತಾಂಧತೆ ಹಾಗೂ ಅಂಧ ಜಾತಿಪ್ರಜ್ಞೆಯ ಪ್ರಹಾರಗಳಿಂದ ಜರ್ಝರಿತವಾಗುತ್ತಿರುವುದನ್ನು ಕಂಡೂ ಕಾಣದಂತೆ ಇಡೀ ಸಮಾಜವೇ ಅಸ್ಮಿತೆಗಳ ಕೋಶದೊಳಗೆ ಅವಿತು ಕುಳಿತುಕೊಳ್ಳುತ್ತಿದೆ. ಸಾಂಪ್ರದಾಯಿಕತೆ ಹಾಗೂ ವಿದ್ಯುಕ್ತ ಮತಾಚರಣೆಗಳಿಗೆ ಸೀಮಿತವಾಗಿದ್ದ ಮೌಢ್ಯದ ನೆಲೆಗಳು ಇಂದು ನಮ್ಮ ಸೈದ್ಧಾಂತಿಕ ಅಸ್ಮಿತೆಗಳವರೆಗೂ ವ್ಯಾಪಿಸಿದ್ದು, ನಾವೇ ನಿರ್ಮಿಸಿಕೊಳ್ಳುತ್ತಿರುವ ತತ್ವ ಸಿದ್ಧಾಂತಗಳ ಕೋಟೆಗಳಲ್ಲಿ ರೂಪಾಂತರಗೊಂಡು ನೆಲೆಮಾಡಿಕೊಂಡಿವೆ. ವಿಜ್ಞಾನ-ತಂತ್ರಜ್ಞಾನ ಹಾಗೂ ಆಧುನಿಕ ಜ್ಞಾನಾರ್ಜನೆಯ ಮಾರ್ಗಗಳ ಮೂಲಕ ಹೊಸ ಜಗತ್ತಿಗೆ ತೆರೆದುಕೊಳ್ಳಬೇಕಾದ ಮನಸುಗಳು, ಅದರಲ್ಲೂ ಯುವ ಮನಸುಗಳು, ಪ್ರಾಚೀನ ಸಮಾಜದ ಜಾತಿ-ಮತ-ಧರ್ಮಗಳ ಚೌಕಟ್ಟುಗಳಿಂದಲೂ ವಿಮೋಚನೆ ಪಡೆಯಲಾಗದೆ, ಸ್ವಯಂ ನಿರ್ಮಿತ ಅಸ್ಮಿತೆಗಳ ಗೋಡೆಗಳ ನಡುವೆ ಬಂಧಿತವಾಗುತ್ತಿವೆ.
ಅಲ್ಪಮತಿಯ ಆಕರಗಳ ನಡುವೆ
ಮತೀಯತೆ, ಮತಾಂಧತೆ, ಜಾತಿ ಶ್ರೇಷ್ಠತೆ ಹಾಗೂ ತಾತ್ವಿಕ ಅಂಧಶ್ರದ್ಧೆಗಳಿಂದ ಆವೃತವಾಗಿರುವ ಒಂದು ಬೃಹತ್ ಸಮಾಜ ಇಡೀ ದೇಶವನ್ನು ಆವರಿಸುತ್ತಿರುವ ನಿರಂಕುಶ ಪ್ರಭುತ್ವವನ್ನು ಸ್ವಾಗತಿಸುತ್ತಿರುವುದೇ ಅಲ್ಲದೆ ಪೋಷಿಸುತ್ತಲೂ ಬಂದಿದೆ. ಮತಭ್ರಾಂತಿ ಹಾಗೂ ಮೌಢ್ಯ ಈಗ ರಾಜಕೀಯ ಸ್ವರೂಪವನ್ನೂ ಪಡೆದುಕೊಂಡಿದ್ದು, ಭಾರತೀಯ ಸಮಾಜದ ಅಂತಃಸತ್ವವಾಗಿರುವ ಬಹುತ್ವವನ್ನು ನಾಶಪಡಿಸುವ ರಾಜಕೀಯ ವ್ಯವಸ್ಥೆಯನ್ನೂ ಆವಾಹಿಸಿ, ಆಸ್ವಾದಿಸಿ, ಆರಾಧಿಸುವ ಮಟ್ಟಿಗೆ ಸಮಾಜ ಮತಿಹೀನತೆಯತ್ತ ಸಾಗುತ್ತಿದೆ. ಈ ಮೌಢ್ಯದ ಪರಿಣಾಮವಾಗಿಯೇ ಸುಂದರ ಸಮನ್ವಯ ಸಮಾಜದ ಹಗಲುಗನಸು ಕಾಣಬೇಕಾದ ವಿಶಾಲ ಸಮಾಜವು ನಡುಹಗಲಲ್ಲೇ ಅಂಧಕಾರದಲ್ಲಿರುವಂತೆ ಮೌಲ್ಯಗಳಿಗಾಗಿ ತಡಕಾಡುತ್ತಿದೆ. ನಾವು ಕಳೆದುಕೊಂಡಿರುವುದಾದರೂ ಏನನ್ನು ಎಂಬ ಜಿಜ್ಞಾಸೆಯೂ ಕಾಡದಂತೆ ಮನುಜ ಪ್ರಜ್ಞೆಯನ್ನು ಬಂಧಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ರಾಜಕಾರಣ ಜನಮಾನಸವನ್ನು ಆವರಿಸಿದೆ.
“ ಉದಾರ ದರ್ಶನವೊಂದನ್ನು ಕಂಡು ಬದುಕು ಕಟ್ಟಿಕೊಳ್ಳುವ ಹಾದಿಯಲ್ಲಿ ಮತಭ್ರಾಂತಿಯನ್ನು ಬಿಟ್ಟು ಮತಿಯ ದೀವಿಗೆಯನ್ನು ಹಿಡಿದು ಹೊರಡುವಂತೆ “ ನಿರ್ದೇಶಿಸುವ ಕುವೆಂಪು ಅವರ ದಾರ್ಶನಿಕ ನುಡಿಗಳು ವರ್ತಮಾನ ಭಾರತದ ಯುವ ಪೀಳಿಗೆಗೆ ದಿಕ್ಸೂಚಿಯಾಗಬೇಕಿತ್ತಲ್ಲವೇ ? ಆದರೆ ಬಹುಸಂಖ್ಯಾವಾದ ರಾಜಕಾರಣ ಮತ್ತು ಮತಾಂಧತೆಯ ಬಾಹುಗಳು ಎಲ್ಲವನ್ನೂ ಆವರಿಸಿರುವುದರ ಪರಿಣಾಮ ಮತಭ್ರಾಂತಿಯು ರಾಜಕೀಯ ಮೌಢ್ಯವಾಗಿ ರೂಪಾಂತರಗೊಳ್ಳುತ್ತಿದೆ. ತತ್ಪರಿಣಾಮವಾಗಿ ಬುದ್ಧ-ಬಡವ-ಅಂಬೇಡ್ಕರಾದಿಯಾಗಿ ಭಾರತದ ದಾರ್ಶನಿಕರು ಬಲವಾಗಿ ವಿರೋಧಿಸಿದ ಆರಾಧನಾ ಸಂಸ್ಕೃತಿ ಇಂದು ಅತೀತ ಶಕ್ತಿಗಳ ಆಧ್ಯಾತ್ಮಿಕ ಆವರಣವನ್ನೂ ದಾಟಿ ಸಮಾಜದ ಅಧಿಕಾರ ಕೇಂದ್ರಗಳಲ್ಲೂ ಅವತರಿಸಿದೆ. ಸಹಜವಾಗಿಯೇ ಅಸ್ಮಿತೆಗಳ ಸಂತೆಯಲ್ಲಿ ಎಲ್ಲ ದಾರ್ಶನಿಕರೂ ಆರಾಧಿಸಲ್ಪಡುವ ಶಕ್ತಿ ಕೇಂದ್ರಗಳಾಗಿ ಗುರುತಿಸಲ್ಪಡುತ್ತಿದ್ದಾರೆ. ನಿರಂಕುಶಮತಿಯ ಪ್ರತಿಪಾದಕ ಕುವೆಂಪು ಸಹ ಇದಕ್ಕೆ ಹೊರತಾಗದಿರುವುದು ವರ್ತಮಾನದ ದುರಂತ.
ಮತಮೌಢ್ಯದಿಂದ ಜಾತಿ ಮೌಢ್ಯಕ್ಕೆ ಜಿಗಿದು ಈಗ ರಾಜಕೀಯ ಮೌಢ್ಯದೆಡೆಗೆ ದಾಪುಗಾಲು ಹಾಕುತ್ತಿರುವುದರಿಂದಲೇ ಭಾರತೀಯ ಸಮಾಜ ಅನ್ಯಾಯಗಳಿಗೆ ಕುರುಡಾಗಿದೆ, ಆಕ್ರಂದನಗಳಿಗೆ ಕಿವುಡಾಗಿದೆ, ಮನುಜ ವೇದನೆಗಳಿಗೆ ನಿಷ್ಕ್ರಿಯವಾಗಿದೆ. ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ವಿಶ್ವವಿದ್ಯಾಲಯದ ಬೌದ್ಧಿಕ ಉತ್ಪನ್ನವೊಂದು ಅತಿಯಾಗಿ ಹರಿದಾಡುತ್ತಿದೆ. ಇವತ್ತಿನ ಸಮಾಜದಲ್ಲಿ 60-70 ವಯೋಮಾನದವರು ಹೆಮ್ಮೆ ಪಡುವಂತಹ ಕೆಲವು ಸಂಗತಿಗಳು ಅಲ್ಲಿ ಕಾಣಸಿಗುತ್ತದೆ. ಈ ವಯೋಮಾನದವರ ಸಾಧನೆಗಳಿಂದಲೇ ಭಾರತ ಸಮೃದ್ಧವಾಗುತ್ತಿದೆ, ಸುಸ್ಥಿರವಾಗಿದೆ, ಸುಭದ್ರವಾಗಿದೆ ಎಂಬ ಆತ್ಮರತಿಯ ಸಾಲುಗಳು ಹೇರಳವಾಗಿವೆ. ಭಾರತೀಯ ಸಂವಿಧಾನದ ನೇರ ಫಲಾನುಭವಿಗಳಾದ ಈ ಬೃಹತ್ ಜನಸಮೂಹದ ಒಂದು ಸುಶಿಕ್ಷಿತ ಹಿತವಲಯವು ಇಂದು ಕುಸಿಯುತ್ತಿರುವ ಆರ್ಥಿಕ ಸ್ಥಾವರಗಳಿಗೆ, ಮಹಿಳಾ ದೌರ್ಜನ್ಯಗಳಿಗೆ, ಅತ್ಯಾಚಾರಗಳಿಗೆ, ಭ್ರೂಣ ಹತ್ಯೆಗಳಿಗೆ, ಅಸ್ಪೃಶ್ಯತೆಯಂತಹ ಹೀನಾಚರಣೆಗಳಿಗೆ ಕುರುಡಾಗಿದೆ. ಮತ್ತೊಂದೆಡೆ ಇಂದಿಗೂ ಭಾರತವನ್ನು ಕಾಡುತ್ತಿರುವ ಆರ್ಥಿಕ ಅಸಮಾನತೆ ಮತ್ತು ಬೆತ್ತಲೆ ಮೆರವಣಿಗೆಯಂತಹ ಮಹಿಳಾ ದೌರ್ಜನ್ಯಗಳನ್ನು ಕಣ್ಣೆತ್ತಿಯೂ ನೋಡದ, ನೋಡಿದರೂ ಸಕಾರಣಗಳೊಂದಿಗೆ ನಿರ್ಲಿಪ್ತವಾಗಿರುವ ಒಂದು ನಿಷ್ಕ್ರಿಯ ಸಮಾಜವನ್ನೂ ನಾವು ಕಾಣುತ್ತಿದ್ದೇವೆ. ಈ ಅಂಧತ್ವಕ್ಕೆ ಕಾರಣ ಬೌದ್ಧಿಕ ದಾರಿದ್ರ್ಯ, ವ್ಯಕ್ತಿ ಆರಾಧನೆಯ ರಾಜಕೀಯ ಮೌಢ್ಯ ಹಾಗೂ ಪಿತೃಪ್ರಧಾನತೆಯ ಸಾಂಸ್ಕೃತಿಕ ಶ್ರೇಷ್ಠತೆಯ ಅಹಮಿಕೆ ಎನ್ನುವುದು ಸ್ಪಷ್ಟ.
ಇದನ್ನು ಓದಿ : ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿ ಗಣತಿ – ರಾಹುಲ್ ಗಾಂಧಿ
ಕವಿವಾಣಿಗೆ ಮತ್ತೆ ಕಿವಿಯಾಗೋಣ
ರಾಷ್ಟ್ರಕವಿ ಕುವೆಂಪು ಅವರ ನಿರಂಕುಶಮತಿ ಪರಿಕಲ್ಪನೆ ಹಾಗೂ ವಿಶ್ವಮಾನವತೆಯ ದಾರ್ಶನಿಕ ಸತ್ವಗಳನ್ನೇ ಮರೆತಿರುವ ಸಮಾಜ ಆ ಮಹಾಕವಿಯನ್ನೂ ನಿರ್ದಿಷ್ಟ ಜಾತಿಯ ಸಂಕೋಲೆಗಳಲ್ಲಿ ಬಂಧಿಸುವ ಮಟ್ಟಿಗೆ ಅಸ್ಮಿತೆಯ ಲೋಕವೊಂದನ್ನು ಸೃಷ್ಟಿಸಿಕೊಂಡಿದೆ. ತಾತ್ವಿಕವಾಗಿ ವಿಶ್ವ ಕಿರಿದಾಗಿ ಕಾಣುತ್ತಿದ್ದರೂ ಈ ಕಿರಿದಾದ ವಿಶ್ವದಲ್ಲೇ ಭಿನ್ನ ಭೇದಗಳ ಗೋಡೆಗಳನ್ನು ಸೃಷ್ಟಿಸುವಲ್ಲಿ ಅಸ್ಮಿತೆಯ ರಾಜಕಾರಣ ಹಾಗೂ ಸಾಂಸ್ಕೃತಿಕ ವಾತಾವರಣ ಯಶಸ್ವಿಯಾಗಿವೆ. ಹಾಗಾಗಿಯೇ ಕುವೆಂಪು ಅವರನ್ನು ಮೆರೆಸುವ ಒಂದು ಆಧ್ಯಾತ್ಮಿಕ ವಲಯ ಮತ್ತೊಂದು ಆಧ್ಯಾತ್ಮಿಕ ನೆಲೆಯಲ್ಲಿ ಕೇಳಿಬರುತ್ತಿರುವ ಶೋಷಿತರ/ನೊಂದವರ ಆಕ್ರಂದನಕ್ಕೆ ಕಿವುಡಾಗಿರುತ್ತದೆ, ವೇದನೆಗೆ ಕುರುಡಾಗಿರುತ್ತದೆ. ಶೋಷಣೆಗೆ ಎಲ್ಲೆಗಳಿಲ್ಲವಾದರೂ ಶೋಷಿತರನ್ನು ವಿಂಗಡಿಸಿ ನೋಡುವ ಒಂದು ವಿಕೃತ ಪರಿಪಾಠವನ್ನು ಆಧುನಿಕ ಭಾರತ ರೂಢಿಸಿಕೊಳ್ಳುತ್ತಿರುವುದು ಈ ವೈರುಧ್ಯಕ್ಕೆ ಕಾರಣವಾಗಿದೆ. ಅಪ್ಪಿಕೊಳ್ಳುವ ಸಂಸ್ಕೃತಿಯನ್ನು ದೂರ ತಳ್ಳುತ್ತಾ ಹೊರಗಿಡುವ ಸಂಸ್ಕೃತಿಯನ್ನು ಅಪ್ಪಿಕೊಳ್ಳುತ್ತಿರುವ ವಿಷಮ ಸನ್ನಿವೇಶದಲ್ಲಿ ಎಲ್ಲರನೊಳಗೊಳ್ಳುವ ” ಕುವೆಂಪು ಅವರ ವಿಶ್ವಮಾನವ ಸಂದೇಶ ನಮ್ಮನ್ನು ಎಚ್ಚರಿಸಬೇಕಿದೆ.
ಆಧುನಿಕ ಸಂವಹನ ಕ್ರಾಂತಿಯು ಭೌಗೋಳಿಕ ವಿಶ್ವವನ್ನು ಕಿರಿದಾಗಿಸಿ ಪ್ರತಿ ವ್ಯಕ್ತಿಯ ಅಂಗೈಯ್ಯಲ್ಲಿರಿಸಿದೆ. ಆದರೆ ಅಂಗೈಯ್ಯಲ್ಲೇ ಕಾಣಬಹುದಾದ ಅತ್ಯಾಚಾರ, ದೌರ್ಜನ್ಯ, ಅಸ್ಪೃಶ್ಯತೆ, ಹಿಂಸೆ, ಕ್ರೌರ್ಯ, ಯುದ್ಧೋನ್ಮಾದ, ಜನಾಂಗೀಯ ಹತ್ಯೆ, ಮಾನವ ಹತ್ಯಾಕಾಂಡಗಳತ್ತ ಕಣ್ಣೆತ್ತಿಯೂ ನೋಡದಂತೆ ಮಾನವ ಕುಬ್ಜನಾಗುತ್ತಿದ್ದಾನೆ. ನಾವೇ ಸೃಷ್ಟಿಸಿಕೊಳ್ಳುತ್ತಿರುವ ಕುಬ್ಜತೆಗೆ, ಸಂಕುಚಿತತೆಗೆ ಮತಾಚರಣೆಗಳನ್ನು, ಧರ್ಮಗ್ರಂಥಗಳನ್ನು, ಸಾಂಪ್ರದಾಯಿಕ ಸಂಸ್ಕೃತಿಯನ್ನು ಆರೋಪಿಸುತ್ತಿದ್ದೇವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರಾಷ್ಟ್ರೀಯತೆಯನ್ನೂ ಕಿರಿದಾಗಿಸಿ ಆರೋಪಿಸುತ್ತಿದ್ದೇವೆ. ಈ ಸಂಕುಚಿತ ಚೌಕಟ್ಟಿನಿಂದಾಚೆಗೆ ನೋಡಲು ಅಗತ್ಯವಾದ ದೂರಗಾಮಿತ್ವವನ್ನು ಕ್ರಮೇಣ ಕಳೆದುಕೊಳ್ಳುತ್ತಿದ್ದೇವೆ. ದಾರ್ಶನಿಕ ಕವಿವಾಣಿಯಂತೆ “ನೂರು ಮತದ ಹೊಟ್ಟ ತೂರಿ, ಎಲ್ಲ ತತ್ವದೆಲ್ಲೆ ಮೀರಿ, ನಿರ್ದಿಗಂತವಾಗಿ ಏರಿ,,,, ” ಅನಿಕೇತನವಾಗುತ್ತಾ ಸಾಗಬೇಕಾದ ಮಾನವ ಸಂವೇದನೆಯನ್ನು ಸಂಕುಚಿತಗೊಳಿಸುತ್ತಾ ನಿರಂಕುಶಮತಿಗಳನ್ನು ನಿರ್ವೀರ್ಯವಾಗಿಸುತ್ತಾ ಮತಿಭ್ರಷ್ಟತೆಗೊಳಪಟ್ಟ ಬೃಹತ್ ಸಮೂಹವನ್ನು ರೂಪಿಸುತ್ತಿದೆ.
ಸಾಂಪ್ರದಾಯಿಕತೆ, ಸಾಂಸ್ಕೃತಿಕ ಶ್ರೇಷ್ಠತೆ ಹಾಗೂ ಪ್ರಾಚೀನ ಮೌಢ್ಯತೆಗಳನ್ನು ದಾಟಿ ವೈಚಾರಿಕ ಸಮಾಜವನ್ನು ಕಟ್ಟಬೇಕಾದ ಹೊತ್ತಿನಲ್ಲಿ ಜಾತಿ-ಮತ-ಸಾಮುದಾಯಿಕ ಅಸ್ಮಿತೆಗಳ ಗೋಡೆಗಳನ್ನು ಎತ್ತರಿಸುತ್ತಾ ನೊಂದವರನ್ನೂ, ನೋಯಿಸಿದವರನ್ನೂ ಅಸ್ಮಿತೆಗಳ ಚೌಕಟ್ಟಿನಲ್ಲೇ ವಿಂಗಡಿಸಿ ನೋಡುವ ಒಂದು ವಿಕೃತ ಸಮಾಜದ ನಡುವೆ ನಿಂತು ಇಂದು ವಿಶ್ವಮಾನವ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಠಾಗೋರ್-ಕುವೆಂಪು ಅವರ ವಿಶ್ವಮಾನವತೆಯತ್ತ ಸಾಗುವುದೇ ಆದರೆ ಕುಬ್ಜವಾಗಿರುವ ಮಾನವ ಪ್ರಜ್ಞೆಯ ಔನ್ನತ್ಯದತ್ತ ಯೋಚಿಸಬೇಕಿದೆ. ಮತಿಭ್ರಷ್ಟತೆಗೊಳಗಾಗುತ್ತಿರುವ ಯುವ ಸಮೂಹವನ್ನು ವೈಚಾರಿಕತೆಯ ಹಾದಿಯಲ್ಲಿ ಕರೆದೊಯ್ದು, ವೈಜ್ಞಾನಿಕ ಮನೋಭಾವದ ನೆಲೆಯಲ್ಲಿ ನಿರಂಕುಶಮತಿಗಳನ್ನಾಗಿ ಮಾಡುವ ದೊಡ್ಡ ಜವಾಬ್ದಾರಿ ಈ ಸಮಾಜದ ಮೇಲಿದೆ. ಕುವೆಂಪು ಅವರ ʼವಿಚಾರಕ್ರಾಂತಿʼಯ ಕರೆಯನ್ನು ಮತ್ತೆಮತ್ತೆ ಮನನ ಮಾಡಿಕೊಳ್ಳುತ್ತಾ ವಿಶ್ವಮಾನವರಾಗುವ ಕನಸನ್ನು ನನಸಾಗಿಸಬೇಕಿದೆ. ವಿಶ್ವಮಾನವ ದಿನಾಚರಣೆಯ ಸಾರ್ಥಕತೆಯೂ ಇಲ್ಲೇ ಅಡಗಿದೆ.